ಬೆಂಗಳೂರಿನಲ್ಲಿ ವರುಣನ ಅಬ್ಬರ ಜೋರಾಗಿದೆ. ರಸ್ತೆಗಳು ಮುಳುಗಿ ಕೆರೆಯಂತಾಗಿವೆ. ವಾಹನ ಸವಾರರಿಗೆ ಬೆಂಗಳೂರಿನ ಅಂಡರ್ ಪಾಸ್ಗಳು ಮೃತ್ಯುಕೂಪದಂತಾಗಿವೆ. ನಿನ್ನೆ ರಾತ್ರಿ ಬೆಳ್ಳಂದೂರಿನ ಕರಿಯಮ್ಮನ ಅಗ್ರಹಾರದಲ್ಲಿ ರಾಜಕಾಲುವೆ ನೀರು ನುಗ್ಗಿ 50 ಮೀಟರ್ ಉದ್ದದ ರಸ್ತೆ ಜಲಾವೃತಗೊಂಡಿತ್ತು. ಈ ವೇಳೆ ನೀರಿನಲ್ಲಿ ಸಿಲುಕಿದ್ದ ಗರ್ಭಿಣಿ ಸೇರಿ 50ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ. ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಶಾಲೆಗಳ ಸಮಯ ಬದಲಾವಣೆ ಸಂಬಂಧ ನಿನ್ನೆ ಮಹತ್ವದ ಸಭೆ ನಡೀತು. ಟ್ರಾಫಿಕ್ ನೆಪ ಇಟ್ಕೊಂಡು ಶಾಲೆಗಳ ಸಮಯ ಬದಲಾವಣೆಗೆ ತೀವ್ರ ವಿರೋಧ ವ್ಯಕ್ತವಾಯ್ತು. ಶಾಲಾ ಸಮಯ ಬದಲಾವಣೆ ಬದಲು ಶಾಲೆಗೆ ಮಕ್ಕಳನ್ನು ಬಿಡಲು ಬಿಎಂಟಿಸಿ ಬಸ್ ಬಳಸಬಹುದು. ಶಾಲೆಗಳ ಬಳಿ ಪೋಷಕರನ್ನೇ ಟ್ರಾಫಿಕ್ ವಾರ್ಡನ್ಗಳಾಗಿ ನೇಮಿಸಿ ಟ್ರಾಫಿಕ್ ಕಂಟ್ರೋಲ್ ಮಾಡಬಹುದು ಎಂಬ ಸಲಹೆಗಳು ಕೇಳಿ ಬಂದಿವೆ. ಹಾಗೂ ಪಡಿತರ ಕಾರ್ಡ್ ಫಲಾನುಭವಿಗಳಿಗೆ ಆಹಾರ ಇಲಾಖೆ ಸಿಹಿಸುದ್ದಿ ನೀಡಿದೆ. ಒಟ್ಟು 3 ಲಕ್ಷದ 80 ಸಾವಿರ ಹೊಸ ರೇಷನ್ ಕಾರ್ಡ್ ವಿತರಣೆಗೆ ಸರ್ಕಾರದ ಆದೇಶಿಸಿದೆ. ಇದರ ಜೊತೆಗೆ ರಾಜ್ಯದಲ್ಲಾಗುವ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಮಾಹಿತಿ ತಿಳಿಯಲು ಟಿವಿ9 ಡಿಜಿಟಲ್ ಫಾಲೋ ಮಾಡಿ.
ಹಾಸನ: H.D.ರೇವಣ್ಣ ಆಪ್ತ, ಗುತ್ತಿಗೆದಾರನ ಮೇಲೆ ಅಟ್ಯಾಕ್ ಮಾಡಿ ಕೊಲೆಗೆ ಯತ್ನ ನಡೆಸಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿಯಲ್ಲಿ ನಡೆದಿದೆ. ಕೂದಲೆಳೆ ಅಂತರದಲ್ಲಿ ಗುತ್ತಿಗೆದಾರ ಅಶ್ವತ್ಥ್ ಪ್ರಾಣ ಉಳಿಸಿಕೊಂಡಿದ್ದಾರೆ. ಹೌದು, ಸಂಜೆ ಹಾಸನದಿಂದ ರೇವಣ್ಣ ಜೊತೆ ಹೊಳೆನರಸೀಪುರದ ಮನೆಗೆ ತೆರಳಿದ್ದರು. ಕೆಲಕಾಲ ರೇವಣ್ಣ ಜೊತೆ ಇದ್ದು, ಚನ್ನರಾಯಪಟ್ಟಣ ನಿವಾಸಕ್ಕೆ ವಾಪಸಾಗುತ್ತಿದ್ದರು. ಮನೆಗೆ ಹೊರಟ ಬಗ್ಗೆ ಮಾಹಿತಿ ಪಡೆದು ಸೂರನಹಳ್ಳಿ ಹಂಪ್ಸ್ ಬಳಿ ಅಟ್ಯಾಕ್ ಮಾಡಿದ ದುಷ್ಕರ್ಮಿಗಳು, ಕಲ್ಲು ಎತ್ತಿಹಾಕಿ ಮಾರಕಾಸ್ತ್ರಗಳಿಂದ ಕೊಲೆಗೆ ಯತ್ನಿಸಿದ್ದಾರೆ.
ಬೆಂಗಳೂರು: ಜೆಡಿಎಸ್ ಪಕ್ಷವನ್ನು ಬಿಜೆಪಿಯ ಕಾಲ ಬುಡದಲ್ಲಿ ನೈವೇದ್ಯಕ್ಕೆ ಇಟ್ಟು, ನೀವು ಹಾಗೂ ನಿಮ್ಮ ಫ್ಯಾಮಿಲಿ ಬಿಜೆಪಿಯ ಜೀತ ಮಾಡಿಕೊಂಡಿರುವ ಕಾಲ ಶೀಘ್ರದಲ್ಲಿ ಬರಲಿದೆ ಎಂದು ದಳಪತಿಗಳ ವಿರುದ್ಧ ಕಾಂಗ್ರೆಸ್ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದೆ. ಕುಮಾರಸ್ವಾಮಿ ಅವರೇ, ಮೊದಲು ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಯಡಿಯೂರಪ್ಪನವರು ಎಂದಿರಿ, ನಂತರ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರು ಎಂದಿರಿ, ಈಗ ಡಿ ಕೆ ಶಿವಕುಮಾರ್ ಅವರು ಮೈತ್ರಿ ಸರ್ಕಾರ ಬೀಳಿಸಿದರು ಎನ್ನುತ್ತಿದ್ದೀರಿ. ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು, ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
,@hd_kumaraswamy ಅವರೇ,
ಮೊದಲು ಮೈತ್ರಿ ಸರ್ಕಾರವನ್ನು ಉರುಳಿಸಿದ್ದು ಯಡಿಯೂರಪ್ಪನವರು ಎಂದಿರಿ,
ನಂತರ ಮೈತ್ರಿ ಸರ್ಕಾರ ಬೀಳಿಸಿದ್ದು ಸಿದ್ದರಾಮಯ್ಯನವರು ಎಂದಿರಿ, ಈಗ ಡಿ ಕೆ ಶಿವಕುಮಾರ್ ಅವರು ಮೈತ್ರಿ ಸರ್ಕಾರ ಬೀಳಿಸಿದರು ಎನ್ನುತ್ತಿದ್ದೀರಿ.ಮಾತು ಬದಲಿಸುವ ನಿಮ್ಮ ನಾಲಿಗೆಯನ್ನು ಕಂಡು ಬಣ್ಣ ಬದಲಿಸುವ ಗೋಸುಂಬೆಯೂ ನಾಚಿಕೊಳ್ಳುತ್ತಿದೆ!!…
— Karnataka Congress (@INCKarnataka) October 10, 2023
ದಾವಣಗೆರೆ: ಜಾಗತಿಕ ಮಟ್ಟದಲ್ಲಿ ಗಾಂಜಾ ಸೇರಿದಂತೆ ಮಾದಕವಸ್ತು ಪೂರೈಕೆ ಹೆಚ್ಚುತ್ತಿದೆ ಎಂದು ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು. ರಾಜ್ಯದಲ್ಲಿ ಮಾದಕ ವಸ್ತು ನಿಗ್ರಹಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಗಾಂಜಾ ಪೂರೈಕೆ ಮಾಡುವವರ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಬೇಕು. ಶಾಲಾ ಆವರಣದಲ್ಲಿ ಇಂತಹ ಘಟನೆ ನಡೆಯುತ್ತಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ದಾವಣಗೆರೆ ಎಸ್ಪಿ ಕಚೇರಿಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಉಡುಪಿ: ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಮಾತನಾಡಿದ ಪೇಜಾವರ ಸ್ವಾಮೀಜಿ ಅವರು ಶಿವಮೊಗ್ಗ ಘಟನೆ ತಿರುಗೇಟು ಕೊಟ್ಟಿದ್ದಾರೆ ‘ ಎಷ್ಟು ಅಂಗಡಿ, ಮನೆಗೆ ಕಲ್ಲು ಬಿತ್ತು?. ಎಷ್ಟು ವಾಹನ- ಪ್ರಾರ್ಥನಾ ಮಂದಿರಕ್ಕೆ ಬೆಂಕಿ ಬಿತ್ತು?. ನಾವು ಹಿಂದೂಗಳು ಶಾಂತಿ ಪ್ರೀಯರು. ಧರ್ಮದ ಪ್ರತೀಕ ಶ್ರೀರಾಮ ಚಂದ್ರ, ಅವನೇ ನಮಗೆ ಆದರ್ಶ ಎಂದಿದ್ದಾರೆ. ಈ ದೇಶದ ಕಣ ಕಣವೂ ಪವಿತ್ರ, ಮಾತೆಯರು ಸ್ವರ್ಗಕ್ಕೆ ಮಿಗಿಲು. ನಾವು ಕಲ್ಲೆಸೆಯಲ್ಲ, ಕೊಳ್ಳಿ ಇಡಲ್ಲ ,ತಲೆ ಒಡೆಯುವುದಿಲ್ಲ. ಒಳ್ಳೆ ವಿಚಾರದಲ್ಲಿ ನಮ್ಮ ಹೃದಯ ಮನೆ ತರೆದಿರುತ್ತದೆ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ: ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ 14 ಜನ ಸಜೀವದಹನ ಹಿನ್ನೆಲೆ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕು ಆಡಳಿತ, ಪಟಾಕಿ ಸಂಗ್ರಹಿಸಿದ್ದ 5 ಗೋದಾಮುಗಳ ಮೇಲೆ ಅಧಿಕಾರಿಗಳ ದಾಳಿ ನಡೆಸಿದ್ದು, ಪಟಾಕಿ ಸಂಗ್ರಹಿಸಿದ್ದ 5 ಗೋದಾಮು ಜಪ್ತಿ ಮಾಡಲಾಗಿದೆ. ನೆಲಮಂಗಲ ತಹಶೀಲ್ದಾರ್ ಅರುಂಧತಿ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.
ಬೆಂಗಳೂರು: 71 ಪೊಲೀಸ್ ಸಬ್ ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬ್ ಇನ್ಸ್ಪೆಕ್ಟರ್ಗಳನ್ನು ಆಡಳಿತಾತ್ಮಕ ಕಾರಣಗಳಿಂದ ನಗರದ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಜಂಬೂಸವಾರಿ ಮೆರವಣಿಗೆಗೆ ಎರಡು ವಾರಗಳಷ್ಟೇ ಬಾಕಿಯಿದ್ದು, ದಸರಾ ಗಜಪಡೆಯ ತಾಲೀಮು ಮತ್ತಷ್ಟು ಬಿರುಸುಗೊಂಡಿದೆ. ಇಂದು ಸಂಜೆ ಮಹೇಂದ್ರನಿಗೆ ಮರದ ಅಂಬಾರಿ ಕಟ್ಟಿ, ಸುಮಾರು 1000 ಕೆಜಿಯಷ್ಟು ಭಾರ ಹೊರಿಸಿ ತಾಲೀಮು ನಡೆಸಿದ್ದಾರೆ.
ಮೈಸೂರು: ಕಾನೂನು, ಸುವ್ಯವಸ್ಥೆ ದೃಷ್ಟಿಯಿಂದ ಮಹಿಷ ದಸರಾಗೆ ಅನುಮತಿ ನೀಡಿಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು. ಇನ್ನು ಸೆ.13ರಂದು 144 ಸೆಕ್ಷನ್ ಜಾರಿ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಮುಂದಿನ 2 ದಿನದ ಪರಿಸ್ಥಿತಿ ನೋಡಿಕೊಂಡು ತೀರ್ಮಾನ ಮಾಡುತ್ತೇವೆ. ಯಾರಾದ್ರೂ ಕಾನೂನು ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಹಾವೇರಿ: ಜಿಲ್ಲೆಯ ರಾಣೇಬೆನ್ನೂರು ತಾ.ನೂಕಾಪುರ ಗ್ರಾಮದಲ್ಲಿ ಆಯತಪ್ಪಿ ಕೆರೆಗೆ ಬಿದ್ದು ಕುರಿಗಾಹಿ ಯುವಕ ಕೃಷ್ಣ(29) ಎಂಬಾತ ಸಾವನ್ನಪ್ಪಿದ ಘಟನೆ ನಡೆದಿದೆ. ಕುರಿಗಳಿಗೆ ನೀರು ಕುಡಿಸುವಾಗ ಆಯತಪ್ಪಿ ಕೆರೆ ಬಿದ್ದ ಕೃಷ್ಣ ಮೃತನಾಗಿದ್ದಾನೆ. ಸ್ಥಳಕ್ಕೆ ರಾಣೇಬೆನ್ನೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಲಾಗಿದೆ.
ಆನೇಕಲ್: ಮಳೆಯಿಂದ ಬೆಳ್ಳಂದೂರು ಹಾಗೂ ಸಜಾಪುರ ಮುಖ್ಯ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಈ ಹಿನ್ನಲೆ ವಾಹನ ಸವಾರರು ನೀರು ತುಂಬಿದ ರಸ್ತೆಯಲ್ಲಿ ಪರದಾಟ ನಡೆಸುವಂತಾಗಿದೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಹೆದ್ದಾರಿಯಲ್ಲಿ ನೀರು ತುಂಬಿದೆ. ಪ್ರತಿ ಬಾರಿ ಮಳೆ ಬಂದಾಗಲೂ ನೀರು ತುಂಬಿ ಅವಾಂತರ ಸೃಷ್ಟಿಯಾಗುತ್ತದೆ.
ಮೈಸೂರು: ಮಹಿಷಾ ದಸರಾ, ಚಾಮುಂಡಿ ಬೆಟ್ಟ ಚಲೋಗೆ ಅನುಮತಿ ನಿರಾಕರಿಸಿ ಮೈಸೂರು ಪೊಲೀಸ್ ಆಯುಕ್ತ ಬಿ.ರಮೇಶ್ ಆದೇಶಿಸಿದ್ದಾರೆ. ಅಕ್ಟೋಬರ್ 13 ರಂದು ಮಹಿಷಾ ದಸರಾ ಆಚರಣೆ ಸಮಿತಿ ಅವರು ಮಹಿಷಾ ದಸರಾಕ್ಕೆ ಅನುಮತಿ ಕೋರಿದ್ದರು. ಅದೇ ದಿನ ಮಹಿಷಾ ದಸರಾ ವಿರೋಧಿಸಿ ಚಾಮುಂಡಿ ಬೆಟ್ಟ ಚಲೋಗೆ ಬಿಜೆಪಿ ಅನುಮತಿ ಕೋರಿತ್ತು. ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ಹಿನ್ನೆಲೆ ಎರಡೂ ಕಾರ್ಯಕ್ರಮಗಳ ಅನುಮತಿ ರದ್ದು ಮಾಡಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ‘ನನ್ನ ಕ್ಷೇತ್ರದ ಜನರಿಗಾಗಿ ನಾನು ಅವರ ಕಾಲು ಬೀಳಲೂ ಸಿದ್ದನಿದ್ದೇನೆ ಎಂದು ಶಾಸಕ ಮುನಿರತ್ನ ಹೇಳಿದರು. ಪ್ರತಿಭಟನೆ ಮುಗಿದ ಕೂಡಲೇ ಬೆಂಗಳೂರು ನಗರಾಭಿವೃದ್ಧಿ ಸಚಿವರು, ಸಂಸದರು ಇಬ್ಬರ ಕಾಲು ಹಿಡಿಯಲು ಸಿದ್ದನಿದ್ದೇನೆ ಎಂದರು. ‘ನನ್ನ ಕೊನೆ ಉಸಿರು ಇರುವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ, ನಾನು ಎಲ್ಲಿಗೂ ಹೋಗಲ್ಲ. ಡಿಸಿಎಂ ರಿಂದಲೇ ಅನುದಾನ ಬೇಕಿರುವುದು. ಬದಲಾವಣೆ ಅನುದಾನ ಕೊಡಿಸಬೇಕಿರುವುದು ಅವರೇ, ನಾನು ಸಿಎಂ ಹತ್ತಿರ ಹೋಗಲ್ಲ, ಡಿಸಿಎಂ ಹತ್ತಿರ ಹೋಗುತ್ತೇನೆ. ಅವರ ಕಾಲನ್ನೇ ನಾನು ಹಿಡಿಯುತ್ತೇನೆ. ಕಾಶ್ಮೀರ ಸಮಸ್ಯೆ ಬಗೆ ಹರಿಯುತ್ತದೆ, ಆದರೆ ನನ್ನ ಕ್ಷೇತ್ರದ ಸಮಸ್ಯೆ ಬಗೆ ಹರಿಯಲ್ಲ ಎಂದು ಹೇಳಿದರು.
ಮೈಸೂರು: ನಗರದ ಟಿ.ಕೆ ಬಡಾವಣೆಯಲ್ಲಿರುವ ಸಿಎಂ ಸಿದ್ದರಾಮಯ್ಯ ಅವರ ಮನೆ ಮೇಲೆ ಕಲ್ಲೇಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೋಲಿಸರನ್ನು ಬಂಧಿಸಿದ್ದಾರೆ. ಬೆಳಗ್ಗೆ 8 ಗಂಟೆಯಲ್ಲಿ ನಡೆದಿರುವ ಈ ಘಟನೆ ನಡೆದಿದ್ದು,
ಕಲ್ಲೆಸದ ವ್ಯಕ್ತಿಯನ್ನ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಿಟಕಿ ಗಾಜನ್ನು ಸರಿಪಡಿಸಲಾಗಿದೆ.
ಮೈಸೂರು: ವಿ.ಸೋಮಣ್ಣಗೆ ಬಿಜೆಪಿಯಲ್ಲಿ ಅಸಮಾಧಾನ ಇರುವುದು ಸತ್ಯ ಎಂದು ಕೆಎಸ್ ಈಶ್ವರಪ್ಪ ಹೇಳಿದರು. ಮೈಸೂರಿನಲ್ಲಿ ಮಾತನಾಡಿದ ಅವರು ‘ ಸಿಎಂ ಸಿದ್ದರಾಮಯ್ಯರನ್ನು ಸೋಲಿಸುವ ಶಕ್ತಿ ಸೋಮಣ್ಣಗೆ ಇತ್ತು. ಆದರೆ, ಸಿದ್ದರಾಮಯ್ಯ ಹೇಗೆ ಗೆದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಕೇಂದ್ರ ಬಿಜೆಪಿ ನಾಯಕರು ವಿ.ಸೋಮಣ್ಣರನ್ನು ಕೈ ಬಿಡುವುದಿಲ್ಲ. ಯಾರಿಗೆ, ಯಾವ ಸ್ಥಾನ ನೀಡಬೇಕೆಂದು ಪಕ್ಷ ತೀರ್ಮಾನಿಸುತ್ತದೆ. ಅಧ್ಯಕ್ಷರಿಂದಲೇ ಪಕ್ಷ ಬೆಳೆಯುತ್ತದೆ ಎಂಬುವುದು ತಪ್ಪು ಕಲ್ಪನೆ ಎಂದರು.
ಧಾರವಾಡ: ಪಂಚಮಸಾಲಿ 2ಎ ಮೀಸಲಾತಿ ಅನುಷ್ಠಾನ ವಿಚಾರ ‘ ಧಾರವಾಡದಲ್ಲಿ ಕೂಡಲಸಂಗಮ ಪೀಠದ ಬಸವಜಯ ಮೃತುಂಜಯ ಸ್ವಾಮೀಜಿ ಮಾತನಾಡಿ ‘ ಲಿಂಗಾಯತ ಪಂಚಮಸಾಲಿ ಸಮಾಜ ದಾಸೋಹ ಸಮಾಜ, ಮೀಸಲಾತಿ ಸಿಗಬೇಕು ಎಂದು 3 ವರ್ಷದಿಂದ ಹೋರಾಡುತ್ತಿದ್ದೇವೆ. ನಮ್ಮದು ನಿರಂತರ ಹೋರಾಟ, ಹಿಂದಿನ ಸರ್ಕಾರ ಮೀಸಲಾತಿ ಕೊಡಲು ವಿಳಂಬ ಮಾಡಿತು. ಆದ್ರೆ, ಹೋರಾಟ ಫ್ರೀಡಂ ಪಾರ್ಕ್ ನಲ್ಲಿ ನಡೆಯಿತು. 2D ಎಂದು ಆಗಿನ ಸರ್ಕಾರ ಘೋಷಣೆ ಮಾಡಿತ್ತು. ಅದಾದ ಮೇಲೆ ಚುನಾವಣೆ ಘೋಷಣೆಯಾಯಿತು. ಹೀಗಾಗಿ ಅದು ಅಲ್ಲಿಯೇ ನಿಂತಿದೆ. ಇದೀಗ ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಬೆಂಗಳೂರು: ಸರ್ಕಾರ ಬೀಳುತ್ತೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ. ಹೌದು, ‘ಪಾಪ ಕುಮಾರಸ್ವಾಮಿ ಅವರು ಭ್ರಮೆಯಲ್ಲಿದ್ದಾರೆ. ಮುಖ್ಯಮಂತ್ರಿ ಆಗ್ತಿನಿ ಎಂದು ಅಂದುಕೊಂಡಿದ್ದರು, ಈಗ ಅದು ಆಗಲಿಲ್ವಲ್ಲ, ಅದಕ್ಕೆ ಏನೋ ಮಾತನಾಡುತ್ತಾರೆ. ಕುಮಾರಸ್ವಾಮಿ ಮಾತಿಗೆ ಮೂರು ಕಾಸಿನ ಬೆಲೆ ಇದ್ಯಾ?, ಕುಮಾರಸ್ವಾಮಿ ಮಾತಿನಲ್ಲಿ ಸತ್ಯ ಇದೆಯಾ?, ನಾವು ಅವರ ಹೇಳಿಕೆಗೆ ಮಾತಾಡೋದಿಲ್ಲ ಎಂದಿದ್ದಾರೆ.
ಬೆಂಗಳೂರು: ಸರ್ಕಾರ ಪತನ ಗ್ಯಾರಂಟಿ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರ ‘ನಾನು ಕುಮಾರಸ್ವಾಮಿ ಜೊತೆಗೆ ಇದ್ದವನು
ಯಾವುದಾದರೂ ಸರ್ಕಾರ ಐದು ವರ್ಷ ನಡೆಯಲಿದೆ ಎಂದು ಹೇಳಿದ್ದಾರಾ?, ಯಡಿಯೂರಪ್ಪ , ಬೊಮ್ಮಾಯಿ ಸರ್ಕಾರ ಬಿಳುತ್ತೆ ಅಂದ್ರು, ಅಮೇಲೆ ಇವರದ್ದೇ ಸರ್ಕಾರ ಇವರಿಗೆ ಉಳಿಸಿಕೊಳ್ಳಲು ಆಗಲಿಲ್ಲ. ಹೇಗೆ ಸರ್ಕಾರ ಬೀಳಲು ಸಾಧ್ಯ, ಎನ್ನುವ ಮೂಲಕ ಹೆಚ್ಡಿಕೆ ಹೇಳಿಕೆಗೆ ಸಚಿವ ಜಮೀರ್ ತಿರುಗೇಟು ನೀಡಿದ್ದಾರೆ. ‘ಬಿಜೆಪಿ 104 ಶಾಸಕರು ಇದ್ದುಕೊಂಡು ಅಪರೇಷನ್ ಕಮಲ ಮಾಡಿ 4 ವರ್ಷ ಸರ್ಕಾರ ನಡೆಸಿದ್ರು, ನಾವು 137 + 3 ಒಟ್ಟು 140 ಇದ್ದೇವೆ. ಸರ್ಕಾರ ಹೇಗೆ ಬಿಳುತ್ತೆ, ಕುಮಾರಸ್ವಾಮಿ ಅವರದ್ದು ರಾತ್ರಿ ಕನಸು ಹಗಲು ಕಾಣ್ತಿದ್ದಾರೆ. ಸರ್ಕಾರ ಹೇಗೆ ಪತನಾವಾಗುತ್ತೆ ಎಂದು ಕುಮಾರಸ್ವಾಮಿ ಅವರೇ ಹೇಳಬೇಕು ಎಂದರು.
ಚಿತ್ರದುರ್ಗ: 2024ಕ್ಕೆ ಡಿಕೆಶಿ ತಿಹಾರ್ ಜೈಲಿಗೆ ಹೋಗ್ತಾರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರ ‘ ಬೇರೆ ಪಕ್ಷದ ರಾಜಕೀಯ ಹೇಳಿಕೆ ಬಗ್ಗೆ ಹೆಚ್ಚು ಗಮನ ಕೊಡಲ್ಲ, ಹೆಚ್ ಡಿಕೆ ಹೇಳಿಕೆಗೆ ಡಿಕೆಶಿ ಈಗಾಗಲೇ ಉತ್ತರಿಸಿದ್ದಾರೆ. ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಿದೆ.
ಡಿಕೆಶಿ ಅವರನ್ನು ಜೈಲಿಗೆ ಕಳಿಸುವ ಷಡ್ಯಂತ್ರವಿದೆ ಎಂಬುದು ಹೆಚ್ ಡಿಕೆ ಮಾತಲ್ಲಿ ಹೇಳಿದ್ದಾರೆ. ನಾವು ಎಲ್ಲವನ್ನೂ ಎದುರಿಸಲು ಸಜ್ಜಾಗಿದ್ದೇವೆ. ಜನ ನಮಗೆ ಆಶೀರ್ವಾದ ಮಾಡಿದ್ದು, ಜನಪರ ಆಡಳಿತ ನೀಡ್ತಿದ್ದೇವೆ ಎನ್ನುವ ಮೂಲಕ ಜೆಡಿಎಸ್, ಬಿಜೆಪಿ ನಾಯಕರಿಗೆ ಕೃಷ್ಣ ಭೈರೇಗೌಡ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಗಣೇಶ ಮೆರವಣಿಗೆ ವೇಳೆ ಪಟಾಕಿ ಹೊಡೆಯುವುದನ್ನು ನಿಷೇಧಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು ‘ಮದುವೆ, ರಾಜಕೀಯ ಕಾರ್ಯಕ್ರಮದಲ್ಲೂ ಪಟಾಕಿ ಹೊಡೆಯುವುದು ನಿಷೇಧವಾಗಿದೆ. ದೀಪಾವಳಿ ಹಬ್ಬದ ವೇಳೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ ಇದ್ದು, ಸುಪ್ರೀಂಕೋರ್ಟ್ ಆದೇಶ ಪಾಲನೆ ಕಡ್ಡಾಯವಾಗಿದೆ. ಪಟಾಕಿ ಸಿಡಿಸುವಾಗ ನಿಯಮ ಉಲ್ಲಂಘಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರು: ಗ್ರೀನ್ ಕ್ರ್ಯಾಕರ್ಸ್ ಮಾತ್ರ ಮಾರಾಟಕ್ಕೆ ಸುಪ್ರೀಂ ಹೇಳಿಕೆ ನೀಡಿದ್ದು, ‘ಹಸಿರು ಪಟಾಕಿ ಮಾರಾಟ ಮಾಡುತ್ತಿರುವವ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ‘ಕಂಡೀಷನ್ ನ ಅನುರಿಸದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ, ಇನ್ಮುಂದೆ ಕಠಿಣವಾಗಿ ಸುಪ್ರೀಂ ಆದೇಶವನ್ನ ಪಾಲಿಸಬೇಕು. ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಅಕ್ಟೋಬರ್ 15 ರಿಂದ 24ರವರೆಗೆ ಮೈಸೂರಿನ ಕುಪ್ಪಣ್ಣ ಪಾರ್ಕ್ನಲ್ಲಿ ಫಲಪುಷ್ಪ ಪ್ರದರ್ಶನ ಅನಾವರಣಗೊಳ್ಳಲಿದೆ. ಈ ಬಾರಿ 2 ಲಕ್ಷ ಗುಲಾಬಿ ಹೂವುಗಳಿಂದ ಚಂದ್ರಯಾನದ ಪರಿಕಲ್ಪನೆಯ ಕಲಾಕೃತಿ ನಿರ್ಮಾಣ ಮಾಡಲಾಗುತ್ತೆ ಎಂದು ಮೈಸೂರು ಜಿಲ್ಲಾ ಪಂಚಾಯ್ತಿ ಸಿಇಒ ಗಾಯತ್ರಿ ತಿಳಿಸಿದ್ದಾರೆ. ಇದರ ಜೊತೆಗೆ ಚಾಮುಂಡೇಶ್ವರಿ ದೇವಿ ಹಾಗು ದೇವಸ್ಥಾನದ ಗೋಪುರ, ಸುವರ್ಣ ಕರ್ನಾಟಕ – ಕರ್ನಾಟಕದ ಶ್ರೀಮಂತ ಪರಂಪರೆ, ಕ್ರೀಡೆಗಳ ಥೀಮ್, ಕ್ರಿಕೆಟ್ ಹೂವಿನ ಕಲಾಕೃತಿ, ಅಂಬಾರಿ ಹೂವಿನ ಕಲಾಕೃತಿ, ಕಾಫಿ ಕಪ್ ಹೂವಿನ ಕಲಾಕೃತಿಗಳು ಈ ಬಾರಿಯ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು.
ಪಂಜಿನ ಕವಾಯತ ಮೈದಾನದಲ್ಲಿ ಅಕ್ಟೋಬರ್ 22 & 23ರಂದು ದಸರಾ ಏರ್ಶೋ ನಡೆಯಲಿದೆ ಎಂದು ಮೈಸೂರಿನಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ. 5 ವರ್ಷಗಳ ಬಳಿಕ ಮೈಸೂರು ದಸರಾದಲ್ಲಿ ಏರ್ಶೋ ನಡೆಯುತ್ತಿದೆ. ಅ.22ರಂದು ಏರ್ಶೋ ರಿಹರ್ಸಲ್, 23ರಂದು ಮುಖ್ಯ ಏರ್ಶೋ ನಡೆಯಲಿದೆ. ಅ.23ರ ಸಂಜೆ 4 ಗಂಟೆಗೆ 45 ನಿಮಿಷ ಏರ್ಶೋ ನಡೆಯಲಿದೆ ಎಂದರು.
ಅತಿಥಿಯಾಗಿ ಬಿಗ್‌ಬಾಸ್ ಶೋಗೆ 3 ತಾಸು ಮಾತ್ರ ಹೋಗಿದ್ದೆ. ಬಿಗ್‌ಬಾಸ್ ಸ್ಪರ್ಧಾಳುಗಳಿಗೆ ಮೋಟಿವೇಷನ್ ಮಾಡಲು ಕರೆದಿದ್ದರು. ಹೀಗಾಗಿ ಆಯೋಜಕರ ಆಹ್ವಾನದ ಮೇರೆಗೆ ಹೋಗಿ ಬಂದಿದ್ದೇನೆ ಎಂದು ಟಿವಿ9ಗೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆ ನೀಡಿದ್ದಾರೆ.
ವೈದ್ಯರ ಎಡವಟ್ಟಿನಿಂದ ಹತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬೆಂಗಳೂರಿನ ಕೋಣನಕುಂಟೆಯಲ್ಲಿ ನಿವಾಸಿ ಪ್ರೀತಮ್ ನಾಯ್ಕ್ (10) ಮೃತ ದುರ್ದೈವಿ. ಜ್ವರ ಎಂದು ಕೋಣನಕುಂಟೆ ಬಳಿಯ ರಾಜನಂದಿನಿ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ಒಂದು ಇಂಜೆಕ್ಷನ್ ನೀಡಿದ್ದಾರೆ. ವಾಪಸ್ಸು ಮನೆಗೆ ಬಂದ ಬಳಿಕ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ನೋವು ಉಂಟಾಗಿ ಬಳಿಕ ಮರುದಿನವೇ ಮತ್ತೆ ಅದೇ ಆಸ್ಪತ್ರೆಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಮತ್ತೆ ಕೆಲ ಟಾನಿಕ್ ಮತ್ತು ಮೆಡಿಸಿನ್ ನೀಡಿ ರಾಜನಂದಿನಿ ಆಸ್ಪತ್ರೆ ವೈದ್ಯರು ಬಾಲಕನನ್ನು ಕಳಿಸಿದ್ರು. ನೋವು ಕಡಿಮೆ ಆಗದೆ ಕಾಲು ಊತ ಬಂದಿದೆ. ಈ ರೀತಿ ಬಾಲಕನ ಸಾವಾಗಿದೆ.
ಬೆಂಗಳೂರಿನ ಅಶೋಕ್ನಗರದ ಜೈನ್ ದೇವಾಲಯದಲ್ಲಿ ನಡೆದಿದ್ದ ಕಳ್ಳತನ ಪ್ರಕರಣದ ಆರೋಪಿಗಳನ್ನು ಬಂಧಿಸಲಾಗಿದೆ. 14 ಕೆಜಿ ದೇವರ ಬೆಳ್ಳಿಯ ಆಭರಣ, ದೇವಾಲಯದ ವಸ್ತುಗಳ ಕಳ್ಳತನ ಮಾಡಲಾಗಿತ್ತು. 6 ಜನ ಆರೋಪಿಗಳ ಪೈಕಿ ಓರ್ವ ದೇವಾಲಯದ ಟೈಲ್ಸ್ ಕೆಲಸ ಮಾಡಿದ್ದ. ಆರು ಆರೋಪಿಗಳನ್ನ ಅಶೋಕ್ನಗರದ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಡಿಕೇರಿಯಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಕೊಡಗು ವಿಶ್ವವಿದ್ಯಾನಿಲಯ ವಿರುದ್ಧ, ಫೀಲ್ಡ್ ಮಾರ್ಷಲ್ ಕೆ.ಎಂ.ಕರಿಯಪ್ಪ ಕಾಲೇಜು ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. 1500 ವಿದ್ಯಾರ್ಥಿಗಳಿಗೆ ಕೇವಲ 43 ಬೋಧಕ ಸಿಬ್ಬಂದಿ ಇದ್ದಾರೆ. ಹೆಚ್ಚಿನ ಬೋಧಕ ಸಿಬ್ಬಂದಿ ಇಲ್ಲದೆ ಅಭ್ಯಾಸ ಕುಂಟಿತವಾಗುತ್ತಿದೆ. ಮೊದಲ ಸೆಮಿಸ್ಟರ್ ಪರೀಕ್ಷೆ ಸಮೀಪಿಸಿದರೂ ತರಗತಿ ನಡೆದಿಲ್ಲ. ಕೊಡಗು ವಿವಿ ಅವ್ಯವಸ್ಥೆ ಆಗರವಾಗಿದೆ ಎಂದು ವಿದ್ಯಾರ್ಥಿಗಳು ಕಿಡಿಕಾರಿದ್ದಾರೆ.
ಬಳ್ಳಾರಿಯಲ್ಲಿ ನೇಣು ಬಿಗಿದುಕೊಂಡು ಡಿಎಆರ್ ಕಾನ್ಸ್ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕಾಶ್ ನಾಯ್ಕ್(25) ಆತ್ಮಹತ್ಯೆ ಮಾಡಿಕೊಂಡ ಡಿಎಆರ್ ಕಾನ್ಸ್ಟೇಬಲ್. ಇವರು ಕಳೆದೊಂದು ವರ್ಷದ ಹಿಂದೆಯಷ್ಟೇ ಇಲಾಖೆಗೆ ಸೇರಿದ್ದರು.
ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರೆಯ ಲೋಗೋ ಅನಾವರಣ ಮಾಡಲಾಯಿತು. ಅ 18, 19, 20 ಹಾಗೂ 21 ರಂದು ಯುವ ದಸರಾ ನಡೆಯಲಿದೆ. ಈ ಬಾರಿ ಬರ ಹಿನ್ನೆಲೆ ಪ್ರಾಯೋಜಕತ್ವದಲ್ಲಿ ಯುವ ದಸರಾ ನಡೆಯಲಿದೆ. ಕಲಾವಿದರ ಪಟ್ಟಿ ಇನ್ನು ಅಂತಿಮಗೊಂಡಿಲ್ಲ. ಪ್ರತಿಬಾರಿ ಬಾಲಿವುಡ್ ಗಾಯಕರು, ಕಲಾವಿದರು ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಈ ಬಾರಿ ಸ್ಥಳೀಯ ಕಲಾವಿದರಿಗೆ ಕಾರ್ಯಕ್ರಮ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಬೈಯ್ಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ವಿಸ್ತೃತ ಮಾರ್ಗದಲ್ಲಿ ನಿನ್ನೆಯಿಂದ ನಮ್ಮ ಮೆಟ್ರೋ ಸಂಚಾರ ನಡೆಸುತ್ತಿದ್ದು ನಿನ್ನೆ ಒಂದೇ ಮಾರ್ಗದಲ್ಲಿ ಸಾವಿರಾರು ಜನರು ಸಂಚಾರ ಮಾಡಿದ್ದಾರೆ. ಬೈಯ್ಯಪ್ಪನಹಳ್ಳಿಯಿಂದ ವೈಟ್ಫೀಲ್ಡ್ವರೆಗೆ ನಿನ್ನೆ ಒಂದೇ ದಿನ 61,179 ಪ್ರಯಾಣಿಕರು ಮೆಟ್ರೋದಲ್ಲಿ ಓಡಾಡಿದ್ದಾರೆ.
ಸರ್ಕಾರ ಈಗಾಗಲೇ ಅರೆಬರೆ 5 ಗ್ಯಾರಂಟಿ ನೀಡಿ ಕೈ ತೊಳೆದುಕೊಂಡಿದೆ. ಶೀಘ್ರವೇ 6ನೇ ಗ್ಯಾರಂಟಿ ಕತ್ತಲೆಭಾಗ್ಯ ಕೊಡಲು ಸನ್ನಾಹವನ್ನೂ ನಡೆಸಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಡಿಸೆಂಬರ್ ವೇಳೆಗೆ ಕರ್ನಾಟಕ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ. ಕಾವೇರಿ ನದಿ ನೀರು ಬಗ್ಗೆ ಕಾಂಗ್ರೆಸ್ ಸರ್ಕಾರ ಕಳ್ಳಾಟ ಆಡಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ @INCKarnataka ಸರಕಾರ ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದೆ, ಸರಿ. ಶೀಘ್ರವೇ ಅರೆಬರೆ ಅಲ್ಲದ ಪರಿಪೂರ್ಣವಾದ 6ನೇ ಗ್ಯಾರಂಟಿ (!?) ಕೊಡಲು ಸನ್ನಾಹವನ್ನೂ ನಡೆಸಿದೆ! ಅದರ ಹೆಸರು ಕತ್ತಲೆಭಾಗ್ಯ!!
ಡಿಸೆಂಬರ್ ತಿಂಗಳ ಹೊತ್ತಿಗೆ ಕರ್ನಾಟಕ ಈ ಕತ್ತಲೆಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. ಜನವರಿ; ಅಂದರೆ 2024ರ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 10, 2023
ಗೃಹಲಕ್ಷ್ಮೀ ಯೋಜನೆ ಗೊಂದಲದ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಭಾಳ್ಕರ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲ ಎಂದು ಕೆಲವೆಡೆ ಅಪಸ್ವರ ಕೇಳಿಬಂದಿತ್ತು. ಈ ಬಗ್ಗೆ ಲಕ್ಷ್ಮೀ ಹೆಬ್ಭಾಳ್ಕರ್ ಮಾಧ್ಯಮ ಪ್ರಕಟಣೆ ಹೊರಡಿಸಿ ಗೊಂದಲಗಳಿಗೆ ತೆರೆಎಳೆದಿದ್ದಾರೆ. ಆಗಸ್ಟ್ ತಿಂಗಳಲ್ಲಿ ಯೋಜನೆಗೆ 1.08 ಕೋಟಿ ಅರ್ಜಿ ಸಲ್ಲಿಕೆಯಾಗಿತ್ತು. 1.08 ಕೋಟಿ ಅರ್ಜಿದಾರರಿಗೆ 2,169 ಕೋಟಿ ಹಣ ಬಿಡುಗಡೆಯಾಗಿದೆ. 1.8 ಕೋಟಿ ಅರ್ಜಿದಾರರಲ್ಲಿ 93 ಲಕ್ಷ ಫಲಾನುಭವಿಗಳಿಗೆ ಹಣ ಜಮೆ ಆಗಿದೆ. 5.5 ಲಕ್ಷ ಅರ್ಜಿದಾರರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆ ಚಾಲ್ತಿಯಲ್ಲಿದೆ. ಈವರೆಗೆ 9.44 ಲಕ್ಷ ಫಲಾನುಭವಿಗಳಿಗೆ ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲ. 3082 ಅರ್ಜಿದಾರರು ಮರಣ ಹೊಂದಿದ್ದು ಅನರ್ಹಗೊಳಿಸಲಾಗಿದೆ. 1 ಲಕ್ಷದ 59 ಸಾವಿರ ಅರ್ಜಿದಾರರ ಡೆಮೋ ದೃಢೀಕರಣ ವಿಫಲವಾಗಿದೆ. 5 ಲಕ್ಷ 96 ಸಾವಿರ ಅರ್ಜಿದಾರರ ಬ್ಯಾಂಕ್ ಆಧಾರ್ ಜೋಡಣೆಯಾಗಿಲ್ಲ. 1 ಲಕ್ಷದ 75 ಅರ್ಜಿದಾರರ ಹೆಸರು ಮತ್ತು ವಿಳಾಸದಲ್ಲಿ ವ್ಯತ್ಯಾಸ ಇದೆ ಎಂದು ಮಾಹಿತಿ ನೀಡಿದ್ದಾರೆ.
ಕಬಿನಿ ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ಮತ್ತಷ್ಟು ಕುಸಿದಿದೆ. 1,008 ಕ್ಯೂಸೆಕ್ ಒಳಹರಿವು, 1 ಸಾವಿರ ಕ್ಯೂಸೆಕ್ ಹೊರಹರಿವು ಇದೆ. ನಿನ್ನೆ ಜಲಾಶಯಕ್ಕೆ 1,261 ಕ್ಯೂಸೆಕ್ ಒಳಹರಿವು ದಾಖಲಾಗಿತ್ತು. ಸದ್ಯ ನೀರಿನ ಮಟ್ಟ 76.35 ಅಡಿ ಇದೆ. ಜಲಾಶಯ 84 ಅಡಿ ಗರಿಷ್ಠ ಸಾಮರ್ಥ್ಯ ಹೊಂದಿದೆ.ಗರಿಷ್ಠ 19.52 ಟಿಎಂಸಿ ನೀರು ಸಂಗ್ರಹಣೆ ಸಾಮರ್ಥ್ಯ ಇದೆ.
ಮೈಸೂರು: ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ಮಹಿಷ ದಸರಾ ಕೈ ಬಿಡಿ ಎಂದು ಚಾಮುಂಡೇಶ್ವರಿ ಭಕ್ತರು ಮನವಿ ಮಾಡಿದ್ದಾರೆ. ಬರಿಗಾಲಲ್ಲಿ ಬೆಟ್ಟ ಹತ್ತಿ ದೇವರಲ್ಲಿ ಪ್ರಾರ್ಥನೆ ಮಾಡಿ ಮಹಿಷ ದಸರಾ ಮಾಡುವವರಿಗೆ ಒಳ್ಳೆಯ ಬುದ್ದಿಕೊಡಲಿ, ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸು ಎಂದು ಭಕ್ತರು ಪ್ರಾರ್ಥನೆ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ನಡೆದ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಸೌಂಡ್ಗೆ ಡ್ಯಾನ್ಸ್ ಮಾಡ್ತಿದ್ದಾಗ ಹೃದಯಾಘಾತದಿಂದ ಯುವಕ ಮೃತಪಟ್ಟ ಘಟನೆ ನಡೆದಿದೆ. ಸುದೀಪ್ ಸಜ್ಜನ್(30) ಮೃತ ದುರ್ದೈವಿ. ಪ್ರಶಾಂತನಗರದ ಯುವಕರು ಆಯೋಜಿಸಿದ್ದ ಡಿಜೆ ಮೆರವಣಿಗೆ ಸಾಗುತ್ತಿದ್ದ ವೇಳೆ ಡ್ಯಾನ್ಸ್ ಮಾಡುತ್ತಿದ್ದ ಸುದೀಪ್ ಮೃತ ಪಟ್ಟಿದ್ದಾನೆ. ಘಟನೆಯಿಂದ ಯುವಕರು ಸ್ವಯಂಪ್ರೇರಿತವಾಗಿ ಅರ್ಧಕ್ಕೆ ಡಿಜೆ ನಿಲ್ಲಿಸಿದ್ದಾರೆ. ಸುದೀಪ್ ಸಜ್ಜನ್ ಮೃತದೇಹ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಯಿಂದ ಅರಮನೆ ರಸ್ತೆಯ ಲೀ ಮೆರಿಡಿಯನ್ ಅಂಡರ್ಪಾಸ್ ಜಲಾವೃತಗೊಂಡಿದೆ. ಅಂಡರ್ಪಾಸ್ ಬಳಿ ವಾಹನ ಓಡಾಡದಂತೆ ಬ್ಯಾರಿಕೇಡ್ ಹಾಕಿ ಕ್ಲೋಸ್ ಮಾಡಲಾಗಿದೆ. ಇತ್ತೀಚಿಗಷ್ಟೇ ಲಕ್ಷಾಂತರ ವೆಚ್ಚದಲ್ಲಿ ಅಂಡರ್ಪಾಸ್ ನಿರ್ಮಿಸಲಾಗಿತ್ತು. ನಿನ್ನೆ ಸಂಜೆ ಸುರಿದ ಮಳೆಯಿಂದ ನೀರು ನುಗ್ಗಿ ಅವಾಂತರವಾಗಿದೆ. ಬಿಬಿಎಂಪಿ ಕಳಪೆ ಕಾಮಗಾರಿ ಮತ್ತೊಮ್ಮೆ ಬಟಾಬಯಲಾಗಿದೆ.
ಕೋಲಾರ ಪತ್ರಿಕೆ ಸಂಪಾದಕ, ಹಿರಿಯ ಪತ್ರಕರ್ತ ಕೆ.ಪ್ರಹಲ್ಲಾದ ರಾವ್(81) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಮಧ್ಯರಾತ್ರಿ ಸುಮಾರಿಗೆ ಕೋಲಾರದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. 1975 ರಲ್ಲಿ ಕೋಲಾರ ಪತ್ರಿಕೆ ಸ್ಥಳೀಯ ಪತ್ರಿಕೆ ಆರಂಭಿಸಿದ್ದ ಪ್ರಹಲ್ಲಾದರಾವ್, ನಿರಂತರ ಪತ್ರಿಕಾ ವೃತ್ತಿಯನ್ನೆ ಉಸಿರಾಗಿಸಿಕೊಂಡಿದ್ದರು. ಕೋಲಾರ ಪತ್ರಿಕೆ ರಾಯರು ಎಂದೇ ಖ್ಯಾತಿ ಪಡೆದಿದ್ದರು.
ರಾತ್ರಿ ಸುರಿದ ಮಳೆಯಿಂದ ಬೆಂಗಳೂರಿನ ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಏರ್ಪೋರ್ಟ್ ರಸ್ತೆಯ ಹೆಣ್ಣೂರು ಬಂಡೆ ಬಳಿ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಕೆರೆಯಂತಾಗಿದೆ. ಈ ಹಿನ್ನೆಲೆ ಸಂಚಾರಕ್ಕೆ ತೊಡಕು ಉಂಟಾಗಿದೆ. ಹೆಣ್ಣೂರು-ಬಾಗಲೂರು ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಾಧ್ಯತೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹೊಸವೀಡು ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ರೈತ ಮಹೇಶ್ ಎಂಬುವವರಿಗೆ ಸೇರಿದ 5 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಬ್ಬು ಬೆಳೆ ನಾಶವಾಗಿದೆ. ಹಗಲು ರಾತ್ರಿ ಎನ್ನದೆ ರೈತರು ಬೆಳೆದ ಫಸಲಿಗೆ ಆನೆಗಳು ಲಗ್ಗೆ ಇಟ್ಟಿವೆ. ಜಮೀನಿನ ಸುತ್ತ ಅಳವಡಿಸಲಾಗಿದ್ದ ತಂತಿ ಬೇಲಿ ಕಿತ್ತು ಆನೆಗಳು ನುಗ್ಗುತ್ತಿವೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದ ಕೆನರಾ ಬ್ಯಾಂಕ್ ಬಳಿ ರಸ್ತೆಗೆ 10 ರೂ. ನೋಟು ಬಿಸಾಡಿ 1 ಲಕ್ಷ ಹಣ ಎಗರಿಸಿ ದುಷ್ಕರ್ಮಿ ಪರಾರಿಯಾಗಿದ್ದಾನೆ. ಮಂಗಳವಾರಪೇಟೆ ನಿವಾಸಿ ರಾಘವೇಂದ್ರ ಅವರು ಬ್ಯಾಂಕ್ನಿಂದ ಹಣ ಡ್ರಾಮಾಡಿಕೊಂಡು ಬರುತ್ತಿದ್ದ ವೇಳೆ ರಸ್ತೆಗೆ 10 ರೂ. ನೋಟು ಬಿಸಾಡಿ ಹಣ ಬಿದ್ದಿದ್ದೆ ಎಂದು ದುಷ್ಕರ್ಮಿ ಹೇಳಿದ್ದಾನೆ. ಆಗ 1 ಲಕ್ಷ ಹಣವಿದ್ದ ಕವರ್ ಬೈಕ್ ಬಳಿ ಬಿಟ್ಟು 10 ರೂ. ಎತ್ತಿಕೊಳ್ಳಲು ಬಗ್ಗಿದ್ದಾರೆ. ಈ ವೇಳೆ ದುಷ್ಕರ್ಮಿ ಹಣ ಎಗರಿಸಿ ಪರಾರಿಯಾಗಿದ್ದಾನೆ.
ಬೆಂಗಳೂರು ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಮಳೆ ಹಿನ್ನೆಲೆ ಎಲೆಕ್ಟ್ರಾನಿಕ್ ಸಿಟಿಯಿಂದ ಚಂದಾಪುರದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಬೆಂಗಳೂರು-ಚೆನ್ನೈ ಹೆದ್ದಾರಿಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿದ್ದು ಸುಮಾರು 4-5 ಕಿಲೋ ಮೀಟರ್ವರೆಗೆ ವಾಹನಗಳು ನಿಂತಿವೆ.
Published On - 8:01 am, Tue, 10 October 23