ಕರ್ನಾಟಕ ಬಜೆಟ್ 2023 ಯಾವಾಗ? ಯಾರು ಮಂಡಿಸಲಿದ್ದಾರೆ? ಲೈವ್ ವೀಕ್ಷಿಸುವುದು ಹೇಗೆ? ಇಲ್ಲಿದೆ ವಿವರ
ನೂತನ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಬಜೆಟ್ ಮಂಡನೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಕರ್ನಾಟಕ ಬಜೆಟ್ 2023 ಯಾವಾಗ? ಯಾರು ಮಂಡಿಸಲಿದ್ದಾರೆ? ಲೈವ್ ವೀಕ್ಷಿಸುವುದು ಹೇಗೆ? ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಅಧಿಕಾರಿಕ್ಕೆ ಬಂದಿದ್ದು, ನೂತನ ಸರ್ಕಾರ ತನ್ನ ಮೊದಲ ಬಜೆಟ್ ಮಂಡನೆಗೆ ಸಿದ್ಧತೆ ಮಾಡಿಕೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು(Siddaramaiah) ನಾಳೆ ಅಂದರೆ ಜುಲೈ 7 ರ ಶುಕ್ರವಾರದಂದು 2023-24ನೇ ಸಾಲಿನ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ. ಇದು ಅವರ 14ನೇ ಬಜೆಟ್ ಆಗಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯನವರು ಹೊಸ ದಾಖಲೆ ಬರೆಯಲಿದ್ದಾರೆ. ನಾಳೆಯ ಅವರ ಬಜೆಟ್ನಿಂದ ಕರ್ನಾಟಕ ರಾಜ್ಯದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಜೆಟ್ ಮಂಡನೆ(Karnataka Budget) ಮಾಡಿರುವ ಕೀರ್ತಿಗೆ ಸಿದ್ದರಾಮಯ್ಯ ಪಾತ್ರರಾಗಲಿದ್ದಾರೆ.
ಜುಲೈ 3 ರ ಸೋಮವಾರದಿಂದ ಆರಂಭವಾಗಿರುವ ರಾಜ್ಯ ಬಜೆಟ್ ಅಧಿವೇಶನ 10 ದಿನಗಳ ಕಾಲ ನಡೆಯುತ್ತೆ. ಅಧಿವೇಶನದಲ್ಲಿ ಕಾಂಗ್ರೆಸ್ ಗ್ಯಾರಂಟಿಗಳು ಸೇರಿದಂತೆ ಅನೇಕ ಮಹತ್ವದ ಚರ್ಚೆಗಳು ನಡೆಯಲಿವೆ. ಅಧಿವೇಶನದ ಮೊದಲ ದಿನ ಸದನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಿದರು. ಸದ್ಯ ರಾಜ್ಯಪಾಲರ ಭಾಷಣದಲ್ಲಿ ಉಲ್ಲೇಖಿಸಲಾದ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಹಾಗೂ ಅನೇಕ ವಿಚಾರಗಳು ಪ್ರಸ್ತಾಪವಾಗುತ್ತಿವೆ. ಇನ್ನು ಎಂಟು ದಿನ ಪ್ರಶ್ನೋತ್ತರ ಕಲಾಪಕ್ಕೆ ಸಮಯ ನಿಗದಿ ಮಾಡಲಾಗಿದೆ.
ಈ ಬಾರಿ ರಾಜ್ಯದ ಬಜೆಟ್ ಗಾತ್ರ ಎಷ್ಟು?
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಅಂದಾಜಿಸಿದ ಪ್ರಕಾರ, ಸುಮಾರು 3.35 ಲಕ್ಷ ಕೋಟಿ ರೂಪಾಯಿ ಈ ಬಾರಿಯ ಬಜೆಟ್ ಗಾತ್ರ ಇರಲಿದೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸರಕಾರ ಮಂಡಿಸಿದ ಬಜೆಟ್ ಗಾತ್ರ 2,51,541 ಕೋಟಿ ರೂ. ಇತ್ತು. 2021-22ರಲ್ಲಿ 2,38,600 ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲಾಗಿತ್ತು.
ಬಜೆಟ್ ಲೈವ್ ವೀಕ್ಷಿಸುವುದೇಗೆ?
ಸಿಎಂ ಸಿದ್ದರಾಮಯ್ಯನವರು ಮಂಡಿಸುವ ಬಜೆಟ್ ಅನ್ನು ಸರ್ಕಾರದ ವಿಧಾನಸಭೆ ಅಧಿವೇಶನದ ವೆಬ್ ಪೋರ್ಟಲ್ನಲ್ಲಿ ಲೈವ್ ವೀಕ್ಷಿಸಬಹುದು. ದೂರದರ್ಶನ (ಡಿಡಿ ನ್ಯೂಸ್) ಹಾಗೂ ಇತರ ಸುದ್ದಿ ವಾಹಿನಿಗಳಲ್ಲಿ ಬಜೆಟ್ ಮಂಡನೆ ನೇರ ಪ್ರಸಾರ ವೀಕ್ಷಿಸಬಹುದು. ಹಾಗೂ ಟಿವಿ9 ಕನ್ನಡ ಡಿಜಿಟಲ್ನಲ್ಲೂ ಬಜೆಟ್ನ ಕ್ಷಣ ಕ್ಷಣದ ಮಾಹಿತಿಯನ್ನು ಪಡೆಯಬಹುದು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ