
ಕಲಬುರಗಿ, ಫೆಬ್ರವರಿ 25: ಮಹಾಶಿವರಾತ್ರಿ (Mahashivratri) ಹಿನ್ನೆಲೆಯಲ್ಲಿ ಜಿಲ್ಲೆಯ ಆಳಂದ (Aland) ಬಳಿಯ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ (Ladle mashak dargah) ರಾಘವಚೈತನ್ಯ ಶಿವಲಿಂಗದ (Raghava Chaitanya Shivalinga) ಪೂಜೆಗೆ ಅನುಮತಿ ನೀಡುವಂತೆ ಹಿಂದೂ ಸಂಘಟನೆ ಮುಖಂಡರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇನ್ನು, ಮುಂಜಾಗ್ರತಾ ಕ್ರಮವಾಗಿ ಆಳಂದ ತಾಲೂಕಿನಲ್ಲಿ ಮದ್ಯ ಮಾರಾಟವನ್ನು ಮಂಗಳವಾರ (ಫೆ.25) ರಾತ್ರಿ 11 ಗಂಟೆಯಿಂದ ಫೆ.27ರ ಬೆಳಗ್ಗೆ 6 ಗಂಟೆಯವರೆಗೆ ನಿಷೇಧಿಸಿ ಕಲಬುರಗಿ ಜಿಲ್ಲಾಧಿಕಾರಿ ಫೌಝಿಯಾ ತರನ್ನುಮ್ ಆದೇಶ ಹೊರಡಿಸಿದ್ದಾರೆ.
2022 ರಲ್ಲಿ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶ್ರೀ ರಾಘವ ಚೈತನ್ಯ ಶಿವಲಿಂಗದ ಮೇಲೆ ಕಿಡಿಗೇಡಿಗಳು ಮಲಮೂತ್ರ ಮಾಡಿ ಅಪಮಾನ ಮಾಡಿದ್ದರು. ಆ ಸಂದರ್ಭದಲ್ಲಿ ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಶಿವಲಿಂಗ ಶುದ್ಧೀಕರಣಕ್ಕೆ ತೆರಳಿದ್ದರು. ಈ ವೇಳೆ ಅನ್ಯ ಸಮುದಾಯದ ಜನ ಶಿವಲಿಂಗ ಶುದ್ಧೀಕರಣ ಮಾಡಿ ಹೊರಬರುತ್ತಿದ್ದವರ ಮೇಲೆ ಏಕಾಏಕಿ ಮಾರಕಾಸ್ತ್ರಗಳು, ಬಡಿಗೆ ಹಿಡಿದು ಕಲ್ಲು ತೂರಾಟ ನಡೆಸಿದ್ದರು.
ಇದನ್ನೂ ಓದಿ: ಮಹಾಶಿವರಾತ್ರಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ, ಖಾಸಗಿ ವಾಹನಗಳ ಪ್ರವೇಶಕ್ಕೆ ನಿಷೇಧ
ಆಳಂದ ಪಟ್ಟಣದಲ್ಲಿ ಸುಪ್ರಸಿದ್ದ ಸೂಪಿ ಸಂತ ಲಾಡ್ಲೆ ಮಶಾಕ್ ದರ್ಗಾವಿದೆ. 14ನೇ ಶತಮಾನದಲ್ಲಿ ತತ್ವ ವಿಚಾರಗಳಿಂದ ಲಾಡ್ಲೆ ಮಶಾಕ್ ಸುಪ್ರಸಿದ್ದಿಯನ್ನು ಹೊಂದಿದ್ದರು. ಇದೇ ದರ್ಗಾದ ಆವರಣದಲ್ಲಿ, 15ನೇ ಶತಮಾನದಲ್ಲಿ ಆಗಿಹೋಗಿರುವ ಶಿವಾಜಿ ಮಹಾರಾಜರ ಗುರು, ಸಂತ ಸಮರ್ಥ ರಾಮದಾಸರ ರಾಘವ ಚೈತನ್ಯರ ಸಮಾಧಿಯಿದೆ. ಸಮಾಧಿ ಮೇಲೆ ಶಿವಲಿಂಗವಿದೆ. ದರ್ಗಾಕ್ಕೆ ಹೋಗುತ್ತಿದ್ದ ಅನೇಕ ಹಿಂದೂ ಭಕ್ತರು, ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜಿಸಿ, ನಮಸ್ಕರಿಸಿ ಬರುತ್ತಿದ್ದರು. ಜೊತೆಗೆ ಜೋಶಿ ಎಂಬ ಕುಟುಂಬದವರು ಲಿಂಗಕ್ಕೆ ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದರು. ಇತ್ತೀಚಿನವರೆಗೆ ಅಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಹಿಂದೂ ಮುಸ್ಲಿಂ ನಡುವೆ ಸಾಮರಸ್ಯ ಕೂಡ ಇತ್ತು. ಆದರೆ, 2022ರಲ್ಲಿ ಶಿವಲಿಂಗದ ಮೇಲೆ ಅನ್ಯ ಕೋಮಿನ ಕೆಲವರು ಮಲಮೂತ್ರ ಮಾಡಿದ್ದರು. ಅಂದಿನಿಂದ ವಿವಾದಕ್ಕೆ ಕಾರಣವಾಗಿದೆ.
Published On - 10:33 am, Tue, 25 February 25