ನಮ್ಮ ಹಿಂದೂ ಧರ್ಮದ ವಿಷ್ಣು ಪುರಾಣದಲ್ಲೇ ಭಾರತ ಎಂದು ಉಲ್ಲೇಖವಿದೆ. ಉತ್ತರಂ ಯತ್ ಸಮುದ್ರಸ್ಯ ಹಿಮದ್ರೇಶ್ಚೈವ ದಕ್ಷಿಣಾಮ್. ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ.. ಸಮುದ್ರದ ಉತ್ತರದಲ್ಲಿ ಹಾಗೂ ಹಿಮಾಲಯದ ದಕ್ಷಿಣದಲ್ಲಿ ಯಾವ ದೇಶವಿದೆಯೋ, ಆ ದೇಶವನ್ನು ಭಾರತ ಎಂದು ಹಾಗೂ ಆ ದೇಶದ ಸಂತತಿಯನ್ನು ಭಾರತಿ ಎಂದು ಸಹ ಕರೆಯಲ್ಪಡುತ್ತದೆ. ಸದ್ಯ ಈಗ ಇಂಡಿಯಾ ಎಂಬ ಹೆಸರನ್ನ ಭಾರತ ಅಂತಾ ಬದಲಿಸಬೇಕು ಅನ್ನೋ ಚರ್ಚೆ ಭಾರಿ ಸಂಚಲನ ಸೃಷ್ಟಿಸಿದೆ. ಇನ್ನು ಕಳೆದ ಮೂರು-ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯ ಸಿಂಚನವಾಗ್ತಿದೆ. ಇದಕ್ಕೂ ಮುನ್ನ ರಾಜಧಾನಿಯಲ್ಲಿ ವಾಡಿಕೆಗಿಂತ ಮಳೆಯೇ ಆಗಿರಲಿಲ್ಲ. ಇದರ ಪರಿಣಾಮ ನಗರದ ಹಲವು ಏರಿಯಾಗಳಲ್ಲಿ ಕಾವೇರಿ ನೀರಿಗೂ ಸಂಕಷ್ಟ ಎದುರಾಗಿದೆ. ದಾಸರಹಳ್ಳಿ, ಯಶವಂತಪುರ, ರಾಜರಾಜೇಶ್ವರಿ ನಗರದ ಕೆಲವು ಬಡಾವಣೆಗಳಲ್ಲಿ ಜನರು ನೀರಿಲ್ಲದೇ ಪರದಾಡ್ತಿದ್ದಾರೆ. ಮತ್ತೊಂದೆಡೆ ಕರ್ನಾಟಕ-ತಮಿಳುನಾಡಿನ ಮಧ್ಯೆ ಕಾವೇರಿ ಕಿಚ್ಚು ತಾರಕಕ್ಕೇರಿದೆ. ಸುಪ್ರೀಂಕೋರ್ಟ್ನಲ್ಲಿಂದು ಕಾವೇರಿ ವಿಚಾರಣೆ ನಡೆಯಲಿದೆ. ಉಭಯ ರಾಜ್ಯಗಳು ತಮ್ಮಮ್ಮ ವಾದ ಮಂಡಿಸಲು ಸಜ್ಜಾಗಿವೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಕಲರವ ಶುರುವಾಗಿದೆ. ದಸರಾ ಗಜಪಡೆಗಳು ವಿಶ್ವವಿಖ್ಯಾತ ಮೈಸೂರು ಅರಮನೆಗೆ ಎಂಟ್ರಿ ಕೊಟ್ಟಿವೆ. ಅರಮನೆಯಲ್ಲಿ ಗಜಪಡೆಯ ತಾಲೀಮು ಕಳೆಕಟ್ಟಲಿದೆ. ಇವೆಲ್ಲದರ ಜೊತೆಗೆ ರಾಜ್ಯದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ ಟಿವಿ9 ಡಿಜಿಟಲ್ನಲ್ಲಿ.
ಡಿಸಿಎಂ ಡಿಕೆ ಶಿವಕುಮಾರ್ನ್ನು ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಬೆಂಗಳೂರಿನ ಕುಮಾರಕೃಪಾ ಗೆಸ್ಟ್ಹೌಸ್ನಲ್ಲಿ ಭೇಟಿಯಾಗಿ ಮಾತುಕತೆ ಮಾಡಿದ್ದಾರೆ. ಆಪರೇಷನ್ ಹಸ್ತ ಸುದ್ದಿ ಬೆನ್ನಲ್ಲೇ ತೀವ್ರ ಕುತೂಹಲ ಮೂಡಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಮಂಜೂರಾತಿ ಸಂಬಂಧ ಸಾಕಷ್ಟು ಸಮಸ್ಯೆಗಳಿವೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಭೈರೇಗೌಡ ಹೇಳಿದರು. ಅರಣ್ಯ, ಕಂದಾಯ ಇಲಾಖೆ ನಡುವೆ ಬಿಡಿಸಲಾಗದ ಗೊಂದಲಗಳಿವೆ. ಡ್ರೋನ್ ಕ್ಯಾಮರಾ ಬಳಸಿ ಸರ್ವೆ ಮಾಡಿದರೂ ಪ್ರಯೋಜನವಾಗುವುದಿಲ್ಲ. ಸರ್ವೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿದೆ ಎಂದರು.
ದಾಖಲೆಯಲ್ಲಿ 250 ಎಕರೆ ಇದ್ದರೆ, ಭೌತಿಕವಾಗಿ 200 ಎಕರೆ ಕಂಡುಬರುತ್ತೆ. ಇಂತಹ ಮಿಸ್ ಮ್ಯಾಚ್ಗಳನ್ನು ಸರಿಪಡಿಸಬೇಕಿದೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ. ದಾಖಲೆಯಲ್ಲಿ ಬೆಳೆ ಎಂಟ್ರಿ ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತೇವೆ. ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ಜಿಪಿಎಸ್ ಮೂಲಕ ಸರ್ವೆ ಮಾಡಲಾಗುವುದು. ಕಂದಾಯ ಇಲಾಖೆಯಲ್ಲಿ ಸುಧಾರಣೆ ತರುತ್ತೇನೆ ಎಂದಿದ್ದಾರೆ.
ಹಿಂದೂ ಧರ್ಮದ ಅಸ್ತಿತ್ವ, ಮೂಲದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಗೃಹ ಸಚಿವ
ಡಾ. ಜಿ. ಪರಮೇಶ್ವರ್ ಅವರ ಉದ್ಧಟತನದ ಹೇಳಿಕೆ ಅತ್ಯಂತ ಖಂಡನೀಯ ಮಾತ್ರವಲ್ಲ, ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಹಿಂದೂ ಧರ್ಮದ ಅಸ್ತಿತ್ವ, ಮೂಲದ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ, ಗೃಹ ಸಚಿವ @DrParameshwara ಅವರ ಉದ್ಧಟತನದ ಹೇಳಿಕೆ ಅತ್ಯಂತ ಖಂಡನೀಯ ಮಾತ್ರವಲ್ಲ, ಅವರ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ.
ರಾಷ್ಟ್ರಗೀತೆಯ ಅಂತ್ಯದಲ್ಲಿ ‘ಜೈ ಹಿಂದ್’ ಎನ್ನುವ ಜಯಘೋಷ, ನಮ್ಮ ತಾಯ್ನೆಲ, ಇಲ್ಲಿನ ಸಾವಿರಾರು ವರ್ಷಗಳ ಇತಿಹಾಸ, ಸಂಸ್ಕೃತಿ,…
— B.S.Yediyurappa (@BSYBJP) September 6, 2023
ಭಾರತಕ್ಕೆ ಇಂಡಿಯಾ ಅಂತಾ ಹೆಸರಿಟ್ಟಿದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಇಂಡಿಯಾ ಅಂತಾ ಹೆಸರಿಟ್ಟಿದ್ದು ಬ್ರಿಟಿಷರು ಅಂತಾ ನಾನು ಅನ್ಕೊಂಡಿದ್ದೆ. ಇವರು ಯಾರನ್ನೂ ಬೇಕಾದ್ರೂ ಹೆದರಿಸಬೇಕು ಅನ್ಕೊಂಡಿದ್ದಾರಾ? ಉತ್ತರ ಕುಮಾರನೂ ಇದೇ ರೀತಿ ಕೊಚ್ಚಿಕೊಳ್ಳುತ್ತಿದ್ದನಂತೆ ಎಂದು ಕಿಡಿಕಾರಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಕಾರ್ಯಕರ್ತರಿಗೆ ಪೊಲೀಸ್ ವಿಚಾರಣೆ, ಬೆದರಿಕೆ, ಕಿರುಕುಳ ಆರೋಪ ಕೇಳಿಬಂದಿದ್ದು, ಹಾಗಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ನೇತೃತ್ವದಲ್ಲಿ ಡಿಜಿ&ಐಜಿಪಿ ಅಲೋಕ್ ಮೋಹನ್ರನ್ನು ಬುಧವಾರ ಭೇಟಿ ಮಾಡಲಾಗಿದೆ.
ಬಿಜೆಪಿ ಕಾರ್ಯಕರ್ತರಿಗೆ ಬೆದರಿಕೆ, ಕಿರುಕುಳ ಆರೋಪ: ಡಿಜಿ&ಐಜಿಪಿ ಅಲೋಕ್ ಮೋಹನ್ ಭೇಟಿ ಮಾಡಿದ ಬಿಜೆಪಿ ನಿಯೋಗ
ಹಿಂದೂ ಧರ್ಮದ ಹುಟ್ಟು ಗೊತ್ತಿಲ್ಲವೆಂದು ಪರಮೇಶ್ವರ್ ಹೇಳಿದ್ದಾರೆ. ಹಾಗಾದ್ರೆ ಪರಮೇಶ್ವರ್ ಹೆಸರು ಇಸ್ಮಾಯಿಲ್ ಅಂತಾ ಏಕೆ ಇಟ್ಟಿಲ್ಲ. ಸಚಿವ ಪರಮೇಶ್ವರ್‌ಗೆ ಸ್ಟಾಲಿನ್ ಅಂತಾ ಹೆಸರು ಇಡಬಹುದಿತ್ತಲ್ಲವಾ? ಗೃಹ ಸಚಿವ ಪರಮೇಶ್ವರ್ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ದೇವಸ್ಥಾನದಿಂದ ಹೊರಗೆ ಬಂದ ಬಳಿಕ ಈ ರೀತಿ ಹೇಳಿಕೆ ನೀಡ್ತಾರೆ. ಸನಾತನ ಧರ್ಮದ ಹುಟ್ಟು ಯಾರಿಗೂ ತಿಳಿದಿಲ್ಲ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇದೊಂದು ಹುಚ್ಚು ಶುರುವಾಗಿದೆ. ಸನಾತನ ಧರ್ಮದ ಬಗ್ಗೆ ದೂಷಿಸಿದ್ರೆ ಅಲ್ಪಸಂಖ್ಯಾತರ ಮತ ಸಿಗುತ್ತೆ. ಅಧಿಕಾರ ಸಿಗುತ್ತೆ ಅನ್ನೋ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿದ್ದಾರೆ.
ಆರೋಗ್ಯ ಚೇತರಿಕೆ ಬಳಿಕ ಶಾಸಕರ ಜೊತೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಮೊದಲ ಸಭೆ ಮಾಡಿದ್ದಾರೆ. ಬೆಂಗಳೂರಿನ ಜೆ.ಪಿ.ನಗರದ ನಿವಾಸದಲ್ಲಿ ಸಭೆ ಮಾಡಿದ್ದು, ಪಕ್ಷ ಸಂಘಟನೆ ಕುರಿತು JDS ಶಾಸಕರ ಜೊತೆ ಸಮಾಲೋಚನೆ ಮಾಡಲಾಗಿದೆ. ಹೆಚ್ಡಿ ದೇವೆಗೌಡ, ಶಾಸಕರು, ಕೋರ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಕೊಟ್ಟ ಅನುದಾನದಲ್ಲಿ ಅಭಿವೃದ್ಧಿ ಮಾಡಿದ್ದೇನೆ. ಆದರೂ ನಾನು ಹಿರಿಯೂರು ಕ್ಷೇತ್ರದಲ್ಲಿ ಸೋಲನುಭವಿಸಬೇಕಾಯಿತು ಎಂದು ಬೆಂಗಳೂರಿನಲ್ಲಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ನನಗೆ ಆಹ್ವಾನ ಇದೆ. ಆದರೆ ಭಾರತೀ ಜನತಾ ಪಾರ್ಟಿ ಬಿಡುವ ಯೋಚನೆ ಮಾಡಿಲ್ಲ. ವಿಧಾನಸಭೆ ಚುನಾವಣೆಗೂ ಮುಂಚಿತವಾಗಿ ಈ ಬಗ್ಗೆ ಚರ್ಚೆ ಇತ್ತು. ಆದರೆ ಪಕ್ಷ ತೊರೆಯುವ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದರೆ ಎಲ್ಲರಿಗೂ ಹೇಳಿಯೇ ಹೋಗ್ತೇನೆ. ಬಿಜೆಪಿಯಲ್ಲಿ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.
ಕೆ. ಆರ್. ಪುರಂನ ದೇವಸಂದ್ರನಲ್ಲಿರುವ ಬಿಜೆಪಿ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನಿವಾಸಕ್ಕೆ ಡಿಸಿಎಂ ಶಿವಕುಮಾರ್ ಇಂದು ಭೇಟಿ ನೀಡಿದ್ದಾರೆ. ಪೂರ್ಣಿಮಾ ಕಾಂಗ್ರೆಸ್ ಸೇರ್ಪಡೆ ವದಂತಿ ಚರ್ಚೆ ಬೆನ್ನಲ್ಲೇ ಡಿಸಿಎಂ ಶಿವಕುಮಾರ್ ಭೇಟಿ ಮಹತ್ವ ಪಡೆದುಕೊಂಡಿದೆ. ಪೂರ್ಣಿಮಾ ನಿವಾಸದಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಣೆ ಹಿನ್ನಲೆ, ಡಿಸಿಎಂ ಶಿವಕುಮಾರ್ ಭೇಟಿ ನೀಡಿದ್ದಾರೆ. ಪೂರ್ಣಿಮಾ ತಂದೆ ದಿವಂಗತ ಕೃಷ್ಣಪ್ಪ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು.
ಕಾಂಗ್ರೆಸ್‌ನವರು ತಮ್ಮ ಬೂಟಾಟಿಕೆಗಳನ್ನು ನಿಲ್ಲಿಸುವುದಿಲ್ಲ. ಕಾಂಗ್ರೆಸ್ ಒಂದು ಕುಟುಂಬದ ಪ್ರಭಾವದಿಂದ ಹೊರಗೆ ಬರುವುದಿಲ್ಲ. ವೈಯಕ್ತಿಕ ಹಿತಾಸಕ್ತಿಯೇ ಒಂದು ಜಾತಿಯಾಗಿ ಕೆಲಸ ಮಾಡುತ್ತದೆ ಎಂದು ಸೋನಿಯಾ ಗಾಂಧಿ ಕುಟುಂಬದ ವಿರುದ್ಧ ಸಿ.ಟಿ.ರವಿ ತೀವ್ರ ವಾಗ್ದಾಳಿ ಮಾಡಿದ್ದಾರೆ.
ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಸರ್ಕಾರಿ ಶಾಲೆಯ 10 ಮಕ್ಕಳಿಗೆ ಹಾಲು ವಿತರಿಸಿದರು. ವೇದಿಕೆ ಮೇಲೆ ಮಕ್ಕಳಿಗೆ ಹಾಲು ನೀಡುವ ಮೂಲಕ ದಶಮಾನೋತ್ಸವ ಆಚರಿಸಿದರು. ಮಕ್ಕಳ ಜೊತೆ ಹಾಲಿನ ಗ್ಲಾಸ್ ಹಿಡಿದು ಕ್ಯಾಮೆರಾಗೆ ಪೋಸ್ ಕೊಟ್ಟರು.
ಭಾರತ ಎನ್ನುವುದು ಅಸ್ತಿತ್ವ, ಆತ್ಮ ಎಂದು ಬೆಂಗಳೂರಿನಲ್ಲಿ ಬಿಜೆಪಿಯ ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು. ಭರತ ಚಕ್ರವರ್ತಿಯಿಂದ ಭಾರತ ಎಂಬ ಹೆಸರು ಬಂದಿದೆ. ವಿಷ್ಣು ಪುರಾಣದಲ್ಲಿ ಭಾರತ ಎಂಬುದರ ಬಗ್ಗೆ ಚರ್ಚೆಯಾಗಿದೆ. ಮಹಾತ್ಮ ಗಾಂಧಿಯವರ ಜೀವನ ಚರಿತ್ರೆಯಲ್ಲೂ ಭಾರತ ಇದೆ. ಹೋರಾಟ ಮಾಡುವವರಿಗೆ ಮಂತ್ರವಾಗಿದ್ದೇ ಭಾರತ ಮಾತಾ ಕೀ ಜೈ. ಇಂಡಿಯಾ ಅನ್ನೋದು ವ್ಯವಹಾರಿಕ ದೃಷ್ಟಿಯಿಂದ ಬಂದಿದೆ ಅಷ್ಟೇ. ಪರಕೀಯರ ಆಕ್ರಮಣವಾದಾಗ ಇಂಡಿಯಾ ಆಗಿದೆ ಅಷ್ಟೇ. ದೇಶದ ಯಾವ ಸಾಹಿತ್ಯದಲ್ಲೂ ಇಂಡಿಯಾ ಅನ್ನೋ ಹೆಸರಿಲ್ಲ. ಕಾಂಗ್ರೆಸ್ಸಿಗರು ಭಾರತವನ್ನೇ ವಿರೋಧಿಸುವ ಮನಸ್ಥಿತಿಗೆ ಬಂದಿದ್ದಾರೆ. ಬಹುಶಃ ಇದಕ್ಕಾಗಿ ಮಹಾತ್ಮ ಗಾಂಧಿ ಕಾಂಗ್ರೆಸ್ ವಿಸರ್ಜಿಸಿದರು.
ಉತ್ತರ ಭಾರತದ ಪಪ್ಪು ರಾಹುಲ್, ದ. ಭಾರತದ ಪಪ್ಪು ಉದಯನಿಧಿ ಎಂದು ಬಳ್ಳಾರಿ ನಗರದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ, ಉದಯನಿಧಿ ಸ್ಟಾಲಿನ್ ಇಬ್ಬರೂ ಪಪ್ಪುಗಳೇ. ಸನಾತನ ಧರ್ಮದ ಬಗ್ಗೆ ಮಾತನಾಡೋ ಉದಯನಿಧಿಗೇನು ಗೊತ್ತಿಲ್ಲ. ಇಷ್ಟು ದಿನ ಕಾವೇರಿ ನೀರು ಕರ್ನಾಟಕಕ್ಕೆ ಮೊದಲ ಆದ್ಯತೆ ಇತ್ತು. ಸಿಎಂ ಸಿದ್ದರಾಯ್ಯ, ಡಿಸಿಎಂ ಡಿಕೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ಸ್ಟಾಲಿನ್ ಇಂಡಿಯಾ ಮೈತ್ರಿಕೂಟದಲ್ಲಿ ಇದ್ದಾರೆಂದು ನೀರು ಬಿಟ್ಟಿದ್ದಾರೆ. ಮನಸ್ಸು ಮಾಡಿದ್ರೆ ಕಾವೇರಿ ನೀರು ಬಿಡದೇ ಮುಂದೂಡಬಹುದಿತ್ತು. ಆದ್ರೆ ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದೂಡುವ ಕೆಲಸ ಮಾಡಿಲ್ಲ. 2024ರಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಮಂತ್ರಿ ಆಗ್ತಾರೆ. ನಮ್ಮ ದೇಶಕ್ಕೆ ಇಂಡಿಯಾ ಎಂದು ಬ್ರಿಟಿಷರು ಇಟ್ಟಿರುವ ಹೆಸರು. ಮಹಾಭಾರತ ಕಾಲದಿಂದಲೂ ನಮ್ಮ ದೇಶಕ್ಕೆ ಭಾರತ ಅಂತಾ ಇದೆ ಎಂದರು.
ಕ್ಷೀರಭಾಗ್ಯ ಯೋಜನೆ ಜಾರಿಯಾಗಿ 10 ವರ್ಷ ಹಿನ್ನೆಲೆಯಲ್ಲಿ ಮಧುಗಿರಿಯಲ್ಲಿ ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ವೇದಿಕೆಯಲ್ಲಿ ಬಟನ್ ಒತ್ತುವ ಮೂಲಕ ಸಿಎಂ ಸಿದ್ದರಾಮಯ್ಯನವರು 145 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯ ನೆರವೇರಿಸಿದರು.
ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕಲಬುರಗಿಯಲ್ಲಿ ಕಾಂಗ್ರೆಸ್ ಶಾಸಕ ಡಾ.ಅಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ತಮಿಳುನಾಡು ಸಚಿವ ಉದಯನಿಧಿ ಹೇಳಿಕೆ ವೈಯಕ್ತಿಕ ಅಭಿಪ್ರಾಯ. ಆ ಧರ್ಮ, ಈ ಧರ್ಮ ಅನ್ನೋಕ್ಕಿಂತ ಮೊದಲು ನಾವು ಭಾರತಿಯರು. ಎಲ್ಲಾ ಧರ್ಮಗಳಲ್ಲೂ ಸಮಾನತೆ ಇರಬೇಕು. ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಯುಪಿಯಲ್ಲಿ FIR ಆಗಿದೆ. ಪ್ರಿಯಾಂಕ್ ಖರ್ಗೆ ವಿರುದ್ಧ FIR ಆಗಿರುವ ಬಗ್ಗೆ ಈಗ ಗೊತ್ತಾಗಿದೆ ಎಂದರು.
ಹಿಂದೂ ಧರ್ಮದ ಬಗ್ಗೆ ಡಾ.ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿರುವುದನ್ನು ನಾನು ಒಪ್ಪಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೆಸರಲ್ಲೇ ಈಶ್ವರ ಇದ್ದಾನೆ. ಪ್ರಕೃತಿಯನ್ನು ಯಾರು ಹುಟ್ಟಿಸಿದ್ದು ಅಂತಾ ಹೇಳಲು ಆಗುತ್ತಾ? ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕ್ತಿದೆ. ಕಾಂಗ್ರೆಸ್ಸಿಗರು ಎಲ್ಲವನ್ನೂ ಚುನಾವಣೆ ದೃಷ್ಟಿಯಿಂದ ಅಳೆಯುತ್ತಿದ್ದಾರೆ. ಕಾಂಗ್ರೆಸ್ನವರಿಗೆ ಭಾರತ ಅಂತಾ ಕರೆಯೋದು ಅವಮಾನ ಎಂದು ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಉದಯನಿಧಿ ಸ್ಟಾಲಿನ್ ಅಣಕು ಶವಯಾತ್ರೆ ಮಾಡಿ ಸಮಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಲಾಗಿದೆ. ತಮಿಳುನಾಡು ಸಚಿವ ಉದಯನಿಧಿ ಪ್ರತಿಕೃತಿ ದಹಿಸಿ ಬಜರಂಗದಳ ಹಾಗೂ ವಿಹೆಚ್ಪಿ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದಾರೆ.
ದಾವಣಗೆರೆ ತಾಲೂಕಿನ ಮಾಯಕೊಂಡದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಫುಡ್ ಪಾಯಿಸನ್ ಆಗಿ 25ಕ್ಕೂ ಅಧಿಕ ಮಕ್ಕಳಿಗೆ ವಾಂತಿ-ಬೇಧಿಯಾಗಿದೆ. ಕಳೆದ ರಾತ್ರಿ ಘಟನೆ ನಡೆದದ್ದು ಮಕ್ಕಳನ್ನು ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಮೂವರು ಮಕ್ಕಳ ಸ್ಥಿತಿ ಗಂಭೀರವಾಗಿದ್ದು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಹಾಲಹಳ್ಳಿ ಬಳಿಯ ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಗೆ ನೀರು ಬಿಡಲಾಗಿದ್ದು ಕಟ್ಟಿತುಗಾಂವ ಬಳಿಯ ಇತಿಹಾಸ ಪ್ರಸಿದ್ಧ ಶಿವನ ದೇವಸ್ಥಾನ ಮುಳುಗಿದೆ. 7594 ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ ದೇವಾಲಯ ಮುಳುಗಿದ್ದು ನದಿ ದಡದಲ್ಲೇ ನಿಂತು ಭಕ್ತರು ದೇವರ ದರ್ಶನ ಮಾಡುತ್ತಿದ್ದಾರೆ. ಇನ್ನು ಶ್ರಾವಣ ಮಾಸದಲ್ಲಿ ನಿತ್ಯ ಬೆಳಗ್ಗೆ, ಸಂಜೆ ಭಜನೆ ಮಾಡುತ್ತಿದ್ದ ಭಕ್ತರು ಭಜನೆ ಮಾಡಲಾಗದೆ ಅಸಮಾಧಾನ ಹೊರ ಹಾಕಿದರು.
ಇಂಡಿಯಾ, ಭಾರತ ಹೆಸರಿನಲ್ಲಿ ವಿವಾದ, ಚರ್ಚೆ ಶುರು ಆದ ಬಗ್ಗೆ ಶಿವಮೊಗ್ಗದಲ್ಲಿ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದರು. ಇಂಡಿಯಾ ಹೆಸರಿಗೆ ತುಂಬಾ ಹಿನ್ನೆಲೆ ಇಲ್ಲ. ಬ್ರಿಟಿಷರಿಗೆ ಭಾರತ ಅಂತಾ ಉಚ್ಚಾರಣೆ ಕಷ್ಟ ಆಗುತ್ತಿತ್ತು. ಅದಕ್ಕಾಗಿ ಬ್ರಿಟಿಷರು ಇಂಡಿಯಾ ಪದ ಬಳಕೆ ಮಾಡಿದ್ದರು. ಇಂಡಿಯಾ ಶಬ್ದಕ್ಕೆ ಅಂತಹ ಮಹತ್ವ ಇಲ್ಲ. ಬ್ರಿಟಿಷರು, ಮೊಘಲರ ಕಾಲದಲ್ಲಿ ಆದ ಪರಿವರ್ತನೆ ಬಗ್ಗೆ ಚರ್ಚೆ ಆಗುತ್ತಿದೆ. ದೇಶದ ಹೆಸರು ಭಾರತ ಎನ್ನುವುದು ಸರಿಯಾದ ನಿರ್ಧಾರ. ಯಾರೂ ಕೂಡ ಇಂಡಿಯಾ ಮಾತಾ ಕೀ ಜೈ ಎನ್ನುವುದಿಲ್ಲ. ನಾವೆಲ್ಲ ಭಾರತ ಮಾತಾ ಕೀ ಜೈ ಎನ್ನುತ್ತೇವೆ ಎಂದರು.
ಚಿಕ್ಕಮಗಳೂರು ನಗರದ KSRTC ಬಸ್ ನಿಲ್ದಾಣದ ಬಳಿ ನಾಗೇನಹಳ್ಳಿಯ ಮಾಲ್ತೇಶ್ ಎಂಬುವವರ ಬೈಕ್ಗೆ ಕಾಮಿಡಿ ಸ್ಟಾರ್ ಚಂದ್ರಪ್ರಭಾ ಅವರ ಕಾರು ಕುದ್ದಿದೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಮಾಲ್ತೇಶ್ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗದಗ ತಾಲೂಕಿನ ತಿಮ್ಮಾಪುರ ಗ್ರಾಮದ ಬಳಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಸಾರಿಗೆ ಬಸ್ ನಿರ್ವಾಹಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಾರಿಗೆ ಬಸ್ ನಿರ್ವಾಹಕಿ ಅಕ್ಕಮ್ಮ ಕಿವುಡಿ(35) ಶವ ಪತ್ತೆಯಾಗಿದ್ದು ಗದಗ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಡಿಮೆ ಪ್ರಮಾಣದಲ್ಲಿ ಮಳೆ ಹಿನ್ನೆಲೆ ಇತಿಹಾಸದಲ್ಲೇ ಮೊದಲ ಬಾರಿಗೆ ತುಂಗಾ ಬತ್ತುವ ಹಂತ ತಲುಪಿದೆ. ಚಿಕ್ಕಮಗಳೂರು ಜಿಲ್ಲೆಯ 3 ತಾಲೂಕುಗಳು ಬರ ಘೋಷಣೆ ಸಾಧ್ಯತೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಅಜ್ಜಂಪು, ಕಡೂರು, ತರೀಕೆರೆ ತಾಲೂಕಿನಲ್ಲಿ ಬರ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಈ ವರ್ಷ ಕಡಿಮೆ ಮಳೆಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೇವಲ 54% ಮಳೆಯಾಗಿದೆ ಎಂದು ಟಿವಿ9ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದರು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2023ಕ್ಕೆ ಇಡೀ ಮೈಸೂರು ಸಜ್ಜಾಗಿದೆ. ಪೊಲೀಸ್ ಭದ್ರತೆಯಲ್ಲಿ ದೇವರಾಜ ಮೊಹಲ್ಲಾದಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಮೈಸೂರು ದಸರಾ ಗಜಪಡೆಗೆ ತೂಕ ಪರೀಕ್ಷೆ ಮಾಡಲಾಗಿದೆ. ಕ್ಯಾಪ್ಟನ್ ಅಭಿಮನ್ಯು 5,160 ಕೆಜಿ, ವಿಜಯ ಆನೆ 2,830 ಕೆಜಿ ತೂಕ, ಭೀಮಾ 4,370 ಕೆಜಿ, ವರಲಕ್ಷ್ಮೀ 3,020 ಕೆಜಿ, ಕಂಜನ್ ಆನೆ 4,240 ಕೆಜಿ, ಮಹೇಂದ್ರ 4,530 ಕೆಜಿ, ಧನಂಜಯ 4,940 ಕೆಜಿ, ಗೋಪಿ 5,080 ಕೆಜಿ ತೂಕ ಇದೆ.
ಇಂದು ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಬಸ್ಗಳ ಸಂಚಾರ ಬದಲಾವಣೆ ಮಾಡಲಾಗಿದೆ. ರಾಜ್ಕುಮಾರ್ ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್ನ ಇಸ್ಕಾನ್ ಸುತ್ತಮುತ್ತ ಬಸ್ ನಿಷೇಧ ಹೇರಲಾಗಿದೆ. ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿ ಬಸ್ಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದ್ದು ಇಂದು ಮತ್ತು ನಾಳೆ ಬಸ್ಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಯಶವಂತಪುರ ಕಡೆಯಿಂದ ರಾಜ್ಕುಮಾರ್ ರಸ್ತೆ-ಮೆಜೆಸ್ಟಿಕ್ ಬದಲು ಯಶವಂತಪುರ-ಮಾರಪ್ಪನಹಳ್ಳಿ ಫ್ಲೈಓವರ್ ಮೂಲಕ BHEL ಅಂಡರ್ಪಾಸ್, ಕೆ.ಸಿ.ಜನರಲ್ ಆಸ್ಪತ್ರೆ ರಸ್ತೆಯ ಮಾರ್ಗದ ಮೂಲಕ ಸಂಚರಿಸಬೇಕಾಗಿ ಮನವಿ ಮಾಡಿದ್ದಾರೆ. ಯಶವಂತಪುರ, ವೆಸ್ಟ್ ಆಫ್ ಕಾರ್ಡ್ ರೋಡ್ ಹಾಗೂ ಮಹಾಲಕ್ಷ್ಮೀ ಲೇಔಟ್ ಕಡೆಯೂ ಬಸ್ಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ರಾಜ್ಕುಮಾರ್ ರಸ್ತೆ ಮೂಲಕ 10ನೇ ಕ್ರಾಸ್ನಲ್ಲಿ ತಿರುವು ಪಡೆಯಲು ಸೂಚಿಸಲಾಗಿದೆ.
ರಾತ್ರಿ ಸುರಿದ ಮಳೆಗೆ ಬೆಂಗಳೂರು-ಬನ್ನೇರುಘಟ್ಟ ರಸ್ತೆ ಜಲಾವೃತಗೊಂಡಿದೆ. ಕಾಳೇನ ಅಗ್ರಹಾರ ಸಮೀಪದ ಡೆಕಾತ್ಲಾನ್ ಬಳಿ ಅವೈಜ್ಞಾನಿಕ ಕಾಮಗಾರಿಯಿಂದ ರಸ್ತೆ ಜಲಾವೃತಗೊಂಡಿದೆ. ಪ್ರತಿ ಬಾರಿ ಮಳೆ ಸುರಿದಾಗಲೂ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಇದೆ.
ಇಂದು ಮಧುಗಿರಿಯಲ್ಲಿ ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಸಮಾರಂಭ ಕಳೆಗಟ್ಟಿದೆ. ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಆಗಮಿಸುವ ಸಿಎಂ, ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ ಕನ್ನಡ ಸಾಹಿತ್ಯ ಭವನ ಉದ್ಘಾಟನೆ ಮಾಡಲಿದ್ದಾರೆ.
ಬಿಪಿಎಲ್ ಕಾರ್ಡ್‌ಗಳಲ್ಲಿ ಮಾಹಿತಿ ತಿದ್ದುಪಡಿಗೆ ಹಾಘೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರಿಸಲು ಮೂರು ಹಂತದಲ್ಲಿ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ. ಕಳೆದ ತಿಂಗಳು ಮಾಹಿತಿ ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ರಾಜ್ಯಾದ್ಯಂತ ಸರ್ವರ್ ಬ್ಯುಸಿಯಿಂದ ಸಾಕಷ್ಟು ಸಮಸ್ಯೆಯಾಗಿತ್ತು. ಹೀಗಾಗಿ ಆಹಾರ ಇಲಾಖೆಯ ವೆಬ್‌ಸೈಟ್ ಸ್ಥಗಿತಗೊಳಿಸಲಾಗಿತ್ತು. ಇದೀಗ ಜಿಲ್ಲೆಗಳನ್ನು ವಿಂಗಡಿಸಿ ಹೆಸರು ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಕರ್ನಾಟಕ-ತಮಿಳುನಾಡಿನ ಮಧ್ಯೆ ಕಾವೇರಿ ಕಿಚ್ಚು ತಾರಕಕ್ಕೇರಿದೆ. ಸುಪ್ರೀಂಕೋರ್ಟ್ನಲ್ಲಿಂದು ಕಾವೇರಿ ವಿಚಾರಣೆ ನಡೆಯಲಿದೆ. ಉಭಯ ರಾಜ್ಯಗಳು ತಮ್ಮಮ್ಮ ವಾದ ಮಂಡಿಸಲು ಸಜ್ಜಾಗಿವೆ.
Published On - 8:01 am, Wed, 6 September 23