ತ್ಯಾಜ್ಯ ವಿಲೇವಾರಿಗೆ ಶುಲ್ಕ: ಕಸ ಸಂಗ್ರಹಿಸಲು ಬಿಬಿಎಂಪಿಗೆ ಪ್ರತಿ ತಿಂಗಳು ಹಣ ಪಾವತಿಸಬೇಕು, ಎಷ್ಟು ಗೊತ್ತಾ?
ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹ ಮಾಡಲು ಪ್ರತಿ ತಿಂಗಳು ಮಾಸಿಕ ಶುಲ್ಕ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಸಿಕ್ಕರೆ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ನಾಗರಿಕರು ಪ್ರತಿ ತಿಂಗಳು 30 ರೂ. ಪಾವತಿಸಬೇಕು.
ಬೆಂಗಳೂರು, ನ.14: ತ್ಯಾಜ್ಯ ವಿಲೇವಾರಿ ಶುಲ್ಕ ಪಡೆಯಲು (Charges For Garbage Disposal) ಬಿಬಿಎಂಪಿ (BBMP) ಮುಂದಾಗಿದ್ದು ಈ ಬಗ್ಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹ ಮಾಡಲು ಪ್ರತಿ ತಿಂಗಳು ಮಾಸಿಕ ಶುಲ್ಕ ವಿಧಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ. ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ (Karnataka Government) ಅನುಮೋದನೆ ಸಿಕ್ಕರೆ ಕಸ ಸಂಗ್ರಹಣೆ ಮತ್ತು ವಿಲೇವಾರಿಗೆ ನಾಗರಿಕರು ಪ್ರತಿ ತಿಂಗಳು 30 ರೂ. ಪಾವತಿಸಬೇಕು.
ಈ ಪ್ರಸ್ತಾವಿತ ಯೋಜನೆ ವ್ಯಾಪ್ತಿಗೆ 46 ಲಕ್ಷ ಮನೆಗಳು ಬರುತ್ತವೆ. ಅಂದಾಜು 6.32 ಲಕ್ಷ ವಾಣಿಜ್ಯ ಕಟ್ಟಡಗಳು ಶುಲ್ಕದ ವ್ಯಾಪ್ತಿಗೆ ಬರಲಿದ್ದು, ತಿಂಗಳಿಗೆ ₹ 72.39 ಕೋಟಿ ಆದಾಯದ ನಿರೀಕ್ಷೆ ಇದೆ. ಮನೆ ಹಾಗೂ ವಾಣಿಜ್ಯ ಕಟ್ಟಡಗಳಲ್ಲಿ ಮಾಸಿಕ ವಿದ್ಯುತ್ ಬಳಕೆಯ ಆಧಾರದ ಮೇಲೆ ಶುಲ್ಕ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ. ಕಳೆದ ವಾರ ಶುಲ್ಕ ರಚನೆ ಅಂತಿಮಗೊಳಿಸಿ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಆಸ್ತಿಗೆ ತೆರಿಗೆ ಆಧರಿಸಿ ಶುಲ್ಕ ಸಂಗ್ರಹಿಸುವ ಬದಲಿಗೆ, ವಿದ್ಯುತ್ ಬಳಕೆ ಪ್ರಮಾಣ ಆಧರಿಸಿಯೇ ಶುಲ್ಕ ನಿಗದಿಸಲು ಬಿಬಿಎಂಪಿ ಮುಂದಾಗಿದೆ. ಬೆಸ್ಕಾಂ ಸಿಬ್ಬಂದಿ ನೆರವು ಪಡೆಯುತ್ತಿರುವುದರಿಂದ ಬೆಸ್ಕಾಂಗೆ ನಿರ್ದಿಷ್ಟ ಶುಲ್ಕ ಪಾವತಿಸಲಾಗುವುದು ಎಂದು ಮೂಲಗಳು ಹೇಳಿವೆ.
ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ರಸ್ತಾವ ಇದಾಗಿದೆ. ಶುಲ್ಕ ನಿಗದಿ ಸಂಬಂಧ ಕಳೆದ ವಾರ ಬಿಬಿಎಂಪಿಯ ಘನತ್ಯಾಜ್ಯ ವಿಲೇವಾರಿ ಘಟಕದ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿತ್ತು. ಬೆಸ್ಕಾಂ ಮೀಟರ್ ರೀಡರ್‌ಗಳನ್ನು ಬಳಸಿಕೊಂಡು ಶುಲ್ಕ ಸಂಗ್ರಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕರಡು ಯೋಜನೆಯ ಪ್ರಕಾರ, ತ್ಯಾಜ್ಯ ಉತ್ಪಾದನೆ ಆಧರಿಸಿ ಪ್ರತಿ ಮನೆಗೆ ತಿಂಗಳಿಗೆ ₹30 ರಿಂದ ₹500ರವರೆಗೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ₹75 ರಿಂದ ₹1,200ರ ಶುಲ್ಕ ನಿಗದಿಪಡಿಸುವುದಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಶಬ್ದ ಮಾಲಿನ್ಯ, ವಾಯುಮಾಲಿನ್ಯ ಬೇಡ: ಪರಿಸ್ನೇಹಿ ದೀಪಾವಳಿ ಆಚರಿಸಲು ಬಿಬಿಎಂಪಿ ಮನವಿ
ತನ್ನ ಪ್ರಸ್ತಾವನೆಯನ್ನು ಬೆಂಬಲಿಸಲು, ಬಿಬಿಎಂಪಿಯು ದೆಹಲಿ, ಚೆನ್ನೈ, ಮುಂಬೈ, ಪುಣೆ, ಇಂದೋರ್ ಮತ್ತು ತಿರುಪತಿ ನಗರಗಳನ್ನು ಉಲ್ಲೇಖಿಸಿದೆ. ಈ ಸ್ಥಳೀಯ ಸಂಸ್ಥೆಗಳು ಈಗಾಗಲೇ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಂದ ತ್ಯಾಜ್ಯ ಸಂಗ್ರಹಕ್ಕೆ ಶುಲ್ಕ ಸಂಗ್ರಹಿಸುತ್ತಿವೆ. ಅದನ್ನು ಪ್ರಸ್ತಾವನೆಯಲ್ಲಿ ವಿವರಿಸಲಾಗಿದೆ. 2016 ರ ಘನತ್ಯಾಜ್ಯ ನಿರ್ವಹಣಾ ನಿಯಮಗಳಲ್ಲಿ ಈಗಾಗಲೇ ಉಲ್ಲೇಖಿಸಿರುವುದರಿಂದ ಬಳಕೆದಾರರ ಶುಲ್ಕವನ್ನು ಸಂಗ್ರಹಿಸದಂತೆ ಬಿಬಿಎಂಪಿಯನ್ನು ನಿರ್ಬಂಧಿಸದ ಇತ್ತೀಚಿನ ಹೈಕೋರ್ಟ್ ಆದೇಶವನ್ನೂ ಅದು ಉಲ್ಲೇಖಿಸಿದೆ.
‘ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಮೂಲದಲ್ಲಿಯೇ ಹಸಿ ಹಾಗೂ ಒಣ ಕಸವನ್ನು ಬೇರ್ಪಡಿಸುವ ಕೆಲಸ ಆಗಬೇಕಿದೆ. ಎಷ್ಟು ಬಾರಿ ಮನವಿ ಮಾಡಿದ್ದರೂ ಕಸ ಬೇರ್ಪಡಿಸಿ ಹಾಕುತ್ತಿಲ್ಲ. ಕಸ ಸಂಗ್ರಹಣೆಯಲ್ಲಿ ಪ್ರತಿ ಪ್ರದೇಶಕ್ಕೂ ವಿಭಿನ್ನ ಸಮಸ್ಯೆಗಳಿವೆ’ ಎಂದು ಘನತ್ಯಾಜ್ಯ ನಿರ್ವಹಣಾ ತಜ್ಞರಾದ ಪಿಂಕಿ ಚಂದ್ರನ್ ತಿಳಿಸಿದ್ದಾರೆ.
ಮಾಸಿಕ ವಿದ್ಯುತ್ ಬಿಲ್ | ಬಳಕೆದಾರರು | ಪ್ರಸ್ತಾಪಿಸಿದ ಮಾಸಿಕ ಬಳಕೆದಾರ ಶುಲ್ಕ |
Up to Rs 200 | 11.02 lakh | Rs 30 |
Rs 200 – Rs.500 | 14.37 lakh | Rs 60 |
Rs 501 – Rs 1,000 | 10.57 lakh | Rs 100 |
Rs 1,001 – Rs 2,000 | 7.36 lakh | Rs 200 |
Rs 2,001 – Rs 3,000 | 1.80 lakh | Rs 350 |
Rs 3,001 & above | 1.04 lakh | Rs 500 |
46.17 lakh |
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:56 am, Tue, 14 November 23