AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಕರ್ನಾಟಕದಲ್ಲಿ ಬರದ ಬಿಸಿ: ಜೋಳದ ಬೆಲೆ ದಿಢೀರ್ ಏರಿಕೆ, ಜೋಳದ ರೊಟ್ಟಿ ದರವೂ ಹೆಚ್ಚಳ ಸಾಧ್ಯತೆ

ಉತ್ತರ ಕರ್ನಾಟಕದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿರುವ ಬೆನ್ನಲ್ಲೇ ಜೋಳದ ಬೆಲೆ ಬಹುತೇಕ ದ್ವಿಗುಣಗೊಂಡಿದೆ. ಆಗಸ್ಟ್‌ನಲ್ಲಿ ಕ್ವಿಂಟಾಲ್‌ಗೆ ₹5,500 ಇದ್ದ ಮಾಲ್ದಂಡಿ ಜೋಳದ ಬೆಲೆ ಅಕ್ಟೋಬರ್‌ನ ದ್ವಿತೀಯಾರ್ಧದಲ್ಲಿ ₹9,000ರಿಂದ ₹9,200ಕ್ಕೆ ಏರಿಕೆಯಾಗಿದೆ. ಪರಿಣಾಮವಾಗಿ ರಾಜ್ಯದಲ್ಲಿ ಜೋಳದ ರೊಟ್ಟಿ ದರವೂ ಹೆಚ್ಚಾಗುವ ಆತಂಕ ಎದುರಾಗಿದೆ.

ಉತ್ತರ ಕರ್ನಾಟಕದಲ್ಲಿ ಬರದ ಬಿಸಿ: ಜೋಳದ ಬೆಲೆ ದಿಢೀರ್ ಏರಿಕೆ, ಜೋಳದ ರೊಟ್ಟಿ ದರವೂ ಹೆಚ್ಚಳ ಸಾಧ್ಯತೆ
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on: Oct 23, 2026 | 11:52 AM

Share

ಮುಖ್ಯಾಂಶಗಳು

  • ಉತ್ತರ ಕರ್ನಾಟಕದಲ್ಲಿ ಜೋಳದ ಬೆಲೆ ದಿಢೀರ್ ಏರಿಕೆ
  • ಮಾಲ್ದಂಡಿ ಜೋಳದ ಕ್ವಿಂಟಾಲ್ ದರ ₹9,200
  • ಜೋಳದ ರೊಟ್ಟಿ ಬೆಲೆಯೂ ಏರಿಕೆಯಾಗುವ ಆತಂಕ

ಬೆಂಗಳೂರು, ಅಕ್ಟೋಬರ್ 23: ಉತ್ತರ ಕರ್ನಾಟಕದ ಜನರ ಪ್ರಮುಖ ಆಹಾರವಾದ ಜೋಳದ ಬೆಲೆ ಗಗನಕ್ಕೇರಿದೆ. ಕಳೆದ ಎರಡು ತಿಂಗಳಲ್ಲಿ ಜೋಳದ ದರ ಬಹುತೇಕ ದ್ವಿಗುಣಗೊಂಡಿದ್ದು, ಕ್ವಿಂಟಾಲ್‌ಗೆ ಸುಮಾರು 5,500 ರೂ. ಇದ್ದ ಬೆಲೆ ಅಕ್ಟೋಬರ್‌ನಲ್ಲಿ 9,200 ರೂ.ಗೆ ಏರಿಕೆಯಾಗಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿರುವುದರಿಂದ ಜೋಳದ ಪೂರೈಕೆ ಕಡಿಮೆಯಾಗಿ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಜನಸಾಮಾನ್ಯರ ಮನೆಯ ಖರ್ಚಿನ ಮೇಲೂ ಹೊರೆ ಹೆಚ್ಚಾಗಿದೆ.

ಹತ್ತು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಜೋಳದ ಬೆಲೆ

ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಜೋಳ ಪ್ರಮುಖ ಬೆಳೆಯಾಗಿದೆ. ಈ ಭಾಗದಲ್ಲಿ ಮಾಲ್ದಂಡಿ ಮತ್ತು ಗುಂಡು ತೆನೆ ಎಂಬ ಎರಡು ಸ್ಥಳೀಯ ತಳಿಗಳ ಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಆದರೆ, ಈ ಬಾರಿ ಬರದ ಪರಿಣಾಮ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆಗೆ ಬರುತ್ತಿರುವ ಜೋಳದ ಪ್ರಮಾಣದ ಮೇಲೆ ಪರಿಣಾಮ ಬೀರಿದೆ.

ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಸಹಾಯಕ ನಿರ್ದೇಶಕರ ಮಾಹಿತಿಯ ಪ್ರಕಾರ, ಮಾಲ್ದಂಡಿ ಜೋಳದ ಬೆಲೆ ಆಗಸ್ಟ್‌ನಲ್ಲಿ ಕ್ವಿಂಟಾಲ್‌ಗೆ ₹5,500 ಇತ್ತು. ಸೆಪ್ಟೆಂಬರ್‌ನಲ್ಲಿ ಇದು ₹5,650ಕ್ಕೆ ಏರಿಕೆಯಾಗಿತ್ತು. ಆದರೆ, ಅಕ್ಟೋಬರ್‌ನ ದ್ವಿತೀಯಾರ್ಧದಲ್ಲಿ ಬೆಲೆ ದಿಢೀರ್ ಏರಿಕೆಯಾಗಿ ₹9,000 ತಲುಪಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್’ ವರದಿ ಮಾಡಿದೆ.

ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಕಳೆದ ಹತ್ತು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಜೋಳದ ಬೆಲೆ ಅತ್ಯಧಿಕ ಮಟ್ಟ ತಲುಪಿದೆ. 2015-16ರಲ್ಲಿ ಕ್ವಿಂಟಾಲ್‌ಗೆ ₹3,850 ಇದ್ದ ಜೋಳದ ಬೆಲೆ, 2023-24ರ ಬರಗಾಲದ ಅವಧಿಯಲ್ಲಿ ₹8,000 ತಲುಪಿತ್ತು. ಇದೀಗ ಆ ಮಟ್ಟವನ್ನೂ ಮೀರಿದೆ.

ಮಾಲ್ದಂಡಿ ಜೋಳಕ್ಕೆ ₹9,200, ಗುಂಡು ತೆನೆಗೆ ₹9,000

ಕಲಬುರಗಿ ಎಪಿಎಂಸಿ ಸಗಟು ವ್ಯಾಪಾರಿ ಸಂಗಮನಾಥ ಮುಕ್ಕಾ ಅವರ ಪ್ರಕಾರ, ಪ್ರಸ್ತುತ ಮಾಲ್ದಂಡಿ ಜೋಳದ ಬೆಲೆ ಕ್ವಿಂಟಾಲ್‌ಗೆ ₹9,200ರಷ್ಟಿದೆ. ಗುಂಡು ತೆನೆ ಜೋಳದ ಬೆಲೆ ₹9,000 ತಲುಪಿದೆ. ಇನ್ನುಳಿದ ತಳಿಗಳ ಜೋಳದ ಬೆಲೆ ಗುಣಮಟ್ಟಕ್ಕೆ ಅನುಗುಣವಾಗಿ ಕ್ವಿಂಟಾಲ್‌ಗೆ ₹5,000ರಿಂದ ₹8,500ರವರೆಗೆ ಇದೆ ಎಂದು ವರದಿ ಉಲ್ಲೇಖಿಸಿದೆ.

ಕಳೆದ ಹತ್ತು ದಿನಗಳಿಂದ ಮಾರುಕಟ್ಟೆಗೆ ಜೋಳ ಬರಲಾರಂಭಿಸಿದರೂ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಮಾಣ ಬಹಳ ಕಡಿಮೆಯಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೆ ಬೆಲೆ ಏರಿಕೆಯಾಗಿದೆ. ತಕ್ಷಣದ ಅಗತ್ಯಕ್ಕೆ ತಕ್ಕಂತೆ ಜನರು ಜೋಳ ಖರೀದಿಸುತ್ತಿದ್ದು, ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಬಂದರೆ ಬೆಲೆ ಇಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಆದರೆ, ಈ ವರ್ಷ ಜಿಲ್ಲೆಯಲ್ಲಿ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಜೋಳದ ಬೆಲೆ ಶೀಘ್ರವಾಗಿ ಇಳಿಯುವ ಸಾಧ್ಯತೆ ಕಡಿಮೆ ಎಂದು ವ್ಯಾಪಾರಿ ಸಂಗಮನಾಥ ಮುಕ್ಕಾ ಅಭಿಪ್ರಾಯಪಟ್ಟಿದ್ದಾರೆ.

ಜೋಳದ ರೊಟ್ಟಿಯ ಬೆಲೆಯೂ ಏರಿಕೆಯಾಗುವ ಆತಂಕ

ಉತ್ತರ ಕರ್ನಾಟಕದ ಪ್ರಮುಖ ಆಹಾರವಾದ ಜೋಳದ ರೊಟ್ಟಿ ರಾಜ್ಯದ ಇತರ ಭಾಗಗಳಲ್ಲಿಯೂ ಜನಪ್ರಿಯವಾಗಿದೆ. ಪ್ರಸ್ತುತ ಒಂದು ಜೋಳದ ರೊಟ್ಟಿಗೆ ₹10ರಿಂದ ₹15ರವರೆಗೆ ಬೆಲೆ ಇದೆ. ಜೋಳದ ಕಚ್ಚಾ ವಸ್ತುವಿನ ಬೆಲೆ ಇದೇ ರೀತಿ ಏರಿಕೆಯಾಗುತ್ತಿದ್ದರೆ, ಮುಂದಿನ ದಿನಗಳಲ್ಲಿ ರೊಟ್ಟಿಯ ಬೆಲೆಯೂ ಹೆಚ್ಚಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

LIVE TV

ಒಂದೆಡೆ ಬರದಿಂದ ಕೃಷಿ ಸಂಕಷ್ಟ ಎದುರಿಸುತ್ತಿರುವ ರೈತರು, ಮತ್ತೊಂದೆಡೆ ಹೆಚ್ಚುತ್ತಿರುವ ಆಹಾರ ಧಾನ್ಯಗಳ ಬೆಲೆಯಿಂದ ಗ್ರಾಹಕರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಾರುಕಟ್ಟೆಗೆ ಜೋಳದ ಪೂರೈಕೆ ಹೆಚ್ಚಾದರೆ ಮಾತ್ರ ಬೆಲೆ ಇಳಿಕೆಯಾಗುವ ನಿರೀಕ್ಷೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More