ಪೌಡರ್ ರೂಪದಲ್ಲಿ ಸಿಗುತ್ತಿದೆ ತಾಯಿಯ ಎದೆಹಾಲು, ತೆಲಂಗಾಣ ಶಾಸಕರ ಖರೀದಿಗೆ ಬಿಜೆಪಿ ಯತ್ನಿಸಿದೆ. ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪ ಕಮಲ್ ದಹಾಲ್ ಪ್ರಚಂಡ ನೇಮಕಗೊಂಡಿದ್ದಾರೆ.
ಹೊಸ ವರ್ಷಾಚರಣೆಗೆ ರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ಬಾರ್, ಪಬ್ ಹಾಗೂ ಹೊಟೇಲ್ಗಳಲ್ಲಿ ಗ್ರಾಹಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ 2 ಡೋಸ್ ಲಸಿಕೆಯನ್ನು ಪಡೆದಿರಬೇಕು ಎಂದು ಕಂದಾಯ ಸಚಿವ ಆರ್. ಅಶೋಕ ಹೇಳಿದ್ದಾರೆ. ಎಷ್ಟು ಟೇಬಲ್ ಇದೆಯೋ ಅಷ್ಟು ಚೇರ್ಗೆ ಮಾತ್ರ ಅನುಮತಿ ನೀಡಲಾಗಿದೆ. ರಸ್ತೆಗಳಲ್ಲಿ ಸಂಭ್ರಮಾಚರಣೆ ಮಾಡುವವರು ಕೂಡ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ನಗರಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದರು.
ಮಂಗಳೂರಿನ ಕಾಟಿಪಳ್ಳದಲ್ಲಿ ನಡೆದ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿಕೆ ನೀಡಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ವಶಕ್ಕೆ ಪಡೆದ ಮೂವರ ಪೈಕಿ ಇಬ್ಬರು ಕೃತ್ಯದಲ್ಲಿ ಭಾಗಿಯಾಗಿದ್ದು, ಒಬ್ಬ ಬೈಕ್ನಲ್ಲಿ ಕರೆತಂದು ಇಬ್ಬರನ್ನು ಡ್ರಾಪ್ ಮಾಡಿದ್ದ. ಕೊಲೆಗೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದರು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಸೋಮವಾರ) ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. 63 ವರ್ಷದ ನಿರ್ಮಲಾ ಸೀತಾರಾಮನ್ ಅವರನ್ನು ಏಮ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‌ನಲ್ಲಿ ದಾಖಲಿಸಲಾಗಿದೆ.
ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರನ್ನು ಬಿಜೆಪಿ ಖರೀದಿಸಲು ಯತ್ನ ನಡೆಸಿದೆ ಎಂಬ ಆರೋಪದ ಬಗ್ಗೆ ವಿಚಾರಣೆ ನಡೆಸಿದ ತೆಲಂಗಾಣ ಹೈಕೋರ್ಟ್ ಸೋಮವಾರ ಈ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ ವರ್ಗಾಯಿಸಿದ್ದು, ಕೆ ಚಂದ್ರಶೇಖರ ರಾವ್ ನೇತೃತ್ವದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ. ಈ ತಿಂಗಳ ಆರಂಭದಲ್ಲಿ ಶಾಸಕರನ್ನು ಖರೀದಿಸಲು ಯತ್ನ ನಡೆದಿದೆ ಎಂಬ ಆರೋಪದ ತನಿಖೆಗಾಗಿ ರಚಿಸಿದ್ದ ಏಳು ಸದಸ್ಯರ ಎಸ್‌ಐಟಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ.
ತಾಯಿಯ ಎದೆಹಾಲು ಮಕ್ಕಳಿಗೆ ಅಮೃತ. ಹೀಗಿರುವಾಗ ಎದೆಹಾಲು ಚಿಕ್ಕ ಬಾಟಲಿ, ಪ್ಯಾಕೆಟ್ಗಳಲ್ಲಿ ಸಿಕ್ಕಿದರೆ? ಹೌದು, ಎದೆಹಾಲು ಹೀಗೆ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ. ಇದನ್ನು ಫ್ರೀಜರ್ನಲ್ಲಿಡುವ ಅಗತ್ಯವೇ ಇಲ್ಲ. ಇತ್ತೀಚೆಗೆ ಭಾರತದ ಚೈಲ್ಡ್ ಕೇರ್ ಇಂಡಸ್ಟ್ರಿಗೆ ಹೊಸತಾಗಿ ಕಾಲಿಟ್ಟ ಉತ್ಪನ್ನವೇ ಅಮ್ಮನ ಎದೆ ಹಾಲು. ದೇಶದಲ್ಲಿ ಇದರ ಮಾರುಕಟ್ಟೆ ಬೆಳೆಯುತ್ತಿದೆ. ಆದರೆ ಇದನ್ನು ಯಾವ ರೀತಿ ವರ್ಗೀಕರಿಸಲಾಗಿದೆ ಮತ್ತು ನಿಯಂತ್ರಿಸಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ.
ಮಾಜಿ ಮಾವೋವಾದಿ ನಾಯಕ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ನೇಪಾಳದ ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಪ್ರಚಂಡ ಅವರನ್ನು ಭಾನುವಾರ ಹೊಸ ಪ್ರಧಾನ ಮಂತ್ರಿಯಾಗಿ ನೇಮಕ ಮಾಡಿದ್ದರು. ಶೀತಲ್ ನಿವಾಸದಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಅಧ್ಯಕ್ಷೆ ಭಂಡಾರಿ ಅವರು 68 ವರ್ಷದ ಪ್ರಚಂಡ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ಗೂಗಲ್ ಸಿಇಒ ಸುಂದರ್ ಪಿಚೈ , ಬಾಲಿವುಡ್ ನಟ ಸಲ್ಮಾನ್ ಖಾನ್ , ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ 40 ಕೋಟಿ ಟ್ವಿಟರ್ ಬಳಕೆದಾರರ ವೈಯಕ್ತಿಕ ದತ್ತಾಂಶ ಸೋರಿಕೆಯಾಗಿದೆ. ಇದು ಡಾರ್ಕ್ವೆಬ್ನಲ್ಲಿ ಮಾರಾಟಕ್ಕಿದೆ ಎಂದು ಇಸ್ರೇಲ್ನ ಸೈಬರ್ ಗುಪ್ತಚರ ಕಂಪನಿ ಹಡ್ಸನ್ ರಾಕ್ ವರದಿ ತಿಳಿಸಿದೆ.
ಹಿಂದಿ ಕಿರುತೆರೆಯ ಖ್ಯಾತ ನಟಿ ತುನಿಶಾ ಶರ್ಮಾ ಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ಅವರ ಮಾಜಿ ಪ್ರಿಯಕರ ಶೀಜಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಶೀಜಾನ್ ಖಾನ್ ವಿಚಾರಣೆ ವೇಳೆ ಬ್ರೇಕಪ್ಗೆ ಕಾರಣವೇನೆಂಬುದನ್ನು ಪೊಲೀಸರಿಗೆ ತಿಳಿಸಿದ್ದಾರೆ. ದೆಹಲಿಯ ಶ್ರದ್ಧಾ ವಾಕರ್ ಅವರನ್ನು ಅಫ್ತಾಬ್ ಪೂನಾವಾಲ ಭೀಕರವಾಗಿ ಕೊಲೆ ಮಾಡಿದ ಸುದ್ದಿಯಿಂದ ಶೀಜಾನ್ ಖಾನ್ ವಿಚಲಿತರಾದರು. ಶ್ರದ್ಧಾ ವಾಕರ್ ಮತ್ತು ಅಫ್ತಾಬ್ ಪೂನಾವಾಲಾ ರೀತಿಯೇ ಶೀಜಾನ್ ಖಾನ್ ಮತ್ತು ತುನಿಶಾ ಶರ್ಮಾ ಅವರು ಕೂಡ ಬೇರೆ ಬೇರೆ ಧರ್ಮಕ್ಕೆ ಸೇರಿದವರಾದ್ದರಿಂದ ಬ್ರೇಕಪ್ ಮಾಡಿಕೊಳ್ಳುವುದೇ ಒಳಿತು ಎಂಬ ನಿರ್ಧಾರವನ್ನು ಶೀಜಾನ್ ತೆಗೆದುಕೊಂಡರು. ಇಬ್ಬರ ನಡುವೆ ವಯಸ್ಸಿನ ಅಂತರ ಇದ್ದಿದ್ದು ಕೂಡ ಬ್ರೇಕಪ್ಗೆ ಕಾರಣ ಆಗಿತ್ತು.
ಜನವರಿ ತಿಂಗಳಲ್ಲಿ ಬ್ಯಾಂಕ್ಗಳಿಗೆ 11 ದಿನ ರಜೆ ಇರಲಿದೆ. ಇದರಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಸೇರಿದೆ. ಕೆಲವೊಂದು ಹಬ್ಬಗಳ ರಜೆ ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಅಂಥ ಸಂದರ್ಭದಲ್ಲಿ ದೇಶದ ಎಲ್ಲ ಬ್ಯಾಂಕ್ಗಳಿಗೂ ರಜೆ ಇರುವುದಿಲ್ಲ (ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ)
ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೊಕಾನ್ ಗ್ರೂಪ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್ ಧೂತ್ ಅವರನ್ನು ಸಿಬಿಐ ಸೋಮವಾರ ಬಂಧಿಸಿದೆ. ಐಸಿಐಸಿ ಬ್ಯಾಂಕ್ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೆಶಕಿ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಅವರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಧೂತ್ ಬಂಧನವಾಗಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:46 pm, Mon, 26 December 22