ಬೆಂಗಳೂರು, (ನವೆಂಬರ್ 15): ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ದಿನದಿಂದಲೂ ಅಸಮಾಧಾನದ ಧ್ವನಿ ಎತ್ತುತ್ತಲೇ ಬಂದಿರುವ ಬಿಜೆಪಿ ಪ್ರತ್ಯೇಕ ಟೀಮ್, ವಕ್ಫ್ ಆಸ್ತಿ ಕುರಿತಾದ ಹೋರಾಟದಲ್ಲಿ ರಾಜ್ಯ ಘಟಕಕ್ಕೆ ಸೆಡ್ಡು ಹೊಡೆಯುವ ರೀತಿಯಲ್ಲಿ ಪ್ರತ್ಯೇಕ ಹೋರಾಟ ಘೋಷಣೆ ಮಾಡಿದೆ. ವಾಲ್ಮೀಕಿ ನಿಗಮದ ಹಗರಣದಲ್ಲಿ ಪ್ರತ್ಯೇಕ ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೇಳಿಯೂ ಅವಕಾಶ ದೊರೆಯದ ಕಾರಣ, ಈ ಬಾರಿ ಹೋರಾಟವನ್ನೇ ಪ್ರತ್ಯೇಕ ತಂಡ ಘೋಷಣೆ ಮಾಡಿಬಿಟ್ಟಿದೆ.
ಈಗಾಗಲೇ ವಕ್ಫ್ ವಿಚಾರದಲ್ಲಿ ಬಿಜೆಪಿ ಶಾಸಕ ಯತ್ನಾಳ್ ಅಹೋರಾತ್ರಿ ಧರಣಿ ಮಾಡಿದ್ದರು. ಇದೀಗ ಬಿಜೆಪಿ ಪ್ರತ್ಯೇಕ ತಂಡದಿಂದ ಪ್ರತ್ಯೇಕ ಹೋರಾಟ ಮಾಡೋ ಬಗ್ಗೆ ಘೋಷಣೆ ಮಾಡಿದ್ದಾರೆ. ನವೆಂಬರ್ 25ರಿಂದ ಡಿಸೆಂಬರ್ 25 ರವರೆಗೆ ಒಂದು ತಿಂಗಳ ಕಾಲ ಅಭಿಯಾನ ಜನಜಾಗೃತಿ ಅಭಿಯಾನ ನಡೆಯಲಿದ್ದು, ಬೀದರ್ನಿಂದ ಆರಂಭವಾಗಲಿದೆ. ಅಭಿಯಾನದಲ್ಲಿ ಬಿಜೆಪಿ ರೆಬೆಲ್ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ, ಪ್ರತಾಪಸಿಂಹ, ರಮೇಶ್ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ್, ಅಣ್ಣಾ ಸಾಹೇಬ್ ಜೊಲ್ಲೆ, ಬಿ.ಪಿ.ಹರೀಶ್, ಕುಮಾರ್ ಬಂಗಾರಪ್ಪ ಭಾಗಿಯಾಗಲಿದ್ದಾರೆ. ಜಿಲ್ಲೆ ಜಿಲ್ಲೆಗಳಲ್ಲೂ ಸಭೆ, ಸಮಾವೇಶ ಮಾಡೋಕೆ ಪ್ಲ್ಯಾನ್ ಮಾಡಲಾಗಿದೆ.
ಇದನ್ನೂ ಓದಿ: ವಕ್ಫ್ ವಿರುದ್ಧ ಯತ್ನಾಳ್ ಪ್ರತ್ಯೇಕ ಹೋರಾಟದ ಬಗ್ಗೆ ಅಚ್ಚರಿ ಮಾತುಗಳನ್ನಾಡಿದ ವಿಜಯೇಂದ್ರ
ಈ ಹಿಂದೆ ವಾಲ್ಮೀಕಿ ಹಗರಣದಲ್ಲಿ ಪ್ರತ್ಯೇಕ ಪಾದಯಾತ್ರೆಗೆ ಶಾಸಕ ಯತ್ನಾಳ್ ನೇತೃತ್ವದ ಟೀಂ ಮುಂದಾಗಿತ್ತು. ಆದ್ರೆ ಪ್ರತ್ಯೇಕ ಪಾದಯಾತ್ರೆ ಮಾಡೋಕೆ ಬಿಜೆಪಿ ಹೈಕಮಾಂಡ್ ಅನುಮತಿ ಕೊಟ್ಟಿರಲಿಲ್ಲ. ಹೀಗಾಗಿ ವಕ್ಫ್ ವಿಚಾರದಲ್ಲಿ ವಿಜಯಪುರದಲ್ಲಿ ಯತ್ನಾಳ್ ಅಹೋರಾತ್ರಿ ಧರಣಿ ಮಾಡಿದ್ರು. ವಕ್ಫ್ ಹೋರಾಟದಲ್ಲಿ ಮೂವರು ಕೇಂದ್ರ ಸಚಿವರು ಭಾಗಿಯಾಗಿದ್ರು. ಇನ್ನು ಪ್ರತಿಭಟನಾ ಸ್ಥಳಕ್ಕೆ ವಕ್ಫ್ ಕಾಯ್ದೆ ತಿದ್ದುಪಡಿ ಕುರಿತ ಜೆಪಿಸಿ ಟೀಂ ಕೂಡ ಭೇಟಿ ಕೊಟ್ಟಿತ್ತು. ಈ ಮೂಲಕ ಹೈಕಮಾಂಡ್ ಬೆಂಬಲ ಇದೆ ಎನ್ನುವುದನ್ನು ಖಾತ್ರಿ ಮಾಡಿಕೊಂಡ ಪ್ರತ್ಯೇಕ ಬಿಜೆಪಿ ಟೀಂ, ವಕ್ಫ್ ವಿಚಾರದಲ್ಲಿ ಹೋರಾಟದ ರೂಟ್ ಮ್ಯಾಪ್ ಘೋಷಣೆ ಮಾಡಿ ದಿನಾಂಕ ಪ್ರಕಟ ಮಾಡಿದೆ.
ಇನ್ನು ಈ ವಿಚಾರದಲ್ಲಿ ರಾಜ್ಯ ಬಿಜೆಪಿ ನಾಯಕರು ಅಥವಾ ಹೈಕಮಾಂಡ್ ವಿರೋಧ ಮಾಡುವಾಗೆ ಇಲ್ಲ. ಏಕೆಂದರೆ, ಬಿಜೆಪಿ ಘಟಕದಿಂದ ಹೋರಾಟಕ್ಕೆ ವಿರೋಧ ವ್ಯಕ್ತವಾದ್ರೆ ರೈತರಿಗೆ ವಿರೋಧ ಇದ್ದಂತೆ ಆಗುತ್ತೆ. ಹೀಗಾಗಿ ರಾಜ್ಯ ಬಿಜೆಪಿ ಘಟಕವೇ ಅನಿವಾರ್ಯವಾಗಿ ಬೆಂಬಲ ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಹೋರಾಟಕ್ಕೆ ಬಿ.ವೈ.ವಿಜಯೇಂದ್ರ ಸೇರಿದಂತೆ ಯಾರು ಬೇಕಾದ್ರೂ ಬರಲಿ ಎಂದು ಶಾಸಕ ಯತ್ನಾಳ್ ಹೇಳಿದ್ದರೆ, ಬಿಜೆಪಿ ರಾಜ್ಯಾದ್ಯಕ್ಷರು ಭಾಗವಹಿಸಬಹುದು. ಇದು ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಆಹ್ವಾನ ಎಂದು ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರ ಹೋರಾಟಕ್ಕೆ ನಮಗೆ ತಕರಾರು ಇಲ್ಲ ಎಂದಿದ್ದಾರೆ.
ಒಟ್ಟಾರೆ ರಾಜ್ಯ ಘಟಕದಿಂದ ವಕ್ಫ್ ಹೋರಾಟ ಘೋಷಣೆಯಾಗುವ ಮುನ್ನವೇ ಯತ್ನಾಳ್ ಟೀಮ್ ತಮ್ಮ ಹೋರಾಟ ಘೋಷಿಸಿಬಿಟ್ಟಿದೆ. ಜಿಲ್ಲೆಗಳಲ್ಲಿ ಸಭೆ, ಸಮಾವೇಶಗಳ ಮೂಲಕ ಅಭಿಯಾನ ನಡೆಯಲಿದ್ದು, ಪ್ರತ್ಯೇಕ ವಾರ್ ರೂಂ ಸ್ಥಾಪನೆಯಾಗಿದೆ. ಈ ಮೂಲಕ ಕರ್ನಾಟಕ ಬಿಜೆಪಿಯಲ್ಲಿನ ಬಣಬಡಿದಾಟ ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲಲಿದೆ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.