ಮುಂಗಾರು ಮಳೆ ಕೈ ಕೊಟ್ಟು ಸರಿಯಾದ ಸಮಯಕ್ಕೆ ಮಳೆ ಆಗದೆ ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಇದರ ನಡುವೆ ತಮಿಳು ನಾಡಿಗೆ ಪ್ರತಿ ದಿನ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಹೀಗಾಗಿ ರಾಜ್ಯದೆಲ್ಲೆಡೆ ರೈತರು ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆ ಮಾಡುತ್ತೇವೆ. ಬಂದ್‌ಗೆ ಕರೆಕೊಟ್ಟಿವೆ. ಸೆ.25 ಮತ್ತು 26ರಂದು ಅನೇಕ ಕಡೆ ಬಂದ್‌ಗೆ ಕರೆ ಕೊಡಲಾಗಿದೆ. ಇನ್ನೂ ಮತ್ತೊಂದೆಡೆ ಕರ್ನಾಟಕ ಬಂದ್ ಮಾಡಲು ಚರ್ಚೆಗಳು ನಡೆಯುತ್ತಿವೆ. ಮತ್ತೊಂದೆಡೆ ಬಿಜೆಪಿ ಜೆಡಿಎಸ್ ಮೈತ್ರಿ ಹಿನ್ನೆಲೆ ದೊಡ್ಡ ಮಟ್ಟದ ಪಕ್ಷಾಂತರ ಪರ್ವ ಶುರುವಾಗುವ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಮೈತ್ರಿಯ ಪರಿಣಾಮ ಹಲವು ಮಂದಿ ಕಾಂಗ್ರೆಸ್ ಕಡೆ ಮುಖ ಮಾಡುವ ನಿರೀಕ್ಷೆ ಇದೆ. ಕಾಂಗ್ರೆಸ್ ಕಡೆಗೆ ಕೆಲವು ಮಾಜಿ, ಹಾಲಿ ಶಾಸಕರು ಮುಖ ಮಾಡುವ ಸಾಧ್ಯತೆ ಇದ್ದು ಸೂಕ್ತ ಸಂದರ್ಭ ಕ್ಕಾಗಿ ಕಾಯುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಎಲ್ಲದರ ಕ್ಷಣಕ್ಷಣದ ಮಾಹಿತಿ ಟಿವಿ9 ಲೈವ್ನಲ್ಲಿ ಪಡೆಯಿರಿ.
ಕಾವೇರಿ ನೀರು ಹರಿಸಲು CWRC ಆದೇಶದ ಅವಧಿ ಮುಕ್ತಾಯ ಹಿನ್ನೆಲೆ ನಾಳೆ ಮತ್ತೊಂದು ಸುತ್ತಿನ ಸಭೆಯನ್ನು ಕಾವೇರಿ ನೀರು ನಿಯಂತ್ರಣ ಸಮತಿ ನಡೆಸಲಿದೆ. ನಾಳೆ ಬೆಳಗ್ಗೆ 11-30ಕ್ಕೆ ವರ್ಚುವಲ್ ಮೂಲಕ ಸಭೆ ನಡೆಯಲಿದೆ. ಕರ್ನಾಟಕ, ತಮಿಳುನಾಡು ಅಧಿಕಾರಿಗಳು ವರ್ಚುವಲ್ ಮೂಲಕ ಭಾಗಿಯಾಗಲಿದ್ದಾರೆ. ಮತ್ತೆ ನೀರು ಬಿಡಲು ಆದೇಶ ನೀಡಿದರೆ ಕರ್ನಾಟಕ ಸರ್ಕಾರ ಸಂಕಷ್ಟಕ್ಕೆ ಸಿಲುಕಲಿದೆ.
ನಾಳೆ ನಡೆಯುವ ಬೆಂಗಳೂರು ಬಂದ್‌ಗೆ ಸಹಕಾರ ನೀಡುವ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಜೊತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದರು. ನಾಡಿದ್ದು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯಲ್ಲಿ ಜೆಡಿಎಸ್ ಶಾಸಕರು ಭಾಗಿಯಾಗುವ ಕುರಿತು ಕೂಡಾ ಮಾತುಕತೆ ನಡೆಸಿದ್ದಾರೆ. ಹೋಟೆಲ್ ಮಾಲೀಕರು ಇಡೀ ದಿನ ಬಂದ್ ಮಾಡಿ ಸಹಕಾರ ನೀಡಿ, ಇಲ್ಲದಿದ್ದರೆ ವ್ಯತಿರಿಕ್ತ ಪರಿಣಾಮವಾದರೆ ನೀವೇ ಜವಾಬ್ದಾರಿ ಎಂದರು. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಬಂದ್‌ಗೆ ಅವಕಾಶ ನೀಡುವುದಿಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸ್ವಯಂ ಪ್ರತಿಭಟನೆ ಇದು. ಅದನ್ನು ತಡೆಯಲು ಸಾಧ್ಯವಾಗುವುದಿಲ್ಲ. ಬಂದ್ ನಡೆಯಲಿದೆ ಎಂದರು.
ಆನೇಕಲ್: ಬಿಬಿಎಂಪಿ ಚುನಾವಣೆ ವಿಚಾರ ನ್ಯಾಯಾಲಯದಲ್ಲಿದೆ. ನಾಳೆಯೇ ಚುನಾವಣೆ ನಡೆಸುವಂತೆ ಆದೇಶಿಸಿದರೆ ಚುನಾವಣೆ ನಡೆಸಲು ಸರ್ಕಾರ ಸಿದ್ಧ ಎಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಕಾವೇರಿ ನೀರಿಗಾಗಿ ನಾಳೆ ಬೆಂಗಳೂರು ನಗರ ಬಂದ್‌ಗೆ ಕರೆ ನೀಡಲಾಗಿದ್ದು, ಜೆಡಿಎಸ್ನ ಬೆಂಗಳೂರು ನಗರ ಘಟಕದಿಂದ ನಾಳೆ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನ ಜೆ.ಪಿ.ಭವನದಿಂದ ಟೌನ್ಹಾಲ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 10:30ಕ್ಕೆ ಮೆರವಣಿಗೆ ಆರಂಭವಾಗಲಿದೆ.
ದೇವನಹಳ್ಳಿ: ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ. ಆದರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎಂದಿನಂತೆ ಶಾಲಾ ಕಾಲೇಜು ನಡೆಯಲಿವೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಎಂದಿನಂತೆ ಶಾಲಾ ಕಾಲೇಜು ಹಾಗೂ ಕಛೇರಿಗಳ ನಿರ್ವಹಣೆ ಮಾಡಲಿದ್ದು, ಸರ್ಕಾರಿ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಇಲ್ಲ. ಬಂದ್ ಬಿಸಿ ನೊಡಿಕೋಂಡು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಜಿಲ್ಲೆಯಲ್ಲಿ ಬಸ್ ಸಂಚಾರವು ಯಥಾಸ್ಥಿತಿ ಇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚರಿಕೆಯಾಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಟಿವಿ9ಗೆ ಬೆಂಗಳೂರು ಗ್ರಾಮಾಂತರ ಡಿಸಿ ಶಿವಶಂಕರ್ ಹೇಳಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ನಾಳೆ ಬೆಂಗಳೂರು ಬಂದ್‌ಗೆ ಕರೆ ಹಿನ್ನೆಲೆ ಕಾನೂನು ವಿಶ್ವವಿದ್ಯಾಲಯದ ನಾಳಿನ ಎಲ್ಲಾ ಪರೀಕ್ಷೆಗಳು ಮುಂದೂಡಿಕೆಯಾಗಿದೆ. ನಾಳೆ ನಿಗದಿಯಾಗಿದ್ದ ಪರೀಕ್ಷೆಗಳು ಅಕ್ಟೋಬರ್ 8ಕ್ಕೆ ಮುಂದೂಡಿ ಕರ್ನಾಟಕ ರಾಜ್ಯ ಕಾನೂನು ವಿವಿ ಮೌಲ್ಯಮಾಪನ ಕುಲಸಚಿವರು ಆದೇಶ ಹೊರಡಿಸಿದ್ದಾರೆ. ಉಳಿದ ಪರೀಕ್ಷೆಗಳು ಯಥಾ ರೀತಿ ನಡೆಯಲಿವೆ ಎಂದು ಉಲ್ಲೇಖಿಸಲಾಗಿದೆ.
ತಮಿಳುನಾಡಿನ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ನಾಳೆ ಬೆಂಗಳೂರು ಬಂದ್‌ಗೆ ಕರೆ ಕೊಟ್ಟಿರುವ ಹಿನ್ನೆಲೆ ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಎಂ ಕಾರಜೋಳ, ಶಾಸಕರಾದ ಉದಯ ಗರುಡಾಚಾರ್
ಮುನಿರತ್ನ, ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.
ಧಾರವಾಡ: ಬೆಳೆ ಹಾನಿ ವಿಮೆ ಪರಿಹಾರ ತಾರತಮ್ಯ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಚಿವ ಸಂತೋಷ ಲಾಡ್, ವಿಮೆ ಬಗ್ಗೆ ಹೇಳುತ್ತಿದ್ದೀರಿ, ವಿಮೆ ಕಂಪನಿಗಳು ಮಾಡಿದ ಲಾಭ ಎಷ್ಟು? ಬಹಳ ಬಿಜೆಪಿ ಹೋರಾಟಗಾರರು ಆರೋಪ ಮಾಡುತ್ತಾರೆ. ಆದರೆ ಇದನ್ನೆಲ್ಲ ಬಿಜೆಪಿ ಖಾಸಗೀಕರಣ ಮಾಡಿತು. ಇದರಿಂದಾಗಿ ವಿಮೆ ಕಂಪನಿಗಳು ಸಾವಿರಾರು ಕೋಟಿ ಲಾಭ ಮಾಡಿಕೊಂಡಿವೆ. ಈ ಬಗ್ಗೆ ಸಮಗ್ರವಾಗಿ ಚರ್ಚೆ ಆಗಬೇಕಿದೆ. ವಿಮೆ ಕಂಪನಿಗಳು ಲಾಭದ ಬಗ್ಗೆ ಬಿಜೆಪಿಯವರನ್ನು ಕೇಳಬೇಕು. ಈ ಬಗ್ಗೆಯೂ ನಮ್ಮಲ್ಲಿ ಚರ್ಚೆ ಆಗಬೇಕಿದೆ ಎಂದರು.
ಧಾರವಾಡ: ಕಾವೇರಿ ವಿಚಾರವಾಗಿ ಸೆಪ್ಟೆಂಬರ್ 29ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿದ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ್ ಲಾಡ್, ನ್ಯಾಯಯುತ ಬೇಡಿಕೆಗಾಗಿ ಕರೆ ನೀಡಿರುವ ಬಂದ್ ಕರೆ ಸ್ವಾಗತಿಸುವೆ. ಕಾವೇರಿ ನೀರಿನ ವಿಚಾರದಲ್ಲಿ ಶಾಂತಿಯುತ ಹೋರಾಟ ನಡೆಸಲಿ. ನೆಲ, ಜಲ, ಭಾಷೆ ವಿಚಾರ ಬಂದಾಗ ಹೋರಾಟ ನಡೆಸುವ ಹಕ್ಕಿದೆ. ಕನ್ನಡ ಪರ ಸಂಘಟನೆಗಳಿಗೆ ಹೋರಾಟ ನಡೆಸುವ ಹಕ್ಕಿದೆ. ಕೋರ್ಟ್ ಆದೇಶದ ಕಾರಣದಿಂದ ಸರ್ಕಾರ ಏನು ಮಾಡಲಾಗಲ್ಲ ಎಂದರು.
ಚಾಮರಾಜನಗರ: ನಮ್ಮ ಜಲಾಶಯಗಳನ್ನು ನೋಡಿ ಆದೇಶ ನೀಡಬೇಕಿತ್ತು. ದೆಹಲಿಯಲ್ಲಿ ಕೂತು ತೀರ್ಮಾನ ಮಾಡೋದಲ್ಲ ಎಂದು ಕಾವೇರಿ ನದಿ ನೀರು ಪ್ರಾಧಿಕಾರದ ವಿರುದ್ದ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಕಿಡಿಕಾರಿದರು. ಪ್ರಾಧಿಕಾರ ನೀಡಿರುವ ಆದೇಶ ಅವೈಜ್ಞಾನಿಕ ಇದೇನು ಹೊಸ ಕೇಸ್ ಅಲ್ಲ. ನೀರು ಬಿಡೋದು ಸಂತೋಷದ ವಿಚಾರ ಅಲ್ಲ. ಸುಪ್ರೀಂ ಕೋರ್ಟ್, ಪ್ರಾಧಿಕಾರದ ಆದೇಶದಂತೆ ನೀರು ಬಿಡಲಾಗುತ್ತಿದೆ. 26 ನೇ ತಾರೀಕಿನ ನಂತರ ನೀರು ಬಿಡಬಾರದು ಅಂತ ತೀರ್ಮಾನ ಮಾಡುತ್ತಿದ್ದೇವೆ ಎಂದರು.
ಹಾಸನ: ಕಾವೇರಿ ನೀರು ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಎಚ್ಡಿ ರೇವಣ್ಣ, ನಿಮಗೆ 135 ಸೀಟ್ ಬಂದಿದೆ ಎಂದು ತಮಿಳುನಾಡು ಅಡ್ಜಸ್ಟ್ ಮಾಡಿಕೊಂಡಿದ್ದಾರೆ. ತಮಿಳುನಾಡಿಗೆ ಬಿಡುತ್ತಿರುವ ನೀರು ನಿಲ್ಲಿಸಿ ಎಂದು ನಾನು ಹೇಳೋದಿಲ್ಲ. ಹಾಗೆ ಹೇಳಿ ನಮ್ಮ ಮೇಲೆ ಕಂಟೆಪ್ಟ್ ಆಫ್ ಕೋರ್ಟ್ ಕೇಸ್ ಹಾಕಿದರೆ ಏನು ಮಾಡೋಣ? ಕೋರ್ಟ್ ಫೀಝ್ ಕೊಡೋರು ಯಾರು? ಹಾಗಾಗಿ ಸರ್ಕಾರ ರೈತರಿಗೆ ಬೆಳೆ ಪರಿಹಾರ ನೀಡಿ ಎಂದು ಆಗ್ರಹಿಸುತ್ತೇನೆ. ಕಾವೇರಿ ನೀರು ಹಂಚಿಕೆ ವಿವಾದದ ಬಗ್ಗೆ ಚರ್ಚೆ ಮಾಡಲು ವಿದಾನಸಭೆ ಅದಿವೇಶನ ಮಾಡಿ. ಬರೀ ಸಿಎಂ ಮಾಜಿ ಸಿಎಂ ಕರೆದು ಸಭೆ ಕರೆಯುತ್ತಾರೆ. ಅವರು ಉಪ್ಪಿಟ್ಟು ಕಾಫಿ ಕುಡಿದು ಬರುತ್ತಾರೆ. ಹಾಗಾಗಿ ಈ ಭಾಗದ ಶಾಸಕರ ಸಭೆ ಕರೆಯಬೇಕು ಎಂದು ಒತ್ತಾಯಿಸಿದರು.
ನಾಳೆ ಕಾವೇರಿ ವಿಚಾರವಾಗಿ ಬಂದ್‌ಗೆ ಕರೆ ನೀಡಿದ ವಿಚಾರವಾಗಿ ಮಾತನಾಡಿದ ಮಾಜಿ ಸಚಿವ ಗೋವಿಂದ ಎಂ ಕಾರಜೋಳ, ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಮಾತೆತ್ತಿದರೆ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಅಂತಾರೆ. ಕೋರ್ಟ್ ಆದೇಶ ಇದ್ದಾಗ ಪ್ರಧಾನಿ ಮಧ್ಯಪ್ರವೇಶ ಮಾಡಲಾಗಲ್ಲ. ಕೋರ್ಟಿನಲ್ಲಿ ಪ್ರಬಲವಾಗಿ ವಾದ ಮಂಡಿಸುವುದರಲ್ಲಿ ಸರ್ಕಾರ ವಿಫಲವಾಗಿದೆ. ಜನ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿದ್ದಾರೆ. ನಾಳೆ ನಡೆಯುವ ಬಂದ್‌ಗೆ ನಮ್ಮ ಬೆಂಬಲ ಇದೆ ಎಂದರು.
ಕಾವೇರಿ ವಿಚಾರವಾಗಿ ಕರೆ ನೀಡಲಾಗಿರುವ ಬಂದ್‌ಗೆ ಹೋಟೆಲ್ ಮಾಲೀಕರ ನಡುವೆಯೇ ಒಮ್ಮತ ಮೂಡಿಬಂದಿಲ್ಲ. ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘವು ನಾಳೆಯ ಬಂದ್‌ಗೆ ಬೆಂಬಲ ಸೂಚಿಸಿದರೆ, ಬೆಂಗಳೂರು ಹೋಟೆಲ್ ಮಾಲೀಕರ ಸಂಘ 29 ರಂದು ನಡೆಯುವ ಬಂದ್‌ಗೆ ಬೆಂಬಲ ಸೂಚಿಸಿದೆ.
ನಾಳಿನ ಬೆಂಗಳೂರು ಬಂದ್‌ಗೆ ಬೆಂಬಲ ನೀಡುವಂತೆ ವಾಹನ ಸವಾರರಿಗೆ ಬಿತ್ತಿ ಪತ್ರ ಹಂಚಿಕೆ ಮಾಡಲಾಗುತ್ತಿದೆ. ಫ್ರೀಡಂ ಪಾರ್ಕ್ನಲ್ಲಿ ಸುತ್ತ – ಮುತ್ತ ಬಿತ್ತಿ ಪತ್ರ ಹಂಚಿಕೆ ಮಾಡಲಾಗುತ್ತಿದೆ.
ಹಾವೇರಿ: ಜನತಾ ದರ್ಶನ ಬಳಿಕ ಮಾತನಾಡಿದ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಜನತಾ ದರ್ಶನದಲ್ಲಿ ಬಹಳಷ್ಟು ಜನರು ಅಹವಾಲು ನೀಡಿದ್ದಾರೆ. ಅದರಲ್ಲಿ ಪರಿಹಾರದ ಬಗ್ಗೆಯೆ ಅರ್ಜಿಯನ್ನು ನೀಡಿದ್ದಾರೆ. ರಾಜ್ಯಾದಲ್ಲಿಯೇ ಹಾವೇರಿ ಜಿಲ್ಲೆಗೆ ಅತಿ ಹೆಚ್ಚು ಬೆಳೆವಿಮೆ ಪರಿಹಾರ ಘೋಷಣೆಯಾಗಿದೆ. ರಾಜ್ಯದಲ್ಲಿ ನಮ್ಮ ಜಿಲ್ಲೆಯ ಅರ್ಜಿಯೆ ಮೊದಲು ಪ್ರೊಸೆಸ್ ಆಗಿದೆ. ಇದಕ್ಕೆ ನಮ್ಮ ಮೂರು ಇಲಾಖೆಯ ಅಧಿಕಾರಿಗಳ ಕೆಲಸವು ಕಾರಣ. ಜಿಲ್ಲೆಯ ರೈತರಿಗೆ ಈ ಸುದ್ದಿ ಹೋಗಬೇಕಾಗಿದೆ. ಎಲ್ಲಿ ನಮಗೆ ಪರಿಹಾರ ಸಿಗುತ್ತೊ ಇಲ್ವೊ ಎಂಬ ಭಯವಿತ್ತು. ಮೆಕ್ಕೆಜೋಳ,ಶೇಂಗಾ,ಹತ್ತಿ ಬೆಳೆಗಳಿಗೆ ಪರಿಹಾರ ಘೋಷಣೆ ಮಾಡಲಾಗಿದೆ. ಮೂರು ತಾಲೂಕುಗಳನ್ನ ಬರಪೀಡಿತ ತಾಲೂಕು ಘೋಷಣೆ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಲಾಗಿದೆ. ಜಿಲ್ಕೆಯ 2,35,174 ರೈತರಿಗೆ ಬೆಳೆವಿಮೆ ಪರಿಹಾರ ಸಿಗಲಿದೆ ಎಂದರು.
ಕಾವೇರಿ ನೀರು ವಿಚಾರಕ್ಕೆ ಪ್ರಧಾನಿ ಮೋದಿ ಅವರಿಗೆ ಹೆಚ್ಡಿ ದೇವೇಗೌಡ ಅವರು ಪತ್ರ ಬರೆದ ವಿಚಾರವಾಗಿ ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ, ಪತ್ರ ಬರೆದಿರುವುದನ್ನು ಸ್ವಾಗತಿಸುತ್ತೇನೆ. ಪ್ರಸ್ತುತ ಸಂದರ್ಭದಲ್ಲಿ ನಾಡಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸಲು ಮೋದಿ ಅವರು ಮಧ್ಯಸ್ಥಿಕೆ ವಹಿಸಿ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸುವುದೊಂದೇ ಪರಿಣಾಮಕಾರಿ ಮತ್ತು ಈ ಸಂದರ್ಭಕ್ಕನುಗುಣವಾದ ಪರಿಹಾರವಾಗಿದೆ. ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿಗಳಾದ ದೇವೇಗೌಡರ ಮನವಿಯನ್ನು ಪುರಸ್ಕರಿಸಿ,
ಕೂಡಲೇ ಮಾತುಕತೆಗೆ ಆಹ್ವಾನಿಸುತ್ತಾರೆಂದು ನಂಬಿದ್ದೇನೆ ಎಂದರು.
ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನ ಸಸ್ಪೆಂಡ್ ಮಾಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ. ಈ ವೇಳೆ ಜನಾತ ದರ್ಶನ ತಯಾರಿಗೆ ಹೋಗಿದ್ದಾರೆ ಎಂದು ಅಧಿಕಾರಿಗಳು ಸಬೂಬು ಹೇಳಿದ್ದಾರೆ. ಹಾಗಿದ್ದರೆ ಇದು ಯಾವ ಸಭೆ? ಎಂದು ಡಿಸಿಎಂ ಪ್ರಶ್ನಿಸಿದ್ದಾರೆ. ಕೋರ್ಟ್ ಕೇಸ್ ಅಟೆಂಡ್ ಆಗೋದು ಬಿಟ್ಟರೆ ಬೇರೆ ಕಾರಣಗಳಿಂದ ಗೈರಾದವರ ಬಗ್ಗೆ ಜಿಲ್ಲಾಧಿಕಾರಿಯವರಿಂದ ಮಾಹಿತಿ ಕೇಳಿದರು.
ನಾಳಿನ ಬಂದ್ ಬಗ್ಗೆ ಮುಖ್ಯಮಂತ್ರಿ ಚಂದ್ರು ಅವರು ಸರ್ಕಾರದ ಮುಂದೆ ಐದು ಒತ್ತಾಯಗಳನ್ನಿಟ್ಟಿದ್ದಾರೆ.
ಬಾಗಲಕೋಟೆ ಜಿಲ್ಲೆ ರಬಕವಿಬನಹಟ್ಟಿ ತಾ.ತೇರದಾಳ ಪಟ್ಟಣದಲ್ಲಿ ಕಳಪೆ ಗುಣಮಟ್ಟದ ಆಹಾರ ಸವಿದು ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಆಹಾರ ಸವಿದು ಭಾಗೀರಥಿ ಕಾಂಬಳೆ ಎಂಬ ಗರ್ಭಿಣಿ ಅಸ್ವಸ್ಥಗೊಂಡಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ ಗರ್ಭಿಣಿಗೆ ನೀಡಿದ್ದ ಆಹಾರದಲ್ಲಿ ಹುಳುಗಳಿದ್ದವು. ಅತ್ಯಂತ ಕಳಪೆ ಗುಣಮಟ್ಟದ ಆಹಾರ ನೀಡಿದ್ದೇ ಇದಕ್ಕೆಲ್ಲ ಕಾರಣ ಎಂದು ಅಂಗವಾಡಿ ಕಾರ್ಯಕರ್ತೆ ವಿರುದ್ಧ ಭಾಗೀರಥಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಗದಗ ಜಿಲ್ಲೆಯ ಮುಂಡರಗಿ ತಾಲೂಕನ್ನು ಬರ ಪೀಡಿತ ತಾಲೂಕು ಅಂತ ಘೋಷಣೆಗೆ ಒತ್ತಾಯಿಸಿ ಕೋಟೆ ಆಂಜನೇಯ ದೇವಸ್ಥಾನದಿಂದ ರೈತರು ಬೃಹತ್ ಮೆರವಣಿಗೆ ಮಾಡುತ್ತಿದ್ದಾರೆ. ಈ ವೇಲೆ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಪೊಲೀಸರು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆದಿದೆ. ತಹಶೀಲ್ದಾರ್ ಕಚೇರಿ ಆವರಣಕ್ಕೆ ಎತ್ತುಗಳ ಸಮೇತ ನುಗ್ಗಿ ರೈತರು ಅಕ್ರೋಶ ಹೊರ ಹಾಕಿದ್ದಾರೆ.
ಕಾವೇರಿ ನದಿ ನೀರು ಹೋರಾಟದಲ್ಲಿ ನಟರು ಭಾಗಿಯಾಗದ ಆರೋಪ ಸಂಬಂಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು. ಹೋರಾಟದಲ್ಲಿ ಭಾಗಿಯಾಗದ ನಟರ ಸಿನಿಮಾಗಳನ್ನು ಬಹಿಷ್ಕರಿಸಬೇಕು. ಕನ್ನಡ ಚಿತ್ರರಂಗದ ಮೂಲಕ ಹಣ ಮಾಡಿಕೊಂಡಿದ್ದಾರೆ, ಹೊರಬರಲಿ. ನಟ, ನಟಿಯರ ಮನೆಗೆ ಹೋಗಿ ಆರತಿ ತಟ್ಟೆ ಎತ್ತಿ ಕರೆಯೋಕೆ ಆಗಲ್ಲ. ಕಾವೇರಿ ನೀರಿನ ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಭಾಗಿಯಾಗಲಿ. ಕಾವೇರಿ ತೀರದ ಭಾಗದವರೇ ಹೆಚ್ಚಿನವರು ಕನ್ನಡ ಚಿತ್ರರಂಗದಲ್ಲಿದ್ದಾರೆ. ಉತ್ತರ ಕರ್ನಾಟಕ ಭಾಗದವರಿಗೆ ಕೇವಲ ಹಾಸ್ಯ ಪಾತ್ರ ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ಸೆ.29ರಂದು ಕರ್ನಾಟಕ ಬಂದ್ ಮಾಡಲು ನಿರ್ಧಾರ ಮಾಡಿರುವುದಾಗಿ ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳಿಗೆ ಆಗ್ರಹಿಸಿ ರಾಜ್ಯದ ಹಿತಕ್ಕಾಗಿ ಸೆ.29ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿವಾದ, ಮಹದಾಯಿ ಯೋಜನೆ, ಕೃಷ್ಣಾನದಿ ಯೋಜನೆ ಸೇರಿದಂತೆ ಎಲ್ಲ ಯೋಜನೆಗಳ ವಿಚಾರವಾಗಿ ಸೆ.29ರಂದು ಕರ್ನಾಟಕ ಬಂದ್‌ಗೆ ಘೋಷಿಸಿದ್ದಾರೆ. ಎಲ್ಲರೂ ಸಹಕಾರ ನೀಡಬೇಕು. ಸೆ.29ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜನೆ ಮಾಡಲಾಗುತ್ತೆ ಎಂದರು.
ನಾಳೆ ಬೆಂಗಳೂರು ಬಂದ್‌ಗೆ ಓಲಾ ಉಬರ್ ಬೆಂಬಲವಿಲ್ಲ. ಆಟೋ ಸಂಘಟನೆಗಳು ಹಾಗೂ ಓಲಾ, ಉಬರ್ ಸಂಘ ಬೆಂಗಳೂರು ಬಂದ್‌ಗೆ ಬೆಂಬಲ ವಾಪಸ್ ಪಡೆದಿವೆ. ಸೆ.29ರ ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಲು ನಿರ್ಧಾರ ಎಂದು ಬೆಂಗಳೂರಿನಲ್ಲಿ ಓಲಾ ಉಬರ್ ಸಂಘಟನೆ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.
ಒಕ್ಕೂಟ ವ್ಯವಸ್ಥೆ ಬಗ್ಗೆ ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ ಎಂದು ಮಂಡ್ಯದಲ್ಲಿ ಕಾಂಗ್ರೆಸ್ಗೆ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ತಿರುಗೇಟು ಕೊಟ್ಟಿದ್ದಾರೆ. ನೀರು ಬಿಟ್ಟ ನಂತರ ಸಿಎಂ ಸಿದ್ದರಾಮಯ್ಯ ಸಂಸದರ ಸಭೆ ಕರೆಯುತ್ತಾರೆ. ಎಲ್ಲ ವಿಚಾರದಲ್ಲೂ ಬೂಟಾಟಿಕೆ ಇದೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಮೈಸೂರು ನಗರದಲ್ಲೂ ಕಾವೇರಿ ಹೋರಾಟ ತೀವ್ರಗೊಂಡಿದೆ. ಮೈಸೂರು ನಗರದ ಕಾಡಾ ಕಚೇರಿ ಬಳಿ ಕಾವೇರಿ ನದಿ ನೀರು ಹೋರಾಟಕ್ಕೆ ಸಾಹಿತಿಗಳು ಸಾಥ್ ಕೊಟ್ಟಿದ್ದಾರೆ. ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಪ್ರೊ.ಕೆ.ಎಸ್.ಭಗವಾನ್, ಲತಾ ರಾಜಶೇಖರ್ ಸೇರಿ ಹಲವರು ಭಾಗಿಯಾಗಿದ್ದಾರೆ. ರಾಜ್ಯಕ್ಕೆ ಕೇಂದ್ರ ಹಾಗೂ ನ್ಯಾಯಾಲಯ ತೆಂಗಿನ ಚಿಪ್ಪು ನೀಡಿದೆ. ಜೀವ ಇರುವಾಗ ಜೀವನ ಕೊಡಿ, ಸತ್ತ ಮೇಲೆ ಪರಿಹಾರ ಏಕೆ? ಎಂದು ತೆಂಗಿನ ಚಿಪ್ಪು ಹಿಡಿದು ಘೋಷಣೆ ಕೂಗಿ ಸಾಹಿತಿಗಳು ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಪ್ರತಿಭಟನಾಕಾರರು ಖಾಲಿ ಕೊಡ ತಲೆ ಮೇಲೆ ಹೊತ್ತು ಪ್ರತಿಭಟನೆ ನಡೆಸಿದರು. ಖಾಲಿ ಕೊಡಕ್ಕೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭಾವಚಿತ್ರ ಅಂಟಿಸಿ ಆಕ್ರೋಶ ಹೊರ ಹಾಕಿದ್ದಾರೆ. ಇನ್ನು ರೈಲ್ವೇ ನಿಲ್ದಾಣ ಮುತ್ತಿಗೆ ಹಾಕಲು ಮುಂದಾಗಿದ್ದು ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು ನಗರ ಬಂದ್, ಕರ್ನಾಟಕ ಬಂದ್ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಪ್ರತಿಭಟನೆ ಮಾಡೋಕೆ, ರಾಜ್ಯದ ಹಿತ ಕಾಪಾಡೋಕೆ ಸಹಕಾರ ಕೊಡ್ತೀವಿ. ನಮ್ಮ ನೆಲ, ಜಲ, ಭಾಷೆ ವಿಚಾರದಲ್ಲಿ ಪಕ್ಷಾತೀತ ಹೋರಾಟ ಅಗತ್ಯ. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕಾವೇರಿ ನದಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶಿಸಬೇಕು ಎಂದು ಮಡಿಕೇರಿಯಲ್ಲಿ ಸಣ್ಣ ನೀರಾವರಿ ಸಚಿವ ಬೋಸರಾಜು ಹೇಳಿಕೆ ನೀಡಿದ್ದಾರೆ. ಕಾವೇರಿ ನದಿ ನೀರು ವಿಚಾರವಾಗಿ ರಾಜ್ಯದ ಸಂಸದರು ಮಾತಾಡಲಿ. ಕಾವೇರಿ ನದಿ ಸಂಬಂಧ ಪ್ರಧಾನಿ ಮೋದಿ ಸರ್ವಪಕ್ಷ ಸಭೆ ಕರೆಯಲಿ. ಕಾವೇರಿ ನೀರು ವಿಚಾರದಲ್ಲಿ ಎಲ್ಲರೂ ಪಕ್ಷಾತೀತವಾಗಿ ಹೋರಾಡಬೇಕು ಎಂದರು.
ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿ ರಾಮನಗರದಲ್ಲಿ ಸಾರಿಗೆ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದರು. ಭಾಷೆ, ಜಲದ ವಿಚಾರದಲ್ಲಿ ಅನ್ಯಾಯವಾದಾಗ ಪ್ರತಿಭಟನೆಗಳು ಸಹಜ. ಹೋರಾಟಗಾರರಿಗೆ ನಮ್ಮಿಂದ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಕಳೆದ ವರ್ಷ 660 ಟಿಎಂಸಿ ನೀರು ತಮಿಳುನಾಡಿಗೆ ನಾವು ಬಿಟ್ಟಿದ್ದೇವೆ. ರಾಜ್ಯದಲ್ಲಿ ಮಳೆ ಇಲ್ಲ, ಮಾನಿಟರಿಂಗ್ ವಿಂಗ್ಗೆ ಎಲ್ಲವೂ ಗೊತ್ತಿದೆ. ‘ಸುಪ್ರೀಂ’ಗೂ ನೀರಿಲ್ಲದಿರುವ ಬಗ್ಗೆ ಮಾಹಿತಿ ಇದ್ದರೂ ಸ್ಟೇ ನೀಡಿಲ್ಲ. ಪ್ರಧಾನಿ ಮೋದಿಗೆ ಮಾಹಿತಿ ಇದ್ದರೂ ಮಧ್ಯಪ್ರವೇಶ ಮಾಡುತ್ತಿಲ್ಲ. ರಾಜ್ಯ ಬಿಜೆಪಿ ನಾಯಕರು ಮೋದಿಗೆ ಮನವರಿಕೆ ಮಾಡಿಕೊಡಬೇಕಿತ್ತು. ಆದರೆ ಬಿಜೆಪಿಯವರು ಆರೋಪ ಮಾಡುವುದಲ್ಲೇ ತಲ್ಲೀನರಾಗಿದ್ದಾರೆ. ಯಾವುದೇ ವರ್ಗಕ್ಕೆ ಮೋಸ ಮಾಡುವ ಉದ್ದೇಶ ಕಾಂಗ್ರೆಸ್ಗೆ ಇಲ್ಲ. ನಾವು ನೀಡಿರುವ ಎಲ್ಲ ಭರವಸೆ ಈಡೇರಿಸಿದ್ದೇವೆ. ಮೋಸ ಮಾಡುವುದು ಬಿಜೆಪಿಯವರ ರಕ್ತದಲ್ಲಿಯೇ ಇದೆ ಎಂದರು.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದ ಇಂದಿನ ನೀರಿನ ಮಟ್ಟ 96.70 ಅಡಿ ಇದೆ.
ಕೆಆರ್ಎಸ್ ಜಲಾಶಯದ ಗರಿಷ್ಠಮಟ್ಟ 124.80 ಅಡಿ
ಒಳಹರಿವು 5993 ಕ್ಯೂಸೆಕ್, ಹೊರಹರಿವು 6716 ಕ್ಯೂಸೆಕ್
ನಾಳೆ ಬೆಂಗಳೂರು ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ. ಬಂದ್‌ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ, KSRTC ಸಿಬ್ಬಂದಿ ಮತ್ತು ಕಾರ್ಮಿಕ ಒಕ್ಕೂಟ, ಕರ್ನಾಟಕ ಚಾಲಕರ ಒಕ್ಕೂಟ, ಸಾರಿಗೆ ನಿಗಮಗಳ ನೌಕರರ ಸಮಾನ ಮನಸ್ಕರ ವೇದಿಕೆ, ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ಬಂದ್‌ಗೆ ಬೆಂಬಲಿಸಿವೆ.
ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ಖಂಡಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಹೋರಾಟಕ್ಕೆ ಹಿರಿಯ ನಟಿ ಲೀಲಾವತಿ ಅವರು ಕೂಡ ಬೆಂಬಲ ಸೂಚಿಸಿದ್ದಾರೆ. ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ಹೋರಾಟಕ್ಕೆ ಲೀಲಾವತಿ ಬೆಂಬಲ ನೀಡಿದ್ದಾರೆ. ಇಂದಿನ ಹೋರಾಟದಲ್ಲಿ ಹಿರಿಯ ನಟಿ ಲೀಲಾವತಿ ಭಾಗಿಯಾಗುವ ಸಾಧ್ಯತೆ ಇದೆ.
ಶಿವಮೊಗ್ಗ ಜಿಲ್ಲೆ ಭದ್ರಾ ಡ್ಯಾಂನಿಂದ ಕಾಲುವೆಗೆ ನೀರು ಸ್ಥಗಿತ ವಿಚಾರಕ್ಕೆ ಸಂಬಂಧಿಸಿ ದಾವಣಗೆರೆ ನಗರ ಬಂದ್ ಮಾಡಿ ಭಾರತೀಯ ರೈತ ಒಕ್ಕೂಟ ಪ್ರತಿಭಟನೆ ನಡೆಸಿದೆ. ಕೆಎಸ್ಆರ್ಟಿಸಿ ಬಸ್ ತಡೆದು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ದಾವಣಗೆರೆ ನಗರದ ಜಯದೇವ ಸರ್ಕಲ್ ಬಳಿ ರೈತರು ಪ್ರತಿಭಟನೆ ಮಾಡಿದ್ದು ಭದ್ರಾ ಕಾಲುವೆಗೆ ನೀರು ಹರಿಸುವುದಾಗಿ ಲಿಖಿತ ಆದೇಶ ಹೊರಡಿಸಲು ಆಗ್ರಹಿಸಿದ್ದಾರೆ.
ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿ.ಕೆ ಶಿವಕುಮಾರ್ ಇಂದು ಬೆಂಗಳೂರಿನಲ್ಲಿ ಜನತಾ ದರ್ಶನ ನಡೆಸಲಿದ್ದಾರೆ. ಆನೇಕಲ್ ಟೌನ್ ಮತ್ತು ತಾಲ್ಲೂಕು ಭಾಗದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಜನತಾ ದರ್ಶನ ನಡೆಸಲಿದ್ದಾರೆ. ಆನೇಕಲ್ ನ ಹೊಸ ಮಾಧ್ಯಮಿಕ ಪಾಠ ಶಾಲೆಯ ಆಟದ ಮೈದಾನದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಲಿದೆ.
ಹಾಸನದ ಗೊರೂರು ಸಮೀಪದ ಹೇಮಾವತಿ ಜಲಾಶಯದ ನೀರಿನ ಮಟ್ಟ ಹೀಗಿದೆ.
ಇಂದಿನ ನೀರಿನ ಮಟ್ಟ – 2896.90 ಅಡಿ, ಜಲಾಶಯದ ಗರಿಷ್ಠ ನೀರಿನ ಮಟ್ಟ – 2922 ಅಡಿ, ಒಟ್ಟು ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ, ಇಂದಿನ ಸಂಗ್ರಹ ಸಾಮರ್ಥ್ಯ – 17.904 ಟಿಎಂಸಿ, ಬಳಕೆಗೆ ಲಭ್ಯವಿರುವ ನೀರು – 13.565 ಟಿಎಂಸಿ, ಒಳಹರಿವು – 2704 ಕ್ಯೂಸೆಕ್, ಹೊರಹರಿವು – 1300 ಕ್ಯೂಸೆಕ್
ಇಂದು ರಾಜ್ಯಾದ್ಯಂತ ಜನತಾ ದರ್ಶನ ಕಾರ್ಯಕ್ರಮ ಹಿನ್ನೆಲೆ ಮಂಡ್ಯ ಜಿಲ್ಲೆಯಲ್ಲಿ ಜನತಾ ದರ್ಶನ ಆಯೋಜನೆ ಮಾಡಲಾಗಿದೆ. ಮಳವಳ್ಳಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಜನತಾ ದರ್ಶನ ಶುರುವಾಗಲಿದೆ. ಸಾಕಷ್ಟು ಪ್ರಮಾಣದಲ್ಲಿ ಸಿಎಂ ಕಚೇರಿಗೆ ಜನರ ಸಮಸ್ಯೆಗಳಿಂದ ದೂರು ಬಂದ ಹಿನ್ನಲೆ ಜಿಲ್ಲಾ ಮಟ್ಟದಲ್ಲೆ ಜನರ ಸಮಸ್ಯೆಗಳನ್ನ ಪರಿಹರಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ರೈತ ಮುಖಂಡ ಕುರಬೂರು ಶಾಂತಕುಮಾರ್ ಅವರು ಬೆಂಗಳೂರು ಬಂದ್ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ನೂರಾರು ಸಂಘ ಸಂಸ್ಥೆಗಳು ಬಂದ್‌ಗೆ ಬೆಂಬಲ ಕೊಟ್ಟಿದೆ. ಸಂಪೂರ್ಣ ಬಂದ್ ಮಂಗಳವಾರ ನಡೆಯಲಿದೆ. ಟೌನ್ ಹಾಲ್ ಮೂಲಕ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗ ರ್ಯಾಲಿ ನಡೆಯಲಿದೆ. 26ರ ಬಂದ್‌ಗೆ ಬೆಂಬಲ ಕೊಡಲು ವಾಟಳ್‌ಗೆ ಹೇಳಿದ್ದೇವೆ ಎಂದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2023 ಹಿನ್ನೆಲೆ ಇಂದು ದಸರಾ ಗಜಪಡೆಗೆ ಮತ್ತೊಂದು ಹಂತದ ತಾಲೀಮು ನಡೆಯಲಿದೆ. ಕ್ಯಾಪ್ಟನ್ ಅಭಿಮನ್ಯು ಆನೆಗೆ ಹೆಚ್ಚಿನ ತೂಕ ಹೊರಿಸಿ ತಾಲೀಮು ನಡೆಸಲಾಗುತ್ತೆ. ಜಂಬೂಸವಾರಿಯಲ್ಲಿ 750 ಕೆಜಿ ತೂಕದ ಅಂಬಾರಿ ಹೊತ್ತು ಅಭಿಮನ್ಯು ಸಾಗಲಿದ್ದಾನೆ ಹೀಗಾಗಿ ಇಂದು ಶೇ.75ರಷ್ಟು ತೂಕ ಹೊರಿಸಿ ಕ್ಯಾ.ಅಭಿಮನ್ಯು ಆನೆಯಿಂದ ತಾಲೀಮು ನಡೆಸಲಾಗುತ್ತೆ.
ತುಮಕೂರಿನ ಕ್ಯಾತ್ಸಂದ್ರದ ಜಾಸ್ ಟೋಲ್ ಬಳಿ ಕ್ಯಾತ್ಸಂದ್ರ ಸಿಪಿಐ ರಾಮ್ ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅಫೀಮು ವಶಕ್ಕೆ ಪಡೆಯಲಾಗಿದೆ. ಖಾಸಗಿ ಬಸ್ನಲ್ಲಿ ಅಫೀಮು ಸಾಗಿಸುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೂವರು ಆರೋಪಿಗಳ ಬಂಧನವಾಗಿದ್ದು 300 ಗ್ರಾಮ್ ಅಫೀಮು ವಶಕ್ಕೆ ಪಡೆಯಲಾಗಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ನಾಳೆ ಮೈಸೂರು ಜಿಲ್ಲೆ ಟಿ.ನರಸೀಪುರ ಪಟ್ಟಣ ಬಂದ್‌ಗೆ ಕರೆ ನೀಡಲಾಗಿದೆ. ಟಿ.ನರಸೀಪುರದ ಕಬಿನಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ ಮಾಡಲಾಗಿದ್ದು ನಾಳೆ ಬಂದ್‌ಗೆ ಕಾವೇರಿ ಕಬಿನಿ ಹಿತರಕ್ಷಣಾ ಸಮಿತಿ ಕರೆ ಕೊಟ್ಟಿದೆ. ರಾಜ್ಯ ರೈತ ಸಂಘ, ಕಬ್ಬು ಬೆಳೆಗಾರರ ಸಂಘ, ಕನ್ನಡಪರ ಸಂಘಟನೆ, ವರ್ತಕರು ಸೇರಿ 20ಕ್ಕೂ ಹೆಚ್ಚು ಸಂಘಟನೆಗಳು ಭಾಗಿಯಾಗಲಿವೆ.
ಸೆ.29ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ನೀಡುವ ವಿಚಾರಕ್ಕೆ ಸಂಬಂಧಿಸಿ ಬಂದ್ ಬಗ್ಗೆ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಬೆಳಗ್ಗೆ 11ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ. ಕಾವೇರಿ ನದಿ ನೀರು ವಿಚಾರವಾಗಿ ಬಂದ್‌ಗೆ ಕರೆ ನೀಡುವ ಬಗ್ಗೆ ಎಲ್ಲಾ ಸಂಘಟನೆಗಳ ಬಗ್ಗೆ ಚರ್ಚೆ ನಡೆಯಲಿದೆ. ಸಭೆ ಬಳಿಕ ಕನ್ನಡ ಒಕ್ಕೂಟದಿಂದ ಬಂದ್ ಬಗ್ಗೆ ಅಧಿಕೃತ ಘೋಷಣೆ ಹೊರ ಬೀಳಲಿದೆ.
Published On - 8:00 am, Mon, 25 September 23