ವಿಶ್ವವಿಖ್ಯಾತ ಮೈಸೂರು ದಸರಾ ದಿನಗಣನೆ ಶುರುವಾಗಿದೆ. ಹೀಗಾಗಿ ಇಂದಿನಿಂದ ಮೂರು ದಿನ ಮೈಸೂರು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಿ ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಹಾಲಯ ಅಮವಾಸೆ ಹಿನ್ನಲೆ ಮಲೆಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ ನಿಷೇಧ ಹೇರಲಾಗಿದೆ. ಸುರಕ್ಷತಾ ದೃಷ್ಠಿಯಿಂದ ದ್ವಿಚಕ್ರ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇವೆಲ್ಲದರ ಜೊತೆಗೆ ರಾಜ್ಯದಲ್ಲಿ ನಡೆಯುವ ಪ್ರಸಕ್ತ ವಿದ್ಯಮಾನಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉಪಸಮಿತಿಗಳಿಗೆ ಅಧಿಕಾರೇತರ ಸದಸ್ಯರ ನೇಮಕ ಮಾಡಲಾಗಿದೆ. 16 ಉಪ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಲಾಗಿದೆ.
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023 ಗೆ ಸಿಎಂ ಸಿದ್ದರಾಮಯ್ಯ ಅವರು ಸರ್ವರಿಗೂ ಸ್ವಾಗತ ಕೋರಿದ್ದಾರೆ. ‘ನಮಸ್ಕಾರ, ನಾನು ನಿಮ್ಮ ಸಿದ್ದರಾಮಯ್ಯ, ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಹೆಮ್ಮೆಯ ಮೈಸೂರು ದಸರಾ ಉತ್ಸವಕ್ಕೆ ತಮ್ಮೆಲ್ಲರನ್ನೂ ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇನೆ. ಮೈಸೂರು ದಸರಾ ಎಂದರೆ ಬರೀ ಉತ್ಸವವಲ್ಲ, ಇದು ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಗತ ವೈಭವವನ್ನು ಪ್ರತಿಬಿಂಬಿಸುವ ನಾಡಹಬ್ಬ, ತಾಯಿ ಚಾಮುಂಡೇಶ್ವರಿಯ ಪೂಜೆಯೊಂದಿಗೆ ಆರಂಭವಾಗುವ ದಸರಾ ಆಚರಣೆಯು ಜಂಬೂಸವಾರಿಯ ವೈಭವದ ಮೆರವಣಿಗೆ, ಪಂಜಿನ ಕವಾಯತಿನ ರೋಮಾಂಚಕ ಸಾಹಸಗಳೊಂದಿಗೆ ಸಂಪನ್ನಗೊಳ್ಳುತ್ತದೆ. ಈ ನಡುವೆ ಮೈಸೂರು ಅರಮನೆಯ ಭವ್ಯ ದೀಪಾಲಂಕಾರ, ಕರಕುಶಲ ವಸ್ತುಗಳ ಪ್ರದರ್ಶನ, ಕೀಡಾಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಧಾರ್ಮಿಕ ಆಚರಣೆಗಳ ಕಣ್ಮನ ಸೆಳೆಯುವ ಹೂರಣವಿರಲಿದೆ. ಪಾರಂಪರಿಕ ಆಚರಣೆ, ಸಮಕಾಲೀನ ಆಶಯಗಳ ಹದವರಿತ ಮಿಶ್ರಣವಾದ ಈ ಉತ್ಸವ ನಿಜ ಅರ್ಥದಲ್ಲಿ ಜನೋತ್ಸವವಾಗಿದೆ. ಕರ್ನಾಟಕದ ಹೆಮ್ಮೆಯ ದ್ಯೋತಕವಾದ ದಸರಾ ಉತ್ಸವಕ್ಕೆ ತಾವೆಲ್ಲರೂ ಆಗಮಿಸಿ, ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ವಿನಂತಿಸುತ್ತೇನೆ ಎನ್ನುವ ಮೂಲಕ ಸರ್ವರಿಗೂ ಹೃತೂರ್ವಕ ಸ್ವಾಗತ ಕೋರಿದ್ದಾರೆ
ರಾಯಚೂರು: ವಿಶ್ವಕಪ್ ಪಂದ್ಯಾವಳಿಯ ಇಂಡೋ ಪಾಕ್ ಕದನ ನಡೆದಿದ್ದು, ಭಾರತ ಜಯಗಳಿಸಿದ ಬೆನ್ನಲ್ಲೇ ರಾಯಚೂರಿನಲ್ಲಿ ಕ್ರೀಡಾಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ. ನಗರದಲ್ಲಿ ಬೃಹತ್ ಎಲ್ಇಡಿ ಮೂಲಕ ಸಾವರ್ಕರ್ ಅಸೋಸಿಯೇಷನ್ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
ನೆಲಮಂಗಲ: ಪಿತೃಪಕ್ಷ ಮುಗಿಸಿ ವಾಪಸ್ ಬರುವ ವೇಳೆ ಬೈಕ್ ಅಪಘಾತವಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ
ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯಲ್ಲಿ ನಡೆದಿದೆ. ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಅನೇಕಲ್ ಮಂಜುನಾಥ್(40)ಸಾವನ್ನಪ್ಪಿದ್ದಾರೆ. ತಿರುಮಲಪುರದ ಸಂಬಂಧಿ ಮನೆಯಲ್ಲಿ ಪಿತೃಪಕ್ಷ ಮುಗಿಸಿ ತೆರಳುವಾಗ ಅಪಘಾತ ಈ ದುರ್ಘಟನೆ ನಡೆದಿದೆ. ಈ ಕುರಿತು ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಉಡುಪಿ: ಸಚಿವ ಚಲುವರಾಯಸ್ವಾಮಿ ಪತ್ನಿಗೆ ಮಂಡ್ಯ ಎಂಪಿ ಟಿಕೆಟ್ ಬಗ್ಗೆ ಚರ್ಚೆ ವಿಚಾರ ‘ನಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಬಗ್ಗೆ ಆಲೋಚನೆ ಮಾಡಿಲ್ಲ ಎಂದು ಉಡುಪಿಯಲ್ಲಿ ಕೃಷಿ ಇಲಾಖೆ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು
‘ಅಭ್ಯರ್ಥಿ ಯಾರಾಗಬೇಕೆಂದು ಕಾರ್ಯಕರ್ತರು, ಪಕ್ಷ ತೀರ್ಮಾನ ಮಾಡುತ್ತೆ. ಸ್ನೇಹಿತರು, ಪಕ್ಷದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವರ ಕುಟುಂಬದಲ್ಲೇ ಒಬ್ಬರಿಗೆ ಅವಕಾಶ ಕೊಡಬೇಕೆಂದು ಹೇಳಿದ್ದಾರೆ ಎಂದರು.
ಹುಬ್ಬಳ್ಳಿ: ತಾಲೂಕಿನ ಶೆರೆವಾಡ ಗ್ರಾಮದಲ್ಲಿರುವ ಅಕ್ರಮ ಪಟಾಕಿ ಗೋದಾಮಿನ ಮೇಲೆ ಕಂದಾಯ, ಪೊಲೀಸ್ ಹಾಗೂ ವಾಯುಮಾಲಿನ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗೋದಾಮಿನಲ್ಲಿದ್ದ ಹಸಿರು ಪಟಾಕಿಯನ್ನು ಅಧಿಕಾರಿಗಳು ಬೇರ್ಪಡಿಸುತ್ತಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ(ಅ.15) ಬೆಳಗ್ಗೆ 10.15 ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖರಿಂದ ದಸರೆಗೆ ಚಾಲನೆ ಸಿಗಲಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ,
ಸಚಿವ ಡಾ ಎಚ್ ಸಿ ಮಹದೇವಪ್ಪ ಸೇರಿ ಸಂಸದರು ಶಾಸಕರು ಭಾಗಿಯಾಗಲಿದ್ದಾರೆ. ನಾಳೆ ಬೆಳಗ್ಗೆ 5 ಗಂಟೆಯಿಂದಲೇ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನಡೆಯಲಿವೆ. ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣಧಾರಣೆ ಮಾಡಲಿದ್ದಾರೆ.
ಮಂಗಳೂರು: ಇಸ್ರೇಲ್ ನಲ್ಲಿ ನರಮೇಧ ನಡೆಸಿದ ಹಮಾಸ್ ಉಗ್ರರಿಗೆ ಬೆಂಬಲ ನೀಡಿದ ವಿಚಾರ ‘ಆರೋಪಿ ಜಾಕಿರ್ ವಿರುದ್ಧ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಹೌದು, ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಈ ಹಿನ್ನಲೆ ಕಾರ್ಮಿಕರು ಭಯಭೀತರಾಗಿದ್ದಾರೆ. ಇನ್ನು ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹುಲಿಯ ಚಲನವಲನ ಪತ್ತೆಗೆ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ.
ಬೆಂಗಳೂರು: ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಇದೀಗ ಆಗಸ್ಟ್ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ದಿನವನ್ನಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.
ದಾವಣಗೆರೆ: ಲಂಚ ಸ್ವೀಕರಿಸುವಾಗ ಅಬಕಾರಿ ಡಿಸಿ, ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಬಕಾರಿ ಡಿಸಿ ಸ್ವಪ್ನ, ತಮ್ಮ ಕಚೇರಿ ಸಿಬ್ಬಂದಿ ಮೂಲಕ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮದ್ಯದ ಅಂಗಡಿ ಆರಂಭಿಸಲು ಪರವಾನಿಗೆ ನೀಡಿಲು ಹರಿಹರ ಮೂಲದ ಡಿ.ಜಿ.ರಂಗನಾಥ ಎಂಬುವರಿಂದ
ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿ ಇರುವ ಅಬಕಾರಿ ಇಲಾಖೆ ಕಚೇರಿಯಲ್ಲಿ, ಸಿಬ್ಬಂದಿ ಎಚ್ ಎಂ ಅಶೋಕ ಎಂಬುವರ ಮೂಲಕ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ: ಚಿಂತಾಮಣಿ ನಗರಸಭೆ ಜೆಡಿಎಸ್ ಸದಸ್ಯನ ಮೇಲೆ ಹಲ್ಲೆ ವಿಚಾರ ‘ಘಟನೆ ಖಂಡಿಸಿ ಮಾಜಿ ಸಿಎಂ H.D.ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕರಿದ್ದಾರೆ. ‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದಿದೆ.
ಮಚ್ಚು, ಲಾಂಗ್ಗಳಿಂದ ದುಷ್ಕರ್ಮಿಗಳು ಪೈಶಾಚಿಕ ದಾಳಿ ಮಾಡಿದ್ದಾರೆ. ಈ ಕೃತ್ಯ ಎಸಗಿದ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು HDK ಆಗ್ರಹಿಸಿದ್ದಾರೆ.
ಚಿಂತಾಮಣಿ ವಿಧಾನಸಭೆ ಕ್ಷೇತ್ರದ @JanataDal_S ಮುಖಂಡರು, ನಗರಸಭೆ ಸದಸ್ಯರಾದ ಶ್ರೀ ಅಗ್ರಹಾರ ಮುರಳಿ ಅವರ ಮೇಲೆ ದುಷ್ಕರ್ಮಿಗಳು ಮಚ್ಚು ಲಾಂಗ್ ಗಳಿಂದ ಪೈಶಾಚಿಕ ದಾಳಿ ನಡೆಸಿರುವ ಘಟನೆ ಖಂಡನೀಯ. ಈ ಕೃತ್ಯ ಎಸಗಿದ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.1/4@INCKarnataka ಸರಕಾರ…
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) October 14, 2023
ಶಿವಮೊಗ್ಗ: ಒಕ್ಕಲಿಗರ ಬಗ್ಗೆ ಪ್ರೊ.ಭಗವಾನ್ ಅವಹೇಳನಕಾರಿ ಹೇಳಿಕೆ ವಿಚಾರ ‘ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ವೇಳೆ ಭಗವಾನ್ ಎಂಬ ತಲೆಹರಟೆ, ಸ್ಬಯಂ ಘೋಷಿತ ಬುದ್ದಿಜೀವಿ ಆಡಿದಂತಹ ಮಾತು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಒಕ್ಕಲಿಗರು ಸಂಸ್ಕೃತಿ ಹೀನರು ಎಂದು ಹೇಳುವ ಮೂಲಕ ಜನಾಂಗೀಯ ನಿಂದನೆ ಮಾಡಿದ್ದಾರೆ. ಅನೇಕ ಸಾರಿ ಅರೆಸ್ಟ್ ಕೂಡ ಮಾಡಲಾಗಿದೆ. ಆದರೂ, ಇವನ ನಾಲಿಗೆ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸರಕಾರದ ಸಹಕಾರದಿಂದ ಮಹಿಷಾ ದಸರಾ ಮೈಸೂರಿನಲ್ಲಿ ನಡೆದಿದೆ. ಇಂತಹ ತಲೆತಿರುಕರಿಗೆ ಸರಕಾರ ಮಾತನಾಡಲು ಅವಕಾಶ ಕೊಟ್ಟಿದೆ. ಇದರ ಹಿಂದೆ ಕಾಂಗ್ರೆಸ್ ಸರಕಾರ, ಪಕ್ಷ ಇದೆ. ಜನಾಂಗವನ್ನು ನಿಂದನೆ ಮಾಡಿ, ಜನಾಂಗ ಜನಾಂಗವನ್ನ ಹೊಡೆದಾಡುವ ಕೆಲಸವನ್ನು ಸಿದ್ದರಾಮಯ್ಯ ಸರಕಾರ ಮಾಡ್ತಿದೆ ಎಂದು ವಾಗ್ದಾಳಿ ನೆಸಿದರು.
ಬೆಂಗಳೂರು: ನಗರದ ಲಗ್ಗೆರೆಯಲ್ಲಿ ಟ್ರಾನ್ಸ್ಫಾರ್ಮರ್ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಗುಜರಿ ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಅಂಗಡಿ ಅಕ್ಕಪಕ್ಕದ 3 ರಿಂದ 4 ಮನೆಗಳಿಗೂ ಬೆಂಕಿ ಹಬ್ಬಿದೆ. ಅದೃಷ್ಟವಶಾತ್ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ದಾವಣಗೆರೆ: ಬಿಜೆಪಿ ಅವನತಿಯತ್ತ ಸಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು. ‘ವ್ಯಕ್ತಿಗಿಂತ ಪಕ್ಷ ಮುಖ್ಯ ಅಂತ ಕೆಲ ಮುಖಂಡರು ಹೇಳುತ್ತಾರೆ, ಹೀಗೆ ಹೇಳುವ ವ್ಯಕ್ತಿಯೇ ಈಗ ತಮ್ಮದೇ ಗುಂಪು ಕಟ್ಟಿಕೊಂಡಿದ್ದಾರೆ. ಗ್ರಾ.ಪಂ. ಚುನಾವಣೆ ಗೆಲ್ಲದವರು ಗುಂಪು ಕಟ್ಟಿಕೊಂಡಿದ್ದಾರೆ. BSYರನ್ನು ರಾಜಕೀಯವಾಗಿ ಮುಗಿಸಿದ್ರು, ಪಕ್ಷವನ್ನೂ ಮುಗಿಸಿದರು. ಬಿಜೆಪಿಯಲ್ಲಿ ನಾಯಕತ್ವ ಇಲ್ಲದ್ದಕ್ಕೆ ನಮ್ಮವರು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ ಎಂದು
ಬಿ.ಎಲ್.ಸಂತೋಷ್ ವಿರುದ್ಧ ರೇಣುಕಾಚಾರ್ಯ ಪರೋಕ್ಷ ವಾಗ್ದಾಳಿ ನಡೆಸಿದರು.
ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ವಿಚಾರ ‘ ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ಲಾಬಿಗಳು ಬಹಿರಂಗವಾಗಿವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ‘ಗುತ್ತಿಗೆದಾರರು ಬಿಲ್ಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಆಗ ಬಿಲ್ ಹಣ ಕೊಡದೇ ಕಮಿಷನ್ ಕುದುರಿಸುವ ಕೆಲಸ ಆಗುತ್ತಿತ್ತು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಅಪಾರ ಹಣ ಸಿಕ್ಕಿದೆ. ಈವರೆಗೂ ಗುತ್ತಿಗೆದಾರರ ಮನೆಯಲ್ಲಿ ಇಷ್ಟು ದೊಡ್ಡ ಹಣ ಸಿಕ್ಕಿರಲಿಲ್ಲ ಎಂದರು.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹೈಡ್ರಾಮಾ ನಡೆದಿದೆ. ಶಾಸಕಿ ರೂಪಕಲಾ ಶಶಿಧರ್ ನೇತೃತ್ವದಲ್ಲಿ ನಡೆಯುತ್ತಿದ್ದ ಒತ್ತುವರಿ ತೆರವು ವೇಳೆ ಶಾಸಕಿ ಹಾಘೂ ಜೆಸಿಬಿ ಮೇಲೆ ಕಲ್ಲು ಎಸೆಯಲು ವ್ಯಕ್ತಿ ಮುಂದಾಗಿದ್ದ. ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಕಲ್ಲು ತೂರಲು ಮುಂದಾಗಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉಡುಪಿಯಲ್ಲಿ ಮಹಿಷ ದಸರಾ ನಡೆಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದಲಿತ ಸಂಘಟನೆಗಳು ನಾಳೆ ಮಹಿಷ ದಸರಾ ಆಚರಣೆಗೆ ಕರೆನೀಡಿದ್ದವು. ಹಿಂದೂ ಸಂಘಟನೆಗಳು ಮಹಿಷ ದಸರಾಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಮಹಿಷ ದಸರಾ ಆಚರಣೆ ಪರ ಹಾಗೂ ವಿರೋಧ ಬ್ಯಾನರ್ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸುವುದಕ್ಕೂ ನಿಷೇಧ ಹೇರಲಾಗಿದೆ. ನಾಳೆ ಸಂಜೆ 6 ಗಂಟೆವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೈಸೂರಿನ ಅಗ್ರಹಾರದ 101 ಗಣಪತಿ ದೇಗುಲದಲ್ಲಿ ಭಾರತದ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮೈಸೂರು ಕ್ರಿಕೆಟ್ ಅಭಿಮಾನಿಗಳಿಂದ ಸಂಕಲ್ಪ ಪೂಜೆ ನೆರವೇರಿಸಿ ಭಾರತ್ ಪರ ಘೋಷಣೆ ಕೂಗಿ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ಸಂಕಲ್ಪ ಮಂಗಳಾರತಿ ಪೂಜೆ ಮಾಡಿದ್ದಾರೆ.
ಪ್ರಿಯಕರನಿಂದ ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪ ಕೇಳೀ ಬಂದಿದ್ದು ವಿಷ ಸೇವಿಸಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಶಾ (20) ಸಾವನ್ನಪ್ಪಿದ ಯುವತಿ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ವೈಡಿಡಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ಆಶಾ ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಮಂಜುನಾಥ ಇಬ್ಬರೂ ಪ್ರೀತಿಸುತ್ತಿದ್ದರು. ಆಶಾಳನ್ನ ಪ್ರೀತಿಸೋದಾಗಿ ಸುತ್ತಾಡಿ ಮಂಜುನಾಥ್ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಲೆ ಮಹದೇಶ್ವರ ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಶಕ್ತಿ ಯೋಜನೆ ಜಾರಿ ಹಿನ್ನೆಲೆ ಬಸ್ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿ ಗಂಗಾಧರ್(21) ಮೃತ ದುರ್ದೈವಿ. ಇಂಟರ್ನ್‌ಶಿಪ್ ಸರ್ಟಿಫಿಕೇಟ್ ತರಲು ತೆರಳುತ್ತಿದ್ದ ವೇಳೆ ಯಶವಂತಪುರ ಹೂವಿನ ಮಾರ್ಕೆಟ್ ಸಮೀಪ ಅಪಘಾತ ಸಂಭವಿಸಿದೆ.
ವಿಶ್ವಕಪ್ನಲ್ಲಿ ಇಂದು ಭಾರತ-ಪಾಕಿಸ್ತಾನ ನಡುವೆ ಹಣಾಹಣಿ. ಗುಜರಾತ್ನ ಅಹಮದಾಬಾದ್ನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು ಭಾರತ-ಪಾಕ್ ಪಂದ್ಯಕ್ಕೆ 200ಕ್ಕೂ ಹೆಚ್ಚು ನಕಲಿ ಟಿಕೆಟ್ ಮಾರಾಟ ಮಾಡಲಾಗಿದೆ. ನಕಲಿ ಟಿಕೆಟ್ ಮಾರುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಮನಗರ ಬಳಿ ಲಾರಿಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ರಾಜೇಶ್(42), ಉಮಾ(35) ಸ್ಥಳದಲ್ಲೇ ಸಾವು. ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು ಮಕ್ಕಳು ಸೇರಿ ನಾಲ್ವರಿಗೆ ಗಾಯಗಳಾಗಿವೆ. ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಲಾರಿ ಈ ವೇಳೆ ಓವರ್ ಟೇಕ್ ಮಾಡಲು ಹೋಗಿ ಲಾರಿಗೆ ಕಾರು ಡಿಕ್ಕಿಯಾಗಿದೆ.
ಬಳ್ಳಾರಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿ ಸ್ನೇಹಿತನಿಂದಲೇ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದಾಗಲೇ ನಾಲ್ವರು ದುರುಳರು, ನಿಮ್ಮ ಅಣ್ಣ ಬಂದಿರೋದಾಗಿ ಹೇಳಿ ಹೊರಗೆ ಕರೆಸಿಕೊಂಡಿದ್ದಾರೆ. ಬಳಿಕ ಕಿಡ್ನ್ಯಾಪ್ ಮಾಡಿ ಯುವತಿಗೆ ಬೀಯರ್ ಕುಡಿಸಿ ಸ್ನೇಹಿತನಿಂದಲೇ ಅತ್ಯಾಚಾರ ನಡೆದಿದೆ. ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಪಟಾಕಿ ದಾಸ್ತಾನುಗಳ ಮೇಲೆ ದಾಳಿ ನಡೆದಿದೆ. ಪರವಾನಗಿ ಇಲ್ಲದೆ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿದ್ದ ಆರೋಪದ ಮೇಲೆ ರಾಯಚೂರು ನಗರದ ಬೆಸ್ತವಾರಪೇಟೆಯ ರಮೇಶ್ ಮನೆ ಮೇಲೆ ಸದರ್ ಬಜಾರ್ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 50 ಸಾವಿರ ಮೌಲ್ಯದ ಪಟಾಕಿ ಜಪ್ತಿ ಮಾಡಲಾಗಿದೆ. ಹಾಗೂ ಸಿಂಧನೂರು ತಾಲೂಕಿನ ಗುಂಜಳ್ಳಿ ಗ್ರಾಮದಲ್ಲೂ ಪೊಲೀಸರು ದಾಳಿ ನಡೆಸಿ ನಾಗರಾಜ್ ಎಂಬುವರ ಮನೆಯಲ್ಲಿ ಸಂಗ್ರಹಿಸಿದ್ದ 24 ಲಕ್ಷ ಮೌಲ್ಯದ ವಿವಿಧ ಮಾದರಿಯ ಪಟಾಕಿ ಜಪ್ತಿ ಮಾಡಿ ತುರ್ವಿಹಾಳ ಪೊಲೀಸರು ನಾಗರಾಜ್ ವಶಕ್ಕೆ ಪಡೆದಿದ್ದಾರೆ.
ಒಕ್ಕಲಿಗರ ಬಗ್ಗೆ ಪ್ರೊ.ಭಗವಾನ್ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಇಂದು ಮೈಸೂರಿನಲ್ಲಿ ಪ್ರೊ.ಭಗವಾನ್ ಮನೆಗೆ ಮುತ್ತಿಗೆಗೆ ಕರೆ ನೀಡಿದ್ದಾರೆ. ಮೈಸೂರು ಚಾಮರಾಜ ಒಕ್ಕಲಿಗರ ಸಂಘದಿಂದ ಮೈಸೂರಿನ ಕುವೆಂಪು ನಗರದಲ್ಲಿರುವ ಪ್ರೊ.ಭಗವಾನ್ ಮನೆ ಮುತ್ತಿಗೆಗೆ ಕರೆ ನೀಡಲಾಗಿದೆ. ‘ಒಕ್ಕಲಿಗರು ಸಂಸ್ಕೃತಿ ಹೀನರು ಅಂತಾ ಕುವೆಂಪು ಹೇಳಿದ್ದರು’ ‘ಅದನ್ನು ನಾನು ಹೇಳಿದರೆ ಹೊಡೆಯುತ್ತಾರೆ’ ಎಂದು ನಿನ್ನೆ ಮಹಿಷ ಉತ್ಸವದಲ್ಲಿ ಪ್ರೊ.ಭಗವಾನ್ ಹೇಳಿಕೆ ನೀಡಿದ್ದರು.
ಸಿಎಂ ಸಿದ್ದರಾಮಯ್ಯ ಇಂದಿನಿಂದ 3 ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಂಜೆ 5.30ಕ್ಕೆ ಬೆಂಗಳೂರಿಂದ ರಸ್ತೆ ಮೂಲಕ ಮೈಸೂರಿಗೆ ತೆರಳಿಲಿದ್ದಾರೆ. ಬಳಿಕ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇಂದು ರಾತ್ರಿ ಮೈಸೂರಿನಲ್ಲಿಯೇ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ.
ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ಮುಂದುವರಿದಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯ ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ಐಟಿ ಅಧಿಕಾರಿಗಳು ರಾತ್ರಿ ಅಂಬಿಕಾಪತಿ ಮನೆಯಲ್ಲೇ ಉಳಿದುಕೊಂಡಿದ್ದು ಇಂದು ಬೆಳಗ್ಗೆಯಿಂದ ಮತ್ತೆ ಪರಿಶೀಲನೆ ಆರಂಭಿಸಿದ್ದಾರೆ. ಐಟಿ ದಾಳಿ ವೇಳೆ ಪತ್ತೆಯಾದ ಹಣದ ಬಗ್ಗೆ ಪರಿಶೀಲನೆ ಮುಂದುವರೆದಿದೆ. ನಿನ್ನೆ ಬ್ಯಾಂಕ್ ಲಾಕರ್ನ ಸೂಟ್ಕೇಸ್ಗಳಲ್ಲಿ ನಗದು, ಚಿನ್ನಾಭರಣ ಪತ್ತೆಯಾಗಿತ್ತು. ಸತತ 36 ಗಂಟೆಗಳಿಂದ ಅಂಬಿಕಾಪತಿ ಮನೆಯಲ್ಲೇ ಅಧಿಕಾರಿಗಳಿದ್ದಾರೆ.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಜೊತೆ ಇಂದು ಸಿಎಂ ಸಿದ್ದರಾಮಯ್ಯ ಸಭೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಿಗದಿಯಾಗಿದ್ದು, ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ವಿಚಾರವಾಗಿ ಸಿಎಂ ಜೊತೆ ಗುತ್ತಿಗೆದಾರರು ಚರ್ಚೆ ನಡೆಸಲಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.
Published On - 7:57 am, Sat, 14 October 23