ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಆಟೋದಲ್ಲಿ ಸಿಐಡಿ ಕಚೇರಿಗೆ ಬಂದು ಶರಣಾದ ಕಿಂಗ್ಪಿನ್ ಮಂಜುನಾಥ ಮೇಳಕುಂದಿ
ಕಲಬುರಗಿಯ ಐವಾನ್ ಇ ಶಾಹಿ ಗೆಸ್ಟ್ಹೌಸ್ನಲ್ಲಿರುವ ಸಿಐಡಿ ಕಚೇರಿಗೆ ಆಟೋದಲ್ಲಿ ಆಗಮಿಸಿ ಮಂಜುನಾಥ ಮೇಳಕುಂದಿ ಶರಣಾಗಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಆರೋಗ್ಯ ಸರಿಯಿರಲಿಲ್ಲ ಎಂದಿದ್ದಾರೆ.
ಕಲಬುರಗಿ: ಪಿಎಸ್‌ಐ ಪರೀಕ್ಷಾ ಅಕ್ರಮದ ತನಿಖೆಯಲ್ಲಿ ದಿನಕ್ಕೊಂದು ರೋಚಕ ಸತ್ಯ ಹೊರಬೀಳುತ್ತಿದೆ. ಕಿಂಗ್‌ಪಿನ್‌ಗಳು ಮತ್ತು ಅಭ್ಯರ್ಥಿಗಳು ನೀಡುತ್ತಿರೋ ಮಾಹಿತಿಯಿಂದ, ಸಿಐಡಿ ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಶಾಕಿಂಗ್ ನ್ಯೂಸ್ ಅಂದ್ರೆ, ಪರೀಕ್ಷಾ ಅಕ್ರಮದ ಕೇಂದ್ರ ಸ್ಥಾನದಲ್ಲಿ ಕಲಬುರಗಿಗಿಂತ ಬೆಂಗಳೂರಿನದ್ದೇ ಸಿಂಹಪಾಲು ಅನ್ನೋ ಗುಮಾನಿ ಶುರುವಾಗಿದೆ. ಇದೆಲ್ಲ ಒಂದು ಕಡೆ ಆದ್ರೆ ಮತ್ತೊಂದು ಕಡೆ ಪ್ರಕರಣದ ಕಿಂಗ್ಪಿನ್, ನೀರಾವರಿ ಇಲಾಖೆ ಇಂಜನೀಯರ್ ಆಗಿರುವ ಮಂಜುನಾಥ ಮೇಳಕುಂದಿ ಸಿಐಡಿ ಕಚೇರಿಗೆ ಬಂದು ಶರಣಾಗಿದ್ದಾರೆ.
ಕಲಬುರಗಿಯ ಐವಾನ್ ಇ ಶಾಹಿ ಗೆಸ್ಟ್ಹೌಸ್ನಲ್ಲಿರುವ ಸಿಐಡಿ ಕಚೇರಿಗೆ ಆಟೋದಲ್ಲಿ ಆಗಮಿಸಿ ಮಂಜುನಾಥ ಮೇಳಕುಂದಿ ಶರಣಾಗಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಮಂಗಳೂರಿಗೆ ಹೋಗಿದ್ದೆ. ಇಂದು ಮುಂಜಾನೆಯೇ ನಾನು ಕಲಬುರಗಿ ನಗರಕ್ಕೆ ಬಂದಿದ್ದೇನೆ. ಸಿಐಡಿ ಮುಂದೆ ಶರಣಾಗಲು ಬಂದಿದ್ದೇನೆ ಎಂದು ನೀರಾವರಿ ಇಲಾಖೆ ಎಇ ಮಂಜುನಾಥ ಮೇಳಕುಂದಿ ತಿಳಿಸಿದ್ದಾರೆ.
ಮಂಜುನಾಥ ಮೇಳಕುಂದಿ ಎಪ್ರಿಲ್ 10 ರಿಂದ ನಾಪತ್ತೆಯಾಗಿದ್ದರು. ಇವರ ವಿರುದ್ಧ ಆರು ದಿನದ ಹಿಂದೆ ಅರೆಸ್ಟ್ ವಾರೆಂಟ್ ಕೂಡಾ ಜಾರಿಯಾಗಿತ್ತು. ಪಿಎಸ್ಐ ನೇಮಕಾತಿ ಅಕ್ರಮ ಹೊರಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಮಂಜುನಾಥ ಇಂದು ಸಿಐಡಿ ಕಚೇರಿಗೆ ಬಂದು ಶರಣಾಗಿದ್ದಾರೆ. ಈ ಹಿಂದೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಮಂಜುನಾಥ ಮೇಳಕುಂದಿ ವಿರುದ್ಧ ದೂರು ದಾಖಲಾಗಿತ್ತು. ಲೋಕೋಪಯೋಗಿ ಪರೀಕ್ಷೆ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದರು. ಏಪ್ರಿಲ್ 8 ರಂದು ಕಲಬುರಗಿಯಿಂದ ಬೆಂಗಳೂರಿಗೆ ಹೋಗಿದ್ದ ಮಂಜುನಾಥ ಜಾಂಡೀಸ್ ಕಾಯಿಲೆಗೆ ಚಿಕಿತ್ಸೆ ಮತ್ತು ಸೀಜ್ ಆಗಿರೋ ತನ್ನ ಮೊಬೈಲ್ ಪಡೆಯಲು ಬೆಂಗಳೂರಿಗೆ ಹೋಗಿದ್ದರು. ಆದ್ರೆ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿದ್ದರು. ಏಪ್ರಿಲ್ ಹತ್ತರಿಂದ ನಾಪತ್ತೆಯಾಗಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗಿದ್ದರು.
ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಿಐಡಿಗೆ ಶರಣಾಗುವ ಮುನ್ನ ವಕೀಲರನ್ನ ಭೇಟಿಯಾಗಿದ್ದ ಮೇಳಕುಂದಿ ಮಂಗಳೂರಿನಿಂದ ಕಲಬುರಗಿಗೆ ಬಂದ ಮಂಜುನಾಥ ನೇರವಾಗಿ ವಕೀಲರ ಭೇಟಿ ಮಾಡಿದ್ದರು ಬಳಿಕವೇ ಸಿಐಡಿಗೆ ಶರಣಾಗಿದ್ದಾರೆ. ಕಲಬುರಗಿಯಲ್ಲಿರುವ ತನ್ನ ವಕೀಲರನ್ನ ಭೇಟಿಯಾಗಿ ನೀನೇ ಹೋಗಿ ಸಿಐಡಿ ಮುಂದೆ ಶರಣಾಗು. ಎಷ್ಟು ದಿನ ತಲೆಮರೆಸಿಕೊಂಡು ಓಡಾಡುತ್ತಿಯಾ ಎಂದು ವಕೀಲರು ನೀಡಿದ ಸಲಹೆಯಂತೆ ಮೇಳಕುಂದಿ ಸಿಐಡಿ ಕಚೇರಿಗೆ ಬಂದು ಶರಣಾಗಿದ್ದಾರೆ.
Published On - 1:52 pm, Sun, 1 May 22