Karnataka Breaking Kannada News Highlights: ಕುಮಾರಸ್ವಾಮಿ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಭೇಟಿ
Breaking News Today Live Updates: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನೆಲೆ ಮಂಡ್ಯ ರೈತರ ಪ್ರತಿಭಟನೆ ಮುಂದುವರೆದಿದೆ. ಇಂದು ರಾಜ್ಯಾದ್ಯಂತ ಸಂಸದರ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಲಿದ್ದಾರೆ. ಇದರೊಂದಿಗೆ ಕರ್ನಾಟಕದ ವಿದ್ಯಮಾನಗಳ ಕ್ಷಣ ಕ್ಷಣದ ಅಪ್ಡೇಟ್ಸ್ಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಕರ್ನಾಟಕ ರಾಜ್ಯದಲ್ಲಿ ಡೆಂಗ್ಯೂ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿವೆ. ಜುಲೈ 1ರಿಂದ ಜುಲೈ 30ರ ವರೆಗೆ ಬೆಂಗಳೂರು ನಗರದಲ್ಲಿ ಬರೋಬ್ಬರಿ 1,649 ಪ್ರಕರಣಗಳು ದಾಖಲಾಗಿವೆ. ಆಗಷ್ಟ್ ತಿಂಗಳಲ್ಲಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದ್ದ ಪ್ರಕರಣಗಳು ಮೊನ್ನೆ ಸುರಿದ ಮಳೆ ಹಿನ್ನಲೆ ಮತ್ತೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿವೆ. ಇನ್ನು ಮತ್ತೊಂದೆಡೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಹಿನ್ನೆಲೆ ಇಂದು ರಾಜ್ಯಾದ್ಯಂತ ಸಂಸದರ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಲಿದ್ದಾರೆ. ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಕಚೇರಿ ಬಳಿ ಪ್ರತಿಭಟನೆ ನಡೆಸಲಿದ್ದಾರೆ. ಇದರೊಂದಿಗೆ ಇಂದಿನ ಕರ್ನಾಟಕದ ಲೇಟೆಸ್ಟ್ ಸುದ್ದಿಗಳ ಅಪ್ಡೇಟ್ಸ್ ಇಲ್ಲಿದೆ.
LIVE NEWS & UPDATES
-
Karnataka Breaking News Live: ಈ ಹಿಂದೆ ಸಂಸದನಾಗಿದ್ದೆ, ಟಿಕೆಟ್ ಏಕೆ ಕೇಳಬಾರದು? ಹೆಚ್ ವಿಶ್ವನಾಥ್
ಮೈಸೂರು-ಕೊಡಗು ಕ್ಷೇತ್ರದಿಂದ ‘ಕೈ’ ಅಭ್ಯರ್ಥಿಯಾಗಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಬಿಜೆಪಿ ಎಂಎಲ್‌ಸಿ ಹೆಚ್ ವಿಶ್ವನಾಥ್, ಈ ಹಿಂದೆ ಸಂಸದನಾಗಿದ್ದೆ, ಟಿಕೆಟ್ ಏಕೆ ಕೇಳಬಾರದು, ನಾನೂ ಆಕಾಂಕ್ಷಿಯಾಗಿದ್ದೇನೆ ಎಂದರು. ಕೊಪ್ಪಳದಲ್ಲಿ ಮಾತನಾಡಿದ ಅವರು, ಜನ ಬಯಸಿದ್ದಲ್ಲಿ ಸಿಎಂ ಸಿದ್ದರಾಮಯ್ಯ ರಾಷ್ಟ್ರ ನಾಯಕರಾಗಬಹುದು. ಯಾರಿಗಾದ್ರು ಟಿಕೆಟ್ ನೀಡಲಿ. ರಾಜಕಾರಣ ಎಲ್ಲದರಲ್ಲೂ ಇದೆ. ಅದೃಷ್ಟ, ಅವಕಾಶದ ಮೇಲೆ ಎಲ್ಲ ನಿಂತಿದೆ ಎಂದರು.
-
Karnataka Breaking News Live: ಎಐಸಿಸಿ ಕೇಂದ್ರ ಚುನಾವಣಾ ಸಮಿತಿಯಲ್ಲಿ ಕೆ.ಜೆ.ಜಾರ್ಜ್‌ಗೆ ಸ್ಥಾನ
ಕೇಂದ್ರ ಚುನಾವಣಾ ಸಮಿತಿ ಪುನಾರಚಿಸಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆದೇಶ ಹೊರಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸೇರಿ 16 ಸದಸ್ಯರ ಚುನಾವಣಾ ಸಮಿತಿ ರಚಿಸಲಾಗಿದೆ. ಈ ಪೈಕಿ ಸಚಿವ ಕೆ.ಜೆ.ಜಾರ್ಜ್ ಅವರಿಗೂ ಸ್ಥಾನ ನೀಡಲಾಗಿದೆ.
-
Karnataka Breaking News Live: ಕುಮಾರಸ್ವಾಮಿ ಭೇಟಿಯಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಹೆಚ್.ಡಿ.ಕುಮಾರಸ್ವಾಮಿಕ್ಕೆ ಭೇಟಿ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದರು. ಈ ವೇಳೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಉಪಸ್ಥಿತರಿದ್ದರು.
Karnataka Breaking News Live: ನಮಗೆ ದೊಡ್ಡ ಅಪಮಾನ ಆಗಿದೆ: ರಮೇಶ್ ಜಾರಕಿಹೊಳಿ
ಅಥಣಿ ಕ್ಷೇತ್ರದಲ್ಲಿ ನಾವು ಹೀನಾಯವಾಗಿ ಸೋತಿದ್ದೇವೆ. 76 ಸಾವಿರ ಮತಗಳ ಅಂತರದಿಂದ ಸೋತಿದ್ದು ಸಣ್ಣ ವಿಷಯವಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮಾತನಾಡಿದ ಅವರು, ನಮಗೆ ದೊಡ್ಡ ಅಪಮಾನ ಆಗಿದೆ, ಆದರೂ ನಾವು ಎದೆಗುಂದಲ್ಲ. ದೇವರು ಕಣ್ಣು ತೆರೆಯುವವರೆಗೂ ನಾವು ಹೋರಾಟ ಮಾಡುತ್ತೇವೆ. ಮೊದಲು ನಾನು ಸೋತಿದ್ದೆ, ಬಳಿಕ ಸತತ 7 ಬಾರಿ ಶಾಸಕನಾಗಿದ್ದೇನೆ. ಶಾಸಕನಾದಾಗ ದ್ವೇಷ ರಾಜಕಾರಣ, ಪಕ್ಷ ಅಂತಾ ಕೆಲಸ ಮಾಡಬಾರದು. ಪಕ್ಷದ ವೇದಿಕೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ಯಾರೂ ಸಹ ರಾಜಕಾರಣ ಮಾಡಬಾರದು. ಆದಷ್ಟು ಬೇಗ ವಿರೋಧ ಪಕ್ಷದ ನಾಯಕರನ್ನು ನೇಮಕ ಮಾಡಲಿದ್ದಾರೆ. ವಿಪಕ್ಷ ನಾಯಕರ ಆಯ್ಕೆ ಬಳಿಕ ಅಥಣಿಯಿಂದಲೇ ಹೋರಾಟ ಶುರುವಾಗಲಿದೆ ಎಂದರು.
Karnataka Breaking News Live: ಸೆ.8ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಸೆ.8ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ. ಸರ್ಕಾರ ನೂರು ದಿನ ಪೂರೈಸಿದರೂ ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟು ಜನಪರ ಕೆಲಸ ಮಾಡಲು ಈ ಹೋರಾಟ ಹಮ್ಮಿಕೊಂಡಿದ್ದೇವೆ. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೆಳಗ್ಗೆ 11 ಗಂಟೆಗೆ ಹೋರಾಟ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಬೃಹತ್ ಹೋರಾಟಕ್ಕೆ ಪ್ಲಾನ್ ಮಾಡಿದ್ದೇವೆ. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.
Karnataka Breaking News Live: ಬಿಜೆಪಿ ಪ್ರಾಥಮಿಕ ಸದಸ್ಯತ್ವ, ಪ್ರಕೋಷ್ಠದ ಸಂಚಾಲಕ ಸ್ಥಾನಕ್ಕೆ ದೊಡ್ಡಮನಿ ರಾಜೀನಾಮೆ
ಬಿಜೆಪಿ ಪ್ರಾಥಮಿಕ ಸದಸ್ಯತ್ವ ಹಾಗೂ ಧಾರವಾಡ ಮಾಹಾನಗರ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಸ್ಥಾನಕ್ಕೆ ಹನುಮಂತಪ್ಪ ದೊಡ್ಡಮನಿ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಎಂಎಲ್‌ಸಿ ಪ್ರದೀಪ ಶೆಟ್ಟರ್ ಅಸಮಾಧಾನ ಬೆನ್ನಲ್ಲೇ ರಾಜೀನಾಮೆ ನೀಡಿದ್ದಾರೆ. ಹು-ಧಾ ನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ್‌ಗೆ ವಾಟ್ಸ್ಆ್ಯಪ್ ಮೂಲಕ ರಾಜೀನಾಮೆ ಪತ್ರ ರವಾನೆ ಮಾಡಿದ್ದಾರೆ. ಪಕ್ಷದ ಕೆಲವರ ನಡೆಯಿಂದ ಬೇಸತ್ತು ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹನುಮಂತಪ್ಪ ದೊಡ್ಡಮನಿ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಪ್ತರಾಗಿದ್ದಾರೆ.
Karnataka Breaking News Live: ಪ್ರತಿಭಟನೆ ಹಿನ್ನೆಲೆ ಪೂರ್ವಭಾವಿ ಸಭೆ ನಡೆಸಿದ ಬಿಜೆಪಿ
ಸೆಪ್ಟೆಂಬರ್ 8ರಂದು ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಹಿನ್ನೆಲೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರಿನ ಶಾಸಕರು, ವಿಧಾನಪರಿಷತ್ ಸದಸ್ಯರು, ಬಿಬಿಎಂಪಿ ಮಾಜಿ ಸದಸ್ಯರು, ಬಿಜೆಪಿ ಜಿಲ್ಲಾಧ್ಯಕ್ಷರು, ಶಾಸಕರಾದ ಆರ್.ಅಶೋಕ್, ಡಾ.ಅಶ್ವತ್ಥ್, ಸಿ.ಕೆ.ರಾಮಮೂರ್ತಿ, ರವಿಸುಬ್ರಹ್ಮಣ್ಯ, ವಿಧಾನಪರಿಷತ್ ಸದಸ್ಯರಾದ ಗೋಪಿನಾಥ್ ರೆಡ್ಡಿ, ರವಿಕುಮಾರ್, ಮಾಜಿ ಮೇಯರ್ ಗೌತಮ್ ಕುಮಾರ್ ಭಾಗಿಯಾದರು. ಸೆಪ್ಟೆಂಬರ್ 8ರಂದು ಹೋರಾಟದ ರೂಪರೇಷೆ ಬಗ್ಗೆ ಚರ್ಚೆ ನಡೆಸಿದರು. ರಾಜ್ಯಪಾಲರಿಗೂ ದೂರು ನೀಡುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
Karnataka Breaking News Live: ದೇಶದಲ್ಲಿ ಇರೋದು ಒಂದೇ ಭೂಮಿ, ಅದು ಹಿಂದೂಗಳ ಭೂಮಿ: ಆರ್ ಅಶೋಕ
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಆರ್.ಅಶೋಕ, ಉದಯ ನಿಧಿ ಸ್ಟಾಲಿನ್ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಮಾತಾಡಿದ್ದಾರೆ. ದೇಶದಲ್ಲಿ ಇರೋದು ಒಂದೇ ಭೂಮಿ, ಅದು ಹಿಂದೂಗಳ ಭೂಮಿ. ಸನಾತನ ಧರ್ಮ ನಮ್ಮ ರಕ್ತದ ಕಣ ಕಣದಲ್ಲಿ ಬಂದಿದೆ. ಅವರು ಇಂಡಿಯಾ ಮೈತ್ರಿಕೂಟದ ಹಿಡನ್ ಅಜೆಂಡಾ ಹೇಳಿದ್ದಾರೆ. ಇದರ ಬಗ್ಗೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಬೇಕು. ಇವರು ದೇವಸ್ಥಾನಕ್ಕೆ ಹೋಗಿ ನಾಮ ಹಾಕಿಕೊಂಡು ಬರುತ್ತಾರೆ. ನಾನು ಹಿಂದೂ ಹಿಂದೂ ಅಂತ ಹೇಳಿ ಆಮೇಲೆ ಹಿಂದೂಗಳಿಗೆ ಬೈಯ್ಯುತ್ತಾರೆ. ಇದು ಕಾಂಗ್ರೆಸ್ ನಾಯಕರ ಚಾಳಿಯಾಗಿದೆ. ಇವನು ಹುಚ್ಚನ ರೀತಿ ಮಾತಾಡುತ್ತಿದ್ದಾನೆ. ಇವನು ಮೊದಲು ಹಿಂದುವೋ ಅಲ್ವೋ ಎನ್ನುವುದನ್ನು ಹೇಳಲಿ. ಹಿಂದೂಗಳ ಭಾವನೆಗೆ ಕೊಡಲಿ ಪೆಟ್ಟನ್ನು ದೇಶದ ಜನರು ಕ್ಷಮಿಸುವುದಿಲ್ಲ ಎಂದರು.
Karnataka Breaking News Live: ಆಪರೇಷನ್ ಹಸ್ತದ ಮೂಲ ಉದ್ದೇಶ ಏಕೆ ಶುರುವಾಯ್ತು ಕೇಳಿ: ರಮೇಶ್ ಜಾರಕಿಹೊಳಿ
ಚಿಕ್ಕೋಡಿ: ಮತ್ತೆ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆಪರೇಷನ್ ಹಸ್ತದ ಮೂಲ ಉದ್ದೇಶ ಏಕೆ ಶುರುವಾಯ್ತು ಕೇಳಿ ಎಂದರು. ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ 25 ರಿಂದ 30 ಹಿರಿಯ ಶಾಸಕರು ಮುಂದಿನ ನಿರ್ಣಯಕ್ಕೆ ಸೇರುವವರಿದ್ದರು. ಅದನ್ನ ಮರೆಮಾಚಲು ಈಗ ಮಹಾ ನಾಯಕ ಮಾಡಿದ ಕುತಂತ್ರವಾಗಿದೆ. ಇದು ಆಪರೇಷನ್ ಹಸ್ತ ಅಲ್ಲ, ನನಗೆ ಎಲ್ಲ ಗೊತ್ತಿದೆ. ಅವರ ಪಕ್ಷದಲ್ಲಿ 25 ರಿಂದ 30 ಶಾಸಕರು ಬೆಂಗಳೂರಿನ ಶಾಂಗ್ರಿಲಾ ಹೋಟೆಲ್ನಲ್ಲಿ ಸೇರುವವರಿದ್ದರು. ಆಪರೇಷನ್ ಹಸ್ತ ಅಂತಾ ಪೋಸ್ ಕೊಡುವ ನಾಯಕ ತನ್ನ ಪಕ್ಷಕ್ಕೆ ಅವಮಾನ ಆಗುತ್ತೆ ಅಂತಾ ನಾಟಕವಾಡುತ್ತಿದ್ದಾರೆ. ಸಿಎಂಗೆ ಪತ್ರ ಬರೆದು ಬಳಿಕ ಎಲ್ಲರೂ ಸೇರುವವರಿದ್ದರು. ಅವರು ಹೆದರಲಿ, ಅವರು ಬಿಜೆಪಿಗೆ ಬರುತ್ತಿದ್ದಾರೆ ಎಂದು ಈಗ ನಾಟಕ ಮಾಡುತ್ತಿದ್ದಾರೆ. ಆಪರೇಷನ್ ಹಸ್ತ ಮಾಡೋರು ಮೂರ್ಖರು, ಹೋಗೋರು ಮೂರ್ಖರು ಎಂದರು.
Karnataka Breaking News Live: ಬರ ಪೀಡಿತ ತಾಲೂಕುಗಳಿಗೆ ಹಣದ ಬದಲು ಅಕ್ಕಿ
ಬರ ಪೀಡಿತ ತಾಲೂಕುಗಳಿಗೆ ಹಣದ ಬದಲು ಅಕ್ಕಿ ನೀಡಲಾಗುವುದು ಎಂದು ಸಚಿವ ಕೆ ಎಚ್ ಮುನಿಯಪ್ಪ ಹೇಳಿದರು. 114 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದೆ. ಈ ತಾಲೂಕುಗಳಿಗೆ 10 ಕೆಜಿ ಅಕ್ಕಿ ವಿತರಣೆಗೆ ಸಿದ್ದತೆ ನಡೆಸಲಾಗುತ್ತಿದೆ ಎಂದರು.
Karnataka Breaking News Live: ಒಂದು ವಾರದಲ್ಲಿ ಅಕ್ಕಿ ಖರೀದಿ ಪೈನಲ್: ಕೆಹೆಚ್ ಮುನಿಯಪ್ಪ
ಅಕ್ಕಿ ಖರೀದಿ ವಿಚಾರವಾಗಿ ಮಾತನಾಡಿದ ಸಚಿವ ಕೆಹೆಚ್ ಮುನಿಯಪ್ಪ, ಒಂದು ವಾರದಲ್ಲಿ ಅಕ್ಕಿ ಖರೀದಿ ಪೈನಲ್ ಆಗಲಿದೆ. ಆಂಧ್ರಪ್ರದೇಶ, ತೆಲಂಗಾಣ, ಛತ್ತೀಸ್ಗಢ ಸರ್ಕಾರ ಮುಂದೆ ಬಂದಿವೆ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಬೆಲೆ ನಿಗದಿ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಆದಷ್ಟು ಬೇಗ ಹತ್ತು ಕೆಜಿ ಅಕ್ಕಿ ಕೋಡುವ ಕೆಲಸ ಮಾಡುತ್ತೇವೆ ಎಂದರು.
Karnataka Breaking News Live: ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ರೈತರ ಯತ್ನ
ತಮಿಳುನಾಡಿಗೆ ನೀರು ಬಿಡುವುದನ್ನು ಖಂಡಿಸಿ ಕೆಆರ್ಎಸ್ ಜಲಾಶಯಕ್ಕೆ ಮುತ್ತಿಗೆ ಹಾಕಲು ರೈತರು ಯತ್ನಿಸಿದ್ದು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂ ಬಳಿ ಪೊಲೀಸರ ಜೊತೆ ಪ್ರತಿಭಟನಾನಿರತ ರೈತರ ಮಾತಿನ ಚಕಮಕಿ ನಡೆಯುತ್ತಿದೆ. ಪ್ರತಿಭಟನಾನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Karnataka Breaking News Live: ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ ರಾಜ್ಯಪಾಲ ಗೆಹ್ಲೋಟ್
ರಾಜ್ಯಪಾಲ ಗೆಹ್ಲೋಟ್ ಅವರು ಹೆಚ್ಡಿ ಕುಮಾರಸ್ವಾಮಿ ಆರೋಗ್ಯ ವಿಚಾರಿಸಿದ್ದಾರೆ. ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಆರೋಗ್ಯ ಚೆನ್ನಾಗಿ ನೋಡಿಕೊಳ್ಳುವಂತೆ ಕುಮಾರಸ್ವಾಮಿಗೆ ಸಲಹೆ ನೀಡಿದ್ದಾರೆ.
Karnataka Breaking News Live: ಸಿಎಂ ಸಿದ್ದರಾಮಯ್ಯ ಸದಾ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದಾರೆ -ಕೆಎಸ್ ಈಶ್ವರಪ್ಪ
ಸಂಸದ ಪ್ರತಾಪ್ಸಿಂಹ ಸೋಲಿಸಿ ಎಂದು ಸಿಎಂ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಸ್ಲಿಮರ ಏರಿಯಾದಲ್ಲಿ ಕೇಳಿದ್ದಾರೆ. ಸಿದ್ದರಾಮಯ್ಯ ಇಂತಹ ದಯನೀಯ ಸ್ಥಿತಿ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೆಲ್ಲವೂ ಉಲ್ಟಾ ಆಗುತ್ತದೆ ಎಂದು ಮೈಸೂರಿನಲ್ಲಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ವಾಗ್ದಾಳೀ ನಡೆಸಿದ್ದಾರೆ. ಈ ಬಾರಿಯೂ ಪ್ರತಾಪಸಿಂಹ ಗೆಲ್ತಾರೆ, ಮೋದಿ ಪ್ರಧಾನಿಯಾಗ್ತಾರೆ. ಸಿಎಂ ಸಿದ್ದರಾಮಯ್ಯ ಸದಾ ಮುಸ್ಲಿಮರ ಓಲೈಕೆಯಲ್ಲಿ ತೊಡಗಿದ್ದಾರೆ ಎಂದರು.
Karnataka Breaking News Live: ತುಮಕೂರು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಮನವಿ ಮಾಡಿ ಸಿಎಂಗೆ ಪತ್ರ ಬರೆದ ಸಚಿವ ಡಾ.ಪರಮೇಶ್ವರ್
ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹೀಗಾಗಿ ತುಮಕೂರು ಬರಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಮನವಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದೇನೆ ಎಂದು ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ಉಪಸಮಿತಿಯಲ್ಲಿ ರಾಜಣ್ಣ ಸದಸ್ಯರಿದ್ದಾರೆ, ಅವರಿಗೂ ಮನವಿ ಮಾಡ್ತೀವಿ. ಹೆಚ್ಚು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಒತ್ತಾಯ ಮಾಡ್ತೀವಿ. ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ ಹಿಂದುಳಿದಿರುವ ಕ್ಷೇತ್ರಗಳು ಎಂದರು.
Karnataka Breaking News Live: ಜೆ.ಪಿ.ನಗರದ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಹೆಚ್ಡಿಕೆ
4 ದಿನಗಳ ಕಾಲ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಹೆಚ್ಡಿ ಕುಮಾರಸ್ವಾಮಿ ಅವರು ನಿನ್ನೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಜೆ.ಪಿ.ನಗರದ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಸಂಪೂರ್ಣ ವಿಶ್ರಾಂತಿ ಮೊರೆ ಹೋಗಿದ್ದಾರೆ.
Karnataka Breaking News Live: ಚಂದ್ರನಲ್ಲಿ 40ಸೆಂ.ಮೀ. ಎತ್ತರಕ್ಕೆ ಜಿಗಿದ ವಿಕ್ರಮ್ ದೃಶ್ಯ ಲಭ್ಯ
ಚಂದ್ರನ ಅಂಗಳದಲ್ಲಿರುವ ಲ್ಯಾಂಡರ್ನಿಂದ ಮತ್ತೊಂದು ಸಾಧನೆ. ಚಂದ್ರನ ಅಂಗಳದಲ್ಲಿ 40 ಸೆಂಟಿಮೀಟರ್ ಎತ್ತರಕ್ಕೆ ಜಿಗಿದ ವಿಕ್ರಮ್.
Karnataka Breaking News Live: ಬೆಂಗಳೂರಿನಲ್ಲಿ ಮುಂದುವರಿದ ರೋಡ್ ರೇಜ್ ಪ್ರಕರಣ
ಬೆಂಗಳೂರಿನಲ್ಲಿ ಮುಂದುವರಿದ ರೋಡ್ ರೇಜ್ ಪ್ರಕರಣ. ನಾಗವಾರ ಫ್ಲೈಓವರ್ ಮೇಲೆ ನಿನ್ನೆ ರಾತ್ರಿ ಮೂವರು ದುಷ್ಕರ್ಮಿಗಳು ಬೈಕ್ ಸವಾರನ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ನಗರ ಪೊಲೀಸ್ ಆಯುಕ್ತರಿಗೆ ವಿಡಿಯೋ ಟ್ಯಾಗ್ ಮಾಡಿ ದೂರು ಸಲ್ಲಿಸಿದ್ದಾರೆ. ಹೆಣ್ಣೂರು ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Karnataka Breaking News Live: ಬಸ್ ನಿಲ್ಲಿಸದಿದ್ದಕ್ಕೆ ಬಸ್ ಮೇಲೆ ಕಲ್ಲೆಸೆದು ವಿದ್ಯಾರ್ಥಿಗಳ ಆಕ್ರೋಶ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಯಾನಗರ ಬಳಿ ಬಸ್ ನಿಲ್ಲಿಸದಿದ್ದಕ್ಕೆ ಬಸ್ ಮೇಲೆ ಕಲ್ಲೆಸೆದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ. ಶಕ್ತಿ ಯೋಜನೆ ಎಫೆಕ್ಟ್ ಹಿನ್ನೆಲೆ ಬಸ್ಗಳು ತುಂಬಿ ಓಡಾಡ್ತಿವೆ. ಬಸ್ ಫುಲ್ ಇರುವ ಕಾರಣಕ್ಕೆ ನಿಲ್ಲಿಸದೇ ತೆರಳಿದೆ. ಹೀಗಾಗಿ ಕೋಪಗೊಂಡ ವಿದ್ಯಾರ್ಥಿಗಳು ಬಸ್ ಮೇಲೆ ಕಲ್ಲು ತೂರಾಡಿದ್ದಾರೆ. ಸರ್ಕಾರಿ ಬಸ್ ನ ಹಿಂಬದಿಯ ಗ್ಲಾಸ್ ಪುಡಿ ಪುಡಿಯಾಗಿದೆ. ಸರ್ಕಾರಿ ಬಸ್ ಚಾಲಕ ನಿರ್ವಾಹಕರ ವಿರುದ್ಧ ಆಕ್ರೋಶ ಹೊರ ಹಾಕಿದರು.
Karnataka Breaking News Live: ಮೋದಿ ವಿರುದ್ಧ ಕಿಡಿಕಾರಿದ ಸಚಿವ ಹೆಚ್.ಸಿ.ಮಹದೇವಪ್ಪ
ಉಚಿತ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತೆ ಎಂಬ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ದಾವಣಗೆರೆಯಲ್ಲಿ ಮೋದಿ ವಿರುದ್ಧ ಸಚಿವ ಹೆಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ. ಉದ್ಯಮಿ ಅದಾನಿ, ಅಂಬಾನಿ ಸಾಲಮನ್ನಾ ಮಾಡಿದ್ರೆ ದೇಶ ದಿವಾಳಿ ಆಗಲ್ವಾ?ಕಾಂಗ್ರೆಸ್ ಸರ್ಕಾರದ ಯೋಜನೆ 1.32 ಕೋಟಿ ಬಡವರಿಗೆ ತಲುಪುತ್ತಿದೆ. ಇದರಿಂದ ಬಡವರು ಆರ್ಥಿಕವಾಗಿ ಸಬಲೀಕರಣ ಆಗ್ತಿದ್ದಾರೆ. ಅವರೇನು ಎಮ್ಮೆಯ ಸೆಗಣಿ ತೆಗೆದಿದ್ದಾರಾ? ದನ ಮೇಯಿಸಿದ್ದಾರಾ? ಇದೆಲ್ಲ ಮಾಡುವವರು ನಾವು ಎಂದ ಸಚಿವ ಹೆಚ್.ಸಿ.ಮಹದೇವಪ್ಪ ಕಿಡಿಕಾರಿದರು. ಬಿಜೆಪಿಯವರು ಸುಮ್ಮನೇ ಭಾವನಾತ್ಮಕವಾಗಿ ಮಾತನಾಡ್ತಾರೆ ಅಷ್ಟೇ. ಬಿಜೆಪಿಯವರಿಗೆ ಬಡವರ ಪರವಾಗಿ ಕೆಲಸ ಮಾಡೋದು ಗೊತ್ತಿಲ್ಲ ಎಂದರು.
Karnataka Breaking News Live: ಕಾವೇರಿ ನೀರಿಗಾಗಿ ಮಂಡ್ಯ ಜಿಲ್ಲೆಯಲ್ಲಿ ಮುಂದುವರಿದ ಪ್ರತಿಭಟನೆ
ತಮಿಳು ನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಬಿಸ್ಲೆರಿ ವಾಟರ್ ನಲ್ಲಿ ನಾಟಿ ಮಾಡುವ ಮೂಲಕ ಮಂಡ್ಯ ರಕ್ಷಣಾ ವೇದಿಕೆ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಹನುಮಂತಪುರ ಗ್ರಾಮದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
Karnataka Breaking News Live: ಕೊಪ್ಪಳದ ಕುಷ್ಟಗಿಯಲ್ಲಿ ಭಾರೀ ಮಳೆ, ಮನೆಗಳಿಗೆ ನುಗ್ಗಿದ ನೀರು
ಕೊಪ್ಪಳ ಜಿಲ್ಲೆ ಕುಷ್ಟಗಿ ಭಾಗದಲ್ಲಿ ತಡರಾತ್ರಿ ಧಾರಾಕಾರ ಮಳೆ ಸುರಿದಿದ್ದು ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಹತ್ತಾರು ಮನೆಗಳಿಗೆ ಮಳೆ ನೀರು ನುಗ್ಗಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ಅಲ್ಲದೇ ಯಲಬುರ್ಗಾ ತಾಲೂಕಿನ ಹಲವು ಜಮೀನುಗಳಿಗೆ ನೀರು ನುಗ್ಗಿದೆ.
Karnataka Breaking News Live: ಮಕ್ಕಳಲ್ಲಿ ಕಂಡು ಬರುತ್ತಿದೆ ಅಡೆನೊ ವೈರಸ್
ಹವಾಮಾನ ವೈಪರೀತ್ಯದ ಎಫೆಕ್ಟ್ನಿಂದಾಗಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತಿವೆ. ಅದರಲ್ಲೂ ಮಕ್ಕಳಲ್ಲಿ ಅಡೆನೊ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಒಂದರಲ್ಲೇ ಶೇ.20-30 ಕ್ಕಿಂತ ಹೆಚ್ಚು ಮಕ್ಕಳು ಅಡೆನೋ ವೈರಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Karnataka Breaking News Live: ಮಕ್ಕಳ ಪಾಲನಾ ಕೇಂದ್ರದಲ್ಲಿದ್ದ ಅಪ್ರಾಪ್ತೆ ಮೇಲೆ ಮತ್ತೆ ಅತ್ಯಾಚಾರ
2019ರಲ್ಲಿ ಬಾಲಕಿ ಮೇಲೆ ಅತ್ಯಾಚಾರ ಹಿನ್ನೆಲೆ ಮಕ್ಕಳ ಪಾಲನಾ ಕೇಂದ್ರದಲ್ಲಿ ಸಂತ್ರಸ್ತ ಬಾಲಕಿಯನ್ನು ಇಡಲಾಗಿತ್ತು. ಆಧಾರ್ ಕಾರ್ಡ್ ಮಾಡಿಸಲು ಪೋಷಕರು ಮನೆಗೆ ಕರೆದೊಯ್ದಿದ್ದು ಪರಿಚಯಸ್ಥ ವ್ಯಕ್ತಿಯೊಂದಿಗೆ ವಾಪಸ್ ಕೇಂದ್ರಕ್ಕೆ ಆಗಮಿಸುತ್ತಿದ್ದ ವೇಳೆ ಪರಿಚಯಸ್ಥ ವ್ಯಕ್ತಿಯಿಂದಲೇ ಬಾಲಕಿ ಮೇಲೆ ಮತ್ತೆ ಅತ್ಯಾಚಾರ ನಡೆದಿದೆ. ಬಾಲಕಿ ಗರ್ಭಿಣಿಯಾದ ಮೇಲೆ ಅತ್ಯಾಚಾರ ಕೃತ್ಯದ ಬಗ್ಗೆ ಮಾಹಿತಿ ಸಿಕ್ಕಿದ್ದು ಮಕ್ಕಳ ಪಾಲನಾ ಕೇಂದ್ರದ ಸಿಬ್ಬಂದಿಯಿಂದ ಮಹಿಳಾ ಠಾಣೆಗೆ ದೂರು ದಾಖಲಾಗಿದೆ. ಗದಗ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Karnataka Breaking News Live: ಮಂಜ್ರಾಬಾದ್ ಕೋಟೆ ನೋಡೋಕೆ ಬಂದು ಕಾಲು ಜಾರಿ ಬಿದ್ದ ಯುವಕನ ರಕ್ಷಣೆ
ಬೆಂಗಳೂರು ಮೂಲದ ವಿನಯ್ ಎಂಬಾತ ಹಾಸನದ ಮಂಜ್ರಾಬಾದ್ ಕೋಟೆ ನೋಡಲು ಬಂದು ಕಾಲು ಜಾರಿ ಬಿದ್ದಿದ್ದು ಸದ್ಯ ರಕ್ಷಣೆ ಮಾಡಲಾಗಿದೆ. ಪ್ರವಾಸಿ ಮಿತ್ರ ಪೊಲೀಸ್ ಲೋಹಿತ್ ಮತ್ತು ಪ್ರವಾಸಿಗರು ಯುವಕನನ್ನು ರಕ್ಷಿಸಿ ಜೀವ ಉಳಿಸಿದ್ದಾರೆ .
Karnataka Breaking News Live: ಕಾಮುಕ ಯುವಕರ ಬೆದರಿಕೆಗೆ ವಿದ್ಯಾರ್ಥಿನಿ ಬಲಿ
ಅಶ್ಲೀಲ ವಿಡಿಯೋ ಹರಿಬಿಡುವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಯುವರಿಬ್ಬರ ಬ್ಲ್ಯಾಕ್ಮೇಲ್ಗೆ ಹೆದರಿ ಆತ್ಮಹತ್ಯೆಗೆ ಯತ್ನಿಸಿದ್ದ 17 ವರ್ಷ ವಿದ್ಯಾರ್ಥಿನಿ ಚಿಕಿತ್ಸೆ ಫಲಿಸದೇ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
Karnataka Breaking News Live: ಚಿಕ್ಕಮಗಳೂರಿನ ಶಿವಗಂಗಾ ಗಿರಿಯಲ್ಲಿ 3 ಚಿರತೆ ಪತ್ತೆ
ಪ್ರಸಿದ್ಧ ಶಿವಗಾಂಗ ಗಿರಿಯಲ್ಲಿ ಮೂರು ಚಿರತೆಗಳು ಪತ್ತೆಯಾಗಿವೆ. ಗಿರಿ ಮೇಲಿನ ಕಲ್ಲಿನ ಬಂಡೆ ಮೇಲೆ ಮೂರು ಚಿರತೆಗಳಿರುವುದು ಪತ್ತೆಯಾಗಿದೆ. ಮದುವೆಯ ವಿಡಿಯೋ ಚಿತ್ರೀಕರಣದ ವೇಳೆ ಡ್ರೋನ್ ಕ್ಯಾಮರಾದಲ್ಲಿ ಮೂರು ಚಿರತೆಗಳು ಸೆರೆಯಾಗಿವೆ.
Karnataka Breaking News Live: ಗವರ್ನರ್ ಹೆಸರು ಬಳಸಿಕೊಂಡು ನಕಲಿ ಫೇಸ್ಬುಕ್ ಖಾತೆ ಓಪನ್, ಎಫ್ಐಆರ್ ದಾಖಲು
ಗವರ್ನರ್ ಹೆಸರು ಬಳಸಿಕೊಂಡು ನಕಲಿ ಫೇಸ್ಬುಕ್ ಖಾತೆ ಓಪನ್ ಮಾಡಲಾಗಿದೆ. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಫೋಟೋ, ಹೆಸರು ಬಳಸಿ ಫೇಸ್ಬುಕ್ ಖಾತೆ ತೆರೆಯಲಾಗಿದ್ದು ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಎಫ್ಐಆರ್ ದಾಖಲಾಗಿದೆ.
Karnataka Breaking News Live: ಅಪ್ರಾಪ್ತ ಬಾಲಕಿಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕ ಅರೆಸ್ಟ್
ಕೊಪ್ಪಳ ಜಿಲ್ಲೆಯ ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಬೆತ್ತಲೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್ಟಾಗ್ರಾಮ್ ಮೂಲಕ ಯುವತಿಯ ಜೊತೆ ಸ್ನೇಹ ಬೆಳೆಸಿ ಬೆತ್ತಲೆ ವಿಡಿಯೋ ತಗೆದುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಯುವಕ ಅರೆಸ್ಟ್ ಆಗಿದ್ದಾನೆ.
Karnataka Breaking News Live: ಸೆ.6ರಂದು ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ
ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದಲ್ಲಿ ಸೆ.6ರಂದು ರಾಜ್ಯಮಟ್ಟದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಸೆ.6ಕ್ಕೆ ಕ್ಷೀರಭಾಗ್ಯ ಜಾರಿಯಾಗಿ 10 ವರ್ಷ ಹಿನ್ನೆಲೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಸ್ವಕ್ಷೇತ್ರದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಒಂದೂವರೆ ಲಕ್ಷ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಸಚಿವರು ಭಾಗಿಯಾಗಲಿದ್ದಾರೆ.
Karnataka Breaking News Live: ಬೆಂಗಳೂರಿನ ಹಲವೆಡೆ ತುಂತುರು ಮಳೆ
ಕಳೆದ ಎರಡು ದಿನಗಳಿಂದ ನಗರದಲ್ಲಿ ವರುಣನ ಆಗಮನವಾಗುತ್ತಿದೆ. ಇಂದು ಸಹ ನಗರದಲ್ಲಿ ಬೆಳಿಗ್ಗೆಯೇ ಹಲವೆಡೆ ತುಂತುರು ಮಳೆಯಾಗುತ್ತಿದೆ. ದಾಸರಹಳ್ಳಿ, ಪೀಣ್ಯ, ಯಶವಂತಪುರ ಸೇರಿದಂತೆ ಹಲವೆಡೆ ಬೆಳಿಗ್ಗೆಯೇ ತುಂತುರು ಮಳೆ ಆರಂಭವಾಗಿದೆ. ಇನ್ನು ಗುಲಬುರಗಿ, ಯಾದಗಿರಿ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ವಿಜಾಪುರ, ಬೆಳಗಾವಿ, ಗದಗ, ಹಾವೇರಿ ಹೀಗೆ ಈ ಭಾಗಗಳಿಗೆ ಮುಂದಿನ 3 ಗಂಟೆ ಕಾಲ ಎಲ್ಲೊ ಅಲರ್ಟ್ ಘೋಷಿಸಲಾಗಿದೆ.
Karnataka Breaking News Live: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆ
ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ, ಸಚಿವರೂ ಆಗಿರುವ ಉದಯನಿಧಿ ಸ್ಟಾಲಿನ್ ಧರ್ಮದ ಬಗ್ಗೆ ಮಾತನಾಡಿ ಕಿಚ್ಚು ಹೊತ್ತಿಸಿದ್ದಾರೆ. ಸನಾತನ ಧರ್ಮದ ಬಗ್ಗೆ ನೀಡಿರುವ ಹೇಳಿಕೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಹಾಗಾದ್ರೆ, ಉದಯನಿಧಿ ಹೇಳಿದ್ದೇನು?
Karnataka Breaking News Live: KSOU ಪರೀಕ್ಷೆಯಲ್ಲಿ ಪುಸ್ತಕ ಇಟ್ಟುಕೊಂಡು ಕಾಪಿ ಹೊಡೆದ ವಿದ್ಯಾರ್ಥಿಗಳು
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕರ್ಮ ಕಾಂಡ ಬಗೆದಷ್ಟು ಹೊರಬರುತ್ತಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
Karnataka Breaking News Live: ಕಲಬುರಗಿಯಲ್ಲಿ ಗೋಡೆ ಕುಸಿದು 80ಕ್ಕೂ ಅಧಿಕ ಕುರಿ, ಮೇಕೆ ಸಾವು
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಕೊರವಿ ಗ್ರಾಮದಲ್ಲಿ ಮಳೆಯಿಂದ ಮನೆ ಗೋಡೆ ಕುಸಿದು 80ಕ್ಕೂ ಅಧಿಕ ಕುರಿ, ಮೇಕೆ ಮೃತಪಟ್ಟಿವೆ. ಮಲ್ಲಪ್ಪ ಪೂಜಾರಿ, ಅಣ್ಣಪ್ಪ ಪೂಜಾರಿ ಎಂಬುವರಿಗೆ ಸೇರಿದ ಕುರಿ, ಮೇಕೆಗಳು ರಾತ್ರಿ ಸುರಿದ ಮಳೆಗೆ ಗೋಡೆ ಕುಸಿದು ಮೃತಪಟ್ಟಿವೆ. ಲಕ್ಷಾಂತರ ಮೌಲ್ಯದ ಕುರಿ, ಮೇಕೆ ಕಳೆದುಕೊಂಡು ಕುಟುಂಬಗಳು ಕಂಗಾಲಾಗಿವೆ.
Karnataka Breaking News Live: ಕಾವೇರಿ ಕಿಚ್ಚು, ಮಂಡದಲ್ಲಿ ಮುಂದುವರಿದ ಪ್ರತಿಭಟನೆ
ತಮಿಳುನಾಡಿಗೆ KRS ಜಲಾಶಯದಿಂದ ನೀರು ಬಿಡುಗಡೆ ಹಿನ್ನೆಲೆ ಮಂಡ್ಯದಲ್ಲಿ ಕಾವೇರಿಕಿಚ್ಚು ಮುಂದುವರಿದಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಬಳಿ ಕಾವೇರಿ ನದಿಗೆ ಇಳಿದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
Published On - Sep 04,2023 8:02 AM