KSRTC BMTC Strike: ಸಾರಿಗೆ ನೌಕರರ ಮುಷ್ಕರ ಅಂತ್ಯ: ತಾತ್ಕಾಲಿಕ ನಿರ್ಧಾರ ಎಂದ ಕೋಡಿಹಳ್ಳಿ ಚಂದ್ರಶೇಖರ್

ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ ಸೇವೆಗೆ ಹಾಜರಾಗುತ್ತಾರೆ. ಸದ್ಯ ಮುಷ್ಕರವನ್ನು ಮುಂದೂಡುತ್ತೇವೆ ಎಂದು ಅವರು ತಿಳಿಸಿದರು.

  • TV9 Web Team
  • Published On - 17:18 PM, 21 Apr 2021
KSRTC BMTC Strike:  ಸಾರಿಗೆ ನೌಕರರ ಮುಷ್ಕರ ಅಂತ್ಯ: ತಾತ್ಕಾಲಿಕ ನಿರ್ಧಾರ ಎಂದ ಕೋಡಿಹಳ್ಳಿ ಚಂದ್ರಶೇಖರ್
ಕೋಡಿಹಳ್ಳಿ ಚಂದ್ರಶೇಖರ್

ಬೆಂಗಳೂರು: ಸತತ 15 ದಿನಗಳ ನಂತರ 1.2 ಲಕ್ಷ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ ಸೇವೆಗೆ ಹಾಜರಾಗುತ್ತಾರೆ. ಸದ್ಯ ಮುಷ್ಕರವನ್ನು ಮುಂದೂಡುತ್ತೇವೆ ಎಂದು ಅವರು ತಿಳಿಸಿದರು.

ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ನ್ಯಾಯಮೂರ್ತಿಗಳ ಹೇಳಿಕೆಯನ್ನು ನಾವು ಗೌರವಿಸುತ್ತೇವೆ.
ಕೊವಿಡ್ ಕಾರಣದಿಂದ ಕರ್ತವ್ಯಕ್ಕೆ ಹಾಜರಾಗಿ ಎಂದಿದ್ದಾರೆ. ಸೇವೆಗೆ ಹಾಜರಾಗುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದಾರೆ. ಜನರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ಹೈಕೋರ್ಟ್ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೋಡಿಹಳ್ಳಿ ಚಂದ್ರಶೇಖರ್​ ತಿಳಿಸಿದರು.

ಸಿಎಂ ಯಡಿಯೂರಪ್ಪರಿಗೂ ಆರೋಗ್ಯ ಸರಿ ಇಲ್ಲ. ಮೇ ತಿಂಗಳಿನಲ್ಲಿ ಸಿಎಂ ಯಡಿಯೂರಪ್ಪ ಚರ್ಚಿಸೋಣ ಎಂದಿದ್ದಾರೆ. ಜೊತೆಗೆ ನಾಳೆ ನ್ಯಾಯಾಲಯದಲ್ಲೂ ನಮ್ಮ ಕುಂದುಕೊರತೆ ದಾಖಲಿಸುತ್ತೇವೆ. ನಾಳೆ ಹೇಳಿಕೆ ದಾಖಲಿಸುವ ಪ್ರಕ್ರಿಯೆ ಇದೆ. ಈವೇಳೆ ನ್ಯಾಯಾಲಯದಲ್ಲಿ ನಮ್ಮೆಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ. ಸದ್ಯಕ್ಕೆ ನಾವು ಘನ ನ್ಯಾಯಾಲಯದ ಆದೇಶದ ಮೇರೆಗೆ ಈ ಮುಷ್ಕರ ನಿಲ್ಲಿಸುತ್ತಿದ್ದೇವೆ. ನಾಳೆಯಿಂದ ಎಲ್ಲಾ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದೇವೆ ಎಂದು ಅವರು ವಿವರಿಸಿದರು.

ಆದರೆ, ಮುಷ್ಕರದ ವೇಳೆ 2169 ಮಂದಿ ವಜಾ ಮಾಡಲಾಗಿದೆ. 2941 ಅಮಾನತು ಮಾಡಲಾಗಿದೆ. 7646 ಮಂದಿಗೆ ಶೋಕಾಸ್ ನೋಟೀಸ್ ನೀಡಿದೆ. 8 ಸಾವಿರ ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ಒಟ್ಟು 20 ಸಾವಿರ ನೌಕರರ ಮೇಲೆ ದಮನಕಾರಿ ನೀತಿ ಅನುಸರಿಲಾಗಿದೆ. ಸರ್ಕಾರದ ಈ ಎಲ್ಲಾ ನಿರ್ಧಾರ ವಾಪಾಸ್ ಪಡೆಯಬೇಕು. ನೌಕರರ ವಿರುದ್ಧ ಕೈಗೊಂಡ ಕ್ರಮ ಕೈಬಿಡಬೇಕು ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಈ ಬಗ್ಗೆ ಧನ್ಯವಾದ ತಿಳಿಸಿದ ಸಚಿವ ಲಕ್ಷ್ಮಣ ಸವದಿ

ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಇಂದು  ಬಸ್​ ಸಂಚಾರದ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಸರ್ಕಾರದ ಮನವಿಗೆ ಓಗೊಟ್ಟು ಇಂದು ಸಂಜೆಯ ವೇಳೆಗೆ ರಾಜ್ಯಾದ್ಯಂತ ಸಾರಿಗೆ ನಿಗಮಗಳ ಸುಮಾರು 13 ಸಾವಿರದಷ್ಟು ಬಸ್ಸುಗಳು ಸಂಚರಿಸಿರುವುದರಿಂದ ಸಾರ್ವಜನಿಕರು ಸಮಾಧಾನ ಪಡುವಂತಾಯಿತು. ಕರ್ತವ್ಯಕ್ಕೆ ಹಾಜರಾದ ನೌಕರರಿಗೆ ಈ ಬಗ್ಗೆ ಧನ್ಯವಾದ ತಿಳಿಸಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಇಂದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಾರಿಗೆ ನೌಕರರು ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗಿದ್ದರಿಂದ ಸುಮಾರು 13 ಸಾವಿರಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುವಂತಾಗಿ ಕೊವಿಡ್‍ನಂತಹ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಸಾರಿಗೆ ಸೇವೆ ಲಭ್ಯವಾಗಿ ನಿಟ್ಟುಸಿರು ಬಿಡುವಂತಾಯಿತು. ಹೀಗೆ ಕರ್ತವ್ಯ ಪ್ರಜ್ಞೆ ಮೆರೆದವರಿಗೆ  ಹಾರ್ದಿಕ ಅಭಿನಂದನೆಗಳು. ಅದೇ ರೀತಿ ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಲ್ಲಿ ಮುಂದಾಗಬೇಕೆಂದು ಖಾಸಗಿ ವಾಹನ ಮಾಲೀಕರಲ್ಲಿ ಕೋರಿಕೊಂಡಾಗ ಅವರೂ ಸಹ ತುಂಬು ಹೃದಯದಿಂದ ಸಹಕಾರ ನೀಡಿದ್ದನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುವುದಾಗಿ ತಿಳಿಸಿದ್ದಾರೆ.

ನಾಳೆಯಿಂದ ಸಾರಿಗೆ  ನೌಕರ ಬಾಂಧವರ ಸಹಕಾರದಿಂದ ಸಾರಿಗೆ ಸೇವೆಯು ಬಹುತೇಕ ಪೂರ್ಣಪ್ರಮಾಣದಲ್ಲಿ ಸುಗಮಗೊಳ್ಳುತ್ತದೆ ಎಂಬ ವಿಶ್ವಾಸ ಮೂಡುವಂತಾಗಿರುವುದು ಸಂತೋಷದ ಸಂಗತಿಯಾಗಿದೆ.
ಮುಷ್ಕರದ ಸಂದರ್ಭದಲ್ಲಿಯೂ ಹಲವು ಮಂದಿ ಸಾರಿಗೆ ನೌಕರರು ಸರ್ಕಾರದ ಮನವಿಗೆ ಸ್ಪಂದಿಸಿ ಕರ್ತವ್ಯಪ್ರಜ್ಞೆ ಮೆರೆದು ಸಾರ್ವಜನಿಕರಿಗೆ ಈ ಸಂಕಷ್ಟದ ಕಾಲದಲ್ಲಿಯೂ ಸೇವೆ ಒದಗಿಸಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಇಂತಹವರ ಕರ್ತವ್ಯ ನಿಷ್ಠೆ ಮತ್ತು ಪರಿಶ್ರಮವನ್ನು ನಾವು ಎಂದಿಗೂ ಮರೆಯುವುದಿಲ್ಲ ಮತ್ತು ಅವರ ಹಿತಾಸಕ್ತಿಗಳನ್ನು ರಕ್ಷಿಸುವತ್ತ ನಮ್ಮ ಸರ್ಕಾರ ಯಾವತ್ತೂ ಸಹಾನುಭೂತಿ ಹೊಂದಿರುತ್ತದೆ ಎಂಬುದನ್ನು ಮತ್ತೊಮ್ಮೆ ಈ ಸಂದರ್ಭದಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಡೀ ದೇಶದಲ್ಲೇ ನಮ್ಮ ಸಾರಿಗೆ ನಿಗಮಗಳಿಗೆ ವಿಶೇಷವಾದ ವರ್ಚಸ್ಸಿದೆ. ಈ ವರ್ಚಸ್ಸನ್ನು ಬೆಳೆಸುವಲ್ಲಿ ಅನೇಕ ಮಹಾನೀಯರುಗಳ ಪರಿಶ್ರಮ ಮತ್ತು ಕೊಡುಗೆಗಳಿವೆ. ಆದ್ದರಿಂದ ಅವರ ಶ್ರಮವನ್ನು ಗೌರವಿಸುತ್ತಾ, ನಾಡಿನಲ್ಲಿ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ಎಲ್ಲಾ ನೌಕರರ ಜವಾಬ್ದಾರಿಯಾಗಿದೆ. ಇದರಿಂದ ಕರ್ನಾಟಕದ ಸರ್ಕಾರಿ ಸಾರಿಗೆಯ ಗತ ವೈಭವ ಮತ್ತೆ ಮರುಕಳಿಸಲು ಸಾಧ್ಯವಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ಸಾರಿಗೆ ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ನಾಳೆಯೂ ಸಾರಿಗೆ ಸಿಬ್ಬಂದಿ ಮುಷ್ಕರ ಮುಂದುವರಿಯಲಿದೆ ಎಂದ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು?

ಮುಷ್ಕರ ಕೈಬಿಡಲು ಕೋಡಿಹಳ್ಳಿ ಚಂದ್ರಶೇಖರ್​ಗೆ ಬಸವರಾಜ ಬೊಮ್ಮಾಯಿ ಮನವಿ

(karnataka bus strike is called off by president kodihalli chandrashekar following court orders)