ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election) ಹತ್ತಿರವಾಗುತ್ತಿದ್ದು, ಶೀಘ್ರದಲ್ಲೇ ಚುನಾವಣೆ (Election) ದಿನಾಂಕ ಘೋಷಣೆಯಾಗುವ ಮೂಲಕ ನೀತಿ ಸಂಹಿತೆ ಜಾರಿಯಾಗಲಿದೆ. ಇದಕ್ಕೂ ಮುನ್ನವೇ ರಾಜ್ಯದಲ್ಲಿ ಕುರುಡು ಕಾಂಚಾಣ ಕುಣಿಯುತ್ತಿದೆ. ಮತಗಳನ್ನು ಕ್ರೋಢೀಕರಣಕ್ಕೆ ರಾಜಕಾರಣಿಗಳು ಹಗಲು-ರಾತ್ರಿ ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಮತದಾರರಿಗೆ ಸೀರೆ, ಕುಕ್ಕರ್, ಟೀವಿ, ಹಣ ಇತ್ಯಾದಿ ವೈಯಕ್ತಿಕ ಮತ್ತು ಗೃಹ ಬಳಕೆಯನ್ನು ಗಿಫ್ಟ್ ಆಗಿ ನೀಡುತ್ತಿದ್ದಾರೆ. ಎಗ್ಗಿಲ್ಲದೆ ನಡೆಯುತ್ತಿರುವ ಈ ಗಿಫ್ಟ್ ಪಾಲಿಟಿಕ್ಸ್ನನ್ನು ತೆಡಯಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದೆ. ಕೇಂದ್ರ ಚುನಾವಣಾ ಆಯೋಗದ (Election Commission) ಅಧಿಕಾರಿಗಳು ರಾಜ್ಯದ ಎಲ್ಲ ಎಸ್ಪಿಗಳ ಜೊತೆ ಸಭೆ ನಡೆಸಿ ಗಿಫ್ಟ್ ಪಾಲಿಟಿಕ್ಸ್ ತಡೆಯುವಂತೆ ಸೂಚನೆ ನೀಡಿದ್ದರು. ಈ ಹಿನ್ನೆಲೆ ಕಳೆದ 1 ವಾರದಲ್ಲಿ ರಾಜ್ಯದ ಮತದಾರರಿಗೆ ಹಂಚಲು ತಂದಿದ್ದ 10 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ದಾಳಿ ವೇಳೆ ಮತ್ತು ಚೆಕ್ಪೋಸ್ಟ್ಗಳಲ್ಲಿ ಜಪ್ತಿ ಮಾಡಿದ್ದಾರೆ. ಜಪ್ತಿ ವೇಳೆ ಕುಕ್ಕರ್, ಸೀರೆ, ದಿನ ನಿತ್ಯದ ವಸ್ತುಗಳು, ನಗದು, ಚೆಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗದಗ: ಮಾರ್ಚ್ 15 ರಂದು ದಾಖಲೆ ಇಲ್ಲದ ಮುಂಬೈನಿಂದ ಗದಗ ನಗರದಕ್ಕೆ ಸಾಗಿಸುತ್ತಿದ್ದ 1ಕೋಟಿ 75 ಲಕ್ಷ ಮೌಲ್ಯದ 4ಕೆಜಿ ಚಿನ್ನಾಭರಣ ಪತ್ತೆಯಾಗಿದ್ದು, ಇದನ್ನು ಪೊಲೀಸರು ಜಪ್ತಿ ಮಾಡಿದ್ದರು. ಮಾರ್ಚ್ 20ರ ರಾತ್ರಿ ಗದಗ ತಾಲೂಕಿನ ಮುಳಗುಂದ ಚೆಕ್ ಪೋಸ್ಟ್ನಲ್ಲಿದ್ದ ಎಸ್ಪಿ ಬಿಎಸ್ ನೇಮಗೌಡ ನೇತೃತ್ವದ ತಂಡವು ದಾಖಲೆ ಇಲ್ಲದೇ ಸಾಗಿಸುತ್ತಿದ್ದ 24 ಲಕ್ಷ 50 ಸಾವಿರ ನಗದನ್ನು ಜಪ್ತಿ ಮಾಡಿಕೊಡಿತ್ತು.
ಇಂದು (ಮಾ.22) ಲಕ್ಷ್ಮೇಶ್ವರ ಮಾರ್ಗವಾಗಿ, ಬಾಲೆಹೊಸೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿದ್ದ ಕಾರಿನಲ್ಲಿ ದಾಖಲೆ ಇಲ್ಲದ 4.55 ಲಕ್ಷ ಹಣ ಪತ್ತೆಯಾಗಿದೆ. ರಾಮಗೇರಿ ಚೆಕ್ಪೋಸ್ಟ್ ಬಳಿ ಪೊಲೀಸರ ತಪಾಸಣೆ ವೇಳೆ ಪತ್ತೆಯಾಗಿದೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಚಿನ್ನ ಹಾಗೂ ಲಕ್ಷಾಂತರ ರೂಪಾಯಿ ಜಪ್ತಿ ಮಾಡಿದ ಗದಗ ಜಿಲ್ಲಾಡಳಿತ
ಉತ್ತರ ಕನ್ನಡ: ಜಿಲ್ಲೆ ಕಾರವಾರ ತಾಲೂಕಿನ ಹೋಟೆಗಾಳಿ ಗ್ರಾಮ ಸಮೀಪದ ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗೋವಾ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡು, ಮೂವರನ್ನು ಬಂಧಿಸಿದ್ದಾರೆ. ಹೋಟೆಗಾಳಿಯ ಆನಂದ ಮಾಳ್ಸೇಕರ್, ಸತ್ಯವಿಜಯ ಮಾಳ್ಸೇಕರ್, ಮನೋಜ ಕೋಳಂಬಕರ್ ಬಂಧಿತ ಆರೋಪಿಗಳು. ಅಬಕಾರಿ ಉಪಾಧೀಕ್ಷಕ ಬಸವರಾಜ್, ನಿರೀಕ್ಷಕ ದಯಾನಂದ, ಉಪನಿರೀಕ್ಷಕ ಎಂ.ಎಂ.ನಾಯ್ಕ ತಂಡದಿಂದ ದಾಳಿ ನಡೆದಿತ್ತು. ಈ ವೇಳೆ 89.280 ಲೀ ಗೋವಾ ಮದ್ಯ, 305.500 ಲೀ ಗೋವಾ ಪೆನ್ನಿ, 120 ಲೀ ಗೋವಾ ಬಿಯರ್, ಸುಮಾರು 1.88 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ ಮಾಡಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಪ್ರತ್ಯೇಕ 3 ಪ್ರಕರಣಗಳು ದಾಖಲಾಗಿವೆ.
ಬೆಳಗಾವಿ: ಮತದಾರಿಗೆ ಹಂಚಲು ಕೊಂಡೊಯ್ಯುತ್ತಿದ್ದ 16 ಲಕ್ಷ ಮೌಲ್ಯದ ಸೀರೆಗಳನ್ನು ಚಿಕ್ಕೋಡಿ ತಾಲೂಕಿನ ಸದಲಗಾ ದತ್ತವಾಡ ಚೆಕ್ಪೋಸ್ಟ್ ಬಳಿ ಜಪ್ತಿ ಮಾಡಲಾಗಿದೆ. ಚಿಕ್ಕೋಡಿ ತಾಲೂಕಿನ ಸದಲಗಾ, ದತ್ತವಾಡ, ರಾಯಬಾಗ ಕ್ಷೇತ್ರದಲ್ಲಿ ಹಂಚಲು ಸೀರೆಗಳನ್ನು ಕೊಂಡೊಯ್ಯುತ್ತಿದ್ದರು ಎಂದು ತಿಳಿದುಬಂದಿದೆ. ವಾಹನ ಚಾಲಕ, ಕ್ಲೀನರ್ ಮತ್ತು 5 ಸಾವಿರ ಸೀರೆಗಳನ್ನು ವಶಕ್ಕೆ ಪಡೆಯಲಾಗಿದೆ. ಸದಲಗಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಬೆಳಗಾವಿಯಿಂದ ಗೋಕಾಕ್ ತಾಲೂಕಿನ ಅಂಕಲಗಿಗೆ ತೆರಳುತ್ತಿದ್ದ ಕಾರಿನಲ್ಲಿ ದಾಖಲೆ ಇಲ್ಲದ 9 ಲಕ್ಷ ಹಣವನ್ನು ಪೊಲೀಸರು ಬೆಳಗಾವಿ ಹೊರವಲಯದ ಕಣಬರಗಿ ಚೆಕ್ಪೋಸ್ಟ್ನಲ್ಲಿ ವಶಪಡಿಸಿಕೊಂಡಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:05 pm, Wed, 22 March 23