ಕಲಬುರಗಿ: ಶಾಲೆಗೆ ಹೋದ ಮಗಳು ಇದುವರೆಗೂ ಮನೆಗೆ ಬಂದಿಲ್ಲ, ಹೇಗಾದರೂ ಮಾಡಿ ಮಗಳನ್ನು ಹುಡುಕಿಕೊಡಿ ಎಂದು ತಾಯಿ ಗೋಳಾಟ
ತಾಯಿ ಮಗಳು ಚೆನ್ನಾಗಿರಲಿ ಎಂದು ಮಗಳನ್ನು ತಾಯಿ ಮನೆಯಲ್ಲಿ ಬಿಟ್ಟು ದುಡಿಯಲು ದೂರದ ಬೆಂಗಳೂರಲ್ಲಿ ಇದ್ದಳು. ಆದರೆ ಶಾಲೆೆಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ಹದಿನಾಲ್ಕು ವರ್ಷದ ಮಗಳು ಮರಳಿ ಮನೆಗೆ ಬಂದಿಲ್ಲ. ಮಗಳು ಕಾಣೆಯಾಗಿದ್ದು ಹೆತ್ತ ತಾಯಿಗೆ ಇದೀಗ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಹೇಗಾದರೂ ಮಾಡಿ ನನ್ನ ಮಗಳನ್ನ ಹುಡುಕಿಕೊಡಿ ಎಂದು ಪೊಲೀಸರ ಮುಂದೆ ರೋಧಿಸುತ್ತಿದ್ದಾಳೆ
ಕಲಬುರಗಿ: ಸರ್ ದಯವಿಟ್ಟು ನನಗೆ ನನ್ನ ಮಗಳು ಬೇಕು. ಹೇಗಾದ್ರು ಮಾಡಿ ಆಕೆಯನ್ನು ಹುಡುಕಿ ಕೊಡಿ ಎಂದು ಒಂದೆಡೆ ಮನವಿ ಮಾಡುತ್ತಾ ಕಣ್ಣೀರು ಹಾಕುತ್ತಿರುವ ಈ ಮಹಿಳೆಯ ಹೆಸರು ಶರಣಮ್ಮಾ ದೊಡ್ಡಮನಿ. ಮೂಲತ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಿತ್ತಲಸಿರೂರು ಗ್ರಾಮದ ನಿವಾಸಿಯಾಗಿದ್ದ ಶರಣಮ್ಮಗೆ ಇದೀಗ ದಿಕ್ಕೆ ತೋಚದಂತಹ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಶರಣಮ್ಮಳ ಪತಿ ಅನೇಕ ವರ್ಷಗಳ ಹಿಂದೆಯೇ ಬಾರದ ಲೋಕಕ್ಕೆ ಹೋಗಿದ್ದಾನಂತೆ. ಇಬ್ಬರ ಮಕ್ಕಳ ಪೈಕಿ ಒಬ್ಬ ಮಗಳನ್ನ ಮದುವೆ ಮಾಡಿಕೊಟ್ಟಿದ್ದ ಶರಣಮ್ಮ, ಇನ್ನೊಬ್ಬ ಮಗಳ ಉತ್ತಮ ಭವಿಷ್ಯಕ್ಕಾಗಿ ದುಡಿಯಲು ದೂರದ ಬೆಂಗಳೂರಿನಲ್ಲಿ ಇದ್ದಾಳೆ. ಹೌದು ಬೆಂಗಳೂರಿನ ಹಾಸ್ಟೆಲ್ನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಶರಣಮ್ಮ, ತನ್ನ ಹದಿನಾಲ್ಕು ವರ್ಷದ ಮಗಳಾದ ಪವಿತ್ರಾಳನ್ನು ಹಿತ್ತಲಸಿರೂರು ಗ್ರಾಮದಲ್ಲಿರುವ ತಾಯಿ ಮನೆಯಲ್ಲಿ ಬಿಟ್ಟಿದ್ದಳು. ಹೀಗಿರುವಾಗ ಶಾಲೆಗೆ ಹೋದ ಮಗಳು ಇನ್ನುವರೆಗೂ ಬಂದಿಲ್ಲ.
ಗ್ರಾಮದಲ್ಲಿರುವ ಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದ ಪವಿತ್ರಾ ಕಳೆದ ಪೆಬ್ರವರಿ 24 ರಂದು ಶಾಲೆಗೆ ಹೋಗಿದ್ದು, ಇನ್ನು ಮರಳಿ ಮನೆಗೆ ಬಂದಿಲ್ಲವಂತೆ. ಎಲ್ಲಾದರೂ ಇರಬಹುದು ಬರ್ತಾಳೆ ಎಂದು ಪವಿತ್ರಾ ಅಜ್ಜಿ ಕಾದಿದ್ದರಂತೆ.ಆದರೆ ಮಾರನೇ ದಿನವು ಬಾರದೇ ಇದ್ದಾಗ, ಶರಣಮ್ಮಗೆ ತಿಳಿಸಿದ್ದಳಂತೆ. ಮಗಳ ವಿಷಯ ತಿಳಿದು ಬೆಂಗಳೂರಿನಿಂದ ಹಿತ್ತಲಸಿರೂರು ಗ್ರಾಮಕ್ಕೆ ಬಂದಿದ್ದ ಶರಣಮ್ಮ, ಮಗಳಿಗಾಗಿ ಹುಡುಕಾಡಿದ್ದಾಳೆ. ಆದರೆ ಸಿಗದೇ ಇದ್ದಾಗ ನಿಂಬರ್ಗಾ ಪೊಲೀಸ್ ಠಾಣೆಗೆ ಬಂದು ದೂರನ್ನ ನೀಡಿದ್ದಾಳಂತೆ.
ಇನ್ನು ತಮ್ಮ ಮಗಳು ಎಲ್ಲಿದ್ದಾಳೆ, ಹೇಗಿದ್ದಾಳೆ ಎಂದು ತಾಯಿ ಕಂಗಾಲಾಗಿದ್ದಾಳೆ. ಯಾರಾದ್ರು ಅಪಹರಣ ಮಾಡಿಕೊಂಡು ಹೋಗಿರಬಹುದು ಎನ್ನುವ ಅನುಮಾನ ತಾಯಿಗೆ ಇದೆ. ಆದರೆ ಯಾರು ಅಪಹರಿಸಿದ್ದಾರೆ. ಯಾರ ಜೊತೆ ಹೋಗಿರಬಹುದು ಅನ್ನೋದು ಗೊತ್ತಿಲ್ಲ. ಹೀಗಾಗಿ ತನಗೆ ಯಾರ ಮೇಲೂ ಅನುಮಾನವಿಲ್ಲ. ನನಗೆ ನನ್ನ ಮಗಳು ಬೇಕು. ದಯವಿಟ್ಟು ಹುಡುಕಿ ಕೊಡಿ ಎಂದು ಶರಣಮ್ಮ ಮನವಿ ಮಾಡಿದ್ದಾಳೆ. ಇನ್ನು ಈ ಬಗ್ಗೆ ನಿಂಬರ್ಗಾ ಪೊಲೀಸ್ ಠಾಣೆಗೆ ದೂರನ್ನ ನೀಡಿದ್ರು ಕೂಡ ಪೊಲೀಸರು ಬಾಲಕಿಯನ್ನ ಹುಡುಕುತ್ತಿಲ್ಲವಂತೆ. ಕೇಳಿದ್ರೆ ನೀವೇ ವಿಚಾರಿಸಿ, ನಿಮ್ಮ ಮಗಳು ಬಂದಿದ್ದಾಳ ಅಂತ ತಾಯಿಗೆ ಕೇಳುತ್ತಿದ್ದಾರಂತೆ.
ಅಪ್ರಾಪ್ತ ವಯಸ್ಸಿನ ಬಾಲಕಿ, ನಾಪತ್ತೆಯಾಗಿದ್ದರು ಕೂಡಾ ಆಕೆಯ ಹುಡುಕಾಟ ಮಾಡದೇ ಇರುವ ಪೊಲೀಸರ ವಿರುದ್ದ ಅನೇಕ ದಲಿತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಬಾಲಕಿಯನ್ನು ಹುಡಕದೇ ಇದ್ದರೆ ಪೊಲೀಸ್ ಠಾಣೆಯ ಮುಂದೆ ಧರಣಿ ಸತ್ಯಾಗ್ರಹ ನಡೆಸೋದಾಗಿ ಹೇಳಿದ್ದಾರೆ. ಇನ್ನು ಹೆತ್ತವರಿಗೆ ಯಾರ ಮೇಲೆ ಕೂಡ ಅನುಮಾನ ಇಲ್ಲದೇ ಇರೋದರಿಂದ, ಪೊಲೀಸರ ವಿಚಾರಣೆಗೆ ತೊಂದರೆಯಾಗಿದೆಯಂತೆ. ಆದರೂ ಕೂಡ ಪೊಲೀಸರು ಇನ್ನಷ್ಟು ವಿಚಾರಣೆ ನಡೆಸಿ, ನಾಪತ್ತೆಯಾಗಿರುವ ಬಾಲಕಿಯನ್ನು ಹುಡುಕುವ ಕೆಲಸ ಮಾಡಬೇಕಿದೆ.
ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:36 pm, Sat, 18 March 23