
ಕಲಬುರಗಿ, ನವೆಂಬರ್ 02: ಕೇಂದ್ರ ಸರ್ಕಾರದ ಸಬ್ಸಿಡಿ ಹಣದ ಆಸೆ ತೋರಿಸಿ ಉದ್ಯಮಿಯೋರ್ವರಿಗೆ ಖತರ್ನಾಕ್ ಗ್ಯಾಂಗ್ ವಂಚಿಸಿರುವ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಐನಾತಿ ಗ್ಯಾಂಗ್ ಮಾತು ನಂಬಿ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಯನ್ನ ಬ್ಯಾಂಕ್ಗೆ ಶ್ಯೂರಿಟಿಯಾಗಿ ಅಡವಿಟ್ಟಿದ್ದ ಉದ್ಯಮಿ ಈಗ ಬೀದಿಗೆ ಬಂದಿದ್ದು, ಅತ್ತ ಹಣ ಕೈಸೇರುತ್ತಿದ್ದಂತೆ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಕಲಬುರಗಿ ನಗರದ ಸುಪರ್ ಮಾರ್ಕೆಟ್ ಏರಿಯಾದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ಜಾಗ ಹೊಂದಿದ್ದ ಉದ್ಯಮಿ ಬಸವರಾಜ ಮರತೂರು ಅವರಿಗೆ ಏಳು ಜನರ ಗ್ಯಾಂಗ್ ಕೇಂದ್ರ ಸರ್ಕಾರದ ಸಬ್ಸಿಡಿ ಆಸೆ ತೋರಿಸಿತ್ತು. ಟೆಕ್ಸ್ಟೈಲ್ ಉದ್ಯಮಕ್ಕೆ ಸರ್ಕಾರ ಶೇ. 90ರಷ್ಟು ಸಬ್ಸಿಡಿ ಕೊಡುತ್ತೆ. ಹೀಗಾಗಿ ನಿಮ್ಮ ಜಾಗದಲ್ಲಿ ಉದ್ಯಮ ಮಾಡೋಣ ಅಂತ ನಂಬಿಸಿತ್ತು. ಇವರ ಮಾತು ನಂಬಿ ಬಸವರಾಜ ತಮ್ಮ ಕೋಟಿ ಕೋಟಿ ಬೆಲೆಯ ಆಸ್ತಿಯನ್ನ ಬ್ಯಾಂಕ್ಗೆ ಶ್ಯೂರಿಟಿಯಾಗಿ ಅಡವಿಟ್ಟು ಬರೋಬ್ಬರಿ 3.35 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಆದರೆ ಅತ್ತ ಬ್ಯಾಂಕ್ನಿಂದ ಹಣ ಬರುತ್ತಿದ್ದಂತೆ ಆರೋಪಿಗಳಾದ ಶರಣಬಸಪ್ಪ ಪಾಟೀಲ್ ,ಚಂದ್ರಕಲಾ, ಕಿರಣ್, ವಿಜಯಲಕ್ಷ್ಮೀ ಸೇರಿದಂತೆ ಏಳು ಜನ ಎಸ್ಕೇಪ್ ಆಗಿದ್ದಾರೆ. ಇತ್ತ ಪಡೆದ ಸಾಲ ಮರುಪಾವತಿ ಮಾಡದ ಕಾರಣ ಬಸವರಾಜ ಅವರ ಆಸ್ತಿಯನ್ನ ಬ್ಯಾಂಕ್ ಸೀಜ್ ಮಾಡಿದ್ದು, ಹರಾಜಿಗೂ ಮುಂದಾಗಿದೆ.
ಇದನ್ನೂ ಓದಿ: ಆಳಂದ ಕ್ಷೇತ್ರದಲ್ಲಿ ಮತಗಳ್ಳತನ: ಬಂಧನ ಭೀತಿಯಿಂದ ಪಾರಾದ ಬಿಜೆಪಿ ಮಾಜಿ ಶಾಸಕ
ಘಟನೆ ಸಂಬಂಧ ಮೋಸ ಹೋಗಿರುವ ಉದ್ಯಮಿ ಬಸವರಾಜ ಕುಟುಂಬ ಬ್ಯಾಂಕ್ ಅಧಿಕಾರಿಗಳ ವಿರುದ್ಧವೂ ಆರೋಪ ಮಾಡಿದೆ. ಈ ವಂಚನೆ ಕೃತ್ಯದಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಉದ್ಯಮಕ್ಕೆ ಸಾಮಗ್ರಿ ಕಳಿಸೋ ಕಂಪನಿಗೆ ಹಣ ನೀಡುವ ಬದಲು ವಂಚಕರ ಖಾತೆಗೆ ಹಣ ಹಾಕಲಾಗಿದೆ. ಅಲ್ಲದೇ, ಒಂದೇ ಒಂದು ನೋಟಿಸ್ ನೀಡದೆ ಏಕಾ ಏಕಿ ಆಸ್ತಿ ಸೀಜ್ ಮಾಡಿದ್ದಾರೆ. ಎಲ್ಲರೂ ಸೇರಿಕೊಂಡು ನಮ್ಮ ಆಸ್ತಿ ಲಪಟಾಯಿಸೋಕೆ ಪ್ಲ್ಯಾನ್ ಮಾಡಿದ್ದಾರೆ ಎಂದು ಆರೋಪಿಸಿದೆ. ಈ ಆಸ್ತಿ ನಮ್ಮ ಕೈತಪ್ಪಿ ಹೋದರೆ ಬೀದಿಗೆ ಬಂದು ವಿಷ ಕುಡಿಯಬೇಕಾಗುತ್ತೆ ಎಂದೂ ತಿಳಿಸಿದೆ. ಬಸವರಾಜ ಅವರನ್ನ ಆರೋಗ್ಯ ಸಮಸ್ಯೆ ಕೂಡ ಕಾಡುತ್ತಿದ್ದು, ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ನಡುವೆ ವಂಚನೆಯಿಂದ ಉದ್ಯಮಿ ಕುಟುಂಬಸ್ಥರು ಕಂಗಾಲಾಗಿದ್ದು, ಹೇಗಾದರೂ ನಮಗೆ ನ್ಯಾಯ ಕೊಡಿಸಿ ಎಂದು ಅಂಗಲಾಚಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:22 am, Sun, 2 November 25