Karnataka Budget 2023: ದಾಖಲೆಯ 14ನೇ ಬಾರಿ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯ; ಹೆಚ್ಚುತ್ತಲೇ ಇದೆ ಸಾಲದ ಪ್ರಮಾಣ
ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಮೊದಲ ಬಜೆಟ್ನ್ನು ಜುಲೈ 7 ರಂದು ಮಂಡಿಸಲಿದ್ದಾರೆ. ಈ ಹಿಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಹಿಂದಿನ ಬಜೆಟ್ 3.09 ಲಕ್ಷ ಕೋಟಿ ರೂ.ಗಿಂತ ಶೇಕಡಾ 8 ರಷ್ಟು ಅಂದರೆ 3.39 ಲಕ್ಷ ಕೋಟಿ ರೂ. ಹೆಚ್ಚಳವಾಗಿರಲಿದೆ. ದಾಖಲೆಯ 14ನೇ ಬಾರಿ ಸಿದ್ದರಾಮಯ್ಯ ಬಜೆಟ್ ಮಂಡಿಸುತ್ತಿದ್ದು, ಆದರೆ ಸಾಲದ ಪ್ರಮಾಣ ಹೆಚ್ಚುತ್ತಲೇ ಇದೆ.
ಬೆಂಗಳೂರು: ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ (Siddaramaiah) ಅವರು ಜುಲೈ 7 ರಂದು ತಮ್ಮ 14 ನೇ ಬಜೆಟ್ನ್ನು (Karnataka Budget 2023) ಮಂಡಿಸಲಿದ್ದಾರೆ. ಆ ಮೂಲಕ 13 ಬಾರಿ ಬಜೆಟ್ ಮಂಡಿಸಿದ್ದ ಮಾಜಿ ಸಿಎಂ ರಾಮಕೃಷ್ಣ ಹೆಗಡೆ ಅವರನ್ನು ಹಿಂದಿಕ್ಕಲಿದ್ದಾರೆ. ಇದು ಕಾಂಗ್ರೆಸ್ ಸರ್ಕಾರದ ಪೂರಕ ಬಜೆಟ್ ಆಗಿದ್ದು, ಇತರೆ ಅಭಿವೃದ್ಧಿ ಯೋಜನೆಗಳ ಜೊತೆಗೆ ಕಾಂಗ್ರೆಸ್ ಘೋಷಿಸಿರುವ ಐದು ‘ಗ್ಯಾರಂಟಿ’ ಯೋಜನೆಗಳನ್ನು ಪೂರೈಸುವ ದೊಡ್ಡ ಜವಾಬ್ದಾರಿ ಸಿದ್ದರಾಮಯ್ಯ ಅವರ ಮೇಲಿದೆ.
ಹಿಂದಿನ ಬಜೆಟ್ಗಿಂತ ಶೇಕಡಾ 8 ರಷ್ಟು ಹೆಚ್ಚಳ
ಈ ವರ್ಷದ ಫೆಬ್ರವರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಹಿಂದಿನ ಬಜೆಟ್ 3.09 ಲಕ್ಷ ಕೋಟಿ ರೂ.ಗಿಂತ ಶೇಕಡಾ 8 ರಷ್ಟು ಅಂದರೆ 3.39 ಲಕ್ಷ ಕೋಟಿ ರೂ. ಹೆಚ್ಚಳ ಎಂದು ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು.
ಇದನ್ನೂ ಓದಿ: ಕರ್ನಾಟಕ ಬಜೆಟ್ 2023 ಯಾವಾಗ? ಯಾರು ಮಂಡಿಸಲಿದ್ದಾರೆ? ಲೈವ್ ವೀಕ್ಷಿಸುವುದು ಹೇಗೆ? ಇಲ್ಲಿದೆ ವಿವರ
‘ಗ್ಯಾರಂಟಿ’ ಯೋಜನೆಗಳಿಗೆ ಸರ್ಕಾರದಿಂದ 59,000 ಕೋಟಿ ರೂ. ವ್ಯಯವಾಗುತ್ತಿದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದರು. ಗ್ಯಾರಂಟಿ ಅನುಷ್ಠಾನ ಸಂಬಂಧ ಬಜೆಟ್ನಲ್ಲಿ ಘೋಷಣೆ ಸಾಧ್ಯತೆ ಇದ್ದು, ಗೃಹಲಕ್ಷ್ಮಿ ಯೋಜನೆಗೆ 30 ಸಾವಿರ ಕೋಟಿ ರೂ. ಅನುದಾನ ಮೀಸಲು ಸಾಧ್ಯತೆಯಿದೆ.
ಅಂಗನವಾಡಿ, ಆಶಾ ಕಾರ್ಯಕರ್ತೆಯರ ಗೌರವಧನವನ್ನು 11,500ರಿಂದ 15 ಸಾವಿರ, ಸಹಾಯಕಿಯರ ಗೌರವಧನ 7,500ರಿಂದ 10 ಸಾವಿರ, ಆಶಾ ಕಾರ್ಯಕರ್ತೆಯರ ಗೌರವಧನ 5,000ರಿಂದ 8 ಸಾವಿರ ಮತ್ತು ಬಿಸಿಯೂಟ ಕಾರ್ಯಕರ್ತೆಯರ ಗೌರವಧನ 3,700ರಿಂದ 5 ಸಾವಿರಕ್ಕೆ ಏರಿಕೆ ಸಾಧ್ಯತೆ ಇದೆ.
ಇದನ್ನೂ ಓದಿ: Karnataka Budget 2023: ಬಜೆಟ್ ಸಿದ್ಧತೆಯಲ್ಲಿ ವ್ಯಸ್ತರಾದ ಸಿಎಂ ಸಿದ್ದರಾಮಯ್ಯ; ಈ ಬಾರಿ ಹೆಚ್ಚಲಿದೆ ಆಯವ್ಯಯದ ಗಾತ್ರ
ಹೊರೆ ಆದ ರಾಜ್ಯದ ಸಾಲ
2023 – 24 ಸಾಲಿನ ಬಜೆಟ್ನಲ್ಲಿ 77,750 ಕೋಟಿ ರೂ. ಸಾಲ ಪಡೆದುಕೊಳ್ಳಬಹುದು ಎಂದು ಉಲ್ಲೇಖಿಸಲಾಗಿದ್ದು, ವರ್ಷದಿಂದ ವರ್ಷಕ್ಕೆ ರಾಜ್ಯ ಸಾಲದ ಗಾತ್ರವೂ ಬೆಳೆಯುತ್ತಲ್ಲೇ ಇದೆ.
- 2012 – 13 ರಲ್ಲಿ – ಒಂದು ಲಕ್ಷ ಕೋಟಿ ರೂ ದಾಟಿತ್ತು.
- 2016 – 17 ರಲ್ಲಿ – 2 ಲಕ್ಷ ಕೋಟಿ ರೂ ಮೀರಿತ್ತು.
- 2019 – 20 ರಲ್ಲಿ – 3 ಲಕ್ಷ ಕೋಟಿ ರೂ ಮೀರಿತ್ತು
- 2020 – 21 ರಲ್ಲಿ – 4 ಲಕ್ಷ ಕೋಟಿ ರೂ. ದಾಟಿತ್ತು (ಕೋವಿಡ್ ಹಾಗೂ ಪ್ರವಾಹದಿಂದ ಸಾಲದ ಪ್ರಮಾಣ ಹೆಚ್ಚಳ)
- 2022 – 23 ರ ಅಂತ್ಯಕ್ಕೆ 5 ಲಕ್ಷ ಕೋಟಿ ರೂ.ಗೆ ಬಂದು ನಿಂತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:35 pm, Thu, 6 July 23