Evening News: ದಿನದ ಪ್ರಮುಖ ಸುದ್ದಿಯ ರೌಂಡಪ್; ಪಂಜಾಬ್ ಸಿಎಂ ಮನೆ ಬಳಿ ಬಾಂಬ್ ಪತ್ತೆಯಿಂದ, ಹೊಸ ವರ್ಷದ ಮೊದಲ​ ದಿನವೇ ನಮ್ಮ ಮೆಟ್ರೋಗೆ 1 ಕೋಟಿ ರೂ. ಆದಾಯದವರೆಗೆ

| Updated By: ವಿವೇಕ ಬಿರಾದಾರ

Updated on: Jan 02, 2023 | 7:38 PM

ದೇಶ, ರಾಜ್ಯ, ವಿದೇಶ, ಅಪರಾಧ, ಶೈಕ್ಷಣಿಕ ಮತ್ತು ವಾಣಿಜ್ಯ ಕುರಿತಾದ ಇಂದಿನ (ಜ.2)ರ ಪ್ರಮುಖ ಸುದ್ದಿಗಳು: ಕೇಂದ್ರದ ನೋಟ ಬ್ಯಾನ್​ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ, JDS ಪಕ್ಷಕ್ಕೆ ಸೇರುವ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದರು: ಕುಮಾರಸ್ವಾಮಿ, ಐಸಿಯುನಿಂದ ಖಾಸಗಿ ವಾರ್ಡ್​ಗೆ ರಿಷಬ್ ಪಂತ್ ಶಿಫ್ಟ್ ಒಳಗೊಂಡ ಪ್ರಮುಖ ಸುದ್ದಿಗಳು ಇಲ್ಲಿವೆ ಓದಿ.

Evening News: ದಿನದ ಪ್ರಮುಖ ಸುದ್ದಿಯ ರೌಂಡಪ್; ಪಂಜಾಬ್ ಸಿಎಂ ಮನೆ ಬಳಿ ಬಾಂಬ್ ಪತ್ತೆಯಿಂದ, ಹೊಸ ವರ್ಷದ ಮೊದಲ​ ದಿನವೇ ನಮ್ಮ ಮೆಟ್ರೋಗೆ 1 ಕೋಟಿ ರೂ. ಆದಾಯದವರೆಗೆ
ನಮ್ಮ ಮೆಟ್ರೋ, ಪಂಜಾಬ್‌ ಸಿಎಂ ಭಗವಂತ್‌ ಮಾನ್‌
Follow us on

ದೇಶ, ರಾಜ್ಯ, ವಿದೇಶ, ಅಪರಾಧ, ಶೈಕ್ಷಣಿಕ ಮತ್ತು ವಾಣಿಜ್ಯ ಕುರಿತಾದ ಇಂದಿನ (ಜ.2)ರ ಪ್ರಮುಖ ಸುದ್ದಿಗಳು: ಕೇಂದ್ರದ ನೋಟ ಬ್ಯಾನ್​ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ, JDS ಪಕ್ಷಕ್ಕೆ ಸೇರುವ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದರು, ಐಸಿಯುನಿಂದ ಖಾಸಗಿ ವಾರ್ಡ್​ಗೆ ರಿಷಬ್ ಪಂತ್ ಶಿಫ್ಟ್ ಒಳಗೊಂಡ ಪ್ರಮುಖ ಸುದ್ದಿಗಳು ಇಲ್ಲಿವೆ ಓದಿ.

ಪಂಜಾಬ್ ಸಿಎಂ ನಿವಾಸದ ಬಳಿ ಬಾಂಬ್ ಪತ್ತೆ

ಚಂಡೀಗಢದಲ್ಲಿರುವ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಇಂದು (ಜ.2) ಸ್ಫೋಟಕ ಸಾಧನ ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಪಂಜಾಬ್ ಮತ್ತು ಹರಿಯಾಣ ಸಿಎಂ ಹೌಸ್‌ನ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ರವಾನಿಸಲಾಯಿತು.

ಕೇಂದ್ರದ ನೋಟ ಬ್ಯಾನ್​ ನಿರ್ಧಾರವನ್ನು ಎತ್ತಿ ಹಿಡಿದ ಸುಪ್ರೀಂ

2016ರಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಕೇಂದ್ರದ ನೋಟು ಅಮಾನ್ಯೀಕರಣ ನೀತಿಯನ್ನು ದೃಢಪಡಿಸಿದ ಸುಪ್ರೀಂ ಕೋರ್ಟ್ ನಿರ್ಣಯ ಪ್ರಕ್ರಿಯೆಯಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ 2016 ರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್ ಇಂದು ಬಹುಮತದ ತೀರ್ಪುನ್ನು ನೀಡಿದೆ.

ಜ.30ರಂದು ಶ್ರೀನಗರದಲ್ಲಿ ಭಾರತ್ ಜೋಡೋ ಯಾತ್ರೆ ಮುಕ್ತಾಯ

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜನವರಿ 3 ರಂದು ದೆಹಲಿ ಪ್ರವೇಶಿಸಲಿದೆ. 9 ರಾಜ್ಯ ಮತ್ತು ಒಂದು ಕೇಂದ್ರಾಡಳಿತ ಪ್ರದೇಶವನ್ನು ಕ್ರಮಿಸಿದ ನಂತರ ಜನವರಿ 30ರಂದು ಶ್ರೀನಗರದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ ಮುಕ್ತಾಯಗೊಳ್ಳಲಿದ್ದಾರೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹೇಳಿದ್ದಾರೆ.

ಹೊಸ ವರ್ಷದ ಮೊದಲ​ ದಿನವೇ ನಮ್ಮ ಮೆಟ್ರೋಗೆ 1 ಕೋಟಿ ರೂ. ಆದಾಯ

ನಗರದಲ್ಲಿ ಸುಲಭ ಮತ್ತು ಅತಿ ವೇಗದ ಸಂಚಾರಕ್ಕೆ ನಮ್ಮ ಮೆಟ್ರೋ ಬಹಳಷ್ಟು ಅನುಕೂಲಕರವಾಗಿದೆ. ಪ್ರತಿನಿತ್ಯ ಸಾವಿರಾರು ಜನರು ನಮ್ಮ ಮೆಟ್ರೋವನ್ನು ಅವಲಂಬಿಸಿದ್ದಾರೆ. ಇದೀಗ ನಮ್ಮ ಮೆಟ್ರೋ ಹೊಸ ವರ್ಷಕ್ಕೆ ದಾಖಲೆ ಬರೆದಿದೆ. ಹೌದು ಹೊಸ ವರ್ಷಚಾರಣೆ ದಿನ (ಡಿ.31/2022) ರಂದು ಒಂದೇ ದಿನ 6 ಲಕ್ಷ 50 ಸಾವಿರ ಪ್ರಯಾಣಿಕರು ಸಂಚರಿಸುವ ಮೂಲಕ 1 ಕೋಟಿ, 70 ಲಕ್ಷ ಆದಾಯಗಳಿಸಿದೆ. ಮೆಟ್ರೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಹೆಚ್ಚಿನ ಆದಾಯಗಳಿಸಿದ್ದು ಮತ್ತು ಪ್ರಯಾಣಿಕರು ಸಂಚರಿಸಿದ್ದಾರೆ.

ಪ್ರದೀಪ್ ಆತ್ಮಹತ್ಯೆ ಪ್ರಕರಣ: ತನಿಖೆಗೆ ಸಹಕರಿಸ್ತೇನೆ – ಲಿಂಬಾವಳಿ

ಪ್ರದೀಪ್‌ ಡೆತ್‌ನೋಟ್‌ನಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದಾರೆ. ಪ್ರಕರಣದ ತನಿಖೆಗೆ ನಾನು ಸಂಪೂರ್ಣ ಸಹಕರಿಸುತ್ತೇನೆ. ಇಂತಹ ವಿಚಾರದಲ್ಲಿ ಸಹಾಯ ಮಾಡುವಾಗ ಎಚ್ಚರಿಕೆಯಿಂದ ಇರಿ. ಜನಪ್ರತಿನಿಧಿಗಳಿಗೆ ನಾನು ಸಲಹೆ ನೀಡುತ್ತೇನೆ. ಅನ್ಯಾಯವಾಗಿದೆ ಎಂದು ಯಾರೇ ಬಂದ್ರೂ ಸಹಾಯ ಮಾಡುತ್ತೇನೆ. ಇನ್ನು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಉಳಿದ ಆರೋಪಿಗಳ ಪರಿಚಯ ಕೂಡ ಇದೆ. ನಾನು ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಿಲ್ಲ, ಕೇವಲ ಫೋನ್‌ನಲ್ಲಿ ಚರ್ಚೆ ಮಾಡಿದ್ದೇನೆ. ಸೆಟಲ್ ಮಾಡಿಕೊಳ್ಳಿ ಎಂದು ಒತ್ತಡ ಹಾಕಿದ್ದು ನಿಜ ಎಂದು ಶಾಸಕ ಅರವಿಂದ ಲಿಂಬಾವಳಿ ಹೇಳಿದ್ದಾರೆ.

JDS ಪಕ್ಷಕ್ಕೆ ಸೇರುವ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದರು: ಕುಮಾರಸ್ವಾಮಿ

ಬಿಜೆಪಿಯಲ್ಲಿ ಆದ ನೋವಿನ ಬಗ್ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನನ್ನ ಜೊತೆ ಚರ್ಚೆ ನಡೆಸಿದ್ದರು. ಜೆಡಿಎಸ್ ಪಕ್ಷಕ್ಕೆ ಬರುವ ಬಗ್ಗೆ ಯಡಿಯೂರಪ್ಪ ಮಾತನಾಡಿದ್ದರು. ನೀವು ರಾಜೀನಾಮೆ ಕೊಟ್ಟು ಹೊರಗಡೆ ಬಂದರೆ ಕಷ್ಟ ಆಗುತ್ತೆ. ದುಡುಕಿ ರಾಜೀನಾಮೆ ನೀಡಬೇಡಿ ಎಂದು ನಾನು ಸಲಹೆ ನೀಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಆಸ್ಟ್ರೇಲಿಯಾದ ಆಕಾಶದಲ್ಲಿ 2 ಹೆಲಿಕಾಪ್ಟರ್​​ಗಳ ನಡುವೆ ಡಿಕ್ಕಿ; 4 ಸಾವು

ಆಸ್ಟ್ರೇಲಿಯಾದ ಸಮುದ್ರದ ತೀರದಲ್ಲಿ ಇಂದು (ಸೋಮವಾರ) 2 ಹೆಲಿಕಾಪ್ಟರ್‌ಗಳು ಡಿಕ್ಕಿ ಹೊಡೆದ ಪರಿಣಾಮವಾಗಿ 4 ಜನರು ಸಾವನ್ನಪ್ಪಿದ್ದು, ವಿಮಾನದಲ್ಲಿದ್ದ 3 ಪ್ರಯಾಣಿಕರು ಗಾಯಗೊಂಡಿದ್ದಾರೆ. ಕಡಲ ತೀರದ ಬಳಿ ಎರಡು ಹೆಲಿಕಾಪ್ಟರ್​​ಗಳ ನಡುವೆ ಘರ್ಷಣೆ ಉಂಟಾದ ನಂತರ 1 ಹೆಲಿಕಾಪ್ಟರ್ ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಗಿದೆ.

2022 ಡಿಸೆಂಬರ್​​ನಲ್ಲಿ ಭಾರತದಲ್ಲಿ ನಿರುದ್ಯೋಗ ದರ ಶೇ 8.3ಕ್ಕೆ ಏರಿಕೆ

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿದ ಅಂಕಿಅಂಶಗಳ ಪ್ರಕಾರ ಭಾರತದ ನಿರುದ್ಯೋಗ ದರವು ಡಿಸೆಂಬರ್‌ನಲ್ಲಿ ಶೇಕಡಾ 8.3 ಕ್ಕೆ ಏರಿದ್ದು, ಇದು ದಾಖಲೆಯ ಏರಿಕೆ ಆಗಿದೆ. ನವೆಂಬರ್‌ನಲ್ಲಿ ಇದು ಶೇಕಡಾ 8 ಆಗಿತ್ತು.ನಿರುದ್ಯೋಗ ದರವು ಸೆಪ್ಟೆಂಬರ್‌ನಲ್ಲಿ ಶೇಕಡಾ 6.43 ಮತ್ತು ಆಗಸ್ಟ್‌ನಲ್ಲಿ ಶೇಕಡಾ 8.28 ರಷ್ಟಿತ್ತು ಎಂದು ಅಂಕಿ ಅಂಶಗಳು ಹೇಳಿವೆ. ನಗರದಲ್ಲಿ ನಿರುದ್ಯೋಗ ದರ ಶೇಕಡಾ 10 ರಷ್ಟಿದ್ದರೆ, ಡಿಸೆಂಬರ್‌ನಲ್ಲಿ ಗ್ರಾಮೀಣ ನಿರುದ್ಯೋಗವು ಶೇಕಡಾ 7.5 ರಷ್ಟಿತ್ತು.

ಐಸಿಯುನಿಂದ ಖಾಸಗಿ ವಾರ್ಡ್​ಗೆ ರಿಷಬ್ ಪಂತ್ ಶಿಫ್ಟ್

ಕಳೆದ ಶುಕ್ರವಾರ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆ ಕಾಣುತ್ತಿದೆ. ಕಳೆದ ಮೂರು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂತ್ ಅವರನ್ನು ಐಸಿಯುನಿಂದ ಖಾಸಗಿ ವಾರ್ಡ್​ಗೆ ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

Hombale Films: ಮುಂದಿನ 5 ವರ್ಷಗಳಲ್ಲಿ ಚಿತ್ರರಂಗಕ್ಕೆ 3 ಸಾವಿರ ಕೋಟಿ ರೂ. ಹೂಡಿಕೆ

ವಿಜಯ್ ಕಿರಗಂದೂರು ಅವರ ‘ಹೊಂಬಾಳೆ ಫಿಲ್ಮ್ಸ್​​’ ಕಡೆಯಿಂದ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಲೇ ಇವೆ. ‘ಕೆಜಿಎಫ್​’ ಸರಣಿ ಹಿಟ್ ಆದ ನಂತರದಲ್ಲಿ ಪರಭಾಷೆಯಲ್ಲೂ ವಿಜಯ್ ಕಿರಗಂದೂರು ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೊಸ ವರ್ಷಕ್ಕೆ ಅವರ ಕಡೆಯಿಂದ ಮಹತ್ವದ ಘೋಷಣೆ ಆಗಿದೆ. ಸಿನಿಮಾ ರಂಗಕ್ಕೆ ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಹಲವು ಬಿಗ್ ಬಜೆಟ್ ಚಿತ್ರಗಳು ಈ ನಿರ್ಮಾಣ ಸಂಸ್ಥೆಯಿಂದ ಮೂಡಿ ಬರುವ ಸೂಚನೆ ಸಿಕ್ಕಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Mon, 2 January 23