ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಸಂಘಟನೆಗಳು ತಮ್ಮ ಆಕ್ರೋಶ ಹೊರಹಾಕಿ ಬೆಂಗಳೂರು ಬಂದ್‌ಗೆ ಕರೆ ನೀಡಿ ಬೀದಿಗೆ ಇಳಿದಿದ್ದವು. ಸದ್ಯ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ ಹಿನ್ನೆಲೆ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ನಗರ ಬಂದ್ ಅನ್ನು ಹಿಂಪಡೆದಿದೆ. ಮತ್ತೊಂದೆಡೆ ಪ್ರಜ್ವಲ್ ರೇವಣ್ಣ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ, ತಮ್ಮ ಪ್ರಮಾಣ ಪತ್ರದಲ್ಲಿ ಆಸ್ತಿ ವಿವರ ಮುಚ್ಟಿಟ್ಟಿದ್ದಾರೆ ಎಂಬ ಆರೋಪ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣರ ಆಯ್ಕೆಯನ್ನೇ ಹೈಕೋರ್ಟ್ ಅಸಿಂಧು ಅಂತಾ ತೀರ್ಪು ನೀಡಿದೆ. ಹೀಗಾಗಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ಇನ್ನು ಇವತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಕರೆದಿದೆ. ಇಂದು ಮಧ್ಯಾಹ್ನ 2.30ಕ್ಕೆ ವರ್ಚುವಲ್ ಮೂಲಕ ಸಭೆ ನಡೆಯಲಿದೆ. ಇಂದಿನ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ಮಾಡಲಿದ್ದು, ಕಾವೇರಿ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಿದೆ. ಸಭೆಯಲ್ಲಿ ಕರ್ನಾಟಕ, ತಮಿಳುನಾಡು ಅಧಿಕಾರಿಗಳು ಭಾಗಿಯಾಗಲಿದ್ದಾರೆ. ಇದರ ಜೊತೆಗೆ ರಾಜ್ಯದ ಇಂದಿನ ಬೆಳವಣಿಗೆಗೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.
ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಒಳ್ಳೆ ದೃಷ್ಟಿಯಿಂದ ಹೇಳಿಕೆ ನೀಡಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸಂದರ್ಭದ ಅನುಸಾರವಾಗಿ ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ದಲಿತರಿಗೆ ಅವಕಾಶ ಬರುತ್ತೆ, ಹೇಳಿದ ತಕ್ಷಣ ಯಾವುದೂ ಆಗಿಲ್ಲ, ಕಾಯಬೇಕು. ಎಲ್ಲಕ್ಕಿಂತ ಪಕ್ಷ ಮುಖ್ಯ, ದಲಿತರು ಸಿಎಂ ಆಗಬೇಕೆನ್ನುವುದು ಸದ್ಯ ಚರ್ಚೆ ವಿಷಯವಲ್ಲ. ಹಾಲಿ ಸಿಎಂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆ ಹೊಸದಲ್ಲ, ವರಿಷ್ಠರು ಸರಿ ಮಾಡುತ್ತಾರೆ. ಹಿಂದೆ ಹಲವರು ಸಿಎಂ ಆಗಿದ್ದಾಗ ಪಕ್ಷ ಇಂತಹ ಸಮಸ್ಯೆ ಬಗೆಹರಿಸಿದೆ ಎಂದರು.
ತಮಿಳುನಾಡಿಗೆ ಮತ್ತೆ 5 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ಸೂಚಿಸಿರುವ ಹಿನ್ನೆಲೆ ಅನುಸರಿಸಬೇಕಾದ ಮುಂದಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಲಾಗುತ್ತಿದೆ. ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಭೆ ನಡೆಸಲಾಗುತ್ತಿದ್ದು, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯ ಸ್ವಾಮಿ, ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ನಾಗೇಂದ್ರ , ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಎಸಿಎಸ್ ರಜನೀಶ್ ಗೋಯಲ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿ ಸಂಬಂಧಪಟ್ಟ ಹಲವು ಅಧಿಕಾರಿಗಳು ಭಾಗಿಯಾಗಿದ್ದಾರೆ.
ಚಿಕ್ಕಮಗಳೂರು: ನಗರಸಭೆ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಆಜಾದ್ ಪಾರ್ಕ್ ಬಳಿ ಇರುವ ಸಾರ್ವಜನಿಕ ವ್ಯಾಯಾಮ ಶಾಲೆಗೆ ನಮೋ ಎಂದು ನಾಮಕರಣ ಮಾಡಲು ಮುಂದಾಗಿದೆ. ಇದಕ್ಕೆ ದಲಿತ ಸಂಘಟನೆಗಳಿಂದ ವಿರೋಧ ವ್ಯಕ್ತವಾಗಿದೆ. ನಮೋ ವ್ಯಾಯಾಮ ಶಾಲೆ ಎಂದು ನಾಮಫಲಕ ಹಾಕುವ ಮುನ್ನವೇ ದಲಿತ ಸಂಘಟನೆಗಳು ಜೈಭೀಮ್ ವ್ಯಾಯಾಮ ಶಾಲೆ ಎಂಬ ನಾಮಫಲಕ ಹಾಕಿವೆ. ಸದ್ಯ ಆಜಾದ್ ಪಾರ್ಕ್, ನಗರಸಭೆ ಎದುರು ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
ತಮಿಳುನಾಡಿಗೆ ನೀರುವ ಹರಿಸುವಂತೆ ಸಿಡಬ್ಲ್ಯುಆರ್ಸಿ ಹೊರಡಿಸಿದ ಆದೇಶದ ವಿರುದ್ಧ ಹಾಗೂ ಸಮಿತಿ ಮುಂದೆ ಸಮರ್ಥ ವಾದ ಮಂಡಿಸಲುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ರೈತರು ಆಕ್ರೋಶ ಹೊರಹಾಕುತ್ತಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ ರೈತರು ಹಾಗೂ ಕನ್ನಡ ಪರ ಸಂಘಟನೆಗಳು, ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಸೂಕ್ತ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಕೇಂದ್ರ ಮಲತಾಯಿ ಧೋರಣೆ ಇನ್ನೂ ಮುಂದುವರೆದಿದೆ. ಇವತ್ತು ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶ ಅವೈಜ್ಞಾನಿಕವಾಗಿದೆ. ರೈತರ ಕತ್ತು ಕೂಯ್ಯುವ ಆದೇಶ ನೀಡಿದೆ. ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದು. ಅಳಿದು ಉಳಿದ ನೀರು ಉಳಿಸಿಕೊಳ್ಳುವ ಜವಾಬ್ದಾರಿ ರಾಜ್ಯ ಸರ್ಕಾರ ಮೇಲಿದೆ. ಕೇಂದ್ರ ಸರ್ಕಾರಕ್ಕೆ ಒತ್ತಡ ರಾಜ್ಯ ಸರ್ಕಾರ ತರಬೇಕು. ಸಂಸದರು ಇಷ್ಟು ದಿನದ ಮೌನವನ್ನ ಮುರಿಯಬೇಕು. ರೈತರ ಮತದಿಂದ ಅಧಿಕಾರಕ್ಕೆ ಬಂದವರು ನೀವು. ನೀವು ತಿನ್ನುತ್ತಿರುವ ಅನ್ನ ರೈತರದ್ದು. ನಾಳೆಯಿಂದ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಯುತ್ತದೆ ಎಂದು ರೈತ ಮುಖಂಡೆ ಸುನಂದಾ ಜಯರಾಂ ಹೇಳಿದ್ದಾರೆ.
ಐದು ರೋಗಿಗಳು ಕೋಮಾಗೆ ಹೋಗಿದ್ದರೂ ಮಾಹಿತಿ ಮುಚ್ಚಿಟ್ಟ ಪ್ರಕರಣ ಸಂಬಂಧ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ನೆಫ್ರೋ ಯುರಾಲಜಿ ಸಂಸ್ಥೆಯ ಪ್ರಭಾರಿ ನಿರ್ದೇಶಕ ಡಾ.ಕೇಶವ ಮೂರ್ತಿ ವಿರುದ್ಧ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ. ನೆಫ್ರೋ ಯುರಾಲಜಿ ಸಂಸ್ಥೆಯಲ್ಲಿ ಅವ್ಯವಸ್ಥೆ, ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯ, ಹಣಕಾಸು ಅವ್ಯವಹಾರ, ಅಕ್ರಮ ಬಡ್ತಿ ಬಗ್ಗೆಯೂ ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಅಲ್ಲದೆ, ಕೂಡಲೇ ಸಂಸ್ಥೆಗೆ ಮುಖ್ಯ ಆಡಳಿತಾಧಿಕಾರಿ ನೇಮಿಸುವಂತೆಯೂ ಸೂಚನೆ ನೀಡಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಸದ್ಯಕ್ಕಿಲ್ಲ. ಸದ್ಯಕ್ಕಿಲ್ಲ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಿಗದಿ ಮಾಡಲಾಗಿದೆ. ಕರ್ನಾಟಕ CWRC ಆದೇಶ ಪಾಲಿಸದಿದ್ದರೆ ಮಾತ್ರ ಅದಕ್ಕೂ ಮುನ್ನ ಸಭೆ ನಡೆಯಲಿದೆ.
ಸಚಿವ ಡಿ ಸುಧಾಕರ್ ವಿರುದ್ಧ ಜಾತಿ ನಿಂದನೆ, ವಂಚನೆ ಪ್ರಕರಣ ದಾಖಲಾಗಿದೆ. ಹೀಗಾಗಿ ಸುಧಾಕರ್ ರಾಜೀನಾಮೆಗೆ ಒತ್ತಾಯ ತೀವ್ರಗೊಳಿಸಲು ವಿಪಕ್ಷ ಬಿಜೆಪಿ ನಿರ್ಧರಿಸಿದೆ. ನಾಳೆ ಬೆಂಗಳೂರಿನಲ್ಲಿ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮತ್ತು ಮಾಜಿ ಸಚಿವ ಗೋವಿಂದ ಕಾರಜೋಳ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.
ರಾಜ್ಯ ಸರ್ಕಾರ ಯಾವುದೇ ಕಾರಣಕ್ಕು ನೀರು ಬಿಡಬಾರದು. ನೀರನ್ನು ಬಿಟ್ಟರೆ ನಾವು ಹೋರಾಟ ಮಾಡುತ್ತೇವೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ನಮ್ಮ ಜಲಾಶಯಗಳಲ್ಲಿ ನೀರಿಲ್ಲದೆ ಬರಿದಾಗಿದೆ. ಕುಡಿಯುವ ನೀರಿಗು ಸಮಸ್ಯೆ ಇದೆ. ನಮ್ಮ ರಾಜ್ಯದ ಎಂಪಿಗಳು ಇದನ್ನು ವಿರೋಧ ಮಾಡಬೇಕು. ನೀರನ್ನು ಬಿಟ್ಟರು ನಮಗೆ ನೀರು ಕೊಟ್ಟಿಲ್ಲ ಅಂತ ತಮಿಳುನಾಡು ಹೇಳುತ್ತದೆ. ಈ ರೀತಿಯ ವಾದ ತಮಿಳುನಾಡಿದ ಹೊಸದೇನಲ್ಲ. ಯಾವುದೇ ಕಾರಣಕ್ಕು ರಾಜ್ಯ ಸರ್ಕಾರ ನೀರನ್ನು ಬಿಡಬಾರದು. ಕೇಂದ್ರ ಇಲ್ಲಿಗೆ ತಜ್ಞರ ತಂಡ ಕಳುಹಿಸಲಿ. ಇಲ್ಲಿನ ಪರಿಸ್ಥಿತಿ ಅವಲೋಕನ ಮಾಡಲಿ. ರಾಜ್ಯ ಸರ್ಕಾರ ನೀರನ್ನು ಬಿಡುವ ಪ್ರಯತ್ನ ಮಾಡಿದ್ರೆ ನಾವು ಹೋರಾಟ ಮಾಡುತ್ತೇವೆ ಎಂದರು.
ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಬಿಜೆಪಿ ಶಾಸಕ ಆರ್ ಅಶೋಕ, ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಇನ್ನೂ ಅಂತಿಮ ಆಗಿಲ್ಲ. ಸಂಸದೆ ಸುಮಲತಾ ಅವರಂತೂ ಪಟ್ಟು ಹಿಡಿದು ಕುಳಿತಿಲ್ಲ. ಹಾಸನ, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಬಗ್ಗೆ ಸಮಸ್ಯೆ ಇಲ್ಲ. ಕೆಲವರಂತೂ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಮೊದಲು ಯಾವ ಚುನಾವಣೆ ಬರುತ್ತೋ ಅದಕ್ಕೆ ಮೈತ್ರಿ ಆಗುತ್ತದೆ. ಎಲ್ಲವನ್ನೂ ಕೇಂದ್ರದ ನಾಯಕರು ತೀರ್ಮಾನ ಮಾಡಲಿದ್ದಾರೆ. ಈಗಾಗಲೇ ಕಾಂಗ್ರೆಸ್ನವರು ಬಾಯಿ ಬಡಿದುಕೊಳ್ಳುತ್ತಿದ್ದಾರೆ. ನಾವು, ಜೆಡಿಎಸ್ ಒಂದಾರೆ ಕಾಂಗ್ರೆಸ್ಗೆ ಏಕೆ ಹೊಟ್ಟೆ ಉರಿ? ಹೊಟ್ಟೆ ಉರಿ ಶುರುವಾಗಿದೆ ಅಂದರೆ ಅವರಿಗೆ ನಡುಕ ಶುರುವಾಗಿದೆ ಎಂದರ್ಥ. ಕಾಂಗ್ರೆಸ್ನವರು ಗೆಲ್ಲುವ ಕ್ಷೇತ್ರ ಒಂದು ಹೆಸರು ಹೇಳಲಿ ನೋಡೋಣ. ಮೈತ್ರಿಯನ್ನು ಜನ ಒಪ್ಪಿಕೊಂಡುಬಿಟ್ಟರೆ 28 ಕ್ಷೇತ್ರವೂ ಗೆದ್ದು ರೆಕಾರ್ಡ್ ಮಾಡುತ್ತೇವೆ ಎಂದರು.
ಬಿಜೆಪಿ-ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ವಿಚಾರವಾಗಿ ಬಿಜೆಪಿ ಶಾಸಕ ಆರ್. ಅಶೋಕ್ ಅವರಿಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ. ಎಲ್ಲವೂ ಒಳ್ಳೆಯದಾಗುತ್ತದೆ ಬ್ರದರ್, ಒಟ್ಟಿಗೆ ಕೆಲಸ ಮಾಡಿಕೊಂಡು ಹೋಗೋಣ ಎಂದು ಅಶೋಕ್ಗೆ ಕುಮಾರಸ್ವಾಮಿ ಹೇಳಿದ್ದಾರೆ. ನಿನ್ನೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪಗೆ ಕುಮಾರಸ್ವಾಮಿ ಕರೆ ಮಾಡಿ ಮಾತುಕತೆ ನಡೆಸಿದ್ದರು.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ ವಿಚಾರವಾಗಿ ಹಾಸನದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣ, ದೇವೇಗೌಡರು, ಕುಮಾರಸ್ವಾಮಿ, ಇಬ್ರಾಹಿಂ ತೀರ್ಮಾನಕ್ಕೆ ಬದ್ಧ. ಕೋಮುವಾದಿಗಳನ್ನು ದೂರ ಇಡಬೇಕು ಅಂತಾ ಹೇಳುತ್ತಾರೆ. ತುಮಕೂರಿನಲ್ಲಿ ಅವರ ಜೊತೆ ಸೇರಿ ದೇವೇಗೌಡರನ್ನು ಸೋಲಿಸಿದರು/ ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರವನ್ನು ಕೇಳಿರಲಿಲ್ಲ. ದೇವೇಗೌಡರು ಮೈಸೂರು, ಮಂಡ್ಯ ಕ್ಷೇತ್ರಗಳನ್ನು ಕೇಳಿದ್ದರು. ದೇವೇಗೌಡರನ್ನು ತುಮಕೂರಿನಲ್ಲಿ ನಿಲ್ಲಿಸಿ ಸೋಲಿಸಿದರು. ದೇವೇಗೌಡರಿಗೆ ಶಕ್ತಿ ಇಲ್ಲ ಅಂತಾ ಇಂಡಿಯಾ ಮೈತ್ರಿಕೂಟ ಸಭೆಗೆ ಕರೆದಿಲ್ಲ ಎಂದರು.
ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ವಂಚನೆ ಆರೋಪ ಸಂಬಂಧ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಮರ್ಯಾದೆಯಿಂದ ಕೆಲಸ ಮಾಡಲಿ ಅಂತಾ 135 ಸ್ಥಾನ ಗೆಲ್ಲಿಸಿದ್ದಾರೆ. ಮಚ್ಚು ಹಿಡಿದುಕೊಂಡು ಹೋಗುವ ವ್ಯಕ್ತಿಗೆ ಸಚಿವ ಸ್ಥಾನ ಕೊಟ್ಟಿದ್ದೀರಿ. ಬೇರೆ ಪಕ್ಷದವರಿಗೆ ಮಾನ ಮರ್ಯಾದೆ ಇದೆಯಾ ಅಂತಾ ಕೇಳುತ್ತೀರಾ? ನಿಮಗೇನಾದ್ರೂ ಮಾನಮರ್ಯಾದೆ ಇದೆಯಾ ಸಿದ್ದರಾಮಯ್ಯನವರೇ? ಅಧಿಕಾರಿಗಳಿಗೆ ಎಷ್ಟು ಗಂಟೆಯಲ್ಲಿ ನೀವು ದೂರವಾಣಿ ಕರೆ ಮಾಡಿದ್ದೀರಿ? ಆ ಅಧಿಕಾರಿಯನ್ನು ಮೊದಲು ಅಮಾನತು ಅಂತಾ ಮಾತನಾಡಿದ್ದೀರಿ. ಇದೇನಾ ನೀವು ದಲಿತರ ಪರ ಅಂತಾ ಹೇಳುವುದು? ದಲಿತರ ರಕ್ಷಣೆ ಅಂತಾ ಹೇಳುತ್ತೀರಿ, ಇದೇ ನೀವು ಮಾಡುವ ಕೆಲಸ. ವ್ಯವಹಾರ ಮಾಡುವಾಗ ಆ ಮಂತ್ರಿ ಯಾವ ಪಕ್ಷದಲ್ಲಿದ್ದರೋ ಗೊತ್ತಿಲ್ಲ. ಆ ಮಂತ್ರಿ ಬಿಜೆಪಿಯಲ್ಲಿದ್ದರೋ, ಕಾಂಗ್ರೆಸ್ನಲ್ಲಿ ಇದ್ದರೋ ಗೊತ್ತಿಲ್ಲ. ಇಬ್ಬರು ದಲಿತ ಮಹಿಳೆಯರ ಮೇಲೆ ಮಚ್ಚು ಹಿಡಿದು ಹೋಗಿದ್ದೀರಿ. ಮಚ್ಚು ಹಿಡಿದು ಹೋಗುವುದಕ್ಕಾ ಜನರು ವೋಟ್ ಹಾಕಿರೋದು? ಇದು ದಲಿತ ವಿರೋಧಿ, ಜನ ವಿರೋಧಿ ಸರ್ಕಾರ. ಇದೊಂದು ಧನದಾಹಿಗಳೇ ತುಂಬಿಕೊಂಡಿರುವ ಮಂತ್ರಿಮಂಡಲ ಎಂದು ಹೇಳಿದರು.
ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಆರಂಭಗೊಂಡಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯುತ್ತಿರುವ ಸಮಿತಿ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಬೆಂಗಳೂರು ನಗರದಲ್ಲಿ ಆಪರೇಷನ್ ಹಸ್ತ ವಿಚಾರಕ್ಕೆ ಸಂಬಂಧಿಸಿ ಹತಾಶೆಯಲ್ಲಿ ನಾಯಕರು ಇಂತಹ ಪ್ರಯತ್ನಕ್ಕೆ ಕೈಹಾಕುತ್ತಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ಸಂಸದ ಡಿ.ವಿ.ಸದಾನಂದಗೌಡ ತಿಳಿದರು. ಅಧಿಕಾರಕ್ಕೆ ಬಂದ 3 ತಿಂಗಳಲ್ಲೇ ಜನ ವಿರೋಧಿ ಸರ್ಕಾರವಾಗಿದೆ. ರಾಯರೆಡ್ಡಿ ಸೇರಿ ಅನೇಕರು ಸಿದ್ದರಾಮಯ್ಯ ವಿರುದ್ಧ ಮಾತಾಡ್ತಿದ್ದಾರೆ ಎಂದರು.
ಯೋಜನೆ & ಸಾಂಖ್ಯಿಕ ಸಚಿವ ಡಿ.ಸುಧಾಕರ್ ವಂಚನೆ ಆರೋಪಕ್ಕೆ ಸಂಬಂಧಿಸಿ ಟ್ವೀಟ್ ಮೂಲಕ ಸಚಿವ ಡಿ.ಸುಧಾಕರ್ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಯಾವ ಪುಡಿರೌಡಿಗಿಂತ ಕಡಿಮೆ ಇಲ್ಲ ಡಿ.ಸುಧಾಕರ್ ಗೂಂಡಾವರ್ತನೆ. ಸಿದ್ದರಾಮಯ್ಯ ಸಂಪುಟದಲ್ಲಿ ಜಾತಿ ನಿಂದಕರು, ಗೂಂಡಾಗಳೇ ಇದ್ದಾರೆ. ಸಿದ್ದರಾಮಯ್ಯಗೆ ದಲಿತರನ್ನು ಮೂಲೆಗುಂಪು ಮಾಡುವುದು ಕರಗತವಾದರೆ. ಡಿ.ಸುಧಾಕರ್ಗೆ ದಲಿತರನ್ನು ಅವಮಾನಿಸಿ ಗೂಂಡಾಗಿರಿ ಮಾಡುವ ಅಹಂ. ಸರ್ಕಾರ ಕೂಡಲೇ ಗೂಂಡಾ ಸಚಿವರ ಬಂಧಿಸಿ ರಾಜೀನಾಮೆ ಪಡೆಯಲಿ ಎಂದು ಟ್ವಿಟರ್ ಮೂಲಕ ರಾಜ್ಯ ಸರ್ಕಾರಕ್ಕೆ ರಾಜ್ಯ ಬಿಜೆಪಿ ಆಗ್ರಹಿಸಿದೆ.
ಬೆಂಗಳೂರಿನಲ್ಲಿ ವಿದೇಶಿ ಪ್ರಜೆ ಸೇರಿ 34 ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 2 ಕೋಟಿ 42 ಲಕ್ಷಕ್ಕೂ ಹೆಚ್ಚು ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 24 ಪ್ರಕರಣಗಳ ಸಂಬಂಧ 34 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೇರಳ ಮೂಲದ 15, ರಾಜ್ಯದ 10, ಬಿಹಾರದ ನಾಲ್ವರು ಆರೋಪಿಗಳು, ಒಡಿಶಾದ ಇಬ್ಬರು, ಅಸ್ಸಾಂ & ಹರಿಯಾಣ ಮೂಲದ ತಲಾ ಒಬ್ಬರು, ನೈಜೀರಿಯಾ ಪ್ರಜೆಯನ್ನು ಬಂಧಿಸಿ ಡ್ರಗ್ಸ್ ಜಪ್ತಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಆಂಧ್ರಪ್ರದೇಶದ ಚಿತ್ತೂರು ಮೂಲದ ಸೈಬರ್ ಹ್ಯಾಕರ್ನನ್ನು ಆಗ್ನೇಯ ಸೈಬರ್ ಸೆನ್ ಪೊಲೀಸರು ಬಂಧಿಸಿದ್ದಾರೆ. ಲಕ್ಷ್ಮೀಪತಿ ಬಂಧಿತ ಆರೋಪಿ. ಪೊಲೀಸರು 4.16 ಕೋಟಿ ಮೌಲ್ಯದ ಚಿನ್ನ, ಬೆಳ್ಳಿ, 11 ಲಕ್ಷ ನಗದು, 7 ಬೈಕ್ ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ವೆಬ್ಸೈಟ್, ಸರ್ವರ್ ಹ್ಯಾಕ್ ಮಾಡಿ ಕೋಟ್ಯಂತರ ರೂ. ವಂಚನೆ ಮಾಡ್ತಿದ್ದ.
ಇಷ್ಟು ಬೇಗ ಸಿದ್ದರಾಮಯ್ಯ ಸರ್ಕಾರ ಜನಪ್ರಿಯತೆ ಕಳೆದುಕೊಳ್ಳುತ್ತದೆ ಅಂತಾ ನಿರೀಕ್ಷೆ ಮಾಡಿರಲಿಲ್ಲ. ಇವತ್ತು ಮುಂದಿನ ಹೋರಾಟದ ಕುರಿತು ನಾವು ಚರ್ಚೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ B.S.ಯಡಿಯೂರಪ್ಪ ತಿಳಿಸಿದರು. ಸಿದ್ದರಾಮಯ್ಯ BJP ಸೇರಲು ಅಡ್ವಾಣಿ ಭೇಟಿಯಾಗಿದ್ದರೆಂಬ ಆರೋಪ ಸಂಬಂಧ ಮಾತನಾಡಿದ ಬಿಎಸ್ವೈ ಅದೆಲ್ಲ ಏನೂ ಇಲ್ಲ ಎಂದರು.
ಎಸ್ಐಟಿ ತಂಡ ಬಿಟ್ ಕಾಯಿನ್ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು ಬೆಂಗಳೂರಿನ 4ಕ್ಕೂ ಹೆಚ್ಚು ಕಡೆ ಸಿಐಡಿಯ ಎಸ್ಐಟಿ ತಂಡ ದಾಳಿ ನಡೆಸಿದೆ. ಶ್ರೀಕಿ, ಸುನೀಶ್ ಹೆಗ್ಡೆ, ಪ್ರಸಿದ್ದ್ ಸೇರಿ ಪ್ರಮುಖ ಮೂರು ಆರೋಪಿಗಳ ಮನೆ ಮೇಲೆ ಎಸ್ಐಟಿ ದಾಳಿ ನಡೆಸಿದೆ. ಕೋರ್ಟ್ನಿಂದ ಸರ್ಚ್ ವಾರಂಟ್ ಪಡೆದು ಸಿಐಡಿ ತಂಡ ಪರಿಶೀಲನೆ ನಡೆಸಿದೆ.
ಕಲ್ಬುರ್ಗಿಯಲ್ಲಿ ನಟ ಪ್ರಕಾಶ್ ರಾಜ್ ಸನಾತನ ಧರ್ಮದವರನ್ನು ಕಾಗೆಗಳಿಗೆ ಹೋಲಿಸಿದ್ದ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಅವರು ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಕಾಗೆಗಳಿಗೆ ಇರುವ ಸಾಮಾನ್ಯ ಬುದ್ಧಿಯೂ ಪ್ರಕಾಶ್ ರಾಜ್ಗೆ ಇಲ್ಲ. ಕಾಗೆ ಹಂಚಿಕೊಂಡು ತಿನ್ನುವ ಪಕ್ಷಿ. ಪ್ರಕಾಶ್ ರಾಜ್ ಕೆಟ್ಟದ್ದನ್ನೇ ಯೋಚನೆ ಮಾಡುವ ಪ್ರಾಣಿ. ಆ ಪ್ರಾಣಿಯ ಹೆಸರು ನಾನು ಹೇಳಲ್ಲ. ಎಲ್ಲಾ ಧರ್ಮಗಳಲ್ಲೂ ಕೆಲವು ಲೋಪಗಳಿವೆ, ಮನುಷ್ಯನಲ್ಲೂ ಕೊರತೆ ಇವೆ. ಕೆಟ್ಟದ್ದನ್ನೇ ಮಾತಾಡುವ ಪ್ರಾಣಿ ಅಂದರೆ ಅದು ಪ್ರಕಾಶ್ ರಾಜ್ ಎಂದರು.
ಸ್ವಪಕ್ಷದವರ ವಿರುದ್ಧ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿ ದಾವಣಗೆರೆ ನಗರದಲ್ಲಿ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ್ ಪ್ರತಿಕ್ರಿಯೆ ನೀಡಿದರು. ಎಂ.ಪಿ.ರೇಣುಕಾಚಾರ್ಯಗೆ ಉತ್ತರ ಕೊಡುವ ಶಕ್ತಿ ನನಗೆ ಇದೆ. ಆದ್ರೆ ಎರಡೂವರೆ ತಿಂಗಳು ಮೌನವಾಗಿರಲು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಲೋಕಸಭೆ ಚುನಾವಣೆಗೆ ಇನ್ನೂ ಆರೂವರೆ ತಿಂಗಳು ಬಾಕಿ ಇದೆ. ನಾನು ಎರಡೂವರೆ ತಿಂಗಳ ಮಾತಾಡಲ್ಲ. ಎರಡೂವರೆ ತಿಂಗಳಾದ ಬಳಿಕ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡ್ತೇನೆ ಎಂದರು.
ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾಗಿ ಮೂರು ತಿಂಗಳು ಪೂರ್ಣಗೊಂಡಿದ್ದು ವಾಯವ್ಯ ಸಾರಿಗೆ ವಿಭಾಗದಲ್ಲಿ 13.20 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. 3 ತಿಂಗಳಲ್ಲಿ ಬರೋಬ್ಬರಿ 13 ಕೋಟಿ 20 ಲಕ್ಷ ಮಹಿಳೆಯರು ಪ್ರಯಾಣಿಸಿದ್ದು 332 ಕೋಟಿ 77 ಲಕ್ಷ ಮೌಲ್ಯದ ಟಿಕೆಟ್ ಹರಿಯಲಾಗಿದೆ. 6 ಜಿಲ್ಲೆಗಳ 9 ಸಾರಿಗೆ ವಿಭಾಗದ ಟಿಕೆಟ್ ಮೌಲ್ಯ 332 ಕೋಟಿ 77 ಲಕ್ಷ.
ಬೆಂಗಳೂರಿನ ಸ್ಯಾಟ್ಲೈಟ್ ಸಮೀಪದ ಭಾರತ್ ಪೆಟ್ರೋಲ್ ಬಂಕ್ ಬಳಿ ತಮಿಳುನಾಡು ಸಾರಿಗೆ ಬಸ್ಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಬಸ್ ಚಾಲಕ ಗುಣಶೇಖರನ್ ದೂರಿನ ಮೇರೆಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೆ.11ರ ಮಧ್ಯರಾತ್ರಿ 4 ಬಸ್ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.
ಇಂದಿನಿಂದ ಟರ್ಮಿನಲ್-2ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಲಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಬಹು ನಿರೀಕ್ಷಿತ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಟರ್ಮಿನಲ್ 2ರಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಆರಂಭವಾಗಲಿದೆ. ಬೆಳಗ್ಗೆ 10.45ಕ್ಕೆ ಟರ್ಮಿನಲ್-2ಗೆ ಮೊದಲ ವಿದೇಶಿ ವಿಮಾನ ಬಂದಿಳಿಯಲಿದೆ. ಹಳೆಯ ಟರ್ಮಿನಲ್-1 ದೇಶಿಯ ವಿಮಾನಗಳ ಹಾರಾಟಕ್ಕೆ ಮೀಸಲು. 5 ಸಾವಿರ ಕೋಟಿ ವೆಚ್ಚದಲ್ಲಿ ಗಾರ್ಡನ್ ಟರ್ಮಿನಲ್ ನಿರ್ಮಾಣವಾಗಿದೆ.
ಸಾರಿಗೆ ಬಸ್, ಕಾರು ಮುಖಾಮುಖಿ ಡಿಕ್ಕಿಯಾಗಿ 9 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಬಿಲ್ಲೇನಹಳ್ಳಿ ಬಳಿ ನಡೆದಿದೆ. ಗಾಯಗೊಂಡ 9 ಜನರಿಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದೆ.
ಆರ್.ಅಶೋಕ್ ಕ್ಷೇತ್ರದಲ್ಲಿಯೇ ಡಿಕೆ ಬ್ರದರ್ಸ್ ಮೇಜರ್ ಸರ್ಜರಿಗೆ ಮುಂದಾಗಿದ್ದು ಬಿಬಿಎಂಪಿ ಮಾಜಿ ಸದಸ್ಯರ ಆಪರೇಷನ್ ಹಸ್ತ ಬಹುತೇಕ ಸಕ್ಸಸ್ ಆದಂತಿದೆ. ಬಿಜೆಪಿ ಮಾಜಿ ಕಾರ್ಪೋರೇಟರ್ಗಳು ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ. ಬಿಜೆಪಿ ಶಾಸಕ ಅಶೋಕ್ ಆಪ್ತರಾಗಿರುವ 5ಕ್ಕೂ ಹೆಚ್ಚು ಮಾಜಿ ಕಾರ್ಪೋರೇಟರ್ಗಳು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಸೆಪ್ಟೆಂಬರ್ 15ರ ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸಾದಲಿ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಶ್ರೀಗಂಧದ ತುಂಡು ಸಾಗಿಸುತ್ತಿದ್ದ ಕಾರು ಪಲ್ಟಿಯಾಗಿದ್ದು ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಗಳು, ಅಕ್ರಮವಾಗಿ ಆಂಧ್ರದಿಂದ ಬೆಂಗಳೂರಿಗೆ ರಕ್ತಚಂದನ ಸಾಗಿಸುತ್ತಿದ್ದರು.
ಬೆಂಗಳೂರಿನ ಟಿ.ದಾಸರಹಳ್ಳಿಯ ಕೆರೆ ರಸ್ತೆಯಲ್ಲಿ ಕ್ಯಾಂಟರ್ ವಾಹನ ಹರಿದು ಪೌರ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೌರ ಕಾರ್ಮಿಕ ಗಂಗಾಧರ(50) ಮೃತ ದುರ್ದೈವಿ. ಅಪಘಾತದ ಬಳಿಕ ಸ್ಥಳದಲ್ಲೇ ಕ್ಯಾಂಟರ್ ನಿಲ್ಲಿಸಿ ಚಾಲಕ ಪರಾರಿಯಾಗಿದ್ದಾನೆ. ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂಸದರಾಗಿ ಪ್ರಜ್ವಲ್ ರೇವಣ್ಣ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ
ಅರ್ಜಿ ಸಲ್ಲಿಸಲು ಪ್ರಜ್ವಲ್ ರೇವಣ್ಣ ಮುಂದಾಗಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಿದ್ದಾರೆ. ಹೈಕೋರ್ಟ್ ತನ್ನ ತೀರ್ಪಿಗೆ ತಡೆ ನೀಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಶೀಘ್ರ ಸುಪ್ರೀಂ ಕೋರ್ಟ್ ಮೊರೆ ಹೋಗಲಿದ್ದಾರೆ.
Published On - 8:00 am, Tue, 12 September 23