ಕಲಬುರಗಿ: ಕುಟುಂಬದವರ ಆಕ್ರಂಧನ ಮುಗಿಲು ಮುಟ್ಟಿತ್ತು. ಮತ್ತೊಂದೆಡೆ ವೈದ್ಯರ ವಿರುದ್ದ ಅನೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಖುಷಿ ಪಡುವ ಸಮಯದಲ್ಲಿಯೇ ಸೂತಕದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿತ್ತು. ಇಂತಹದೊಂದು ದೃಶ್ಯಗಳು ಕಂಡುಬಂದಿದ್ದು ನಗರದ ಜಿಲ್ಲಾಸ್ಪತ್ರೆಯ ಮುಂದೆ. ಇನ್ನು ಈ ಜನರ ಆಕ್ರಂಧನ, ಆಕ್ರೋಶಕ್ಕೆ ಕಾರಣವಾಗಿದ್ದು, ಬಾಣಂತಿ ಮಹಿಳೆಯ ಸಾವು. ಹೌದು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಗಾಂವ ಗ್ರಾಮದ ನಿವಾಸಿಯಾಗಿದ್ದ ಇಪ್ಪತ್ತೊಂದು ವರ್ಷದ ಅನಿತಾ ಲಸ್ಕರ್, ಮಾರ್ಚ್ 18 ರಂದು ಹೆರಿಗೆ ನೋವು ಹೆಚ್ಚಾಗಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಳು. ಹೆರಿಗೆ ಸಮಯದಲ್ಲಿ ಸ್ವಲ್ಪ ತೊಂದರೆ ಕೂಡ ಆಗಿತ್ತಂತೆ. ಆಗ ಕುಟುಬಂದವರು ತಾಯಿಯ ಆರೋಗ್ಯದ ದೃಷ್ಟಿಯಿಂದ ಸಿಜೇರಿಯನ್ ಹೆರಿಗೆ ಮಾಡಿಸಿ ಎಂದು ಹೇಳಿದ್ದರಂತೆ. ಆದರೆ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಹೆರಿಗೆ ಮಾಡಿಸುವ ಬದಲು ನರ್ಸ್ಗಳಿಂದಲೇ ಹೆರಿಗೆ ಮಾಡಿಸಿದ್ದರಂತೆ.
ಸಹಜ ಹೆರಿಗೆ ಮಾಡುತ್ತೇವೆ ಎಂದು ಹೇಳಿದ್ದ ನರ್ಸ್ಗಳು ಸಹಜ ಹೆರಿಗೆ ಮಾಡಲು ಸಾಧ್ಯವಾಗದೇ ಇದ್ದಾಗ ಗುಪ್ತಾಂಗದ ಮೇಲೆ ಸ್ವಲ್ಪ ಚರ್ಮವನ್ನು ಕಟ್ ಮಾಡಿ, ನಂತರ ಸಹಜ ಹೆರಿಗೆ ಮಾಡಿಸಿದ್ದರಂತೆ. ಬಳಿಕ ಅನಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಮಾರ್ಚ್ 22 ರವರಗೆ ಆಸ್ಪತ್ರೆಯಲ್ಲಿಯೇ ಇದ್ದ ಅನಿತಾಳನ್ನು ಆಸ್ಪತ್ರೆಯವರು ಡಿಸ್ಚ್ಯಾರ್ಜ್ ಮಾಡಿದ್ದರಂತೆ. ಆಗ ಅನಿತಾಳಿಗೆ ಸ್ವಲ್ಪ ಜ್ವರವಿತ್ತು. ಆಗ ಇನ್ನು ಸ್ವಲ್ಪ ದಿನ ಇಲ್ಲಿಯೇ ಇರ್ತೇವೆ ಎಂದು ಹೇಳಿದರೂ ಕೂಡ ಕೇಳದೆ ವೈದ್ಯರು ಡಿಸ್ಚ್ಯಾರ್ಜ್ ಮಾಡಿ ಕಳುಹಿಸಿದ್ದರಂತೆ. ಹೀಗಾಗಿ ಅನಿತಾ ಮನೆಗೆ ಹೋಗಿದ್ದು, ಆದರೆ ಮನೆಗೆ ಹೋದ ಮೇಲೆ ಜ್ವರ ಹೆಚ್ಚಾಗಿತ್ತಂತೆ. ಹೀಗಾಗಿ ಮತ್ತೆ ಅನಿತಾಳನ್ನು ಕುಟುಂಬದವರು ಮಾರ್ಚ್ 26 ರಂದು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ನಿನ್ನೆ(ಮಾ.28) ಸಂಜೆ ಅನಿತಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಮಗು ಆರೋಗ್ಯದಿಂದ ಇದ್ದು, ಮೃತಳ ಸಾವಿಗೆ ಆಸ್ಪತ್ರೆಯವರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಇದನ್ನೂ ಓದಿ:ಚಾಮರಾಜನಗರ: ಮಡಹಳ್ಳಿ ಬಿಳಿಕಲ್ಲು ಗುಡ್ಡ ಕುಸಿತ ಪ್ರಕರಣ; ಒಂದು ವರ್ಷದ ಬಳಿಕ ಆರೋಪಿಗಳ ಬಂಧನ
ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡ ಬಾಣಂತಿ
ನುರಿತ ಪ್ರಸೂತಿ ವೈದ್ಯರು ಹೆರಿಗೆ ಮಾಡಬೇಕು. ಆದರೆ ನರ್ಸ್ಗಳಿಂದ ಹೆರಿಗೆ ಮಾಡಿಸಿದ್ದಾರೆ. ಇನ್ನು ಸಹಜ ಹೆರಿಗೆ ಎಂದು ಹೇಳಿದ್ರು ಕೂಡ ಗುಪ್ತಾಂಗದ ಮೇಲೆ ಚರ್ಮ್ ಕಟ್ ಮಾಡಿ ಇಪ್ಪತ್ತು ಹೊಲಿಗೆ ಹಾಕಿದ್ದಾರೆ. ನಂತರ ಜ್ವರವಿದ್ದರೂ ಕೂಡ ಒತ್ತಾಯಪೂರ್ವಕವಾಗಿ ಡಿಸ್ಚ್ಯಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯವೇ ಅನಿತಾಳ ಸಾವಿಗೆ ಕಾರಣ ಅಂತ ಆರೋಪಿಸಿದ್ದಾರೆ. ಆದರೆ ಕುಟುಂಬದವರ ಆರೋಪಗಳನ್ನು ವೈದ್ಯರು ಅಲ್ಲಗಳೆಯುತ್ತಿದ್ದಾರೆ. ಯಾವುದೇ ನಿರ್ಲಕ್ಷ್ಯವಾಗಿಲ್ಲ. ಜೊತೆಗೆ ಅನಿತಾಳಿಗೆ ಮೊದಲ ಹೆರಿಗೆ ಆಗಿದ್ದರಿಂದ ಕೂಸು ಸರಳವಾಗಿ ಹೊರಗೆ ಬರಲಿ ಎನ್ನುವ ಉದ್ದೇಶದಿಂದ ಸ್ವಲ್ಪ ಚರ್ಮವನ್ನು ಕಟ್ ಮಾಡಿ, ಎಪಿಸೋಟಮಿ ಮಾಡಲಾಗಿತ್ತು. ಆದರೆ ಮನೆಗೆ ಹೋದ ನಂತರ ಹೊಲಿಗೆ ಹಾಕಿದ ಜಾಗದಲ್ಲಿ ನಂಜು ಆಗಿದೆ. ಸರಿಯಾಗಿ ಆರೈಕೆಯಾಗದೇ ಇರೋದರಿಂದ ನಂಜಾಗಿದ್ದು, ಮತ್ತು ತೀರ್ವ ಜ್ವರದಿಂದ ಬಾಣಂತಿ ಸತ್ತಿದ್ದಾಳೆ ಎಂದು ಹೇಳುತ್ತಿದ್ದಾರೆ.
ಇನ್ನು ಅನಿತಾಳ ಸಾವಿಗೆ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬದವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಪ್ಪಿತಸ್ಥ ನರ್ಸ್ಗಳು, ವೈದ್ಯರ ವಿರುದ್ದ ಕ್ರಮವಾಗಬೇಕು. ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಅನಿತಾಳ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಾ? ಅಥವಾ ಬೇರೆ ಕಾರಣಗಳು ಇವೆಯಾ ಎನ್ನುವುದು ತನಿಖೆ ನಂತರವೇ ಗೊತ್ತಾಗಲಿದೆ.
ವರದಿ: ಸಂಜಯ್ ಟಿವಿ9 ಕಲಬುರಗಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:07 am, Fri, 31 March 23