ಕಲಬುರಗಿ ನಗರ ಬೆಳೆಯುತ್ತಿರುವಂತೆ ನಗರದಲ್ಲಿ ಮತ್ತು ಜಿಲ್ಲೆಯಾದ್ಯಂತ ಅಪರಾಧಗಳ ಸಂಖ್ಯೆ ಸಹ ಮಿತಿಮೀರಿ ಹೆಚ್ಚುತ್ತಿದೆ. ನಗರಕ್ಕೆ ಕಮಿಷನರೆಟ್ ಸ್ಥಾನಮಾನ ನೀಡಿದರೂ ಕ್ರೈಂ ರೇಟ್ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಬುಧವಾರದಂದು ಕಲಬುರಗಿ ಸಿಟಿ ಪೊಲೀಸರು ಮಾರಕಾಸ್ತ್ರಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಖದೀಮನೊಬ್ಬನನ್ನ ಬಂಧಿಸಿ ಜೈಲಿಗೆ ನೂಕಿರುವುದು, ಜಿಲ್ಲೆಯಲ್ಲಿ ಬೆಳೆಯುತ್ತಿರುವ ಅಪರಾಧಗಳಿಗೆ ಮತ್ತೊಂದು ಸಾಕ್ಷಿ.
ಕೊಲೆ, ಸುಲಿಗೆ, ರಾಬರಿ ಮೊದಲಾದ ಪ್ರಕರಣಗಳೊಂದಿಗೆ ನಗರದಲ್ಲಿ ಮಾರಕಾಸ್ತ್ರಗಳ ಅಕ್ರಮ ಮಾರಾಟ ಸಹ ಬೆಳಕಿಗೆ ಬಂದಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ನಿಖರವಾದ ಮಾಹಿತಿಯೊಂದರ ಮೇರೆಗೆ ನಗರದ ಸಿಸಿಬಿ ಪೊಲೀಸರ ತಂಡ ನಗರದ ಪಾಯನ್ ಬಡಾವಣೆಯಲ್ಲಿರುವ 40 ವರ್ಷದ ಮಹ್ಮದ್ ರಿಯಾನ್ ಖಾನ್ ಹೆಸರಿನ ಆರೋಪಿಯ ಮನೆ ಮೇಲೆ ದಾಳಿ ನಡೆಸಿ ಒಂದು ರೂಮ್ನಲ್ಲಿ ಅವನು ಸಂಗ್ರಹಿಸಿಟ್ಟಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಅವನನ್ನೂ ಬಂಧಿಸಿದ್ದಾರೆ.
ಇನ್ನು ಕಲಬುರಗಿ ನಗರದಲ್ಲಿ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಮಾರಾಟ ಮಾಡುವಲ್ಲಿ ಕುಖ್ಯಾತನಾಗಿರುವ ರಿಯಾನ್ ಖಾನ್ ತನ್ನ ಅಸೋಸಿಯೇಟ್ ಬಾಂಬೆ ಸಿರಾಜ್ ಜೊತೆ ಸೇರಿ ಅವುಗಳನ್ನು ಮಾರುತ್ತಿದ್ದನೆಂದು ಪೊಲೀಸ್ ಮೂಲಗಳು ತಿಳಿಸಿವೆ. ಕಲಬುರ್ಗಿ ನಗರದಲ್ಲಿ ಅಪರಾದ ಚಟುವಟಿಗಳಲ್ಲಿ ಭಾಗಿಯಾಗುವ ಯುವಕರನ್ನು ಟಾರ್ಗೆಟ್ ಮಾಡಿ ಅವರಿಗೆ ಅಸ್ತ್ರಗಳನ್ನು ಈ ಜೋಡಿ ಮಾರಾಟ ಮಾಡುತ್ತಿತ್ತು.
ಕಲಬುರಗಿ ನಗರಕ್ಕೆ ಮಾರಕಾಸ್ತ್ರಗಳು ಮುಂಬೈನಿಂದ ಬರುತ್ತಿದ್ದ ಸಂಗತಿಯನ್ನು ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಗೊತ್ತಾಗಿದೆ. ಮುಂಬೈಯಲ್ಲಿ ಮಾರಕಾಸ್ತ್ರಗಳನ್ನು ಮಾರುವ ಗ್ರೂಪ್ನೊಂದಿಗೆ ಸಿರಾಜ್ ಸಂಪರ್ಕವಿಟ್ಟುಕೊಂಡಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಿಯಾನ್ ಮತ್ತು ಬಾಂಬೆ ಸಿರಾಜ್ ಸೇರಿ ಒಂದು ರೂಮಿನ ತುಂಬ ಮಾರಕಾಸ್ತ್ರಗಳನ್ನು ಸಂಗ್ರಹಿಸಿಟ್ಟಿದ್ದ ಆತಂಕಕಾರಿ ವಿಷಯವನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ. ಬುಧವಾರದಂದು ಅವರು ನಡೆಸಿರುವ ದಾಳಿಯಲ್ಲಿ ರಿಯಾನ್ ಖಾನ್ ಮಾತ್ರ ಸಿಕ್ಕಿದ್ದು ಪ್ರಮುಖ ಆರೋಪಿ ಬಾಂಬೆ ಸಿರಾಜ್ ಎಸ್ಕೇಪ್ ಆಗಿದ್ದಾನೆ. 2 ಚಾಕು, ಒಂದು ರಾಡ್, 1 ಈಗಲ್ ಚಾಕು, 1 ಪರ್ದಾ ಚಾಕು, 1 ಕುಕ್ರಿ ಚಾಕು, 1 ಪಂಚ್, 3 ಬಟನ್ ಚಾಕು, 8 ನೇಪಾಳಿ ಚಾಕು ಹಾಗೂ 1 ಸ್ಟಿಕ್ ಚಾಕು ಮೊದಲಾದವುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸುಮಾರು ಮೂರು ತಿಂಗಳ ಹಿಂದೆ ಪೊಲೀಸರು, ಇದೇ ಬಾಂಬೆ ಸಿರಾಜ್ ಹಾಗೂ ರಿಯಾನ್ ಖಾನ್ ಮನೆಗಳ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದ್ದಲ್ಲದೆ ಕೇಸ್ ದಾಖಲಿಸಿ ಜೈಲಿಗೂ ಅಟ್ಟಿದ್ದರು. ಆದರೆ, ಜಾಮೀನು ಪಡೆದು ಹೊರ ಬಂದ ಖದೀಮರು ಮತ್ತೆ ಅದೇ ಕೆಲಸವನ್ನು ಮುಂದುವರೆಸಿದ್ದರು.