ಆದಾಯಕ್ಕಿಂತ ಮೂರು ಪಟ್ಟು ಖರ್ಚು: ಇನ್ನೆರಡು ವರ್ಷದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿವಿ ಮುಚ್ಚಿ ಹೋಗಲಿದ್ಯಾ!?
ಸರ್ಕಾರದಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ನಾಯಪೈಸೆ ಅನುದಾನ ಬರುವುದಿಲ್ಲ. ಆದರೂ ಖರ್ಚು ಮಾತ್ರ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಈ ಹೆಚ್ಚುವರಿ ಖರ್ಚಿಗೆ ಕುಲುಪತಿಗಳು ವಿವಿಯ ಖಾತೆಯಲ್ಲಿನ ಡೆಪಾಸಿಟ್ ಹಣವನ್ನೇ ಬಳಸಿದರಾ ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ರೀತಿ ಎರೆಡು-ಮೂರು ವರ್ಷ ಹಣ ವ್ಯಯ ಮಾಡಿದರೇ ವಿಶ್ವವಿದ್ಯಾಲಯದ ಖಾತೆಯಲ್ಲಿನ ಸಂಪೂರ್ಣ ಹಣ ಬರಿದಾಗಲಿದೆ.
ಮೈಸೂರು ಸೆ.04: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (Karnataka State Open University) ಆದಯಕ್ಕಿಂತ ಖರ್ಚು ಹೆಚ್ಚಾಗಿದೆ. ಮತ್ತು ಇಲ್ಲಿನ ಅಕ್ರಮಗಳಿಂದ ವಿಶ್ವವಿದ್ಯಾಲಯಕ್ಕೆ ಕಳಂಕ ಅಂಟುತ್ತಿದೆ. ಇದರಿಂದ ವಿಶ್ವವಿದ್ಯಾಲಯ (University) ಇನ್ನೆರಡು ವರ್ಷಗಳಲ್ಲಿ ಮುಚ್ಚಿ ಹೋಗಲಿದೆಯಾ ಎಂಬ ಪ್ರಶ್ನೆ ಉದ್ಭವವಾಗಿದೆ. ಹೌದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಈ ಬಾರಿಯ 2023-24ರ ಆಯವ್ಯಯ ನೋಡಿದರೇ ದಿಗ್ಭ್ರಮೆಯಾಗುತ್ತದೆ. ವಿಶ್ವವಿದ್ಯಾಲಯಕ್ಕೆ ಕೇವಲ 86 ಕೋಟಿ ರೂ. ಆದಾಯ ಇದೆ. ಆದರೆ ಖರ್ಚು ಮಾಡಿರುವುದು 263 ಕೋಟಿ ರೂ. ವಿಶ್ವವಿದ್ಯಾಲಯ ಹೆಚ್ಚುವರಿಯಾಗಿ 177 ಕೋಟಿ ರೂ. ಖರ್ಚು ಮಾಡಿದೆ.
ಇನ್ನು ಸರ್ಕಾರದಿಂದ ವಿಶ್ವವಿದ್ಯಾಲಯಕ್ಕೆ ನಾಯಪೈಸೆ ಅನುದಾನ ಬರುವುದಿಲ್ಲ. ಆದರೂ ಖರ್ಚು ಮಾತ್ರ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ. ಈ ಹೆಚ್ಚುವರಿ ಖರ್ಚಿಗೆ ಕುಲುಪತಿಗಳು ವಿವಿಯ ಖಾತೆಯಲ್ಲಿನ ಡೆಪಾಸಿಟ್ ಹಣವನ್ನೇ ಬಳಸಿದರಾ ಎಂಬ ಅನುಮಾನ ವ್ಯಕ್ತವಾಗಿದೆ. ಇದೇ ರೀತಿ ಎರೆಡು-ಮೂರು ವರ್ಷ ಹಣ ವ್ಯಯ ಮಾಡಿದರೇ ವಿಶ್ವವಿದ್ಯಾಲಯದ ಖಾತೆಯಲ್ಲಿನ ಸಂಪೂರ್ಣ ಹಣ ಬರಿದಾಗಲಿದೆ. ಈ ರೀತಿ ಹಣ ಬರಿದಾದರೇ ವಿಶ್ವವಿದ್ಯಾಲಯದ ನೌಕರರಿಗೂ ಸಂಬಳ ಕೊಡಲು ಕಷ್ಟವಾಗಿತ್ತದೆ. ನಾವೆಲ್ಲಾ ನೌಕರರು ಬೀದಿಗೆ ಬರಬೇಕಾಗುತ್ತದೆ ಎಂದು ಉಪನ್ಯಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇದಷ್ಟೇ ಅಲ್ಲದೇ ಯುಜಿಸಿ ಹಾಗೂ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ನೇಮಕಾತಿ ಮಾಡಿಕೊಳ್ಳಲಾಗಿದೆ. ನಿಯಮಗಳ ಪ್ರಕಾರ ಬೋಧಕೇತರ 500 ಸಿಬ್ಬಂದಿಗೆ ಮಾತ್ರ ಅವಕಾಶವಿದೆ. ಆದರೆ 1300 ಕ್ಕೂ ಹೆಚ್ಚು ಜನರನ್ನು ನೇಮಕ ಮಾಡಿಕೊಂಡಿದ್ದಾರೆಂದು ಆರೋಪ ಕೇಳಿಬಂದಿದೆ.
ಇದನ್ನೂ ಓದಿ: Fake Universities: ಭಾರತದ ಈ 20 ವಿಶ್ವವಿದ್ಯಾಲಯಗಳು ನಕಲಿ- ಯುಜಿಸಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವನ್ನ ಒಂದು ರೀತಿಯಲ್ಲಿ ಜಾಬ್ ಮೇಳಮಾಡಿಕೊಂಡಿದ್ದಾರೆ. ಸಾಕಷ್ಟು ಅಕ್ರಮಗಳನ್ನು ಎಂಎಲ್ಎ, ಎಂಪಿಗಳು ಮಾಡುತ್ತಾರೆ ಅಂತಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಇಲ್ಲಿ ಅಕ್ರಮ ನಡೆಯುತ್ತಿದೆ. ಈ ಬಗ್ಗೆ ತನಿಖೆಯಾಗಬೇಕು, ತನಿಖೆ ನಡೆದರೂ ಮತ್ತಷ್ಟು ಅಕ್ರಮಗಳು ಬಯಲಿಗೆ ಬರುತ್ತವೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಉಪನ್ಯಾಸಕ ಡಾ.ಜಗದೀಶ್ ಬಾಬು ಆರೋಪ ಮಾಡಿದ್ದಾರೆ.
ಇನ್ನು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಮುಕ್ತ ವಿವಿಯ ಬಳ್ಳಾರಿ ಪರೀಕ್ಷಾ ಕೇಂದ್ರದಲ್ಲಿ ಕಳೆದ ನಾಲ್ಕು ತಿಂಗಳ ಹಿಂದೆ ನಡೆದಿರುವ ಭೂಗೋಳಶಾಸ್ತ್ರ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಮೊಬೈಲ್ ಹಾಗೂ ಪುಸ್ತಕ ಇಟ್ಟುಕೊಂಡ ರಾಜಾರೋಷವಾಗಿ ನಕಲು ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಈಗಷ್ಟೇ ವಿವಿಗೆ ಮಾನ್ಯತೆ ಸಿಕ್ಕಿದೆ. ಈ ಬೆನ್ನಲ್ಲೆ ಇಂತಹ ವಿಡಿಯೋಗಳು ವೈರಲ್ ಆಗಿದೆ. ಇದು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ನಮ್ಮಂತಹ ಆಧ್ಯಾಪಕರಿಗೆ ಆತಂಕ ಮೂಡಿಸುತ್ತಿದೆ. ಈ ರೀತಿ ಅಕ್ರಮಗಳು ಹೆಚ್ಚಾದರೆ ಎಲ್ಲಿ ಮತ್ತೆ ವಿವಿಯ ಮಾನ್ಯತೆ ರದ್ದಾಗುತ್ತದೆ ಎಂಬ ಆತಂಕವಿದೆ. ಈ ಎಲ್ಲಾ ವಿಚಾರಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಗೊತ್ತಿದೆ. ಆದರೂ ಸುಮ್ಮನೆ ಇದ್ದಾರೆ. ಒಂದು ರೀತಿಯಲ್ಲಿ ಪರೀಕ್ಷೆ ಎಂಬುದೇ ದಂಧೆಯಾಗಿದೆ ಎಂದು ವಿಶ್ವವಿದ್ಯಾಲಯದ ಉಪನ್ಯಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ