ಉಡುಪಿ: ಬೆಳಗಾವಿ ಗಡಿಯ ವಿಚಾರಕ್ಕೆ ಬಂದರೆ ತಕ್ಕ ಪಾಠ ಕಲಿಸುತ್ತೇವೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಎಚ್ಚರಿಕೆ ಕೊಟ್ಟಿದ್ದಾರೆ. ಜೊತೆಗೆ, ಕರ್ನಾಟಕದ ಒಂದು ಹಿಡಿ ಮಣ್ಣು ಸಹ ನಿಮಗೆ ಸಿಗುವುದಿಲ್ಲ. ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮಹಾರಾಷ್ಟ್ರ ಚಲೋ ನಡೆಸ್ತೇವೆ. ಲಾಠಿ ಏಟು, ಜೈಲು ನಾವು ನೋಡಿಯಾಗಿದೆ ಎಂದು ಹೇಳಿದರು.
ಇಡೀ ದೇಶದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ನಾವೆಲ್ಲರೂ ರೈತರ ಮಕ್ಕಳೇ. ರೈತರು ಇಲ್ಲದಿದ್ದರೆ ಈ ದೇಶ ಇಲ್ಲ. ರೈತರ ಜೊತೆ ನಾವಿದ್ದೇವೆ. ರೈತರ ಹೋರಾಟಕ್ಕೆ ನೈತಿಕ ಬೆಂಬಲ ನೀಡುತ್ತೇವೆ ಎಂದು ಸಹ ಹೇಳಿದರು.
‘ಬೆಂಗಳೂರು ಏರ್ ಶೋದಲ್ಲಿ ಕನ್ನಡಕ್ಕೆ ಅಪಮಾನವಾಗಿದೆ’
ಬೆಂಗಳೂರು ಏರ್ ಶೋದಲ್ಲಿ ಕನ್ನಡಕ್ಕೆ ಅಪಮಾನವಾಗಿದೆ. ಶಿವಮೊಗ್ಗದಲ್ಲಿ ಅಮಿತ್ ಶಾ ಪಾಲ್ಗೊಂಡ ಕಾರ್ಯಕ್ರಮದಲ್ಲಿ ಕನ್ನಡ ಮಾಯವಾಗಿತ್ತು. ಗಡಿ ಪ್ರದೇಶದ ರಾಜಕಾರಣಿಗಳು ಕನ್ನಡವನ್ನು ಮರೆತಿದ್ದಾರೆ. ಮರಾಠಿ ಭಾಷೆಯಲ್ಲಿ ರಾಜಕಾರಣಿಗಳು ವ್ಯವಹರಿಸುತ್ತಾರೆ. ಗಣ್ಯರು ದೆಹಲಿ, ವಿದೇಶದಿಂದ ಬಂದ್ರೂ ಕನ್ನಡ ಕಡ್ಡಾಯ ಮಾಡ್ಲಿ. ಕನ್ನಡದ ಕೀಳರಿಮೆಯನ್ನು ನಾವು ಸಹಿಸಿಕೊಳ್ಳಲ್ಲ ಎಂದು ಪ್ರವೀಣ್ ಶೆಟ್ಟಿ ತಮ್ಮ ಆಕ್ರೋಶ ಹೊರಹಾಕಿದರು. ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರವನ್ನು ಕೊಡುತ್ತೇವೆ ಎಂದು ಹೇಳಿದರು.
‘ದೇಶದ್ರೋಹದ ಕೇಸ್ ಹಾಕಿ ಬಂಧಿಸಿದ ಘಟನೆ ನಡೆದಿದೆ’
ಕನ್ನಡಕ್ಕಾಗಿ ಹೋರಾಡಿದರೆ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ದೇಶದ್ರೋಹದ ಕೇಸ್ ಹಾಕಿ ಬಂಧಿಸಿದ ಘಟನೆ ನಡೆದಿದೆ. ಕನ್ನಡ ನಿರ್ಲಕ್ಷವಾದರೆ ಮುಖ್ಯಮಂತ್ರಿಗಳು ಕಣ್ಣುಕಟ್ಟಿ ಕುಳಿತುಕೊಳ್ಳಬಾರದು. ಸಚಿವರು ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲೆಯಲ್ಲಿ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಗ್ರಹಿಸಿದರು.
Published On - 7:05 pm, Sat, 6 February 21