ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನ
ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಬಾಂಬ್ ಸಿಡಿಸಿ ರಾಜ್ಯದಲ್ಲಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದ ಕೆಂಪಣ್ಣನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು: ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ (40 percent commission) ಆರೋಪ ಮಾಡಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ (Kempanna) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಚಿವ ಮುನಿರತ್ನ (Munirathna) ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಡಿಸೆಂಬರ್ 24) ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು, ಡಿ.ಕೆಂಪಣ್ಣ ಜೊತೆಗೆ ವಿ.ಕೃಷ್ಣಾ ರೆಡ್ಡಿ, ನಟರಾಜು, ಗುರುಸಿದ್ದಪ್ಪ ಅವರನ್ನೂ ಸಹ ಅರೆಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಮತ್ತೆ ಜೀವ: ಹೋರಾಟಕ್ಕೆ ಸಜ್ಜಾದ ಗುತ್ತಿಗೆದಾರರ ಸಂಘ
ಕೆಂಪಣ್ಣ ಅವರು ಇತ್ತೀಚೆಗೆ ಬೊಮ್ಮಾಯಿ ಸರ್ಕಾರ ಮಾತ್ರವಲ್ಲದೇ ಸಚಿವರುಗಳ ವಿರುದ್ಧವೂ ಸಹ ಕಮಿಷನ್ ಆರೋಪ ಮಾಡಿದ್ದರು. ಅದರಲ್ಲೂ ಸಚಿವ ಮುನಿರತ್ನ ಅವರ ವಿರುದ್ಧ ಬಹಿರಂಗವಾಗಿಯೇ ಕಮಿಷನ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮುನಿರತ್ನ ಅವರು ಕೆಂಪಣ್ಣ ಮಾನಹಾನಿ ಕೇಸ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಪಣ್ಣ ಅವರು ಕೋರ್ಟ್ಗೆ ಗೈರಾಗಿದ್ದಕ್ಕೆ ವಾರೆಂಟ್ ಜಾರಿಯಾಗಿತ್ತು.
ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷನ ಡಿ.ಕೆಂಪಣ್ಣ ವಿ.ಕೃಷ್ಣಾರೆಡ್ಡಿ, ಸೇರಿ 19 ಪ್ರತಿವಾದಿಗಳ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿತ್ತು. ಆದರೂ ಯಾವುದೇ ಉತ್ತರ ನೀಡದಿದ್ದರಿಂದ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ
ಮೊದಲಿಗೆ ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ,ಬಳಿಕ MLAಗಳಿಗೆ 10 ಪರ್ಸೆಂಟ್ ಕಮಿಷನ್ ಕೊಡಬೇಕು, ಮಂತ್ರಿಗಳಿಗೆ ಶೇಕಡಾ 5ರಷ್ಟು ಪರ್ಸೆಂಟೇಜ್ ಕೊಡಬೇಕು ಎಂಬ ಸ್ಫೋಟಕ ಬಾಂಬ್ ಸಿಡಿಸಿದ್ದರು.
ಬಿಜೆಪಿ ಸರ್ಕಾರದಲ್ಲಿ 40% -50% ಕಮಿಷನ್ ವಸೂಲಿ ಆಗುತ್ತಿದ್ದು, 2019ರ ನಂತರ ಸರ್ಕಾರದಲ್ಲಿ ಪರ್ಸೆಂಟೇಜ್ ಹೆಚ್ಚಾಗಿದೆ. ಕಾಂಟ್ರಾಕ್ಟರ್ಗಳಿಂದ ಹೆಜ್ಜೆ-ಹೆಜ್ಜೆಗೂ ಕಮಿಷನ್ ವಸೂಲಿ ಆಗ್ತಿದೆ, ನಾನು ಈಗಾಗಲೇ ಪ್ರಧಾನಿ ಮೋದಿಯವರಿಗೂ ದೂರು ನೀಡಿದ್ದೇನೆ. ಕರ್ನಾಟಕದಲ್ಲಿ 1 ಲಕ್ಷ ಮಂದಿ ಕಾಂಟ್ರಾಕ್ಟರ್ಗಳು ಇದ್ದಾರೆ. KRIDL ಗುತ್ತಿಗೆಯಲ್ಲಿ ಕೆಲಸ ಮಾಡದೇ ಹಣ ಪಡೆಯುತ್ತಿದ್ದಾರೆ, ಏಪ್ರಿಲ್ನಲ್ಲಿ 50 ಸಾವಿರ ಕಾಂಟ್ರಾಕ್ಟರ್ಗಳು ಹೋರಾಟ ಮಾಡಿದ್ದೇವೆ. ರಸ್ತೆಗಳೂ ಕಳಪೆ ಕಾಮಗಾರಿಯಿಂದ ನಿರ್ಮಾಣ ಆಗ್ತಾ ಇವೆ, 20 ರಿಂದ 25 ಸಾವಿರ ಕೋಟಿ ರಾಜಕಾರಣಿಗಳ ಜೇಬು ಸೇರ್ತಿದೆ. ಭ್ರಷ್ಟಾಚಾರದ ಬಗ್ಗೆ ಯಾರೂ ಕ್ರಮ ಕೈಗೊಳ್ತಿಲ್ಲಎಂದು ಕೆಂಪಣ್ಣ ಕಿಡಿಕಾರಿದ್ದರು.
ಕೆಂಪಣ್ಣಗೆ ಪಿಎಂ ಕಾರ್ಯಾಲಯದಿಂದ ಕರೆ
ರಾಜ್ಯದಲ್ಲಿ 40 ಪಸೆಂಟ್ ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿಗೆ (PM Narendra Modi) ಪತ್ರ ಬರೆದಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣಗೆ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯದ ಅಧಿಕಾರಿಗಳು ಕರೆ ಮಾಡಿ ಮಾತನಾಡಿದ್ದರು. ಆರೋಪದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಪಿಎಂ ಕಾರ್ಯಾಲಯವು ಕೆಂಪಣ್ಣ ಅವರಿಗೆ ಸೂಚನೆ ನೀಡಿತ್ತು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:41 pm, Sat, 24 December 22