ಅವರಿಬ್ಬರೂ ಸಂಬಂಧಿಗಳು. ಆದ್ರೆ ಸಂಬಂಧಿಗಳು (Relatives) 300 ರೂಪಾಯಿ ಹಣಕ್ಕಾಗಿ ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡಿದ್ದರು. ಜಗಳ ವಿಕೋಪಕ್ಕೆ ಹೋದ ಪರಿಣಾಮ, ಸಹೋದರ ಸಂಬಂಧಿಯೇ ಯುವಕನನ್ನು ಮಾರಕಾಸ್ತ್ರದಿಂದ ಇರಿದು ಬರ್ಬರ ಕೊಲೆ (Murder) ಮಾಡಿದ್ದಾನೆ. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕುಟುಂಬ ಈಗ ಕಂಗಾಲಾಗಿದೆ. ಕುಟುಂಬಕ್ಕೆ ಮುಂದೇನು ಅನ್ನೋದು ತಿಳಿಯದಾಗಿದೆ. ಮತ್ತೊಂದೆಡೆ ಜನನಿಬಿಡ ಪ್ರದೇಶದಲ್ಲಿ ನಡೆದ ಘಟನೆಯನ್ನು ನೋಡಿ ಜನರು ಕೂಡಾ ಭಯಬೀತರಾಗಿದ್ದಾರೆ. ವ್ಯಾಪಾರಸ್ಥರು ಘಟನೆಯಿಂದ ಶಾಕ್ ನಲ್ಲಿದ್ದಾರೆ. ಅಷ್ಕಕ್ಕೂ ಜನರ ಆತಂಕ, ಮನೆಯವರ ಆ ಆಕ್ರಂದನಕ್ಕೆ ಕಾರಣವಾಗಿದ್ದು, ಯುವಕನೊಬ್ಬನ ಬರ್ಬರ ಕೊಲೆ.
ಮಾರಕಾಸ್ತ್ರದಿಂದ ಕತ್ತುಕೊಯ್ದು ಯುವಕನ ಬರ್ಬರ ಕೊಲೆ:
ಹೌದು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮೊನ್ನೆ ಭಾನುವಾರ ರಾತ್ರಿ ಏಳು ಗಂಟೆ ಸಮಯದಲ್ಲಿ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆಯಾದ ಯುವಕನ ಹೆಸರು ಕರೀಂ ಬಾಗವಾನ್ ಅಂತ. 25 ವರ್ಷದ ಕರೀಂಗೆ ಮದುವೆಯಾಗಿದ್ದು, ಆಳಂದ ಪಟ್ಟಣದ (Aland, Kalaburagi) ರೇವಣಸಿದ್ದೇಶ್ವರ ಕಾಲೋನಿಯಲ್ಲಿ ವಾಸವಿದ್ದ. ಆಳಂದ ಪಟ್ಟಣದ ಬಸ್ ನಿಲ್ದಾಣದ ಮುಂದೆ ತಳ್ಳು ಗಾಡಿಯಲ್ಲಿ ಬಾಳೆಹಣ್ಣು ಮಾರಾಟ ಮಾಡುತ್ತಿದ್ದ.
ಪ್ರತಿನಿತ್ಯ ಬಸ್ ನಿಲ್ದಾಣದ ಮುಂದೆ ಹಣ್ಣು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ಕರೀಂ, ನಿನ್ನೆ ಮುಂಜಾನೆ ಕೂಡಾ ಬಾಳೆ ಹಣ್ಣು ಮಾರಾಟ ಮಾಡುವುದಾಗಿ ಹೇಳಿ ಮನೆಯಿಂದ ಹೊರಹೋಗಿದ್ದ. ಆದ್ರೆ ನಿನ್ನೆ ರಾತ್ರಿ ಆಳಂದ ಬಸ್ ನಿಲ್ದಾಣದ ಮುಂಭಾಗದಲ್ಲಿ ಆತನನ್ನು ದುಷ್ಕರ್ಮಿಯೋರ್ವ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಇನ್ನು ಕರೀಂನ ಸಹಾಯಕ್ಕೆ ಹೋಗಿದ್ದ ಆತನ ಸಹೋದರನ ಮೇಲೆ ಕೂಡಾ ದುಷ್ಕರ್ಮಿ ಅಟ್ಯಾಕ್ ಮಾಡಿದ್ದಾನೆ. ಕರೀಂ ನ ಕತ್ತು ಮತ್ತು ಹೊಟ್ಟೆಗೆ ಮಾರಕಾಸ್ತ್ರದಿಂದ ಇರಿದಿದ್ದರಿಂದ ಕರೀಂ ಸ್ಥಳದಲ್ಲಿಯೇ ಬಾರದ ಲೋಕಕ್ಕೆ ಹೋಗಿದ್ದಾನೆ.
ಕರೀಂ ಬಾಗವಾನ್ ನನ್ನು ಕೊಲೆ ಮಾಡಿದ್ದು ಬೇರಾರೂ ಅಲ್ಲಾ. ಆತನ ಸಹೋದರ ಸಂಬಂಧಿ ವಾಜೀದ್ ಅನ್ನೋನು. ಹೌದು ವಾಜೀದ್ ಕೂಡಾ ಆಳಂದ ಪಟ್ಟಣದಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ವಾಜೀದ್ ಮತ್ತು ಕರೀಂ ಇಬ್ಬರೂ ಸಂಬಂಧಿಗಳಾಗಿದ್ದರಿಂದ, ಇಬ್ಬರ ನಡುವೆ ಒಡನಾಟ ಹೆಚ್ಚಿತ್ತು. ಆದ್ರೆ ಅನೇಕ ತಿಂಗಳಿಂದ ಇಬ್ಬರ ನಡುವೆ ಹಣದ ವಿಚಾರವಾಗಿ ವೈಮನಸ್ಸು ಹೆಚ್ಚಿತ್ತಂತೆ.
ಈ ಹಿಂದೆ ಕೂಡಾ ವಾಜೀದ್ ಕರೀಂ ಜೊತೆ ಜಗಳ ಮಾಡಿಕೊಂಡಿದ್ದನಂತೆ. ಆದ್ರೆ ನಿನ್ನೆ ಇಬ್ಬರೂ ಸೇರಿ ಮತ್ತೆ ಇಸ್ಪಿಟ್ ಆಡುವುದು, ಮದ್ಯ ಕುಡಿಯುವುದನ್ನು ಮಾಡಿದ್ದರಂತೆ. ನಿನ್ನೆ ಸಂಜೆ ಇಬ್ಬರೂ ಕುಡಿದ ಮೇಲೆ 300 ರೂಪಾಯಿ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿತ್ತಂತೆ. ಕೆಲ ದಿನಗಳ ಹಿಂದೆ, ಕರೀಂ ಬಾಗಾವನ್ ಗೆ ವಾಜೀದ್ 300 ರೂಪಾಯಿ ಹಣ ನೀಡಿದ್ದನಂತೆ. ಇದೇ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಆರಂಭವಾಗಿ, ಅದು ಕರೀಂ ಕೊಲೆಗೆ ಕಾರಣವಾಗಿದೆ.
ಸದ್ಯ ಆಳಂದ ಪೊಲೀಸ್ ಠಾಣೆಯಲ್ಲಿ ಕರೀಂ ಬಾಗವಾನ್ ಕೊಲೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಪೊಲೀಸರು ಈಗಾಗಲೇ ವಾಜೀದ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ನಂತರವೇ, ಕೇವಲ ವಾಜೀದ್ ಮಾತ್ರ ಕೊಲೆಯಲ್ಲಿ ಭಾಗಿಯಾಗಿದ್ದಾನಾ? ಇನ್ನಿತರರು ಇದ್ದಾರಾ? ಕೊಲೆಗೆ ಅಸಲಿ ಕಾರಣ ಏನು? ಅನ್ನೋದು ಗೊತ್ತಾಗಲಿದೆ. ಆದ್ರೆ ಕ್ಷುಲಕ ಕಾರಣಕ್ಕೆ ಸಂಬಂಧಿಗಳೇ ಗಲಾಟೆ ಮಾಡಿಕೊಂಡು, ಒಬ್ಬನ ಕೊಲೆ ಮಾಡಿದ್ದು ಮಾತ್ರ ದುರ್ದೈವದ ಸಂಗತಿಯಾಗಿದೆ. (ವರದಿ- ಸಂಜಯ್, ಟಿವಿ 9, ಕಲಬುರಗಿ)