ಕಲಬುರಗಿ: ಶ್ರಾವಣವನ್ನು ಹಬ್ಬಗಳ ಹೆಬ್ಬಾಗಿಲು ಎಂದು ಕರೆಯುತ್ತಾರೆ. ಇಂತಹ ಶ್ರಾವಣದಲ್ಲಿ ಮೊದಲು ಬರುವ ಹಬ್ಬವೇ ನಾಗರ ಪಂಚಮಿ. ನಾಗರ ಪಂಚಮಿಯನ್ನು ಉತ್ತರ ಕರ್ನಾಟಕದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರು ಹಾವುಗಳ ಬಿಲಗಳಿಗೆ ಸೇರಿಕೊಳ್ಳುವುದರಿಂದ, ಹಾವುಗಳು ಈ ಸಮಯದಲ್ಲಿ ಹೊರಗೆ ಬರುತ್ತವೆ. ಇದು ಅವುಗಳ ಸಂತಾನಾಭಿವೃದ್ಧಿಗೆ ಸಕಾಲವು ಹೌದು. ಇದೇ ಸಂದರ್ಭದಲ್ಲಿ ನಾಗರ ಪಂಚಮಿ ಹಬ್ಬ ಆಚರಣೆ ಮಾಡುವುದು ಪೂರ್ವಿಕರ ನಂಬಿಕೆಯಾಗಿದೆ. ಕಳೆದ ಎರಡು ವರ್ಷದಿಂದ ನಾಗರ ಪಂಚಮಿ ಹಬ್ಬಕ್ಕೆ ಕೊರೊನಾದ ಕರಿನೆರಳು ಬಡಿದಿದೆ. ಆದರೂ ಈ ಬಾರಿ ಕೊರೊನಾ ಆತಂಕದ ನಡುವೆಯೇ ಇತಿಮಿತಿಯಲ್ಲಿ ಸಂಭ್ರಮದ ಹಬ್ಬವನ್ನು ಆಚರಿಸಲಾಗುತ್ತಿದೆ.
ಮಹಿಳೆಯರ ಸಂಭ್ರಮದ ಹಬ್ಬ ನಾಗರ ಪಂಚಮಿ
ನಾಡಿಗೆ ದೊಡ್ಡ ಹಬ್ಬ ನಾಗರ ಪಂಚಮಿ. ಅಣ್ಣ ಬರಲಿಲ್ಲ ಕರಿಯಾಕ ಎಂಬ ಜಾನಪದ ಗೀತೆಯೊಂದು ಈ ಹಬ್ಬದ ಆಚರಣೆಗಾಗಿಯೇ ಎಂಬಂತೆ ಪ್ರಸುರಪಡಿಸಲಾಗಿದೆ. ಉತ್ತರ ಕರ್ನಾಟಕದ ಮಂದಿಗೆ, ಅದರಲ್ಲೂ ಮಹಿಳೆಯರಿಗೆ ನಾಗರಪಂಚಮಿ ದೊಡ್ಡ ಹಬ್ಬ. ಗಣೇಶ ಚತುರ್ಥಿ ಗಂಡು ಮಕ್ಕಳ ಹಬ್ಬ, ನಾಗರ ಪಂಚಮಿ ಹೆಣ್ಣು ಮಕ್ಕಳ ಹಬ್ಬ ಎಂದು ಕರೆಯುತ್ತಾರೆ. ಹೀಗಾಗಿ ಮಹಿಳೆಯರು ನಾಗರ ಪಂಚಮಿಯನ್ನು ಕಾತುರದಿಂದ ಕಾಯುತ್ತಿರುತ್ತಾರೆ.
ಮದುವೆಯಾದ ಹೆಣ್ಣು ಮಕ್ಕಳು ನಾಗರ ಪಂಚಮಿ ಹಬ್ಬಕ್ಕೆ ತವರಿಗೆ ಹೋಗಲು ತುದಿಗಾಲ ಮೇಲೆ ನಿಂತಿರುತ್ತಾರೆ. ಜೊತೆಗೆ ಸಹೋದರರು ಕೂಡಾ ತಮ್ಮ ಸಹೋದರಿಯನ್ನು ತವರಿಗೆ ಕರೆದುಕೊಂಡು ಬರಲು ಹಿಗ್ಗಿನಿಂದ ಹೋಗುತ್ತಾರೆ. ಮದುವೆಯಾದ ಸಹೋದರಿಯನ್ನು ತವರಿಗೆ ಕರೆದುಕೊಂಡು ಬರುವುದು, ಬಾಲ್ಯದ ನೆನಪುಗಳನ್ನು ಅವರ ಜೊತೆ ಮೆಲಕು ಹಾಕುತ್ತಾ, ಜೋಕಾಲಿ ಆಡುತ್ತಾ, ಉಸುಳಿ, ಉಂಡೆ ತಿನ್ನುತ್ತಾ ಸಂಭ್ರಮದಿಂದ ಹಬ್ಬ ಮಾಡುತ್ತಾರೆ.
ಉತ್ತರ ಕರ್ನಾಟಕದಲ್ಲಿ ಪಂಚಮಿ ಮೊದಲನೇ ದಿನ ಸಹೋದರಿಯರು, ತಮ್ಮ ಸಹೋದರರ ಆಯುಷ್ಯ ಹೆಚ್ಚಾಗಲೆಂದು ಉಪವಾಸ ಇರುತ್ತಾರೆ. ಸಹೋದರರು, ತವರಿಗೆ ಬಂದ ಸಹೋದರಿಯರನ್ನು ಪ್ರೀತಿಯಿಂದ ಕಂಡು, ಸತ್ಕರಿಸುತ್ತಾರೆ. ಪಂಚಮಿ ದಿನ ಎಲ್ಲರು ಸೇರಿ ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮಕ್ಕಳಿಂದ ಹಿಡಿದು ವಯಸ್ಕರರವರಗೆ ಕೂಡಾ ಎಲ್ಲರು ನಾಗರ ಪಂಚಮಿಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹೊಸ ಬಟ್ಟೆಯನ್ನು ಹಾಕಿಕೊಂಡು, ಜೋಕಾಲಿ ಆಡುತ್ತಾ, ಉಂಡೆ ತಿನ್ನುತ್ತಾ ಊರ ತುಂಬಾ ಅಡ್ಡಾಡುತ್ತಾ ಸಂಭ್ರಮಿಸುತ್ತಾರೆ.
ನಾಗಪ್ಪನಿಗೆ ಹಾಲೆರೆಯುವ ಸಂಪ್ರದಾಯ
ನಾಗರ ಪಂಚಮಿ ದಿನ ನಾಗಪ್ಪನಿಗೆ ಹಾಲು ಎರೆಯಲಾಗುತ್ತದೆ. ಗ್ರಾಮೀಣ ಭಾಗದ ಜನರು ತಮ್ಮ ಕೃಷಿ ಜಮೀನಿನಲ್ಲಿರುವ ಕಪ್ಪು ಮಣ್ಣು ಮತ್ತು ಹಾವಿನ ಹುತ್ತದ ಮಣ್ಣನ್ನು ತಂದು ನಾಗರ ಹಾವಿನ ಮೂರ್ತಿಯನ್ನು ಸಿದ್ಧಗೊಳಿಸುತ್ತಾರೆ. ನಂತರ ಮನೆಯ ಜಗುಲಿ ಮೇಲಿಟ್ಟು ಪೂಜೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಎಲ್ಲರು ಸೇರಿ ನಾಗಪ್ಪನಿಗೆ ಹಾಲು ಹಾಕುತ್ತಾರೆ. ಈ ಸಂದರ್ಭದಲ್ಲಿ ದೇವರ ಪಾಲು, ದಿಂಡಿರ ಪಾಲು, ಅಪ್ಪನ ಪಾಲು, ಅಮ್ಮನ ಪಾಲು, ನನ್ನ ಪಾಲು, ನಿನ್ನ ಪಾಲು ಎಂದು ಹೇಳುತ್ತಾ, ಮನೆಯವರೆಲ್ಲರು ಹೆಸರು ಹೇಳಿ ಎಲ್ಲರು ಹಾಲು ಹಾಕುತ್ತಾರೆ.
ಕೆಲವರು ನಾಗದೇವತೆಯ ವಿಗ್ರಹಗಳಿಗೆ ಹಾಲು ಹಾಕುತ್ತಾರೆ. ಬೆಳ್ಳಿ ನಾಗರ ವಿಗ್ರಹಕ್ಕೂ ಹಾಲು ಹಾಕುವ ಸಂಪ್ರದಾಯ ಇತ್ತೀಚಿನ ದಿನಗಳಲ್ಲಿ ಪ್ರಾರಂಭವಾಗಿದೆ. ಮನೆಯಲ್ಲಿಯೇ ನಾಗರ ಮೂರ್ತಿಗೆ ಹಾಲು ಎರೆಯುವುದು ಹೆಚ್ಚಾಗುತ್ತಿದೆ. ನಾಗರ ಪಂಚಮಿ ದಿನ ಮಹಿಳೆಯರು ನಾಗರ ಹೆಸರಲ್ಲಿ ದಾರವನ್ನು ಹಾಕಿಕೊಳ್ಳುತ್ತಾರೆ. ಅದಕ್ಕೆ ಹಂಗನೂಲು ಎಂದು ಕರೆಯುತ್ತಾರೆ.
ಹಬ್ಬಕ್ಕೆ ಸಿದ್ಧವಾಗುತ್ತವೆ ಅನೇಕ ತಿನಿಸುಗಳು
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ದಿನ ಅನೇಕ ಸಿಹಿ ತಿನಿಸುಗಳನ್ನು ಮಾಡುತ್ತಾರೆ. ಅದರಲ್ಲಿ ಪ್ರಮುಖವಾಗಿರುವುದು ಉಂಡೆ. ಶೇಂಗಾ ಉಂಡೆ, ಅಳ್ಳಿಟ್ಟಿನ ಉಂಡೆ,ರವೆ ಉಂಡೆ, ಎಳ್ಳಿನ ಉಂಡೆ ಸೇರಿದಂತೆ ನಾನಾ ಬಗೆಯ ಉಂಡೆಗಳನ್ನು ಮಾಡುತ್ತಾರೆ. ಉಂಡೆ ಜೊತೆ ಉಸುಳಿ ಕೂಡಾ ಮಾಡುತ್ತಾರೆ. ವಿವಿಧ ಕಾಳುಗಳಿಂದ ಉಸುಳಿ ಮಾಡಿ, ಎಳ್ಳು ಹುರಿದು ದೇವರಿಗೆ ನೈವೇದ್ಯ ಮಾಡಿ ನಂತರ ತಾವು ಕೂಡಾ ಸೇವಿಸುತ್ತಾರೆ. ಹಬ್ಬದ ದಿನ ಮಾಡುವ ಉಂಡೆಗಳನ್ನು ವಾರಗಟ್ಟಲೇ ಇಟ್ಟುಕೊಂಡು ತಿನ್ನುತ್ತಾರೆ.
ಪಂಚಮಿ ಸ್ಪೆಷಲ್ ಜೋಕಾಲಿ
ನಾಗರ ಪಂಚಮಿಯ ಮತ್ತೊಂದು ಸ್ಪೆಷಲ್ ಅಂದರೆ ಜೋಕಾಲಿ. ಗ್ರಾಮೀಣ ಭಾಗದಲ್ಲಿ ನಾಗರ ಪಂಚಮಿ ದಿನ, ಮನೆ ಮುಂದಿನ ದೊಡ್ಡ ದೊಡ್ಡ ಗಿಡಗಳಲ್ಲಿ ಜೋಕಾಲಿಗಳು ತೂಗುತ್ತಿರುತ್ತವೆ. ಎಲ್ಲರು ಜೋಕಾಲಿಯನ್ನು ಆಡಿ ಸಂಭ್ರಮಿಸುತ್ತಾರೆ. ಯಾರು ಎಷ್ಟು ದೂರ ಜೀಕುತ್ತಾರೆ ಎಂಬ ಸ್ಪರ್ಧೆಗಳು ಕೂಡಾ ನಡೆಯುತ್ತವೆ. ಇತ್ತ ಹೆಣ್ಣು ಮಕ್ಕಳು ಒಂದು ರೀತಿಯಿಂದ ಸಂಭ್ರಮಸಿದರೆ, ಅತ್ತ ಗಂಡು ಮಕ್ಕಳ ಸಂಭ್ರಮ ಕೂಡಾ ಜೋರಾಗಿರುತ್ತದೆ. ಅನೇಕ ಕಡೆ ಕೋಲಾಟವನ್ನು ಗಂಡು ಮಕ್ಕಳು ಆಡುತ್ತಾರೆ. ಗಂಡು ಮಕ್ಕಳು ಕೋಲಾಟ ಆಡಿ ಸಹೋದರಿಯನ್ನು ರಂಜಿಸುತ್ತಾರೆ.
ನಾಗರ ಪಂಚಮಿ ದಿನ ಅನೇಕ ಗ್ರಾಮೀಣ ಸ್ಪರ್ಧೆಗಳು ಕೂಡಾ ನಡೆಯುತ್ತವೆ. ನಿಂಬೆ ಹಣ್ಣನ್ನು ನಿರ್ದಿಷ್ಟ ಜಾಗಕ್ಕೆ ಎಸೆಯುವುದು, ಕಣ್ಣು ಮುಚ್ಚಿಕೊಂಡು ಗುರುತಿಸಿದ ಜಾಗಕ್ಕೆ ಹೋಗುವುದು, ಚಕ್ಕುಲಿ ಗಾಲಿ ಉರಳಿಸುವುದು ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳನ್ನು ಆಡುತ್ತಾರೆ. ಆಟದಲ್ಲಿ ಗೆದ್ದವರಿಗೆ ಸೋತುವರು ಕೊಬ್ಬರಿ ಕೊಡುವುದು ಒಂದು ವಾಡಿಕೆ. ಆಧುನಿಕತೆ ಯುಗದಲ್ಲಿ ಗ್ರಾಮೀಣ ಭಾಗದಲ್ಲಿ ಪಂಚಮಿ ದಿನ ಇಂದಿಗೂ ಈ ರೀತಿಯ ಆಚರಣೆಗಳನ್ನು ಗ್ರಾಮೀಣ ಜನರು ನಡೆಸಿಕೊಂಡು ಬರುತ್ತಿರುವುದೇ ವಿಶೇಷ.
ಕೊಬ್ಬರಿ ಕುಬ್ಬಸ ನೀಡುವ ವಾಡಿಕೆ
ಹಬ್ಬದ ನಂತರ ಬಂದುಗಳಿಗೆ ಕೊಬ್ಬರಿ ಕುಬ್ಬಸ ನೀಡುವ ವಾಡಿಕೆ ಕೂಡಾ ಇದೆ. ಜತೆಗೆ ಮನೆಯಲ್ಲಿ ಮಾಡಿದ್ದ ಉಂಡೆಗಳನ್ನು ಕೂಡಾ ನೀಡುತ್ತಾರೆ. ತಮ್ಮೂರಿನಲ್ಲಿಯೇ ಇರುವ ಬಂಧುಗಳಿಗೆ ಮತ್ತು ಬೇರೆ ಬೇರೆ ಕಡೆ ಇರುವ ಬಂದುಗಳ ಮನೆಗೆ ಹೋಗಿ ಕೊಬ್ಬರಿ ಕುಬ್ಬಸ, ಉಂಡೆಗಳನ್ನು ನೀಡಿ ಬರುತ್ತಾರೆ. ಮತ್ತೊಂದಡೆ ಮಹಿಳೆಯರಿಗೆ ನೀಡಿ ತವರಿನ ಸಾಮಿಪ್ಯ ಯಾವಾಗಲು ನಿಮಗೆ ಇರುತ್ತೆ ಎನ್ನುವುದನ್ನು ಹೇಳುತ್ತಾರೆ.
ಗ್ರಾಮೀಣ ಭಾಗದಲ್ಲಿ ಇತ್ತೀಚೆಗೆ ಕಡಿಮೆಯಾಗುತ್ತಿರುವ ಸಂಭ್ರಮ
ನಾಗರ ಪಂಚಮಿ ಸಂಭ್ರಮದ ಹಬ್ಬ. ಆದರೆ ಇತ್ತೀಚೆಗೆ ಸಂಭ್ರಮ ಕಡಿಮೆಯಾಗುತ್ತಿದೆ. ಆಧುನಿಕತೆ ಬರಾಟೆಯಲ್ಲಿ ಅನೇಕರು ಸಂಪ್ರದಾಯಗಳನ್ನು ಮರೆತಿದ್ದಾರೆ. ಹಬ್ಬಗಳನ್ನು ಆಚರಿಸುವಷ್ಟು ಪುರಸುತ್ತು ಕೂಡಾ ಅನೇಕರಿಗೆ ಇದೀಗ ಇಲ್ಲ. ಮೊದಲು ಮೊಬೈಲ್ ಇರಲಿಲ್ಲಾ. ಬಂಧುಗಳ ಮನೆಗೆ ಕೂಡಾ ಅಪರೂಪಕ್ಕೆ ಹೋಗಿ ಬರುವುದು ಇತ್ತು. ಆದರೆ ಇದೀಗ ಎಲ್ಲವು ಅಂಗೈಯಲ್ಲಿಯೇ ಇದೆ. ಹೀಗಾಗಿ ಹಬ್ಬಗಳ ಸಂಭ್ರಮ ಕಡಿಮೆಯಾಗಿದೆ. ಆದರು ಕೂಡಾ ಹಳ್ಳಿಗಳಲ್ಲಿ ನಾಗರ ಪಂಚಮಿಯ ಹಬ್ಬದ ಸಂಭ್ರಮ ಇಂದಿಗೂ ಕೂಡಾ ಇದೆ.
ನಾಗರ ಪಂಚಮಿ ಹಬ್ಬ ಮಹಿಳೆಯರಿಗೆ ಬಾಳ ದೊಡ್ಡ ಹಬ್ಬ. ನಾವು ಎಷ್ಟೇ ಮುಂದುವರಿದರೂ ಹಬ್ಬದ ಸಂಭ್ರಮ ನೀಡುವ ಆನಂದ ಬೇರೆ ಯಾವುದು ನೀಡುವುದಿಲ್ಲಾ. ತವರಿಗೆ ಹೋಗುವುದು, ಅಣ್ಣ, ತಮ್ಮನ ಜೊತೆ ಆಟ ಆಡುವುದು, ಗೆಳತಿಯರ ಜೊತೆ ಹರಟೆ ಹೊಡಿಯುವುದು, ಉಂಡೆ ತಿನ್ನುವುದು, ಜೋಕಾಲಿ ಆಡುವ ಮಜಾ ಬೇರೆ ಯಾವುದರಲ್ಲಿ ಕೂಡಾ ಸಿಗುವುದಿಲ್ಲ ಎಂದು ಗೃಹಿಣಿ ಶೋಭಾ ತಿಳಿಸಿದ್ದಾರೆ.
ವರದಿ: ಸಂಜಯ್ ಚಿಕ್ಕಮಠ
ಇದನ್ನೂ ಓದಿ:
Naga Panchami 2021: ಇಂದು ನಾಗರ ಪಂಚಮಿಯನ್ನು ಹೀಗೆ ಆಚರಿಸಿ, ನಿಮ್ಮ ಮನಸ್ಸಿನಿಂದ ಹಾವಿನ ಭಯ ಕಿತ್ತೊಗೆಯಿರಿ
Naga Panchami 2021: ಶ್ರಾವಣ ಮಾಸದ ಮದರಂಗಿ ಹಬ್ಬ ನಾಗರ ಪಂಚಮಿ- ಏನಿದರ ವಿಶೇಷ, ಆಚರಣೆ, ಭಕ್ತಿ-ಭಾವ ಹೇಗೆ?
Published On - 9:54 am, Fri, 13 August 21