ಕರ್ನಾಟಕದಲ್ಲಿ ದೀಪವಾಳಿ ಸಂಭ್ರಮ ಮನೆ ಮಾಡಿದೆ. ಮನೆ-ಅಂಗಡಿ ಮುಗ್ಗಟ್ಟುಗಳಲ್ಲಿ ಜನರು ಭಕ್ತಿಯಿಂದ ಲಕ್ಷ್ಮೀ ದೇವಿ ಪೂಜೆ ಮಾಡುತ್ತಿದ್ದಾರೆ. ಹಬ್ಬದ ನಿಮಿತ್ತ ಮಾರುಕಟ್ಟೆಗಳಲ್ಲಿ ಗ್ರಾಹಕರ ಸಂಖ್ಯೆ ಜಾಸ್ತಿಯಾಗಿದೆ. ಹೂವು-ಹಣ್ಣುಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಲೆಗಳು ಏರಿಕೆಯಾಗಿವೆ. ದೀಪಾವಳಿ ಕೊನೆಯ ದಿನವಾದ ಇಂದು (ನ.14) ಬಲಿಪಾಡ್ಯ ಬಹಳ ವಿಶೇಷ ದಿನವಾಗಿದೆ. ಹಾಸನದ ಪ್ರಸಿದ್ಧ ಹಾಸನಾಂಬೆ ದರ್ಶನೋತ್ಸವ ಅಂತಿಮ ದಿನಕ್ಕೆ ತಲುಪಿದೆ. ಇನ್ನು ಬಿಎಸ್ ಯಡಿಯೂರಪ್ಪ ಪುತ್ರ, ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿರುವ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ನೇಮಕವಾಗಿರುವುದು ಪಕ್ಷದ ಹಲವು ಮುಖಂಡರಿಗೆ ನುಂಗಲಾರದ ತುತ್ತಾಗಿದೆ. ಮತ್ತು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರಿದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇದರೊಂದಿಗೆ ಇಂದಿನ ಲೇಟೆಸ್ಟ್ ಅಪ್ಡೇಟ್ಸ ಇಲ್ಲಿದೆ……
ಮನೆ ದೀಪಾಲಂಕಾರಕ್ಕಾಗಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಆರೋಪ ಸಂಬಂಧ ಕುಮಾರಸ್ವಾಮಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ನಡುವೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಕಚೇರಿಯ ಗೋಡೆಗೆ ವಿದ್ಯುತ್ ಕಳ್ಳ ಎಂದು ಕುಮಾರಸ್ವಾಮಿ ಭಾವಚಿತ್ರ ಇರುವ ಪೋಸ್ಟರ್ ಅಂಟಿಸಿದ್ದಾರೆ. ಕರೆಂಟ್ ಕದ್ದರೂ ಕುಮಾರಸ್ವಾಮಿ ಪ್ರಮಾಣಿಕತೆಯನ್ನು ಮೆಚ್ಚಲೇಬೇಕು. ಕುಮಾರಸ್ವಾಮಿಯವರೇ 200 ಯುನಿಟ್ ಉಚಿತವಾಗಿದೆ ನೆನಪಿಟ್ಟುಕೊಳ್ಳಿ ಹೆಚ್ಚು ಕದಿಯಬೇಡಿ ಎಂದು ಬರೆಯಲಾಗಿದೆ.
ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರು ಗ್ರಾಮದಲ್ಲಿ ಹಸುಗಳಿಗೆ ಕಿಚ್ಚು ಹಾಯಿಸಿ ದೀಪಾವಳಿ ಆಚರಣೆ ಮಾಡಲಾಗಿದೆ. ರೈತರು ಹಸುಗಳಿಗೆ ಪೂಜೆ ಸಲ್ಲಿಸಿ ಕಿಚ್ಚು ಹಾಯಿಸಿದ್ದಾರೆ. ಹಸುಗಳ ಜೊತೆ ರೈತರು ಕೂಡ ಬೆಂಕಿಯಲ್ಲಿ ಓಡಿ ಸಂಭ್ರಮಿಸಿದ್ದಾರೆ.
ಹಾಸನ: ಕುಮಾರಸ್ವಾಮಿ ನಿವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಪ್ರಕರಣ ಸಂಬಂಧ ಹಾಸನದಲ್ಲಿ ಮಾತನಾಡಿದ ನಟ ನಿಖಿಲ್ ಕುಮಾರಸ್ವಾಮಿ, ನಮ್ಮಿಂದ್ರ ಆ ರೀತಿಯ ತಪ್ಪೇನಾದರು ಆಗಿದ್ದರೆ ರಾಜ್ಯದ ಜನರ ಕ್ಷಮೆ ಕೇಳುತ್ತೇನೆ. ನಮ್ಮ ಮನೆಯ ಕೆಲ ಹುಡುಗರು ತಪ್ಪು ಮಾಡಿರಬಹುದು ಎಂದರು.
ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ಹಾಸನಾಂಬೆ ದರ್ಶನ 9 ರಿಂದ 15 ದಿನ ಪ್ರತಿ ವರ್ಷ ದರ್ಶನ ಸಿಗುತ್ತದೆ. ಈ ಬಾರಿ ಪ್ರತಿ ದಿನ ದಿನಕ್ಕೆ ಒಂದರಿಂದ ಒಂದೂವರೆ ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಶಾಸಕರು ಜಿಲ್ಲಾಡಳಿತ ಜವಾಬ್ದಾರಿಯಿಂದ ವ್ಯವಸ್ಥೆ ಮಾಡಿದ್ದಾರೆ. ರಾಜ್ಯದಲ್ಲೇ ಹಾಸನಾಂಬೆ ತಾಯಿಯ ಬಗ್ಗೆ ಶಕ್ತಿ ಚರ್ಚೆ ಆಗುತ್ತಿರುತ್ತದೆ. ಹಚ್ಚಿದ ದೀಪ ಒಂದು ವರ್ಷದ ವರೆಗೆ ಇರುತ್ತದೆ ಎಂಬ ನಂಬಿಕೆ ಇದೆ. ಎಲ್ಲರಿಗೂ ಒಳ್ಳೆಯದಾಗಲಿ. ಮಳೆ ಇಲ್ಲ ರೈತರು ಕಂಗಾಲಾಗಿದ್ದಾರೆ. ರೈತರ ಪರವಾಗಿ ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಬೇಡಿದ್ದೇನೆ. ನಾನು ಜನಸೇವೆಯನ್ನೇ ದೇವರ ಸೇವೆ ಎಂದುಕೊಂಡಿದ್ದೇನೆ. ಸಿನಿಮಾ ರಂಗದಲ್ಲೂ ಪ್ರತಿ ದಿನ ಶೂಟಿಂಗ್ ಮುಂಚೆ ಕ್ಯಾಮೆರಾಕ್ಕೆ ನಮಸ್ಕಾರ ಮಾಡುವ ಸಂಸ್ಕ್ರತಿ ಹೊಂದಿದ್ದೇನೆ ಎಂದರು.
ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ರಾಷ್ಟ್ರ, ರಾಜ್ಯಮಟ್ಟದಲ್ಲಿ ನೋಡಿಯೇ ಪಕ್ಷ ಜವಾಬ್ದಾರಿ ಹಂಚಿಕೆ ಮಾಡುತ್ತದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಬಿಜೆಪಿ ನಿಯೋಜಿತ ಅಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ನಾನು ಮಾಜಿ ಸಿಎಂ ಯಡಿಯೂರಪ್ಪನ ಮಗ ಅನ್ನೋದು ಹೆಮ್ಮೆಯಿದೆ. ಇಷ್ಟು ದೊಡ್ಡ ಹೊಣೆಗಾರಿಕೆ, ನನ್ನ ಮೇಲಿಟ್ಟ ವಿಶ್ವಾಸಕ್ಕೆ ಧಕ್ಕೆ ತರಲ್ಲ. ನಮ್ಮ ಮುಂದೆ ಬಹುದೊಡ್ಡ ಜವಾಬ್ದಾರಿ, ಸವಾಲಿದೆ. 2024ರ ಲೋಕಸಭಾ ಚುನಾವಣೆಗೆ ನಾವು ತಯಾರಾಗಬೇಕಾಗಿದೆ. ಎಲ್ಲರ ವಿಶ್ವಾಸ ಗಳಿಸಬೇಕಿದೆ, ರಾಜ್ಯಾದ್ಯಂತ ಪ್ರವಾಸ ಮಾಡಬೇಕಿದೆ. ನನ್ನ ಮೇಲೆ ನರೇಂದ್ರ ಮೋದಿ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಬರಗಾಲದ ಸಂಕಷ್ಟಕ್ಕೆ ಕೇಂದ್ರ, ರಾಜ್ಯ ಸರ್ಕಾರ ಪರಿಹಾರ ಕೊಡಬೇಕಿದೆ ಎಂದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಾಳೆ ಬೆಳಗ್ಗೆ 11.00 ಕ್ಕೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಅನ್ಯ ಪಕ್ಷದ ನಾಯಕರು, ಮುಖಂಡರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ.
ನಾಳೆ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಪದಗ್ರಹಣ ಮಾಡಲಿದ್ದಾರೆ. ಬೆಳಗ್ಗೆ 9.45ಕ್ಕೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ವಿಜಯೇಂದ್ರ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುತ್ತದೆ. ಬಳಿಕ ಜಗನ್ನಾಥ ಭವನದ ಮುಂಭಾಗ ಗೋಪೂಜೆ ನಡೆಸಲಿರುವ ವಿಜಯೇಂದ್ರ ಅವರು ಆನಂತರ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯುವ ಗಣಪತಿ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ನಳಿನ್ ಕುಮಾರ್ ಕಟೀಲ್ ಕೂಡ ಇರಲಿದ್ದಾರೆ. ಬಳಿಕ ಕಟೀಲ್ ಅವರು ವಿಜಯೇಂದ್ರಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಹಾಸನ: ಹಾಸನಾಂಬೆ ದರ್ಶನಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಆಗಮಿಸಿದ್ದಾರೆ. ಇವರನ್ನು ಶಾಸಕ ಸ್ವರೂಪ್ ಪ್ರಕಾಶ್ ಅವರು ಸ್ವಾಗತಿಸಿದ್ದಾರೆ. ಹಾಸನಾಂಬೆ ದರ್ಶನೋತ್ಸವದ ಕೊನೆಯ ದಿನವಾದ ಇಂದು ನಿಖಿಲ್ ಅವರು ದೇವಿ ದರ್ಶನ ಪಡೆದಿದ್ದಾರೆ. ತಮ್ಮ ಪಕ್ಷದ ಶಾಸಕರು ಹಾಗೂ ಅಭಿಮಾನಿಗಳ ಜೊತೆ ತಾಯಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಗದಗ: ವಿಜಯೇಂದ್ರ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಳಿಕ ಲಿಂಗಾಯತ ಸಮಾಜ ಒಗ್ಗೂಡುವಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆದ ಕಾನೂನು ಸಚಿವ ಹೆಚ್ಕೆ ಪಾಟೀಲ್, ನಿಮ್ಮ ಮನಸ್ಸಿಗೆ ಬಂದಹಾಗೇ ಲೆಕ್ಕ ಹಾಕಿದರೆ ನಡೆಯಲ್ಲ. ಲಿಂಗಾಯತ ಸಮುದಾಯದ ನಾಯಕಕರು ಯಾರೂ ಅಂತ ಪ್ರಶ್ನೆ ಮಾಡಿದರು. ಅಲ್ಲದೆ, ಇವತ್ತು ಶಾಮನೂರ ಶಿವಶಂಕರಪ್ಪನವರು ಲಿಂಗಾಯತ ನಾಯಕರು. ಶಾಮನೂರ ಜಾಗತಿಕ ಅಧ್ಯಕ್ಷರು. ನಮ್ಮ ಪಾರ್ಟಿಯಲ್ಲಿ ಲಿಂಗಾಯತ ನಾಯಕರು ಇಲ್ವಾ? ಈಶ್ವರ ಖಂಡ್ರೆ, ಎಂ ಬಿ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಲಿಂಗಾಯತ ನಾಯಕರು ಅಲ್ವಾ? ಇವರ್ಯಾರು ಲಿಂಗಾಯತ ನಾಯಕರು ಕಾಣಲ್ವಾ ಅಂತ ಕೇಳಿದರು. ಅಲ್ಲದೆ, ವಿಜಯೇಂದ್ರನ ಅಧ್ಯಕ್ಷ ಮಾಡುವ ಮೂಲಕ ಪ್ರಧಾನಿ ಮೋದಿ ಘರ್ಜನೆ ನಿಂತಿದೆ ಎಂದರು.
ಬಿ.ವೈ.ವಿಜಯೇಂದ್ರ ಇನ್ನೂ ಚೈಲ್ಡ್ ಎಂಬ ಸಹಕಾರ ಸಚಿವ ರಾಜಣ್ಣ ಹೇಳಿಕೆಗೆ ತಿರುಗೇಟು ನೀಡಿದ ಬಿಜೆಪಿ ಸಂಸದ ಮುನಿಸ್ವಾಮಿ, ರಾಜಣ್ಣ ಬಫೂನ್, ಅವರಿಗೆ ಊರು ಹೋಗು ಎನ್ನುತ್ತಿದೆ, ಕಾಡು ಬಾ ಎನ್ನುತ್ತಿದೆ. ಸಿದ್ದರಾಮಯ್ಯ ಅವರು ಏನಾದರು ಹೇಳಿ ಕೊಟ್ಟರೆ ಪರಮೇಶ್ವರ್ ಸಿಎಂ ಮಾಡಿ ಎನ್ನುತ್ತಾರೆ. ಇಲ್ಲವಾದರೆ ಶ್ಯಾಮನೂರು ಶಿವ ಶಂಕರಪ್ಪ ಪರವಾಗಿ ಮಾತನಾಡುತ್ತಾರೆ. ಅವರಿಗೆ ವಯಸ್ಸಾಗಿದೆ, ಮೊಮ್ಮಕಳ ಜೊತೆಗೆ ಆಟವಾಡಿಕೊಂಡಿರಬೇಕಾದವರು, ಊರು ಹೋಗು ಎನ್ನುತ್ತಿದ್ರೆ ಕಾಡು ಬಾ ಎನ್ನುತ್ತಿದೆ. ಹೀಗಿರುವಾಗ ವಿಜಯೇಂದ್ರ ಯಳಸು ಅನ್ನೋ ರಾಜಣ್ಣಗೆ ಜಾಸ್ತಿ ವಯಸ್ಸಾಗಿದೆ. ಕಾಂಗ್ರೆಸ್ನ ಎಷ್ಟೋ ಜನ ಶಾಸಕರು ಬಿಜೆಪಿ ಜೊತೆಗೆ ಬರಲು ಸಿದ್ದರಿದ್ದಾರೆ. ಕುರುಡುಮಲೆ ವಿನಾಯಕನ ಅನುಗ್ರಹದಿಂದ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಬೀಳಲಿದೆ ಎಂದರು.
ತಮ್ಮ ವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಆರೋಪ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್ಡಿ ಕುಮಾರಸ್ವಾಮಿ, ಅಂತಹ ದೊಡ್ಡ ಅಪರಾಧ ನಡೆದಿಲ್ಲ, ನಾನೇನು ದೇಶ ಲೂಟಿ ಮಾಡಿಲ್ಲ. 2,000 ರೂಪಾಯಿಗೆ ಕರೆಂಟ್ ಕದೀಬೇಕಾ ನಾನು? ಎಂದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನವರಿಗೆ ಬೇರೆ ಯಾವುದೇ ಕೆಲಸ ಇಲ್ಲ. ಕಾಂಗ್ರೆಸ್ಗೆ ದೊಡ್ಡ ದೊಡ್ಡ ಹಗರಣ ಬಯಲಿಗೆ ತರುವ ಧೈರ್ಯವಿಲ್ಲ. ಕಾಂಗ್ರೆಸ್ನವರು ರಾಜ್ಯವನ್ನು ಬೆಳಗಿಸಿರುವುದನ್ನು ನೋಡಿದ್ದೇನೆ. ದರಿದ್ರ ಬಂದಿರುವುದು ಕಾಂಗ್ರೆಸ್ ನಾಯಕರಿಗೆ ಎಂದರು.
ರಾಜ್ಯ ಸರ್ಕಾರವು ಲೋಕಸಭಾ ಚುನಾವಣೆಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿದೆ. ಎಡಿಜಿಪಿ ಆರ್.ಹಿತೇಂದ್ರ ಅವರನ್ನು ರಾಜ್ಯದ ಪೊಲೀಸ್ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಐಜಿಪಿ ಸಂದೀಪ್ ಪಾಟೀಲ್ ಅವರನ್ನು ಸಹಾಯಕ ಪೊಲೀಸ್ ನೋಡಲ್ ಅಧಿಕಾರಿಯನ್ನಾಗಿ ಹಾಗೂ ಐಜಿಪಿ ದೇವಜ್ಯೋತಿ ರೇ ಅವರನ್ನು ಸಹಾಯಕ ಪೊಲೀಸ್ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.
ತಮ್ಮನ್ನು ಟಾರ್ಗೆಟ್ ಮಾಡಿ ಕಾಂಗ್ರೆಸ್ ಆರೋಪ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಟಾರ್ಗೆಟ್ ಮಾಡಲಿ ಎಲ್ಲವನ್ನೂ ಅರಗಿಸಿಕೊಳ್ಳುವ ನೈತಿಕತೆ ಉಳಿಸಿಕೊಂಡಿದ್ದೇನೆ. ಯಾವುದನ್ನೂ ಮುಚ್ಚುಮರೆ ಮಾಡಲ್ಲ, ನಾನು ತೆರೆದ ಪುಸ್ತಕ ಇದ್ದಂತೆ. ಕಾಂಗ್ರೆಸ್ನವರ ದಬ್ಬಾಳಿಕೆ, ಆರೋಪಗಳನ್ನು ಅರಗಿಸಿಕೊಳ್ಳುವ ನೈತಿಕತೆ ಇದೆ. ಕಾಂಗ್ರೆಸ್ನವರ ಮಟ್ಟಕ್ಕೆ ಲೂಟಿ ಹೊಡೆಯುವ ಕೆಲಸಕ್ಕೆ ಕೈ ಹಾಕಿಲ್ಲ. ವಿಜಯಪುರದಲ್ಲಿ ಕೋ ಆಪರೇಟಿವ್ ಸೊಸೈಟಿಗೆ ನಕಲಿ ವಿಳಾಸ ನೀಡಿದ್ದಾರೆ. ಬೆಂಗಳೂರಿನ ಜಯನಗರ ಆಡ್ರೆಸ್ ಕೊಟ್ಟು ಲೈಸೆನ್ಸ್ ಪಡೆದಿದ್ದರು. ನಕಲಿ ಹೌಸಿಂಗ್ ಸೊಸೈಟಿ ಸೃಷ್ಟಿ ಮಾಡಿ ಲೂಟಿ ಮಾಡಿದ್ದು ನಾನಾ? ಕಾಂಗ್ರೆಸ್ನವರಿಗೆ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದರು.
ಚಿಕ್ಕಮಗಳೂರಿನ ರೆಸಾರ್ಟ್ನಲ್ಲಿ ಮೂರು ದಿನಗಳ ಕಾಲ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಲಿದ್ದಾರೆ. ನ.17 ರ ಮಧ್ಯಾಹ್ನ ಚಿಕ್ಕಮಗಳೂರಿನ ಖಾಸಗಿ ರೆಸಾರ್ಟ್ಗೆ ಶಾಸಕರು ಆಗಮಿಸಲಿದ್ದಾರೆ. ನವೆಂಬರ್ 18 ರಂದು ಶಾಸಕ ಜೊತೆ ಕುಮಾರಸ್ವಾಮಿ ಸಭೆ ನಡೆಸಲಿದ್ದಾರೆ. ನ.19 ರಂದು ಸಿಲ್ವರ್ ಗೇಟ್ ರೆಸಾರ್ಟ್ನಲ್ಲಿ ನಡೆಯುವ ಶಾಸಕ ಭೋಜೇಗೌಡ ಅವರ ಮಗಳ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಶಾಸಕರು ಭಾಗಿಯಾಗಲಿದ್ದಾರೆ.
ನಿವಾಸದ ದೀಪಾಲಂಕಾರಕ್ಕೆ ಅಕ್ರಮವಾಗಿ ವಿದ್ಯುತ್ ಪಡೆದ ಆರೋಪ ವಿಚಾರವಾಗಿ ಟ್ವಿಟರ್‌ನಲ್ಲಿ ಮತ್ತೆ ಹೆಚ್.ಡಿ.ಕುಮಾರಸ್ವಾಮಿಗೆ ಟಾಂಗ್ ನೀಡಿದ ಕಾಂಗ್ರೆಸ್, ಹೌದೌದು ಕುಮಾರಸ್ವಾಮಿಗಳೇ, ಬಿಡದಿ ಮನೆ, ಜೆ.ಪಿ.ನಗರದ ಮನೆ, ಆ ಮನೆ, ಈ ಮನೆ, ಎಲ್ಲೆಲ್ಲಿ ಮನೆಗಳಿವೆ, ಎಲ್ಲಿ ಏನಾಗ್ತಿದೆ ಎಂದು ಗೊತ್ತಾಗಲ್ಲ. ಯಾವ್ಯಾವ ಮನೆಯಲ್ಲಿ ಏನೇನಾಗುತ್ತಿದೆ ಎಂದು ನಿಮಗೇ ತಿಳಿದಿರುವುದಿಲ್ಲ ಪಾಪ. ರಾಜ್ಯದ ಮುಖ್ಯಮಂತ್ರಿಯಾಗಿದ್ದ ತಾವು ಕರೆಂಟ್ ಕಳ್ಳತನವನ್ನು ಕ್ಷುಲ್ಲುಕ ವಿಚಾರ ಎಂದು ತಿಪ್ಪೆ ಸಾರಿಸುತ್ತಿರುವುದಕ್ಕೆ ನಾಚಿಕೆಯಾಗಬೇಕು. ಹೀಗೆಯೇ ಇನ್ನೆಷ್ಟು ರಾಜ್ಯದ ಲೂಟಿಯನ್ನು ಸಮರ್ಥಿಸಿಕೊಳ್ಳುವಿರೋ ಏನೋ, ‘ಕ್ಷುಲ್ಲುಕ ವಿಚಾರ’ವೆಂದು ಸಮರ್ಥಿಸಿಕೊಳ್ಳುವಿರೋ ಏನೋ, ತಮ್ಮ ತಪ್ಪನ್ನು ಕೆಲಸದವರ ಮೇಲೆ ಹಾಕಿ ತಪ್ಪಿಸಿಕೊಳ್ಳುವ ಕುಟೀಲ ಪ್ರಯತ್ನ, ಹಿಟ್ ಆ್ಯಂಡ್ ರನ್ ನಿಮ್ಮ ಕಾಯಕ ಆಗಿದ್ದು ಪಲಾಯನವಾದದ ಭಾಗವಲ್ಲವೇ? ಮುಖ್ಯಮಂತ್ರಿಗಳ ಗೃಹ ಕಚೇರಿಯ 1.9 ಲಕ್ಷದ ಪೀಠೋಪಕರಣಗಳಿಗೆ 1.9 ಕೋಟಿ ಎಂದು ಸುಳ್ಳು ಆರೋಪ ಮಾಡಿದಾಗ ತಮ್ಮದು ಕ್ಷುಲ್ಲುಕ ಬುದ್ಧಿಯಾಗಿತ್ತೇ? ಗ್ಯಾರಂಟಿಗಳ ಬಗ್ಗೆ ರಾಜ್ಯದ ಜನತೆಗೆ ಸುಳ್ಳು ಸಂದೇಶ ಕೊಡುತ್ತಿದ್ದೀರಲ್ಲ ಅದು ನಿಮ್ಮ ಕ್ಷುಲ್ಲುಕ ಬುದ್ಧಿಯೋ, ಪ್ರಚಾರ ಗಿಟ್ಟಿಸಿಕೊಳ್ಳುವ ಹಪಹಪಿಯೋ? ತಾವು ಅಕ್ರಮ ಸಂಪರ್ಕ ಪಡೆದಾಗ ಕರ್ನಾಟಕ ಕತ್ತಲೆಯಲ್ಲಿ ಇರಲಿಲ್ಲ ಅಲ್ಲವೇ, ತಮ್ಮ ಮನೆಯ ದೀಪಾಲಂಕಾರಕ್ಕೆ ಯಾವುದೇ ತೊಂದರೆಯಾಗಲಿಲ್ಲ ಅಲ್ಲವೇ? ದೀಪಾಲಂಕಾರದ ಅದ್ಧೂರಿತನ ತೋರುವಾಗ ರಾಜ್ಯದ ಬರ ನೆನಪಾಗಲಿಲ್ಲವೇ? ನಿಮಗೆ ಯಾವುದಕ್ಕೂ ‘ಬರ’ ಇಲ್ಲವೆಂದು ದಾಡಸಿತನವೇ? ಎಂದು ಪ್ರಶ್ನಿಸಿದೆ.
ಮಾಜಿ ಶಾಸಕರಾದ ಗೌರಿಶಂಕರ್, ಮಂಜುನಾಥ್ ಕಾಂಗ್ರೆಸ್ ಸೇರುವ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಇದು ಹಳೆಯ ವಿಚಾರ, ಇದರಿಂದ ನನಗನೂ ಶಾಕ್ ಆಗಲ್ಲ. ಗೌರಿಶಂಕರ್, ಮಂಜುನಾಥ್ ಕರೆದು 2 ಬಾರಿ ಮಾತನಾಡಿದ್ದೇನೆ. ಅವರಿಗೆ ಅನುಕೂಲ ಆಗುವ ಕಡೆ ಹೋಗಿದ್ದಾರೆ. ನಮಗೆ ಯಾವುದೇ ತೊಂದರೆ ಆಗಲ್ಲ, ಕಾರ್ಯಕರ್ತರಿದ್ದಾರೆ ಎಂದರು.
ಬೆಂಗಳೂರು: ಅಂತಹ ದೊಡ್ಡ ಅಪರಾಧ ನಡೆದಿಲ್ಲ. ನಾನೇನು ದೇಶ ಲೂಟಿ ಮಾಡಿಲ್ಲ. ಮಾತಾಡುತ್ತಿರುವವರು ಏನು ಕೆಲಸ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು. ತೋಟದಿಂದ ಬಂದಾಗ ಮಾಹಿತಿ ಬಂತು. ಕೂಡಲೇ ತೆರವು ಮಾಡಲಾಯ್ತು. ಪ್ರತಿ ಮನೆಯಲ್ಲಿ ನಡೆಯೋದು ಮಾಹಿತಿ ಇರುತ್ತಾ? ಹಬ್ಬದ ದಿನ ಕನೆಕ್ಷನ್ ತೆಗೆದುಕೊಂಡಿದ್ದಾರೆ. ನಾವೇನು ಹೇಳಿದ್ದೀವಾ ಕದ್ದು ಕರೆಂಟ್ ತಗೊಳ್ಳಿ ಅಂತ. 2000 ರೂಪಾಯಿಗೆ ಕರೆಂಟ್ ಕದೀಬೇಕಾ ನಾನು? ಭಾನುವಾರ ಹಾಗು ಸೋಮವಾರ 2 ದಿನ ಹಾಕಿದ್ದಾರೆ. ಅದು ಕೆಲಸದವರು ಮಾಡಿದ ತಪ್ಪು. ನಾನೇನು ಹರಿಶ್ಚಂದ್ರ ಅಲ್ಲ. ನಾನು ತಪ್ಪು ಮಾಡಿದ್ದರೆ ಒಪ್ಪಿಕೊಳ್ಳುತ್ತೇನೆ.
ನವೆಂಬರ್ 16 ರಂದು ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
ಬೆಂಗಳೂರು: ಹೆಚ್ಡಿ ಕುಮಾರಸ್ವಾಮಿಕ್ಕೆ ನಿವಾಸದ ದೀಪಾಲಂಕಾರಕ್ಕೆ ವಿದ್ಯುತ್ ಕಳ್ಳತನ ಆರೋಪ ಕೇಳಿಬಂದಿತ್ತು. ಇದಕ್ಕೆ ಹೆಚ್ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ನೋಟಿಸ್ ನೀಡಲಿ, ದಂಡ ಕಟ್ಟುತ್ತೇನೆಂದು ಎಂದರು. ಈ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮ ಸೋಷಿಯಲ್ ಮೀಡಿಯಾ ತಂಡ ಅದರ ಡ್ಯೂಟಿ ಮಾಡಿದೆ. ಅಚಾತುರ್ಯವೋ, ಕಳ್ಳತನವೋ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬೆಸ್ಕಾಂ ಏನು ಕಾನೂನು ಕ್ರಮ ತೆಗೆದುಕೊಳ್ಳಬೇಕು ತೆಗೆದುಕೊಳ್ತಾರೆ. ಇದಕ್ಕೆ ನಾವು ಮಧ್ಯಪ್ರವೇಶ ಮಾಡುವ ಅವಶ್ಯಕತೆ ಇಲ್ಲ. ಕಾಂಪೌಂಡ್ ನಾನು ಹಾಕಿದ್ನಾ, ಅವರು ಹಾಕಿದರೋ ದೂರು ಕೊಡಲಿ. ಅಸೂಯೆಗೆ ಮದ್ದಿಲ್ಲ, ಪಾಪ ಕುಮಾರಸ್ವಾಮಿಗೆ ತಡೆದುಕೊಳ್ಳಲು ಆಗ್ತಿಲ್ಲ ಎಂದು ವಾಗ್ದಾಳಿ ಮಾಡಿದರು.
ಕೋಲಾರ: ಲೋಕಸಭಾ ಚುನಾವಣೆಯಲ್ಲಿ ಜಯಬೇರಿ ಬಿಜೆಪಿ ಭಾರಿಸಬೇಕು. ರಾಜ್ಯದಲ್ಲೂ ಬಿಜೆಪಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬೇಕು. ಮೂರನೇ ಬಾರಿಗೆ ಪ್ರಧಾನಿ ಮೋದಿ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು. ಪಕ್ಷದಲ್ಲಿ ಹಿರಿಯರಿದ್ದರೂ ಸಹ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ. ಬಿವೈ ವಿಜಯೇಂದ್ರ ಅವರನ್ನು ಆಯ್ಕೆ ಮಾಡಿರುವುದು ನಮ್ಮ ರಾಷ್ಟ್ರೀಯ ನಾಯಕರ ತೀರ್ಮಾನ. ಶುಕ್ರವಾರ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಎಲ್ಲಾ ಶಾಸಕರುಗಳು ಭಾಗವಹಿಸುತ್ತಾರೆ. ಶಾಸಕಾಂಗ ಪಕ್ಷದ ಸಭೆಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಬರಲಿದ್ದಾರೆ ಎಂದು ಬಿವೈ ವಿಜಯೇಂದ್ರ ಹೇಳಿದರು.
ಬೆಂಗಳೂರು: ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಮಾಡಿರುವ ಟೀಕೆಗೆ ನಾನು ಉತ್ತರ ಕೊಡಲ್ಲ. ಏಕೆಂದ್ರೆ ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ವ್ಯಕ್ತಿ ಅವರು. ಹೆಚ್.ಡಿ.ಕುಮಾರಸ್ವಾಮಿ ಬರೀ ಸುಳ್ಳೇ ಹೇಳುವುದು. ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಸಂಚಾರ ಮಾಡುತ್ತಿದ್ದಾರೆ. ಇದು ಕುಮಾರಸ್ವಾಮಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಿಎಂ ಐಷಾರಾಮಿ ಜೀವನ ನಡೆಸ್ತಿದ್ದಾರೆ ಎಂದು ಆರೋಪಕ್ಕೆ ಸಂಬಂಧಿಸಿದಂತೆ ಹೆಚ್.ಡಿ.ಕುಮಾರಸ್ವಾಮಿಗೆ ಸುಳ್ಳು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.
ಬೆಂಗಳೂರು: ಬಿಜೆಪಿಯವರು ಕೇವಲ ಸ್ವಾತಂತ್ರ್ಯದ ಫಲಾನುಭವಿಗಳು ಅಷ್ಟೇ. ಸ್ವಾತಂತ್ರ್ಯ ಹೋರಾಟಕ್ಕೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ. ಬಿಜೆಪಿಯ ಒಬ್ಬ ನಾಯಕರಾದರೂ ಜೈಲಿಗೆ ಹೋಗಿದ್ದಾರಾ? ನೆಹರು ಟೀಕೆ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ. ಬಿಜೆಪಿಗರು ಪ್ರಜಾಪ್ರಭುತ್ವ, ಸಂವಿಧಾನಕ್ಕೆ ವಿರೋಧವಾಗಿದ್ದವರು. ನನ್ನ ಪ್ರಕಾರ ದೇಶ ಆಳುವುದಕ್ಕೆ ಬಿಜೆಪಿಗೆ ಅರ್ಹತೆಯೇ ಇಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿಕಾರಿದರು.
ಹುಬ್ಬಳ್ಳಿ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ನೇಮಕ ಮಾಡಿದ್ದಕ್ಕೆ ಯಾರಿಗೂ ಅಸಮಾಧಾನವಿಲ್ಲ. ಭಿನ್ನಾಭಿಪ್ರಾಯ ಇದ್ದರೆ ಎಲ್ಲರೂ ಮಾತನಾಡಿ ಸರಿ ಮಾಡುತ್ತೇವೆ. ಬಿಎಸ್ ಯಡಿಯೂರಪ್ಪ, ಬಿವೈ ವಿಜಯೇಂದ್ರ, ನಾವು ಎಲ್ಲರೂ ಸೇರಿ ಸರಿ ಮಾಡುತ್ತೇವೆ. ಬಿವೈ ವಿಜಯೇಂದ್ರ ಎಲ್ಲರನ್ನೂ ಭೇಟಿಯಾಗುತ್ತಿದ್ದಾರೆ. ಪಕ್ಷದ ಮೇಲೆ ಜನರಿಗೆ ನೀರಿಕ್ಷೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಬೆಂಗಳೂರು: ಎಲ್ಲರನ್ನೂ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ. ಪದಗ್ರಹಣ ಕಾರ್ಯಕ್ರಮಕ್ಕೆ ವಿಶೇಷ ಸಿದ್ಧತೆ ಏನೂ ಆಗಿಲ್ಲ. ಜಿಲ್ಲೆಗಳಿಂದ ಕಾರ್ಯಕರ್ತರು ಬರುತ್ತಾರೆ. ನಳೀನಕುಮಾರ್ ಕಟೀಲು ಅವರು ನನಗೆ ಆಶೀರ್ವಾದ ಮಾಡಿ ಜವಾಬ್ದಾರಿ ಹಸ್ತಾಂತರ ಮಾಡುತ್ತಾರೆ. ಎಲ್ಲಾ ಶಾಸಕರಿಗೆ ಖುದ್ದು ಕರೆ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ. ಮಾಜಿ ಶಾಸಕರು, ಜಿಲ್ಲಾಧ್ಯಕ್ಷರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಕೋಲಾರ ನ.14: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಿಯೇಂದ್ರ ಅವರಿಗೆ ಕೋಲಾರದ ರಾಮಸಂದ್ರ ಗೇಟ್ ಬಳಿ ಅದ್ದೂರಿ ಸ್ವಾಗತ ದೊರೆತಿದೆ. ಸಂಸದ ಮುನಿಸ್ವಾಮಿ ಹಾಗೂ ಮಾಜಿ ಸಚಿವ ವರ್ತೂರು ಪ್ರಕಾಶ್, ಬಿಜೆಪಿ ಮುಖಂಡರು ಸ್ವಾಗತಿಸಿದ್ದಾರೆ. ಬಿವೈ ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಇದೆ ಮೊದಲ ಬಾರಿಗೆ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಬಿವೈ ವಿಜಯೇಂದ್ರ ಮುಳಬಾಗಲು ಕುರುಡುಮಲೆ ವಿನಾಯಕನ ದರ್ಶನ ಪಡೆಯಲಿದ್ದಾರೆ.
ಬೆಂಗಳೂರು: ಐಶಾರಾಮಯ್ಯನವರೇ, ನನ್ನ ದನಿ ಬಡವರ ಪರ. ನಿಮ್ಮಂತೆ ಯಾರ ಮುಲಾಜಿಗೂ ಬಿದ್ದವನಲ್ಲ ನಾನು. ರಾಜ್ಯಕ್ಕೆ ರಾಜ್ಯವೇ ಬರದ ಬೆಂಕಿಯಲ್ಲಿ ಬೇಯುತ್ತಿದೆ. ರೈತಸಂಕುಲ ನರಕದಲ್ಲಿದೆ. ಅವರ ಸಾಲಮನ್ನಾ ಮಾಡಿ. #YstTax, #SstTax ಕಲೆಕ್ಷನ್ ಬದಿಗಿಟ್ಟು ರೈತರ ಪರ ನಿಲ್ಲಿ. ಗ್ಯಾರಂಟಿ ಗ್ಯಾರಂಟಿ ಎನ್ನುತ್ತಿದ್ದೀರಲ್ಲ, ರೈತರ ಬದುಕಿಗೆ ಗ್ಯಾರಂಟಿ ಕೊಡಿ. ನಾನು ಸಾಲಮನ್ನಾ ಮಾಡಿ ತೋರಿಸಿದ್ದೇನೆ, ಈಗ ನೀವು ಮಾಡಿ. ಬರೀ ಬಾಯಿ ಮಾತೇಕೆ? ಇದೇ ನನ್ನ ಸವಾಲು” ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸವಾಲು ಎಸೆದಿದ್ದಾರೆ.
ಬೆಂಗಳೂರು: ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಶುಕ್ರವಾರ ನಿಗದಿಯಾಗಿದೆ. ಶಾಸಕಾಂಗ ಪಕ್ಷದ ಸಭೆ ಮುಂದೂಡಿಕೆಯಂತಹ ಬೆಳವಣಿಗೆ ಆಗಿಲ್ಲ. ಜೆ.ಪಿ.ನಡ್ಡಾ ಅವರಿಗೆ ಕರೆ ಮಾಡಿದ್ದೆ, ಇನ್ನೊಂದು ಗಂಟೆಯಲ್ಲಿ ತಿಳಿಸಲಿದ್ದಾರೆ. ಯಾರು ಯಾರು ವೀಕ್ಷಕರು ಬರುತ್ತಾರೆ ಅಂತಾ ಜೆ.ಪಿ.ನಡ್ಡಾ ಅವರು ತಿಳಿಸಲಿದ್ದಾರೆ. ಕೇಂದ್ರದ ವೀಕ್ಷಕರು ನವೆಂಬರ್ 16ರಂದು ಬರುತ್ತಾರಾ ಅಥವಾ ಶುಕ್ರವಾರ ಬರುತ್ತಾರಾ ಎಂಬುವುದು ಗೊತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಅದ್ಧೂರಿಯಾಗಿ ರಥೋತ್ಸವ ನೆರವೇರಿತು. ಶಾಂತವೀರ ಮಲ್ಲಿಕಾರ್ಜುನ ಸ್ವಾಮಿಜಿ ಹಾಗೂ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಹಸ್ತದಿಂದ ಧನುರ್ ಲಘ್ನದಲ್ಲಿ ರಥ ಎಳೆಯಲಾಯಿತು. ಈ ವೇಳೆ ಮಾದಪ್ಪನ ಸನ್ನಿಧಾನದಲ್ಲಿ ಉಘೇ ಮಾದಪ್ಪ ಘೋಷವಾಕ್ಯ ಮೊಳಗಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತಗಣ ನೆರದಿತ್ತು. ರಥದ ಮುಂದೆ ಬಸವ ವಾಹನ, ಹುಲಿ ವಾಹನ ಹಾಗೂ ರುದ್ರಾಕ್ಷಿ ವಾಹನ ಸಾಗಿದವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಆಗಮಿಸಿರುವ ಭಕ್ತಾಧಿಗಳು ರಥೋತ್ಸವಕ್ಕೆ ಸಾಕ್ಷಿಯಾದರು. ವರ್ಷದಲ್ಲಿ ಮೂರು ಬಾರಿ ಯುಗಾದಿ, ದೀಪಾವಳಿ, ಶಿವರಾತ್ರಿಯಂದು ಜಾತ್ರಾ ಮಹೋತ್ಸವ ನಡೆಯುತ್ತದೆ.
ಚಿಕ್ಕಮಗಳೂರು: ಬಿಂಡಿಗ ದೇವೀರಮ್ಮನ ದೇಗುಲದಲ್ಲಿ ಇಂದು (ನ.14) ಕೊಂಡೋತ್ಸವ ನಡೆಯಲಿದೆ. ದೇವೀರಮ್ಮ ಬೆಟ್ಟ ಸಮುದ್ರ ಮಟ್ಟದಿಂದ 3,000 ಅಡಿ ಎತ್ತರದಲ್ಲಿದೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಳಿಯಿರುವ ದೇವೀರಮ್ಮ ಬೆಟ್ಟ ಚಂದ್ರದ್ರೋಣ ಪರ್ವತದ ಸಾಲಿನಲ್ಲಿದೆ. 3 ದಿನಗಳ ದೇವೀರಮ್ಮನ ಜಾತ್ರಾ ಮಹೋತ್ಸವಕ್ಕೆ ಇಂದು ತೆರೆ ಬೀಳಲಿದೆ. ಭದ್ರತೆಗಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಚಾಮರಾಜನಗರ: ದೀಪಾವಳಿ ಹಬ್ಬ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು (ನ.14) ಅದ್ಧೂರಿ ರಥೋತ್ಸವ ನಡೆಯಲಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರಬೆಟ್ಟದಲ್ಲಿ ಮಾಯ್ಕಾರ ಮಾದಪ್ಪನ ಸನ್ನಿಧಿಗೆ ಭಕ್ತ ಸಾಗರ ಹರಿದು ಬರುತ್ತಿದೆ. ನೂರಾರು ಭಕ್ತರು ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಬರುತ್ತಿದ್ದಾರೆ. ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ನೆರೆದಿದೆ. ಭಕ್ತಗಣ ಮಾದಪ್ಪನ ದರ್ಶನ ಪಡೆದು ವಿವಿಧ ಹರಕೆ ತೀರಿಸುತ್ತಿದೆ.
ಹಾಸನ: ಹಾಸನಾಂಬ ದೇವಿ ದರ್ಶನಕ್ಕೆ ಇಂದೇ ಕೊನೆಯ ದಿನವಾಗಿದೆ. ಕೊನೆಯ ದಿನವೂ ಹಾಸನಾಂಬೆ ದರ್ಶನಕ್ಕೆ ಭಕ್ತರು ಬರುತ್ತಿದ್ದಾರ. ಬುಧವಾರ ಬೆಳಗ್ಗೆ 7 ಗಂಟೆಯವರೆಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ನಾಳೆ (ನ.15) ಶಾಸ್ತ್ರೋಕ್ತವಾಗಿ ಗರ್ಭಗುಡಿ ಬಾಗಿಲನ್ನು ಭಕ್ತರು ಮುಚ್ಚಲಿದ್ದಾರೆ. ನವೆಂಬರ್ 2ರಿಂದ ಹಾಸನಾಂಬ ಜಾತ್ರಾ ಮಹೋತ್ಸವ ಆರಂಭವಾಗಿತ್ತು. ಈ ಬಾರಿ 12 ದಿನಗಳ ಕಾಲ ಭಕ್ತರಿಗೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಗಿದೆ.
Published On - 8:02 am, Tue, 14 November 23