MLA ಟಿಕೆಟ್ ಕೊಡಿಸುವುದಾಗಿ 5 ಕೋಟಿ ಹಣ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು(CCB Police) ಚೈತ್ರಾ ಕುಂದಾಪುರ ವಿಚಾರಣೆ ನಡೆಸಲಿದ್ದಾರೆ(Chaitra Kundapura). ಸದ್ಯ ಬೆಂಗಳೂರಿನ ಡೇರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಚೈತ್ರಾ ಕುಂದಾಪುರ ಇದ್ದು ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಯಲಿದೆ. ಇನ್ನು ರಾಜ್ಯದಲ್ಲಿ ಮುಂದಿನ 5 ದಿನ ಭಾರಿ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ(Karnataka Rain). ಬೆಂಗಳೂರಿನಲ್ಲಿ ನಿನ್ನೆ ಸಂಜೆ ಭಾರಿ ಮಳೆ ಸುರಿಯಿತು. ಇನ್ನು, ಐದು ದಿನ ಮಳೆ ಸುರಿಯುವ ಸಾಧ್ಯತೆ ಇದ್ದು, ತಗ್ಗು ಪ್ರದೇಶದ ಜನ & ರಾಜಕಾಲುವೆ ಪಕ್ಕದಲ್ಲಿನ ನಿವಾಸಿಗಳು ಕೊಂಚ ಎಚ್ಚರದಿಂದಲೇ ಇರಬೇಕು. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇನ್ನು ಮತ್ತೊಂದೆಡೆ ಇಂದಿನಿಂದ ಹಳೇ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹೇಳಿ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ಆರಂಭವಾಗಲಿದೆ(Parliament Special Session). ವಿಶೇಷ ಅಧಿವೇಶನದಲ್ಲಿ ಹಲವು ವಿಧೇಯಕ ಮಂಡಿಸುವ ಸಾಧ್ಯತೆ ಇದೆ. ಸಂಸತ್, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ಬಿಲ್ ಆಗಿರುವ ಮಹಿಳೆಯರ ಮೀಸಲಾತಿ ವಿಧೇಯಕಕ್ಕೆ ಕೇಂದ್ರ ಸಂಪುಟ ಸಭೆ ಅಸ್ತು ಎಂದಿತ್ತು. ಹೀಗಾಗಿ ಇಂದು ಮಹಿಳಾ ಮೀಸಲಾತಿ ಸೇರಿದಂತೆ ಹಲವು ಬಿಲ್ ಮಂಡಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ 22ರವರೆಗೆ ಸಂಸತ್ ವಿಶೇಷ ಅಧಿವೇಶನ ನಡೆಯಲಿದೆ.
ಬೆಂಗಳೂರು: ಕರ್ತವ್ಯ ಲೋಪ ಹಿನ್ನಲೆ ಹಲಸೂರು ಇನ್ಸ್ ಪೆಕ್ಟರ್ ಎಂ.ಮಂಜುನಾಥ್ ಎಂಬುವವರನ್ನು ಅಮಾನತು ಮಾಡಲಾಗಿದೆ. ಕಳೆದ ಆಗಸ್ಟ್ 11 ರಂದು ನಗರ ಪೊಲೀಸ್ ಆಯುಕ್ತ ಠಾಣೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಠಾಣೆಯ ದಾಖಲಾತಿ ನಿರ್ವಹಣೆಯಲ್ಲಿ ಲೋಪ ಕಂಡುಬಂದಿತ್ತು. ಬಳಿಕ ಇನ್ಸ್ ಪೆಕ್ಟರ್ ಕರ್ತವ್ಯ ಲೋಪ ಹಿನ್ನಲೆ ಈ ಕುರಿತು ಎಸಿಪಿಗೆ ವರದಿಗೆ ಸೂಚಿಸಲಾಗಿತ್ತು. ಹಲಸೂರು ಠಾಣೆಯ ಹಲವು ಪ್ರಕರಣಗಳಲ್ಲಿ ಕರ್ತವ್ಯ ಲೋಪ ಕಂಡುಬಂದಿರುವುದರಿಂದ ಇದೀಗ ಸಸ್ಪೆಂಡ್ ಮಾಡಲಾಗಿದೆ.
ಬೆಂಗಳೂರು ಗ್ರಾಮಾಂತರ: ಕ್ಯಾಂಟರ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯ ದೊಡ್ಡಬಳ್ಳಾಪುರ ರಸ್ತೆಯಲ್ಲಿ ನಡೆದಿದೆ. ಮಣಿ(27) ಮೃತ ರ್ದುದೈವಿ.
ಹಾಸನ: ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಬರುತ್ತಿದ್ದು, ಭಾರಿ ಮಳೆಗೆ ನೀರು ಮನೆಗಳಿಗೆ ನುಗ್ಗಿದೆ. ಅರಸೀಕೆರೆ ನಗರದ 27, 28, 29 ವಾರ್ಡ್‌ಗಳಲ್ಲಿ ಮಳೆ ನೀರಿನಿಂದ ಅವಾಂತರ ಆಗಿದೆ. ಅರಸೀಕೆರೆ ಪಟ್ಟಣದ ಮಟನ್ ಮಾರ್ಕೆಟ್ ಹಿಂಭಾಗ, ಟಿಪ್ಪು ನಗರ, ಪ್ರತಿಭಾ ಕಾಲೇಜು ಹಿಂಭಾಗದ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನೀರು ಹೊರಹಾಕಲು ನಿವಾಸಿಗಳ ಪರದಾಟ ನಡೆಸಿದ್ದಾರೆ.
ಬೆಂಗಳೂರು: ಸಂಸತ್ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಬಿಲ್ ಮಂಡನೆ ವಿಚಾರ ‘ ಪ್ರಧಾನಮಂತ್ರಿಗಳಿಂದ ಮಹಿಳೆಯರಿಗೆ ಗೌರಿ ಗಣೇಶ ಹಬ್ಬದ ಉಡುಗೊರೆ ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ. 33% ಮೀಸಲಾತಿ ಕಲ್ಪಿಸಿರುವುದು ಸುವರ್ಣಾಕ್ಷರಗಳಲ್ಲಿ ಬರೆದಿಡುವ ಸಂಗತಿ. ಎಲ್ಲಾ ಪಕ್ಷಗಳು ಕೇವಲ ತಮ್ಮ ಭಾಷಣದಲ್ಲಿ ಮೀಸಲಾತಿ ಬಗ್ಗೆ ಹೇಳುತ್ತಿದ್ದವು. ಆದರೆ, ಈ ಮಾತನ್ನು ಕೃತಿಗೆ ಇಳಿಸಿದ್ದು ಮಾತ್ರ ಪ್ರಧಾನಿ ನರೇಂದ್ರ ಮೋದಿ ಎಂದರು.
ಕೊಡಗು: ತಲಕಾವೇರಿ ತೀರ್ಥೋದ್ಭವಕ್ಕೆ ಮುಹೂರ್ತ ನಿಗದಿ ಮಾಡಿದ್ದು, ಅಕ್ಟೋಬರ್.17ರ ಮಧ್ಯರಾತ್ರಿ 1.27ಕ್ಕೆ ಕರ್ಕಾಟಕ ಲಗ್ನದಲ್ಲಿ ತೀರ್ಥೋದ್ಭವ ನಡೆಸಲಾಗುವುದು ಎಂದು ಶ್ರೀಭಾಗಮಂಡಲ, ತಲಕಾವೇರಿ ದೇವಾಲಯ ಸಮಿತಿ ಮಾಹಿತಿ ನೀಡಿದೆ.
ಕೋಲಾರ: ಶ್ರೀನಿವಾಸಪುರ ತಾಲೂಕಿನ ನಾಗಿರೆಡ್ಡಿಹಳ್ಳಿಯಲ್ಲಿ ನಿನ್ನೆ(ಸೆ.18) ರಾತ್ರಿ ಗಣೇಶ ವಿಸರ್ಜನೆ ವೇಳೆ ಆಯತಪ್ಪಿ ಟ್ರ್ಯಾಕ್ಟರ್ ಕೆಳಗೆಬಿದ್ದು ಧ್ವನಿವರ್ಧಕ ಕಾರ್ಮಿಕ ರಾಮಾಂಜಿ(26) ಸಾವುನ್ನಪ್ಪಿದ್ದು, ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಬೆಂಗಳೂರು: ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್ನಿಂದ 5 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಅಭಿನವ ಹಾಲಶ್ರೀಯನ್ನು ಬೆಂಗಳೂರಿಗೆ ಕರೆತಂದು ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆ. ವೈದ್ಯಕೀಯ ಪರೀಕ್ಷೆ ಬಳಿಕ ಬೆಂಗಳೂರಿನ ಹೊರವಲಯದಲ್ಲಿ 5-6 ಕಡೆ ಸಿಸಿಬಿಯಿಂದ ಸ್ಥಳ ಮಹಜರು ನಡೆಸುತ್ತಿದ್ದಾರೆ.
ಬೆಳಗಾವಿ: ಹಿಂಡಲಗಾ ಜೈಲಿನಲ್ಲಿ ಮತ್ತೆ ಕೈದಿಗಳ ನಡುವೆ ಮಾರಾಮಾರಿ ನಡೆಸಿದ್ದು, ಜೈಲಿಗೆ ನ್ಯಾಯಾಧೀಶರು ದಿಢೀರ್ ಭೇಟಿ ನೀಡಿದ್ದಾರೆ. ಬೆಳಗಾವಿಯ 1ನೇ JMFC ನ್ಯಾಯಾಧೀಶ ಮಹದೇವ ಕೂಡವಕ್ಕಲಿಗೇರ ಅವರು ಜೈಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಕಾವೇರಿ ವಿಚಾರದಲ್ಲಿ ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ದೆಹಲಿಗೆ ತೆರಳುವ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ‘ಸಿಎಂ, ಕಾನೂನು ಸಚಿವರು, ಕೃಷಿ ಸಚಿವರು ದೆಹಲಿಗೆ ತೆರಳುತ್ತಿದ್ದೇವೆ. ದೆಹಲಿಯಲ್ಲಿ ಕೇಂದ್ರ ಸಚಿವರನ್ನ ಭೇಟಿ ಮಾಡಲಾಗುವುದು ಎಂದರು.
ಬೆಂಗಳೂರು: ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಬೆನ್ನಲ್ಲೆ ಇದೀಗ ನಾಳೆ ಲೋಕಸಭೆಯಲ್ಲಿ ಮಹಿಳೆಯರ ಮೀಸಲಾತಿ ಬಿಲ್ ಮೇಲೆ ಬೆಳಗ್ಗೆ 11 ಗಂಟೆಯಿಂದ ಸಂಜೆ 6 ಗಂಟೆವರೆಗೂ ಸುದೀರ್ಘ ಚರ್ಚೆಯಾಗಲಿದೆ.
ದೆಹಲಿ: ರಾಜ್ಯಸಭಾ ಕಲಾಪವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿಕೆ ಮಾಡಿದ್ದಾರೆ. ಹೌದು, ರಾಜ್ಯಸಭಾ ಸಭಾಪತಿ ಜಗದೀಪ್ ಧನ್ಖರ್ ಕಲಾಪವನ್ನು ಮುಂದೂಡಿದ್ದಾರೆ.
ಬೆಂಗಳೂರು: ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸ್ನ 3ನೇ ಆರೋಪಿ ಹಾಲಶ್ರೀ ಅವರನ್ನ ಸಿಸಿಬಿ ಪೊಲೀಸರು ಬಂಧಿಸಿ ಕರೆತರುತ್ತಿದ್ದಾರೆ. ಹೌದು, ಒಡಿಶಾದಿಂದ ಬೆಂಗಳೂರಿಗೆ ಹಾಲಶ್ರೀ ಕರೆತರುತ್ತಿರುವ ಸಿಸಿಬಿ ತಂಡ, ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ಗೆ ಕರೆತರುವ ಸಾಧ್ಯತೆಯಿದೆ.
ದೆಹಲಿ: 2010ರಲ್ಲಿಯೇ ನಾವು ಮಹಿಳಾ ಮೀಸಲಾತಿ ಬಿಲ್ ಮಂಡಿಸಿದ್ದೆವು, ಹೀಗಾಗಿ ಇದರ ಶ್ರೇಯಸ್ಸು ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು ಎಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಖರ್ಗೆ ಹೇಳಿಕೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರ ಜೊತೆಗೆ ಮಹಿಳಾ ಮೀಸಲಾತಿ ಬಿಲ್ನಲ್ಲಿ ಒಬಿಸಿ ಒಳ ಮೀಸಲಾತಿಗೆ ಮನವಿ ನೀಡುವಂತೆ ಖರ್ಗೆ ಆಗ್ರಹಿಸಿದರು.
ಬೆಂಗಳೂರು: ಕಾವೇರಿ ನೀರು ಬಿಡುಗಡೆಗೆ ಆದೇಶ ಹಿನ್ನೆಲೆ ಇಂದು(ಸೆ.19) ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ. ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವ ಮುನ್ನ, ನಾಳೆ ದೆಹಲಿಯಲ್ಲಿ ಸಿಎಂ ಮತ್ತು ಡಿಸಿಎಂ ನೇತೃತ್ವದಲ್ಲಿ ಕಾನೂನು ತಜ್ಞರ ಜೊತೆ ಸಭೆ ನಡೆಸಲಿದ್ದಾರೆ.
ದೆಹಲಿಯ ಹೊಸ ಸಂಸತ್ ಭವನದಲ್ಲಿ ವಿಶೇಷ ಅಧಿವೇಶನ ನಡೆಯುತ್ತಿದ್ದು ಲೋಕಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಿದರು. ಸೆಪ್ಟೆಂಬರ್ 19 ಭಾರತದ ಇತಿಹಾಸದಲ್ಲಿ ಅಮರವಾಗಿರಲಿದೆ. ನಾರಿ ಶಕ್ತಿಯಿಂದ ದೇಶದ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಯಾಗಲಿದೆ. ಮಹಿಳಾ ಮೀಸಲಾತಿ ಬಗ್ಗೆ ಹಲವು ಬಾರಿ ಬಿಲ್ ಮಂಡನೆ ಆಗಿದೆ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡಲು CWMA ಆದೇಶ ವಿಚಾರ ಸಂಬಂಧ ರಾಮನಗರದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. ನೀರು ಹರಿಸದಿದ್ರೆ ಆದೇಶ ಉಲ್ಲಂಘನೆ ಅಂತಾ ಸಚಿವರು ಹೇಳಿದ್ದಾರೆ. ಜಲಸಂಪನ್ಮೂಲ ಸಚಿವರು ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಹಿಂದಿನ ಸರ್ಕಾರ ನೀರು ಬಿಟ್ಟಿಲ್ಲ ಅಂತಾ ಹೇಳಬಹುದು. ಹೌದು ನೀರು ಬಿಟ್ಟಿದ್ದಾರೆ ಅನಿವಾರ್ಯತೆ ಇದೆ ಅದನ್ನು ಒಪ್ಪುತ್ತೇನೆ. ಆದರೆ ಮಳೆ ಕೊರತೆಯಿಂದ ನಮ್ಮ ರೈತರ ಬೆಳೆ ನಾಶವಾಗ್ತಿದೆ. ರಾಜ್ಯ ಸರ್ಕಾರದ ನಡೆ ಖಂಡಿಸಿ ರೈತರು ಪ್ರತಿಭಟನೆ ಮಾಡ್ತಿದ್ದಾರೆ. ಕಾವೇರಿ ನದಿ ಸಂಬಂಧ ಸಭೆಗಳಲ್ಲಿ ತಮಿಳುನಾಡಿನ 10-15 ಅಧಿಕಾರಿಗಳು ಭಾಗಿಯಾಗ್ತಾರೆ. ಆದರೆ ನಮ್ಮ ಅಧಿಕಾರಿಗಳು ಒಬ್ಬರೋ ಇಬ್ಬರೂ ಕಾಟಾಚಾರಕ್ಕೆ ಭಾಗಿಯಾಗುತ್ತಿದ್ದಾರೆ ಎಂದರು.
ಅಂತರಗಂಗೆ ಬೆಟ್ಟದ ಮೇಲೆ ಹಸಿರು ಬಣ್ಣ ಬಳಿದು ವಿವಾದಾತ್ಮಕ ಬರಹ ಬರೆಯಲಾಗಿದೆ. ಕೋಲಾರದ ಅಂತರಗಂಗೆ ಬೆಟ್ಟದ ಮೇಲೆ ಪಾಕ್ ಧ್ವಜದ ರೀತಿ ಹಾಗೂ 786 ಎಂದು ಕಿಡಿಗೇಡಿಗಳು ಬರೆದಿದ್ದರು. ಸದ್ಯ ಪೊಲೀಸರು ಬರಹದ ಮೇಲೆ ಬಿಳಿ ಬಣ್ಣ ಬಳಿದು ಅಳಿಸಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸರು ವಿವಾದಾತ್ಮಕ ಬರಹಕ್ಕೆ ಬಿಳಿ ಬಣ್ಣ ಬಳಿದಿದ್ದಾರೆ.
ಇಂದಿನಿಂದ ಹಳೇ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದರು. ಅರ್ಥವ್ಯವಸ್ಥೆಯಲ್ಲಿ ಭಾರತ ಶೀಘ್ರದಲ್ಲೇ 3ನೇ ಸ್ಥಾನಕ್ಕೆ ಬರಲಿದೆ. ವಿಶ್ವದಲ್ಲಿ ಇಂದು ಭಾರತ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಭಾರತದಲ್ಲಿನ ವೇಗದ ಅಭಿವೃದ್ಧಿ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ. ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ & ಅಭಿವೃದ್ಧಿಯತ್ತ ಸಾಗುತ್ತಿದೆ. ಭಾರತ ನಿಲ್ಲುವುದಿಲ್ಲ, ಸದಾ ಹೊಸದನ್ನು ಕಲಿಯಲು ಪ್ರಯತ್ನಿಸುತ್ತದೆ. ಆತ್ಮನಿರ್ಭರ್ ಯೋಜನೆಯನ್ನು ಯಶಸ್ವಿಗೊಳಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡಲು CWMA ಆದೇಶ ವಿಚಾರ ಸಂಬಂಧ ದೆಹಲಿಗೆ ಸಂಸದರ ನಿಯೋಗ ತೆರಳಲು ಏನೂ ಸಮಸ್ಯೆ ಇಲ್ಲ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು. ರಾಜ್ಯ ಸರ್ಕಾರ ಈ ಬಗ್ಗೆ ಆಸಕ್ತಿವಹಿಸಬೇಕು. ನನ್ನ ಸಲಹೆ ಇಕ್ಕಟಿಗೆ ಸಿಲುಕಿಸಿದೆ ಎಂದು ಡಿಕೆಶಿ ಹೇಳಿದ್ದಾರೆ. ರಾಜ್ಯ ಸರ್ಕಾರದ ನಡೆ ರೈತರನ್ನು ಇಕ್ಕಟಿಗೆ ಸಿಲುಕಿಸಿದೆ. ಸರ್ಕಾರ ತಾನು ಸಲ್ಲಿಸಿರುವ ಅಫಿಡವಿಟ್ಗೆ ಬದ್ಧರಾಗಿರಬೇಕಲ್ವಾ? ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಮಾಹಿತಿ, ಜವಾಬ್ದಾರಿ ಇರಬೇಕು. ಡಿಸಿಎಂ ಡಿಕೆಶಿ ಏನೋ ಮಾತನಾಡಬೇಕು ಅಂತಷ್ಟೇ ಹೇಳಿಕೆ ನೀಡ್ತಾರೆ. ತಮಿಳುನಾಡಿನಂತೆ ವಸ್ತುಸ್ಥಿತಿ ಹೇಳಲು ನಾವು ಯಾವಾಗ ಕಲಿಯುತ್ತೇವೋ, ತಮಿಳುನಾಡಿನ ಡ್ಯಾಮ್ಗಳ ಬಗ್ಗೆ ನಮ್ಮ ವಕೀಲರು ಮಾತನಾಡಲ್ಲವೋ ಎಂದರು.
ಚೈತ್ರಾ ಕುಂದಾಪುರ ಆ್ಯಂಡ್ ಗ್ಯಾಂಗ್ನಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ 3ನೇ ಆರೋಪಿ ಹಾಲಶ್ರೀಯವರನ್ನು ಬಂಧಿಸಲಾಗಿದೆ. ಒಡಿಶಾದ ಕಟಕ್ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಪೊಲೀಸರ ಸಹಕಾರದಿಂದ ಹಾಲಶ್ರೀ ಅರೆಸ್ಟ್ ಆಗಿದ್ದು ಇಂದು ರಾತ್ರಿ ಕಟಕ್ನಿಂದ ಬೆಂಗಳೂರಿಗೆ ಕರೆತರಲಾಗುತ್ತಿದೆ.
ಇಂದಿನಿಂದ ಹಳೇ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಹಳೇ ಸಂಸತ್ ಭವನದ ಮುಂದೆ ಸಂಸದರ ಫೋಟೋಶೂಟ್ ಮಾಡಿಸಿದ್ದು ಈ ವೇಳೆ ರಾಜ್ಯಸಭಾ ಸದಸ್ಯ ನರಹರಿ ಅಮಿನ್ ಅಸ್ವಸ್ಥಗೊಂಡಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ ನರಹರಿ ಮೂರ್ಛೆಯಿಂದ ಅಸ್ವಸ್ಥಗೊಂಡಿದ್ದಾರೆ.
ಇಂದಿನಿಂದ ಹಳೇ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಹಳೇ ಸಂಸತ್ ಭವನದ ಮುಂದೆ ಸಂಸದರು ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋಶೂಟ್ನಲ್ಲಿ ಪ್ರಧಾನಿ ಮೋದಿ, ಸ್ಪೀಕರ್ ಓಂಬಿರ್ಲಾ ಭಾಗಿಯಾಗಿದ್ದಾರೆ. ಫೋಟೋಶೂಟ್ನಲ್ಲಿ ಉಪರಾಷ್ಟ್ರಪತಿ ಜಗದೀಪ್ ದನ್ಖರ್, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ಖರ್ಗೆ, ಎಲ್ಲಾ ಪಕ್ಷಗಳ ಸಂಸದರು, ರಾಜ್ಯಸಭಾ ಸದಸ್ಯರು ಭಾಗಿಯಾಗಿದ್ದಾರೆ.
ಕಾವೇರಿ ನೀರಿಗಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಅವರನ್ನು ತಮಿಳುನಾಡು ನಿಯೋಗ ಭೇಟಿಯಾಗಿದೆ. ಸಚಿವ ದೊರೈ ಮುರುಗನ್ ನೇತೃತ್ವದಲ್ಲಿ ತಮಿಳುನಾಡು ಸಂಸದರ ನಿಯೋಗ ಭೇಟಿಯಾಗಿದ್ದು CWMA ಆದೇಶಕ್ಕಿಂತ ಹೆಚ್ಚಿನ ನೀರು ಹರಿಸುವಂತೆ ಮನವಿ ಮಾಡಿದೆ.
ಕೋಲಾರ ನಗರದ ಇದ್ರೀಸ್ ಸಾಬ್ ಬಡಾವಣೆಯಲ್ಲಿ ಒಂಬತ್ತು ಇಂಚು ಕಿಟಕಿ ಜಾಗಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಮುಜುಮಿಲ್ ಪಾಷಾ ಕೊಲೆಯಾದ ದುರ್ದೈವಿ. ರೋಷನ್, ಜಮೀರ್, ನಬೀವುಲ್ಲ, ಫಿರ್ದೋಸ್ ಎಂಬುವರಿಂದ ಕೊಲೆ. ಬಂಧನದ ಭಯಕ್ಕೆ ಆರೋಪಿಗಳು ಕುಟುಂಬ ಸಮೇತ ಪರಾರಿಯಾಗಿದ್ದಾರೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಹಳೇ ಸಂಸತ್ನಿಂದ ಹೊಸ ಸಂಸತ್ ಭವನಕ್ಕೆ ಕಲಾಪ ಶಿಫ್ಟ್ ಆಗಲಿದೆ. ಇಂದು ಪ್ರಧಾನಿ ಮೋದಿ ಹೊಸ ಸಂಸತ್ ಭವನ ಪ್ರವೇಶಿಸಲಿದ್ದಾರೆ. ಕಾಲ್ನಡಿಗೆಯಲ್ಲಿ ಸಂವಿಧಾನದ ಪ್ರತಿಯೊಂದಿಗೆ ಹೊಸ ಸಂಸತ್ಗೆ ಮೋದಿ ಆಗಮಿಸಲಿದ್ದಾರೆ. ಹೊಸ ಸಂಸತ್ ಭವನದಲ್ಲಿ ಇಂದು ಮಧ್ಯಾಹ್ನ ಕಲಾಪ ಆರಂಭವಾಗಲಿದೆ. ಲೋಕಸಭೆಯಲ್ಲಿ ಮಧ್ಯಾಹ್ನ 1.15ಕ್ಕೆ ವಿಶೇಷ ಅಧಿವೇಶನ ಕಲಾಪ ಆರಂಭ. ರಾಜ್ಯಸಭೆಯಲ್ಲಿ ಮಧ್ಯಾಹ್ನ 2:15ಕ್ಕೆ ಕಲಾಪ ಆರಂಭವಾಗಲಿದೆ.
ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ವಿಷಹಾರ ಸೇವಿಸಿ ಒಂದು ಹಸು ಸಾವನ್ನಪ್ಪಿದ್ದು, ಎರಡು ಹಸುವಿನ ಸ್ಥಿತಿ ಗಂಭೀರವಾಗಿದೆ. ದುಷ್ಕರ್ಮಿಗಳು ತಿನ್ನುವ ಆಹಾರದಲ್ಲಿ ವಿಷ ಹಾಕಿ ಹಸುವನ್ನ ಕೊಂದ ಶಂಕೆ ವ್ಯಕ್ತವಾಗಿದೆ. ರೈತ ಮಹದೇವ ಎಂಬುವರಿಗೆ ಸೇರಿದ ಒಂದೂವರೆ ಲಕ್ಷ ಬೆಲೆಯ ಹಸುಗಳ ಪೈಕಿ ಒಂದು ಮೃತಪಟ್ಟಿದ್ದು ತೀವ್ರ ಅಸ್ವಸ್ಥಗೊಂಡ ಹಸುಗಳಿಗೆ ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಬೆಂಡೋಣಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ರೀತಿಯಲ್ಲಿ ಪಾಠ ಮಾಡಲಾಗುತ್ತಿದೆ. ಸರ್ಕಾರಿ ಶಾಲಾ ಮಕ್ಕಳು ಗದ್ದೆಗೆ ಇಳಿದು ನಾಟಿ ಮಾಡಿ ಪಾಠ ಕಲಿಯುತ್ತಿದ್ದಾರೆ. ಮಕ್ಕಳಿಗೆ ಕೃಷಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಕೃಷಿ ಪಾಠ ಮಾಡಲಾಗುತ್ತಿದೆ. ಶಾಲೆಯಲ್ಲಿ ಪ್ರತಿ ಶನಿವಾರ ಬ್ಯಾಗ್ ರಹಿತ ದಿನ ಆಚರಣೆ ಮಾಡಲಾಗುತ್ತಿದ್ದು ಇದರ ಅಂಗವಾಗಿ ಈ ಬಾರಿ ಪರಿಸರದೆಡೆಗೆ ಮಕ್ಕಳ ಪಯಣ ಕಾರ್ಯಕ್ರಮ ಮಾಡಲಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ತಮ್ಮೇನಹಳ್ಳಿ ಗ್ರಾಮದಲ್ಲಿ ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಗೆ 16 ವರ್ಷದ ಪ್ರಜ್ವಲ್ ಎಂಬ ಬಾಲಕ ಮೃತಪಟ್ಟಿದ್ದಾನೆ. 11ಕೆವಿ ವಿದ್ಯುತ್ ಕಂಬದಲ್ಲಿ ವಿದ್ಯುತ್ ಸೋರಿಕೆಯಾಗಿದ್ದು ವಿದ್ಯುತ್ ಕಂಬದ ಬಳಿ ಹೋದ ಬಾಲಕನಿಗೆ ವಿದ್ಯುತ್ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಿದ್ಯುತ್ ಕಂಬಕ್ಕೆ ಗ್ರೌಂಡಿಗ್ ಹಾಕದ ಪರಿಣಾಮ ವಿದ್ಯುತ್ ಸೋರಿಕೆಯಾಗಿದೆ. ಹೀಗಾಗಿ ಬೆಸ್ಕಾಂ ಅಧಿಕಾರಿಗಳ ನಿರ್ಲ್ಯಕ್ಷಕ್ಕೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಭೂಮಿಯ ಕಕ್ಷೆಯಿಂದ ಯಶಸ್ವಿಯಾಗಿ ಆದಿತ್ಯ ಎಲ್-1 ಹೊರಹೋಗಿದ್ದು ಭೂಮಿ ಸುತ್ತಲಿನ ದತ್ತಾಂಶ ಸಂಗ್ರಹ ಕಾರ್ಯ ಆರಂಭಿಸಿದೆ. ಭೂಮಿಯಿಂದ 50,000 ಕಿ.ಮೀ.ಗಿಂತ ಹೆಚ್ಚಿನ ದೂರದಲ್ಲಿ ಅಧ್ಯಯನ ನಡೆಸುತ್ತಿದೆ. ಸೂಪರ್ ಥರ್ಮಲ್, ಅಯಾನುಗಳು, ಎಲೆಕ್ಟ್ರಾನ್‌ಗಳ ಬಗ್ಗೆ ಭೂಮಿಯ ಕಕ್ಷೆಯಿಂದ ಹೊರಬಂದು ಅಧ್ಯಯನ ಆರಂಭಿಸಿದೆ. ಆದಿತ್ಯ ಎಲ್-1 ನೌಕೆ ಕಾರ್ಯಾಚರಣೆ ಬಗ್ಗೆ ಇಸ್ರೋ ಮಾಹಿತಿ ನೀಡಿದೆ.
ಇಂದಿನಿಂದ ಹಳೇ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹಿನ್ನೆಲೆ ಇಂದು ಹಳೇ ಸಂಸತ್ ಭವನದ ಮುಂದೆ ಸಂಸದರ ಫೋಟೋಶೂಟ್ ನಡೆಯಲಿದೆ. ಬೆಳಗ್ಗೆ 9.30ಕ್ಕೆ ಫೋಟೋಶೂಟ್ನಲ್ಲಿ ಸಂಸದರು ಭಾಗಿಯಾಗಲಿದ್ದಾರೆ.
Published On - 8:00 am, Tue, 19 September 23