ಕಲಬುರಗಿ: ಜಿಲ್ಲೆಯಲ್ಲಿ ನಿಧಿಗಳ್ಳರ ಹಾವಳಿ ವಿಪರೀತವಾಗಿದೆ. ಅದೆಷ್ಟೊ ಪುಟಾಣಿಗಳು ನಿಧಿಗಳ್ಳರ ದುರಾಸೆಗೆ ಬಲಿಯಾಗಿದ್ದಾರೆ. ಇನ್ನು ಹಲವರು ಜೈಲುಪಾಲಾಗಿದ್ದಾರೆ. ಆದರೂ ನಿಧಿ ಹುಡುಕುವವರ ಸಂಖ್ಯೆ ಕಡಿಮೆಯಾಗಿಲ್ಲ.
ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿ ಹೊರವಲಯದ ಭಾಗ್ಯವಂತಿ ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ನಿಧಿಗಳ್ಳರನ್ನು ವಾಡಿ ಠಾಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ತರ್ಕಸಪೇಟ್ ಗ್ರಾಮದ ಸಾಯಿಬಣ್ಣ, ಶಾಂಪೂರಹಳ್ಳಿಯ ಹಣಮಂತ ಖತ್ರಿ, ರಾಂಪೂರಹಳ್ಳಿಯ ಬಸಲಿಂಗ ಬಂಧಿತರು.
ಮೂವರ ಜೊತೆಗೆ ಇನ್ನೂ ಮೂವರು ಸೇರಿ ರಾಂಪೂರಹಳ್ಳಿಯ ಹೊರವಲಯದ ಭಾಗ್ಯವಂತಿ ದೇವಸ್ಥಾನದ ಬಳಿ ನಿಧಿಗೆ ಭೂಮಿ ಅಗೆಯುತ್ತಿದ್ರು. ನಿಧಿಗಾಗಿ 2 ದಿನದ ಹಿಂದೆ ವಿಶೇಷ ಪೂಜೆ ಮಾಡಿದ್ದ ಕಿರಾತಕರು, ನಂತರ ಭೂಮಿಯನ್ನು ಅಗೆಯುತ್ತಿದ್ದರಂತೆ.
ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ನಿಂತಿರೋದನ್ನು ಗಮನಿಸಿದ ವಾಡಿ ಠಾಣೆ ಪೊಲೀಸರು, ಸ್ಥಳಕ್ಕೆ ಹೋಗಿ ಗಮನಿಸಿದಾಗ ಸತ್ಯ ಗೊತ್ತಾಗಿದೆ. ಒಟ್ಟು 6 ಜನರ ಪೈಕಿ ಮೂವರು ಪೊಲೀಸರಿಗೆ ಸಿಕ್ಕಿದ್ದು, ಇನ್ನು ಬಾಗಲಕೋಟೆ ಜಿಲ್ಲೆಯವರು ಎಸ್ಕೇಪ್ ಆಗಿದ್ದಾರೆ.
ಬಾಗಲಕೋಟೆ ಮೂಲದ ಮೂವರು ಮಂತ್ರವಾದಿಗಳು, ಸಾಯಿಬಣ್ಣ, ಹಣಮಂತ, ಬಸಲಿಂಗರಿಗೆ ನಿಧಿಗಾಗಿ ಆಸೆ ಹುಟ್ಟಿಸಿದ್ದರಂತೆ. ರಾಂಪೂರಹಳ್ಳಿ ಭಾಗವ್ಯವಂತಿ ದೇವಸ್ಥಾನದ ಬಳಿ ನಿಧಿಯಿದೆ. ಪೂಜೆ ಮಾಡಿ ನಿಧಿ ಹುಡುಕಿದ್ರೆ ಸಿಗುತ್ತೆ ಅಂತ ಹೇಳಿದ್ದರಂತೆ. ಅವರ ಮಾತನ್ನು ನಂಬಿ ಮೂವರು ಪೂಜೆ ಮಾಡಿ ನಿಧಿಗಾಗಿ ಶೋಧ ಮಾಡಲು ಹೋಗಿ ಈಗ ಜೈಲು ಪಾಲಾಗಿದ್ದಾರೆ.
ಒಟ್ನಲ್ಲಿ ನಿಧಿಗೆ ಹುಡುಕಾಟ ನಡೆಸಿದ್ದ ಮೂವರು ಜೈಲು ಪಾಲಾಗಿದ್ದಾರೆ. ನಿಧಿ ಆಸೆ ಹುಟ್ಟಿಸಿ ಯಾಮಾರಿಸುವ ದೊಡ್ಡ ಗ್ಯಾಂಗ್ ರಾಜ್ಯದಲ್ಲಿ ಸಕ್ರಿಯವಾಗಿದೆ. ಗ್ಯಾಂಗ್ನ ಹೆಡೆಮುರಿ ಕಟ್ಟುವ ಕೆಲಸವನ್ನ ಪೊಲೀಸರು ಮಾಡಬೇಕಿದೆ. ಇಲ್ಲದಿದ್ದರೆ ಇನ್ನೂ ಅನೇಕರು ಇದೇ ರೀತಿ ಅಡ್ಡದಾರಿ ಹಿಡಿಯುವುದರಲ್ಲಿ ಅನುಮಾನವಿಲ್ಲ.
Published On - 12:56 pm, Sat, 28 November 20