Siddeshwara Swamiji: ಮೋದಿ ಸರ್ಕಾರ ಪದ್ಮಶ್ರೀ ಕೊಟ್ಟಾಗ ಬೇಡವೆಂದು ತಿರಸ್ಕರಿಸಿದರು, ಸಿದ್ದೇಶ್ವರ ಸ್ವಾಮೀಜಿಗೆ ಕಲಬುರಗಿ ಮೇಲೆ ಎಲ್ಲಿಲ್ಲದ ಪ್ರೀತಿ ಇತ್ತು

| Updated By: ಸಾಧು ಶ್ರೀನಾಥ್​

Updated on: Jan 03, 2023 | 11:45 AM

ಕಲಬುರಗಿ ಜಿಲ್ಲೆಯಲ್ಲಿ ಸಿದ್ದೇಶ್ವರ ಶ್ರೀಗಳ ಅಪಾರ ಭಕ್ತರು ಇದ್ದಾರೆ. ಅವರ ಪ್ರವಚನವನ್ನು ಕೇಳಲು ಇಲ್ಲಿನ ಜನರು ಕಾತುರದಿಂದ ಕಾಯುತ್ತಿದ್ದರು.

Siddeshwara Swamiji: ಮೋದಿ ಸರ್ಕಾರ ಪದ್ಮಶ್ರೀ ಕೊಟ್ಟಾಗ ಬೇಡವೆಂದು ತಿರಸ್ಕರಿಸಿದರು, ಸಿದ್ದೇಶ್ವರ ಸ್ವಾಮೀಜಿಗೆ ಕಲಬುರಗಿ ಮೇಲೆ ಎಲ್ಲಿಲ್ಲದ ಪ್ರೀತಿ ಇತ್ತು
Siddeshwara Swamiji: ಮೋದಿ ಸರ್ಕಾರ ಪದ್ಮಶ್ರೀ ಕೊಟ್ಟಾಗ ಬೇಡವೆಂದು ತಿರಸ್ಕರಿಸಿದರು, ಸಿದ್ದೇಶ್ವರ ಸ್ವಾಮೀಜಿಗೆ ಕಲಬುರಗಿ ಮೇಲೆ ಎಲ್ಲಿಲ್ಲದ ಪ್ರೀತಿ
Follow us on

ಕಲಬುರಗಿ: ಉತ್ತರ ಕರ್ನಾಟಕ ಭಾಗದಲ್ಲಿ ನಡೆದಾಡುವ ದೇವರು, ಶತಮಾನದ ಸಂತ ಅಂತಲೇ ಖ್ಯಾತಿ ಪಡೆದಿದ್ದ ಸಿದ್ದೇಶ್ವರ ಸ್ವಾಮೀಜಿ(Siddeshwara Swamiji) ನಿನ್ನೆ ಸಂಜೆ(ಜ.02) ಬಾರದ ಲೋಕಕ್ಕೆ ಹೋಗಿದ್ದಾರೆ. ವಿಜಯಪುರ ಜಿಲ್ಲೆಯ ಸಿದ್ದೇಶ್ವರ ಸ್ವಾಮೀಜಿ ಅವರಿಗೆ, ತಮ್ಮ ಪಕ್ಕದ ಕಲಬುರಗಿ ಜಿಲ್ಲೆ ಮತ್ತು ಜನರ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಸಿದ್ದೇಶ್ವರ ಸ್ವಾಮೀಜಿ ವಿಜಯಪುರ ಬಿಟ್ಟರೆ, ಒಂದೇ ಕಡೆ ಅತಿ ಹೆಚ್ಚು ಪ್ರವಚನ ನೀಡಿದ್ದು ಕಲಬುರಗಿ ಜಿಲ್ಲೆಯಲ್ಲಿಯೇ. ಕಲಬುರಗಿಯಲ್ಲಿದ್ದಾಗಲೇ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಸರ್ಕಾರ ನೀಡಿತ್ತು. ಇಲ್ಲಿದ್ದಾಗಲೇ ಪ್ರಶಸ್ತಿಯನ್ನು ನಯವಾಗಿ ತಿರಸ್ಕರಿಸಿದ್ದರು.

ಕಲಬುರಗಿ ಜಿಲ್ಲೆ ಮೇಲೆ ಹೆಚ್ಚಿನ ಪ್ರೀತಿ ಹೊಂದಿದ್ದ ಶ್ರೀಗಳು

ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿ ಮೇಲೆ ಹಾಗೂ ಕಲಬುರಗಿ ಜನರ ಮೇಲೆ ಸಿದ್ದೇಶ್ವರ ಸ್ವಾಮೀಜಿ ಅವರು ಅಪಾರ ಪ್ರೀತಿಯನ್ನು ಹೊಂದಿದ್ದರು. ಹೀಗಾಗಿ ಕಲಬುರಗಿ ನಗರದ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿ ವತಿಯಿಂದ ಮೂರು ಬಾರಿ ಕಲಬುರಗಿ ನಗರದಲ್ಲಿ ಪ್ರವಚನ ನೀಡಿದ್ದರು. ಕಲಬುರಗಿ ನಗರದ ಎನ್​ವಿ ಮೈದಾನದಲ್ಲಿ ನಡೆಯುತ್ತಿದ್ದ ಪ್ರವಚನ ಕೇಳಲು ಮುಂಜಾನೆ ಆರು ಗಂಟೆಗೆ ಸಾವಿರಾರು ಜನರು ಬರುತ್ತಿದ್ದರು. 2008, 2010, 2018 ರಲ್ಲಿ ಮೂರು ಬಾರಿ ಕಲಬುರಗಿ ನಗರದಲ್ಲಿ ಪ್ರವಚನ ನೀಡಿದ್ದ ಸಿದ್ದೇಶ್ವರ ಶ್ರೀಗಳು, ಜಿಲ್ಲೆಯ ಅಫಜಲಪುರ, ಶಹಬಾದ್, ಜೇವರ್ಗಿ, ಯಡ್ರಾಮಿಯಲ್ಲಿ ಕೂಡಾ ಪ್ರವಚನ ನೀಡಿದ್ದರು. ಪ್ರತಿ ಬಾರಿಯೂ ನಡೆದ ಪ್ರವಚನಗಳು ಒಂದು ತಿಂಗಳ ಕಾಲ ನಡೆದಿದ್ದವು.

ಅನಾರೋಗ್ಯದಲ್ಲೂ ವೀಲ್ ಚೇರ್​ನಲ್ಲಿ ಬಂದು ಕಲಬುರಗಿ ಭಕ್ತರಿಗೆ ದರ್ಶನ ನೀಡಿದ್ದ ಶ್ರೀಗಳು

ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಹದಗೆಟ್ಟಾಗ, ಅವರ ದರ್ಶನ ಮಾಡಲು ನಾಲ್ಕು ದಿನಗಳ ಹಿಂದೆ ಕಲಬುರಗಿಯಿಂದ ಅನೇಕ ಭಕ್ತರು ಹೋಗಿದ್ದರು. ಆದರೆ ಅವರ ದರ್ಶನಕ್ಕೆ ಅವಕಾಶ ಸಿಕ್ಕಿರಲಿಲ್ಲವಂತೆ. ಆದರೆ ಕಲಬುರಗಿಯಿಂದ ಭಕ್ತರು ಬಂದಿದ್ದಾರೆ ಅನ್ನೋ ಸುದ್ದಿ ಕೇಳಿ ಸಿದ್ದೇಶ್ವರ ಸ್ವಾಮೀಜಿಗಳು ವೀಲ್ ಚೇರ್ ನಲ್ಲಿಯೇ ಬಂದು, ತಮಗೆ ದರ್ಶನ ನೀಡಿದ್ದರು. ಪ್ರಸಾದ ತಗೆದುಕೊಂಡು ಹೋಗುವಂತೆ ಹೇಳಿದ್ದರು ಅಂತ ಕಲಬುರಗಿಯಲ್ಲಿ ಸಿದ್ದೇಶ್ವರ ಸ್ವಾಮೀಜಿಗಳ ಪ್ರವಚನ ಕಾರ್ಯಕ್ರಮದ ಆಯೋಜಕರಾಗಿದ್ದ ಮಲ್ಲಿಕಾರ್ಜುನ ಗರೂರ್ ಅವರು ಸಿದ್ದೇಶ್ವರ ಸ್ವಾಮೀಜಿಯ ಪ್ರೀತಿಯನ್ನು ಸ್ಮರಿಸಿದ್ದಾರೆ.

ಜ್ಞಾನಗಂಗೆಯಲ್ಲಿ ಉಳಿದುಕೊಳ್ಳುತ್ತಿದ್ದ ಸಿದ್ದೇಶ್ವರ ಶ್ರೀಗಳು

ಇನ್ನು ಕಲಬುರಗಿಗೆ ಬಂದಾಗ ಸಿದ್ದೇಶ್ವರ ಶ್ರೀಗಳು ಉಳಿದುಕೊಳ್ಳುತ್ತಿದ್ದದ್ದು ಕಲಬುರಗಿ ನಗರದಲ್ಲಿರುವ ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಕ್ಯಾಂಪಸ್ ನಲ್ಲಿ. ಸ್ವಾಮೀಜಿ ಅವರಿಗೆ ಅನೇಕರು ಐಷಾರಾಮಿ ಬಂಗಲೆಗಳಲ್ಲಿ ಇರುವಂತೆ ಮನವಿ ಮಾಡಿದರೂ ಕೂಡಾ, ಯಾವ ಬಂಗಲೇ, ಐಷಾರಾಮಿ ವ್ಯವಸ್ಥೆ ಇರುವ ಮನೆಯಲ್ಲಿ ಇರಲು ಒಪ್ಪದ ಸಿದ್ದೇಶ್ವರ ಶ್ರೀಗಳು, ಜ್ಞಾನಗಂಗಾ ಕ್ಯಾಂಪಸ್ ನಲ್ಲಿರುವ ಅತಿಥಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದರು.

ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ್ದ ಶ್ರೀಗಳು

ಇನ್ನು 2018 ರಲ್ಲಿ ಕಲಬುರಗಿ ನಗರದಲ್ಲಿ ಸಿದ್ದೇಶ್ವರ ಸ್ವಾಮೀಜಿಯವರ ಪ್ರವಚನ ಕಾರ್ಯಕ್ರಮವಿತ್ತು. ಆಗಲೇ ಕೇಂದ್ರ ಸರ್ಕಾರ ಸಿದ್ದೇಶ್ವರ ಸ್ವಾಮೀಜಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿತ್ತು. ಆದ್ರೆ ಪ್ರಶಸ್ತಿಯನ್ನು ಶ್ರೀಗಳು ವಿನಯದಿಂದಲೇ ತಿರಸ್ಕರಿಸಿದ್ದರು. ನಾನು ಒಬ್ಬ ಸಂತ. ನನಗೇಕೆ ಪ್ರಶಸ್ತಿ, ಕೇಂದ್ರ ಸರ್ಕಾರ ನೀಡಿರುವ ಪ್ರಶಸ್ತಿ ಮೇಲೆ ನನಗೆ ಗೌರವವಿದೆ. ಆದರೆ ನನಗೆ ಪ್ರಶಸ್ತಿ ಬೇಡ ಅಂತ ತಿರಸ್ಕರಿಸಿದ್ದರು.

ಕಲಬುರಗಿ ಜಿಲ್ಲೆಯಲ್ಲಿ ಸಿದ್ದೇಶ್ವರ ಶ್ರೀಗಳ ಅಪಾರ ಭಕ್ತರು ಇದ್ದಾರೆ. ಅವರ ಪ್ರವಚನವನ್ನು ಕೇಳಲು ಇಲ್ಲಿನ ಜನರು ಕಾತುರದಿಂದ ಕಾಯುತ್ತಿದ್ದರು. ಆದರೆ ಸಿದ್ದೇಶ್ವರ ಶ್ರೀಗಳ ನಿಧನ, ಕಲಬುರಗಿ ಜಿಲ್ಲೆಯ ಸಾವಿರಾರು ಭಕ್ತರ ನೋವಿಗೆ ಕಾರಣವಾಗಿದೆ.

ವರದಿ: ಸಂಜಯ್ ಚಿಕ್ಕಮಠ, ಟಿವಿ9 ಕಲಬುರಗಿ

Published On - 11:15 am, Tue, 3 January 23