ಕಲಬುರಗಿ: ಇದೇ ಮಾರ್ಚ್ 22 ರಂದು ನಗರದ ಹಾಗರಗಾ ರಸ್ತೆಯಲ್ಲಿ ಮಹಿಳೆಯ ಬರ್ಬರ ಕೊಲೆಯಾಗಿತ್ತು. ಮಹಿಳೆಯ ಸ್ಕೂಟಿಗೆ ಕಾರ್ನಿಂದ ಡಿಕ್ಕಿ ಹೊಡೆಸಿದ್ದ ದುಷ್ಕರ್ಮಿಗಳು ನಂತರ ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಕೊಲೆ ಮಾಡಿದ್ದರು. ಕೊಲೆಯಾದ ಮಹಿಳೆಯ ಹೆಸರು ನುಜತ್ ಸುಲ್ತಾನ್, ಮೂವತ್ತೈದು ವರ್ಷದ ನುಜತ್ ಸುಲ್ತಾನ್ ಕಲಬುರಗಿ ನಗರದ ಜಂಜಂ ಕಾಲೋನಿ ನಿವಾಸಿಯಾಗಿದ್ದಳು. ಕಾನೂನು ಪದವೀಧರೆಯಾಗಿದ್ದ ಆಕೆ ವಕೀಲೆಯಾಗಿ ಕೆಲಸ ಮಾಡುತ್ತಿದ್ದಳು. ಜೊತೆಗೆ ಸಾಮಾಜಿಕ ಕಾರ್ಯಕರ್ತೆಯಾಗಿ ಕೂಡ ಕೆಲಸ ಮಾಡುತ್ತಿದ್ದಳು. ಮಾರ್ಚ್ 22 ರಂದು ಜಂಜಂ ಕಾಲೋನಿಯ ಬಾಡಿಗೆ ಮನೆಯಲ್ಲಿದ್ದ ಆಕೆ, ಹಾಗರಗಾ ರಸ್ತೆಯಲ್ಲಿರುವ ಇನಾಂದಾರ್ ಕಾಲೇಜು ಬಳಿಯಿರುವ ಬಾಡಿಗೆ ಮನೆಗೆ ಶಿಪ್ಟ್ ಮಾಡುತ್ತಿದ್ದಳು.
ಮಧ್ಯಾಹ್ನ ಮೂರು ಗಂಟೆಗೆ ಮನೆಯ ಸಾಮಾನುಗಳನ್ನು ಗಾಡಿಗೆ ಹಾಕಿಸಿ ನಂತರ ಸ್ಕೂಟಿ ಮೇಲೆ ನುಜತ್ ಸುಲ್ತಾನ ಹೋಗಿದ್ದಳಂತೆ. ಆದರೆ ಬಹಳ ಹೊತ್ತಾದರೂ ಕೂಡ ಪತ್ನಿ ಮರಳಿ ಬಾರದೇ ಇದ್ದಾಗ ಆಕೆಯ ಪತಿ, ಪತ್ನಿಯನ್ನು ಹುಡುಕಿಕೊಂಡು ಹೋಗಿದ್ದಾನೆ. ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಸ್ಕೂಟಿಯನ್ನು ನೋಡಿ ಸಮೀಪ ಹೋದಾಗ ಗೊತ್ತಾಗಿದೆ. ನುಜತ್ ಸುಲ್ತಾನ್ ಕೊಲೆಯಾಗಿದ್ದಾಳೆ ಎನ್ನುವುದು. ಹೌದು ನುಜತ್ ಸುಲ್ತಾನ್ ಇದ್ದ ಸ್ಕೂಟಿಗೆ ಕಾರ್ನಿಂದ ಡಿಕ್ಕಿ ಹೊಡೆಸಿದ್ದ ದುಷ್ಕರ್ಮಿಗಳು, ನಂತರ ಚಾಕುವಿನಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು.
ಇದನ್ನೂ ಓದಿ:ಕಲಬುರಗಿ: ರೈತ ಮಹಿಳೆಯ ಬರ್ಬರ ಕೊಲೆ; ಅತ್ಯಾಚಾರ ಮಾಡಿ, ಹತ್ಯೆ ಮಾಡಿರುವ ಶಂಕೆ
ಆರೋಪಿಗಳನ್ನು ಬಂಧಿಸಿದ ಪೊಲೀಸರು
ಇನ್ನು ನುಜತ್ ಸುಲ್ತಾನ್ ಕೊಲೆ ವಿಷಯ ತಿಳಿದು, ಕಲಬುರಗಿ ನಗರ ಪೊಲೀಸ್ ಆಯುಕ್ತ ಆರ್ ಚೇತನ್ ಸ್ವತಃ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಈ ಬಗ್ಗೆ ಕಲಬುರಗಿ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ನುಜತ್ ಸುಲ್ತಾನ್ಳ ಪತಿ ಎಂಟು ಜನರ ವಿರುದ್ದ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಕೊಲೆ ಮಾಡಿದ್ದು, ಕೊಲೆಯಾದ ನುಜತ್ ಸುಲ್ತಾನಳ ಪತಿಯ ಸಹೋದರ ನಯೀಮ್, ಗುಲಬರ್ಗಾ ಹೆಡಲೈನ್ ಪೇಸಬುಕ್ ಪೇಜನ್ ವಸೀಂ ಶೇಖ್ನ ಸಹೋದರ ಅಜೀಂ ಶೇಖ್ ಮತ್ತು ಆತನ ಸ್ನೇಹಿತ ಗೌಸ್ ಬಂಧಿತರು. ಕೊಲೆಯಾದ ಮಹಿಳೆಯ ಅತ್ತೆ ಮಾವ, ಮತ್ತು ಪತಿಯ ಸಹೋದರರ ಜೊತೆ ಆಸ್ತಿ ವಿಚಾರವಾಗಿ ಕೌಟುಂಬಿಕ ಕಲಹ ಹೊಂದಿದ್ದಳು. ಜೊತೆಗೆ ಪತಿಯ ಹೆತ್ತವರು ಮತ್ತು ಪತಿಯ ಸಹೋದರರ ಮೇಲೆ ಕೇಸ್ ಹಾಕಿ ಅವರು ಜೈಲಿಗೆ ಹೋಗುವಂತೆ ಕೂಡ ಮಾಡಿದ್ದಳು.
ಹೀಗಾಗಿ ಪತಿಯ ಸಹೋದರ ನಯೀಂ, ನುಜತ್ ಸುಲ್ತಾನಳ ವಿರುದ್ದ ದ್ವೇಷ ಬೆಳಸಿಕೊಂಡಿದ್ದ. ಇನ್ನೊಂದೆಡೆ ನುಜತ್ ಸುಲ್ತಾನ್ಳ ಕೌಟುಂಬಿಕ ಕಲಹವನ್ನು ಗುಲಬರ್ಗಾ ಹೆಡಲೈನ್ ಎನ್ನುವ ಪೇಸಬುಕ್ ಪೇಜ್ ನಡೆಸುವ ವಸೀಂ ಶೇಖ್, ತನ್ನ ಪೇಸಬುಕ್ನಲ್ಲಿ ನ್ಯೂಸ್ ರೂಪದಲ್ಲಿ ಹಾಕಿದ್ದ. ಇದಕ್ಕೆ ನುಜತ್ ಸುಲ್ತಾನ್ ವಸೀಂ ವಿರುದ್ದ ದೂರು ನೀಡಿದ್ದಳು. ನುಜತ್ ಸುಲ್ತಾನ್ ಎಲ್ಲರಿಗೆ ಬೆದರಿಸೋದು, ಕೇಸ್ ಹಾಕುವುದು ಮಾಡುತ್ತಿದ್ದರಿಂದ ಆಕೆಗೆ ಒಂದು ಗತಿ ಕಾಣಿಸಬೇಕು ಎಂದು ನಿರ್ಧರಿಸಿ, ನಯೀಮ್, ಅಜೀಂ ಶೇಖ್ ನಿರ್ಧರಿಸಿದ್ದಾರೆ. ತಮಗೆ ಪರಿಚಯವಿದ್ದ ಗೌಸ್ ಎನ್ನುವವನನ್ನ ಕರೆದುಕೊಂಡು ಹೋಗಿ ನುಜತ್ ಸುಲ್ತಾನ್ಳನ್ನು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ:ಕಲಬುರಗಿ: ಮಾನಸಿಕ ಅಸ್ವಸ್ಥ ರೋಗಿಯ ಮೇಲೆ ಅತ್ಯಾಚಾರ; ಕಾಮುಕನನ್ನ ಬಂಧಿಸಿದ ಪೊಲೀಸರು
ಸದ್ಯ ನುಜತ್ ಸುಲ್ತಾನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಇನ್ನು ಅನೇಕರ ಕೈವಾಡ ಇರುವ ಶಂಕೆಯಿದ್ದು, ಅವರನ್ನು ವಿಚಾರಣೆ ಮಾಡಲು ಮುಂದಾಗಿದ್ದಾರೆ. ವಿಚಾರಣೆ ನಂತರ ಇನ್ನು ಅನೇಕರು ಕಂಬಿ ಹಿಂದೆ ಹೋಗುವ ಸಾಧ್ಯತೆಯಿದೆ. ಕೌಟುಂಬಿಕ ಕಲಹ ಮತ್ತು ದ್ವೇಷಕ್ಕೆ ಮಹಿಳೆಯ ಮೇಲೆ ಮೃಗಗಳಂತೆ ಬಿದ್ದ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ನಾಪತ್ತೆಯಾಗಿದ್ದವರು ಇದೀಗ ಕಂಬಿ ಹಿಂದೆ ಹೋಗಿದ್ದಾರೆ. ಇನ್ನು ಕೆಲವರು ಕೃತ್ಯದಲ್ಲಿ ಭಾಗಿಯಾಗಿದ್ದು, ಅವರನ್ನು ಕೂಡಾ ಬಂಧಿಸಿ, ಜೈಲಿಗಟ್ಟುವ ಕೆಲಸವನ್ನು ಪೊಲೀಸರು ಮಾಡಬೇಕಿದೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:24 am, Wed, 29 March 23