ಮದುವೆಯಾದ 15 ದಿನದಲ್ಲೇ ಪ್ರಿಯತಮನಿಗಾಗಿ ಗಂಡನ ಬಿಟ್ಟು ಆಂಧ್ರದಿಂದ ಕೊಪ್ಪಳಕ್ಕೆ ಬಂದ ಯುವತಿ!
ಆಕೆ ಆಂಧ್ರದ ಲೇಬರ್ ಕಾಂಟ್ರ್ಯಾಕ್ಟ್‌ರ್ ಮಗಳು, ಬೆಂಗಳೂರಿನಲ್ಲಿ ತಂದೆಯ ಬಳಿ ಗಾರೆ ಕೆಲಸ ಮಾಡುತ್ತಿದ್ದ ಕೊಪ್ಪಳದ ಯುವಕ ಮೇಲೆ ಲವ್ ಆಗಿತ್ತು. ಪ್ರೀತಿ ತಿಳಿದ ಯುವತಿಯ ಪೋಷಕರು ಬೇರೆ ಮದುವೆ ಮಾಡಿ ಮುಗಿಸಿದರು. ಆದರೆ ಅವಳ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ, ಪ್ರೀತಿಸಿದ ಯುವಕನನ್ನು ಸೇರಲು ಮದುವೆಯಾದವ 15 ದಿನದಲ್ಲೇ ಗಂಡನ ಮನೆ ತೊರೆದು ಪ್ರೇಮಿಯ ಬಳಿ ಬಂದಿದ್ದಾಳೆ.

ಕೊಪ್ಪಳ, ಜುಲೈ 12: ಪ್ರೀತಿಸಿದ ಯುವಕನಿಗಾಗಿ ಆಂಧ್ರ ಪ್ರದೇಶದ (Andhra Pradesh) ಯುವತಿಯೊಬ್ಬಳು ಮದುವೆಯಾದ ಕೇವಲ 15 ದಿನಗಳಲ್ಲಿ ಪತಿಯನ್ನು ಬಿಟ್ಟು ಕೊಪ್ಪಳಕ್ಕೆ (Koppal) ಓಡಿಬಂದ ಸಿನಿಮೀಯ ಘಟನೆ ನಡೆದಿದೆ. ಸದ್ಯ ಈ ಜೋಡಿಗಾಗಿ ಯುವತಿಯ ಪೋಷಕರು ಆಂಧ್ರದಿಂದ ಕೊಪ್ಪಳಕ್ಕೆ ಬಂದು ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಎಲ್ಲಿಯೇ ಸಿಕ್ಕಿದರೂ ಅಲ್ಲಿಯೇ ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ, ಜೋಡಿ ಸದ್ಯ ಕೊಪ್ಪಳ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಪುರಸಂಗನಾಳ ಗ್ರಾಮದ ಯುವಕ ವೆಂಕಟೇಶ ಹಾಗೂ ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆ ರಂಪಚಾರು ತಾಲೂಕು ಕರ್ಲಕುಂಟ ಗ್ರಾಮದ ತಿರುಪತೆಮ್ಮ ಲವ್ ಕಹಾನಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಯುವತಿಯ ಪೋಷಕರ ಕಡೆಯವರು 4 ಕಾರುಗಳಲ್ಲಿ ಆಂಧ್ರ ಪ್ರದೇಶದಿಂದ ಬಂದು ಹುಡುಕಾಟ ನಡೆಸುತ್ತಿದ್ದು, ಎಲ್ಲಿಯೇ ಸಿಕ್ಕಿದರೂ ಯುವಕ ಹಾಗೂ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೊಪ್ಪಳ ಎಸ್ಪಿ ಕಚೇರಿಗೆ ಬಂದಿರುವ ಜೋಡಿ, ನಾವು ಬದುಕಬೇಕು, ನಮಗೆ ರಕ್ಷಣೆ ಕೊಡಿ ಎಂದು ಅಂಗಲಾಚಿದೆ.
ಬೆಂಗಳೂರಿನಲ್ಲಿ ಅರಳಿದ ಪ್ರೀತಿ-ಪ್ರೇಮ
ಬೆಂಗಳೂರಿನಲ್ಲಿ ವೆಂಕಟೇಶ ಗಾರೆ ಕೆಲಸ ಮಾಡುತ್ತಿದ್ದ ವೇಳೆ ವೆಂಕಟೇಶ ಹಾಗೂ ಈ ಯುವತಿಯ ನಡುವೆ ಪ್ರೀತಿ ಮೂಡಿದೆ. ಈ ಯುವತಿಯ ತಂದೆ ಆಂಧ್ರ ಪ್ರದೇಶ ಮೂಲದ ಲೇಬರ್ ಕಾಂಟ್ರ್ಯಾಕ್ಟರ್. ಯುವತಿಯ ತಂದೆಯ ಬಳಿ ವೆಂಕಟೇಶ ಕೆಲಸ ಮಾಡುತ್ತಿದ್ದ. ಕಳೆದ ಮೂರು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಆದರೆ, ಇಬ್ಬರ ಪ್ರೀತಿ ವಿಷಯ ತಿಳಿದ ಯುವತಿಯ ಪೋಷಕರು ಯುವತಿಯನ್ನು ಊರಿಗೆ ಕರೆದೊಯ್ದು ಬಲವಂತವಾಗಿ ಬೇರೆ ಮದುವೆ ಮಾಡಿಸಿದ್ದಾರೆ. ಆದರೆ, ಬೇರೆ ಮದುವೆಯಾಗಿ ಗಂಡನ ಮನೆಗೆ ಹೋದ ಯುವತಿ, ಅಲ್ಲಿಂದಲೇ ಯುವಕನಿಗೆ ಕರೆ ಮಾಡಿ ಆತನೊಂದಿಗೆ ಬರುವುದಾಗಿ ತಿಳಿಸಿದ್ದಾಳೆ. ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಂಡು ಸಾಯುವುದಾಗಿ ಹೇಳಿ, ಮದುವೆಯಾಗಿ 15 ದಿನದಲ್ಲೇ ಗಂಡನ ಮನೆ ಬಿಟ್ಟು ಪ್ರಿತಿಸಿದ ಯುವಕನ ಜೊತೆ ಮನೆ ಬಿಟ್ಟು ಬಂದಿದ್ದಾಳೆ.
ಇದನ್ನೂ ಓದಿ: ಪತ್ನಿ ಜೊತೆ ಲವ್ವಿಡವ್ವಿ: ಗೆಳೆಯನನ್ನ ಕೊಂದು ನಡು ರಸ್ತೆಯಲ್ಲೇ ಕೇಕೆ ಹಾಕಿ ಪೊಲೀಸರಿಗೆ ಶರಣಾದ
ಸದ್ಯ ವೆಂಕಟೇಶ ಜೊತೆ ಬಂದ ಬಳಿಕ ಯುವತಿಯ ಪೋಷಕರು ಆಂಧ್ರದಿಂದ ಕೊಪ್ಪಳಕ್ಕೆ ಬಂದು ಈ ಜೋಡಿಯ ಹುಡುಕಾಟ ನಡೆಸಿದ್ದಾರೆ.
ಸದ್ಯ ಈ ಜೋಡಿ ಕೊಪ್ಪಳ ಎಸ್ಪಿ ಕಚೇರಿಯಲ್ಲೆ ಮೊಕ್ಕಾಂ ಹೂಡಿದೆ. ನಮಗೆ ರಕ್ಷಣೆ ಸಿಗುವ ವರೆಗೂ ಎಲ್ಲೂ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದೆ. ಕೊಪ್ಪಳ ಪೊಲೀಸರು ಈ ಜೋಡಿಗೆ ಒಂದಾಗಿ ಬಾಳಲು ಅವಕಾಶ ಕೊಡಿಸುತ್ತಾರೆಯೇ, ಯಾವ ರೀತಿ ರಕ್ಷಣೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.



