ಸೇನಾ ಟ್ರಕ್ ಕಮರಿಗೆ ಬಿದ್ದು 16 ಮಂದಿ ಯೋಧರು ಸಾವು, ಭಾರತದಲ್ಲಿ 163 ಕೊರೊನಾ ಪ್ರಕರಣಗಳು ಪತ್ತೆ, ಪರಿಷತ್‌ನ ನೂತನ ಉಪಸಭಾಪತಿಯಾಗಿ ಎಂ.ಕೆ.ಪ್ರಾಣೇಶ್ ಆಯ್ಕೆ, BMTC, KSRTC ಬಸ್ಸಿನಲ್ಲಿ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ.
ಸಿಕ್ಕಿಂನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 16 ಮಂದಿ ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಸೇನಾ ಟ್ರಕ್ ಸಿಕ್ಕಿಂನಲ್ಲಿ ಕಮರಿಗೆ ಬಿದ್ದು ಮೂವರು ಅಧಿಕಾರಿಗಳು ಸೇರಿದಂತೆ 16 ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಇದು 3-ವಾಹನದ ಬೆಂಗಾವಲು ಪಡೆಯ ಭಾಗವಾಗಿತ್ತು ಎಂದು ಸೇನೆಯು ಹೇಳಿತು, ಅದು ಬೆಳಿಗ್ಗೆ ಚಟೆನ್‌ನಿಂದ ಥಾಂಗು ಕಡೆಗೆ ಚಲಿಸಿತು. ಝೆಮಾ ಮಾರ್ಗದಲ್ಲಿ, ಟ್ರಕ್ ತೀಕ್ಷ್ಣವಾದ ತಿರುವಿನಲ್ಲಿ ಚಲಿಸುತ್ತಿದ್ದಾಗ ಕಡಿದಾದ ಇಳಿಜಾರಿನ ಕೆಳಗೆ ಜಾರಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 163 ಹೊಸ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಚೇತರಿಕೆ ಪ್ರಮಾಣ ಶೇ.98.80ರಷ್ಟಿದೆ. ಇದುವರೆಗೆ ಒಟ್ಟು ಚೇತರಿಸಿಕೊಂಡವರು 4,41,42,608 ಮಂದಿ ಇದ್ದಾರೆ. 3,380 ಸಕ್ರಿಯ ಪ್ರಕರಣಗಳಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ COVID-19 ಕೇಸ್ಲೋಡ್ನಲ್ಲಿ ಒಟ್ಟು 22 ಪ್ರಕರಣಗಳ ಇಳಿಕೆ ದಾಖಲಾಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಸೋಂಕುಗಳಲ್ಲಿ 0.01 ಪ್ರತಿಶತವನ್ನು ಒಳಗೊಂಡಿವೆ ಎಂದು ಸಚಿವಾಲಯ ತಿಳಿಸಿದೆ.
ಉದಯ್‌ಪುರ ಶಿರಚ್ಛೇದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ 11 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಪ್ರಕರಣದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳು ಕನ್ಹಯ್ಯಾ ಲಾಲ್‌ನನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದ್ದಲ್ಲದೆ ಅವರನ್ನು ಪ್ರಮುಖ ಆರೋಪಿಗಳನ್ನು ತೀವ್ರಗಾಮಿಯನ್ನಾಗಿಸಲು ಆಡಿಯೊ ಮತ್ತು ವೀಡಿಯೊಗಳನ್ನು ಒದಗಿಸಿದ್ದರು ಎಂದು ಮೂಲಗಳು ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
ವಿಧಾನಪರಿಷತ್‌ನ ನೂತನ ಉಪಸಭಾಪತಿಯಾಗಿ ಬಿಜೆಪಿಯ ಎಂ.ಕೆ.ಪ್ರಾಣೇಶ್ ಆಯ್ಕೆಯಾಗಿದ್ದಾರೆ. ಇಂದು(ಡಿಸೆಂಬರ್ 23) ನಡೆದ ಉಪಸಭಾಪತಿ ಚುನಾವಣೆಯಲ್ಲಿ ಬಿಜೆಪಿಯ ಎಂ.ಕೆ.ಪ್ರಾಣೇಶ್ 39 ಮತಗಳನ್ನು ಪಡೆದರೆ ಕಾಂಗ್ರೆಸ್‌ನ ಅರವಿಂದ್ ಅರಳಿ 26 ಮತಗಳನ್ನ ಪಡೆದಿದ್ದಾರೆ.
ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ಹಾಗೂ ದೇಶದಲ್ಲೂ ಹೊಸ ರೂಪಾಂತರಿ ವೈರಾಣು ಸೋಂಕು ಪ್ರಕರಣ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ.
ನೆರೆ ರಾಷ್ಟ್ರಗಳಲ್ಲಿ ಮಾಹಾಮಾರಿ ಕೊರೊನಾ ನರ್ತನ ಹೆಚ್ಚಾಗಿದ್ದು ರಾಜ್ಯದಲ್ಲೂ ಕೊರೊನಾ ಆತಂಕ ಹುಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಸಿಎಂ ಬೊಮ್ಮಾಯಿ ಸಭೆ ನಡೆಸಿ ಚರ್ಚೆಗಳನ್ನು ಮಾಡುತ್ತಿದ್ದಾರೆ. ಆದ್ರೆ ಒಂದು ಕಡೆ ಜನರಿಗೆ ಬೂಸ್ಟರ್ ಡೋಸ್ ನೀಡಲು ಕೋವಿಶಿಲ್ಡ್ ಲಸಿಕೆ ಕೊರೆತೆಯಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಮತ್ತೊಂದೆಡೆ ನಮ್ಮಲ್ಲಿ ಲಸಿಕೆ ಸ್ಟಾಕ್ ಇದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಡಿಜಿಟಲ್ ಬ್ಯಾಂಕಿಂಗ್ ಉಪಕ್ರಮಗಳ ಇತ್ತೀಚಿನ ಒಂದು ಭಾಗ ವಾಟ್ಸ್ಆ್ಯಪ್ ಬ್ಯಾಂಕಿಂಗ್. ಡಿಜಿಟಲ್ ಬ್ಯಾಂಕಿಂಗ್ನಿಂದಾಗಿ ಎಲ್ಲ ವಯಸ್ಸಿನ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ಪಡೆಯವುದು ಬಹಳ ಸುಲಭ ಮತ್ತು ಸರಳವಾಗಿದೆ. ನೀವು ಎಸ್ಬಿಐ, ಎಚ್ಡಿಎಫ್ಸಿ, ಐಸಿಐಸಿಐ, ಬ್ಯಾಂಕ್ ಆಫ್ ಬರೋಡ, ಆ್ಯಕ್ಸಿಸ್ ಬ್ಯಾಂಕ್ ಇವುಗಳ ಗ್ರಾಹಕರಾಗಿದ್ದರೆ ವಾಟ್ಸ್ಆ್ಯಪ್ ಸೇವೆಗಳಿಗೆ ಹೇಗೆ ನೋಂದಾಯಿಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ. (ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ತನ್ನ ಪ್ರೀತಿಯನ್ನು ನಿರಾಕರಿಸಿ ಬೇರೊಬ್ಬನೊಂದಿಗೆ ನಿಶ್ಚಿತಾರ್ಥಕ್ಕೆ ತಯಾರಿ ನಡೆಸುತ್ತಿದ್ದ ಯುವತಿಯನ್ನು ಪಾಗಲ್ ಪ್ರೇಮಿಯೊಬ್ಬ ದಾವಣಗರೆಯಲ್ಲಿ ನಡು ರಸ್ತೆಯಲ್ಲಿ ಕತ್ತು ಸೀಳಿ ಕೊಲೆ ಮಾಡಿದ ಘಟನೆ ಜನರ ಮನಸ್ಸಿನಿಂದ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಘಟನೆ ಮರುಕಳಿಸಿದೆ. ಯುವಕನೊಬ್ಬ ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಕತ್ತುಕೊಯ್ದು ಬಳಿಕ ತಾನೂ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಉಪ್ಪಾರಹಳ್ಳಿಯಲ್ಲಿ ನಡೆದಿದೆ.
ಪೊಲೀಸ್ ಸಿಬ್ಬಂದಿ ಮೇಲೆರಗಿದ ಗಾಂಜಾ ಮತ್ತಿನಲ್ಲಿದ್ದ ಗ್ಯಾಂಗ್ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್- ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರಿನ ನೀಲಗಿರಿ ತೋಪಿನಲ್ಲಿ ನಡೆದಿದೆ. ಗಾಂಜಾ ಮತ್ತಿನಲ್ಲಿ ನಡು ರಸ್ತೆಯಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದ ಗ್ಯಾಂಗ್ಗೆ ಪೋಲೀಸ್ ಸಿಬ್ಬಂದಿ ರಂಗನಾಥ್ ಎಂಬವರು ಬುದ್ಧಿವಾದ ಹೇಳಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಗ್ಯಾಂಗ್, ರಂಗನಾಥ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:14 pm, Fri, 23 December 22