ಆಳಂದ ಕ್ಷೇತ್ರದಲ್ಲಿ ಮತಗಳ್ಳತನ: ಬಂಧನ ಭೀತಿಯಿಂದ ಪಾರಾದ ಬಿಜೆಪಿ ಮಾಜಿ ಶಾಸಕ
ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ವೋಟ್ ಚೋರಿ ಆರೋಪದ ಪ್ರಕರಣದಲ್ಲಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ಗೆ ಸಿಸಿಹೆಚ್ 82ರ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ. ಸಿಐಡಿ ನೋಟಿಸ್ ಹಿನ್ನೆಲೆ ಬಂಧನದ ಭೀತಿಯಿಂದ ಗುತ್ತೇದಾರ್ ಅರ್ಜಿ ಸಲ್ಲಿಸಿದ್ದರು.

ಕಲಬುರಗಿ, ಅಕ್ಟೋಬರ್ 31: ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ವೋಟ್ ಚೋರಿ (Aland Vote Theft Case) ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಸುಭಾಷ್ ಗುತ್ತೇದಾರ್‌ಗೆ (subhash guttedar) ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಸಿಸಿಹೆಚ್ 82ರ ಜಡ್ಜ್ ಸಂತೋಷ್ ಗಜಾನನ ಭಟ್‌ರಿಂದ ಆದೇಶ ಹೊರಡಿಸಲಾಗಿದೆ. ಆ ಮೂಲಕ ಬಂಧನ ಭೀತಿಯಿಂದ ಪಾರಾಗಿದ್ದಾರೆ.
ಸಿಐಡಿ ನೋಟಿಸ್ ಹಿನ್ನೆಲೆ ಬಂಧನ ಭೀತಿಯಿಂದ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಸಿಸಿಹೆಚ್ 82ರ ಜಡ್ಜ್ ಸಂತೋಷ್ ಗಜಾನನ ಭಟ್, ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ.
ಇದನ್ನೂ ಓದಿ: ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ: ಬಿಜೆಪಿ ಮಾಜಿ ಶಾಸಕರ ಮನೆ ಮೇಲೆ SIT ದಾಳಿ
2023ರ ವಿಧಾನಸಭೆ ಚುನಾವಣೆಯಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ಆರೋಪ ಸಂಬಂಧ ಇತ್ತೀಚೆಗೆ 100ಕ್ಕೂ ಹೆಚ್ಚು ಪೊಲೀಸರ ಜೊತೆ ಎಸ್ಐಟಿ ಅಧಿಕಾರಿಗಳ ತಂಡ ಸುಭಾಷ್ ಗುತ್ತೇದಾರ್ ಮನೆ ಸೇರಿದಂತೆ ಮೂರು ಕಡೆಗಳಲ್ಲಿ ದಾಳಿ ಮಾಡಿತ್ತು. ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ನಿವಾಸದ ಮೇಲೆ SIT ಎಸ್ಪಿ ಶುಭಾನ್ವಿತಾ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಲಾಗಿತ್ತು.
SIT ದಾಳಿ ಮಾಡ್ತಿದ್ದಂತೆ ಅಮರ್ಜಾ ನದಿಯ ಹಿನ್ನೀರಿನಲ್ಲಿ ಅರ್ಧಂಬರ್ಧ ಸುಟ್ಟ ದಾಖಲೆ ಪತ್ತೆಯಾಗಿದ್ದವು. ಆದರೆ ಬೆಂಕಿ ಇಟ್ಟ ದಾಖಲೆಗಳು, ಬೂದಿಯನ್ನ ಇಲ್ಲಿ ತಂದು ಸುರಿದಿದ್ದು ಯಾರು ಅನ್ನೋದು ಇನ್ನೂ ಗೊತ್ತಾಗಿಲ್ಲ. ಗೂಡ್ಸ್ ವಾಹನದಲ್ಲಿ ಅರೆಬೆಂದ ಕಾಗದಗಳನ್ನ ಸಾಗಿಸಿರುವುದಕ್ಕೆ ಸಾಕ್ಷಿ ಸಿಕ್ಕಿದ್ದು, ವಾಹನವನ್ನ ಜಪ್ತಿ ಮಾಡಲಾಗಿದೆ. ಆದರೆ ಚಾಲಕ ಪರಾರಿಯಾಗಿದ್ದಾನೆ.
ಗುತ್ತೇದಾರ್ ಒಡೆತನದ ಅಪ್ನಾ ಬಾರ್ & ರೆಸ್ಟೋರೆಂಟ್‌ನಲ್ಲಿ ಮತದಾರರ ಪಟ್ಟಿ ಪತ್ತೆ ಆಗಿತ್ತು. ಮತಗಳ್ಳರು 6-7 ಬಾರಿ ಇದೇ ಬಾರ್‌ನಲ್ಲಿ ಮೀಟಿಂಗ್ ಮಾಡಿದ್ದ ಬಗ್ಗೆ ಎಸ್ಐಟಿಗೆ ಮಾಹಿತಿ ಸಿಕ್ಕಿತ್ತು. ಅಷ್ಟೇ ಅಲ್ಲ 2022ರ ಡಿಸೆಂಬರ್‌ನಲ್ಲಿ ಕಾಲ್‌ಸೆಂಟರ್ ಮೂಲಕ ಮತಪಟ್ಟಿ ಡಿಲೀಟ್ ಮಾಡಿರುವ ಬಗ್ಗೆ ಸುಳಿವು ಸಿಕ್ಕಿತ್ತು. ಕಾಲ್ ಸೆಂಟರ್‌ನಿಂದ ಮತದಾರರಿಗೆ ಕರೆ ಮಾಡುತ್ತಿದ್ದ ಕಿಡಿಗೇಡಿಗಳು, ಮಾಹಿತಿ ಕಲೆ ಹಾಕಿ ವೋಟಲ್ ಲಿಸ್ಟ್‌ನಿಂದ ಫಾರ್ಮ್ ನಂ.7 ಬಳಕೆ ಮಾಡಿ ಹೆಸರುಗಳನ್ನ ಡಿಲೀಟ್ ಮಾಡುತ್ತಿದ್ದರು ಎನ್ನಲಾಗಿತ್ತು. ಅಕ್ರಂ, ಅಸ್ಲಾಂ, ಜುನೈದ್, ನದೀಮ್ ಎಂಬುವರು ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಆಳಂದ ಮತಗಳ್ಳತನ: ಬಿಜೆಪಿ ಮಾಜಿ ಶಾಸಕ ಮಾಲೀಕತ್ವದ ಬಾರ್ ನಲ್ಲಿ ಮತದಾರರ ಪಟ್ಟಿ ಪತ್ತೆ
ಇನ್ನು ಮತಗಳ್ಳತನದ ಬಗ್ಗೆ ಇತ್ತೀಚೆಗಷ್ಟೇ ಸ್ಪಷ್ಟನೆ ಕೊಟ್ಟಿದ್ದ ಸುಭಾಷ್ ಗುತ್ತೇದಾರ್, ಯಾವ ಮತಗಳ್ಳತನವೂ ಆಗಿಲ್ಲ, ಎಲ್ಲವೂ ಸುಳ್ಳು ಅಂದಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



