ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಭೂಮಿ ನೀಡುವ ವಿಧೇಯಕ್ಕೆ ಕರ್ನಾಟಕ ವಿಧಾನಸಭೆ ಮಂಗಳವಾರ ಅನುಮೋದನೆ ನೀಡಿತು. ಉತ್ತಮ ಶಿಕ್ಷಣ ನೀಡುವ ಉದ್ದೇಶದಿಂದ ಚಾಣಕ್ಯ ವಿವಿಗೆ ಭೂಮಿ ನೀಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಹೇಳಿದರು.
ಪ್ರತಿಪಕ್ಷ ಕಾಂಗ್ರೆಸ್ನ ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ವಿಧೇಯಕಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ರೈತರಿಂದ ಕೈಗಾರಿಕೆಗೆಂದು ವಶಪಡಿಸಿಕೊಂಡ ಭೂಮಿಯನ್ನು ಹೀಗೆ ಕಡಿಮೆ ದರದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗೆ ನೀಡುವುದು ಕಾನೂನು ಬಾಹಿರ ಎಂದು ರಮೇಶ್ ಕುಮಾರ್ ವಿಶ್ಲೇಷಿಸಿದರು.
ಚರ್ಚೆಯ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಟೊಯೊಟಾ ಕಾರ್ಖಾನೆಗೆ ಜಾಗ ಒದಗಿಸಿದಾಗ ನಾವು ವಿರೋಧಿಸಿದ್ದೆವು. ಅದರೆ ರಾಜ್ಯದ ಅಭಿವೃದ್ಧಿಗೆ ಅನಿವಾರ್ಯ ಎಂದು ನೀವು ಸಮಜಾಯಿಷಿ ಕೊಟ್ಟಿದ್ದಿರಿ. ಮಕ್ಕಳಿಗೆ ವಿದ್ಯೆ ಕೊಡುವ ಉದ್ದೇಶದಿಂದ ಬರುತ್ತಿರುವ ವಿಶ್ವವಿದ್ಯಾಲಯಕ್ಕೆ ಸರ್ಕಾರ ಭೂಮಿ ಒದಗಿಸಲಿದೆ. ಇಂಥ ಇನ್ನೂ 10 ವಿಶ್ವವಿದ್ಯಾಲಯಗಳು ಬಂದರೂ ಅಗತ್ಯ ಸೌಕರ್ಯ ಒದಗಿಸುತ್ತೇವೆ. ಇದು ನಮ್ಮ ಸರ್ಕಾರದ ನಿಲುವು ಎಂದು ಸ್ಪಷ್ಟಪಡಿಸಿದರು.
ವಿಧೇಯಕದ ಬಗ್ಗೆ ಮಾತನಾಡಿದ ಸಚಿವ ಅಶ್ವತ್ಥ ನಾರಾಯಣ, ಈ ಹಿಂದೆಯೂ ಶಿಕ್ಷಣ ಸಂಸ್ಥೆಗಳಿಗೆ, ಹಲವು ವಿಶ್ವವಿದ್ಯಾಲಯಗಳಿಗೆ ಸರ್ಕಾರದಿಂದಲೇ ಜಾಗ ಕೊಡಲಾಗಿದೆ. ಚಾಣಕ್ಯ ವಿವಿ ಬಗ್ಗೆ ಯಾಕೆ ಬೊಟ್ಟುಮಾಡಿ ತೋರಿಸಬೇಕು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಬೇಕು. ವಿಧಾನಸಭೆಯಲ್ಲಿ ಚಾಣಕ್ಯ ವಿವಿ ಬಿಲ್ ಪಾಸ್ ಮಾಡಲಾಗಿದೆ. ವಿಧಾನ ಪರಿಷತ್ನಲ್ಲಿ ಚಾಣಕ್ಯ ವಿವಿ ಬಿಲ್ ಮಂಡಿಸಲಾಗಿದೆ. ಬಿಲ್ ಅಂಗೀಕಾರವಾದ ನಂತರ ವಿವಿ ಆರಂಭಿಸಲಾಗುವುದು ಎಂದು ಹೇಳಿದರು.
ವಿಧೇಯಕ ವಿರೋಧಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು. ಕಾಂಗ್ರೆಸ್ ಸಭಾತ್ಯಾಗ ನಡುವೆ ವಿಧೇಯಕ ಅಂಗೀಕಾರವಾಯಿತು. ಇಂಥ ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾದಷ್ಟೂ ಅನುಕೂಲ ಮಾಡಿಕೊಡಿ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸರ್ಕಾರಕ್ಕೆ ಸಲಹೆ ಮಾಡಿದರು.
(Karnataka Assembly Gives nod to Chanakya University Bill)
ಇದನ್ನೂ ಓದಿ: ಆನ್ಲೈನ್ ಜೂಜಿಗೆ ಕಡಿವಾಣ ಹಾಕುವ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ
ಇದನ್ನೂ ಓದಿ: ರಿಯಲ್ ಎಸ್ಟೇಟ್ಗೆ ತುಸು ಅನುಕೂಲ: ಮುದ್ರಾಂಕ ಶುಲ್ಕ ಕಡಿತ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆ ಅಂಗೀಕಾರ