ಕಲಬುರಗಿ: ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ (40 percent commission) ಆರೋಪ ಮಾಡಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರನ್ನು ಪೊಲೀಸರು ನಿನ್ನೆ (ಡಿ. 24) ಬಂಧಿಸಿದ್ದರು. ಈ ಕುರಿತಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಮಧ್ಯಮದವರೊಂದಿಗೆ ಮಾತನಾಡಿ, ಸಾಮಾನ್ಯವಾಗಿ ಅರೆಸ್ಟ್ ಮಾಡುವ ಕೇಸ್ ಅಲ್ಲಾ ಅದು. ಕೆಂಪಣ್ಣ ಏನು ಕೊಲೆ ಮಾಡಿದ್ರಾ? ದರೋಡೆ ಮಾಡಿದ್ರಾ ಎಂದು ಪ್ರಶ್ನಿಸಿದ್ದಾರೆ. ಗುತ್ತಿಗೆದಾರರ ಸಂಘದ ಕೆಂಪಣ್ಣ ಮೇಲೆ ಮಾನನಷ್ಟ ಕೇಸ್ ಹಾಕಿದ್ದರು. ಬೇಕು ಅಂತಲೇ ಕೆಂಪಣ್ಣ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದಾರೆ. ಅವರಿಗೆ ಬೆದರಿಸಲು ಅರೆಸ್ಟ್ ಮಾಡಿಸಿದ್ದಾರೆ. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡ್ತಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಇನ್ನು ಡಾ. ಅಜಯಸಿಂಗ್ ಜನಪರ ಶಾಸಕ. ಅಂತವರಿಗೆ ಆಶಿರ್ವಾದ ಮಾಡಬೇಕಾಗಿದ್ದು ಜನರ ಕರ್ತವ್ಯ. ರೈತರಿಗೆ ಕಷ್ಟ ಬರಬಾರದು. ಅವರಿಗೆ ಕಷ್ಟ ಬಂದಾಗ ಸ್ಪಂದಿಸೋದು ಸರ್ಕಾರದ ಕೆಲಸ. ರಾಜ್ಯದಲ್ಲಿ ಇರೋದು 40% ಕಮಿಷನ್ ಸರ್ಕಾರ. ಬಿಜೆಪಿ ಕಿತ್ತಾಕಬೇಕು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ವಿಧಾನಸೌಧದ ಗೋಡೆಗಳು ಸಹ ಕಮಿಷನ್ ಬಗ್ಗೆ ಪಿಸುಗುಡುತ್ತಿವೆ. ರಾಜ್ಯವನ್ನು ಉಳಿಸೋ ಜವಾಬ್ದಾರಿ ಜನರ ಮೇಲಿದೆ. ನಾವು ನೀಡಿದ್ದ ಅನೇಕ ಭಾಗ್ಯಗಳನ್ನು ಈ ಸರ್ಕಾರ ಬಂದ್ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ: ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನ
ಅಹಿಂದ ಮಾಡಿದ್ದಕ್ಕೆ ನನ್ನ ದೇವೇಗೌಡರು ಪಕ್ಷದಿಂದ ಹೊರಹಾಕಿದ್ದರು. ದೇವೇಗೌಡರ ಮಾತನ್ನು ಕೇಳಿ ಧರ್ಮಸಿಂಗ್ ಅವರು ಉಪಮುಖ್ಯಮಂತ್ರಿ ಸ್ಥಾನದಿಂದ ತಗೆದಿದ್ದರು ಎಂದು 2004ರ ದಿನಗಳನ್ನು ಸಿದ್ದರಾಮಯ್ಯ ಮತ್ತೆ ನೆನಪು ಮಾಡಿಕೊಂಡರು. ಧರ್ಮಸಿಂಗ್ ಅವರು ಸಜ್ಜನ, ಕರುಣಾಮಯಿ ರಾಜಕಾರಣಿಯಾಗಿದ್ದರು ಎಂದರು.
ರಾಜ್ಯದಲ್ಲಿ ಅಜಾತಶತ್ರು ಅಂತಾ ಇದ್ರೆ ಅದು ಎನ್.ಧರಂಸಿಂಗ್ ಮಾತ್ರ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಧರಂಸಿಂಗ್, ಅಜಯ್ ಸಿಂಗ್ ನೋಡಿ ಕಲಿ ಎಂದು ನನಗೆ ಹೇಳ್ತಿದ್ದರು. ಒರಟ ಆಗಿದ್ದರಿಂದ ನನ್ನ ತಂದೆ ಈ ರೀತಿ ಹೇಳುತ್ತಿದ್ದರು. ನಮ್ಮ ತಂದೆ, ಧರಂಸಿಂಗ್ ಒಂದೇ ಬಾರಿ ಚುನಾವಣೆಯಲ್ಲಿ ಗೆದ್ದಿದ್ದರು. ನಾನು, ಅಜಯ್ ಸಿಂಗ್ ಮೊದಲ ಉಪಚುನಾವಣೆಯಲ್ಲಿ ಸೋತಿದ್ದೆವು. ನಾನು ಮತ್ತು ಡಾ.ಅಜಯ್ ಸಿಂಗ್ ಜೋಡೆತ್ತಿನಂತೆ ದುಡಿಯುತ್ತೇವೆ. ಜೇವರ್ಗಿ ಜನ ಅಜಯ್ ಸಿಂಗ್ರನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:19 pm, Sun, 25 December 22