ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್

ಆಳಂದ ತಾಲೂಕಿನ ಹಿರಾಪುರ ಗ್ರಾಮದ ರಾಜಶೇಖರ್ ಯಳಮೇಲಿ ಎನ್ನುವವರು ಧರ್ಮವಾಡಿ ಗ್ರಾಮದಲ್ಲಿರುವ ತಮ್ಮ ಕೃಷಿ ಜಮೀನಿನಲ್ಲಿ ಈ ಬಾರಿ ಜೋಳ ಬೆಳೆದಿದ್ದಾರೆ. ಕಳೆದ ಮೂರ ತಲೆಮಾರುಗಳಿಂದ ಯಳಮೇಲಿ ಕುಟುಂಬ ಕೃಷಿಯನ್ನು ಮಾಡಿಕೊಂಡು ಬಂದಿದೆ.

  • ಸಂಜಯ್ ಚಿಕ್ಕಮಠ
  • Published On - 13:30 PM, 2 Mar 2021
ಅಚ್ಚರಿಗೆ ಕಾರಣವಾದ ಕಲಬುರಗಿ ಜೋಳ ಬೆಳೆ: ಜೋಳದ ಬೀಜಕ್ಕೆ ಬಂತು ಬಲು ಡಿಮ್ಯಾಂಡ್
ಮುತ್ತಿನಂತೆ ಕಾಣುತ್ತಿರುವ ಜೋಳ

ಕಲಬುರಗಿ: ದೂರದಿಂದ ನೋಡಿದರೆ ಹೈದರಾಬಾದ್​ನ ಮುತ್ತಿನಂತೆ ಕಾಣುತ್ತದೆ. ಹೀಗಾಗಿ ಜಮೀನಿನಲ್ಲಿ ಮುತ್ತುಗಳನ್ನು ಬೆಳೆದಿದ್ದಾರೆ ಅಂತ ಅನೇಕರು ಅಚ್ಚರಿ ಪಟ್ಟಿದ್ದರು. ಹೊಲದಲ್ಲಿ ಈ ಭಾರಿ ಅಚ್ಚರಿ ಎನ್ನುವಂತೆ ಜೋಳ ಬೆಳೆದಿದೆ. ಒಂದೆ ದಂಟಿನಲ್ಲಿ ಐದಾರು ಟಿಸಲು ಒಡೆದು, ಐದಾರು ತನೆಗಳಾಗಿವೆ. ಈ ಸೋಜಿಗ ನೋಡಲು ಅನೇಕರು ಜಮೀನಿಗೆ ಬರುತ್ತಿದ್ದಾರೆ.

ಜಿಲ್ಲೆಯ ಆಳಂದ ತಾಲೂಕಿನ ಹಿರಾಪುರ ಗ್ರಾಮದ ರಾಜಶೇಖರ್ ಯಳಮೇಲಿ ಎನ್ನುವವರು ಧರ್ಮವಾಡಿ ಗ್ರಾಮದಲ್ಲಿರುವ ತಮ್ಮ ಕೃಷಿ ಜಮೀನಿನಲ್ಲಿ ಈ ಬಾರಿ ಜೋಳ ಬೆಳೆದಿದ್ದಾರೆ. ಕಳೆದ ಮೂರು ತಲೆಮಾರುಗಳಿಂದ ಯಳಮೇಲಿ ಕುಟುಂಬ ಕೃಷಿ ಮಾಡಿಕೊಂಡು ಬಂದಿದೆ. ಪ್ರತಿ ವರ್ಷ ಜೋಳ ಬೆಳೆಯುತ್ತಾರೆ. ಆದರೆ ಈ ಬಾರಿ ಬೆಳೆದಿರುವ ಜೋಳ ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಉತ್ತರ ಕರ್ನಾಟಕ ಭಾಗದ ಜನರ ಪ್ರಮುಖ ಆಹಾರದ ಬೆಳೆ ಜೋಳ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಜನರು ಪ್ರತಿ ವರ್ಷ ಹಿಂಗಾರು ಬೆಳೆಯಾಗಿ ಜೋಳವನ್ನು ಬೆಳೆಯುತ್ತಾರೆ. ಅದೇ ರೀತಿ ರಾಜಶೇಖರ ಯಳಮೇಲಿ ತಮ್ಮ 50 ಎಕರೆ ಜಮೀನಿನ ಪೈಕಿ ಹತ್ತು ಎಕರೆ ಭೂಮಿಯಲ್ಲಿ ಬಿಳಿ ಜೋಳವನ್ನು ಬೆಳೆದಿದ್ದಾರೆ. ಅಲ್ಲದೇ ಈ ಜೋಳ ಹೈದರಾಬಾದ್ ಮುತ್ತಿನಂತೆ ಕಂಗೊಳಿಸುತ್ತಿದೆ. ಒಂದೇ ಬೀಜದಿಂದ ಐದಾರು ದಂಟುಗಳು ಬೆಳದಿದ್ದು, ಒಂದೊಂದು ದಂಟಿನಲ್ಲಿ ಐದಾರು ಟಿಸಿಲುಗಳು ಬಂದಿದ್ದು, ಐದಾರು ತನೆಗೆಳೂ ಬೆಳದಿವೆ.

ಮುತ್ತಿನಂತೆ ಕಾಣುವ ಜೋಳ

ಜೋಳವನ್ನು ವೀಕ್ಷಿಸುತ್ತಿರುವ ರೈತರು

ಎಂಬತ್ತು ಕ್ವಿಂಟಲ್ ಬೆಳೆ ನಿರೀಕ್ಷೆ
ಸಾಮಾನ್ಯವಾಗಿ ಒಂದು ದಂಟಿನಲ್ಲಿ ಎರಡು ಟಿಸಲುಗಳು ಬಂದಿರುತ್ತವೆ. ಒಂದು ದಂಟಿನಲ್ಲಿ ಎರಡು ತೆನೆಗಳು ಬರುವುದನ್ನು ರೈತರು ನೋಡಿದ್ದಾರೆ. ಆದರೆ ರಾಜಶೇಖರವರ ಜಮೀನಿನಲ್ಲಿ ಈ ಬಾರಿ ಐದಾರು ಟಿಸಲುಗಳು, ಐದಾರು ತನೆಗಳು ಬಂದಿದ್ದು, ಎಲ್ಲಾ ತೆನೆಗಳಲ್ಲಿ ಕೂಡಾ ಉತ್ತಮ ಕಾಳುಗಳಾಗಿವೆ. ಹೀಗಾಗಿ ರಾಜಶೇಖರವರು ಹತ್ತು ಎಕರೆಯಲ್ಲಿ ಬರೋಬ್ಬರಿ ಎಂಬತ್ತು ಕ್ವಿಂಟಲ್​ಗೂ ಹೆಚ್ಚು ಜೋಳ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ.

ಬೆಳೆದಿರುವ ಜೋಳ ಎಲ್ಲರ ಅಚ್ಚರಿಗೆ ಕಾರಣವಾಗಿದೆ

ಗೊಬ್ಬರ ಆಧುನಿಕ ಬೀಜ ಬಳಸಿಲ್ಲ
ಉತ್ತಮವಾಗಿ ಜೋಳ ಬೆಳೆಯಲು ಯಾವುದೇ ಗೊಬ್ಬರವನ್ನು ಹಾಕಿಲ್ಲಾ. ಯಾವುದೇ ಆಧುನಿಕ ಬೀಜವನ್ನು ಕೂಡಾ ಬಳಸಿಲ್ಲವಂತೆ. ಮನೆಯಲ್ಲಿಯೇ ಇದ್ದ ಜೋಳವನ್ನು ಬಿತ್ತನೆ ಮಾಡಿದ್ದಾರಂತೆ. ಸಗಣಿ ಗೊಬ್ಬರ ಬಿಟ್ಟರೆ ಜಮೀನಿಗೆ ಯಾವುದೇ ಗೊಬ್ಬರ ಹಾಕಿಲ್ಲಾ. ಕ್ರಿಮಿನಾಶಕ ಸಿಂಪಡಣೆ ಮಾಡಿಲ್ಲಾ.

ಭೂಮಿ ತಾಯಿ ಪ್ರೀತಿಯಿಂದ ಇಷ್ಟೊಂದು ಬೆಳೆಯನ್ನು ಕೊಟ್ಟಿದ್ದಾಳೆ. ನನ್ನ ಜೀವನದಲ್ಲಿ ಇಂತಹದೊಂದು ಬೆಳೆಯನ್ನು ನಾನು ನೋಡಿಲ್ಲಾ ಅಂತಿದ್ದಾರೆ ರಾಜಶೇಖರ. ಜೋಳವನ್ನು ಅನೇಕರು ಬಂದು ಆಶ್ಚರ್ಯದಿಂದ ನೋಡುತ್ತಿದ್ದಾರೆ. ತಮಗೂ ಮುಂದಿನ ಬಾರಿ ಬೀಜವನ್ನು ನೀಡಿ, ನಾವು ನಮ್ಮ ಜಮೀನಿನಲ್ಲಿ ಬೆಳೆಯುತ್ತೇವೆ ಅಂತ ಹೇಳುತ್ತಿದ್ದಾರಂತೆ.

ಉತ್ತರ ಕರ್ನಾಟಕ ಭಾಗದಲ್ಲಿ ಅಕಾಲಿಕ ಮಳೆಯಿಂದಾಗಿ ಜೋಳದ ಬೆಳೆ ಹಾಳಾಗಿದೆ. ಆದರೆ ರಾಜಶೇಖರ್​ರವರ ಹೊಲದಲ್ಲಿ ಮಾತ್ರ ಭರ್ಜರಿ ಜೋಳದ ಬೆಳೆ ಬಂದಿದ್ದು, ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ

ಮೆಕ್ಕೆಜೋಳದ ಕಣಕ್ಕೆ ಬೆಂಕಿ: ಉತ್ತಮ ಬೆಲೆಯ ನಿರೀಕ್ಷೆಯಲ್ಲಿದ್ದ ಹಾವೇರಿ ರೈತರಿಗೆ ಶಾಕ್

ಯಾದಗಿರಿ: ಜೋಳದ ಬೆಳೆಗೆ ಹಕ್ಕಿ, ಹಂದಿಗಳ ಕಾಟ; ರೈತರ ಪರದಾಟ