ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಆನೆಕಲ ತಾಲೂಕಿನ ಅತ್ತಿಬೇಲೆಯಲ್ಲಿ ಪಟಾಕಿ ಗೋಡೌನ್ನಲ್ಲಿ ಅಗ್ನಿ ದುರಂತ ಸಂಭವಿಸಿ 14 ಜನ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಉಪಮುಖ್ಯಮಂತ್ರಿ ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯದಲ್ಲಿ ಗಣಪತಿ ಹಬ್ಬ, ರಾಜಕೀಯ ಕಾರ್ಯಕ್ರಮ, ಸಭೆ ಮತ್ತು ಸಮಾರಂಭಗಳಲ್ಲಿ ಪಟಾಕಿ ಹಾರಿಸುವುದಕ್ಕೆ ಪಟಾಕಿ ನಿಷೇಧ ಹೇರಿದರು. ಮತ್ತು ಸುಪ್ರಿಂ ಕೋರ್ಟ್ ಆದೇಶದಂತೆ ದೀಪಾವಳಿಗೆ ಹಸಿರು ಪಟಾಕಿ ಮಾತ್ರ ಸಿಡಿಸುವಂತೆ ಹೇಳಿದರು. ಇನ್ನು ರಾಜ್ಯದಲ್ಲಿ ಜಾತಿಗಣತಿ ಜೋರಾಗಿ ಸದ್ದು ಮಾಡುತ್ತಿದ್ದು, ಇದಕ್ಕೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮತ್ತು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ರಾಜಕೀಯ ಕೆಸೆರೆಚಾಟ ಶುರುವಾಗಿದೆ. ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ ಸ್ವಪಕ್ಷದ ವಿರುದ್ಧ ಅಸಮಾಧಾನ ತೋಡಿಕೊಂಡಿದ್ದು, ಇದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಹೌದು ಎಂದಿದ್ದಾರೆ. ಇದರೊಂದಿಗೆ ರಾಜ್ಯದ ನೀರಾವರಿ, ಬರ, ಮಳೆ ಹಾಗೂ ಇನ್ನಿತರೆ ಸುದ್ದಿಗಳ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ…
ಕರ್ನಾಟಕ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಅವರನ್ನು ನೇಮಿಸಿ ಸರ್ಕಾರದಿಂದ ಬುಧವಾರ ಆದೇಶ ಹೊರಡಿಸಲಾಗಿದೆ. ನಿವೃತ್ತ ಐಎಎಸ್ ಅಧಿಕಾರಿ ಮೊಹಮ್ಮದ್ ಸನಾವುಲ್ಲಾ ಹಾಗೂ ಆರ್.ಎಸ್.ಪೋಂಡೆರನ್ನು ಹಣಕಾಸು ಆಯೋಗದ ಸದಸ್ಯರಾಗಿ ನೇಮಕ ಮಾಡಲಾಗಿದೆ. ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಹೆಚ್.ಮುನಿಯಪ್ಪರಿಂದ ಅಭಿನಂದನೆ ಸಲ್ಲಿಸಲಾಗಿದೆ.
ಗದಗ ಜಿಲ್ಲೆ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ರಾಮಣ್ಣ ಲಮಾಣಿ ನಾಳೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಅ.20ರಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆಯಲ್ಲಿ ಕಾವೇರಿ ನಿವಾಸದಲ್ಲಿ ಸಿಎಂ ಭೇಟಿ ಮಾಡಿದ್ದಾರೆ.
ಮೇಕೆದಾಟು ಆಣೆಕಟ್ಟು ಕಟ್ಟಲು ಭೂಮಿ ತೆಗೆದುಕೊಂಡು ವ್ಯವಸ್ಥೆ ಮಾಡಲಾಗಿದೆ. ನಮ್ಮ ಜಮೀನಿನಲ್ಲಿ ನಾವು ಏನು ಬೇಕಾದರೂ ಮಾಡಬಹುದು. ಆದರೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಬೇಕು ಎಂದು ಮೈಸೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯರನ್ನು ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಔರಾದ್ ಶಾಸಕ ಪ್ರಭು ಚೌಹಾಣ್ ಭೇಟಿ ಮಾಡಿದ್ದಾರೆ. ಗೋ ಹತ್ಯೆ ನೀಷೇಧ ಕಾಯ್ದೆ ವಾಪಸ್ ಪಡೆಯದೇ ಮತ್ತಷ್ಟು ಬಿಗಿಗೊಳಿಸುವಂತೆ, ಪುಣ್ಯ ಕೋಟಿ ದತ್ತು ಯೋಜನೆಗೆ ಮರು ಜೀವ ತುಂಬುವಂತೆ ಮತ್ತು ಗೋ ಶಾಲೆಗಳ ಬಗ್ಗೆ ಗಮನ ಹರಿಸುವಂತೆ ಸಿಎಂಗೆ ಲಿಖಿತ ಮನವಿ ನೀಡಿದ್ದಾರೆ.
ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ನಿರ್ಧಾರ ಕೈಗೊಳ್ಳಬೇಕು. ಮೇಕೆದಾಟು ಅಣೆಕಟ್ಟು ನಿರ್ಮಾಣ ನಮ್ಮ ಮೊದಲ ಆದ್ಯತೆಯಾಗಿದೆ. ಮೇಕೆದಾಟು ವಿಚಾರವಾಗಿ ಕೋರ್ಟ್ ಮುಂದೆ ವಾದ ಮಾಡುತ್ತಿದ್ದೇವೆ. ಕೋರ್ಟ್ನಲ್ಲಿ ಮತ್ತಷ್ಟು ವಾದ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ತಮಿಳುನಾಡು ಸರ್ಕಾರಕ್ಕೆ ಕೋರ್ಟ್ ಈಗಾಗಲೇ ನಿರ್ದೇಶನ ನೀಡಿದೆ. ಡ್ಯಾಂ ಕಟ್ಟಿ 170 ಟಿಎಂಸಿ ನೀರು ಕೊಡುತ್ತಾರೆಂದು ಮನದಟ್ಟು ಮಾಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮಹಿಷ ದಸರಾ, ಚಾಮುಂಡಿಬೆಟ್ಟ ಚಲೋ ಜಟಾಪಟಿ ಮುಂದುವರೆದಿದೆ. ಮೈಸೂರಿನ ಅಶೋಕ ವೃತ್ತದಲ್ಲಿ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ ಮಾಡಲಾಗಿದೆ.
ರಾಜ್ಯದ ಡ್ಯಾಮ್ಗಳಲ್ಲಿ ಎಷ್ಟು ಟಿಎಂಸಿ ನೀರಿದೆ ಎಂದು ದಾಖಲೆ ಪಡೆದಿದ್ದಾರೆ. ತಮಿಳುನಾಡಿನ ಡ್ಯಾಮ್ನಲ್ಲಿ ಎಷ್ಟು ನೀರಿದೆ ಎಂದು ಮಾಹಿತಿ ಪಡೆದಿದ್ದಾರೆ. ಕರ್ನಾಟಕ ಜಲಾಶಯಗಳಿಗೆ 7ರಿಂದ 10 ಸಾವಿರ ಕ್ಯೂಸೆಕ್ ಒಳಹರಿವು ಇದೆ. ನಮ್ಮ ರಾಜ್ಯದ ರೈತರ ರಕ್ಷಣೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಮೈಸೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಸ್ರೆಲ್‌ನಲ್ಲಿ ಇರುವ ರಬಕವಿ ಪಟ್ಟಣದ ಸಾಪ್ಟವೇರ್ ಇಂಜಿನಿಯರ್ ಪೂಜಾ ಉಮದಿ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಧೈರ್ಯ ಹೇಳಿದ್ದಾರೆ. ಪೂಜಾ ಹಾಗೂ ಅವರ ಕುಟುಂಬಸ್ಥರೊಂದಿಗೆ ಸಚಿವ ಆರ್ ಬಿ ತಿಮ್ಮಾಪೂರ ಕೂಡ ಮಾತುಕತೆ ಮಾಡಿದ್ದಾರೆ.
15 ದಿನ ನಿತ್ಯ 3000 ಕ್ಯೂಸೆಕ್ ನೀರು ಹರಿಸಲು CWRC ಆದೇಶ ನೀಡಿದೆ. ಈ ಹಿನ್ನೆಲೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ CWRC ಆದೇಶ ಕರ್ನಾಟಕಕ್ಕೆ ಮತ್ತೊಂದು ದೊಡ್ಡ ಆಘಾತ ಎಂದಿದ್ದಾರೆ.
ಮಳೆಯ ಕೊರತೆಯಿಂದ ಜಲಾಶಯಗಳೆಲ್ಲ ಖಾಲಿ ಆಗಿದ್ದರೂ ಕರ್ನಾಟಕಕ್ಕೆ ಬರೆಯ ಮೇಲೆ ಬರೆ ಎಳೆಯಲಾಗುತ್ತದೆ. ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಮುಂದಿನ 15 ದಿನಗಳ ಕಾಲ ನಿತ್ಯ 3,000 ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಮತ್ತೆ ಆದೇಶ ನೀಡಿರುವುದು ರಾಜ್ಯಕ್ಕೆ ಇನ್ನೊಂದು ದೊಡ್ಡ ಆಘಾತ. ಇಂಥ ಜಲಾಘಾತಗಳನ್ನು ಕೊಡುವುದಕ್ಕೇ ಪ್ರಾಧಿಕಾರ ಮತ್ತು…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 11, 2023
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾಗೆ ಟಿಕೆಟ್ ಕೊಡಬೇಕು ಎಂದು ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವ ಇದ್ದರೆ ಕಳೆದ ಬಾರಿ ಗೆಲುತ್ತಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ JDSನ 8 ಶಾಸಕರು ಇದ್ದರು. ಸಂಸದೆ ಸುಮಲತಾ ಪಕ್ಷಕ್ಕೆ ಸಹಕಾರ ನೀಡಿದ್ದಾರೆ ಎಂದರು.
ಕಾರ್ಪೊರೇಷನ್ ವೃತ್ತ, ಡಬಲ್ ರೋಡ್, ಮೆಜೆಸ್ಟಿಕ್, ಶಾಂತಿನಗರ, ಕಲಾಸಿಪಾಳ್ಯ, ಕೆ.ಆರ್.ಮಾರ್ಕೆಟ್, ಜಯನಗರ, ವಿಲ್ಸನ್‌ಗಾರ್ಡನ್, ಎಂ.ಜಿ.ರಸ್ತೆ, ವಿವೇಕನಗರ ಮತ್ತು ಕೋರಮಂಗಲ ಸೇರಿದಂತೆ ಬೆಂಗಳೂರು ಮಹಾನಗರದ ಹಲವೆಡೆ ಧಾರಾಕಾರ ಮಳೆ ಆಗಿದೆ. ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ.
ಯಾವ ಕ್ಷೇತ್ರಗಳಿಗೂ ಅನುದಾನ ಬಿಡುಗಡೆ ಆಗಿಲ್ಲ ಎಂದು ಯಾದಗಿರಿಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ. ತಾರತಮ್ಯ ವಿಚಾರ ಹುಟ್ಟು ಹಾಕಿದ್ದೆ ಬಿಜೆಪಿ. ಕಾಮಗಾರಿ ಬಿಲ್ ಆಗಿಲ್ಲ ಎಂದು ಮುನಿರತ್ನ ಪ್ರತಿಟಿಸಿದ್ದಾರೆ ಎಂದರು.
ಕಳೆದ 20 ನಿಮಿಷಗಳಿಂದ ಡಿಕೆ ಶಿವಕುಮಾರ್ ಜೊತೆ ಮುನಿರತ್ನ ಮಾತುಕತೆ ಮಾಡಿದ್ದು, ಅನುದಾನದ ಕುರಿತು ಉಭಯ ನಾಯಕರು ಚರ್ಚೆ ಮಾಡುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆ ವಿಚಾರವಾಗಿಯೂ ಅಸಮಾಧಾನ ಹೊರ ಹಾಕಿದ್ದು, ಮನೆ ಯಜಮಾನಿ ಸತ್ತರೆ ಯಜಮಾನನಿಗೆ ಕೊಡಲ್ಲಾ, ತಂದೆ-ತಾಯಿ ಇಬ್ಬರೂ ಸತ್ತರೆ ಪಾಪ ಮಕ್ಕಳಿಗೆ ಇಲ್ಲ. ಇದು ಗೃಹಲಕ್ಷ್ಮಿ, ಇಂತಹ ಕಾರ್ಯಕ್ರಮ ಯಾವುದು ಬರುತ್ತಿಲ್ಲ. ಯಾವುದಕ್ಕೂ ಹಣ ಇಲ್ಲಾ, ಬರೀ ಸುಳ್ಳು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ವಾಗ್ದಾಳಿ ಮಾಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ರನ್ನು ಇಂದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಭೇಟಿಯಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ಮಾಡಿದ್ದಾರೆ.
ಬೆಂಗಳೂರು: ಚುನಾವಣಾ ಫಲಿತಾಂಶ ಬಂದ ದಿನದಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಶಾಸಕನಾಗಿ ಕೆಲಸ ಮಾಡಲು ಕಷ್ಟ ಆಗುತ್ತಿದೆ. ಪೊಲೀಸ್ ದೌರ್ಜನ್ಯ, ಕಾಂಗ್ರೆಸ್ ಬೆಂಬಲಿಗರಿಂದ ಸಾರ್ವಜನಿಕರಿಗೆ ಕಿರುಕುಳ ಹೆಚ್ಚಾಗುತ್ತಿದೆ. ನಾನು ಒಂದು ವಾರ್ಡ್ ತನಿಖೆಗೆ ಪತ್ರ ಬರೆದರೆ ಇಡೀ ಕ್ಷೇತ್ರದ ಹಣ ತಡೆದಿದ್ದಾರೆ. ಪರಾಜಿತ ಅಭ್ಯರ್ಥಿ ಮತ್ತು ಅವರ ತಂದೆ ನೇರವಾಗಿ ಅಧಿಕಾರಿಗಳ ಸಭೆ, ದೂರವಾಣಿಯಲ್ಲಿ ಮಾಡುತ್ತಿದ್ದಾರೆ. ಡಿ.ಕೆ. ಸುರೇಶ್ ಅವರು ಸಂಸದರಾಗಿರುವ ಕ್ಷೇತ್ರಕ್ಕೆ ಹಣ ಕೊಡಿಸುವುದು ಅವರ ಕರ್ತವ್ಯ. ಅನುದಾನ ಬೇರೆಡೆ ವರ್ಗಾವಣೆ ಮಾಡಿದರೂ ಒಂದೇ ಒಂದು ಮಾತು ಮಾತಾಡಿಲ್ಲ. ಎಲ್ಲಾ ಶಾಸಕರನ್ನು ನೋಡುವ ರೀತಿಯಲ್ಲೇ ನನ್ನನ್ನೂ ನೋಡಿ ಎಂದು ವಿಧಾನಸೌಧದಲ್ಲಿ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಮನವಿ ಮಾಡಿದರು.
ಬೆಂಗಳೂರು: ತುಳುಕೂಟಕ್ಕೆ 50 ವರ್ಷದ ಸಂಭ್ರಮ ಹಿನ್ನೆಲೆಯಲ್ಲಿ ಉದ್ಯಾನನಗರಿ ಅರಮನೆ ಮೈದಾನದಲ್ಲಿ ಕಂಬಳ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಅರಮನೆ ಮೈದಾನದಲ್ಲಿ ಕಂಬಳದ ಕರೆ ಪೂಜೆ (ಭೂಮಿ ಪೂಜೆ) ನೆರವೇರಿಸಲಾಯಿತು. ನವೆಂಬರ್ ತಿಂಗಳ 24, 25, 26ರಂದು ಕಂಬಳ ನಡೆಸಲು ದಿನಾಂಕ ನಿಗದಿ ಮಾಡಲಾಗಿದೆ. ಈ ಹಿನ್ನೆಲೆ ಇಂದಿನಿಂದ ಕಂಬಳಕ್ಕಾಗಿ ಅಖಾಡ ಸಿದ್ಧಗೊಳ್ಳಲಿದೆ. ಕರೆ ಪೂಜೆಯಲ್ಲಿ ಡಿಸಿಎಂ ಡಿಕೆಶಿ, ಮಾಜಿ ಸಿಎಂ ಸದಾನಂದ ಗೌಡ ಹಾಗೂ ಅಶ್ವತ್ ನಾರಾಯಣ್, ಸಂಗೀತ ನಿರ್ದೇಶನ ಗುರುಕಿರಣ್, ತುಳುಕೂಟದ ಅಧ್ಯಕ್ಷ ಸುಂದರ್ ರಾಜ್ ರೈ ಭಾಗಿಯಾಗಿದ್ದಾರೆ.
ಬೆಳಗಾವಿ: ಬೆಳಗಾವಿಯ ಕೋಟೆ ಆವರಣದಲ್ಲಿರುವ ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ S.S.ಸೊಬರದ ಮುಂದೆ ಗುತ್ತಿಗೆದಾರ ನಾಗಪ್ಪ ಬಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಸೊಬರದ ರಸ್ತೆ ನಿರ್ವಹಣೆ ಬಿಲ್ ಮಂಜೂರು ಮಾಡದ ಹಿನ್ನೆಲೆಯಲ್ಲಿ ವಿಷ ಕುಡಿದು ಗುತ್ತಿಗೆದಾರ ನಾಗಪ್ಪ ಬಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಅನುದಾನ ಹಿಂಪಡೆದಿರುವ ಮೇಲ್ನೋಟಕ್ಕೆ ಇದು ದ್ವೇಷದ ರಾಜಕಾರಣ. ಎಲ್ಲಾ ಕ್ಷೇತ್ರಗಳಂತೆ ಆರ್.ಆರ್.ನಗರ ಕ್ಷೇತ್ರಕ್ಕೂ ಅನುದಾನ ಕೊಡಬೇಕು. ಅನುದಾನ ಬಗ್ಗೆ ಮುಖ್ಯಮಂತ್ರಿ, ಡಿಸಿಎಂ ಜೊತೆ ಮಾತನಾಡುತ್ತೇನೆ. ಎಲ್ಲಾ ಶಾಸಕರಿಗೂ ಅನುದಾನ ನೀಡಬೇಕು ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಂಗಳೂರು: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಕೈಬಿಟ್ಟಿರುವ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೆ ಆಗ್ರಹಿಸಿ ಬಿಜೆಪಿ ಶಾಸಕ ಮುನಿರತ್ನ ಅವರು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಮುನಿರತ್ನ ಜೊತೆ ಪ್ರತಿಭಟನೆ ಮಾಡುತ್ತಿದ್ದ ಎಲ್ಲ ಪ್ರತಿಭಟನಾನಿರತ 25ಕ್ಕೂ ಹೆಚ್ಚು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಮುನಿರತ್ನ ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದ್ದಾರೆ.
ಮೈಸೂರು ಅ.11: ನಾಡಹಬ್ಬ ದಸರಾ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ದಸರಾ ಪ್ರಮುಖ ಆಕರ್ಷಣೆ ನಾಡಕುಸ್ತಿಗೆ ಅಖಾಡ ಸಿದ್ಧವಾಗಿದೆ. ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಅರಿಶಿಣ, ಪಚ್ಚ ಕರ್ಪೂರ ಸೇರಿ ಹಲವು ವಸ್ತುಗಳ ಮಿಶ್ರಣದಿಂದ ಅಖಾಡವನ್ನು ತಯಾರಿಸಲಾಗಿದೆ. ಅ. 15 ರಂದು ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಲಾಗುತ್ತದೆ. ದಸರಾ ಕೇಸರಿ, ದಸರಾ ಕಂಠೀರವ, ದಸರಾ ಕುಮಾರ, ದಸರಾ ಕಿಶೋರಿ, ಮತ್ತು ಮೈಸೂರು ಕೇಸರಿ ಸೇರಿ ಹಲವು ಪ್ರಶಸ್ತಿ ನೀಡಲಾಗುತ್ತದೆ.
ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಫುರ ಜಿಲ್ಲೆ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿಗಳು ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಆಸ್ಪತ್ರೆಯ ವೈದ್ಯರು ಬರೆದ ಔಷಧಿಗಳು ಆಸ್ಪತ್ರೆಯ ಪಾರ್ಮಸಿಯಲ್ಲಿ ಇಲ್ಲವೆಂದು ಸಿಬ್ಬಂದಿಗಳು ಹೊರಗಡೆ ಕಳುಹಿಸುತ್ತಿದ್ದಾರೆ. ಸಿಬ್ಬಂದಿಗಳು ಆಸ್ಪತ್ರೆಯ ಜನೌಷಧಿಯಲ್ಲೂ ಔಷಧಿಗಳು ಇಲ್ಲವೆನ್ನುತ್ತಿದ್ದಾರೆ. ಆಸ್ಪತ್ರೆಗೆ ಸಮರ್ಪಕ ಔಷಧಿಗಳು ಸರಬರಾಜು ಆಗದೆ ರೋಗಿಗಳು ಪರದಾಡುತ್ತಿದ್ದಾರೆ. ಈ ಹಿನ್ನೆಲೆ ರೋಗಿಗಳು ಆಸ್ಪತ್ರೆಯ ಆಡಳಿತ ಮಂಡಳಿ ಹಾಗೂ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ.
ಬೆಂಗಳೂರು: ನಿಗಮ ಮಂಡಳಿಗಳ ಹಂಚಿಕೆಗೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿದ್ದರು. ಅಲ್ಲಿ ಹೈಕಮಾಂಡ್ ನಾಯಕರೊಂದಿಗೆ ಸಭೆ ನಡೆದಿದ್ದು, ಇಬ್ಬರ ನಡುವೆ ಒಮ್ಮತವಿಲ್ಲದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಗ್ರೀನ್ ಸಿಗ್ನಲ್ ನೀಡಲಿಲ್ಲ. ನಿಗಮ ಮಂಡಳಿ ಹಂಚಿಕೆ ವಿಚಾರದಲ್ಲಿ ಸಿಎಂ ಡಿಸಿಎಂ ಭಿನ್ನ ಭಿನ್ನ ನಿಲುವು ತಾಳಿದರು. 30 ಕ್ಕೂ ಹೆಚ್ಚು ಶಾಸಕರಿಗೆ ನಿಗಮ ಮಂಡಳಿ ಹಂಚಿಕೆ ಮಾಡಬೇಕೆಂದು ಸಿಎಂ ನಿರ್ಧರಿಸಿದ್ದರು. ಶಾಸಕರಿಗೆ ಅರ್ಧ ಭಾಗ ಕೊಟ್ಟರೆ ಕಾರ್ಯಕರ್ತರು ಮುಖಂಡರು ಸಮಾಧಾನ ಮಾಡುವುದು ಹೇಗೆ ಎಂದು ಡಿಸಿಎಂ ಪ್ರಶ್ನಿಸಿದ್ದಾರೆ.
ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸಿದ ಸರ್ಕಾರದ ನಡೆ ಖಂಡಿಸಿ ಇಂದು ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ನೀಡಬೇಕಿದ್ದ ಅನುದಾನ ಕಡಿತಗೊಳಿಸಿ, ಯಶವಂತಪುರ, ಬ್ಯಾಟರಾಯನಪುರ ಸೇರಿ ಬೇರೆ ಕ್ಷೇತ್ರಕ್ಕೆ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಕೋಲಾರ: ಸರ್ಕಾರದ ಗ್ಯಾರೆಂಟಿ ಯೋಜನೆಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲೆಯಾದ್ಯಂತ ಅನಿಯಮಿತ ಲೋಡ್ ಶೆಡ್ಡಿಂಗ್ನಿಂದ ರೈತರು ಕಂಗಾಲಾಗಿದ್ದಾರೆ. ಮೊದಲು ಏಳು ಗಂಟೆ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗುತ್ತಿತ್ತು. ಈಗ ಮೂರು ಗಂಟೆ ಸಹ ಕೊಡುತ್ತಿಲ್ಲ. ಸರ್ಕಾರದ ಪ್ರೀ ಯೋಜನೆಗಳು ಬಂದ ನಂತರವೇ ಇಂಥ ಪರಿಸ್ಥಿತಿ ಎದುರಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಬೆಳೆಗಳು ಒಣಗುತ್ತಿವೆ, ಅತ್ತ ಮಳೆ ಇಲ್ಲದೆ ಬರಗಾಲ ಆವರಿಸಿದೆ. ಇತ್ತ ಬೋರ್ ವೆಲ್ ಪಂಪ್‌ಸೆಟ್‌ಗಳಿಗೆ ಕರೆಂಟ್ ಇಲ್ಲ ಎಂದು ಕೋಲಾರ ತಾಲ್ಲೂಕು ಬಸವನತ್ತ, ಕಳ್ಳಿಪುರ ರೈತರು ಕಂಗಾಲಾಗಿದ್ದಾರೆ.
ಇಂದು (ಅ.11) ದೆಹಲಿಯ CWRC ಕಚೇರಿಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಯಲಿದ್ದು, CWRC ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ಅಧಿಕಾರಿಗಳು ಮತ್ತು ವಕೀಲರು ಭಾಗಿಯಾಗಲಿದ್ದಾರೆ. ಕಾವೇರಿ ನೀರು ಹರಿಸುವ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆ. ಈ ಹಿಂದೆ ಅಕ್ಟೋಬರ್ 12ರಂದು CWRC ಸಭೆ ನಿಗದಿಯಾಗಿತ್ತು.
ಚಿಕ್ಕೋಡಿ: ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡದ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ‘ಲೋಡ್‌ಶೆಡ್ಡಿಂಗ್’ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. ಇಂದು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ವಿವಿಧೆಡೆ ಬಿಜೆಪಿ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಕುಡಚಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಪಿ.ರಾಜೀವ್ ನೇತೃತ್ವದಲ್ಲಿ ರಾಯಬಾಗ ತಾಲೂಕಿನ ಕೆಇಬಿಯ 110ಕೆವಿ ಉಪಕೇಂದ್ರಗಳಿಗೆ ಮತ್ತು ಯಲ್ಪಾರಟ್ಟಿ, ಹಿಡಕಲ್‌ನಲ್ಲಿರುವ 110ಕೆವಿ ವಿದ್ಯುತ್ ಉಪಕೇಂದ್ರಗಳಿಗೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.
ಮೈಸೂರು:ಮಂಗಳವಾರ ಮುಂಜಾನೆ ಮೈಸೂರಿನ ಟಿಕೆ ಲೇಔಟ್‌ನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಅವರ ಖಾಸಗಿ ನಿವಾಸದ ಮೇಲೆ ಕಲ್ಲು ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಸ್ವತಿಪುರಂ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸತ್ಯಮೂರ್ತಿ ಆರೋಪಿ. ಸತ್ಯಮೂರ್ತಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಕಲ್ಲು ಎಸೆದು ಪರಾರಿಯಾಗಿದ್ದನು.
Published On - 8:00 am, Wed, 11 October 23