ಮಗನ ಚಿನ್ನದ ಪದಕದ ಸಂಭ್ರಮ ನೋಡಲು ಬರುವಾಗಲೇ ಅಪಘಾತದಲ್ಲಿ ತಂದೆ ಸಾವು: ಘಟಿಕೋತ್ಸವ ದಿನವೇ ಭೀಕರ ದುರಂತ

ಕಲಬುರಗಿ ಕೇಂದ್ರೀಯ ವಿವಿಯ ಘಟಿಕೋತ್ಸವದಲ್ಲಿ ಪುತ್ರ ದಿವ್ಯಾಂಶು ಎರಡು ಚಿನ್ನದ ಪದಕ ಪಡೆಯುವುದನ್ನು ನೋಡಲು ಬಂದಿದ್ದ ಮಧ್ಯಪ್ರದೇಶದ ಉಜ್ಜಯಿನಿ ಮೂಲದ ಶಿವಕುಮಾರ್ ಶರ್ಮಾ ಆಟೋ ಪಲ್ಟಿಯಾಗಿ ಸಂಭವಿಸಿದ ದುರಂತದದಲ್ಲಿ ಮೃತಪಟ್ಟಿದ್ದಾರೆ. ಸಂಭ್ರಮಿಸಬೇಕಿದ್ದ ಕ್ಷಣದಲ್ಲಿ ಮಗನಿಗೆ ಪಿತೃವಿಯೋಗದ ಆಘಾತ ಎದುರಾಗಿದ್ದು, ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಮಗನ ಚಿನ್ನದ ಪದಕದ ಸಂಭ್ರಮ ನೋಡಲು ಬರುವಾಗಲೇ ಅಪಘಾತದಲ್ಲಿ ತಂದೆ ಸಾವು: ಘಟಿಕೋತ್ಸವ ದಿನವೇ ಭೀಕರ ದುರಂತ
ಪತ್ನಿ ಜತೆ ಶಿವಕುಮಾರ್ ಶರ್ಮಾ ಹಾಗೂ ಬಲಚಿತ್ರದಲ್ಲಿ ದಿವ್ಯಾಂಶು ಸಕ್ಸೇನಾ
Image Credit source: tv9
Edited By:

Updated on: Apr 23, 2026 | 11:27 AM

ಕಲಬುರಗಿ, ಏಪ್ರಿಲ್ 23: ಮಗ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆಯುವ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಬಂದ ತಂದೆಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿಯಲ್ಲಿ (Kalaburagi) ನಡೆದಿದೆ. ಮಗನ ಸಾಧನೆಯ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಈಗ ಮರಣದ ಶೋಕ ಆವರಿಸಿದೆ. ಮೃತರನ್ನು ಮಧ್ಯ ಪ್ರದೇಶದ ಉಜ್ಜಯಿನಿ ಮೂಲದ ಶಿವಕುಮಾರ್ ಶರ್ಮಾ (59) ಎಂದು ಗುರುತಿಸಲಾಗಿದೆ.

ಘಟಿಕೋತ್ಸವ ಸಂಭ್ರಮದ ಮಧ್ಯೆ ನಡೆದಿದ್ದೇನು?

ಉಜ್ಜಯಿನಿಯ ಶಿವಕುಮಾರ್ ಶರ್ಮಾ ಪುತ್ರ ದಿವ್ಯಾಂಶು ಸಕ್ಸೇನಾ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (CUK) ಬಿ.ಟೆಕ್ (ಇ ಆಂಡ್ ಸಿ) ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ಎರಡು ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ. ನಿನ್ನೆ (ಏಪ್ರಿಲ್ 22) ನಡೆದ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ದಿವ್ಯಾಂಶು ಚಿನ್ನದ ಪದಕಗಳನ್ನು ಸ್ವೀಕರಿಸಿದ್ದಾರೆ. ಮಗನ ಈ ಸಾಧನೆಯನ್ನು ನೋಡಲೆಂದೇ ತಂದೆ ಶಿವಕುಮಾರ್ ಅವರು ಮಧ್ಯಪ್ರದೇಶದಿಂದ ಕಲಬುರಗಿಗೆ ಆಗಮಿಸಿದ್ದರು.

ಆಟೋ ಪಲ್ಟಿಯಾಗಿ ದುರ್ಮರಣ

ಬುಧವಾರ ಬೆಳಗ್ಗೆ ಘಟಿಕೋತ್ಸವ ಕಾರ್ಯಕ್ರಮಕ್ಕೆ ಹಾಜರಾಗಲು ಆಳಂದ ತಾಲೂಕಿನ ಕಡಗಂಚಿ ಗ್ರಾಮದ ಬಳಿಯಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ಶಿವಕುಮಾರ್ ಶರ್ಮಾ ಆಟೋದಲ್ಲಿ ತೆರಳುತ್ತಿದ್ದರು. ಈ ವೇಳೆ ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಶಿವಕುಮಾರ್ ಶರ್ಮಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಆಟೋದಲ್ಲಿದ್ದ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಹೆಚ್ಚಾಯ್ತು ಹದಿಹರೆಯದ ಗರ್ಭಧಾರಣೆ! ಒಂದೇ ವರ್ಷದಲ್ಲಿ 61 ಪ್ರಕರಣಗಳು ದಾಖಲು

ಒಂದೆಡೆ ಮಗ ದಿವ್ಯಾಂಶು ವೇದಿಕೆಯ ಮೇಲೆ ಪದಕ ಸ್ವೀಕರಿಸಬೇಕಾದ ಸಂಭ್ರಮದಲ್ಲಿದ್ದರೆ, ಇನ್ನೊಂದೆಡೆ ಆತನನ್ನು ಸಲಹಿ ಬೆಳೆಸಿದ ತಂದೆಯ ಶವವಾಗಿ ಪಕ್ಕದ ಆಸ್ಪತ್ರೆಯಲ್ಲಿದ್ದರು. ಈ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು. ಘಟನೆ ಸಂಬಂಧ ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us