5 ಗ್ಯಾರಂಟಿಗಳ ಆಸೆ ತೋರಿಸಿ(Congress Guarantee) ಅಧಿಕಾರಕ್ಕೆ ಬಂದ ಕಾಂಗ್ರೆಸ್ ಷರತ್ತುಗಳನ್ನು ವಿಧಿಸಿ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದೆ. ಜೊತೆಗೆ ವಿದ್ಯುತ್ ದರ ಹೆಚ್ಚಿಸಿ ಬರೆ ಎಳೆಯುತ್ತಿದೆ. ವಿದ್ಯುತ್ ದರ ಏರಿಕೆ ಖಂಡಿಸಿ ಅನೇಕ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಮತ್ತೊಂದೆಡೆ ಗೃಹಲಕ್ಷ್ಮೀ ಯೋಜನೆ(Gruha Lakshmi Scheme) ಲಾಭ ಪಡೆಯುವ ಹಿನ್ನೆಲೆ ಆಧಾರ್ ತಿದ್ದುಪಡಿಗಾಗಿ ಮಹಿಳೆಯರು ಸೇವಾ ಕೇಂದ್ರಗಳಿಗೆ ಲಗ್ಗೆ ಇಟ್ಟಿದ್ದಾರೆ. ಇದೆಲ್ಲದರ ನಡುವೆ ಈಗ ಸಿದ್ದರಾಮಯ್ಯ(Siddaramaiah) ಆರೋಪವೊಂದನ್ನು ಮಾಡಿದ್ದಾರೆ. ಅನ್ನಭಾಗ್ಯಕ್ಕೆ(Anna Bhagya Scheme) ಕೇಂದ್ರ ಸರ್ಕಾರ ಅಕ್ಕಿ ಕೊಡುವುದಿಲ್ಲ ಎಂದಿದ್ದಾರೆ. ಈ ಸಂಬಂಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಇನ್ನು ಬಿಪರ್‌ಜಾಯ್ ಚಂಡಮಾರುತದ ಅಬ್ಬರಕ್ಕೆ ಕಡಲತೀರಗಳಲ್ಲಿ ಭಾರೀ ಕಡಲಕೊರೆತ ಸಂಭವಿಸಿದೆ. ಅಲೆಗಳ ಹೊಡೆತಕ್ಕೆ ಮರಗಳು ಕೊಚ್ಚಿ ಹೋಗಿವೆ. ಅಬ್ಬರಿಸುವ ಅಲೆಗಳನ್ನು ಕಂಡು ಮೀನುಗಾರರು ಆತಂಕಗೊಂಡಿದ್ದಾರೆ. ಇದರೊಂದಿಗೆ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
ಸರ್ಕಾರದಿಂದ ಎಪಿಎಂಸಿ ಕಾಯ್ದೆ ಹಿಂಪಡೆಯುವ ನಿರ್ಧಾರ ಸ್ವಾಗತಾರ್ಹ ಎಂದು ರೈತ ಪರ ಹೋರಾಟಗಾರ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಕಾಯ್ದೆ ವಿರುದ್ಧ 4 ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದಿದ್ದಾರೆ.
ಹು-ಧಾ ಮೇಯರ್ ಚುನಾವಣೆಯಲ್ಲಿ ಆಪರೇಷನ್ ಕಾಂಗ್ರೆಸ್ ಭೀತಿ ಶುರುವಾಗಿದ್ದು, ದಾಂಡೇಲಿ ರೆಸಾರ್ಟ್‌ಗೆ ಪಾಲಿಕೆಯ 39 ಬಿಜೆಪಿ ಸದಸ್ಯರು ತೆರಳಿದ್ದಾರೆ. ಹು-ಧಾ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯಲು ಕಾಂಗ್ರೆಸ್ ಕಸರತ್ತು ನಡೆಸಿದಿದ್ದು, ಮಾಜಿ ಸಿಎಂ ಶೆಟ್ಟರ್, ಸಚಿವ ಲಾಡ್, ಶಾಸಕರಾದ ಪ್ರಸಾದ್ ಅಬ್ಬಯ್ಯ, ವಿನಯ್ ಕುಲಕರ್ಣಿಗೆ ಕಾಂಗ್ರೆಸ್‌ನ ಹೈಕಮಾಂಡ್ ಟಾಸ್ಕ್ ನೀಡಿದೆ.
ಮುಂಬೈನಲ್ಲಿ ರಾಷ್ಟ್ರೀಯ ಶಾಸಕರ ಸಮ್ಮೇಳನ ನಡೆಯುತ್ತಿದ್ದು, ಎರಡನೇ ದಿನದ ಸಮ್ಮೇಳನದಲ್ಲಿ ರ‍್ಯಾಂಪ್ ಆಪ್ ಡೆಮಾಕ್ರಸಿ ಕಾರ್ಯಕ್ರಮ ಮಾಡಲಾಗಿದೆ. ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೇರಿದಂತೆ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಗಾಯಕಿ ಉಷಾ ಉತ್ತುಪ್ ರಾಜ್ಯದ ಶಾಸಕರ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡು ಹಾಡಿದರು.
ಬೆಂಗಳೂರಿನಲ್ಲಿ 571 ಕಡೆ ಅಕ್ರಮ ಒತ್ತುವರಿ ಬಗ್ಗೆ ಸರ್ವೆ ವರದಿ ಹಿನ್ನೆಲೆ ಬಿಬಿಎಂಪಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ. ಹಾಗಾಗಿ ಅಧಿಕಾರಿಗಳಿಗೆ 15 ದಿನ ಗಡುವು ನೀಡಿದ್ದು, ಒತ್ತುವರಿ ತೆರವಿಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಡೆಡ್‌ಲೈನ್ ನೀಡಿದ್ದಾರೆ.
ಅಕ್ರಮ ಒತ್ತುವರಿ ತೆರುವುದಾರರಿಗೆ ಬಿಬಿಎಂಪಿಯಿಂದ ಮತ್ತೆ ಶಾಕ್ ನೀಡಿದು, ಬೆಂಗಳೂರಿನಲ್ಲಿ ಅಕ್ರಮ ಒತ್ತುವರಿ ತೆರವು ಕಾರ್ಯಾಚರಣೆ ಪುನಾರಂಭಗೊಳ್ಳಲಿದೆ. ಕೆ.ಆರ್.ಪುರಂ ವ್ಯಾಪ್ತಿಯ ಹೊಯ್ಸಳ ನಗರದ
ರಾಜಕಾಲುವೆ ಮೇಲೆ ನಿರ್ಮಾಣವಾಗಿದ್ದ ಕಟ್ಟಡದ ಕಾಂಪೌಂಡ್ನ್ನು ಇಂದು ಕೆ.ಆರ್.ಪುರಂ, ಮಹದೇವಪುರ ವ್ಯಾಪ್ತಿಯಲ್ಲಿ ತೆರವು ಮಾಡಲಾಗಿದೆ. ನಾಳೆ ಬೆಂಗಳೂರಿನ ವಿವಿಧಡೆ ನಡೆಯಲಿರುವ ಅಕ್ರಮ ತೆರವು ಕಾರ್ಯ ನಡೆಯಲಿದೆ.
MTB ನಾಗರಾಜ್ ಹೇಳಿಕೆಯಿಂದ ಆಕ್ರೋಶಗೊಂಡಿರುವ ಮುಸ್ಲಿಂ ಸಮುದಾಯ ಎಲ್ಲಿ, ಯಾರಿಗೆ, ಹೇಗೆ ಹಣ ಕೊಟ್ಟಿದ್ದಾರೆಂದು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದ್ದಾರೆ. MTB ನಾಗರಾಜ್ ವಿರುದ್ಧ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.
ದೇವನಹಳ್ಳಿ: ಮುಸ್ಲಿಮರ ವಿರುದ್ಧ ಮಾಜಿ ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆಗೆ ಆಕ್ರೋಶ ವ್ಯಕ್ತವಾಗಿದ್ದು, ಎಂಟಿಬಿ ನಾಗರಾಜ್ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರದ ಜಾಮಿಯಾ ಮಸೀದಿ ವತಿಯಿಂದ ಪ್ರತಿಭಟನೆ ಮಾಡಲಾಗಿದೆ.
ಖಾಸಗಿ ಕಂಪೆನಿಗಳಿಗೆ ಇಥೆನಾಲ್ ಉತ್ಪಾದನೆಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೆಜಿಗೆ 24 ರೂಪಾಯಿಗಳಂತೆ ಕೊಡುವ FCI ನಮ್ಮ ಸರ್ಕಾರ 34 ರೂಪಾಯಿಗಳನ್ನು ಕೊಡಲು ಮುಂದಾದರೂ ಅಕ್ಕಿ ಕೊಡಲು ಒಪ್ಪದಿರುವುದು ಮೋದಿಯ ದ್ವೇಷ ರಾಜಕಾರಣವಲ್ಲದೆ ಇನ್ನೇನು ಎಂದು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಟ್ವೀಟಾಸ್ತ್ರ ಪ್ರಯೋಗಿಸಿದೆ.
ಖಾಸಗಿ ಕಂಪೆನಿಗಳಿಗೆ ಇಥೆನಾಲ್ ಉತ್ಪಾದನೆಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಕೆಜಿಗೆ 24 ರೂಪಾಯಿಗಳಂತೆ ಕೊಡುವ FCI ನಮ್ಮ ಸರ್ಕಾರ 34 ರೂಪಾಯಿಗಳನ್ನು ಕೊಡಲು ಮುಂದಾದರೂ ಅಕ್ಕಿ ಕೊಡಲು ಒಪ್ಪದಿರುವುದು ಮೋದಿಯ ದ್ವೇಷ ರಾಜಕಾರಣವಲ್ಲದೆ ಇನ್ನೇನು?
ಬಳಕೆ ಯೋಗ್ಯ ಧನ್ಯಗಳನ್ನೂ ಇಥೆನಾಲ್ ಉತ್ಪಾದನೆಗೆ ಬಳಸಲು ಅನುಮತಿ ಕೊಟ್ಟಿರುವುದರ ಹಿಂದೆ ಜನರ…
— Karnataka Congress (@INCKarnataka) June 16, 2023
ಸಾವರ್ಕರ್ ದೇಶದ್ರೋಹಿಯಲ್ಲ, ಭಯೋತ್ಪಾದಕರಲ್ಲ, ಅಪ್ಪಟ ದೇಶಭಕ್ತ. ಗ್ಯಾರಂಟಿ ನೀಡಿ ಮೋಡಿ ಮಾಡಿ ಅಧಿಕಾರಕ್ಕೆ ಬಂದಿರುವ ಡೋಂಗಿ ಸರ್ಕಾರ. ಅಲ್ಪಸಂಖ್ಯಾತರನ್ನು ಓಲೈಸಲು ಗೋಹತ್ಯೆ ನಿಷೇಧ ಕಾನೂನನ್ನು ಹಿಂಪಡೆಯಲು ಹೊರಟಿರುವ ಸರ್ಕಾರಕ್ಕೆ ಧಿಕ್ಕಾರ ಎಂದು ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರಹಾಕುತ್ತಿವೆ.
ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಸರ್ಕಾರ ತೀರ್ಮಾನ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಘೋಷಣೆ ಕೂಗುವ ಮೂಲಕ ಪ್ರತಿಭಟನೆಕಾರರು ಕಿಡಿ ಕಾರಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಸರ್ಕಾರ ತೀರ್ಮಾನ ಹಿನ್ನೆಲೆ, ಕಾಂಗ್ರೆಸ್ ನಿರ್ಧಾರ ಖಂಡಿಸಿ ವಿಶ್ವ ಹಿಂದೂ ಪರಿಷತ್ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದೆ. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಉಚಿತ ಅಕ್ಕಿ ಕೊಡುತ್ತೇವೆ ಅಂತಾ ಘೋಷಣೆ ಮಾಡುವಾಗ ಕೇಂದ್ರದ ಅನುಮತಿ ಪಡೆದಿದ್ದಾರೆ. ಈಗ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುವುದು ಎಷ್ಟು ಸರಿ ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಆರ್.ಅಶೋಕ್ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿಯನ್ನು ಘೋಷಣೆ ಮಾಡುವಾಗ ಯೋಚನೆ ಮಾಡಬೇಕಿತ್ತು. ಈ ಬಗ್ಗೆ ಕಾಂಗ್ರೆಸ್ ಪ್ರತಿಭಟನೆ ಮಾಡಲಿ ಟೆಂಟ್ ಬೇಕಿದ್ದರೆ ಹಾಕಿಸಿ ಕೊಡುತ್ತೇವೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರು ಟ್ರಾಫಿಕ್ ಕೆಟ್ಟದ್ದು ಎಂಬ ವಿಚಾರ ಇದೆ. ಈ ಅಪಕೀರ್ತಿ ತೆಗೆದುಹಾಕಬೇಕೆಂದು ನಿರ್ಧಾರ ಮಾಡಿದ್ದೇವೆ. ಎಲ್ಲಾ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಟ್ರಾಫಿಕ್ನ ಸಿಬ್ಬಂದಿಗಳಿಂದ ಹಿರಿಯ ಅಧಿಕಾರಿಗಳು ಫೀಲ್ಡ್ನಲ್ಲಿರಬೇಕು. ಬೆಳಿಗ್ಗೆ 2 ಗಂಟೆ, ಸಂಜೆ 2 ಗಂಟೆ ಫೀಲ್ಡ್ನಲ್ಲಿರಬೇಕು. ದೂರು ಬಂದ ಏರಿಯಾದ ಡಿಸಿಪಿರವರೇ ರೆಸ್ಪಾಂಡ್ ತೆಗೆದುಕೊಳ್ಳಬೇಕು.
ಪೊಲೀಸ್ ಇಲಾಖೆ ಜನಸ್ನೇಹಿ ಆಗಬೇಕು. ಪೊಲೀಸ್ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ತಿಳಿಹೇಳಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ. ಠಾಣೆಯಲ್ಲಿ ದೂರು ಸ್ವೀಕರಿಸಲ್ಲ ಎಂಬ ದೂರುಗಳು ಬರಬಾರದು. ನಾನು ಕೂಡ ಠಾಣೆಗಳಿಗೆ ಭೇಟಿ ನೀಡುತ್ತೇನೆ. ಸರ್ಕಾರ ಪೊಲೀಸರಿಗೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡಲಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.
ರೈತರು, ಮಕ್ಕಳ ಬಗ್ಗೆ ರಾಜ್ಯ ಸರ್ಕಾರಕ್ಕೆ ಯೋಚನೆಯೇ ಇಲ್ಲ. ಸಿದ್ದರಾಮಯ್ಯಗೆ ಕಾಣುತ್ತಿರುವುದು ಟಿಪ್ಪು ಸುಲ್ತಾನ್ ಅಷ್ಟೇ. ಸಿದ್ದರಾಮಯ್ಯ ಹಿಂದೂ ವಿರೋಧಿ, ಇದರಲ್ಲಿ ಅನುಮಾನವೇ ಇಲ್ಲ. ರಾಜ್ಯ ಸರ್ಕಾರ ಮಕ್ಕಳಿಗೆ ಸುಳ್ಳು ಇತಿಹಾಸ ಹೇಳಲು ಹೊರಟಿದೆ ಎಂದು ವಾಗ್ದಾಳಿ ಮಾಡಿದರು.
ತುಮಕೂರು: ರಾಷ್ಟ್ರೀಯ, ಸಂಸ್ಕೃತಿ ವಿಚಾರ ಎಲ್ಲಿ ತೆಗೆಯಬೇಕೋ ಅಲ್ಲಿ ತೆಗೆದಿದ್ದಾರೆ. ಅವರು ಗೆದಿರುವುದು ಮುಸ್ಲಿಂ ಮತಗಳಿಂದಲೇ ಗೆದಿದ್ದಾರೆ ಭಾವಿಸಿದಂತಿದೆ ಎಂದು ಸಿಎಂ ಸಿದ್ಧರಾಮಯ್ಯ ವಿರುದ್ಧ ಮಾಜಿ ಶಿಕ್ಷಣ ಸಚಿವ ಬಿಸಿ ನಾಗೇಶ್ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಟಿವಿ9 ಜೊತೆ ಸಾವರ್ಕರ್, ಹೆಡ್ಗೆವಾರ್ ಹಾಗೂ ಸೂಲಿಬೆಲೆ ಪಠ್ಯ ಕೈ ಬಿಟ್ಟ ವಿಚಾರವಾಗಿ ಮಾತನಾಡಿದ ಅವರು, ಯಾವಾಗ ಸಿಎಂ ಸಿದ್ದರಾಮಯ್ಯ ಆದರೂ ಹೀಗೆ ಮಾಡುತ್ತಾರೆ ಅಂತಾ ಗೊತ್ತಿದೆ.
ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಗೆ ನಿರ್ಧಾರ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ‘ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಇದನ್ನು ಮಾಡುತ್ತಿದ್ದಾರೆ. ಅವರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕಿತ್ತು, ಮಾಡಿಕೊಳ್ಳಲಿಲ್ಲ. ಮುಂಗಾರು ವಿಫಲವಾಗಿರುವ ಕಾರಣ ಕೇಂದ್ರ ಸರ್ಕಾರ ತನ್ನದೇ ನೀತಿ ಮಾಡಿದ್ದಾರೆ.ಕೇವಲ ಕರ್ನಾಟಕಕ್ಕೆ ಮಾತ್ರ ಮಾಡಿಲ್ಲ. ಬಿಜೆಪಿ ಆಡಳಿತದ ರಾಜ್ಯಗಳಿಗೂ ಅದು ಅನ್ವಯಿಸುತ್ತದೆ.
ನಮ್ಮ ರೈತರಿಂದಲೇ ಖರೀದಿ ಮಾಡಿ, ಯಾಕೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದೀರಿ?, ನೀವು ಕೊಡದೇ ಇದ್ದರೆ ನಾವು ಪ್ರತಿಭಟನೆ ಮಾಡುತ್ತೇವೆ ಎಂದರು.
ಬೆಂಗಳೂರು: ಧಮ್ಮು, ತಾಕತ್ ಇದ್ದರೆ, ಗ್ಯಾರಂಟಿ ಘೋಷಣೆಯ ಷರತ್ತುಗಳನ್ನು ತೆಗೆದು ಜಾರಿ ಮಾಡಲಿ, ಆಮೇಲೆ ಬಿಜೆಪಿಯ ತಾಕತ್ ಬಗ್ಗೆ ಪ್ರಶ್ನೆ ಮಾಡಲಿ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ ಕಾಂಗ್ರೆಸ್ ಘೋಷಣೆ ಜಾರಿ ಮಾಡದೇ ಇದ್ದರೆ ಕಾಂಗ್ರೆಸ್ ಮನೆಗೆ ಹೋಗೋದು ಖಚಿತ, ನೀವು ಘೋಷಣೆ ಮಾಡುವಾಗ ಕೇಂದ್ರ ಸರಕಾರ ಕೇಳಿ ಮಾಡಿದ್ರಾ?, ಡಿ.ಕೆ. ಶಿವಕುಮಾರ್ ಅಣ್ಣ ನೀನು ಕೊಟ್ಟ ಭರವಸೆ ಉಳಿಸಿಕೊಳ್ಳಿ. ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮತ್ತೊಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಬೇಡಿ ಎಂದಿದ್ದಾರೆ.
ಬೆಂಗಳೂರು: ಇಂದು(ಜೂ.16) ಶಕ್ತಿಭವನದಲ್ಲಿ ಕೊರಿಯಾದ ರಾಯಭಾರಿ ಚಾಂಗ್ ಜೇ ಬಾಕ್ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿದರು. ಈ ವೇಳೆ ರಾಜ್ಯದಲ್ಲಿ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್. ಸೆಲ್ವಕುಮಾರ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎನ್. ಜಯರಾಂ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.
ಬೆಂಗಳೂರು: ಕಾಯ್ದೆ ಉಲ್ಲಂಘಿಸಿ ಮೇಕೆದಾಟು ಪಾದಯಾತ್ರೆ ಮಾಡಿದ್ದ ಆರೋಪದ ಮೇಲೆ ಡಿಸಿಎಂ ಡಿ.ಕೆ.ಶಿವಕುಮಾರ್ಗೆ 5 ಪ್ರಕರಣಗಳಿಂದ ಹೈಕೋರ್ಟ್ ರಿಲೀಫ್ ನೀಡಿದೆ. ಹೌದು 5 ಪ್ರಕರಣವನ್ನ ರದ್ದುಪಡಿಸಿ ಹೈಕೋರ್ಟ್ ಆದೇಶ ನೀಡಿದೆ.
ಬೆಂಗಳೂರು: ಸಿದ್ದರಾಮಯ್ಯ ನನ್ನನ್ನು ಎಳಸು ಎಂದರು ಬೇಜಾರಿಲ್ಲ. ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರೆ ಸಾಕು ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪಸಿಂಹ ‘ನೀವು ಬುದ್ದಿವಂತರಿದ್ದೀರಿ, ರಾಜ್ಯದ ಹಣಕಾಸು ವ್ಯವಸ್ಥೆ ತಿಳಿದಿರುವ ನೀವು ಹೇಗೆ ಗ್ಯಾರಂಟಿ ಘೋಷಣೆ ಮಾಡಿದಿರಿ?, ನನ್ನನ್ನ ಚೈಲ್ಡ್ ಅಂತಾನೆ ಕರೆಯಿರಿ ಬೇಜಾರು ಇಲ್ಲ. ಆದರೆ, ರಾಜ್ಯದಲ್ಲಿ ಸಂಪನ್ಮೂಲ ಕ್ರೋಢಿಕರಣ ಮಾಡುವುದು ಹೇಗೆ ತಿಳಿಸಿ?, ಸೀನಿಯರ್ ರಾಜಕಾರಣಿಯಾಗಿರುವ ನೀವು, ಜಿ ಪರಮೇಶ್ವರ್‌ರನ್ನು ಮುಗಿಸಿ ಸಿಎಂ ಆದರಲ್ಲ, ಆ ರೀತಿಯ ಪ್ರಬುದ್ಧತೆ ನನಗೆ ಬೇಕಿಲ್ಲ ಎಂದಿದ್ದಾರೆ.
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೇಮಕಾತಿ ವಿಚಾರ ಸಂಬಂಧಿಸಿದಂತೆ ಬಿವೈ ವಿಜಯೇಂದ್ರ ಅವರ ನೇಮಕಕ್ಕೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತೀವ್ರ ಪ್ರಯತ್ನ ನಡೆಸಿದ್ದಾರೆ. ಇನ್ನೂ ಈಗಾಗಲೇ ವಿಜಯೇಂದ್ರರವರು ಹಾಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಇದೀಗ ಯಡಿಯೂರಪ್ಪ ಪ್ರಯತ್ನದ ಬೆನ್ನಲ್ಲೇ ನಿನ್ನೆ(ಜೂ.15) ಮಾಜಿ ಸಿಎಂ ಎಸ್.ಎಂ ಕೃಷ್ಣರನ್ನ ವಿಜಯೇಂದ್ರ ಭೇಟಿ ಮಾಡಿದ್ದಾರೆ.
ಬೆಂಗಳೂರು: ಗೃಹ ಲಕ್ಷ್ಮಿ ಯೋಜನೆ ವಿಳಂಬವಾಗುತ್ತಿರುವ ಹಿನ್ನೆಲೆ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ
ಕಾಫಿ ಬೋರ್ಡ್ ನಲ್ಲಿ ಸಭೆ ನಡೆಸುತ್ತಿದ್ದಾರೆ. ಇನ್ನೂ ಕೂಡ ಸೇವಾಸಿಂಧು ಆಪ್ಲಿಕೇಷನ್ ಸಿದ್ದಗೊಳ್ಳದ ಕಾರಣ ಕಂದಾಯ ಇಲಾಖೆ, ಐಟಿಬಿಟಿ ವ್ಯಾಪ್ತಿಗೆ ಒಳಪಡುವ ಇ- ಗೌರ್ನೆನ್ಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಜೊತೆ ಮಹತ್ವದ ಸಭೆ ಕರೆದಿದ್ದಾರೆ.
ಬೆಂಗಳೂರು: ಜುಲೈ 7 ರಂದು ನೂತನ ಸರ್ಕಾರದ ಮೊದಲ ಬಜೆಟ್ ಮಂಡನೆ ಇರುವುದರಿಂದ ಇಂದು(ಜೂ.16) ಸಹ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ಮುಂದುವರೆಯಲಿದೆ. ಬೆಳಗ್ಗೆ 11 ರಿಂದ ಸಂಜೆಯತನಕ ಬಜೆಟ್ ಪೂರ್ವಭಾವಿ ಸಭೆ ನಡೆಸಲಿರುವ ಮುಖ್ಯಮಂತ್ರಿಗಳು. 14 ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ.
ಬೆಂಗಳೂರು: ವಿಧಾನಸಭಾ ಚುನಾವಣೆಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಹೆಚ್ ಡಿ ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ. ಹೌದು ಜೆಡಿಎಸ್ ರಾಮನಗರ, ಕುಣಿಗಲ್, ಮಾಗಡಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸೋತಿದ್ದು, ಸೋಲಿಗೆ ಕಾರಣ ಪತ್ತೆ ಮಾಡಿ ಹೋರಾಟಕ್ಕೆ ನಿರ್ಧಾರ ಮಾಡಿದ್ದಾರೆ. ಇನ್ನು 45 ಕ್ಷೇತ್ರಗಳ ಜೆಡಿಎಸ್ ಸೋಲಿಗೆ ಆ ಒಂದು ಕೂಪನ್ ಕಾರಣ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.
ಗುಜರಾತ್: ರಾಜ್ಯದಲ್ಲಿ ಬಿಪರ್‌ಜಾಯ್ ಚಂಡಮಾರುತದ ಅಬ್ಬರ ಜೋರಾಗಿದ್ದು, ಕಛ್ ಜಿಲ್ಲೆಯ ಮಾಂಡವಿಯಲ್ಲಿ ವರುಣನ ಆರ್ಭಟ ಮುಂದುವರೆದಿದೆ. ಅದರಂತೆ ಮಾಂಡವಿಯಲ್ಲಿ ಬಿರುಗಾಳಿ ಮಳೆಗೆ ಮನೆಯ ಮೇಲ್ಚಾವಣಿ ಹಾರಿಹೋಗಿದೆ. ಇನ್ನು ನಿನ್ನೆಗಿಂತ ಇವತ್ತು ಮಳೆ ಗಾಳಿಯ ಪ್ರಮಾಣ ಹೆಚ್ಚಾಗಿದ್ದು, ಜನರು ವಸತಿ ಪ್ರದೇಶದಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ
ತುಮಕೂರು: ಜಿಲ್ಲೆಗೆ ಇಂದು(ಜೂ.16) ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ನೀಡಲಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬೆಳಗ್ಗೆ 11.40ಕ್ಕೆ ಹಂದನಕೆರೆ ಹೆಲಿಪ್ಯಾಡ್ಗೆ ಡಿಕೆಶಿ ಆಗಮಿಸಲಿದ್ದು. ಬಳಿಕ ಹಂದನಕೆರೆ ಗುರುಗಿರಿ ಸಿದ್ದೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಶಿರಾ ತಾಲ್ಲೂಕಿನ ಪಟ್ಟನಾಯಕನಹಳ್ಳಿ ನಂಜವದೂತ ಮಠಕ್ಕೆ ಭೇಟಿ ನೀಡಿ, ಸಂಜೆ 4 ಗಂಟೆಯವರೆಗೆ ನಂಜವದೂತ ಮಠದಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಲ್ಲಿಂದ ಸಂಜೆ 4:30 ಕ್ಕೆ ನಂಜವದೂತ ಮಠದ ಹೆಲಿಪ್ಯಾಡ್ ನಿಂದ ಬೆಂಗಳೂರಿನತ್ತ ಹೊರಡಲಿದ್ದಾರೆ.
ಗುಜರಾತ್: ಬಿಪರ್‌ಜಾಯ್ ಚಂಡಮಾರುತ ಅಬ್ಬರಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ. ಹೌದು ಗುಜರಾತ್ನ ಭಾವ್ನಗರದಲ್ಲಿ ನೀರಿನಲ್ಲಿ ಸಿಲುಕಿದ್ದ ಜಾನುವಾರು ರಕ್ಷಿಸುವಾಗ ಭಾರಿ ಮಳೆಗೆ ತಂದೆ ಮಗ ಇಬ್ಬರು ಮೃತರಾಗಿದ್ದಾರೆ.
ಗುಜರಾತ್: ಬಿಪರ್‌ಜಾಯ್ ಅಬ್ಬರ ಜೋರಾಗಿದ್ದು, ಗುಜರಾತ್ನ ರಾಜುಲ ತಾಲೂಕಿನ ಮೋರಂಗಿ ಗ್ರಾಮದಲ್ಲಿ ಭಾರೀ ಮಳೆಯೊಂದಿಗೆ ಗಾಳಿ ಬೀಸಿದ್ದು, 20ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿವೆ. ಮನೆಗಳ ಹಂಚುಗಳು ಹಾರಿಹೋಗಿದ್ದು, ಗೋಡೆಗಳು ಕುಸಿದು ಒಬ್ಬ ವ್ಯಕ್ತಿಗೆ ಗಾಯವಾಗಿದೆ.
ಗುಜರಾತ್: ಬಿಪರ್‌ಜಾಯ್ ಆರ್ಭಟ ಮತ್ತಷ್ಟು ಹೆಚ್ಚಾಗಿದ್ದು, ಗುಜರಾತ್ನ ಕರಾವಳಿಯಲ್ಲಿ 300ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿವೆ. ಈ ಕಾರಣ ಮಲಿಯಾ ತಹಸಿಲ್‌ನ 45 ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು, ಭಯದ ವಾತವರಣ ನಿರ್ಮಾಣವಾಗಿದೆ. ಇನ್ನು ರೈಲುಗಳ ಸಂಚಾರವನ್ನ ಕೂಡ ರದ್ದು ಮಾಡಲಾಗಿದೆ.
ಗುಜರಾತ್: ಕರಾವಳಿ ಪ್ರದೇಶದಲ್ಲಿ ‘ಬಿಪರ್‌ಜಾಯ್’ ಆರ್ಭಟ ಮತ್ತಷ್ಟು ಹೆಚ್ಚಾಗಿದ್ದು, ಗುಜರಾತ್ನ ಕರಾವಳಿ ಪ್ರದೇಶಗಳಲ್ಲಿ ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಮತ್ತು ತಾತ್ಕಾಲಿಕವಾಗಿ ಸುಮಾರು 99 ರೈಲುಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ.
Published On - 7:02 am, Fri, 16 June 23