ಸಿಎಂ ಸಿದ್ಧರಾಮಯ್ಯ
ಕಲಬುರಗಿ: ಸಿಎಂ ಸಿದ್ದರಾಮಯ್ಯ ದಾಖಲೆಯ ಬಜೆಟ್ನ್ನು ನಾಳೆ ಮಂಡಿಸಲಿದ್ದಾರೆ. ಆದರೆ ನಾಳಿನ ಸಿದ್ದರಾಮಯ್ಯ ಬಜೆಟ್ ಮೇಲೆ ಹಿಂದುಳಿದ ಭಾಗ ಎನ್ನುವ ಹಣೆಪಟ್ಟಿ ಕಟ್ಟಿಕೊಂಡಿರುವ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ (Kalyana Karnataka) ಭಾಗದ ಜನರು ಹತ್ತಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಜೊತೆಗೆ ತೊಗರಿ ನಾಡಿಗೆ ಸಿದ್ದರಾಮಯ್ಯ ನಾಳಿನ ಬಜೆಟ್‌ನಲ್ಲಿ ಏನೆಲ್ಲಾ ನೀಡುತ್ತಾರೆ ಎನ್ನುವ ಕುತೂಹಲ ಕೂಡ ಜನರಲ್ಲಿ ಹೆಚ್ಚಿದೆ.
ಸಿದ್ದರಾಮಯ್ಯ ಬಜೆಟ್ ಮೇಲೆ ಕಲ್ಯಾಣ ಕರ್ನಾಟಕ ಭಾಗದ ಜನರ ಕಣ್ಣು
ನಾಳಿನ ಬಜೆಟ್‌ನಲ್ಲಿ ಹಿಂದುಳಿದ 371ನೇ(ಜೆ) ಕಲಂ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಎಂಬ ಹೆಸರಿಗೆ ತಕ್ಕಂತೆ ಕಲ್ಯಾಣ ಮಾಡಲು ನೂತನ ಸರಕಾರ ಏನೆಲ್ಲಾ ನೀಡುತ್ತೆ ಎನ್ನುವ ಕುತೂಹಲ ಒಂದಡೆಯಾದರೆ, ಕೆಲವನ್ನು ಮಾಡಲೇಬೇಕು ಎನ್ನುವ ಆಗ್ರಹ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕ ಭಾಗದ ಜನರ ಒತ್ತಾಸೆಯಾಗಿದೆ.
ಇದನ್ನೂ ಓದಿ: Karnataka Budget 2023: ದಾಖಲೆಯ 14ನೇ ಬಾರಿ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ; ಹೆಚ್ಚುತ್ತಲೇ ಇದೆ ಸಾಲದ ಪ್ರಮಾಣ
- 2002 ರಲ್ಲಿ ರಚನೆಯಾಗಿರುವ ನಂಜುಂಡಪ್ಪ ವರದಿ ಒಂದು ತಾಲೂಕು ಕೇಂದ್ರವನ್ನು ಸೂಚ್ಯಂಕ ಮಾಡಿಕೊಂಡು ಸಮಗ್ರ ರಾಜ್ಯದ ವೈಜ್ಞಾನಿಕ ಆಧಾರದ ಮೇಲೆ ಅದ್ಯಯನ ಮಾಡಿ ರಚನೆ ಮಾಡಿರುವ ವರದಿಯಾಗಿದೆ. ಈ ವರದಿಯ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಸರಕಾರ ತುರ್ತಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಏಳು ಜಿಲ್ಲೆಗಳ ಹಿಂದುಳಿಯುವಿಕೆಯ ಬಗ್ಗೆ ವರದಿ ರಚಿಸಲು ಕ್ರಮ ಕೈಗೊಳ್ಳಬೇಕು.
- ಕಲ್ಯಾಣದ ಹಿಂದುಳಿಕೆಗೆ ಒಂದು ಗ್ರಾಮ ಪಂಚಾಯತ್ ಸೂಚ್ಯಂಕವನ್ನಾಗಿ ಮಾಡಿಕೊಂಡು ರಚಿಸಬೇಕು. ಈ ವರದಿ ತಯಾರಾಗದೆ ಕಲ್ಯಾಣಕ್ಕೆ ಎಷ್ಟೇ ಹಣ ನೀಡಿದರೂ ಕಾಲಮಿತಿಯ ಪರಿಣಾಮಕಾರಿ ಅಭಿವೃದ್ಧಿ ಆಗುವದಿಲ್ಲ ಮತ್ತು ಪ್ರಾದೇಶಿಕ ಸಮತೋಲನೆಯೂ ನಿವಾರಣೆಯಾಗುವದಿಲ್ಲ. ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬಜೆಟ್‌ನಲ್ಲಿ ಗಣನೆಗೆ ತೆಗೆದುಕೊಳ್ಳಬೇಕು.
- ರುಟಿನ ಬಜೆಟ್ ಮತ್ತು ವಿಶೇಷ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು 5 ಇಲ್ಲವೇ 10 ವರ್ಷದ ವೈಜ್ಞಾನಿಕ ಕ್ರೀಯಾ ಯೋಜನೆಯನ್ನು ರೂಪಿಸಿ ಅದರ ಆಧಾರದ ಮೇಲೆ ನೀರಾವರಿ, ಕೈಗಾರಿಕೆ, ರಸ್ತೆ, ಸಾರಿಗೆ, ಶಿಕ್ಷಣ, ಉದ್ಯೋಗ ಸೃಷ್ಟಿ, ಪ್ರವಾಸೋಧ್ಯಮ, ಕ್ರೀಡೆ, ಕೃಷಿ ಮುಂತಾಗಿ ಎಲ್ಲಾ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಬೇಕು.
- ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಕೃಷಿ ನೀತಿ, ಪ್ರತ್ಯೇಕ ಜಲ ನೀತಿ, ಪ್ರತ್ಯೇಕ ಕೈಗಾರಿಕಾ ನೀತಿಜಾರಿಗೆ ತರುವ ಮುಖಾಂತರ ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವುದರ ಜೊತೆಗೆ ಉದ್ಯೋಗ ಸೃಷ್ಟಿಗೆ ಪೂರಕವಾಗುವುದು. ಇದರಿಂದ ಕಲ್ಯಾಣದ ಜನರು ಗುಳೆ ಹೋಗುವುದನ್ನು ತಪ್ಪಿಸಲು ಅನುಕೂಲವಾಗುತ್ತದೆ.
- ಹೈದ್ರಾಬಾದ ಕರ್ನಾಟಕ ಎಂಬ ಹೆಸರು ಬದಲಾವಣೆ ಮಾಡಿ ಕಲ್ಯಾಣ ಕರ್ನಾಟಕ ಹೆಸರು ಇಟ್ಟಿರುವಂತೆ ಕಲ್ಯಾಣದ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಮಾಡದೇ ಇದ್ದರೆ, ಕಲ್ಯಾಣದ ಪ್ರಗತಿ ಸಾಧ್ಯವಾಗುವದಿಲ್ಲ. ಅದರಂತೆ 371ನೇ(ಜೆ) ಕಲಂ ಪರಿಣಾಮಕಾರಿ ಅನುಷ್ಠಾನವಾಗುವುದಿಲ್ಲ. ಸರಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸುವುದು ತುರ್ತು ಅವಶ್ಯವಾಗಿದೆ.
- ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ಸ್ಥಾನಕ್ಕೆ ಸಂಪುಟ ದರ್ಜೆಯ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡದೇ ಮತ್ತೇ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಈ ಮಂಡಳಿ ರಾಜಕೀಯ ವ್ಯಕ್ತಿಗಳಿಗೆ ಪುನರ್ ವಸತಿ ಕೇಂದ್ರ ವಾಗುತ್ತದೆ ವಿನಃ ಈ ಭಾಗದ ಅಸಮತೋಲನೆ ನಿವಾರಣೆಯ ಸದುದ್ದೇಶ ಈ ಮಂಡಳಿಯಿಂದ ಉಪಯೋಗವಾಗುವುದಿಲ್ಲ. ಈ ಬಗ್ಗೆ ಸರಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು.
- ಕಲ್ಯಾಣ ಕರ್ನಾಟಕದ ಸರ್ವಾಂಗೀಣ ರಚನಾತ್ಮಕ ಪ್ರಗತಿಗೆ ಕಲ್ಯಾಣದ ಎಂಟು ಸಚಿವರು ಕಲ್ಯಾಣದ ಜನರಿಗೆ ಆಶ್ಚರ್ಯ ಉಂಟು ಮಾಡುವ ರೀತಿಯಲ್ಲಿ ಜನಮಾನಸಕ್ಕೆ ಪೂರಕವಾದ ರೀತಿಯಲ್ಲಿ ಬಜೆಟ್ ನಲ್ಲಿ ನಮ್ಮ ನಿರೀಕ್ಷೆಗಳಿಗೆ ಸ್ಪಂದಿಸಲು ರಾಜಕಿಯ ಇಚ್ಛಾಶಕ್ತಿ ವ್ಯಕ್ತಪಡಿಸುವುದು ಅತಿ ಅವಶ್ಯವಾಗಿದೆ.
- ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ದಿ ಮಂಡಳಿಗೆ ಐದು ಸಾವಿರ ಕೋಟಿ ನೀಡಬೇಕು. ಜೊತೆಗೆ ಈ ಭಾಗದಲ್ಲಿರುವ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುಧಾನ ನೀಡಬೇಕು. ತೊಗರಿ ಉತ್ತೇಜನಕ್ಕೆ ಹೆಚ್ಚು ಪ್ರೋತ್ಸಾಹ ನೀಡಬೇಕು. ಪ್ರತ್ಯೇಕ ಕೈಗಾರಿಕಾ ನೀತಿಯನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿ, ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗುವಂತೆ ನೋಡಿಕೊಳ್ಳಬೇಕು ಎನ್ನುವ ಆಗ್ರಹವನ್ನು ಈ ಭಾಗದ ಜನರು ಮಾಡಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಒತ್ತು ನೀಡಿ, ಈ ಭಾಗದ ಸರ್ವಾಂಗೀಣ ಅಭಿವೃದ್ದಿಗೆ ಕ್ರಮ ಕೈಗೊಳ್ಳುವ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಬೇಕು. ಕೇವಲ ಹೆಸರಿಗೆ ಕಲ್ಯಾಣ ಮಾಡಿದರೆ ಸಾಲದು, ಯೋಜನೆಗಳು, ಅಭಿವೃದ್ದಿಯಿಂದ ಕಲ್ಯಾಣವಾಗಬೇಕು ಅಂತಿದ್ದಾರೆ ಹೈದ್ರಾಬಾದ್ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ್ ದಸ್ತಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.