Karnataka Breaking Kannada News Highlights: ಅಧಿಕಾರಿಗಳೊಂದಿಗೆ ಸುರ್ಜೇವಾಲ ಸಭೆ; ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಬಿಜೆಪಿ

| Updated By: Rakesh Nayak Manchi

Updated on: Jun 13, 2023 | 10:30 PM

Breaking News Today Live Updates: ಕರ್ನಾಟಕ ತಾಜಾ ಸುದ್ದಿ ಬ್ರೇಕಿಂಗ್ ನ್ಯೂಸ್ ಲೈವ್: ಕರ್ನಾಟಕದಲ್ಲಿನ ರಾಜಕೀಯ, ಹವಾಮಾನ, ಅಪರಾಧ ಹಾಗೂ ಜಿಲ್ಲೆಗಳಲ್ಲಿನ ಬೆಳವಣಿಗೆಗಳ ಕುರಿತಾದ ಲೇಟೆಸ್ಟ್​​ ಅಪ್​ಡೇಟ್ಸ್ ಟಿವಿ9 ಡಿಜಿಟಲ್​​ನಲ್ಲಿ...

Karnataka Breaking Kannada News Highlights: ಅಧಿಕಾರಿಗಳೊಂದಿಗೆ ಸುರ್ಜೇವಾಲ ಸಭೆ; ರಾಜ್ಯಪಾಲರಿಗೆ ದೂರು ನೀಡಲು ಮುಂದಾದ ಬಿಜೆಪಿ
ಅಧಿಕಾರಿಗಳೊಂದಿಗೆ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ರಣದೀಪ್ ಸುರ್ಜೇವಾಲ ಸಭೆ (ಎಡಚಿತ್ರ) ಮತ್ತು ಬಿಜೆಪಿ

ಕರ್ನಾಟಕದಲ್ಲಿ ಕಾಂಗ್ರೆಸ್​ ಸರ್ಕಾರದ(Congress Government) ಮಹತ್ವದ 5 ಉಚಿತ ಯೋಜನೆಗಳದ್ದೇ ಚರ್ಚೆ ಜೋರಾಗಿದೆ. ಈ ಯೋಜನೆಗಳನ್ನು ಸರ್ಕಾರ ಒಂದೊಂದಾಗಿ ಚಾಲನೆ ನೀಡಲು ನಿರ್ಧರಿಸಿದೆ. ಮೊದಲನೆಯದಾಗಿ ಜೂ.11 ರಂದು “ಶಕ್ತಿ ಯೋಜನೆ”(Shakti Scheme) ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ವಿಧಾನಸೌಧದಲ್ಲಿ ಚಾಲನೆ ನೀಡಿದ್ದರು.  ಮತ್ತೊಂದಡೆ ವಿದ್ಯುತ್​ ಬಿಲ್​ ದರ ಏರಿಕೆ ರಾಜ್ಯದ ಜನರನ್ನು ಕಂಗೆಡಿಸಿದೆ. ಇನ್ನು ಮುಂಗಾರು ಕೇರಳ ಪ್ರವೇಶ ಮತ್ತು ಬಿಪರ್‌ಜಾಯ್ ಚಂಡಮಾರುತ ತೀರ್ವತೆ ಜೋರಾಗಿದ್ದು ದಕ್ಷಿಣ ಭಾರತದಲ್ಲಿ ಅಧಿಕ ಮಳೆಯಾಗಲಿದೆ(Karnataka Rain). ರಾಜ್ಯದ ಕರವಾಳಿ ಅತಿಯಾಗಿ ಮಳೆಯಾಗಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದರೊಂದಿಗೆ ಇಂದಿನ ಕ್ಷಣ ಕ್ಷಣ ಮಾಹಿತಿ ಇಲ್ಲಿದೆ…

LIVE NEWS & UPDATES

The liveblog has ended.
  • 13 Jun 2023 08:56 PM (IST)

    Karnataka News Live Updates: ಸುರ್ಜೇವಾಲ ಸಭೆ ಬಗ್ಗೆ ಗವರ್ನರ್​ಗೆ ದೂರು ನೀಡಲು ಮುಂದಾದ ಬಿಜೆಪಿ

    ರಣದೀಪ್ ಸಿಂಗ್ ಸುರ್ಜೇವಾಲ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಗ್ಗೆ ರಾಜ್ಯಪಾಲರಿಗೆ ದೂರು ನೀಡಲಿ ಬಿಜೆಪಿ ಮುಂದಾಗಿದೆ. ನಾಳೆ ಮಧ್ಯಾಹ್ನ 12.30ಕ್ಕೆ ಮಾಜಿ ಸಚಿವ ಆರ್.ಅಶೋಕ್​ ನೇತೃತ್ವದ ಬಿಜೆಪಿ ನಿಯೋಗ ರಾಜಭವನಕ್ಕೆ ತೆರಳಲಿ ದೂರು ನೀಡಲಿದೆ.

  • 13 Jun 2023 08:11 PM (IST)

    Karnataka News Live Updates: ಸರ್ಕಾರದ ವತಿಯಿಂದ ಕರೆದಿದ್ದ ಸಭೆಯಲ್ಲಿ ಸುರ್ಜೇವಾಲ ಭಾಗಿ: ಜಮೀರ್ ಅಹ್ಮದ್ ಖಾನ್

    ಬೆಂಗಳೂರಿನ ಶ್ಯಾಂಗ್ರಿಲಾ ಹೋಟೆಲ್​ನಲ್ಲಿ ನಡೆದ ಸಿಎಂ, ಡಿಸಿಎಂ ಕರೆದಿದ್ದ ಸಭೆಯಲ್ಲಿ ಭಾಗಿಯಾದೆ. ಈ ಸಭೆಯಲ್ಲಿ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಭೆಯಲ್ಲಿ ಕರ್ನಾಟದ AICC ಉಸ್ತುವಾರಿ ಅಧ್ಯಕ್ಷ ರಣದೀಪ್​ ಸುರ್ಜೆವಾಲ ಭಾಗಿಗಿದ್ದರು ಎಂದು ವಸತಿ ಸಚಿವ ಬಿ ಝಡ್​ ಜಮೀರ್​ ಅಹ್ಮದ್​ ಖಾನ್​ ಟ್ಟೀಟ್​ ಮಾಡಿದ್ದಾರೆ.

     


  • 13 Jun 2023 07:28 PM (IST)

    Karnataka News Live Updates: 10ನೇ ನಂಬರಿನ ಹಂಗಿನ ಸರಕಾರ: ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ ಕುಮಾರಸ್ವಾಮಿ

    ರಾಜ್ಯದಲ್ಲಿರುವುದು ಸಿದ್ದರಾಮಯ್ಯನವರ ನೇತೃತ್ವದ ಸರಕಾರವೋ ಅಥವಾ ದಿಲ್ಲಿಯ ಜನಪಥ ರಸ್ತೆಯ 10ನೇ ನಂಬರಿನ ಹಂಗಿನ ಸರಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರಕಾರಕ್ಕಾ?ಅಥವಾ ಕೈಗೊಂಬೆ ಸರಕಾರಕ್ಕಾ? ಪಾಪ.. ಜನರ ವೋಟು ಹಂಗಿನ ಸರಕಾರದ ಪಾಲಾಗಿದೆ. ಸರಕಾರಕ್ಕೆ ತಿಂಗಳು ತುಂಬುವ ಮೊದಲೇ ಅದು ಸಾಬೀತಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಸರಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡಿನ ನಿಲಯದ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು! ನಾನು ಟ್ಯಾಗ್ ಮಾಡಿರುವ ಫೋಟೋ ಆ ದೈನೇಸಿ ಸ್ಥಿತಿಗೆ ಸಾಕ್ಷಿ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಂದೀಪ್ ಸುರ್ಜೆವಾಲಾ ಅವರಿಗೆ ಸರಕಾರದ ಸಭೆಗಳನ್ನು ನಡೆಸುವ ಜವಾಬ್ದಾರಿ, ಅವಕಾಶ ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.

  • 13 Jun 2023 06:37 PM (IST)

    Karnataka News Live Updates: ಕೈಗಾರಿಕೋದ್ಯಮಿಗಳ ಪ್ರತಿಭಟನೆ, ಸಭೆ ನಡೆಸಿದ ಹೆಸ್ಕಾಂ ಎಂಡಿ

    ಬೆಳಗಾವಿ: ವಿದ್ಯುತ್ ದರ ಹೆಚ್ಚಳ ವಿರೋಧಿಸಿ ಬೆಳಗಾವಿ ಕೈಗಾರಿಕೋದ್ಯಮಿಗಳ ಪ್ರತಿಭಟನೆ ಹಿನ್ನೆಲೆ ಹೆಸ್ಕಾಂ ಅಧಿಕಾರಿಗಳ ಜೊತೆ ಬೆಳಗಾವಿಗೆ ದೌಡಾಯಿಸಿದ ಹೆಸ್ಕಾಂ ಎಂಡಿ ಮೊಹಮ್ಮದ್ ರೋಶನ್, ಕೈಗಾರಿಕೋದ್ಯಮಿಗಳ ಜೊತೆ ಸಭೆ ನಡೆಸಿದರು. ಈ ವೇಳೆ
    ವಿದ್ಯುತ್ ದರ ಏರಿಕೆ ಬಗ್ಗೆ ಮಾಹಿತಿ ನೀಡಿದ ಹೆಸ್ಕಾಂ ಎಂಡಿ ಮೊಹಮ್ಮದ್ ರೋಶನ್, ಕೈಗಾರಿಕೋದ್ಯಮಿಗಳಿಗೆ ಇರುವ ಗೊಂದಲದ ಬಗ್ಗೆ ಮನವರಿಕೆ ಮಾಡಿದರು. ಈ ವೇಳೆ ಇಷ್ಟೊಂದು ಬಿಲ್ ಕಟ್ಟೋಕೆ ಆಗಲ್ಲ ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಈ ದರ ಕಡಿಮೆಯಾಗುತ್ತದೆ ಎಂದು ಎಂಡಿ ತಿಳಿಸಿದ್ದಾರೆ. ಅಲ್ಲದೆ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೋಲಿಸಿದರೆ ಕರ್ನಾಟಕದಲ್ಲಿ ವಿದ್ಯುತ್ ದರ ಕಡಿಮೆ ಇದೆ. ಮಹಾರಾಷ್ಟ್ರದಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ವಿದ್ಯುತ್ ದರ ಇದೆ. ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಫಿಕ್ಸಡ್ ಚಾರ್ಜ್ ಹೆಚ್ಚಿದೆ. ಬಿಲ್ ಕಟ್ಟಿ ಸಹಕರಿಸಿ ನಾವು ಸಹ ವಿದ್ಯುತ್ ಖರೀದಿಸಬೇಕಾಗುತ್ತದೆ ಎಂದಿದ್ದಾರೆ. ಇದಕ್ಕೆ ಖಾರವಾಗಿ ಪ್ರಶ್ನಿಸಿದ ಕೈಗಾರಿಕೋದ್ಯಮಿಗಳು, ನಾವು ನಷ್ಟ ಮಾಡಿ ನಿಮ್ಮನ್ನು ಲಾಭದಲ್ಲಿ ಇಡಬೇಕಾ? 40 ರಿಂದ 60 ಪರ್ಸೆಂಟ್ ದರ ಹೆಚ್ಚಾದರೆ ಹಣ ಹೇಗೆ ಹೊಂದಿಸೋದು ಎಂದು ಪ್ರಶ್ನಿಸಿದ್ದಾರೆ. ನೀವು ಕನೆಕ್ಷನ್ ಕಟ್ ಮಾಡಿ ನಮ್ಮ ಹಾಗೂ ಕಾರ್ಮಿಕರ ವೇತನ ನೀವೇ ಕೊಡಿ ಎಂದು ರೋಹನ್ ಜವಳಿ ಅಸಮಾಧಾನ ಹೊರಹಾಕಿದ್ದಾರೆ.

  • 13 Jun 2023 06:32 PM (IST)

    Karnataka News Live Updates: ಪರಮೇಶ್ವರ್​ ಆಪ್ತ ಕಾರ್ಯದರ್ಶಿಯಾಗಿ ಚನ್ನಬಸಪ್ಪ ವರ್ಗಾವಣೆ

    ಮಂಗಳೂರು ನಗರ ಪಾಲಿಕೆ ಆಯುಕ್ತರಾಗಿರುವ ಕೆ.ಚನ್ನಬಸಪ್ಪ ಅವರನ್ನು ಗೃಹಸಚಿವ ಪರಮೇಶ್ವರ್​ ಆಪ್ತ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ.

  • 13 Jun 2023 06:01 PM (IST)

    Karnataka News Live Updates: ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆ ಬಗ್ಗೆ ಹೆಚ್ಚು ಗಮನ‌ಹರಿಸಿದ್ದೇನೆ: ಡಿಕೆ ಶಿವಕುಮಾರ್​

    ಬೆಂಗಳೂರಿನಲ್ಲಿ ಸಂಚಾರ ನಿರ್ವಹಣೆ ಬಗ್ಗೆ ಹೆಚ್ಚು ಗಮನ‌ಹರಿಸಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಟ್ರಾಫಿಕ್ ವಿಚಾರವಾಗಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಸಾರ್ವಜನಿಕರಿಂದಲೂ ಮಾಹಿತಿ ಪಡೆಯುತ್ತೇನೆ. ಟ್ರಾಫಿಕ್ ವಿಚಾರವಾಗಿ ಸಾರ್ವಜನಿಕರು, ತಜ್ಞರ ಸಭೆ ನಡೆಸುವೆ ಎಂದರು.

  • 13 Jun 2023 05:58 PM (IST)

    Karnataka News Live Updates: ಹಾಸನ ನಗರಸಭೆ ಅಧಿಕಾರಿಗಳ ಕಾರ್ಯಾಚರಣೆ

    ಹಾಸನ: ನಗರಸಭೆ ಅಧಿಕಾರಿಗಳು ಫುಟ್‌ಪಾತ್ ಮೇಲಿನ ಅಂಗಡಿಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. ಫುಟ್‌ಪಾತ್ ಮೇಲೆ ವಸ್ತುಗಳನ್ನು ಇಟ್ಟಿದ್ದ ಅಂಗಡಿಗಳಿಗೆ ದಂಡ ವಿಧಿಸುತ್ತಿದ್ದು, ಪ್ಲಾಸ್ಟಿಕ್ ಬಳಸುತ್ತಿದ್ದ ಬೀದಿ ಬದಿ ವ್ಯಾಪಾರಿಗಳಿಗೂ ಎಚ್ಚರಿಕೆ ನೀಡುತ್ತಿದ್ದಾರೆ. ಫ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಂಡು ಮುಂದೆ ಬಳಸಿದರೆ ದಂಡ ವಿಧಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಪದೇ ಪದೇ ಸೂಚನೆ ನೀಡಿದರು ಫುಟ್‌ಪಾತ್ ಮೇಲೆ ವಸ್ತುಗಳನ್ನು ಇಟ್ಟು ಸಾರ್ವಜನಿಕರ ಓಡಾಟಕ್ಕೆ ತೊಂದರೆ ನೀಡುತ್ತಿದ್ದ ಕೆಲವು ಅಂಗಡಿ ಮಾಲೀಕರಿಗೆ 500, 1000 ರೂ. ದಂಡ ವಿಧಿಸಿದ್ದಾರೆ. ಜನನಿಬಿಡ ಪ್ರದೇಶಗಳಾದ ಎನ್.ಆರ್.ವೃತ್ತ, ಗಾಂಧಿ ಬಜಾರ್, ಸುಭಾಶ್ ವೃತ್ತದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ. ಪ್ರತಿ ನಿತ್ಯ ಕಾರ್ಯಾಚರಣೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

  • 13 Jun 2023 02:43 PM (IST)

    Karnataka News Live Updates: ಕಾಂಗ್ರೆಸ್ ಶೆಟ್ಟರ್ ಕೈಬಿಡಲ್ಲ: ಎಂಬಿ ಪಾಟೀಲ್

    ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕಾಂಗ್ರೆಸ್​ನಲ್ಲಿ ಸ್ಥಾನಮಾನ ವಿಚಾರವಾಗಿ ಮಾತನಾಡಿದ ಸಚಿವ ಎಂ ಬಿ ಪಾಟೀಲ್, ಶೆಟ್ಟರ್ ಚುನಾವಣೆಯಲ್ಲಿ ಸೋತಿರಬಹುದು. ಆದರೆ ಪಕ್ಷ ಅವರನ್ನ ಕೈಬಿಡಲ್ಲ, ನಾವು ಅವರನ್ನ ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಶೆಟ್ಟರ್ ಕೂಡ ಪಕ್ಷಕ್ಕೆ ಬರುವ ವೇಳೆ ನಮ್ಮ ಹೈಕಮಾಂಡ್ ಮುಂದೆ ಗೌರವಯುತವಾಗಿ ನಡೆಸಿಕೊಳ್ಳಿ ಅಂತ ಹೇಳಿದ್ದರು. ನಾವು ಗೌರವಯುತವಾಗಿ ನೋಡಿಕೊಳ್ಳುತ್ತೇವೆ ಎಂದರು.

  • 13 Jun 2023 02:40 PM (IST)

    Karnataka News Live Updates: ಕಾಂಗ್ರೆಸ್ ಸರ್ಕಾರ ಎನ್ ಮಾಡುತ್ತೆ ಅಂತ ನೋಡಬೇಕು: ಭೈರತಿ ಬಸವರಾಜ್

    ಡಿಸಿಎಂ‌ ಸಿಟಿ ರೌಂಡ್ಸ್ ಹಾಕುತ್ತಿರುವುದು ತುಂಬಾ ಸಂತೋಷ ನಾನು ಸ್ವಾಗತ ಮಾಡಲು ಬಂದಿದ್ದೇನೆ ಎಂದು ಮಾಜಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ. ಇಲ್ಲಿ ಜನರಿಗೆ ತುಂಬಾ ಸಮಸ್ಯೆ ಆಗುತ್ತಿತ್ತು ಅಂತ 350 ಕೋಟಿ ಸ್ಯಾಂಕ್ಷನ್ ಮಾಡಿಸಿ ಕಾಮಗಾರಿ ಮಾಡಿಸುತ್ತಿದ್ದೆ. ಕಾರ್ಯಕ್ರಮ ರೂಪಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇನೆ. ಸಾವಿರಾರು ವೆಹಿಕಲ್ಸ್ ಇಲ್ಲಿಂದ ಮದ್ರಾಸ್ ಆಂಧ್ರಾಗೆ ಹೋಗುತ್ತದೆ. ಮುಂದಿನ ದಿನಗಳಲ್ಲಿ ಕಾದು ನೋಡುತ್ತೇವೆ ಇಲ್ಲಿ ಯಾವ ರೀತಿ ಕೆಲಸಗಳು ಆಗುತ್ತವೆ ಅಂತ. ಆದರೆ ಈಗ ಕಾಂಗ್ರೆಸ್ ಸರ್ಕಾರ ಎನ್ ಮಾಡುತ್ತೆ ಅಂತ ನೋಡಬೇಕು. ನಮ್ಮ ಪಕ್ಷದ ಅವಧಿಯಲ್ಲಿ ಜಾರಿ ಅದಂತಹ ಕಾಮಗರಿಗಳಿಗೆ ಕೆಲವು ಕೆಲಸಗಳಿಗೆ ಇವರು ತಡೆ ನೀಡಿದ್ದಾರೆ ಎಂದರು.

  • 13 Jun 2023 02:36 PM (IST)

    Karnataka News Live Updates: ಹುಸಿ ಗ್ಯಾರಂಟಿಗಳ ಭಾರದಿಂದಲೇ ಸರ್ಕಾರ ಕುಸಿದು ಬೀಳುವುದು ನಿಶ್ಚಿತ: ಸುನಿಲ್ ಕುಮಾರ್

    ಕಾಂಗ್ರೆಸ್​ ಸರ್ಕಾರದ ಆಡಳಿತದ ವೈಖರಿಯ ದಾರಿ ಮತ್ತು ಧಾಟಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ತನ್ನ ಹುಸಿ ಗ್ಯಾರಂಟಿಗಳ ಭಾರದಿಂದಲೇ ಕುಸಿದು ಬೀಳುವುದು ನಿಶ್ಚಿತ. ಈ ಸಂಧರ್ಭದಲ್ಲಿ ರಾಜ್ಯ ಮತ್ತು ಜಿಲ್ಲೆಗಳಲ್ಲಿ ವೈಚಾರಿಕ ಬದ್ಧತೆಯ ಯುವಕರು ಬಿಜೆಪಿಯ ನೇತೃತ್ವವನ್ನು ವಹಿಸಿ ಕೊಳ್ಳುವುದು ಅಗತ್ಯ ಮತ್ತು ಅನಿವಾರ್ಯ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  • 13 Jun 2023 02:16 PM (IST)

    Karnataka News Live: ವಿದ್ಯುತ್​ ದರ ಹೆಚ್ಚಿಸಿದವರೇ ಟೀಕೆ ಮಾಡಿದರೆ ಹೇಗೆ ಎಂದ ಸಚಿವ ಡಾ.ಹೆಚ್​.ಸಿ ಮಹದೇವಪ್ಪ

    ಚಾಮರಾಜನಗರ: ವಿದ್ಯುತ್​ ದರ ಹೆಚ್ಚಳ ಮಾಡಿದ್ದು ಹಿಂದಿನ ಸರ್ಕಾರ, ಈಗ ಜಾರಿಯಾಗಿದೆ ಅಷ್ಟೇ ಎಂದು ಚಾಮರಾಜನಗರದಲ್ಲಿ ಸಚಿವ ಡಾ.ಹೆಚ್​.ಸಿ ಮಹದೇವಪ್ಪ ಹೇಳಿದರು. ಯಾರು ದರ ಹೆಚ್ಚಳ ಮಾಡಿದ್ದಾರೋ ಅವರೇ ಟೀಕೆ ಮಾಡಿದರೆ ಹೇಗೆ?, ವಿದ್ಯುತ್​ ದರ ಏರಿಕೆಯನ್ನು ಈಗ ತಡೆ ಹಿಡಿಯಲು ಸಾಧ್ಯವಾಗುವುದಿಲ್ಲ ಎಂದರು.

     

  • 13 Jun 2023 01:57 PM (IST)

    Karnataka News Live: ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರು ನಗರ ಪ್ರದಕ್ಷಿಣೆ; ಹೆಬ್ಬಾಳ ಫ್ಲೈಓವರ್ ಬಳಿ ಕಾಮಗಾರಿ ಪರಿಶೀಲನೆ

    ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು ನಗರ ಪ್ರದಕ್ಷಿಣೆ ಹಾಕುತ್ತಿದ್ದು, ಹೆಬ್ಬಾಳ ಫ್ಲೈಓವರ್ ಬಳಿ ಕಾಮಗಾರಿಯನ್ನ ಪರಿಶೀಲಿಸಿದ್ದಾರೆ.
    ಹೌದು ಟ್ರಾಫಿಕ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಖುದ್ದು ಉಪಮುಖ್ಯಮಂತ್ರಿ  ಡಿಕೆ ಶಿವಕುಮಾರ್​ ಅವರು ನಗರ ಸುತ್ತಿ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

  • 13 Jun 2023 01:28 PM (IST)

    Karnataka News Live: ಬಿಪರ್​​ಜಾಯ್​​​ ಚಂಡಮಾರುತ ಹಿನ್ನೆಲೆ ಕಟ್ಟೆಚ್ಚರಕ್ಕೆ ಸೂಚನೆ​ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ

    ದೆಹಲಿ: ಬಿಪರ್​​ಜಾಯ್​​​ ಚಂಡಮಾರುತ ಹಿನ್ನೆಲೆ ದೆಹಲಿಯಲ್ಲಿ  ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟ್ಟೆಚ್ಚರಕ್ಕೆ ಸೂಚನೆ​ ನೀಡಿದ್ದಾರೆ. ಗುಜರಾತ್, ಮಹಾರಾಷ್ಟ್ರ ​​​ ಸೇರಿ ಹಲವು ರಾಜ್ಯಗಳಲ್ಲಿ ಹೈಅಲರ್ಟ್​ ಘೋಷಣೆ ಮಾಡಿದ್ದು, ಚಂಡಮಾರುತದಿಂದಾಗುವ ಅನಾಹುತ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಹೇಳಿದ್ದಾರೆ. ಇನ್ನು ಗುಜರಾತ್​​ನಲ್ಲಿ ಎನ್​ಡಿಆರ್​ಎಫ್​​, ಎಸ್​ಡಿಆರ್​​ಎಫ್ ನಿಯೋಜನೆ ಮಾಡಲಾಗಿ, ಸೌರಾಷ್ಟ್ರ, ಕಛ್ ಜಿಲ್ಲೆಗೆ ಸುರಕ್ಷಿತ ಪ್ರದೇಶಕ್ಕೆ ಜನರನ್ನ ಸ್ಥಳಾಂತರಿಸಲು ಸೂಚಿಸಿದ್ದಾರೆ.

  • 13 Jun 2023 01:11 PM (IST)

    Karnataka News Live: ಗ್ಯಾರಂಟಿಗಳ ವಾಗ್ದಾನ ಕೊಟ್ಟಿದ್ದ ಕಾಂಗ್ರೆಸ್, ಈಗ ಗೊಂದಲ ಇಲ್ಲದೇ ಜಾರಿ ಮಾಡಲಿ; ಸಿಟಿ ರವಿ

    ಬೆಂಗಳೂರು: ಗ್ಯಾರಂಟಿಗಳ ವಾಗ್ದಾನ ಕೊಟ್ಟಿದ್ದ ಕಾಂಗ್ರೆಸ್, ಈಗ ಗೊಂದಲ ಇಲ್ಲದೇ ಜಾರಿ ಮಾಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ. ಅರ್ಕಾವತಿ ಪ್ರಕರಣದಲ್ಲಿ ಅಕ್ರಮ ಆಗಿದೆ. ಯಾರು ಅಕ್ರಮ ಮಾಡಿದ ಆ ಖದೀಮ ಯಾರು? ಅದರ ಬಗ್ಗೆ ತನಿಖೆ ಮಾಡಿ. ಸೋಲಾರ್ ಹಗರಣ ಕೇಳಿಬಂತು, ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿ ಆರೋಪ ಇತ್ತು. ಹೆಚ್ಚಿನ ಬೆಲೆಗೆ ವಿದ್ಯುತ್ ಖರೀದಿಸಿದ ಆ ಖದೀಮ ಯಾರು, ತನಿಖೆ ಮಾಡಿ. ಪೇ ಸಿಎಂ ಪೋಸ್ಟರ್ ಅಂಟಿಸಿದ್ದಿರಿ. ಇವತ್ತು ನಿಮಗೆ ಅಧಿಕಾರ ಇದೆ, ತನಿಖೆ ಮಾಡಿ ಎಂದರು.

     

     

  • 13 Jun 2023 12:38 PM (IST)

    Karnataka News Live: ಆರೋಗ್ಯ ಇಲಾಖೆ ಸಚಿವರ ಜತೆ ಸಿಎಂ ಸಿದ್ದರಾಮಯ್ಯ ಸಭೆ

    ಬೆಂಗಳೂರು: ಗೃಹಕಚೇರಿ ಕೃಷ್ಣಾದಲ್ಲಿ ಆರೋಗ್ಯ ಇಲಾಖೆ ಸಚಿವರ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸುತ್ತಿದ್ದಾರೆ. ಕೊವಿಡ್​​​​ ಸಮಯದಲ್ಲಾದ ಹಗರಣಗಳ ತನಿಖೆ ಬಗ್ಗೆ ಚರ್ಚೆ ಸಾಧ್ಯತೆಯಿದೆ. ಈ ವೇಳೆ ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತದ ಬಗ್ಗೆಯೂ ಪ್ರಸ್ತಾಪ ಮಾಡಲಿದ್ದು, ಸಭೆಯಲ್ಲಿ ತನಿಖಾ ವರದಿ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್​​ ಹಾಗೂ  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಜತೆ ಸಿಎಂ ಸಮಾಲೋಚನೆ ನಡೆಸಿದ್ದಾರೆ.

  • 13 Jun 2023 12:23 PM (IST)

    Karnataka News Live: ಕೆಲವೇ ಕ್ಷಣಗಳಲ್ಲಿ ಸಿಟಿ ರೌಂಡ್ಸ್ ಶುರುಮಾಡಲಿರುವ ಡಿಸಿಎಂ ಡಿಕೆ ಶಿವಕುಮಾರ್

    ಬೆಂಗಳೂರು: ಇನ್ನು ಕೆಲವೇ ಕ್ಷಣಗಳಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಟಿ ರೌಂಡ್ಸ್ ಶುರುಮಾಡಲಿದ್ದಾರೆ. ಹೌದು ಇದೀಗ ಸಿಟಿ ರೌಂಡ್ಸ್ ಗೂ ಮುನ್ನ ಬಿಡಿಎ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದು, ಬಿಡಿಎ ಆಯುಕ್ತರು, ಅಧ್ಯಕ್ಷರು ಅಧಿಕಾರಿಗಳು ಹಾಗೂ ಬಿಬಿಎಂಪಿ ಆಯುಕ್ತರ, ವಿಶೇಷ ಆಯುಕ್ತರುಗಳು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಸಭೆಯ ನಂತರ ಡಿಕೆ ಶಿವಕುಮಾರ್ ಸಿಟಿ ರೌಂಡ್ಸ್ ಮಾಡಲಿದ್ದಾರೆ.

  • 13 Jun 2023 12:12 PM (IST)

    Karnataka News Live: ನನ್ನ ಸೋಲಿಗೆ ಮುಸ್ಲಿಂ ಸಮುದಾಯವೇ ಕಾರಣ ಎಂದ ಎಂಟಿಬಿ ನಾಗರಾಜ್

    ಬೆಂಗಳೂರು ಗ್ರಾಮಾಂತರ: ನನ್ನ ಸೋಲಿಗೆ ಮುಸ್ಲಿಂ ಸಮುದಾಯವೇ ಕಾರಣ ಎಂದು ಎಂಟಿಬಿ ನಾಗರಾಜ್ ಅವರು ಆತ್ಮಾವಲೋಕನಾ ಸಭೆಯಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಈ ವಿಡಿಯೋ  ವೈರಲ್ ಆಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ಯ ಹೊಸಕೋಟೆಯಲ್ಲಿ ನಡೆದಿದ್ದ ಸಭೆಯಲ್ಲಿ ಮಾತನಾಡಿದ್ದ ಅವರು ‘ಬಿಜೆಪಿಯ ಹಣ ತೆಗೆದುಕೊಂಡು ಕಾಂಗ್ರೆಸ್​ಗೆ ವೋಟು ಹಾಕಿದ್ದೀರಿ. ಅಲ್ಲಾ ಮೇಲೆ ಪ್ರಮಾಣ ಮಾಡಿ ನನ್ನ ಬೆನ್ನಿಗೇ ಚೂರಿ ಹಾಕಿದ್ರಿ, ಮುಸ್ಲಿಮರಿಗೆ ಹಣ ಕೊಡಬೇಡಿ ಮತ ಹಾಕಲ್ಲ, ಅದೇ  ಹಣವನ್ನ ಹಿಂದೂ ಸಮುದಾಯಗಳಿಗೆ ಕೊಡಿ ಎಂದಿದ್ದರು. ಇನ್ಮುಂದೆ ಭಯ ಪಡುವ ಪ್ರಮೇಯ ಇಲ್ಲ ಎಂದಿದ್ದಾರೆ.

  • 13 Jun 2023 12:02 PM (IST)

    Karnataka News Live: ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಲ್ಲ; ಮಾಜಿ ಸಿಎಂ ಬೊಮ್ಮಾಯಿ

    ಹುಬ್ಬಳ್ಳಿ: ನಾನು ವಿಪಕ್ಷ ನಾಯಕ ಸ್ಥಾನದ ಆಕಾಂಕ್ಷಿಯಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು  ಹೇಳಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ‘ಅಧಿವೇಶನ ಕರೆದ ಕೂಡಲೇ ವಿರೋಧ ಪಕ್ಷದ ನಾಯಕರ ಆಯ್ಕೆ ಮಾಡಲಾಗುತ್ತದೆ. ಸೋಲಿನ ಬಗ್ಗೆ ವರಿಷ್ಠರು ಬೇಸರ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ರಾಜ್ಯದ ಜನ ಕೊಟ್ಟ ತೀರ್ಪನ್ನು ಒಪ್ಪಿಕೊಂಡಿದ್ದೇವೆ. ನಾನೇ ವಿಧಾನಸಭೆ ಚುನಾವಣೆ ಸೋಲಿನ ಹೊಣೆ ಹೊತ್ತಿದ್ದೇನೆ ಎಂದರು. ಇನ್ನು ಕೆಲ ಶಾಸಕರ ಸೋಲಿಗೆ ಬೊಮ್ಮಾಯಿ ಕಾರಣ ಆರೋಪ ವಿಚಾರ ‘ ಸೋಲಿನ ಹೊಣೆ ಹೊತ್ತಿದ್ದೇನೆ ಎಂದಮೇಲೆ ಆರೋಪಕ್ಕೆ ಉತ್ತರಿಸಬೇಕಿಲ್ಲ

  • 13 Jun 2023 11:45 AM (IST)

    Karnataka News Live: ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್​ ಆದೇಶ ವಿಚಾರ; ಜನಾರ್ದನ ರೆಡ್ಡಿ ಹೇಳಿದಿಷ್ಟು

    ಮಂಗಳೂರು: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸಿಬಿಐ ವಿಶೇಷ ಕೋರ್ಟ್​ ಆದೇಶ ವಿಚಾರ ‘ ನನಗೆ ಸೇರಿದ್ದ 150 ಆಸ್ತಿಗಳನ್ನು ಸಿಬಿಐ ಮುಟ್ಟುಗೋಲು ಹಾಕಿಕೊಂಡಿತ್ತು. ಅದರಲ್ಲಿ 80ಕ್ಕೂ ಅಧಿಕ ಆಸ್ತಿಗಳನ್ನು ಕೋರ್ಟ್ ನಿನ್ನೆ ಬಿಡುಗಡೆ ಮಾಡಿದೆ. ಉಳಿದ 72 ಆಸ್ತಿಗಳು ಕೇಸ್ ಇತ್ಯರ್ಥದ ಬಳಿಕ ಪರಿಹಾರವಾಗಲಿದೆ ಎಂದು ಧರ್ಮಸ್ಥಳದಲ್ಲಿ ಕೆಆರ್​​ಪಿಪಿ ಸ್ಥಾಪಕ, ಶಾಸಕ ಜನಾರ್ದನರೆಡ್ಡಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಮಾತನಾಡಿದ ಅವರು ‘ನನ್ನ ಮೇಲೆ ದೇವರು ಮತ್ತು ಮಂಜುನಾಥಸ್ವಾಮಿಯ ಕೃಪೆ ಇದೆ. ನ್ಯಾಯದ ಮೇಲೆ ನನಗೆ ಮೊದಲಿನಿಂದಲೂ ನಂಬಿಕೆ ಇತ್ತು. ಮಂಜುನಾಥನ ಆಶೀರ್ವಾದದಿಂದ 80ಕ್ಕೂ ಹೆಚ್ಚು ಆಸ್ತಿ ವಾಪಸ್ ಬಂದಿದೆ.​ 2009ರ ಪೂರ್ವದಲ್ಲಿ ನನ್ನ ಆಸ್ತಿಗಳನ್ನು ಸಿಬಿಐ ಜಪ್ತಿ ಮಾಡಿತ್ತು.
    ಆಗ ಜಪ್ತಿಯಾಗಿದ್ದ 80ಕ್ಕೂ ಹೆಚ್ಚು ಆಸ್ತಿಗಳನ್ನು ಬಿಡುಗಡೆ ಮಾಡಿದೆ ಎಂದರು.

  • 13 Jun 2023 11:24 AM (IST)

    Karnataka News Live: ಬಿಬಿಎಂಪಿ ಚುನಾವಣೆ ವಿಚಾರವಾಗಿ ಗಂಭೀರ ಚರ್ಚೆ ನಡೆಸಿದ ರಾಜ್ಯ ಉಸ್ತುವಾರಿ ಸುರ್ಜೇವಾಲ

    ಬೆಂಗಳೂರು: ಬಿಬಿಎಂಪಿ ಚುನಾವಣೆ ವಿಚಾರವಾಗಿ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ಗಂಭೀರ ಚರ್ಚೆ ನಡೆಸಿದ್ದಾರೆ. ಸುರ್ಜೇವಾಲ ಅವರು ಬೆಂಗಳೂರು ಕಾಂಗ್ರೆಸ್ ಶಾಸಕರ ಅಭಿಪ್ರಾಯ ಪಡೆದಿದ್ದು. ಈ ವೇಳೆ ‘ಈಗ ಒಳ್ಳೆಯ ವಾತಾವರಣ ಪಕ್ಷದ ಪರವಾಗಿ ಇದೆ. ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ಮಾಡುವುದು ಒಳ್ಳೆಯದು. ಸರ್ಕಾರ ನಮ್ಮದೆ ಇರುವುದರಿಂದ ಕಾನೂನು ತೊಡಕುಗಳನ್ನು ಬೇಗ ಸರಿಪಡಿಸಬೇಕು.  ಮೀಸಲಾತಿ ಮತ್ತು ವಾರ್ಡ್ ಮರು ವಿಂಗಡಣೆ ಕಾನೂನು ತೊಡಕು ನಿವಾರಣೆ ಆಗಬೇಕು. ಈ ಮೊದಲೇ ಬಿಜೆಪಿ ಮಾಡಿದ ವಾರ್ಡ್ ವಿಂಗಡಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದೇವು. ಬಿಜೆಪಿಯವರು ಮತ ವಿಭಜನೆ ವಿಚಾರವಾಗಿ ತಾರತಮ್ಯ ಮಾಡಿ, ಅವರಿಗೆ ಅನುಕೂಲ ಆಗುವ ಹಾಗೆ ವಿಂಗಡಣೆ ಮಾಡಿದ್ದಾರೆ.  ಹಾಗಾಗಿ ವಾರ್ಡ್ ಮರು ವಿಂಗಡಣೆ ಆಗಲೇಬೇಕು ಜೊತೆಗೆ ಪಾಲಿಕೆಯನ್ನು ಕೂಡ ವಿಂಗಡಣೆ ಮಾಡುವುದರೊಂದಿಗೆ ಬಿ ಎಸ್ ಪಾಟೀಲ್ ಸಮಿತಿ ಕೊಡುವ ವರದಿ ಒಪ್ಪಿಕೊಳ್ಳಬೇಕು ಎಂದು ಬೆಂಗಳೂರು ಕಾಂಗ್ರೆಸ್ ಶಾಸಕರು ಸುರ್ಜೇವಾಲ ಮತ್ತು ಡಿಕೆಶಿಗೆ ಸಲಹೆ ಕೊಟ್ಟಿದ್ದಾರೆ.

  • 13 Jun 2023 11:17 AM (IST)

    Karnataka News Live: ಬಿಪರ್ ಜಾಯ್ ಎಫೆಕ್ಟ್; ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ತಕ್ಷಣದ ಸುರಕ್ಷತಾ ಕಾಮಗಾರಿ ಶುರು

    ಮಂಗಳೂರು: ಕಡಲ ತೀರಕ್ಕೂ ಬಿಪರ್ ಜಾಯ್ ಎಫೆಕ್ಟ್ ತಟ್ಟುವ ಸಾಧ್ಯತೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಚ್ಚೆತ್ತು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೂಚನೆ ಹಿನ್ನೆಲೆ ತಕ್ಷಣದ ಸುರಕ್ಷತಾ ಕಾಮಗಾರಿ ಶುರು ಮಾಡಿದೆ.  ಕಡಲಬ್ಬರದಿಂದ ಸಮುದ್ರ ಬದಿಯ ಮನೆಗಳನ್ನ ರಕ್ಷಿಸಲು ಜೆಸಿಬಿ ಮತ್ತು ಟಿಪ್ಪರ್ ಮೂಲಕ ಕಲ್ಲುಗಳನ್ನು ತಂದು ಹಾಕಲಾಗುತ್ತಿದೆ. ಉಚ್ಚಿಲ ಕಡಲ ತೀರದ ಬಟ್ಟಪಾಡಿ ಸಮುದ್ರ ತೀರದಲ್ಲಿ ಈ ತುರ್ತು ಕಾಮಗಾರಿ ನಡೆಯುತ್ತಿದ್ದು, ಸದ್ಯ ಭಾರೀ ರಕ್ಕಸ ಗಾತ್ರದ ಅಲೆಗಳಿಂದ ಸಮುದ್ರ ತೀರ‌ ಅಬ್ಬರಿಸುತ್ತಿದೆ. ಹೀಗಾಗಿ ಮನೆಗಳ ರಕ್ಷಣೆಗೆ ತುರ್ತು ಕಲ್ಲುಗಳನ್ನು ಹಾಕಲಾಗುತ್ತಿದೆ.

  • 13 Jun 2023 11:11 AM (IST)

    Karnataka News Live: ರಾಜ್ಯದ ಹಣಕಾಸಿನ ಸ್ಥಿತಿ ಬಗ್ಗೆ ಯೋಚಿಸಿ ಯೋಜನೆ ಘೋಷಣೆ ಮಾಡಬೇಕು; ಶೋಭಾ ಕರಂದ್ಲಾಜೆ

    ಮೈಸೂರು: ರಾಜ್ಯ ಸರ್ಕಾರದಿಂದ 5 ಗ್ಯಾರಂಟಿ ಯೋಜನೆಗಳ ಜಾರಿ ವಿಚಾರ‘ ಕರ್ನಾಟಕ ರಾಜ್ಯದ ಹಣಕಾಸಿನ ಸ್ಥಿತಿ ಹೇಗಿದೆ?, ಎಷ್ಟು ಸಾಲವಿದೆ? ಈ ಎಲ್ಲದರ ಬಗ್ಗೆಯೂ ಯೋಚಿಸಿ ಯೋಜನೆ ಘೋಷಣೆ ಮಾಡಬೇಕು ಎಂದು ಮೈಸೂರು ನಗರದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು. ಕಾಂಗ್ರೆಸ್ ಬಹಳ ಧೈರ್ಯದ ಮೇಲೆ ಗ್ಯಾರಂಟಿ ಘೋಷಣೆ ಮಾಡಿದೆ. ಹಣವನ್ನು ಹೇಗೆ ಹೊಂದಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಹೆಚ್ಚುವರಿ ತೆರಿಗೆ ವಿಧಿಸ್ತೀರಾ?, ಸಾಲ ಮಾಡುತ್ತೀರಾ ಮೊದಲು ತಿಳಿಸಿ ಎಂದರು.

     

  • 13 Jun 2023 11:04 AM (IST)

    Karnataka News Live: ಸಿಎಂ ಸಿದ್ದರಾಮಯ್ಯ ಭೇಟಿಯಾದ ನಟ ಶಿವರಾಜ್​ಕುಮಾರ್​

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ನಟ ಶಿವರಾಜ್​ಕುಮಾರ್​ ಅವರು ಸಿದ್ದರಾಮಯ್ಯರ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ, ಮಾತುಕಥೆ ನಡೆಸಿದ್ದಾರೆ. ಈ ವೇಳೆ ಸಚಿವ ಮಧು ಬಂಗಾರಪ್ಪ, ಗೀತಾ ಶಿವರಾಜ್​ಕುಮಾರ್ ಅವರು ಉಪಸ್ಥಿತರಿದ್ದರು.

  • 13 Jun 2023 11:02 AM (IST)

    Karnataka Breaking Kannada News Live Updates: ಡಿಸಿಎಂ ಡಿ.ಕೆ.ಶಿವಕುಮಾರ್​ ಬೆಂಗಳೂರು ನಗರ ಪ್ರದಕ್ಷಿಣೆಗೆ ಸಿದ್ಧತೆ

    ಡಿಸಿಎಂ ಡಿ.ಕೆ.ಶಿವಕುಮಾರ್​ ಅವರ ಬೆಂಗಳೂರು ನಗರ ಪ್ರದಕ್ಷಿಣೆಗೆ ಸಿದ್ಧತೆ ನಡೆದಿದೆ. ಬೆಳಗ್ಗೆ 11 ಗಂಟೆಗೆ ಬಿಡಿಎ ಕಚೇರಿಯಲ್ಲಿ DCM ಡಿಕೆ ಸಭೆ ನಡೆಸಲಿದ್ದಾರೆ. ಸಭೆ ಬಳಿಕ ಹೆಬ್ಬಾಳ ಫ್ಲೈ ಓವರ್ ಬಳಿ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. ವಾಹನಗಳ ದಟ್ಟಣೆ ಸ್ಥಳ ಪರಿಶೀಲನೆ ಮಾಡಲಿದ್ದಾರೆ.

  • 13 Jun 2023 10:30 AM (IST)

    Karnataka News Live: ಬಿಪರ್ ಜಾಯ್ ಚಂಡಮಾರುತ ಅಬ್ಬರ; ಕಾರವಾರದಲ್ಲಿ ಅಲೆಗಳ ಹೊಡೆತಕ್ಕೆ ಕಡಲ ಕೊರೆತ

    ಉತ್ತರ ಕನ್ನಡ:  ರಾಜ್ಯದ ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತ ಅಬ್ಬರ ಹಿನ್ನಲೆ ಜಿಲ್ಲೆಯ ಕಾರವಾರದ ಮಾಜಾಳಿ ಕಡಲತೀರದಲ್ಲಿ ಭಾರಿ ಕಡಲ ಕೊರತವಾಗಿದೆ. ಇನ್ನು ಅಲೆಗಳ ಹೊಡೆತಕ್ಕೆ ಪಿಚಿಂಗ್ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಡಲ ಕೊರೆತ ತಡೆಯಲು ಹಾಕಿದ್ದ ಪಿಚಿಂಗ್ (ತಡೆ ಗೋಡೆ) ಅಲೆಗಳ ಹೊಡೆತಕ್ಕ ಬೇರು ಸಮೇತ ಕಿತ್ತು ಬಂದಿದೆ. ಇನ್ನು ಎರಡು ದಿನಗಳ ಕಾಲ ಕಡಲ ಅಲೆಗಳು ಅಬ್ಬರಿಸಲಿದ್ದು, ಅಲೆಗಳ ಅಬ್ಬರಕ್ಕೆ ಪ್ರವಾಸಿಗರು ಆತಂಕಗೊಂಡಿದ್ದಾರೆ.

  • 13 Jun 2023 10:25 AM (IST)

    Karnataka News Live: ಇಂದಿನಿಂದ 5 ದಿನಗಳ ಕಾಲ ರಾಜ್ಯದಲ್ಲಿ ಮಳೆರಾಯ ಆರ್ಭಟ

    ಬೆಂಗಳೂರು: ಇಂದಿನಿಂದ 5 ದಿನಗಳ ಕಾಲ ರಾಜ್ಯದ ಹಲವೆಡೆ ಮಳೆರಾಯ ಆರ್ಭಟಿಸಲಿದ್ದಾನೆ. ಮಳೆರಾಯ  ಉತ್ತರ ಒಳನಾಡಿನಲ್ಲಿ ಇವತ್ತಿನಿಂದ 5 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಗುವ ಸಂಭವವಿದೆ. ಜೊತೆಗೆ ರಾಜ್ಯದ ಹಲವು ಕಡೆ ಗುಡುಗು ಮಿಂಚು ಸಹಿತ ಮಳೆಯಾಗಲಿದ್ದು, ಕರಾವಳಿ, ಒಳನಾಡಿನ ಕೆಲವು ಕಡೆ ಗಾಳಿಯ ವೇಗವು ಘಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.

Published On - 10:23 am, Tue, 13 June 23

Follow us on