
ಬೆಂಗಳೂರು, ಅಕ್ಟೋಬರ್ 29: ರಾಜ್ಯ ಸರ್ಕಾರದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ವಿದ್ಯಾರ್ಹತೆ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿದ್ದವು. 2023ರ ವಿಧಾನಸಭೆ ಚುನಾವಣೆ ವೇಳೆಯೂ ಈ ವಿಷಯ ಭಾರಿ ಸದ್ದು ಮಾಡಿತ್ತು. ಈಗ ಮತ್ತದೇ ವಿಷಯವನ್ನ ರಾಜ್ಯ ಬಿಜೆಪಿ ಮುನ್ನೆಲೆಗೆ ಎಳೆದು ತಂದಿದೆ. ಈ ಬಗ್ಗೆ ಕರ್ನಾಟಕ ಬಿಜೆಪಿ ಎಕ್ಸ್ ಅಕೌಂಟ್ನಲ್ಲಿ ಪೋಸ್ಟ್ ಮಾಡಿದ್ದು, ಎಲ್ಲರೂ ಪಿಯುಸಿ ಆದ್ಮೇಲೆ ಎಂಜಿನಿಯರಿಂಗ್ ಮಾಡ್ತೀನಿ, ಮೆಡಿಕಲ್ ಮಾಡುತ್ತೀನಿ ಎನ್ನುತ್ತಾರೆ. ಆದರೆ, ಪ್ರಿಯಾಂಕ್ ಖರ್ಗೆ ಪಿಯುಸಿ ಆದ್ಮೇಲೆ SSLC ಸೇರುತ್ತೇನೆ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದೆ
PUC ಆದಮೇಲೆ SSLC ಸೇರಿದ ಪ್ರಪಂಚದ ಏಕೈಕ ಬುದ್ದಿಜೀವಿ @PriyankKharge pic.twitter.com/90VLxKehXu
— BJP Karnataka (@BJP4Karnataka) October 29, 2025
ಚುನಾವಣೆ ವೇಳೆ ಪ್ರಿಯಾಂಕ್ ಖರ್ಗೆ ಸಲ್ಲಿಸಿದ್ದು ಎನ್ನಲಾದ ಅಫಿಡವಿಟ್ನ ಫೋಟೋ ಸಮೇತ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ, ಪ್ರಿಯಾಂಕ್ ಖರ್ಗೆ ಅವರ ವಿದ್ಯಾರ್ಹತೆ ಪ್ರತಿ ವರ್ಷದ ಅಫಿಡವಿಟ್ನಲ್ಲಿ ಬದಲಾಗುತ್ತೆ ಎಂದು ಹೇಳಿದೆ. ಈ ಹಿಂದೆ ತಮ್ಮ ವಿದ್ಯಾರ್ಹತೆ ಬಗ್ಗೆ ಚರ್ಚೆಯಾಗಿದ್ದ ವೇಳೆ ಸ್ವತಃ ಪ್ರಿಯಾಂಕ್ ಖರ್ಗೆ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದರು. ನಾನು ಕೇವಲ ಸೆಕೆಂಡ್ ಪಿಯುಸಿ ಪಾಸಾದವನು ಎಂಬ ಮಾಧ್ಯಮಗಳ ವರದಿ ನೋಡಿ ಅಚ್ಚರಿಗೊಂಡಿದ್ದೇನೆ. ನಾನು ಡಿಜಿಟಲ್ ಅನಿಮೇಷನ್ ಓದಿದ್ದು, ಅದನ್ನು ಈಗ ಡಿಗ್ರಿ ಎಂದು ಪರಿಗಣಿಸಲಾಗುತ್ತಿದೆ. ನ್ಯಾಷನಲ್ ಲಾ ಸ್ಕೂಲ್ ನಲ್ಲಿ ನಾನು 13ನೇ ರ‍್ಯಾಂಕ್ ಪಡೆದವನು ಎಂಬುದು ಯಾರಿಗೂ ಗೊತ್ತಿಲ್ಲ. ಸ್ಕಾಟ್ಲೆಂಡ್ ದೇಶದ ರೆಫರೆಂಡಮ್ ಅಧ್ಯಯನಕ್ಕೆ ಆಯ್ಕೆಯಾದ ನಾಲ್ವರು ಶಾಸಕರಲ್ಲಿ ನಾನೂ ಒಬ್ಬ ಎಂದಿದ್ದರು.
ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ‘ಫಸ್ಟ್ ಕ್ಲಾಸ್ ಈಡಿಯಟ್’: ಕರ್ನಾಟಕದ ಐಟಿ ಸಚಿವರಿಗೆ ಅಸ್ಸಾಂ ಸಿಎಂ ಕೌಂಟರ್
ಚುನಾವಣಾ ಅಧಿಕೃತ ವೆಬ್‌ಸೈಟ್‌ನಲ್ಲಿನ ಮಾಹಿತಿ ಪ್ರಕಾರ, ಪ್ರಿಯಾಂಕ್ ಖರ್ಗೆ ಪ್ರಥಮ ಪಿಯುಸಿ ಓದಿದ್ದಾರೆ. 1996ರಲ್ಲಿ ಮಲ್ಲೇಶ್ವರಂನ ಎಂಇಎಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದಿರುವುದಾಗಿ ತಾವು ಸಲ್ಲಿಸಿರುವ ಅಫಿಡವಿಟ್ನಲ್ಲಿ ಅವರು ಹೇಳಿಕೊಂಡಿದ್ದಾರೆ. ಬಳಿಕ 1999ರಲ್ಲಿ ಕಂಪ್ಯೂಟರ್ ಆರ್ಟ್ಸ್ ಮತ್ತು ಅನಿಮೇಷನ್‌ನಲ್ಲಿ ವೃತ್ತಿಪರ ಪ್ರಮಾಣಪತ್ರ ಪಡೆದುಕೊಂಡಿರುವ ಬಗ್ಗೆಯೂ ಅವರು ಉಲ್ಲೇಖಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:56 pm, Wed, 29 October 25