ಕಲಬುರ್ಗಿ: ಕರ್ನಾಟಕದ ದಕ್ಷಿಣ ತುದಿಯಿಂದ ವಾಯವ್ಯ ತುದಿಗೆ ಮುಟ್ಟುವ, ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರಗಳೊಂದಿಗೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಂಪರ್ಕ ಬೆಸೆಯುವ ಬಸವ ಎಕ್ಸ್ಪ್ರೆಸ್ (ಟ್ರೇನ್ ನಂಬರ್ 17307 ಮತ್ತು 17308) (Basava Express) ಟೈಮ್ ಟೇಬಲ್ ಮೀರಿ ಸಂಚರಿಸುವುದಕ್ಕೆ ಕುಖ್ಯಾತಿ ಪಡೆದಿದೆ. ಮೈಸೂರಿನಿಂದ ಬಾಗಲಕೋಟೆಗೆ ಸುಮಾರು 1,000 ಕಿಲೋಮೀಟರ್ ಸಂಚರಿಸುವ ಈ ರೈಲಿನ ರಿಸರ್ವೇಶನ್ ಕೋಚ್ಗಳಲ್ಲಿ ಸಾಮಾನ್ಯ ಟಿಕೆಟ್ ಪಡೆದವರು ಪ್ರಯಾಣಿಸುವುದೂ, ರಿಸರ್ವೇಶನ್ ಮಾಡಿಸಿದ ದೂರದ ಪ್ರಯಾಣಿಕರೊಂದಿಗೆ ಪಾಸ್ಧಾರಿಗಳು ಜಗಳ ತೆಗೆಯುವುದು ಬಸವ ಎಕ್ಸ್ಪ್ರೆಸ್ನಲ್ಲಿ ದೊಡ್ಡ ವಿಚಾರವೇ ಅಲ್ಲ. ತಡವಾಗಿ ಸಂಚರಿಸುವ, ಪ್ರಮುಖ ನಿಲ್ದಾಣಗಳ ಔಟರ್ಗಳಲ್ಲಿ ಸಾಕಷ್ಟು ಸಮಯ ನಿಲ್ಲುವ ಬಸವ ಎಕ್ಸ್ಪ್ರೆಸ್ನ ಎಸಿ ಕೋಚ್ನಲ್ಲಿಯೇ ನೀರು ಬರುತ್ತಿಲ್ಲ ಎಂದು ಪ್ರಯಾಣಿಕರು ಇದೀಗ ಆಕ್ರೋಶ ಹೊರಹಾಕಿದ್ದಾರೆ. ಹಲವು ವರ್ಷಗಳಿಂದ ಇದ್ದ ಈ ಸಮಸ್ಯೆಯು ಇದೀಗ ವಿಡಿಯೊ ಒಂದನ್ನು ನೊಂದ ಪ್ರಯಾಣಿಕರು ಟ್ವೀಟ್ ಮಾಡಿರುವುದರಿಂದ ಸುದ್ದಿಯಾಗಿದೆ.
@DrmMys @drmsbc @RailMinIndia @RailwaySeva This is everyday plight of passengers travelling in AC coach in 17307 #Basava Express. There is no water available @AshwiniVaishnaw @SWRRLY pic.twitter.com/d0ogYhxBej
— Kulkarni Sunil (@SunilKukarni) October 11, 2022
‘ಇದು ಟ್ರೇನ್ ನಂಬರ್ 17307 ಬಸವ ಎಕ್ಸ್ಪ್ರೆಸ್ನಲ್ಲಿ ಸಂಚರಿಸುವ ಪ್ರಯಾಣಿಕರ ಪ್ರತಿದಿನದ ಸಮಸ್ಯೆ. ಎಸಿ ಕೋಚ್ಗಳಲ್ಲಿ ನೀರು ಬರುವುದಿಲ್ಲ’ ಎಂದು ರೈಲ್ವೆ ಪ್ರಯಾಣಿಕ ಸುನಿಲ್ ಕುಲಕರ್ಣಿ 34 ಸೆಕೆಂಡ್ಗಳ ವಿಡಿಯೊ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್ ಅನ್ನು ಅವರು ರೈಲ್ವೆ ಇಲಾಖೆ, ರೈಲ್ವೆ ಸೇವಾ, ರೈಲ್ವೆ ಇಲಾಖೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಟ್ಯಾಗ್ ಮಾಡಿದ್ದಾರೆ. ಟ್ವೀಟ್ ಮಾಡಿ 10 ಗಂಟೆಯಾಗಿದ್ದರೂ ಯಾರೊಬ್ಬರೂ ಅವರ ಟ್ವೀಟ್ಗೆ ಪ್ರತಿಕ್ರಿಯಿಸಿಲ್ಲ.
ಪ್ರತಿದಿನ ಮಧ್ಯಾಹ್ನ 1.25ಕ್ಕೆ ಮೈಸೂರು ಬಿಡುವ ಬಸವ ಎಕ್ಸ್ಪ್ರೆಸ್ (17307) ಬೆಂಗಳೂರಿಗೆ ಸಂಜೆ 4.30ಕ್ಕೆ ಬರುತ್ತದೆ. ಬೆಂಗಳೂರಿನಿಂದ ಸಂಜೆ 4.50ಕ್ಕೆ ಹೊರಟು ಮಾರನೇ ದಿನ ಬೆಳಿಗ್ಗೆ 11.10ಕ್ಕೆ ಬಾಗಲಕೋಟೆ ತಲುಪುತ್ತದೆ. ಬಾಗಲಕೋಟೆಯನ್ನು ಮಧ್ಯಾಹ್ನ 2.30ಕ್ಕೆ ಬಿಡುವ ರೈಲು (17308) ಬೆಂಗಳೂರಿಗೆ ಬೆಳಿಗ್ಗೆ 8.20ಕ್ಕೆ ಬರುತ್ತದೆ. ಮೈಸೂರನ್ನು ಬೆಳಿಗ್ಗೆ 11.45ಕ್ಕೆ ತಲುಪುತ್ತದೆ. ಸುಮಾರು 20 ಗಂಟೆಗೂ ಹೆಚ್ಚು ಕಾಲ ಸಂಚಾರದಲ್ಲಿರುವ ಈ ರೈಲು ಗಾಣಗಾಪುರ, ಮಂತ್ರಾಲಯ, ಪುಟ್ಟಪರ್ತಿ ಸೇರಿದಂತೆ ಹಲವು ಪ್ರಸಿದ್ಧ ಯಾತ್ರಾ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಅಷ್ಟೇ ಅಲ್ಲದೆ ವಿಜಯಪುರ, ಕಲಬುರ್ಗಿ, ರಾಯಚೂರು, ಸೊಲ್ಲಾಪುರ, ರಾಯಚೂರು, ಗುಂತಕಲ್ ಸೇರಿದಂತೆ ಹಲವು ಪ್ರಮುಖ ನಗರಗಳಿಗೆ ಪ್ರಯಾಣಿಕರನ್ನು ಕೊಂಡೊಯ್ಯುವ ಪ್ರಮುಖ ಸಂಪರ್ಕ ಸಾಧನವಾಗಿದೆ. 1017 ಕಿಲೋಮೀಟರ್ ಅಂತರ ಕ್ರಮಿಸುವ ರೈಲಿನಲ್ಲಿ ಮೂಲಸೌಕರ್ಯಗಳು ಸರಿಯಿಲ್ಲ. ಅಧಿಕಾರಿಗಳು ಶೀಘ್ರ ಈ ಬಗ್ಗೆ ಗಮನ ಹರಿಸಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.
ಪುಟ್ಟಪರ್ತಿ ಮಾರ್ಗವಾಗಿ ಬಸವ ಎಕ್ಸ್ಪ್ರೆಸ್ ಸಂಚಾರ
ಮೈಸೂರು-ಬಾಗಲಕೋಟೆ ಮಾರ್ಗದಲ್ಲಿ ಸಂಚರಿಸುವ ಬಸವ ಎಕ್ಸ್ಪ್ರೆಸ್ನ ಮಾರ್ಗ ಬದಲಾವಣೆ ಮಾಡಲಾಗಿದ್ದು, ಇದೀಗ ಇದು ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಿಲ್ದಾಣದ ಮಾರ್ಗವಾಗಿ ಸಂಚರಿಸುತ್ತಿದೆ. ಹಿಂದೂಪುರ ಮತ್ತು ಧರ್ಮಾವರಂ ನಿಲ್ದಾಣಗಳನ್ನು ಈ ಹಿಂದೆ ಬಸವ ಎಕ್ಸ್ಪ್ರೆಸ್ ಮಕ್ಕಾಜಿಪೇಟೆ ಮತ್ತು ನಾಗಸಮುದ್ರಂ ನಿಲ್ದಾಣದ ಮಾರ್ಗವಾಗಿ ತಲುಪುತ್ತಿತ್ತು. ಕಳೆದ ಆಗಸ್ಟ್ 26ರಿಂದ ಪುಟ್ಟಪರ್ತಿ ಮಾರ್ಗವಾಗಿ ಸಂಚರಿಸುತ್ತಿದೆ.
Published On - 8:19 am, Wed, 12 October 22