ಕಲಬುರಗಿ‌ ಜಿಲ್ಲೆಯಾದ್ಯಂತ ಮುಂದಿನ ಒಂದು ವಾರ ಮಳೆ: ನದಿ ದಂಡೆಗೆ ಹೋಗಿ ಸೆಲ್ಪಿ ಹುಚ್ಚಾಟ ನಡೆಸದಂತೆ ಡಿಸಿ ಸೂಚನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 22, 2023 | 6:59 AM

ಬಿಸಿಲನಾಡು ಕಲಬುರಗಿ ಜಿಲ್ಲೆ ಇದೀಗ ಅಕ್ಷರಶಃ ಮಲೆನಾಡಿನಂತಾಗಿದೆ. ಜೂನ್ ಮತ್ತು ಜುಲೈ ತಿಂಗಳ ಮೊದಲ ಎರಡು ವಾರ ಕಲಬುರಗಿಯತ್ತ ವರುಣದೇವ ಮುಖ ಮಾಡಿರಲಿಲ್ಲ. ಆದರೆ, ಕಳೆದ ಐದು ದಿನಗಳಿಂದ ಜಿಲ್ಲೆಯಾದ್ಯಂತ ಬಾರಿ ಮಳೆಯಾಗುತ್ತಿದ್ದು, ಐದೇ ದಿನದ ಮಳೆಗೆ ಜಿಲ್ಲೆಯ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ಕಡೆ ಪ್ರವಾಹ ಪರಿಸ್ಥಿತಿ ಕೂಡ ಉಂಟಾಗಿದೆ. ಈ ಹಿನ್ನಲೆ ಜಿಲ್ಲಾಧಿಕಾರಿಗಳು ಮನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಹೀಗಿದೆ.

ಕಲಬುರಗಿ‌ ಜಿಲ್ಲೆಯಾದ್ಯಂತ ಮುಂದಿನ ಒಂದು ವಾರ ಮಳೆ: ನದಿ ದಂಡೆಗೆ ಹೋಗಿ ಸೆಲ್ಪಿ ಹುಚ್ಚಾಟ ನಡೆಸದಂತೆ ಡಿಸಿ ಸೂಚನೆ
ಕಲಬುರಗಿ
Follow us on

ಕಲಬುರಗಿ: ಬಿಸಿಲನಾಡು ಕಲಬುರಗಿ(Kalaburagi) ಜಿಲ್ಲೆ ಇದೀಗ ಅಕ್ಷರಶಃ ಮಲೆನಾಡಿನಂತಾಗಿದೆ. ಜೂನ್ ಮತ್ತು ಜುಲೈ ತಿಂಗಳ ಮೊದಲ ಎರಡು ವಾರ ಕಲಬುರಗಿಯತ್ತ ವರುಣದೇವ ಮುಖ ಮಾಡಿರಲಿಲ್ಲ. ಹೀಗಾಗಿ ಬರದ ಛಾಯೆ ಆವರಿಸಿಕೊಂಡಿತ್ತು. ಆದ್ರೆ, ಕಳೆದ ಐದು ದಿನಗಳಿಂದ ಕಲಬುರಗಿ ಜಿಲ್ಲೆಯಾದ್ಯಂತ ಬಾರಿ ಮಳೆಯಾಗುತ್ತಿದ್ದು, ಐದೇ ದಿನದ ಮಳೆಗೆ ಜಿಲ್ಲೆಯ ನದಿಗಳು, ಹಳ್ಳಗಳು ತುಂಬಿ ಹರಿಯುತ್ತಿವೆ. ಅನೇಕ ಕಡೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇನ್ನು ಜಿಲ್ಲೆಯಲ್ಲಿ ಮುಂದಿನ ಒಂದು ವಾರ ನಿರಂತರ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ‌ ನೀಡಿದೆ. ಹೀಗಾಗಿ ಜಿಲ್ಲೆಯ ನದಿ, ಹಳ್ಳ, ಕೆರೆ ದಂಡೆಗೆ ಸಾರ್ವಜನಿಕರು ಹೋಗದಂತೆ ‌ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್‌ ಸೂಚಿಸಿದ್ದಾರೆ.

ಉಕ್ಕಿ ಹರಿಯುತ್ತಿರುವ ನದಿಗಳು, ದಡಕ್ಕೆ ಹೋಗದಂತೆ ಸೂಚನೆ

ಇನ್ನು ನದಿ ದಂಡೆಗೆ ಜಾನುವಾರುಗಳನ್ನು ಬಿಡಬಾರದು. ದಡದ ಬಳಿ ಬಟ್ಟೆ ಸ್ವಚ್ಛಗೊಳಿಸುವುದು, ಈಜಾಡುವುದರ ಜೊತೆಗೆ ಅಪಾಯವಿರುವ ಸೇತುವೆಗಳ ಮೇಲೆ‌ ಸಂಚರಿಸಬಾರದು. ಹಾಗೂ ನದಿ ದಂಡೆಯಲ್ಲಿ ಬರುವ ದೇವಸ್ಥಾನ, ಮಸೀದಿ, ಪ್ರಾರ್ಥನಾ ಮಂದಿರದಲ್ಲಿ ಪೂಜೆ ಸಲ್ಲಿಸುವವರನ್ನು ನದಿ ದಂಡೆಗೆ ಹೋಗದಂತೆ ಮನವಿ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ಪ್ರವಾಹ ಕುರಿತು ಡಂಗುರ ಸಾರಿಸಿ ಸಾರ್ವಜನಿಕರಲ್ಲಿ ಪ್ರಚೂರಪಡಿಸುವಂತೆ ತಿಳಿಸಿದ್ದಾರೆ. ಭಾರಿ ಮಳೆಯಿಂದ ಉಂಟಾಗುವ‌ ನೆರೆ ಪರಿಸ್ಥಿತಿಯನ್ನು ನಿಯಂತ್ರಣ ಮತ್ತು ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನಚ್ಚರಿಕೆಯನ್ನು ವಹಿಸಬೇಕಿರುವ ಹಿನ್ನಲೆ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಿಗಳು, ಕೇಂದ್ರಸ್ಥಾನದಲ್ಲಿದ್ದು ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಮತ್ತು ಪ್ರತಿದಿನ ದಿನದ ನೆರೆ ಹಾನಿ ವರದಿಯನ್ನು ಸಲ್ಲಿಸುವಂತೆ ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.

ಇದನ್ನೂ ಓದಿ:ಭಾರೀ ಮಳೆಗೆ ಉತ್ತರ ಭಾರತದಲ್ಲಿ ಭೂಕುಸಿತ, ಪ್ರವಾಹ ಪರಿಸ್ಥಿತಿ; ಹೆಚ್ಚಿನ ಮಳೆಯ ಮುನ್ಸೂಚನೆ ನೀಡಿದ ಐಎಂಡಿ

ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ರವಾನೆ

ನಗರ ಮತ್ತು ಗ್ರಾಮೀಣ ಪ್ರದೇಶದ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಗೆ ಸ್ಥಳಾಂತರಿಸುವುದು. ಅವಶ್ಯಕವೆನಿಸಿದರೆ ಮಾತ್ರ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದು, ಮಳೆಯಿಂದ ಅಪಾಯವಿರುವ ಮನೆ, ಶಾಲೆ ಹಾಗೂ ಇತರೆ ಕಟ್ಟಡಗಳು ಕುಸಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಸುರಕ್ಷಾ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ.

ವಿಪತ್ತು ಕಾರ್ಯ ನಿರ್ಲಕ್ಷಿಸುವಂತಿಲ್ಲ

ಪ್ರವಾಹ, ನೆರೆ ಹಾವಳಿ ಸಂದರ್ಭದಲ್ಲಿ ವಿಪತ್ತು‌ ಕಾರ್ಯ ತುರ್ತಾಗಿ ಕೈಗೊಳ್ಳಬೇಕು. ಯಾವುದೇ ಅಹಿತಕರ ಘಟನೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದಿರುವ ಜಿಲ್ಲಾ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷೆಯಾಗಿರುವ ಡಿ.ಸಿ. ಬಿ.ಫೌಜಿಯಾ ತರನ್ನುಮ್ ಅವರು, ನಿರ್ಲಕ್ಷ್ಯ ವಹಿಸುವಂತಹ ಅಧಿಕಾರಿ-ಸಿಬ್ಬಂದಿಗಳ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ-2005ರಂತೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:Monsoon Rain: ಉಡುಪಿಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ; ಅಪಾಯದಲ್ಲಿದ್ದ ಕುಟುಂಬಗಳ ರಕ್ಷಣೆ

ಸೆಲ್ಫಿ, ಪೋಟೋ ಶೂಟ್ ಬೇಡ

ಮಳೆಯಿಂದ ಸಹಜವಾಗಿ ನದಿ, ಕೆರೆ, ಹಳ್ಳಗಳು ತುಂಬಿ ರಮಣೀಯ ದೃಶ್ಯ ನೋಡುಗರನ್ನು ಸೆಳೆಯುತ್ತದೆ. ಆದರೆ, ಮಳೆ‌ ನಿರಂತರ ಸುರಿಯುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿ ತಾಣಗಳಲ್ಲಿ ಸೆಲ್ಫಿ, ಫೋಟೋಶೂಟ್ ಮಾಡಬಾರದೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:58 am, Sat, 22 July 23