Bidar: ಭಾಲ್ಕಿಯಲ್ಲಿ ಕಾಶ್ಮೀರ್ ಆ್ಯಪಲ್ ಬಾರೆ ಹಣ್ಣು ಬೆಳೆದು ಸೈ ಎನಿಸಿಕೊಂಡ ರೈತ
ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ಬಾರೆ ಹಣ್ಣನ್ನ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಯಲಾಗಿದೆ. ಕಳೆದೊಂದು ದಶಕದಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಇವರು ಜಿಲ್ಲೆ ಹಾಗೂ ರಾಜ್ಯ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ.
ಆ ಜಿಲ್ಲೆಯ ರೈತರು ಒಂದಿಲ್ಲೊಂದು ಸಂಕಷ್ಟಕ್ಕೆ ಸಿಲುಕುತ್ತಲೆ ಇರುತ್ತಾರೆ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಹೇಳತೀರದು. ಜೊತೆಗೆ ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಒಡ್ಡುವ ಇಲ್ಲಿನ ರೈತರ ಗೋಳು ಮಾತ್ರ ಯಾರಿಗೂ ಕೇಳಿಸೋದೆ ಇಲ್ಲ. ಆದ್ರೆ ಇಲ್ಲೊಬ್ಬ ರೈತ (Farmer) ಇಂಥಾ ಹತ್ತಾರು ಸಮಸ್ಯೆಗಳ ನಡುವೆ ಕಾಶ್ಮೀರ್ ಆ್ಯಪಲ್ ಬಾರೆ ಹಣ್ಣು (Kashmir Apple Ber Fruit) ಬೆಳೆಯುವುದರ ಮೂಲಕ ಸೈ ಎನಿಸಿಕೊಂಡಿದ್ದಾರೆ. (success story).
ಬರಡು ಭೂಮಿಯಲ್ಲಿ ಕೃಷಿ ಚಮತ್ಕಾರ ಮಾಡುತ್ತಾ ಕಾಶ್ಮೀರ್ ಆ್ಯಪಲ್ ಬಾರೆ ಹಣ್ಣು ಬೆಳೆಸಿ ಸೈ ಅನಿಸಿಕೊಂಡಿದ್ದಾರೆ ಆ ರೈತ. ರಾಜ್ಯದಲ್ಲಿ ಮೊದಲ ಕಾಶ್ಮೀರ್ ಆ್ಯಪಲ್ ಬಾರಿ ಹಣ್ಣು ಬೆಳದ ರೈತ ಇವರೇ… ಬರದ ನಾಡಿನಲ್ಲಿ ಸಮೃದ್ದವಾಗಿ ಬೆಳೆದಿದೆ ಭಾರೀ ಹಣ್ಣು. ಇದಕ್ಕೆ ರೈತನ ಕೈ ಹಿಡಿದಿರುವುದು ಹನಿ ನೀರಾವರಿ ಪದ್ದತಿ! ಅತೀವೃಷ್ಠಿ-ಅನಾವೃಷ್ಠಿಗೆ ಸೆಡ್ಡು ಹೊಡೆದು ಹೊಲದಲ್ಲಿ ಇವರು ಬೆಳೆಯುತ್ತಿದ್ದಾರೆ ಈ ಭಾರಿ ಹಣ್ಣು.
ಹೌದು ಬೀದರ್ (Bidar) ಜಿಲ್ಲೆ ಭಾಲ್ಕಿ ತಾಲೂಕು ಹಿಂದೂಳಿದ ತಾಲೂಕು ಅನ್ನೋ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಭಾಗದಲ್ಲಿ ಪ್ರತಿವರ್ಷವೂ ಮಳೆ ಕಡಿಮೆ, ಜೊತೆಗೆ ಆಗಾದ ಬಿಸಿಲು ಕೂಡಾ ಸಾಕಷ್ಟು ಪ್ರಮಾಣದಲ್ಲಿ ಬಿಳುತ್ತದೆ. ಇನ್ನು ನೀರಿನ ಸಮಸ್ಯೆಯೂ ಕೂಡಾ ಇಲ್ಲಿ ಅತಿ ಹೆಚ್ಚಾಗಿ ಕಂಡು ಬರುತ್ತದೆ. ಇಲ್ಲಿನ ಬಹುತೇಕ ರೈತರು ಮಳೆಯಾಶ್ರಿತ ಕೃಷಿಯಿಂದಲೇ ಬೆಳೆ ಬೆಳೆದು ತಮ್ಮ ಬದುಕಿನ ಬಂಡಿಯನ್ನ ಸಾಗಿಸುತ್ತಾರೆ.
ಈ ಭಾಗದಲ್ಲಿ ಎಲ್ಲಿಯೇ ಬಾವಿ, ಬೋರ್ ವೆಲ್ ಕೊರೆಸಿದರೂ ನೀರು ಬರುವುದು ಅಪರೂಪ. ಬಾವಿ ಬೋರವೆಲ್ ನಲ್ಲಿ ನೀರು ಬಂದರೂ ಅದು ಸ್ವಲ್ಪಮಟ್ಟಿನ ನೀರು ಬರುತ್ತದೆ ಅಷ್ಟೇ. ಅದರಲ್ಲಿಯೇ ಕೆಲವು ರೈತರು ಹನಿ ನೀರಾವರಿ ಪದ್ದತಿಯನ್ನ ಅಳವಡಿಸಿಕೊಂಡು ಬೆಳೆಯನ್ನ ಬೆಳೆದು ಉಪಜೀವನ ಸಾಗಿಸುತ್ತಾರೆ. ಇಂತಹ ಹತ್ತಾರು ಸಮಸ್ಯೆಯ ನಡುವೆಯೂ ಇಲ್ಲೊಬ್ಬ ರೈತ ತನ್ನ ಹೊಲದಲ್ಲಿ ಬಂಗಾರದ ಬೆಳೆಯನ್ನ ಬೆಳೆಯುವುದರ ಮೂಲಕ ತನ್ನ ಕುಟುಂಬವನ್ನ ಸಾಗಿಸುತ್ತಿದ್ದಾರೆ.
Also read:
ಕನ್ನಡಿಯಲ್ಲಿ ಹಿಂಬದಿ ಚಕ್ರ ಸಡಿಲಗೊಂಡಿರುವುದನ್ನ ನೋಡಿದ KSRTC ಬಸ್ ಚಾಲಕ, ಮುಂದೇನು ಮಾಡಿದರು ನೋಡಿ!
10 ಎಕರೆಯಲ್ಲಿ ಹತ್ತಾರು ವಿಧದ ಬೆಳೆಗಳನ್ನ ಬೆಳೆಯುವುದರ ಮೂಲಕ ತಾಲೂಕಿನಲ್ಲಿಯೇ ಪ್ರಗತಿಪರ ರೈತನಾಗಿ ಗುರುತಿಸಿಕೊಂಡಿದ್ದು ತನ್ನ ಕುಟುಂಬವನ್ನ ಸಾಕುತ್ತಿದ್ದಾರೆ. ರಾಜ್ಯದಲ್ಲಿಯೇ ಮೊದಲನೆಯದಾಗಿ, ವಿಶಿಷ್ಟವಾದ ಭಾರೀ ಗಿಡವನ್ನ ನೆಟ್ಟು ಅದರಿಂದ ಲಕ್ಷಾಂತರ ರೂಪಾಯಿ ಹಣವನ್ನ ಗಳಿಸುವುದು ಹೇಗೆ ಎಂಬುದನ್ನ ಈ ರೈತ ತೋರಿಸಿಕೊಟ್ಟಿದ್ದಾರೆ.
ತಮ್ಮ ಎರಡು ಎಕರೆ ಜಮೀನಿನಲ್ಲಿ ಸುಮಾರು 8 ನೂರು ಕಾಶ್ಮೀರ್ ಆ್ಯಪಲ್ ಬಾರಿ ಹಣ್ಣು ಸಸಿಗಳನ್ನ ಸಿಕಂದ್ರಾಬಾದ್ ನಿಂದ ತಂದು ತಮ್ಮ ಹೊಲದಲ್ಲಿ ನಾಟಿ ಮಾಡಿದ್ದಾರೆ. ಪ್ರಾಯೋಗಿಕವಾಗಿ 8 ನೂರು ಸಸಿಗಳನ್ನ ತಂದು ತಮ್ಮ ಹೊಲದಲ್ಲಿ ನಾಟಿ ಮಾಡಿದ್ದು ನಾಟಿ ಮಾಡಿದ ಎಂಟು ತಿಂಗಳಲ್ಲಿ ಫಸಲು ಕೊಡಲು ಆರಂಭಿಸಿದೆ. ಹೆಚ್ಚಿನ ಆದಾಯ ಗಳಿಸುವ ನೀರಿಕ್ಷೆಯನ್ನು ಇಟ್ಟುಕೊಂಡಿದ್ದಾರೆ ರೈತ ಆರ್.ಎಸ್. ಬಿರಾದಾರ್
ರೈತ ಬಿರಾದಾರ್ ತಮ್ಮ ಹೊಲದಲ್ಲಿ ಬೇರೆ ಬೇರೆ ಬೆಳೆಗಳನ್ನೂ ಬೆಳೆಯುತ್ತಿದ್ದು ಅದರಿಂದ ಆದಾಯ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಹೀಗಾಗಿ ಏನಾದರೂ ಹೊಸದನ್ನ ಬೆಳೆಸಬೇಕು ಅಂದುಕೊಂಡು ಕಾಶ್ಮೀರ್ ಆ್ಯಪಲ್ ಬಾರಿ ಹಣ್ಣು ಬೆಳೆಸಿದ್ದಾರೆ. ಈಗ ನಾಟಿ ಮಾಡಿ ಎಂಟು ತಿಂಗಳಲ್ಲಿ ಇಳುವರಿ ಆರಂಭವಾಗಿದೆ. ಆದರೆ ಇಳುವರಿ ಉತ್ತಮ ರೀತಿಯಿಂದ ಬಂದರೂ ಕೂಡಾ ಅದನ್ನ ಮಾರಾಟ ಮಾಡುತ್ತಿಲ್ಲ. ಮೊದಲ ಬೆಳೆಯನ್ನ ಬೀಗರು, ರೈತರಿಗೆ, ಹೊಲಕ್ಕೆ ಬಂದವರಿಗೆ ಹಣ್ಣಿನ ರುಚಿ ನೋಡಲು ಕೊಡುತ್ತಿದ್ದಾರೆ.
ಮುಂದಿನ ವರ್ಷದಿಂದ ಇಲ್ಲಿ ಬೆಳೆದ ಹಣ್ಣನ್ನ ಮಾರಾಟ ಮಾಡುತ್ತೇವೆಂದು ಹೇಳುತ್ತಿದ್ದಾರೆ. ಒಂದೊಂದು ಬಾರೆ ಹಣ್ಣೂ ಗಾತ್ರದಲ್ಲಿ ಆ್ಯಪಲ್ ಹಾಗೇ ಕಾಣುತ್ತದೆ. ಜೊತೆಗೆ ತಿನ್ನಲು ಕೂಡಾ ರುಚಿಯಾಗಿದ್ದು ಜನರು ಬಾಯಿ ಚಪ್ಪರಿಸಿಕೊಂಡು ಹಣ್ಣನ್ನ ತಿನ್ನುತ್ತಾರೆ. ಬಿಸಿಲಿನಲ್ಲೂ ಘಮ ಘಮ ಅಂತಾ ವಾಸನೆ ಬರುವ ಹಣ್ಣಿನ ಗಿಡದಲ್ಲಿ ಕಾಯಿ ಜಾಸ್ತಿಯಾಗಿ ಬಾಗಿ ನಿಂತಿರುವ ಗಿಡಗಳನ್ನ ನೋಡಿದರೇ ಈ ರೈತನ ಶ್ರಮವನ್ನು ಎತ್ತಿ ತೋರಿಸುತ್ತದೆ.
ಬಾರೇ ಗಿಡ ನೆಡಬೇಕು ಅಂತಾ ನಿರ್ಧರಿಸಿ 2022 ರಲ್ಲಿ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಮಾಹಿತಿಯಂತೆ ಬಾರೆ ಸಸಿಗಳನ್ನು ತಂದು ನಾಟಿ ಮಾಡಿದ್ದಾರೆ. ಈತ ಬೆಳೆದ ಹಣ್ಣು ಉತ್ತಮ ಗುಣಮಟ್ಟದಿಂದ ಕೂಡಿರುವುದರಿಂದ ವ್ಯಾಪಾರಿಗಳು ಈಗಾಗಲೇ ಇವರ ಬಳಿ ಬಂದು ಮುಂದಿನ ವರ್ಷದಿಂದ ನಾವೇ ಇಡೀ ಹೊಲದಲ್ಲಿ ಬೆಳೆಯುವ ಹಣ್ಣನ್ನ ಖರೀದಿಸಿಕೊಂಡು ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ.
ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ಬಾರೆ ಹಣ್ಣನ್ನ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಯಲಾಗಿದೆ. ಒಮ್ಮೆ ಬಿತ್ತನೆಯ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆ ಬೆಳೆಯುವ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದೊಂದು ದಶಕದಿಂದ ಕೃಷಿ ಕಾಯಕದಲ್ಲಿ ತೊಡಗಿಕೊಂಡಿರುವ ಇವರು ಜಿಲ್ಲೆ ಹಾಗೂ ರಾಜ್ಯ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ.
ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ