ರಾಜ್ಯದಲ್ಲಿ ಜಾತಿಗಣತಿ (Caste Census) ಜೋರಾಗಿ ಸದ್ದು ಮಾಡುತ್ತಿದೆ. ವರದಿ ಬಿಡುಗಡೆಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಟೀಕೆಗಳನ್ನು ನಡೆಸುತ್ತಿವೆ. ಅಲ್ಲದೆ, ತೆರೆಮರೆಯಲ್ಲಿ ಹೋರಾಟ ನಡೆಸಲು ಪ್ಲ್ಯಾನ್ ಮಾಡಲಾಗುತ್ತಿದೆ. ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಮತ್ತೆ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ (Maharashtra), ಎಂಇಎಸ್ ಸದಸ್ಯರ ಜೊತೆ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಸಭೆ ನಡೆಸಲಾಗಿದೆ. ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ ಸ್ವಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ವಿಚಾರವಾನ್ನು ಸ್ವತಃ ಬಿಜೆಪಿ ನಾಯಕರೇ ಒಪ್ಪಿಕೊಂಡಿದ್ದಾರೆ. ಇನ್ನು, ಸಾಂಸ್ಕೃತಿಕ ನಗರಿ ಮೈಸೂರು ದಸರಾಗೆ (Mysuru Dasara) ಸಜ್ಜಾಗುತ್ತಿದ್ದು, ಮಹಿಷಾ ದಸರಾ ಆಚರಣೆಯೂ ಸದ್ದು ಮಾಡುತ್ತಿದೆ. ಆದರೆ ಪೊಲೀಸರು ಮಹಿಷಾ ದಸರಾ ಆಚರಣೆ ಹಾಗೂ ಇದನ್ನು ವಿರೋಧಿಸಿ ಕೈಗೊಂಡಿರುವ ಚಾಮುಂಡಿಬೆಟ್ಟ ಚಲೋಗೆ ಅನುಮತಿ ನೀಡಿಲ್ಲ. ಇನ್ನೊಂದೆಡೆ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇಂತಹ ಕ್ಷಣಕ್ಷಣದ ಸುದ್ದಿಗಳಿಗಾಗಿ ಟಿವಿ9 ಡಿಜಿಟಲ್ ಲೈವ್ ನೋಡಿ.…
ಶಿವಮೊಗ್ಗ: ನಗರದ ರಾಗಿಗುಡ್ಡದಲ್ಲಿ ಗಲಭೆ ಖಂಡಿಸಿ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನಲೆ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಕೆ.ಎಸ್.ಈಶ್ವರಪ್ಪ ವಿರುದ್ಧ ಸುಮೋಟೋ ಕೇಸ್ ದಾಖಲು ಮಾಡಲಾಗಿದೆ. ‘ಹಸಿರು ಬಣ್ಣ ಕಿತ್ತಾಕಿ ಕೇಸರಿ ಬಣ್ಣ ಬರುವವರೆಗೆ ಬಿಜೆಪಿ ಹೋರಾಟ ಮಾಡುತ್ತದೆ. ಪಾಕಿಸ್ತಾನ ದೇಶವೂ ಸೇರಿದಂತೆ ಅಖಂಡ ಭಾರತದ ಕನಸು ಇತ್ತು, ಆದ್ರೆ, ದೇಶದ್ರೋಹಿ ಮುಸ್ಲಿಮರು ಇದ್ದಾರೆ ಎನ್ನುವ ಮೂಲಕ ಪ್ರಚೋದನಕಾರಿ ಭಾಷಣ ಮಾಡಿದ್ದರು.
ಮೈಸೂರು: ಯುದ್ಧಪೀಡಿತ ಇಸ್ರೇಲ್‌ನಲ್ಲಿ ಹತ್ಯೆಯಾದವರ ಆತ್ಮಕ್ಕೆ ಶಾಂತಿ ಕೋರಿ ವೀರ ಸಾವರ್ಕರ್ ಯುವ ಬಳಗದಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮೊಂಬತ್ತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಯುದ್ದ ಶಮನವಾಗಿ ಶಾಂತಿ ನೆಲೆಸುವಂತೆ ಮೇಣದಬತ್ತಿ ಬೆಳಗಿ ಪ್ರಾರ್ಥನೆ ಮಾಡಿದ್ದು, ಹಮಾಸ್ ಉಗ್ರಗಾಮಿಗಳಿಂದ ಭೀಭತ್ಸವಾಗಿ ಹತ್ಯೆಯಾದ ನಾಗರಿಕರು ಆತ್ಮಕ್ಕೆ ಶಾಂತಿಗೆ ಪ್ರಾರ್ಥಿಸಿದ್ದಾರೆ.
ಮೈಸೂರು: ಮಹಿಷ ಮಹೋತ್ಸವ ಹಿನ್ನೆಲೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ನಿಷೇಧ ಮಾಡಲಾಗಿದೆ. ಈ ಜಿಲ್ಲಾಡಳಿತದ ನಿರ್ಧಾರಕ್ಕೆ ಸಂಸದ ಪ್ರತಾಪ್ ಸಿಂಹ ಸ್ವಾಗತ ಮಾಡಿದ್ದು, ಫೇಸ್‌ಬುಕ್ ಲೈವ್ ಮೂಲಕ ನಗರ ಪೊಲೀಸ್ ಆಯುಕ್ತ ಹಾಗೂ ಜಿಲ್ಲಾಧಿಕಾರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಮಹಿಷ ದಸರಾ ಎನ್ನುವ ಅಪದ್ಧ, ಅನಾಚಾರ, ಅಸಹ್ಯ ಚಾಮುಂಡಿ ಬೆಟ್ಟದಲ್ಲಿ ನಡೆಯಬಾರದು. ಬೇಕಿದ್ದರೆ ಅವರವರ ಮನೆಯಲ್ಲಿ ಮಾಡಿಕೊಳ್ಳಲಿ. ಚಾಮುಂಡಿ ಬೆಟ್ಟ ಶ್ರೀ ಚಾಮುಂಡೇಶ್ವರಿ ನೆಲೆಸಿರುವ ಜಾಗ. ಅಲ್ಲಿ ಮಹಿಷ ದಸರಾ ನಡೆಯದಂತೆ ಕ್ರಮ ವಹಿಸಲು ಸೆಕ್ಷನ್ 144, ಪ್ರವೇಶ ನಿರ್ಬಂಧ ಮಾಡಲಾಗಿದೆ.
ನಾನು ಪಕ್ಷ ಮೀರಿ ಚಾಮುಂಡೇಶ್ವರಿಯ ಭಕ್ತ ಆಗಿದ್ದೇನೆ. ನನಗೆ ಸಂಸದ ಪದವಿಗಿಂತ ಚಾಮುಂಡೇಶ್ವರಿ ಭಕ್ತ ಎನ್ನುವ ಪದವಿ ದೊಡ್ಡದು. ಬಿಜೆಪಿ ಹಿಂದೂ ಧರ್ಮದ ಪ್ರತಿಪಾದನೆ ಮಾಡುತ್ತದೆ ಎನ್ನುವ ಕಾರಣಕ್ಕೆ ಪಕ್ಷದಲ್ಲಿ ಇದ್ದೇನೆ. ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಎಂದರು.
ಮೈಸೂರು: ನಾಳೆ(ಅ.13) ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಜಾರಿಗೊಳಿಸಿರುವ ಹಿನ್ನೆಲೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಸಂಜೆಯವರೆಗೆ ಚಾಮುಂಡಿಬೆಟ್ಟಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಚಾಮುಂಡಿಬೆಟ್ಟದಲ್ಲಿ ಇರುವ ನಿವಾಸಿಗಳಿಗೆ, ತುರ್ತು ಸೇವೆಗಳಿಗೆ ಹಾಗೂ ಅಧಿಕೃತ ಅಧಿಕಾರಿಗಳಿಗೆ ಇದು ಅನ್ವಯ ಇಲ್ಲ ಎಂದು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರು ಆದೇಶಿಸಿದ್ದಾರೆ.
ಬಾಗಲಕೋಟೆ: ವಿದ್ಯುತ್ ಕಡಿತ ಮಾಡಿದ ಹಿನ್ನಲೆ ಹೆಸ್ಕಾಂ ಸಿಬ್ಬಂದಿ ಜೊತೆ ರೈತರು ವಾಗ್ವಾದ ನಡೆಸಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲ್ಲೂಕಿನ ಕರಡಿ ಗ್ರಾಮದ ಹೆಸ್ಕಾಂ ಎಲೆಕ್ಟ್ರಿಕ್ ಗ್ರಿಡ್ ಎದುರು ರೈತರು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ಕೈ ಮೀರುತ್ತಿದ್ದಂತೆ ಸ್ಥಳಕ್ಕೆ ಇಳಕಲ್ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.
ಯಾದಗಿರಿ: ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಅವಮಾನ ಮಾಡಿರುವ ವಿಚಾರ ‘ಯಾದಗಿರಿಯ ಸುಭಾಷ್ ವೃತ್ತದಲ್ಲಿ ಬಸವ ಉತ್ಸವ ಸಮಿತಿಯಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಅಪಮಾನ ಮಾಡಿದ್ದರು. ಈ ಕೂಡಲೇ ಬಸವೇಶ್ವರರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಹೇಳಿದ್ದು, 5 ದಿನದೊಳಗೆ ಬಂಧಿಸದಿದ್ರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಕೆ ನೀಡಿದ್ದಾರೆ.
ಮಂಡ್ಯ: ಕಾಂಗ್ರೆಸ್ ಸಂಪೂರ್ಣ ರೈತ ವಿರೋಧಿ ಸರ್ಕಾರ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಡಾ. ಸಿ.ಎನ್ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಕಾಂಗ್ರೆಸ್ ಯಾವಾಗೆಲ್ಲ ಅಧಿಕಾರಕ್ಕೆ ಬರೋತ್ತೋ, ರಾಜ್ಯ ಬಜೆಟ್ನಲ್ಲಿ 50 ಪರ್ಸೆಂಟ್ ಕಡಿವಾಣ ಹಾಕಿದೆ. ರೈತ ವಿದ್ಯಾನಿಧಿ, ಭೂಸಿರಿ ಹಿಂದಕ್ಕೆ ಪಡೆದಿದೆ. ರೈತರಿಗೆ ವಿದ್ಯುತ್ ಶಕ್ತಿ ಕೊಡುತ್ತಿಲ್ಲ. ಸಂಪೂರ್ಣವಾಗಿ ಕತ್ತಲಭಾಗ್ಯ ಕೊಟ್ಟು, ದಾರಿದ್ರ್ಯವನ್ನ ತಂದುಕೊಟ್ಟಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರು: ಶಾಸಕ ಜೆ.ಟಿ.ಪಾಟೀಲ್ ಅವರು ಎಲ್ಲ ಕಾಂಟ್ರ್ಯಾಕ್ಟ್, ಯೋಜನೆಗಳನ್ನು ಮೌಖಿಕವಾಗಿ ತಡೆಹಿಡಿದಿದ್ದಾರೆ ಎಂದು
ಬೆಂಗಳೂರಿನಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಎಲ್ಲರನ್ನೂ ಕರೆದು ಇಂತಿಷ್ಟು ಪರ್ಸೆಂಟೇಜ್ ಬೇಕು ಎಂದು ಕೇಳಿದ್ದಾರೆ. ಮುಂದಿನ ಬಾರಿ ನಾನು ವಿಧಾನಸಭೆ ಚುನಾವಣೆಗೆ ನಿಲ್ಲಲ್ಲವಂತೆ. ಹಾಗಾಗಿ ನನಗೆ ದುಡ್ಡು ಕೊಟ್ಟರೇ ಕೆಲಸ ಮಾಡಿ ಕೊಡುವುದು ಎಂದು ಬಹಿರಂಗವಾಗಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಬಳಿ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರಕ್ಕೆ ಮುರುಗೇಶ್ ನಿರಾಣಿ ಆಗ್ರಹಿಸಿದ್ದಾರೆ.
ದೆಹಲಿ: ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯಿಂದ ಲೋಡ್ ಶೆಡ್ಡಿಂಗ್ ವಿಚಾರ ‘ ದೆಹಲಿಯಲ್ಲಿ ಕೇಂದ್ರ ಇಂಧನ ಸಚಿವ ಆರ್.ಕೆ.ಸಿಂಗ್ ಅವರನ್ನು ಕೆಜೆ ಜಾರ್ಜ್ ಭೇಟಿಯಾಗಿದ್ದಾರೆ. ನಿನ್ನೆ(ಅ.11) ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಈ ವೇಳೇ ಕರ್ನಾಟಕದ ಇಂಧನ ಪರಿಸ್ಥಿತಿ ಕುರಿತು ಮನವರಿಕೆ ಮಾಡಿಕೊಟ್ಟಿದ್ದು, ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಲ್ಲಿ ಹೆಚ್ಚಿನ ಪಾಲು ನೀಡಿ.ಕರ್ನಾಟಕಕ್ಕೆ ಹೆಚ್ಚುವರಿ ಅಗತ್ಯ ವಿದ್ಯುತ್ ಪೂರೈಸುವಂತೆ ಜಾರ್ಜ್ ಮನವಿ ಮಾಡಿದ್ದಾರೆ.
ಬೆಂಗಳೂರು: ಮೈಸೂರಿನಲ್ಲಿ ಮಹಿಷ ಉತ್ಸವಕ್ಕೆ ಅನುಮತಿ ನೀಡಿರುವ ವಿಚಾರ ‘ ಕಾಂಗ್ರೆಸ್ ಸರ್ಕಾರ ಯಾವ್ಯಾವ ದಸರಾಗೆ ಅವಕಾಶ ಕೊಟ್ಟಿದೆ ಗೊತ್ತಿಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಕೋಟ ಶ್ರೀನಿವಾಸಪೂಜಾರಿ ಹೇಳಿದರು. ರಾಕ್ಷಸ ದಸರಾಗೆ ಅವಕಾಶ ಮಾಡಿ ಕೊಟ್ಟಿದ್ದಾರೆ. ಹೀಗಾಗಿ ಚಾಮುಂಡಿ ದಸರಾದ ಕಥೆ ಏನು ಎಂಬ ಆತಂಕ ಇದೆ. ಕಾಂಗ್ರೆಸ್ಸಿಗರು ನ್ಯಾಯಯುತ, ಧರ್ಮದ ವ್ಯವಸ್ಥೆ ಹಾಳು ಮಾಡ್ತಿದ್ದಾರೆ. ಅದ್ಯಾವುದೋ ಬೇರೆ ದಸರಾ ಮಾಡುತ್ತೇನೆ ಎಂದು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ: ಕೇರಳ ಮಾಟ ಮಂತ್ರದಿಂದಲೇ ಚುನಾವಣೆಯಲ್ಲಿ ನಾವು ಸೋತಿದ್ದು ಎಂದು JDS ಸಮಾವೇಶದಲ್ಲಿ ಮಾಜಿ ಶಾಸಕ ಬಂಡೆಪ್ಪ ಕಾಶಂಪುರ ಹೇಳಿದ್ದಾರೆ. ಜೆಡಿಎಸ್ ಪುನಶ್ಚೇತನ ಪರ್ವದಲ್ಲಿ ಭಾಷಣ ಮಾಡಿದ ಅವರು ‘ಚುನಾವಣೆಯಲ್ಲಿ ಕೇರಳ ಮಾಟ ಮಂತ್ರದಿಂದಲೇ ನಾವ ಸೋತಿದ್ದು, ಕಳೆದ ಚುನಾವಣೆಯಲ್ಲಿ ನಾವು 37 ಜನ ಗೆದ್ದಿದ್ವಿ. ಅದರಲ್ಲಿ ಏಳು ಜನ ಹೋಗಿ 30 ಜನ ಉಳಕೊಂಡಿದ್ವಿ. 30 ಜನರಲ್ಲಿ ಕೇವಲ ನಾಲ್ಕು ಜನ ಗೆದ್ದಿದ್ದಾರೆ. ಉಳಿದವರು ಸೋಲಲು ಮಾಟ ಮಂತ್ರ ಕಾರಣ ಎಂದರು.
ಮೈಸೂರು: ಮಹಿಷ ಉತ್ಸವ, ಚಾಮುಂಡಿ ಚಲೋಗೆ ಮಾತ್ರ ನಿಷೇಧಾಜ್ಞೆ ಅನ್ವಯವಾಗುತ್ತದೆ. ಇನ್ನುಳಿದಂತೆ ಮದುವೆ, ಸಭೆ, ಸಮಾರಂಭ, ಶಾಲಾ-ಕಾಲೇಜಿಗೆ ಅನ್ವಯ ಆಗಲ್ಲ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು. ಕಾನೂನು ಮತ್ತು ಸುವ್ಯವಸ್ಥೆ ಕೆಡಿಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ತೇವೆ. ಚಾಮುಂಡಿಬೆಟ್ಟ ಸಂಪರ್ಕಿಸುವ ರಸ್ತೆಯಲ್ಲಿ ಪೊಲೀಸರ ನಿಯೋಜಿಸಲಾಗುವುದು. ಎಲ್ಲಾ ಕಡೆ ತಪಾಸಣೆ ನಡೆಸಿ ಮಾಡಿ ಚಾಮುಂಡಿಬೆಟ್ಟಕ್ಕೆ ಬಿಡಲಾಗುತ್ತೆ. ಭಕ್ತರ ಪ್ರವೇಶಕ್ಕೆ ನಿರ್ಬಂಧ ಇರುವುದಿಲ್ಲ ಎಂದರು.
ಮೈಸೂರು: ಮಹಿಷ ದಸರಾ ಆಚರಣೆಗೆ ಷರತ್ತುಬದ್ಧ ಅನುಮತಿ ಕೊಟ್ಟಿದ್ದೇವೆ ಎಂದು ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು. ‘ಮಹಿಷ ದಸರಾ ಮಾಡುತ್ತೇವೆ ಎಂದು ಮನವಿ ಪತ್ರ ಕೊಟ್ಟಿದ್ದರು, ಪುರಭವನದಲ್ಲಿ ಕಾರ್ಯಕ್ರಮ ನಡೆಸಲು ಷರತ್ತುಬದ್ಧ ಅನುಮತಿ ನೀಡಿದ್ದೇವೆ. ಮಹಿಷಮೂರ್ತಿಗೆ ಪುಷ್ಪಾರ್ಚನೆ ಮಾಡಲು ಅನುಮತಿ ಹಾಗೂ ಇದಕ್ಕೆ ವಿರುದ್ಧವಾಗಿ ಚಾಮುಂಡಿ ಬೆಟ್ಟ ಚಲೋ ಹಮ್ಮಿಕೊಂಡಿದ್ದಾರೆ. ಈ ಹಿನ್ನಲೆ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದರು.
ಬೆಂಗಳೂರು: ಬಿಜೆಪಿ ತೊರೆದು ಯಾರೂ ಕಾಂಗ್ರೆಸ್ಗೆ ಹೋಗ್ತಿಲ್ಲ ಎಂದು ಬಿಜೆಪಿ ಎಂಎಲ್ಸಿ ಎನ್.ರವಿಕುಮಾರ್ ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಪಕ್ಷ ತೊರೆಯಲ್ಲ, ಈಗಾಗಲೇ ನಾವು ಪೂರ್ಣಿಮಾ ಶ್ರೀನಿವಾಸ್ ಜೊತೆ ಮಾತಾಡಿದ್ದೇವೆ. ಇನ್ನು ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದರು.
ಮಂಡ್ಯ: ಕಾಂಗ್ರೆಸ್ ಸರ್ಕಾರ ಕತ್ತಲು ಭಾಗ್ಯ ಕೊಟ್ಟಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಡಿಸಿಎಂ ಡಾ.ಅಶ್ವಥ್ ನಾರಾಯಣ್ ವಾಗ್ದಾಳಿ ನಡೆಸಿದ್ದಾರೆ. ರೈತ ಸಂವಾದದಲ್ಲಿ ಒಬ್ಬರು ಹಿಂದಿನ ಸರ್ಕಾರ 7 ಗಂಟೆ ಕರೆಂಟ್ ಕೊಡ್ತಿತ್ತು, ಇದೀಗ ಬರಿ 2 ಗಂಟೆ ಕರೆಂಟ್ ಕೊಡುತ್ತಿದೆ ಎಂದಿದ್ದರು. ಫ್ರೀ ವಿದ್ಯುತ್ ಪೂರೈಕೆ ಎಂದು ಗ್ಯಾರಂಟಿ ಕೊಟ್ಟಿದ್ರು, ರೈತರಿಗೆ ಕತ್ತಲುಭಾಗ್ಯ ಕೊಟ್ಟು ಅಧಿಕಾರದ ಅಮಲಿನಲ್ಲಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಮನಗರ: ಮುನಿರತ್ನ ಪ್ರೊಡ್ಯುಸರ್ ಆದರೆ ಡಿ.ಕೆ.ಸುರೇಶ್ ಡಿಸ್ಟ್ರಿಬ್ಯೂಟರ್ ಎಂಬ ಬಿಜೆಪಿ ಶಾಸಕ ಮುನಿರತ್ನ ಹೇಳಿಕೆಗೆ ತಿರುಗೇಟು ನೀಡಿದ ಕಾಂಗ್ರೆಸ್ ಸಂಸದ ಡಿಕೆ ಸುರೇಶ್, ಅವರು ಪ್ರೊಡ್ಯುಸ್ ಮಾಡುತ್ತಿದ್ದಾಗ ನಾನು ಡಿಸ್ಟ್ರಿಬ್ಯೂಟ್ ಮಾಡುತ್ತಿರಲಿಲ್ಲ. ಅವರು ಮಿಸ್ ಕಮ್ಯುನಿಕೇಷನ್ ಮಾಡಿದ್ದಾರೆ. ನಾನು ರಾಜಕಾರಣಕ್ಕೆ ಬರುವುದಕ್ಕಿಂತ ಮುಂಚಿತವಾಗಿ ಅವರು ಪ್ರೊಡ್ಯುಸ್ ಮಾಡುತ್ತಿದ್ದರು, ನಾನು ಡಿಸ್ಟ್ರಿಬ್ಯೂಟ್ ಬಿಟ್ಟು ಎಕ್ಸಿಬ್ಯೂಷನ್ ಮಾಡುತ್ತಿದ್ದೇನೆ. ಅವರು ಡೈರೆಕ್ಷನ್ ಕೂಡ ಮಾಡುತ್ತಾರೆ. ಅದೆಂತದೋ ಮುನಿರತ್ನ ಕುರುಕ್ಷೇತ್ರ ಅಂತ ಮಾಡಿದ್ದರಲ್ಲಾ.! ಕುರುಕ್ಷೇತ್ರವನ್ನೇ ಬರೆದ ವ್ಯಕ್ತಿ ಇವರು. ಅನುಕೂಲಕ್ಕೆ ತಕ್ಕಂತೆ ಕುರುಕ್ಷೇತ್ರ ತಿದ್ದಿದವರು ಇವರು. ಹಾಗಾಗಿ ಅವರು ಏನು ಬೇಕಾದರೂ ಮಾಡುತ್ತಾರೆ ಎಂದರು.
ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲೇ ಎಂಇಎಸ್ ಮತ್ತು ಮಹಾರಾಷ್ಟ್ರ ಸರ್ಕಾರ ಗಡಿ ಕ್ಯಾತೆ ತೆಗೆಯಲು ಮುಂದಾಗಿದೆ. ಈ ನಡುವೆ ಎಚ್ಚೆತ್ತ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಪ್ರತಿವರ್ಷ ರಾಜ್ಯೋತ್ಸವದಂದು ಆಚರಿಸುವ ಕರಾಳ ದಿನಾಚಣೆಗೆ ಈ ಬಾರಿ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಕರಾಳ ದಿನಾಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಡಿಸಿ ಹೇಳುತ್ತಿದ್ದಂತೆ ಕನ್ನಡ ಪರ ಹೋರಾಟಗಾರರು ಚಪ್ಪಾಳೆ ತಟ್ಟಿದರು. ಕನ್ನಡಪರ ಹೋರಾಟಗಾರರ ಮನವಿ ರಾಜ್ಯ ಸರ್ಕಾರಕ್ಕೆ ಕಳಿಸಿಕೊಡುತ್ತೇನೆ ಎಂದು ಬೆಳಗಾವಿ ಜಿ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಹೇಳಿದರು.
ಮಹಿಷ ದಸರಾ ವಿರುದ್ಧ ಚಲೋ ಚಾಮುಂಡಿ ಅಭಿಯಾನ ವಿಚಾರವಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧವೇ ಮೈಸೂರು ನಗರ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಈಶ್ವರ್ ಟೀಕೆ ಮಾಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಮಹಿಷ ದಸರಾ ಬಗ್ಗೆ ಇಲ್ಲಸಲ್ಲದ ರಾಜಕೀಯ ಮಾಡುತ್ತಿದ್ದಾರೆ. ಧಾರ್ಮಿಕ ಆಚರಣೆಗೆ ಸಂವಿಧಾನದಲ್ಲಿ ಮುಕ್ತ ಅವಕಾಶವಿದೆ. ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಚಲೋ ಚಾಮುಂಡಿ ವಿಚಾರವಾಗಿ ನಮ್ಮ ಬಳಿ ಚರ್ಚೆ ನಡೆಸಿಲ್ಲ. ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ ಸ್ವಯಂ ನಿರ್ಧಾರಕೈಗೊಂಡಿದ್ದಾರೆ ಎಂದಿದ್ದಾರೆ.
ಕಾಂಗ್ರೆಸ್ನವರಿಂದಲೇ ಸರ್ಕಾರ ಪತನವಾಗಲಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಟಿವಿ9 ಜೊತೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರು ನೂರಕ್ಕೆ ನೂರರಷ್ಟು ಮುಖ್ಯಮಂತ್ರಿ ಆಗುತ್ತಾರೆ. ‘ಕೈ’ ಶಾಸಕರಾದ ಬಿ.ಆರ್.ಪಾಟೀಲ್, ರಾಜು ಕಾಗೆ, ಕಂಪ್ಲಿ ಗಣೇಶ್, ಬಸವರಾಜ ರಾಯರೆಡ್ಡಿ ಸರ್ಕಾರದ ವಿರುದ್ಧವೇ ಮಾತನಾಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ನವರೇ ಸರ್ಕಾರ ಬೀಳಿಸುತ್ತಾರೆ. ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ದಕ್ಷಿಣ ಕರ್ನಾಟಕಕ್ಕೆ ಸೀಮಿತ ಎಂದು ಬಿಂಬಿಸಿದ್ದರು. ಆದರೆ ನಾವು ಕಲ್ಯಾಣ ಕರ್ನಾಟಕ, ಕಿತ್ತೂರ ಕರ್ನಾಟಕ ಭಾಗದಲ್ಲಿ ಬಲಿಷ್ಠವಾಗಿದ್ದೇವೆ. ಕುಮಾರಣ್ಣ ಅವರನ್ನ ಮುಖ್ಯಮಂತ್ರಿ ಮಾಡಲು ಜೆಡಿಎಸ್ ಪುನಶ್ಚೇತನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು. ಇದೇ ವೇಳೆ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಹಾಡಿಹೊಗಳಿದರು.
ಬಿಜೆಪಿಯ ಮಾಜಿ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ, ಅಧಿಕಾರಕ್ಕಾಗಿ ಬೇರೆ ಪಕ್ಷಕ್ಕೆ ಹೋಗುವವರು ಎಲ್ಲಾ ಕಡೆ ಇದ್ದಾರೆ. ಅವರ ಜೊತೆ ಚರ್ಚಿಸುವ ವೇಳೆಯಲ್ಲಿ ಹಿನ್ನಡೆ ಅನುಭವಿಸಿದ್ದೇವೆ. ಇದು ನಮ್ಮ ವೈಫಲ್ಯ, ಪಕ್ಷದ ಸೋಲಿಗೆ ಎಲ್ಲರೂ ಸಹ ಕಾರಣ. ಸೋಲಿಗೆ ಒಬ್ಬರೇ ಕಾರಣ ಅಂತಾ ನಾನು ಹೇಳಲು ಹೋಗಲ್ಲ ಎಂದರು.
ಕಾಂಗ್ರೆಸ್ ಸೇರ್ಪಡೆಯಾಗಿ ಎಂದು ಯಾರಿಗೂ ಒತ್ತಡ ಹಾಕುತ್ತಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಎಂಎಲ್ಸಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. 5 ರಾಜ್ಯಗಳ ಚುನಾವಣೆ ಸೆಮಿಫೈನಲ್, ಲೋಕಸಭೆ ಚುನಾವಣೆ ಫೈನಲ್. ವಾಲೆಂಟರಿಯಾಗಿ ಬಿಜೆಪಿ ನಾಯಕರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ರಾಜ್ಯ, ದೇಶದಲ್ಲಿ ರಾಜಕೀಯ ಧ್ರುವೀಕರಣ ಶುರುವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರಾಜಕೀಯ ಧ್ರುವೀಕರಣ ಆಗಲಿದೆ ಎಂದರು.
ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ಲ್ಯಾನ್ ಮಾಡಿದ್ದಾರೆ. ಪಕ್ಷದ ಶಾಸಕರು, ಎಂಎಲ್ಸಿ, ಜಿಲ್ಲಾಧ್ಯಕ್ಷರು ಸಂಪರ್ಕ ಮಾಡಿರುವ ಇಬ್ರಾಹಿಂ, ಬಿಜೆಪಿ ಜೊತೆಗಿನ ಮೈತ್ರಿಯಿಂದ ಜೆಡಿಎಸ್ ತತ್ವ ಸಿದ್ದಾಂತಕ್ಕೆ ಧಕ್ಕೆ ಆಗಲಿದೆ. ಜಾತ್ಯಾತೀತ ಪಕ್ಷವನ್ನು ಉಳಿಸಬೇಕಿದೆ. ನಮ್ಮ ಅಭಿಪ್ರಾಯಕ್ಕೆ ಕೇಳದೆ ಏಕಾಏಕಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಾತ್ಯಾತೀತ ತತ್ವ ಸಿದ್ದಾಂತವು ಉಳಿಸಲು ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಜೆಡಿಎಸ್ ಪಕ್ಷ ಇರುವ ಕೇರಳ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್ ಸೇರಿ ಹಲವು ಜೆಡಿಎಸ್ ಘಟಕ ಅಧ್ಯಕ್ಷರನ್ನು ಸಂಪರ್ಕ ಮಾಡಿ ಅ. 16 ರಂದು ಬೆಂಗಳೂರಿನಲ್ಲಿ ನಡೆಯುವ ತಮ್ಮ ಸಭೆಗೆ ಆಹ್ವಾನ ನೀಡಿದ್ದಾರೆ.
ಮೋಡ ಕವಿದ ವಾತಾವರಣ ಹಿನ್ನೆಲೆ ಮಾಜಿ ಸಿಎಂ ಯಡಿಯೂರಪ್ಪ ಅವರು ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನವು ಆಗಸದಲ್ಲೇ 5 ಸುತ್ತು ಹಾಕಿದ ನಂತರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಿದೆ. ಬೆಂಗಳೂರಿನಿಂದ ಬೆಳಗ್ಗೆ 9.50ಕ್ಕೆ ಹೊರಟಿದ್ದ ಈ ವಿಮಾನವು ಬೆಳಗ್ಗೆ 11.05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ವಾತಾವರಣ ವೈಪರಿತ್ಯದಿಂದಾಗಿ 20 ನಿಮಿಷ ತಡವಾಗಿ ಲ್ಯಾಂಡ್ ಆಯಿತು.
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆ ಬಿಜೆಪಿ ಶಾಸಕರಿಗೆ ಚುನಾವಣಾ ಜವಾಬ್ದಾರಿ ಹಂಚಿಕೆ ಮಾಡಲಾಗುತ್ತಿದೆ. 40-45 ಪಕ್ಷದ ಶಾಸಕರಿಗೆ ಚುನಾವಣಾ ಜವಾಬ್ದಾರಿ ವಹಿಸಿದೆ. ಇಂದಿನಿಂದ ಪಂಚ ರಾಜ್ಯಗಳಲ್ಲಿ ಪಕ್ಷದ ಅಭ್ಯರ್ಥಿಗಳ ಚುನಾವಣಾ ಕೆಲಸಗಳನ್ನು ರಾಜ್ಯದ ಬಿಜೆಪಿ ಶಾಸಕರು ನಿರ್ವಹಿಸಲಿದ್ದಾರೆ. ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ತೆಲಂಗಾಣ ಚುನಾವಣೆಯಲ್ಲಿ ಕಾರ್ಯನಿರ್ವಹಣೆ ಹೊಣೆ ನೀಡಲಾಗಿದ್ದು, ಇಂದು ಬೆಳಗ್ಗೆ ತೆಲಂಗಾಣಕ್ಕೆ ತೆರಳಿದ್ದಾರೆ.
ಬೆಳಗಾವಿ: ಮುಸ್ಲಿಮರ 2ಬಿ ಮೀಸಲಾತಿಯನ್ನು ಶೇಕಡಾ 8ಕ್ಕೆ ಏರಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ಎಸ್‌ಡಿಪಿಐ ಸಂಘಟನೆ ಕಾರ್ಯಕರ್ತರು ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕಾಂತರಾಜ್ ಆಯೋಗದ ವರದಿಯನ್ನ ಸ್ವೀಕರಿಸಿ ಸಾರ್ವಜನಿಕಗೊಳಿಸಬೇಕು. ಕೂಡಲೇ ಮೀಸಲಾತಿ ಹೆಚ್ಚಳ ಮಾಡುವಂತೆ ಒತ್ತಾಯ ಮಾಡಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆ ಮಾಡಲಾಯಿತು.
ಬೆಂಗಳೂರಿನ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ನಾಳೆ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ಆಯೋಜಿಸಲಾಗಿದೆ. ಸರ್ಕಾರ ಅಸ್ತಿತ್ವಕ್ಕೆ ಬಂದು 5 ತಿಂಗಳಾದರೂ ಬಾಕಿ ಮೊತ್ತ ನೀಡಿಲ್ಲ. ಬಾಕಿ ಮೊತ್ತ ಬಿಡುಗಡೆ ಮಾಡದೆ ಮತ್ತಷ್ಟು ಸಮಸ್ಯೆ ಹುಟ್ಟುಹಾಕಲಾಗಿದೆ. ರಾಜ್ಯದಲ್ಲಿ ಗುತ್ತಿಗೆದಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸರ್ಕಾರದ ವಿರುದ್ಧ ಅಧ್ಯಕ್ಷ ಡಿ.ಕೆಂಪಣ್ಣ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.
ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ, ರಾಜ್ಯ ಸರ್ಕಾರ ಗ್ಯಾರಂಟಿ ಕಾರ್ಯಕ್ರಮ ಮೂಲಕ ಬಡವರ ಜೇಬಿಗೆ ಕನ್ನ ಹಾಕುತ್ತಿದೆ. ಅಘೋಷಿತ ಲೋಡ್ ಶೆಡ್ಡಿಂಗ್ ಆರಂಭಗೊಂಡಿದೆ. ರೈತರು ಬೇಸತ್ತಿದ್ದಾರೆ, ಬೆಳೆ ಉಳಿಸಿಕೊಳ್ಳಲೂ ವಿದ್ಯುತ್ ಸಿಗುತ್ತಿಲ್ಲ. ಅಕ್ಕಪಕ್ಕದ ರಾಜ್ಯದಿಂದ ವಿದ್ಯುತ್ ಖರೀದಿಸಿ ಕೊಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರ ನೆಟ್ ವರ್ಕ್ಗಾಗಿ 300 ಕೋಟಿ ಅನುದಾನ ನೀಡಿದೆ. ಮಲೆನಾಡು ಭಾಗದಲ್ಲಿ ಆದ್ಯತೆ ನೀಡಲಾಗುತ್ತಿದೆ. ಡಿಸೆಂಬರ್ ಒಳಗಾಗಿ 100 ಟವರ್ ಸ್ಥಾಪನೆ ಆಗಲಿದೆ. ಮುಂದಿನ ದಿನಗಳಲ್ಲಿ ಉಳಿದ ಎಲ್ಲ ಕಡೆ ಟವರ್ ನಿರ್ಮಿಸಲಾಗುವುದು. ಶಿವಮೊಗ್ಗ ಕ್ಷೇತ್ರದ ಟವರ್ ಗಳಿಗೆ 100 ಬ್ಯಾಟರಿ ಮಂಜೂರಾಗಿದೆ. ಇದರಿಂದ ಜನರೇಟರ್ ಅವಲಂಬನೆಗೆ ಮುಕ್ತಿ ಸಿಗಲಿದೆ. ರೈತ ನಾಯಕ ಯಡಿಯೂರಪ್ಪ ನೇತೃತ್ವದಲ್ಲಿ ಏತ ನೀರಾವರಿ ಮಾಡಿದ್ದೇವೆ. ಶಿಕಾರಿಪುರ ತಾಲ್ಲೂಕಿನಲ್ಲಿ ಈ ಯೋಜನೆ ಪೂರ್ಣಗೊಂಡಿದೆ. ಈ ಯೋಜನೆಗಳಿಗೆ 24 ಗಂಟೆ ವಿದ್ಯುತ್ ಪೂರೈಸಿದರೆ ಕೆರೆಗಳಿಗೆ ನೀರು ಸಿಗಲಿದೆ. ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳ ತಜ್ಞರಿಂದ ಅಭಿಪ್ರಾಯ ಪಡೆದು ಹೊಸ ಶಿಕ್ಷಣ ನೀತಿ ಆರಂಭಿಸಿದೆ. ಆದರೆ, ರಾಜ್ಯ ಸರ್ಕಾರ ಅದನ್ನು ಕೈಬಿಟ್ಟು ಪ್ರತ್ಯೇಕ ಶಿಕ್ಷಣ ನೀತಿ ಅಳವಡಿಸುತ್ತಿದೆ. ಇದರಿಂದ ಸರ್ಕಾರಿ ಮಕ್ಕಳಿಗೆ ಅನ್ಯಾಯ ಆಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮಕ್ಕಳು ತೊಂದರೆ ಅನುಭವಿಸುತ್ತಾರೆ ಎಂದರು.
ಕಾವೇರಿ ನೀರು ನಿರ್ವಹಣ ಪ್ರಾಧಿಕಾರದ ಸಭೆ ನಾಳೆ ನವದೆಹಲಿಯಲ್ಲಿ ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದೆ. ವರ್ಚುವಲ್ ಮೂಲಕ ನಡೆಯುವ ಈ ಸಭೆಯಲ್ಲಿ CWRC ನೀಡಿದ್ದ ಆದೇಶವನ್ನು ಪರಿಶೀಲಿಸಲಾಗುತ್ತದೆ. ಅ.16ರಿಂದ ಅ.31ರವರೆಗೆ ಪ್ರತಿನಿತ್ಯ 3000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ CWRC ಆದೇಶಿಸಿತ್ತು.
ಮೈತ್ರಿ ಬಗ್ಗೆ ಬಿಜೆಪಿ ಕಾರ್ಯಕರ್ತರಲ್ಲಿ ನಿರೀಕ್ಷಿತ ಸಹಮತ ವ್ಯಕ್ತವಾಗದ ಹಿನ್ನೆಲೆ ಐದು ರಾಜ್ಯಗಳ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ನಾಯಕರನ್ನು ಒಂದೇ ವೇದಿಕೆಯಲ್ಲಿ ತರುವ ಬಗ್ಗೆ ಬಿಜೆಪಿ ಚಿಂತನೆ ನಡೆಸುತ್ತಿದೆ. ಬೃಹತ್ ಸಮಾವೇಶ ಏರ್ಪಡಿಸಿ ಪ್ರಧಾನಿ ನರೇಂದ್ರ ಮೋದಿ ಅಥವಾ ಅಮಿತ್ ಶಾ ಜೊತೆ ಮಾಜಿ ಪ್ರಧಾನಿ ದೇವೇಗೌಡರನ್ನು ಒಂದೇ ವೇದಿಕೆಗೆ ಕರೆತರುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈಗ ಬೂತ್ ಮಟ್ಟದಲ್ಲಿ ಮೈತ್ರಿ ಬಗ್ಗೆ ಮನವರಿಕೆ ಮತ್ತು ಮನವೊಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರ ಫಲಿತಾಂಶ ಆಧರಿಸಿ ಬೃಹತ್ ಸಮಾವೇಶದ ಬಗ್ಗೆ ನಿರ್ಧಾರ ಮಾಡಲಿದೆ.
ಮಂಡ್ಯ: ತಮಿಳುನಾಡಿಗೆ ನೀರು ಹರಿಸುವಂತೆ CWRC ಆದೇಶ ಹಿನ್ನೆಲೆ ಮಂಡ್ಯದಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ.
ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯಕರ್ತರು ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದು, ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದಾರೆ. ಖಾಲಿ ಬಿಂದಿಗೆಗಳನ್ನ ಪ್ರದರ್ಶಿಸಿ ರಾಜ್ಯ ಸರ್ಕಾರ, ಸಂಸದರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ಖಾಲಿ ಬಿಂದಿಗೆ ಕೊಟ್ಟಿದೆ ಎಂದು ಘೋಷಣೆ ಕೂಗುತ್ತಿದ್ದಾರೆ. ಹೋರಾಟಕ್ಕೆ ಕನ್ನಡಸೇನೆ ಕಾರ್ಯಕರ್ತರು ಸಾಥ್ ನೀಡಿದ್ದಾರೆ.
ಚಿಕ್ಕೋಡಿ: ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಮತ್ತೆ ಗಡಿ ವಿಚಾರವಾಗಿ ಕ್ಯಾತೆ ತೆಗೆಯಲು ಮಹಾರಾಷ್ಟ್ರ ಮುಂದಾಗಿದೆ. ಸಮಿತಿ ಅಧ್ಯಕ್ಷ ಧೈರ್ಯಶೀಲ ಮಾನೆ ಅವರು MES ಸದಸ್ಯರ ಜತೆ ಮಹಾರಾಷ್ಟ್ರದ ಗಡಿ ಉನ್ನತ ಮಟ್ಟದ ಸಮಿತಿ ಸಭೆ ನಿನ್ನೆ ಮುಂಬೈನಲ್ಲಿ ನಡೆದಿದೆ. ಗಡಿ ಭಾಗದ 865 ಹಳ್ಳಿಗಳ ಮರಾಠಿ ಭಾಷಿಕರಿಗೆ ಆರೋಗ್ಯ ವಿಮೆ ಯೋಜನೆ, ಯೋಜನೆ ಲಾಭ ಪಡೆಯಲು ನಾಡದ್ರೋಹಿ MES ಕಚೇರಿಯ ಪತ್ರ ಅವಶ್ಯಕ, ಯೋಜನೆಯ ಲಾಭ ಪಡೆಯಲು ಮರಾಠಿ ಭಾಷಿಕ ಎಂದು ನಮೂದಿಸಬೇಕು, ಮರಾಠಿ ಭಾಷಿಕ ಎಂಬ ನಮೂದು ಜತೆ MES ಕಚೇರಿಯ ಪತ್ರವೂ ಕಡ್ಡಾಯ, ಮರಾಠಿ ಭಾಷಿಕರಿಗಾಗಿ ಗಡಿಭಾಗದಲ್ಲಿ ಪ್ರತ್ಯೇಕ ಕಚೇರಿ ಸ್ಥಾಪನೆಗೂ ನಿರ್ಧಾರ ಮಾಡಲಾಗಿದೆ. ಪ್ರಾದೇಶಿಕ ಆಯುಕ್ತ ಶ್ರೇಣಿಯ ಅಧಿಕಾರಿ ನೇಮಿಸಿ ಕಚೇರಿ ಸ್ಥಾಪನೆಗೆ ನಿರ್ಧಾರ, ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಚಂದಗಡ್‌ನಲ್ಲಿ ಕಚೇರಿ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ. ಕರ್ನಾಟಕದ 865 ಹಳ್ಳಿಗಳ ಮರಾಠಿ ಭಾಷಿಕರಿಗಾಗಿ ಜನಾರೋಗ್ಯ ಯೋಜನೆ, ಜನಾರೋಗ್ಯ ಯೋಜನೆಯಡಿ ಐದು ಲಕ್ಷ ರೂ.ವರೆಗೆ ಆರೋಗ್ಯ ವಿಮೆ, ಮಹಾರಾಷ್ಟ್ರ ಅಷ್ಟೇ ಅಲ್ಲ ಕರ್ನಾಟಕದ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಸೌಲಭ್ಯ ನೀಡಲು ಚಿಂತಿಸಲಾಗಿದೆ.
ಕರ್ನಾಟಕದಲ್ಲಿ ಜಾತಿ ಜನಗಣತಿ ಜಾರಿಗೆ ವಿರೋಧಿಸಿ ತೆರೆಮರೆಯಲ್ಲಿ ಹೋರಾಟಕ್ಕೆ ಸಜ್ಜುಗೊಳಿಸಲಾಗುತ್ತಿದೆ. ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಲಿಂಗಾಯತ ನಾಯಕರು ಪಟ್ಟು ಹಿಡಿದಿದ್ದಾರೆ. ಲಿಂಗಾಯತ ನಾಯಕರ ಜೊತೆಗೆ ಒಕ್ಕಲಿಗ ನಾಯಕರ ಮಾತುಕತೆ ಕೂಡ ನಡೆಯುತ್ತಿದೆ. ಇದರೊಂದಿಗೆ ಜಾತಿ ಜನಗಣತಿ ವಿರೋಧಿಸಿ ಜಂಟಿ ಹೋರಾಟಕ್ಕೆ ಸಿದ್ದತೆ ಆರಂಭ ಆಗಿದೆ. ಜಾತಿ ಜನಗಣತಿ ಜಾರಿಯ ಕ್ರಮಕ್ಕೆ ವಿರೋಧಿಸಿ ಒಕ್ಕಲಿಗ ಸಮಯದಾಯದ ನಾಯಕರು ಹೋರಾಟದ ರೂಪ ನೀಡಲು ಸಜ್ಜಾಗಿದ್ದಾರೆ.
Published On - 9:12 am, Thu, 12 October 23