ಇಂದು ಬೆಳಗ್ಗೆ 11.30ಕ್ಕೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ 4ನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆಗೆ(Gruha Lakshmi Scheme) ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಚಾಲನೆ ಸಿಗಲಿದೆ. ರಾಜ್ಯಾದ್ಯಂತ ಏಕಕಾಲದಲ್ಲಿ ಕಾಂಗ್ರೆಸ್ನ 4ನೇ ಗ್ಯಾರಂಟಿ ಉದ್ಘಾಟನೆಯಾಗಲಿದೆ. ರಾಹುಲ್ ಗಾಂಧಿ(Rahul Gandhi), ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Mallikarjun Karge) ಯೋಜನೆಗೆ ಚಾಲನೆ ನೀಡಿದ್ದಾರೆ. ಇಂದು ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ 2000 ರೂ. ಜಮೆಯಾಗಲಿದೆ. ಗೃಹಲಕ್ಷ್ಮೀ ಯೋಜನೆ ಹಿನ್ನೆಲೆ ರಾಹುಲ್ ಗಾಂಧಿ ಮೈಸೂರಿಗೆ ಆಗಮಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ. ಮತ್ತೊಂದೆಡೆ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿರುವ ಗುರುವಾಯೂರಿಗೆ ಮಾಜಿ ಸಿಎಂ ಯಡಿಯೂರಪ್ಪ(BS Yediyurappa) ಭೇಟಿ ನೀಡಲಿದ್ದಾರೆ. ದೇಗುಲದ ಆಡಳಿತ ಮಂಡಳಿ ಆಹ್ವಾನದ ಮೇರೆಗೆ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಿಎಸ್ ಯಡಿಯೂರಪ್ಪ ಭಾಗಿಯಾಗಲಿದ್ದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸಾಥ್ ಕೊಡಲಿದ್ದಾರೆ. ಇದು ರಾಜ್ಯದ ರಾಜಕೀಯ ವಿದ್ಯಮಾನವಾದ್ರೆ ಮತ್ತೊಂದೆಡೆ ಇಂದು ರಾಜ್ಯದೆಲ್ಲೆಡೆ ರಕ್ಷಾಬಂಧನ ಹಬ್ಬ ಸಂಭ್ರಮ ಮನೆ ಮಾಡಿದೆ. ವಿನೂತನ ಮಾದರಿಯ ರಾಖಿಗಳು ಸಕತ್ ಟ್ರೆಂಡ್ ಆಗುತ್ತಿದ್ದು ಅಣ್ಣ-ತಂಗಿಯರಿರುವ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಇದರೊಂದಿಗೆ ಇಂದಿನ ಕರ್ನಾಟಕದ ಲೇಟೆಸ್ಟ್ ಸುದ್ದಿಗಳ ಅಪ್ಡೇಟ್ಸ್ ಇಲ್ಲಿದೆ.
ಗೃಹಲಕ್ಷ್ಮಿ ಯೋಜನೆ ಜಾರಿ ಹಿನ್ನೆಲೆ ಮಹಿಳೆಯರಿಂದ ಕೇಕ್ ಕಟ್ ಮಾಡಿ ಗೃಹಲಕ್ಷ್ಮಿ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ. ನಗರದ ಪ್ರವಾಸಿ ಮಂದಿರದಲ್ಲಿ ಮಹಿಳೆಯರಿಂದ ಹುಟ್ಟು ಹಬ್ಬ ಆಚರಿಸಲಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಜೊತೆಯಲ್ಲಿ ಗೃಹಲಕ್ಷ್ಮಿ ಹುಟ್ಟು ಹಬ್ಬ ಆಚರಣೆ ಮಾಡಲಾಗಿದೆ.
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅನಾರೋಗ್ಯ ಹಿನ್ನೆಲೆ ಪತ್ನಿ ಅನಿತಾ ಕುಮಾರಸ್ವಾಮಿಗೆ ದೂರವಾಣಿ ಕರೆ ಮಾಡಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡಿದ್ದಾರೆ. ಜಯದೇವ ಆಸ್ಪತ್ರೆ ನಿರ್ದೇಶಕ ಡಾ.ಮಂಜುನಾಥ್ಗೂ ಕರೆ ಮಾಡಿ ಮಾತುಕತೆ ಮಾಡಿದ್ದಾರೆ.
ಜೂನ್ 11ರಿಂದ ಇಂದಿನವರೆಗೆ 50 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ನಾವು ಘೋಷಿಸಿದ್ದನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಕಳೆದ 9 ವರ್ಷಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಏನು ಮಾಡಿದೆ. ಇಷ್ಟು ಬೇಗ ಗ್ಯಾರಂಟಿ ಜಾರಿಗೆ ತರುತ್ತಾರೆಂದು ಬಿಜೆಪಿ ಅಂದುಕೊಂಡಿರಲಿಲ್ಲ. ಬಿಜೆಪಿಯವರು ವಿಪಕ್ಷ ನಾಯಕರನ್ನು ಆಯ್ಕೆ ಮಾಡದಿರುವುದು ದುರ್ದೈವ. ವಿಧಾನಸಭೆ ಚುನಾವಣೆ ಸೋಲಿನ ನಂತರ ಬಿಜೆಪಿ ದಿಕ್ಕೆಟ್ಟುಹೋಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.
ಸರ್ಕಾರ ಬಂದ 100 ದಿನದ ಸಂಭ್ರಮದಲ್ಲಿ ಗೃಹಲಕ್ಷ್ಮಿಗೆ ಚಾಲನೆ ನೀಡಿದ್ದೇವೆ ಎಂದು ಹುಬ್ಬಳ್ಳಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು. ಇವತ್ತು ರಾಜ್ಯದ 12 ಸಾವಿರ ಸ್ಥಳಗಳಲ್ಲಿ ಕಾರ್ಯಕ್ರಮ ನಡೆದಿದೆ. ಮಹಿಳೆಯರಿಗೆ ದೊಡ್ಡ ಶಕ್ತಿ ನಮ್ಮ ಸರ್ಕಾರ ಕೊಟ್ಟಿದ್ದೇವೆ ಎಂದರು.
ಕೋಲಾರದ ಶಾಂತಿ ಕಲ್ಯಾಣ ಮಂಟಪದಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದ ಮಹಿಳೆಯರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೊಸರನ್ನ, ಪಲಾವ್ ನೀಡಲಾಗಿದೆ. ಕಾರ್ಯಕ್ರಮ ಮುಗಿಯುವ ಮುನ್ನವೆ ಊಟಕ್ಕೆ ಗೃಹ ಲಕ್ಷ್ಮಿಯರು ಹಾಜರಾಗಿದ್ದು, ಊಟಕ್ಕಾಗಿ ತಳ್ಳಾಟ ನೂಕಾಟ ಉಂಟಾಗಿತ್ತು.
ಮಲ್ಲಿಕಾರ್ಜುನ ಖರ್ಗೆ, ರಾಹುಲ್ ನೇತೃತ್ವದಲ್ಲಿ ಯೋಜನೆಗೆ ಚಾಲನೆ ನೀಡಿದ್ದೇವೆ. ಗೃಹಲಕ್ಷ್ಮೀ ಯೋಜನೆಗೆ 1.11 ಕೋಟಿ ಮಹಿಳೆಯರಿಂದ ನೋಂದಣಿ ಮಾಡಲಾಗಿದೆ. ರಾಜ್ಯದ ಸಹೋದರಿಯರು, ತಾಯಂದಿರ ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಸಿಎಂ, ಡಿಸಿಎಂ ನೇತೃತ್ವದಲ್ಲಿ ಎಲ್ಲಾ ಗ್ಯಾರಂಟಿಗಳ ಜಾರಿ ಮಾಡುತ್ತೇವೆ ಎಂದು ರಾಮನಗರದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದರು.
ಚುನಾವಣೆ ಸಂದರ್ಭದಲ್ಲಿ ನಮ್ಮ ಪಕ್ಷ ಐದು ಗ್ಯಾರೆಂಟಿಗಳ ಭರವಸೆ ಕೊಟ್ಟಿತ್ತು. ಅದರಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಿದೆ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಮೈಸೂರಿನಲ್ಲಿ ಉದ್ಘಾಟನೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಸಹ ಗ್ರಾಮ ಪಂಚಾಯಿತಿ ಪುರಸಭೆ, ನಗರಸಭೆ ವಾರ್ಡ್ ಮಟ್ಟದಲ್ಲಿ ಕಾರ್ಯಕ್ರಮಗಳಿಗೆ ಚಾಲನೆ ಕೊಟ್ಟಿದ್ದೇವೆ. ಜಿಲ್ಲೆಯಲ್ಲಿ ಸುಮಾರು 2 ಲಕ್ಷ 17 ಸಾವಿರ ಫಲಾನುಭವಿಗಳು ನೋಂದಣಿ ಆಗಿದ್ದಾರೆ ಎಂದರು.
ಕೊಟ್ಟ ಭರವಸೆಯಂತೆ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದಾರೆ. ಮಹಿಳೆಗೆ ಮಾತ್ರ ಹಣ ನೀಡುತ್ತಿದ್ದಾರೆ, ಇದರಿಂದ ಸಂಭ್ರಮವಿಲ್ಲ. ರಾಜ್ಯದಲ್ಲಿ ಬರ ಪರಿಸ್ಥಿತಿ, ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಹೇಳಿದ್ದಾರೆ.
ಶಕ್ತಿ ಯೋಜನೆಯಡಿ ಜೂನ್ 11ರಿಂದ 48.50 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಜುಲೈ 10ರಂದು ಅನ್ನಭಾಗ್ಯ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದೆವು. ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ನಿರಾಕರಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದರು.
2013-2018ರವರೆಗೆ ಸರ್ಕಾರದ ಅವಧಿಯಲ್ಲಿ ಭರವಸೆ ಈಡೇರಿಸಿದ್ದೆವು. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಗ್ಯಾರಂಟಿ ಈಗಾಗಲೇ ಜಾರಿ ಮಾಡಿದ್ದೇವೆ. ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ ಮಾಡಿದ್ದೇವೆ. 1.10 ಕೋಟಿ ಫಲಾನುಭವಿಗಳ ಖಾತೆ ತಲಾ 2,000 ರೂಪಾಯಿ ಜಮೆ ಮಾಡಲಾಗುವುದು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದರು.
ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನಂತರ ಅವರು ಮಾತನಾಡಿದರು. ಈ ವೇಳೆ ಕಳೆದ 100 ದಿನಗಳಲ್ಲಿ ಸರ್ಕಾರದ ಸಾಧನೆಗಳ ಕಿರುಹೊತ್ತಿಗೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದಾರೆ.
ಎಸ್ಟಿ, ಎಸ್ಗಳ ಶಿಕ್ಷಣ ಕೇವಲ 7% ಇತ್ತು. ನಾವು 60% ಮಾಡಿದ್ದೇವೆ. ಕಾಂಗ್ರೆಸ್ 50 ವರ್ಷದಲ್ಲಿ ಏನು ಮಾಡಿಲ್ಲ ಅಂತ ಹೇಳ್ತಾರೆ. ನಾವು ಮಾಡಿದ್ದು ಬಹಳ ಇದೆ. 1947ರ ಹಿಂದೆ 2 ಲಕ್ಷ ಪ್ರಾರ್ಥಮಿಕ ಶಾಲೆಗಳಿದ್ದವು. ಈಗ 8 ಲಕ್ಷ ಇದೆ. ನರೇಗಾ ನಾವು ತಂದಿದ್ದು, ಸೋನಿಯಾ ಗಾಂಧಿಯವರು ಫುಡ್ ಸೆಕ್ಯೂರಿಟಿ ಆ್ಯಕ್ಟ್ ತಂದ್ರು, ಅದಕ್ಕೆ ಉಚಿತ ಅನ್ನ ಭಾಗ್ಯವೂ ನಾವು ತಂದದ್ದು. ಬಡವರಿಗಾಗಿ ನಾವು ಯೋಜನೆಗಳನ್ನು ಮಾಡಿದ್ದೇವೆ. ಆದರೆ ಅವರು ಶ್ರೀಮಂತರಿಗಾಗಿದ್ದಾರೆ. ಇಲ್ಲಿ ಮೋದಿ ಅಂತ ಹೇಳಿದರೆ ಕೇಸ್ ಹಾಕ್ತಾರೆ. ಮೋದಿ ಎಂದಿದಕ್ಕೆ ರಾಹುಲ್ ಗಾಂಧಿ ಮೇಲೆ ಕೇಸ್ ಹಾಕಿದರು. ಆದ್ರೆ ರಾಹುಲ್ ಯಾವುದಕ್ಕೂ ಹೆದರುವುದಿಲ್ಲ. ಕನ್ಯಾಕುಮಾರಿಯಿಂದ ಕಶ್ಮೀರವರೆಗೆ ಪಾದಯಾತ್ರೆ ಮಾಡಿ ರಾಹುಲ್ ಗಾಂಧಿ ಜನರ ಮಾತು ಆಲಿಸಿದ್ದಾರೆ. ಕೇಂದ್ರದ ಯಾವ ನಾಯಕ ಈ ರೀತಿ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ನಾಯಕರು ಹೇಳುತ್ತಾರೆ 50 ವರ್ಷದಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು. ಆದ್ರೆ ನಾವು ವಿಮಾನ ನಿಲ್ದಾಣ, ಅನೇಕ ಸಂಸ್ಥೆಗಳನ್ನು ಮಾಡಿದ್ದೇವೆ. ನಾವು ಮಾಡಿದ ಕೆಲಸಗಳಲ್ಲಿ ಹುಡುಕಾಡಿ ಸುಟ್ಟ ಬಣ್ಣ ಬಳಿದು ತಮ್ಮದೆನ್ನುತ್ತಾರೆ. ನಮ್ಮ ಬಳಿ ಕಾಂಗ್ರೆಸ್ ಸರ್ಕಾರ ಏನು ಮಾಡಿದೆ ಎಂಬ ರಿಪೋರ್ಟ್ ಕಾರ್ಡ್ ಇದೆ. ನೆಹರು, ಇಂದಿರಾ ಗಾಂದಿ, ಸೋನಿಯಾ ಗಾಂದಿ ಮಾಡಿದ ಎಲ್ಲಾ ಕಾರ್ಯಗಳ ರಿಪೋರ್ಟ್ ನಮ್ಮ ಬಳಿ ಇದೆ. 14% ಇಂದ 74% ಜನರಿಗೆ ನಮ್ಮ ಸರ್ಕಾರದ ಸಮಯದಲ್ಲಿ ಶಿಕ್ಷಿತರನ್ನಾಗಿ ಮಾಡಲಾಗಿದೆ.
ಕಾಂಗ್ರೆಸ್ ವಾಗ್ದಾನ ಮಾಡಿದನ್ನು ಪೂರೈಸಿದೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದರು ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ಅದನ್ನೇ ನಾನು ಹೇಳುತ್ತಿದ್ದೇನೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ಗ್ಯಾರಂಟಿಗಳನ್ನು ಘೋಷಿಸಿದ್ದು ಈಗಾಗಲೇ 4 ಗ್ಯಾರಂಟಿ ಘೋಷಣೆಯಾಗಿದೆ. ಒಂದು ಮಾತ್ರ ಬಾಕಿ ಇದೆ. ಯಾವ ಸರ್ಕಾರವೂ ಈ ರೀತಿಯ ಯೋಜನೆಗಳನ್ನು ಮಾಡಿಲ್ಲ. ಇಡೀ ಭಾರತದಲ್ಲಿ ಒಪ್ಪುವಂತಹ ಗ್ಯಾರಂಟಿಗಳಿವು. ಚುನಾವಣೆ ಮುಂಚೆ ನಾವು ಗ್ಯಾರಂಟಿ ಘೋಷಣೆ ಮಾಡಿದಗ, ಕೇಂದ್ರ ನಾಯಕರು ಟೀಕೆ ಮಾಡಿದರು. ಇದರಿಂದ ಆರ್ಥಿಕತೆ ಕುಸಿಯುತ್ತೆ. ಬೋಗಸ್ ಎಂದಿದ್ದರು. ಆದ್ರೆ ನಾವು ಇದನ್ನು ಮಾಡಿ ತೊರಿಸಿದ್ದೇವೆ ಎಂದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಡಿಜಿಟಲ್ ಕಾರ್ಡ್ ವಿತರಣೆ ಮಾಡಲಾಯಿತು. ಸಾಂಕೇತಿಕವಾಗಿ 10 ಫಲಾನುಭವಿಗಳಿಗೆ ಡಿಜಿಟಲ್ ಕಾರ್ಡ್ ವಿತರಣೆ ಮಾಡಲಾಯಿತು.
ನಾವು ಮಾಡಲಾಗುವುದನ್ನು ಮಾತ್ರ ಹೇಳುವುದು. ಈಡೇರಿಸಲಾಗದ ಮಾತುಗಳನ್ನು ಹೇಳುವುದಿಲ್ಲ. ಕಾಂಗ್ರೆಸ್ ಯೋಜನೆಗಳು ಮಹಿಳೆಯರ ಯೋಜನೆಗಳು ಇವುಗಳು ಕಾರ್ಣಿಕೃತರು ಮಹಿಳೆಯರು. ಯಾತ್ರೆ ವೇಳೆ ಆಲಿಸಿದ ಮಹಿಳೆಯರ ಸಮಸ್ಯೆಯನ್ನೇ ನಾವೀಗ ಈಡೇರಿಸಿದ್ದೇವೆ ಎಂದು ರಾಹುಲ್ ಗಾಂಧಿ ಅವರು ಮಹಿಳೆಯರಿಗೆ ರಕ್ಷಾ ಬಂಧನದ ಶುಭಾಶಯ ತಿಳಿಸಿ ತಮ್ಮ ಭಾಷಣ ಮುಗಿಸಿದರು.
ಕರ್ನಾಟಕ ಇಡೀ ದೇಶಕ್ಕೆ ದಿಕ್ಸೂಚಿಯಾಗಿದೆ. ನಮ್ಮ ಗ್ಯಾರಂಟಿ ಘೋಷಣೆ ವೇಳೆ ಕೇಂದ್ರ ಸರ್ಕಾರ ಟೀಕೆ ಮಾಡಿತ್ತು. ಆದ್ರೆ ನಾವಿಂದು ನುಡಿದಂತೆ ನಡೆದಿದ್ದೇವೆ. ಕರ್ನಾಟಕರ ನಮ್ಮ ತಾಯಂದಿರು, ಅಕ್ಕ-ತಂಗಿಯರು ಉಚಿತವಾಗಿ ಕರ್ನಾಟಕ ಸುತ್ತಾಡುತ್ತಿದ್ದಾರೆ. ಉಚಿತ ವಿದ್ಯುತ್ ನೀಡಲಾಗಿದೆ, ಇಂದು ಒಂದು ಕೋಟಿಗೂ ಹೆಚ್ಚು ಮಹಿಳೆಯರ ಖಾತೆಯಲ್ಲಿ ಎರಡು ಸಾವಿರ ಹಣ ಇದೆ. ಭಾರತ ದೇಶದ ಅತಿ ದೊಡ್ಡ ಹಣ ವರ್ಗಾವಣೆಯನ್ನು ನಮ್ಮ ಸರ್ಕಾರ ಮಾಡಿದೆ. 2 ಸಾವಿರ ಖಾತೆಗೆ ಹಣ ಹಾಗುವ ಯೋಜನೆ ಚಿಕ್ಕ ಯೋಜನೆ ಅಲ್ಲ. ಇದರಿಂದ ಮಹಿಳೆಯರು ಹಣ ಸೇವ್ ಮಾಡಬಹುದು, ಮಕ್ಕಳಿಗೆ ಪುಸ್ತಕ ಕೊಡಿಸಬಹುದು. ಇದರ ಸಂಪೂರ್ಣ ಉಪಯೋಗ ಮಹಿಳೆಯರ ಮೇಲಿದೆ.
ನಾನಿವತ್ತು ತುಂಬಾ ಖುಷಿಯಾಗಿದ್ದೇನೆ. ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದೆ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ನನಗಿವತ್ತು ನನ್ನ ತಂಗಿ ರಾಕಿ ಕಟ್ಟಿದ್ದಾಳೆ. ಈ ಶುಭ ದಿನದಂದು ನಾವು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದ್ದೇವೆ. ಮನೆಯ ಯಜಮಾನಿ ಮಹಿಳೆಯರ ಖಾತೆಗೆ 2 ಸಾವಿರ ಹಣ ಜಮೆ ಮಾಡಿದ್ಧೇವೆ.
ಕಾಂಗ್ರಸ್ನ 5ರಲ್ಲಿ 4 ಯೋಜನೆಗಳು ಮಹಿಳೆಯರ ಸಬಲೀಕರಣಕ್ಕೆ ಜಾರಿ ಮಾಡಿದ್ದೇವೆ. ಭಾರತ್ ಜೋಡೆ ಯಾತ್ರೆ ವೇಳೆ ನಾನು ಸಾವಿರಾರು ಮಹಿಳೆಯರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಈ ವೇಳೆ ನನಗೊಂದು ವಿಷಯ ಮನಸ್ಸಿಗೆ ತಾಕಿದೆ. ಬೆಲೆ ಏರಿಕೆ ಏಟು ನಮಗೆ ಬರೆ ಎಳೆದಿದೆ ಎಂದಿರಿ. ಇವತ್ತು ಪೆಟ್ರೋಲ್, ಟೀಸೆಲ್, ಅನಿಲ ಬೆಲೆ ಏರಿಕೆ ಬೀಳೋದು ಮಹಿಳೆಯರಿಗೆ. ಯಾವ ರೀತಿ ಬೇರು ಇಲ್ಲದೆ ಮರ ನಿಲ್ಲಲು ಸಾಧ್ಯವಿಲ್ಲವು ಅದೇ ರೀತಿ ಮಹಿಳೆಯರಿಲ್ಲದೆ ಕರ್ನಾಟಕ ನಿಲ್ಲಲು ಸಾಧ್ಯವಿಲ್ಲ. ಮಹಿಳೆಯರು ಬೇರು. ಬೇರುಗಳು ಯಾವ ರೀತಿ ಕಾಣುವುದಿಲ್ಲವೋ ಹಾಗೇ ಮಹಿಳೆಯರು ಕಾಣುತ್ತಿಲ್ಲ ಎಂದರು.
ಚುನಾವಣೆಯ ಮುಂಚೆ ಕಾಂಗ್ರೆಸ್ ಪಕ್ಷ 5 ಗ್ಯಾರಂಟಿ ಘೋಷಿಸಿತ್ತು. ಕಾಂಗ್ರೆಸ್ ಪಕ್ಷ ಕೊಟ್ಟ ಮಾತನ್ನು ಈಡೇರಿಸಿದೆ. ಇವತ್ತು ನಾವು ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಮನೆಯ ಯಜಮಾನಿಯ ಖಾತೆಗೆ ಹಣ ಸಂದಾನ ಆಗಿದೆ. ಪ್ರತಿ ತಿಂಗಳು 2 ಸಾವಿರ ಹಣ ಜಮೆ ಆಗಲಿದೆ. ಇದು ನಮ್ಮ ಹಾಗೂ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಭರವಸೆ. ನಾವು ಹೇಳಿದಂತೆ ರಾಜ್ಯದ ಹೆಣ್ಣು ಮಕ್ಕಳು ಉಚಿತವಾಗಿ ಶಕ್ತಿ ಯೋಜನೆ ಜಾರಿಯಾಗಿದೆ. ಮಹಿಳೆಯರೀಗ ಉಚಿತವಾಗಿ ಸಂಚರಿಸುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲಾಗುತ್ತಿದೆ. ಗ್ರಹ ಜ್ಯೋತಿಯಡಿ 200 ಯುನಿಟ್ ವಿದ್ಯುತ್ ನೀಡಲಾಗುತ್ತಿದೆ. ನಮ್ಮ ಐದು ಗ್ಯಾರಂಟಿಗಳ ಪೈಕಿ 4 ಗ್ಯಾರಂಟಿಗಳು ಮಹಿಳೆಯರಿಗಾಗಿ ಮಾಡಿರುವ ಯೋಜನೆಗಳು ಎಂದು ರಾಹುಲ್ ಎಂದರು.
ಮೈಸೂರಿನ ಗೃಹಲಕ್ಷ್ಮಿ ಚಾಲನಾ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್ನ 100 ದಿನಗಳ ಯಶಸ್ವಿ ಪುಸ್ತಕ ಬಿಡುಗಡೆ ಮಾಡಿದರು.
LIVE : 'ಗೃಹಲಕ್ಷ್ಮಿ ಯೋಜನೆ'ಯ ಸೌಲಭ್ಯ ವಿತರಣೆ ಕಾರ್ಯಕ್ರಮ, ಮಹಾರಾಜ ಕಾಲೇಜು ಅವರಣ, ಮೈಸೂರು. https://t.co/eajo40IS2F
— Karnataka Congress (@INCKarnataka) August 30, 2023
ರಾಜ್ಯ ಸರ್ಕಾರದ ಮಹತ್ತ್ವಾಕಾಂಕ್ಷೆಯ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಡಿಜಿಟಲ್ ಬಟನ್ ಒತ್ತುವ ಮೂಲಕ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದರು. ಗೃಹಲಕ್ಷ್ಮೀ ಯೋಜನೆಗೆ ನೋಂದಾಯಿತರ ಖಾತೆಗೆ ₹2000 ವರ್ಗಾವಣೆ ಮಾಡಲಾಗಿದೆ.
ಇಡೀ ದೇಶದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಇದೇ ಭೂಮಿ ಮೇಲೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ್ದರು. ಭಾರತ್ ಜೋಡಿ ಯಾತ್ರೆ ವೇಳೆ ಜನ ಎಲ್ಲಾ ಸಮಸ್ಯೆ ಹೇಳಿಕೊಂಡಿದ್ದರು. ನಮ್ಮ ಸರ್ಕಾರ ಬಂದು 100 ದಿನ ಆಗಿದೆ. ನಾವು ನುಡಿದಂತೆ ನಡೆದಿದ್ದೇವೆ. ನಾನು ಹಾಗೂ ಸಿದ್ದರಾಮಯ್ಯನವರು ನಮ್ಮ ನಾಡ ದೇವತೆಗೆ ನಮಿಸಿದ್ದೇವೆ. ನೂರು ದಿನಗಳಲ್ಲಿ ಕಾಂಗ್ರೆಸ್ನ ಗ್ಯಾರಂಟಿಗಳನ್ನು ನಾವು ಅನುಷ್ಠಾನ ಮಾಡಿದ್ಧೇವೆ. ಘೋಷಣೆ ಮಾಡಿದಂತೆ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದ್ದೇವೆ. ಬೆಳಗಾವಿಯಲ್ಲಿ ಗೃಹಜ್ಯೋತಿ ಯೋಜನೆ ಘೋಷಣೆ ಮಾಡಿದ್ದೆವು. ಬಳಿಕ ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆ ಘೋಷಣೆ ಮಾಡಿದ್ದೆವು. ಅಧಿಕಾರಕ್ಕೆ ಬಂದ ನೂರು ದಿನದಲ್ಲಿ ನಾಲ್ಕು ಗ್ಯಾರಂಟಿ ಜಾರಿ ಮಾಡಿದ್ದೇವೆ. ಇಡೀ ದೇಶದಲ್ಲೇ ಕರ್ನಾಟಕ ಮಾದರಿ ಎಂದು ತೋರಿಸಿದ್ದೇವೆ. 1.10 ಕೋಟಿ ಫಲಾನುಭವಿಗಳು ಗೃಹಲಕ್ಷ್ಮೀ ಹಣ ಪಡೆಯುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ರಾಹುಲ್ ಗಾಂಧಿ ಚಾಲನೆ ನೀಡಿದರು. ಡಿಜಿಟಲ್ ಬಟನ್ ಒತ್ತುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ವೆಂಕಟೇಶ್, ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ ಉಪಸ್ಥಿತರಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಕ್ಷಣಗಣನೆ ಶುರುವಾಗಿದ್ದು ಕಾರ್ಯಕ್ರಮದ ವೇದಿಕೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ವೆಂಕಟೇಶ್, ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ, ಭೈರತಿ ಸುರೇಶ್, ಬೋಸರಾಜು, ಸತೀಶ್ ಜಾರಕಿಹೊಳಿ, ಮುನಿಯಪ್ಪ, ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಹೆಚ್.ವಿಶ್ವನಾಥ್ ಆಗಮಿಸಿದ್ದಾರೆ.
ರಾಜ್ಯಾದ್ಯಂತ ಇಂದು ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ. ಈ ಹಿನ್ನೆಲೆ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲೂ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಕ್ಷೇತ್ರದ 17 ಗ್ರಾ.ಪಂ ವ್ಯಾಪ್ತಿಯಲ್ಲಿ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ಕಾರ್ಯಕ್ರಮ ಆಯೋಜನೆ ಮಾಡಿದ್ದು ಕಾಂಗ್ರೆಸ್ ಸರ್ಕಾರದ ಬ್ಯಾನರ್ಗಳಲ್ಲಿ ಎಸ್.ಟಿ.ಸೋಮಶೇಖರ್ ಫೋಟೋ ರಾರಾಜಿಸುತ್ತಿದೆ.
ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿರುವ ಗುರುವಾಯೂರು ದೇವಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ಭೇಟಿ ನೀಡಿದ್ದು ಶ್ರೀಕೃಷ್ಣ ದರ್ಶನ ಪಡೆದಿದ್ದಾರೆ. ದರ್ಶನ ಪಡೆದ ಬಳಿಕ ದೇವಸ್ಥಾನದ ಕಾರ್ಯಕ್ರಮದಲ್ಲಿ ಬಿಎಸ್ವೈ ಭಾಗಿಯಾಗಲಿದ್ದಾರೆ. BSY ಜೊತೆ ಪೂಜೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಕೂಡ ಭಾಗಿಯಾಗಲಿದ್ದಾರೆ.
ಬೀದರ್ನಲ್ಲಿ ಜಿಲ್ಲಾ ಮಟ್ಟದ ಗೃಹ ಲಕ್ಷ್ಮಿ ಯೋಜನೆಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದ್ದಾರೆ. ಚನ್ನಬಸವೇಶ್ವರ ಪಟ್ಟದೇವರ ರಂಗಮಂದಿರದಲ್ಲಿ ಗ್ರಹಲಕ್ಷ್ಮಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಪೌರಾಢಳಿತ ಸಚಿವ ರಹೀಂ ಖಾನ್, ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ, ಎಸ್ಪಿ ಚೆನ್ನಬಸವಣ್ಣ ಎಸ್. ಎಲ್ ನೂರಾರು ಫಲಾನುಭವಿಗಳು ಭಾಗಿಯಾಗಿದ್ದರು. ಬೀದರ್ ಜಿಲ್ಲೆಯಲ್ಲಿ 1 ಲಕ್ಷ 11 ಸಾವಿರ ಫಲಾನುಭವಿಗಳು ಲಾಭ ಪಡೆಯಲಿದ್ದಾರೆ.
ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮ ಚಾಲನೆ ಹಿನ್ನೆಲೆ ರಾಜ್ಯದ ಎಲ್ಲಾ ಕಡೆಗಳನ್ನು ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರಂತೆ ಆನೆಕಲ್ನಲ್ಲೂ ಗೃಹಲಕ್ಷ್ಮಿ ಯೋಜನೆ ಚಾಲನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಮಂಟಪ ಗ್ರಾಮ ಪಂಚಾಯಿತಿ ಕಚೇರಿ ಬಳಿ ಕಾರ್ಯಕ್ರಮ ಆಯೋಜಿಸಲಾಗಿದ್ದು ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇಲ್ಲದೆ ಮಹಿಳೆಯರು ಪರದಾಡುತ್ತಿದ್ದಾರೆ. ಇನ್ನು ಮಹಿಳೆ ತಲೆಯ ಮೇಲೆ ಹಲಸಿನ ಕಾಯಿ ಬಿದ್ದಿದ್ದು ಇತರೆ ಮಹಿಳೆಯರು ಹಾರೈಕೆ ಮಾಡಿದ್ದು ಆರೋಗ್ಯ ಕೇಂದ್ರದ ಸಿಬ್ಬಂದಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಗೆ ಅದ್ದೂರಿ ಚಾಲನೆ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿಯಾದರೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ಎಂಎಲ್ ಸಿ ಚನ್ನರಾಜ್ ಹಟ್ಟಿಹೊಳಿಗೆ ರಾಖಿ ಕಟ್ಟಿದರು. ಕಾರ್ಯಕ್ರಮದ ವೇದಿಕೆಯ ಹಿಂಭಾಗದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಿ ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ್ದಾರೆ.
ಮೈಸೂರಿನ ಮಂಡಕಳ್ಳಿ ಏರ್ಪೋರ್ಟ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರು ಬಂದಿಳಿದಿದ್ದಾರೆ. ಎಐಸಿಸಿ ಅಧ್ಯಕ್ಷ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ, ಡಿಸಿಎಂ ಡಿ.ಕೆ.ಶಿವಕುಮಾರ್ರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸಿದರು.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಅನಾರೋಗ್ಯ ಹಿನ್ನೆಲೆ ಜಯನಗರ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದು ಕುಮಾರಸ್ವಾಮಿ ಆರೋಗ್ಯ ವಿಚಾರಿಸಿ ಅನಿತಾ ಕುಮಾರಸ್ವಾಮಿ ತೆರಳಿದ್ರು. ಜ್ವರದಿಂದಾಗಿ ಮಾಜಿ ಸಿಎಂ ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆ ಚಾಲನೆಗೆ ಕೆಲವೇ ನಿಮಿಷಗಳು ಬಾಕಿ ಇವೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಖರ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ ಸೇರಿ ಹಲವರು ಭಾಗಿಯಾಗಲಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಚಾಲನೆ ಹಿನ್ನೆಲೆ ವಿಶೇಷ ವಿಮಾನದ ಮೂಲಕ ರಾಹುಲ್ ಗಾಂಧಿ ಮೈಸೂರಿನತ್ತ ಹೊರಟಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಿಂದ ಮೈಸೂರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶೇಷ ವಿಮಾನಕ್ಕಾಗಿ ಕಾದು ಕುಳಿತಿದ್ದಾರೆ. ಬೆಳಗ್ಗೆ 11.05ಕ್ಕೆ ಬರಬೇಕಿದ್ದ ವಿಶೇಷ ವಿಮಾನ ವಿಳಂಬವಾಗಿದೆ. ಕಾಂಗ್ರೆಸ್ ನಾಯಕರು ವಿಐಪಿ ಲಾಂಜ್ನಲ್ಲಿ ಕಾದು ಕುಳಿತಿದ್ದಾರೆ. ವಿಶೇಷ ವಿಮಾನ ಬಂದ ಬಳಿಕ ಮೈಸೂರಿಗೆ ಪ್ರಯಾಣಿಸಲಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಿನ್ನೆಲೆ ಸಂಚಾರಿ ಮಾರ್ಗಗಳ ಬದಲಾವಣೆ. ಟ್ರಾಫಿಕ್ ಜಾಮ್ ಆಗದಂತೆ ಕಾರ್ಯಕ್ರಮ ನಡೆಯುವ ಸುತ್ತಮತ್ತಲಿನ ಪ್ರಮುಖ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರಕ್ಕೆ ಬದಲಿ ಮಾರ್ಗ ಮಾಡಲಾಗಿದೆ. ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿ ಪೊಲೀಸರು ಸಂಚಾರಿ ಮಾರ್ಗ ಬದಲಾಯಿಸುತ್ತಿದ್ದಾರೆ. ಸಂಚಾರಿ ಮಾರ್ಗ ಬದಲಾಗಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ರಾಹುಲ್ ಗಾಂಧಿ ಬೆಂಗಳೂರಿನಿಂದ ಮೈಸೂರಿಗೆ ಬರುತ್ತಿರುವ ಹಿನ್ನೆಲೆ ಮೈಸೂರಿನ ಏರ್ಪೋರ್ಟ್ಗೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದಾರೆ. ಮಂಡಕಳ್ಳಿ ಏರ್ಪೋರ್ಟ್ನಲ್ಲಿ ರಾಹುಲ್ ಗಾಂಧಿಯನ್ನು ಸ್ವಾಗತಿಸಲಿದ್ದಾರೆ.
ಇಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಹಿನ್ನಲೆ ಚಾಮರಾಜನಗರ ಜಿಲ್ಲೆಯಾದ್ಯಂತ ಸಾರಿಗೆ ಬಸ್ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಚಾಮರಾಜನಗರದಲ್ಲಿ ಸಾರಿಗೆ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯೊಂದರಲ್ಲೇ 310 ಬಸ್ಗಳನ್ನು ಗೃಹಲಕ್ಷ್ಮಿ ಯೋಜನೆ ಕಾರ್ಯಕ್ರಮಕ್ಕೆ ನಿಯೋಜನೆ ಮಾಡಲಾಗಿದೆ. ಬಸ್ ಇಲ್ಲದೆ ದೂರ ದೂರಿಗೆ ಪ್ರಯಾಣ ಬೆಳೆಸಲು ಪ್ರಯಾಣಿಕರು ಪರದಾಡುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ಗೆ ರಾಹುಲ್ ಗಾಂಧಿ ಆಗಮಿಸಿದ್ದಾರೆ. ಏರ್ಪೋರ್ಟ್ನಲ್ಲಿ ರಾಹುಲ್ ಗಾಂಧಿ ಅವರನ್ನು ಡಿಕೆ ಶಿವಕುಮಾರ್ ಸ್ವಾಗತಿಸಿದರು. ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಹಿನ್ನೆಲೆ ಡಿಕೆ ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಕೆಂಪೇಗೌಡ ಏರ್ಪೋರ್ಟ್ನಿಂದ ಮೈಸೂರಿಗೆ ತೆರಳಲಿದ್ದಾರೆ.
ಮಡಿಕೇರಿ ನಗರದ ಅರಣ್ಯ ಇಲಾಖೆ ವಸತಿಗೃಹದಲ್ಲಿ ಮಂಡ್ಯ ಮೂಲದ ಅರಣ್ಯ ಇಲಾಖೆ DRFO ರಶ್ಮಿ(27) ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ 2 ವರ್ಷಗಳಿಂದ ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಶ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದು ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಮಡಿಕೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೃಹ ಲಕ್ಷ್ಮಿ ಯೋಜನೆ ಚಾಲನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ನಮ್ಮ ಈ ದೇಶದ ಹೆಣ್ಣು ಮಕ್ಕಳು ಕರ್ನಾಟಕದ ಮಾದರಿ ನೋಡ್ತಿದ್ದಾರೆ. ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಸಿಲಿಂಡರ್ ಬೆಲೆ 200 ರೂ ಇಳಿಸಿದ್ದಾರೆ. 500ರೂಗೆ ಗ್ಯಾಸ್ ಸಿಲಿಂಡರ್ ಕೊಡಬೇಕು ಅಂತ ಹೇಳಿದ್ದೆವು. ಈಗ ನಾವು 2 ಸಾವಿರ ಕೊಡ್ತಿದ್ದೀವಿ. ಹೆಣ್ಣು ಮಕ್ಕಳ ಅಕೌಂಟಿಗೆ ಹಣ ಹೋಗಲಿದೆ. ನೂರು ದಿನದ ಸಂಭ್ರಮ ಆಚರಿಸ್ತಿದ್ದೇವೆ. ನಾಡಿನ ಎಲ್ಲಾ ಹೆಣ್ಣು ಮಕ್ಕಳ ಮನೆಗೆ ಹಣ ತಲುಪುತ್ತಿದೆ. ಸಿದ್ದರಾಮಯ್ಯ, ನಾನು ಚೆಕ್‌ಗೆ ಸಹಿ ಹಾಕಿದ್ದೆವು. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಬರ್ತಿದ್ದಾರೆ. ಅವರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ ಎಂದು ಡಿಕೆ ಶಿವಕುಮಾರ್ ಸಂತಸ ಹಂಚಿಕೊಂಡರು.
ಇಂದು ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ. 4ನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ವೈಯಕ್ತಿಕ ಆಸೆ, ಆಕಾಂಕ್ಷೆ, ಅವಶ್ಯಕತೆಗಳನ್ನು ತ್ಯಾಗಮಾಡಿ ಕುಟುಂಬಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ನಾಡಿನ ಕೋಟ್ಯಂತರ ತಾಯಂದಿರು ಇಂದು ನಮ್ಮ "ಗೃಹಲಕ್ಷ್ಮಿ" ಯೋಜನೆಯಿಂದ ಸ್ವತಂತ್ರ, ಸ್ವಾವಲಂಬಿ ಬದುಕಿಗೆ ಪಾದಾರ್ಪಣೆ ಮಾಡಲಿದ್ದಾರೆ.
ನಮ್ಮ ಸರ್ಕಾರ ರಾಜ್ಯದ ಪ್ರತಿಯೊಬ್ಬ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ 2000 ರೂಪಾಯಿಗಳನ್ನು… pic.twitter.com/keyQVWP5ow
— Siddaramaiah (@siddaramaiah) August 30, 2023
ಇಂದು ಏಕಕಾಲಕ್ಕೆ ರಾಜ್ಯವ್ಯಾಪಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗಲಿದೆ. ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಕಾಂಗ್ರೆಸ್ ನಾಯಕರು ಚಾಲನೆ ನೀಡಲಿದ್ದು ಬೆಂಗಳೂರಿನ ಟೌನ್ಹಾಲ್ನಲ್ಲೂ ಕಾರ್ಯಕ್ರಮ ಚಾಲನೆಗೆ ಸಿದ್ಧತೆ ನಡೆದಿದೆ. ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್, ಆಡಳಿತಾಧಿಕಾರಿ ರಾಕೇಶ್ ಸಿಂಗ್ ನೇತೃತ್ವದಲ್ಲಿ ಮಧ್ಯಾಹ್ನ 12 ಗಂಟೆಗೆ ಟೌನ್ಹಾಲ್ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗುತ್ತೆ. ಪ್ರತಿ ವಾರ್ಡ್ನಲ್ಲೂ ಕಾರ್ಯಕ್ರಮ ವೀಕ್ಷಣೆಗೆ LED ಸ್ಕ್ರೀನ್ ಅಳವಡಿಸಲಾಗಿದೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಎನ್.ಇ.ಎಸ್. ಬಡಾವಣೆಯಲ್ಲಿ ಸಾಲಭಾಧೆಗೆ ವಿಷ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜೇಶ್(45) ಸುಧಾ(40) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಳವಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆ ಇಂದು ಅವರ ಕೋಲಾರ ಭೇಟಿ ರದ್ದು ಮಾಡಲಾಗಿದೆ. ಕೋಲಾರದ ಶ್ರೀನಿವಾಸಪುರದಲ್ಲಿಂದು ಕುಮಾರಸ್ವಾಮಿ ಅವರಿಂದ ರೈತರ ಜಮೀನುಗಳಿಗೆ ಭೇಟಿ ಕಾರ್ಯಕ್ರಮ ನಿಗದಿಯಾಗಿತ್ತು, ಅರಣ್ಯ ಇಲಾಖೆ ಒತ್ತುವರಿ ತೆರವು ವೇಳೆ ರೈತರ ಬೆಳೆಗಳು ನಷ್ಟವಾಗಿತ್ತು. ಈ ಪರಿಣಾಮ ರೈತರೊಂದಿಗೆ ಮಾತನಾಡಲು ಹೆಚ್ಡಿಕೆ ಆಗಮಿಸಲಿದ್ದರು. ಆದ್ರೆ ಈಗ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಕೋಲಾರ ಪ್ರವಾಸ ರದ್ದಾಗಿದೆ.
ತೀವ್ರ ಜ್ವರ ಹಿನ್ನೆಲೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಬೆಳಗಿನ ಜಾವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಡಿಕೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಾವೇರಿಯ ಆಲದಕಟ್ಟಿ ಬಳಿ ಪಟಾಕಿ ಗೋದಾಮಿನಲ್ಲಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿ ದುರಂತದಲ್ಲಿ ಮೃತಪಟ್ಟ ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ಪರಿಹಾರವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಕಾರ್ಮಿಕರ ಸಾವಿಗೆ ಸಂತಾಪ ಸೂಚಿಸಿದ ಮಾಜಿ ಸಿಎಂ ಬೊಮ್ಮಾಯಿ, ಪಟಾಕಿ ಗೋದಾಮು ದುರಂತ ಬಗ್ಗೆ ಸೂಕ್ತ ತನಿಖೆಯಾಗಲಿ. ಅಪಾಯಕಾರಿ ಸ್ಥಳದಲ್ಲಿ ಅಗತ್ಯವಿರುವ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕಾರ್ಮಿಕರ ರಕ್ಷಣೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ರಾಜ್ಯದ ಪಟಾಕಿ ಸಿಡಿಮದ್ದು ದಾಸ್ತಾನು ಕೇಂದ್ರಗಳಲ್ಲಿ ಪರಿಶೀಲನೆ ನಡೆಸಬೇಕು ಎಂದರು.
ಇಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಹಿನ್ನೆಲೆ ಮಹಾರಾಜ ಕಾಲೇಜು ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗುತ್ತಿದೆ. ಕಾನೂನು & ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ನೇತೃತ್ವದಲ್ಲಿ 2000ಕ್ಕೂ ಹೆಚ್ಚು ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಮುತ್ತುರಾಜ್, 10 ಎಸ್ಪಿಗಳು ಸೇರಿ ಅಧಿಕಾರಿಗಳಿಂದ ಭದ್ರತೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದ ಚಿರಾಯಿ(7) ಎಂಬ ಬಾಲಕ ಮೃತಪಟ್ಟಿದ್ದು ಇಂಜೆಕ್ಷನ್ ರಿಯಾಕ್ಷನ್ ನಿಂದ ಸಾವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಹೊಲಿಗೆ ಯಂತ್ರದಲ್ಲಿ ಕೈಸಿಲುಕಿ ಪೆಟ್ಟು ಹಿನ್ನೆಲೆ ಚಿಕಿತ್ಸೆಗಾಗಿ ಚಿಕ್ಕಜಾಜೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂಜೆಕ್ಷನ್ ಪಡೆದ ಬಳಿಕ ಬಾಲಕನಿಗೆ ವಾಂತಿ ಆಗಿದ್ದು ಹೊಳಲ್ಕೆರೆ ಸರ್ಕಾರಿ ಆಸ್ಪತ್ರೆಗೆ ಕರೆತಂದಾಗಲೂ ವೈದ್ಯರು ನಿರ್ಲಕ್ಷ ತೋರಿದ್ದು ಮಗು ಮೃತಪಟ್ಟಿದೆ. ಮೃತ ಬಾಲಕ ಚಿರಾಯಿ ಸಂಬಂಧಿಕರು ಸಾವಿನ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಲು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ದೇವಾಲಯ ಸಮೀಪದ ತೂಗು ಸೇತುವೆ ಬಳಿಯ ತುಂಗಾ ನದಿಯಲ್ಲಿ ಬೃಹತ್ ಗಾತ್ರದ ಮೀನುಗಳು ಮರಣ ಹೊಂದುತ್ತಿವೆ. ನದಿ ದಂಡೆಗೆ ಬಂದು ಬೃಹತ್ ಗಾತ್ರದ ಮೀನುಗಳು ಸಾವನ್ನಪ್ಪಿವೆ. ಬೃಹತ್ ಗಾತ್ರದ ಮೀನುಗಳನ್ನ ನೋಡಿ ಸ್ಥಳೀಯರು ಪ್ರವಾಸಿಗರು ಶಾಕ್ ಆಗಿದ್ದಾರೆ. ನದಿ ನೀರು ಕಡಿಮೆಯಾದ ಹಿನ್ನೆಲೆ ಮೀನುಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಮೈಸೂರಿನಲ್ಲಿ ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹ ಲಕ್ಷ್ಮಿ ಯೋಜನೆ ಜಾರಿ ಹಿನ್ನೆಲೆ ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗಾಗಿ ವಿಶೇಷ ಉಡುಗೊರೆಗಳು ರೆಡಿಯಾಗಿವೆ. ಫೋಟೋ ಫ್ರೇಮ್ಗಳು, ಇನ್‌ಲೇ ಆರ್ಟ್ ಮೂಲಕ ರಚಿಸಲಾದ ಕಲಾಕೃತಿಗಳು, ಪ್ರಕೃತಿ ಸೊಬಗಿನ ಕಲಾಕೃತಿಗಳು ಉಡುಗೊರೆ ನೀಡಲು ಕಾವೇರಿ ಎಂಪೋರಿಯಂ ನಿಂದ ತರಿಸಲಾಗಿದೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಜೋಡಕುರಳಿ ಗ್ರಾಮಕ್ಕೆ ಬಂದಿದ್ದ ನಾಲ್ವರು ಯುವಕರ ಪೈಕಿ ಮೂವರು ಯುವಕರನ್ನು ಕಳ್ಳರೆಂದು ಭಾವಿಸಿ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ಮಾಡಲಾಗಿದೆ. ನಿನ್ನೆ ರಾತ್ರಿ ಗ್ರಾಮಕ್ಕೆ ಬಂದ ನಾಲ್ವರು ಯುವಕರನ್ನು ಯಾರು ಎಂದು ಗ್ರಾಮಸ್ಥರು ವಿಚಾರಿಸಿದ್ದಾರೆ. ಈ ವೇಳೆ ಓರ್ವ ಯುವಕ ಪರಾರಿಯಾಗಿದ್ದು, ಮೂವರನ್ನು ಹಿಡಿದು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಮೂವರು ಯುವಕರ ರಕ್ಷಣೆ ಮಾಡಿದ್ದಾರೆ.
ಆಸ್ತಿ ವಿಚಾರಕ್ಕೆ ಮೈಸೂರಿನಲ್ಲಿ ಡಬಲ್ ಮರ್ಡರ್ ಆಗಿದೆ. ಮಚ್ಚಿನಿಂದ ಕೊಚ್ಚಿ ಅಣ್ಣ, ಅತ್ತಿಗೆಯ ಬರ್ಬರ ಕೊಲೆ ಮಾಡಿದ್ದಾರೆ. ಮೈಸೂರು ಜಿಲ್ಲೆ ನರಸೀಪುರ ತಾಲೂಕಿನ ನುಗ್ಗಳ್ಳಿಕೊಪ್ಪಲು ಗ್ರಾಮದಲ್ಲಿ ಪತಿ ಶಿವಲಿಂಗೇಗೌಡ(55), ಪತ್ನಿ ಭಾರತಿ(47) ಕೊಲೆ ನಡೆದಿದೆ. ಶಿವಲಿಂಗೇಗೌಡ ಸೋದರ ಹನುಮಂತೇಗೌಡ(50)ಆಸ್ತಿ ವಿಚಾರಕ್ಕೆ ಸಹೋದರನನ್ನೇ ಕೊಲೆ ಮಾಡಿದ್ದಾನೆ.
ಗೃಹಲಕ್ಷ್ಮಿ ಯೋಜನೆ ಜಾರಿ ಹಿನ್ನೆಲೆ ಇಂದು ಮೈಸೂರಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ದೆಹಲಿಯಿಂದ ಬೆಂಗಳೂರಿಗೆ ವಿಶೇಷ ವಿಮಾನದ ಮೂಲಕ ಆಗಮಿಸಲಿದ್ದಾರೆ. ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳಲಿದ್ದಾರೆ.
ಮಳೆ ಕೊರತೆ ಎಫೆಕ್ಟ್ನಿಂದಾಗಿ ಉಷ್ಣಾಂಶ ವಾಡಿಕೆಗಿಂತ 3 ಡಿಗ್ರಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಶೇ 23ರಷ್ಟು ಮಳೆ ಕೊರತೆ ಇದೆ. ಬೆಂಗಳೂರಿನಲ್ಲಿ 31.ಸೆಂ.ಮೀ ವಾಡಿಕೆ ಮಳೆಯಾಗಬೇಕಿತ್ತು, ಆದರೆ 22.6 ಸೆಂ ಮಳೆಯಾಗಿದೆ. ಮಳೆ ಕೊರತೆಯಿಂದ ಗರಿಷ್ಟ ಉಷ್ಣಾಂಶ ದಾಖಲಾಗುತ್ತಿದೆ.
ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಲಿಂಗಾಬುದಿ ಕೆರೆಯಲ್ಲಿ ಮೀನುಗಳ ಸಾವು ಮುಂದುವರಿದಿದೆ. ಕೊಳಚೆ ನೀರು ಕೆರೆಗೆ ಮಿಶ್ರಣವಾಗುತ್ತಿರುವುದರಿಂದ ಜಲಚರ ಸಾವು ಆರೋಪ ಕೇಳಿ ಬಂದಿದೆ. ಅರಣ್ಯ ಇಲಾಖೆ ನಿರ್ವಹಣೆಯಲ್ಲಿರುವ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗುತ್ತಿದೆ.
Published On - 7:59 am, Wed, 30 August 23