ಮೈಸೂರಿನಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರು ದಸರಾಗೆ ನಿನ್ನೆ ಅದ್ಧೂರಿ ಚಾಲನೆ ಸಿಕ್ಕಿದ್ದಿ ದಸರಾ ಅಂಗವಾಗಿ ಇಂದು ಕೂಡ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಮಂಚಿನ ನಗರಿ ಮಡಿಕೇರಿಯಲ್ಲಿ ದಸರಾಕ್ಕೆ ಉಸ್ತುವಾರಿ ಸಚಿವ ಬೋಸರಾಜು ಚಾಲನೆ ನೀಡಿದ್ದಾರೆ. ಮಡಿಕೇರಿ ನಗರದ ಪಂಪಿನ ಕೆರೆಯಲ್ಲಿ ಕರಗ ಉತ್ಸವಕ್ಕೆ ಚಾಲನೆ ನೀಡಿದ್ದು ಗ್ರಾಮ ದೇವತೆಗಳು ನಗರದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಿವೆ. ಇನ್ನು ಮತ್ತೊಂದೆಡೆ ಇಂದಿನಿಂದ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆರಂಭವಾಗಲಿದ್ದು ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಗಜಪಡೆ ಆಗಮಿಸಿದೆ. ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ 3 ಆನೆಗಳಿಗೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಪೂಜೆ ಸಲ್ಲಿಸಿದ್ದಾರೆ. ಇದೆಲ್ಲದರ ಜೊತೆಗೆ ರಾಜಕೀಯ, ಅಪರಾಧ ಸೇರಿದಂತೆ ರಾಜ್ಯದ ಸುದ್ದಿಗಳ ಲೈವ್ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಕೆಟ್ಟು ನಿಂತಿದ್ದ ಲಾರಿಯಿಂದ 6 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ ಘಟನೆ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ನಡೆದಿದೆ. ತೊಕ್ಕೊಟ್ಟಿಗೆ ತೆರಳುತ್ತಿದ್ದ ವೇಳೆ ಸೇತುವೆಯಲ್ಲಿ ಲಾರಿ ಕೆಟ್ಟು ನಿಂತಿತ್ತು. ಮಳೆಯ ಪರಿಣಾಮ ನಿಯಂತ್ರಣ ಕಳೆದುಕೊಂಡು ಲಾರಿಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದಿದೆ. ಬಳಿಕ ಒಂದರ ಹಿಂದೆ ಇನ್ನೊಂದರಂತೆ ಕಾರುಗಳು, ಪಿಕಪ್ ಹಾಗೂ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಿಂದಾಗಿ ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಘಟನೆಯಲ್ಲಿ ವಾಹನ ಸವಾರರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಪುನೀತ್ ರಾಜ್ಕುಮಾರ್ ಕರ್ನಾಟಕ ಕಂಡಂತಹ ಅಪರೂಪದ ವ್ಯಕ್ತಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಪ್ರತಿಮೆ ಅನಾವರಣಗೊಳಿಸಿದ ನಂತರ ಮಾತನಾಡಿದ ಅವರು, ಬಹಳ ಎತ್ತರದ ನಟ ಆಗಿದ್ರೂ ಸ್ವಲ್ಪವೂ ಅಹಂ ಇರಲಿಲ್ಲ. ಸಮಾಜದಲ್ಲಿನ ಸಮಾನ್ಯ ಜನ್ರು ಬಡವರಿಗೆ ಸ್ಪಂದಿಸ್ತಿದ್ದಂತ ವ್ಯಕ್ತಿ. ಇಡೀ ಕರ್ನಾಟಕದಲ್ಲಿ ಇವರಷ್ಟು ಅಭಿಮಾನಿಗಳನ್ನ ಯಾರೂ ಪಡ್ಕೊಂಡಿರ್ಲಿಲ್ಲ ಅಂದರೆ ಅತೀ ಶಯೋಕ್ತಿಯಾಗಲ್ಲ. ಇವರು ಮರಣ ಹೊಂದಿದಾಗ ಪ್ರತಿಯೊಬ್ಬರ ಮನೆಯವರೂ ತಮ್ಮ ಮನೆಯ ಸದಸ್ಯ ಅಂತ ಭಾವಿಸಿದರು. ಕರ್ನಾಟಕದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಪುನೀತ್ ಅವರ ಭಾವ ಚಿತ್ರ ಇವೆ. ಅಷ್ಟರ ಮಟ್ಟಿಗೆ ಜನಪ್ರಿಯರಾಗಿದ್ದರು. ಇನ್ನೊಬ್ಬ ಪುನೀತ್ ರಾಜ್ ಕುಮಾರ್ ಅಂತ ವ್ಯಕ್ತಿ ನೋಡೋಕೆ ಕಷ್ಟ. ರಾಜ್ ಕುಟುಂಬ ತುಂಬಾ ವಿನಯವಂತರು ಎಂದರು,
ಚೈತ್ರಾ ವಂಚನೆ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಹಾಲಶ್ರೀ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸಿಸಿಹೆಚ್ 57ನೇ ನ್ಯಾಯಾಲಯ ವಜಾಗೊಳಿಸಿದೆ. ಜಾಮೀನು ನೀಡದಂತೆ ಸಿಸಿಬಿ ಆಕ್ಷೇಪಣೆ ಸಲ್ಲಿಸಿತ್ತು. ವಂಚನೆ ಪ್ರಕರಣದಲ್ಲಿ ಹಾಲಶ್ರೀ ಮೂರನೇ ಆರೋಪಿ.
ಬೆಂಗಳೂರಿನ ರ್ಯಾಡಿಸನ್ ಹೋಟೆಲ್ನಲ್ಲಿ PRK ಪ್ರೊಡಕ್ಷನ್ಸ್, ಎನ್3ಕೆ ಡಿಸೈನ್ ಸ್ಟುಡಿಯೋದಿಂದ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಪುನೀತ್ ರಾಜ್ಕುಮಾರ್ ಪ್ರತಿಮೆಯನ್ನು ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅಪರೂಪದ ಶಿಲ್ಪಗಳ ಸಂಗ್ರಹ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಮಂಗಳಾ ರಾಘವೇಂದ್ರ, ಯುವರಾಜ್ಕುಮಾರ್ ಉಪಸ್ಥಿತರಿದ್ದಾರೆ.
ಪುನೀತ್ ರಾಜ್ಕುಮಾರ್ ಡಿಜಿಟಲ್ ಕಿರು ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಇದಕ್ಕೆ ಅವತಾರ್ ಚಿತ್ರಕ್ಕೆ ಬಳಸಿರುವ ಸಾಫ್ಟ್ವೇರ್ ಬಳಸಲಾಗಿದೆ.
ಮೈಸೂರು ದಸರಾ ಎರಡನೇ ದಿನವೂ ವಿವಿಧ ಕಲಾ ತಂಡಗಳ ಕಲಾ ಪ್ರದರ್ಶನ ನಡೆಯುತ್ತಿದೆ. ಪೂಜಾ ಕುಣಿತ ಸೇರಿದಂತೆ ವಿವಿಧ ಪ್ರಾಕಾರದ ಪ್ರದರ್ಶನಗಳು ಅರಮನೆ ಮುಂಭಾಗದ ವೇದಿಕೆಯಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಮಂಡ್ಯ: ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಂಡಿದೆ. ಶ್ರೀರಂಗಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀರಂಗ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು, ಸಚಿವ ಎನ್. ಚಲುವರಾಯಸ್ವಾಮಿ, ಕಾರ್ಯಕ್ರಮದಲ್ಲಿ ಸಂಸದೆ ಸುಮಲತಾ ಅಂಬರೀಶ್, ಶಾಸಕ ರಮೇಶ್ ಬಂಡಿಸಿದ್ದೇಗೌಡ ಸೇರಿ ಅನೇಕರು ಭಾಗಿಯಾಗಲಿದ್ದಾರೆ.
ಮುಂದಿನ ದಿನಗಳಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಯಲಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ. ಸಭೆ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆ ಕಡಿಮೆ ಆಗಿದೆ, ಬರ ಕೂಡ ಘೋಷಣೆಯಾಗಿದೆ. ಆಗಸ್ಟ್, ಸೆಪ್ಟೆಂಬರ್ನಲ್ಲಿ 8 ಸಾವಿರ ಮೆಗಾ ವ್ಯಾಟ್ ಬೇಡಿಕೆ ಇತ್ತು. ಮಳೆ ಕೊರತೆ ಹಿನ್ನೆಲೆಯಲ್ಲಿ ವಿದ್ಯುತ್ ಅಭಾಯ ಸೃಷ್ಟಿಯಾಗಿದೆ. ಈ ವರ್ಷ 16 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ. ಒಂದೇ ಸಾರಿ ಇಷ್ಟು ಡಿಮ್ಯಾಂಡ್ ಆದಾಗ ಪೂರೈಕೆ ಕಷ್ಟವಾಗುತ್ತದೆ. ಈ ಸ್ಥಿತಿಗೆ ಹಿಂದಿನ ಸರ್ಕಾರವೇ ಕಾರಣ. ಆದರೆ ನಾವು ಇಲ್ಲಿ ತನಕ ಯಾರನ್ನೂ ಬ್ಲೇಮ್ ಮಾಡಿಲ್ಲ. ಸಮಸ್ಯೆ ಗೊತ್ತಿದ್ದರೂ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಪಾವಗಡದಲ್ಲಿ 2,300 ಮೆಗಾ ವ್ಯಾಟ್ ಉತ್ಪಾದನೆಗೆ ಪ್ಲ್ಯಾನ್ ಇದೆ. ನಾವ್ಯಾರು ಕಾಣೆಯಾಗಿಲ್ಲ, ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇವೆ. ಹಿಂದಿನ ಮುಖ್ಯಮಂತ್ರಿ, ಸಚಿವರು ಸಲಹೆ ಕೊಟ್ಟರೆ ಪಡೆಯುತ್ತೇವೆ. ಆದರೆ ಸುಮ್ಮನೆ ಆರೋಪ ಮಾಡುವುದು ಬೇಡ ಎಂದರು.
ಜನರ ಆಶೀರ್ವಾದದಿಂದ 2ನೇ ಬಾರಿ ಸಿಎಂ ಆಗುವ ಅವಕಾಶ ಸಿಕ್ಕಿದೆ ಎಂದು ಮೈಸೂರಿನ ಕಾಗಿನೆಲೆ ಮಹಾಸಂಸ್ಥಾನ ಮಠದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 2005ರಲ್ಲಿ ದೇವೇಗೌಡರು ಜೆಡಿಎಸ್ನಿಂದ ಉಚ್ಚಾಟನೆ ಮಾಡಿದರು. ಬಳಿಕ ನಾನು ಅನಿವಾರ್ಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರಬೇಕಾಯ್ತು. ಕುರುಬ ಜಾತಿಯಲ್ಲಿ ಹುಟ್ಟಿರೋದು ಆಕಸ್ಮಿಕ. ನಮ್ಮ ಜಾತಿಯವನು ಸಿಎಂ ಆಗಿದ್ದಾನೆ ಅಂತಾ ನಿಮಗೆ ಹೆಮ್ಮೆ ಇದೆ. ನಾನು ಜಾತ್ಯತೀತವಾಗಿ ಕೆಲಸ ಮಾಡುತ್ತೇನೆ. ಎಲ್ಲಾ ಸಮುದಾಯಕ್ಕೂ ನಾನು ಗೌರವ ಕೊಡುತ್ತೇನೆ. ನೊಂದ ಸಮುದಾಯಕ್ಕೆ ನ್ಯಾಯ ಕೊಡಲು ಪ್ರಯತ್ನ ಮಾಡುತ್ತೇನೆ. ಎಲ್ಲಾ ಜಾತಿಗಳಿಗೂ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು ನಿಮ್ಮ ಆಶೀರ್ವಾದದಿಂದ. ರಾಜಕೀಯ ಟೀಕೆಗಳಿಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.
ಬೆಂಗಳೂರಿನಲ್ಲಿ ಬಿಲ್ಡರ್ ಸಂತೋಷ್ ಮನೆ ಮೇಲೆ ಐಟಿ ದಾಳಿ ಪ್ರಕರಣ ಸಂಬಂಧ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ದಾಳಿ ವೇಳೆ ಸಿಕ್ಕಿರುವ ಹಣ ಬಿಜೆಪಿಗೆ ಸೇರಿದ್ದು ಎಂಬುವುದು ಹಾಸ್ಯಾಸ್ಪದ ಎಂದರು. ಚಿತ್ರದುರ್ಗ ನಗರದಲ್ಲಿ ಮಾತನಾಡಿದ ಅವರು, ಮುಂದಿನ ಚುನಾವಣೆಗಾಗಿ ಗುತ್ತಿಗೆದಾರರ ಬಳಿ ಹಣ ಸಂಗ್ರಹ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ಗೆ ಹಣ ನೀಡಲು ಪೈಪೋಟಿ ಆರಂಭಿಸಿದ್ದಾರೆ. ಭದ್ರಾ ಯೋಜನೆಗೆ 1,950 ಕೋಟಿ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ನೇರ ರೈಲು ಮಾರ್ಗದ ಭೂಸ್ವಾಧೀನಕ್ಕೆ ಹಣ ಬಿಡುಗಡೆ ಮಾಡಿಲ್ಲ. ಕಮಿಷನ್ ಬೇಕೆಂದು ಕರೆ ಮಾಡುತ್ತಿದ್ದಾರೆ ಎಂದು ಅಧಿಕಾರಗಳೇ ಹೇಳುತ್ತಿದ್ದಾರೆ. ಚುನಾವಣೆಗೆ ಕಾಂಗ್ರೆಸ್ ಫಂಡಿಂಗ್ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಸರ್ಕಾರ ದಿವಾಳಿ ಆಗಿದೆ ಎಂದು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡ ವರಿಷ್ಠರ ನಡೆಗೆ ಅಸಮಾಧಾನಗೊಂಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಭೆ ನಡೆಸಿ ಮಾತನಾಡಿದ್ದು, 1995 ರಲ್ಲಿ ಜೆಡಿಎಸ್ ಅಧ್ಯಕ್ಷನಾಗಿ 16 ಲೋಕಸಭೆ ಸದಸ್ಯರನ್ನ ಗೆಲ್ಲಿಸಿ ದೇವೇಗೌಡರನ್ನ ಪ್ರಧಾನಿ ಮಾಡಿದ್ದ ಕೀರ್ತಿ ಇದೆ. ಇವತ್ತು ದೇಶಕ್ಕೆ ದೊಡ್ಡ ಸಂದೇಶ ಹೋಗಬೇಕು. ಅಂಬೇಡ್ಕರ್ ದೇಶದಕ್ಕೆ ಸಂವಿಧಾನ ಬರೆದ ವ್ಯಕ್ತಿ. ಇದೇ ಸಂದೇಶವನ್ನು 800 ವರ್ಷಗಳ ಹಿಂದೆ ಬಸವಣ್ಣ ಕೊಟ್ಟರು. ಇವತ್ತು ಏಕಾಏಕಿ ಅಮಿಶ್ ಶಾ ಭೇಟಿ ಮಾಡಿ ಪೋಟೋ ತೆಗೆಸಿಕೊಂಡು ಮೈತ್ರಿ ಅಂದರು. ಜೆಡಿಎಸ್ ಜಾತ್ಯಾತೀತ ತತ್ವದ ಸಿದ್ದಾಂತ. ಎರಡು ದಿನದ ಹಿಂದೆ ಹೇಳಿದ್ದೆ ದೇವೇಗೌಡರ ಮನೆಗೆ ಅಮಿಶ್ ಶಾ ಬರ್ಲಿ, ಮೊದಲು ಬಿಜೆಪಿ ಸಿದ್ದಾಂತ ನಾವು ಒಪ್ಪಿಕೊಳ್ಳಬೇಕು. ಅವೆಲ್ಲವೂ ನಾವು ಮಾಡುತ್ತೇನೆ ಅಂದಿದ್ದರು. ಪಕ್ಷ ಕುಟುಂಬದ ಸ್ವತ್ತು ಅಲ್ಲ. ಸರ್ವರ ಅಭಿಪ್ರಾಯ ಬಹಳ ಮುಖ್ಯ. ಜಿಲ್ಲಾ ಅಧ್ಯಕ್ಷರು ಕರೆಯಲಿಲ್ಲ. ನನ್ನ ಸಂಪರ್ಕದಲ್ಲಿ ಶಾಸಕರು ಇದ್ದಾರೆ. ಕೋರ್ ಕಮಿಟಿ ಮಾಡಿ ಸಾಧಕ ಭಾಧಕ ಮಾಡುತ್ತೇನೆ. ನಾವು ಮೈತ್ರಿ ಮಾಡಿಕೊಂಡರೆ ನಾಲ್ಕು ಸೀಟು ಸಿಗುತ್ತೆ. ನಾನು ಶಕ್ತಿ ಪ್ರದರ್ಶನ ಮಾಡಬಹುದಿತ್ತು. ತಪ್ಪು ಸಂದೇಶ ಕೊಡಬೇಡಿ ಎಂದು ದೇವೇಗೌಡರಿಗೆ ನಾನು ಮನವಿ ಮಾಡುತ್ತೇನೆ. ನಿಮ್ಮನ ಪ್ರಧಾನಮಂತ್ರಿ ಮಾಡಿದ್ದು ಜಾತ್ಯಾತೀತ ತತ್ವ. ಪ್ರಧಾನಿ ಮಂತ್ರಿ ಮಾಡಿ, ಸೀತಾರಾಮ್ ಕೇಸರ್ ಬೆಂಬಲ ವಾಪಸ್ ಪಡೆದಿದ್ದಕ್ಕೆ ಸರ್ಕಾರ ಬಿತ್ತು. ಅದಕ್ಕೆ ಬಿಜೆಪಿಗೆ ಶಕ್ತಿ ಬಂತು. ಮೋದಿ, ಅಮಿಶ್ ಶಾ ಬಗ್ಗೆ ವೈಯಕ್ತಿಕ ದ್ವೇಷ ಇಲ್ಲ. ಸಿದ್ದಾಂತ, ತತ್ವ ಬೇರೆ ಇದೆ. ಅದಕ್ಕೆ ನಾವು ವಿರೋಧಿಸುತ್ತೇವೆ. ಎನ್ಡಿಎ ಸೋಲಿಸಬೇಕಿದೆ. ನಾವು ಕಾಂಗ್ರೆಸ್ ಬೆಂಬಲ ನೀಡುತ್ತೇವೆ. ಜೆಡಿಎಸ್ ಒರಿಜಿನಲ್ ನಮ್ಮದೆ. ನಾನು ಅದರ ಅಧ್ಯಕ್ಷ, ನನ್ನ ತೆಗೆಯಲು ಸಾಧ್ಯವಿಲ್ಲ ಎಂದರು.
ಕಾವೇರಿಗಾಗಿ ಅಕ್ಟೋಬರ್ 18ರಂದು ದೆಹಲಿ ಚಲೋ ನಡೆಸಲು ಕರ್ನಾಟಕ ರಕ್ಷಣಾ ವೇದಿಕೆ ಮುಂದಾಗಿದೆ. ದೆಹಲಿಯಲ್ಲಿ ಕರವೇ ಬೃಹತ್ ಪ್ರತಿಭಟನೆ ನಡೆಸಲಿದೆ. ಕರವೇ ಕಾರ್ಯಕರ್ತರು ನಾಳೆ ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಕರವೇ ರಾಜ್ಯಾಧ್ಯಕ್ಷ ನಾರಯಣಗೌಡ ನೇತೃತ್ವದಲ್ಲಿ ದೆಹಲಿ ಚಲೋ ನಡೆಯಲಿದೆ.
ಕಾಂಗ್ರೆಸ್ ಸರ್ಕಾರವನ್ನ ಜನರೇ ಹುಚ್ಚ ನಾಯಿಗೆ ಕಲ್ಲು ಹೊಡೆದು ಸಾಯಿಸಿದಂತೆ ಸಾಯಿಸ್ತಾರೆ ಎಂದು ಬೆಳಗಾವಿಯಲ್ಲಿ ಮಾಜಿ ಸಚಿವ ಗೋವಿಂದ್ ಕಾರಜೋಳ ಹೇಳಿಕೆ ನೀಡಿದ್ದಾರೆ. ಗೋವಿಂದ್ ಕಾರಜೋಳ ಅವರು ಸರ್ಕಾರವನ್ನ ಹುಚ್ಚು ನಾಯಿಗೆ ಹೋಲಿಸಿದ್ದಾರೆ. ಗುತ್ತಿಗೆದಾರ ಹಣ ಸಂಗ್ರಹ ಮಾಡಿದ್ದು ಮೇಲ್ನೋಟಕ್ಕೆ ಸಾಬೀತು ಆಗುತ್ತಿದೆ. ಮುಖ್ಯಮಂತ್ರಿಗಳ ಸಹಕಾರ, ಸಹಮತವಿಲ್ಲದೇ. ಇಷ್ಟೊಂದು ಹಣ ಸಂಗ್ರಹ ಮಾಡಲು ಸಾಧ್ಯವಾ ಎಂದು ಪ್ರಶ್ನಿಸಿದ್ದಾರೆ.
ಬಿಲ್ಡರ್ ಸಂತೋಷ್ ಮನೆಯಲ್ಲಿ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಟಿವಿ9ಗೆ ಬಿಲ್ಡರ್ ಸಂತೋಷ್ ಸಹೋದರ ದೈವಿಕ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಮನೆಯಲ್ಲಿ 40 ಕೋಟಿಗೂ ಅಧಿಕ ಹಣ ಪತ್ತೆ ಎನ್ನುವುದು ಸುಳ್ಳು. ಯಾರೋ ಆಗದವರು ಸೃಷ್ಟಿಸಿರುವ ಊಹಾಪೊಹಗಳಿವು. ಐಟಿ ಅಧಿಕಾರಿಗಳು ನಮ್ಮ ಮನೆಗೆ ದಾಳಿ ಮಾಡಿದ್ದು ನಿಜ. ದಾಳಿ ಮಾಡಿ ಮನೆಯನ್ನು ಸಂಪೂರ್ಣ ಹುಡುಕಾಡಿದ್ದಾರೆ. ಈ ವೇಳೆ ಕೆಲವು ದಾಖಲೆಗಳು, ಬ್ಯಾಂಕ್ ಮಾಹಿತಿ, ಟ್ರಾನ್ಸ್ಯಾಕ್ಷನ್ ದಾಖಲೆ ತೆಗೆದುಕೊಂಡು ಹೊಗಿದ್ದಾರೆ. ನಾವು ರಾಜಕೀಯ ಹಿನ್ನಲೆ ಉಳ್ಳವರಲ್ಲ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಯಾಱರಿಗೆ ಏನು ಉತ್ತರ ಕೊಡಬೇಕು ಕೊಡುತ್ತೇವೆ. ಹೈವೋಲ್ಟೇಜ್ಗೂ ಕೊಡುತ್ತೇವೆ, ಲೋವೋಲ್ಟೇಜ್ಗೂ ಉತ್ತರಿಸುತ್ತೇವೆ. ನಕಲಿಗೂ ಉತ್ತರಿಸುತ್ತೇವೆ, ಲೂಟಿಗಳಿಗೂ ಉತ್ತರ ಕೊಡುತ್ತೇವೆ. ಎಲ್ಲ ವಿಚಾರಗಳ ಬಗ್ಗೆಯೂ ಬಿಚ್ಚಿಡುತ್ತೇನೆ. ಬಿಜೆಪಿಗರು ಪ್ರತಿಭಟಿಸಲಿ, ಲೂಟಿಕೊರರು ಪ್ರತಿಭಟನೆ ಮಾಡಲಿ. ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದರು.
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಕೋಟ್ಯಂತರ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಹಣ ಲೂಟಿ ಹೊಡೆದ ಬಗ್ಗೆ ಸಿಎಂ ಸತ್ಯವನ್ನು ಬಹಿರಂಗಪಡಿಸಲಿ.ಅವರು ಒಬ್ಬರೇ ಸತ್ಯಹರಿಶ್ಚಂದ್ರರು ಅಂತಾರೆ, ಸತ್ಯ ಹೊರಗೆ ಇಡಲಿ. ದೇವರ ಸನ್ನಿಧಿಯಲ್ಲಿ ನಿಂತುಕೊಂಡು ನಾನು ಹೇಳ್ತಾ ಇದ್ದೇನೆ. ಕೋಟ್ಯಂತರ ಹಣ ಪತ್ತೆಯಾಗಿದೆ, ಇದರಲ್ಲಿ ಯಾರ ಪಾತ್ರ ಇದೆ. ಅಧಿಕಾರಿಗಳಿಂದ, ಕಂಟ್ರಾಕ್ಟರ್‌ರಿಂದ ಹಣ ವಸೂಲಿ ಮಾಡಿದ್ದಾರೆ. ಪ್ರತಿಯೊಂದಕ್ಕೂ ತನಿಖೆ ಅಂತಾರೆ, ಇದೊಂದು ತನಿಖೆ ಮಾಡಿಸಲಿ ಎಂದರು.
ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಆಗಿರುವುದು ನಿಜ. ರೈತರ ಪಂಪ್ಸೆಟ್ಗಳಿಗೆ ನಿತ್ಯ 5 ಗಂಟೆ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ರಾಜ್ಯದಲ್ಲಿ 2000 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಹಾಗೂ ಕುಮಾರಸ್ವಾಮಿ ಸರ್ಕಾರದಲ್ಲಿ ವಿದ್ಯುತ್ ಉತ್ಪಾದನೆ ನಡೆಯಲಿಲ್ಲ. ಹೀಗಾಗಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಹೊರಗಡೆ ವಿದ್ಯುತ್ ಖರೀದಿ ಮಾಡಲು ಕೂಡ ನಾನು ಸೂಚನೆ ಕೊಟ್ಟಿದ್ದೇನೆ. ಸಕ್ಕರೆ ಕಾರ್ಖಾನೆಯಿಂದ ವಿದ್ಯುತ್ ಉತ್ಪಾದನೆ ಹೆಚ್ಚು ಮಾಡಲು ಸೂಚನೆ ನೀಡಿದ್ದೇವೆ. ಆದಷ್ಟು ರೈತರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡುತ್ತೇವೆ ಎಂದರು.
ಐಟಿ ದಾಳಿ ಹಿನ್ನೆಲೆಯಲ್ಲಿ ಬಿಜೆಪಿ ಪೋಸ್ಟರ್ ರಿಲೀಸ್ ಮಾಡಿದ್ದು ಸಿದ್ದರಾಮಯ್ಯರನ್ನು ಕಲೆಕ್ಷನ್ ಮಾಸ್ಟರ್ ಎಂದು ಟೀಕಿಸಿದೆ. ಕಲೆಕ್ಷನ್ ಮಾಸ್ಟರ್ ಎಂದು ಬರೆದಿರುವ ಬಜೆಟ್ ಸೂಟ್ ಕೇಸ್ ಹಿಡಿದುಕೊಂಡ ಸಿದ್ದರಾಮಯ್ಯ ಚಿತ್ರವನ್ನು ಬಿಜೆಪಿ ಪೋಸ್ಟ್ ಮಾಡಿದೆ.
Karnataka CM – Karnataka Collection Master. pic.twitter.com/yEB5ekdtNo
— BJP Karnataka (@BJP4Karnataka) October 16, 2023
ಪಂಚರಾಜ್ಯಗಳ ಚುನಾವಣೆಗೆ ‘ಕೈ’ ಹೈಕಮಾಂಡ್ ಟಾರ್ಗೆಟ್ ನೀಡಿದೆ ಮೊದಲನೇ ಹಂತದ 1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು? ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ. ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ, ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ, ಛತ್ತೀಸ್‌ಗಢ ಹಾಗೂ ರಾಜಸ್ಥಾನ ಕಾಂಗ್ರೆಸ್‌ಗೆ ತಲಾ ₹200 ಕೋಟಿ, ಮಧ್ಯಪ್ರದೇಶ ಕಾಂಗ್ರೆಸ್‌ಗೆ 200 ಕೋಟಿ ರೂ. ಎಂದು ಬಿಜೆಪಿ ಟ್ವೀಟ್ ಮಾಡಿ ವ್ಯಂಗ್ಯ ಮಾಡಿದೆ.
ರಾಜ್ಯದ @INCKarnataka ಕ್ಕೆ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದ ₹1000 ಕೋಟಿ ಟಾರ್ಗೆಟ್ ಯಾವ ರಾಜ್ಯಕ್ಕೆ ಎಷ್ಟು?
✔ ತೆಲಂಗಾಣ ಕಾಂಗ್ರೆಸ್‌ಗೆ ₹300 ಕೋಟಿ
✔ ಮಿಜೋರಾಂ ಕಾಂಗ್ರೆಸ್‌ಗೆ ₹100 ಕೋಟಿ
✔ ಛತ್ತಿಸ್ಗಢ ಕಾಂಗ್ರೆಸ್‌ಗೆ ₹200 ಕೋಟಿ
✔ ರಾಜಸ್ಥಾನ ಕಾಂಗ್ರೆಸ್‌ಗೆ ₹200 ಕೋಟಿ
✔…— BJP Karnataka (@BJP4Karnataka) October 16, 2023
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಅವರು ದಿಢೀರನೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ತಡರಾತ್ರಿ ಬೆಂಗಳೂರಿಗೆ ಆಗಮಿಸಿದ್ದು ಇಂದು ಸಭೆ ಕರೆದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಕ್ಲೋಸ್ ಡೋರ್ ಮೀಟಿಂಗ್ ಹಮ್ಮಿಕೊಳ್ಳಲಾಗಿದೆ.
ಬನಶಂಕರಿ ದೇಗುಲದಲ್ಲಿ 108 ನೇ ವರ್ಷದ ಶರನ್ನವರಾತ್ರಿ ಉತ್ಸವ ನಡೆಯುತ್ತಿದೆ. ಪ್ರತಿದಿನ ದೇವಿಗೆ ವಿವಿಧ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತಿದೆ. ಇಂದು ತರಕಾರಿಗಳಿಂದ ದೇವಿಗೆ ಅಲಂಕಾರ ಮಾಡಿದ್ದು ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ವಿಜಯದಶಮಿವರೆಗೆ ವಿಶೇಷ ಪೂಜೆ ನಡೆಯಲಿದೆ.
ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ. ಸಾರ್ವಜನಿಕರು ಸರತಿ ಸಾಲಿನಲ್ಲಿ ಆಗಮಿಸಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಎಸಿಪಿ ಗಜೇಂದ್ರ ನೇತೃತ್ವದಲ್ಲಿ ಸಿಎಂ ನಿವಾಸಕ್ಕೆ ಭದ್ರತೆ ನೀಡಲಾಗಿದ್ದು 1 ಸಿಎಆರ್, 1 ಕೆಎಸ್ಆರ್ಪಿ ತುಕಡಿ, ಸಬ್ ಇನ್ಸ್ಪೆಕ್ಟರ್ ಹಾಗೂ ಎಎಸ್ಐ ಸೇರಿ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿಯ ಐತಿಹಾಸಿಕ ಪ್ರವಾಸಿತಾಣ ಸೂಳೆಕೆರೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. 5 ವರ್ಷದ ಮಗುವಿನೊಂದಿಗೆ ಸೂಳೆಕೆರೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನೆಬಾಗಿ ಗ್ರಾಮದ ಕವಿತಾ(27), ಪುತ್ರಿ ನಿಹಾರಿಕಾ(5) ಮೃತ ದುರ್ದೈವಿಗಳು. ಪತಿ ಮಂಜುನಾಥ್ ನಿರಂತರ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.
ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಆರ್ಎಂಸಿ ಯಾರ್ಡ್ ಸಮೀಪದ ಸೋಮೇಶ್ವರನಗರದ ಬಳಿ ಶವ ಪತ್ತೆಯಾಗಿದೆ. ಬೇರೆಡೆ ಕೊಲೆ ಮಾಡಿ ಶವ ಬಿಸಾಡಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗೂಲ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟಿಟಿ ವಾಹನ ಪಲ್ಟಿಯಾಗಿದ್ದು 6 ಜನರಿಗೆ ಗಾಯಗಳಾಗಿವೆ. 6 ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿದ್ದು ಮೂಡಿಗೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ರಸ್ತೆಗಳು ಹದಗೆಟ್ಟಿವೆ. ರಸ್ತೆ ದುರಸ್ತಿ ಮಾಡದೇ ಲೋಕೋಪಯೋಗಿ ಇಲಾಖೆ ನಿರ್ಲಕ್ಷ ತೋರುತ್ತಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಪ್ರಯಾಣಿಕರು ಪರದಾಡುತ್ತಿದ್ದಾರೆ. ದಾಸನಕೊಪ್ಲ-ಉಪ್ಪಿನ ಬೆಟಗೇರಿ ರಸ್ತೆಯಲ್ಲಿ ಗುಂಡಿ ಬಿದ್ದಿರುವುದನ್ನು ನೋಡಿದ ಮಕ್ಕಳು ಅದನ್ನು ಮುಚ್ಚುವ ಕೆಲಸ ಮಾಡಿದ್ದಾರೆ. ವಾಯು ವಿಹಾರಕ್ಕೆ ಬಂದ ಮಕ್ಕಳು ಗುಂಡಿ ನೋಡಿ ಮುಚ್ಚೋ ಕೆಲಸ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು ಐಟಿ ದಾಳಿಯಲ್ಲಿ ಸಿಕ್ಕ ಹಣಕ್ಕೂ ಕಾಂಗ್ರೆಸ್ಗೂ ಸಂಬಂಧವಿದೆ ಎಂಬ ಆರೋಪಗಳು ಕೇಳಿಬಂದಿದೆ. ಈ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದು ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ. ನೈತಿಕ ಹೊಣೆಹೊತ್ತು ಸಿಎಂ, ಡಿಸಿಎಂ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಿ ಬಿಜೆಪಿ ಮುಂದಾಗಿದೆ.
ಮೈಸೂರು ದಸರಾ ಯುವ ಕವಿಗೋಷ್ಠಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರೊ.ಭಗವಾನ್ ಬದಲು ಸಾಹಿತಿ ಡಾ.ಡಿ.ಕೆ.ರಾಜೇಂದ್ರ ಮೂಲಕ ಉದ್ಘಾಟನೆ ಮಾಡಲು ಚಿಂತಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮದಿಂದ ಪ್ರೊ.ಭಗವಾನ್ ಹೆಸರು ಕೈಬಿಟ್ಟ ಹಿನ್ನೆಲೆ ಪ್ರೊ.ಭಗವಾನ್ ವಿರುದ್ಧ ಕರೆ ನೀಡಿದ್ದ ಪ್ರತಿಭಟನೆಯನ್ನು ಒಕ್ಕಲಿಗಪಡೆ ಹಿಂಪಡೆದಿದೆ.
ನಿನ್ನೆ ಮೈಸೂರು ದಸರಾ ವಸ್ತು ಪ್ರದರ್ಶನದ ಆವರಣದಲ್ಲಿ ರೇಷ್ಮೆ ಸೀರೆ ಬೆಲೆ ಕೇಳಿ ಸಿಎಂ ಸಿದ್ದರಾಮಯ್ಯ ಅಚ್ಚರಿ ವ್ಯಕ್ತಪಡಿಸಿದರು. ದಸರಾ ವಸ್ತು ಪ್ರದರ್ಶನ ಉದ್ಘಾಟನೆ ಮಾಡಿ ಒಂದು ರೌಂಡ್ ಹಾಕಿದ ಸಿಎಂ ಸಿದ್ದರಾಮಯ್ಯ ರೇಷ್ಮೆ ಸೀರೆ ಅಂಗಡಿಗೆ ಭೇಟಿ ನೀಡಿದರು. ಈ ವೇಳೆ ರೇಷ್ಮೆ ಸೀರೆ ಬೆಲೆ ಕೇಳಿದ್ದು ಒಂದು ಸೀರೆಗೆ 20 ಸಾವಿರ ರೂಪಾಯಿ ಎಂದು ಅಂಗಡಿಯವರು ಉತ್ತರಿಸಿದ್ದಾರೆ. ರೇಷ್ಮೆ ಸೀರೆ ಬೆಲೆ ಕೇಳಿ ಸಿಎಂ ಒಂದು ಕ್ಷಣ ಅಚ್ಚರಿ ವ್ಯಕ್ತಪಡಿಸಿದರು.
ಸಿಎಂ ಸಿದ್ದರಾಮಯ್ಯ
ಇಂದಿನಿಂದ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಆರಂಭವಾಗಲಿದೆ. ಮೈಸೂರಿನಿಂದ ಶ್ರೀರಂಗಪಟ್ಟಣಕ್ಕೆ ಗಜಪಡೆ ಆಗಮಿಸಿದ್ದು ಶ್ರೀರಂಗನಾಥಸ್ವಾಮಿ ದೇವಸ್ಥಾನದ ಬಳಿ 3 ಆನೆಗಳಿಗೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಪೂಜೆ ಸಲ್ಲಿಸಿದ್ದಾರೆ. ಮಹೇಂದ್ರ, ಲಕ್ಷ್ಮೀ, ವಿಜಯ ಆನೆಗಳಿಗೆ ಜಿಲ್ಲಾಡಳಿತ ಕಬ್ಬು, ಬೆಲ್ಲ ನೀಡಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದೆ.
ದಸರಾ ಅಂಗವಾಗಿ ಇಂದು ನಡೆಯುವ ಕಾರ್ಯಕ್ರಮಗಳ ವಿವರ ಹೀಗಿದೆ.
Published On - 7:56 am, Mon, 16 October 23