ಚಿತ್ತಾಪುರದಲ್ಲಿ ಆರ್​​ಎಸ್​​ಎಸ್​​ ಪಥಸಂಚಲನ ಜಟಾಪಟಿ: ಮಹತ್ವದ ಸೂಚನೆ ನೀಡಿದ ಹೈಕೋರ್ಟ್

ಚಿತ್ತಾಪುರದಲ್ಲಿ ಆರ್​​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆ ಡಿಸಿ ಕ್ರಮ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್​ ಪೀಠದಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ಈ ವೇಳೆ ಹೊಸದಾಗಿ ಅರ್ಜಿ ಕೊಡಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿದೆ. ಅಕ್ಟೋಬರ್​​ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.

ಚಿತ್ತಾಪುರದಲ್ಲಿ ಆರ್​​ಎಸ್​​ಎಸ್​​ ಪಥಸಂಚಲನ ಜಟಾಪಟಿ: ಮಹತ್ವದ ಸೂಚನೆ ನೀಡಿದ ಹೈಕೋರ್ಟ್
ಪ್ರಾತಿನಿಧಿಕ ಚಿತ್ರ
Edited By:

Updated on: Oct 19, 2025 | 12:16 PM

ಕಲಬುರಗಿ, ಅಕ್ಟೋಬರ್​ 19: ಜಿಲ್ಲೆಯ ಚಿತ್ತಾಪುರದಲ್ಲಿ (Chittapur) ಆರ್​​​ಎಸ್​​​ಎಸ್​ (RSS) ಪಥಸಂಚಲನಕ್ಕೆ ಅನುಮತಿ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿದ ಕಲಬುರಗಿ ಹೈಕೋರ್ಟ್ ಪೀಠ, ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಜೊತೆಗೆ ಅಕ್ಟೋಬರ್​​ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.

ಆರ್​​ಎಸ್​ಎಸ್​ ಪ್ರಮುಖರಿಂದ ರಿಟ್ ಅರ್ಜಿ

ಚಿತ್ತಾಪುರದಲ್ಲಿ ಭಾನುವಾರ ಆರ್​ಎಸ್​ಎಸ್​​ ಪಥ ಸಂಚಲನ ನಡೆಯಬೇಕಿತ್ತು. ಆದರೆ ಅನುಮತಿ ನಿರಾಕರಿಸಿ ತಹಶೀಲ್ದಾರ್​ ನಾಗಯ್ಯ ಹಿರೇಮಠ ಆದೇಶ ಹೊರಡಿಸಿದ್ದರು. ಹೀಗಾಗಿ ಆರ್​ಎಸ್​ಎಸ್ ಕಾರ್ಯಕರ್ತರು ಕಾನೂನು ಹೋರಾಟಕ್ಕೆ ಮುಂದಾಗಿದ್ದರು. ಅದರಂತೆಯೇ ಡಿಸಿ ಕ್ರಮ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠಕ್ಕೆ ಆರ್​​ಎಸ್​ಎಸ್​ ಕಲಬುರಗಿ ಜಿಲ್ಲಾ ಪ್ರಮುಖರಾದ ಅಶೋಕ್ ಪಾಟೀಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು.

ವಾದ-ಪ್ರತಿವಾದ

ನ್ಯಾ. ಎಂಜಿಎಸ್​​ ಕಮಲ್ ಅವರ ಪೀಠದಲ್ಲಿ ತುರ್ತು ವಿಚಾರಣೆ ಮಾಡಲಾಯಿತು. ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಕಾನೂನಿನ ಪ್ರಕಾರ ಅನುಮತಿ ಕೊಡಬೇಕಾದವರು ಯಾರು ಎಂದು ಜಡ್ಜ್ ಪ್ರಶ್ನಿಸಿದರು. ಪೊಲೀಸರಿಗೆ ಭದ್ರತೆ ನೀಡಲು ಮಾಹಿತಿ ನೀಡಿದ್ದೆವು. ಅ.13ರಂದೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದೆವು. ಅ.17ರಂದು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್​​​ಗೆ ಅರ್ಜಿ ಸಲ್ಲಿಸಿದ್ದೆವು. ಶನಿವಾರ ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದಾರೆ ಎಂದು ಅರುಣ್ ಶ್ಯಾಮ್ ವಾದಿಸಿದರು.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ ತಹಶೀಲ್ದಾರ್

ಪ್ರತಿಭಟನೆ ಮಾಡದೇ, ಘೋಷಣೆ ಕೂಗದೇ ಗುಂಪು ನಡೆಯಲು ಅನುಮತಿ ಅಗತ್ಯವೇ. ದೊಡ್ಡ ಕುಟುಂಬದ ಸದಸ್ಯರು ಪರಿಸರದ ಅರಿವು ಮೂಡಿಸುವ ಮೆರವಣಿಗೆಗೆ ಅನುಮತಿ ಪಡೆಯಬೇಕೇ, ಯಾವ ಕಾನೂನಿನ ಅಡಿಯಲ್ಲಿ ಅನುಮತಿ ಪಡೆಯಬೇಕೆಂದು ಹೈಕೋರ್ಟ್ ಪ್ರಶ್ನೆ ಮಾಡಿತು.

ಇಂಥ ವಿಚಾರಗಳಿಗೆ ಸ್ಪಷ್ಟ ಕಾನೂನಿಲ್ಲ ಎಂದು ಅರ್ಜಿದಾರರ ಪರ ವಕೀಲ ವಾದಿರಾಜ್ ಕಡ್ಲೂರ್ ಉತ್ತರಿಸಿದರು. ಇಂದು ಮತ್ತೊಂದು ಸಂಘಟನೆ ಪ್ರತಿಭಟನೆ‌ ಹಮ್ಮಿಕೊಂಡಿದೆ. ಭೀಮ್ ಆರ್ಮಿ, ದಲಿತ್ ಪ್ಯಾಂಥರ್ಸ್ ಕೂಡ ಪ್ರತಿಭಟನೆಗೆ ಅನುಮತಿ ಕೋರಿವೆ. ಕಾನೂನು ಸುವ್ಯವಸ್ಥೆ ಗಮನದಲ್ಲಿಟ್ಟು ಅನುಮತಿ‌ ನೀಡಿಲ್ಲವೆಂದು ಸರ್ಕಾರದ ವಾದವಾಗಿತ್ತು.

ಇದನ್ನೂ ಓದಿ: ಸರ್ಕಾರಿ ಜಾಗದಲ್ಲಿ ಸಂಘ ಸಂಸ್ಥೆಗಳ ಚಟುವಟಿಕೆ ಬಂದ್: ಏನೆಲ್ಲಾ ರೂಲ್ಸ್?

ಈ ವೇಳೆ ಆರ್​ಎಸ್​​ಎಸ್, ಭೀಮ್ ಆರ್ಮಿ ಎರಡೂ ಸಂಘಟನೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲು ಹೈಕೋರ್ಟ್ ಸೂಚನೆ ನೀಡಿದೆ. ನ.2ರಂದು ಆರ್​​ಎಸ್​ಎಸ್ ಪಥಸಂಚಲನ ನಡೆಸಲು ಅರ್ಜಿದಾರರು ಒಪ್ಪಿಗೆ ಸೂಚಿಸಿದ್ದಾರೆ. ರಾಜ್ಯದೆಲ್ಲೆಡೆ 250 ಶಾಂತಿಯುತ ಪಥಸಂಚಲನ ನಡೆಸಲಾಗಿದೆ. ಎಲ್ಲಿಯೂ ಶಾಂತಿಭಂಗವಾಗಿಲ್ಲವೆಂದು ಅರ್ಜಿದಾರರ ಹೇಳಿಕೆ ದಾಖಲಿಸಿದ ಹೈಕೋರ್ಟ್, ಹೊಸದಾಗಿ ಅರ್ಜಿ ಕೊಡಲು ಅರ್ಜಿದಾರರಿಗೆ ಸೂಚಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:16 am, Sun, 19 October 25